ನಿಮ್ಮ ಆತಂಕವನ್ನು ಹಂಚಿಕೊಳ್ಳಿ

ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಬಹಳ ಆತಂಕದಲ್ಲಿರುತ್ತಾರೆ. ಎಷ್ಟು ಓದಿದರೂ ಮುಗಿಯದ ಸಿಲಬಸ್, ನಿರೀಕ್ಷೆಯ ಭಾರ ಹೊರಿಸುವ ಪೋಷಕರು, ಶಿಕ್ಷಕರು ಮತ್ತು ನಮ್ಮಲ್ಲಿ ಈಗಾಗಲೇ ಇರುವ ಟೆನ್ಷನ್. ಕೆಲವರಂತೂ ಪರೀಕ್ಷೆಯನ್ನು ಎದುರಿಸುವ ಯೋಚನೆಯಿಂದಲೇ ಆತಂಕಗೊಳ್ಳುತ್ತಾರೆ. ಪರೀಕ್ಷೆಯ ಆತಂಕ ಎಲ್ಲರಿಗೂ ಇರುತ್ತದೆ. ನೀವು ನಂಬುವ ಸ್ನೇಹಿತರು, ಪೋಷಕರು, ಶಿಕ್ಷಕರು ಅಥವಾ ಆಪ್ತಸಮಾಲೋಚಕರೊಂದಿಗೆ ನಿಮ್ಮ ಆತಂಕ ಹಂಚಿಕೊಳ್ಳುವುದು ಒಳ್ಳೆಯದು.

ಯಾಕೆ ನಿಮ್ಮ ಆತಂಕ ಹಂಚಿಕೊಳ್ಳಬೇಕು?

ಇದರಿಂದ ಆಗುವ ಸಮಸ್ಯೆ ಗುರುತಿಸಲು: ಪರೀಕ್ಷೆಯ ಮೊದಲು ನಿಮಗಾಗುವ ಆತಂಕ ಮತ್ತು ಅದರ ಪರಿಣಾಮಗಳನ್ನು ನೀವು ಗಮನಿಸದೇ, ಓದಿನಲ್ಲೇ ಮುಳುಗಿರುತ್ತೀರಿ. ನಿಮಗೆ ಆತಂಕದಿಂದ ಆಗುವ ಸಮಸ್ಯೆಗಳನ್ನು ಚರ್ಚಿಸಿದರೆ ಅದಕ್ಕೆ ಸಹಾಯ ಪಡೆಯಬಹುದು.

ಯೋಚನೆಗಳು ಸ್ಪಷ್ಟವಾಗಲು: ಪರೀಕ್ಷೆಯ ಮೊದಲು ನಿಮಗಾಗುವ ಆತಂಕ ಮತ್ತು ಅದರಿಂದ ದೇಹದ ಮೇಲಾಗುವ ಪರಿಣಾಮಗಳ ಕಾರಣ ನಿಮಗೆ ತಿಳಿಯುವುದಿಲ್ಲ. ನಿಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ನಿಮ್ಮ ಗೊಂದಲ ದೂರಾಗಿ ನಿಮಗೆ ಕಾರಣ ತಿಳಿಯಬಹುದು.

ಸಮಾಧಾನ ನೀಡಲು: ಮಾತನಾಡುವ ಮೂಲಕ ಮನಸ್ಸಿನ ಭಾರ ಕಡಿಮೆಯಾಗಿ ನಿಮಗೆ ಸಮಾಧಾನವಾಗುತ್ತದೆ. ಟೆನ್ಷನ್ ಕಡಿಮೆ ಮಾಡಲು ಇದು ಉತ್ತಮ. ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿದಾಗ ಅವರೂ ಕೂಡ ನಿಮ್ಮಂತೆ ಎಂದು ತಿಳಿಯುತ್ತದೆ.

 ನಿಮ್ಮ ಅಭಿಪ್ರಾಯ ಬದಲಿಸಲುಕೆಲವು ಸಲ ಸಮಸ್ಯೆ ಇರುವುದಕ್ಕಿಂತ ಹೆಚ್ಚು ದೊಡ್ಡದಾಗಿ ಕಾಣಿಸುತ್ತದೆ. ಆತಂಕ ಮತ್ತು ನಂಬಿಕೆ ಕಳೆದುಕೊಂಡು ನಮಗಿರುವ ನಿಜವಾದ ಶಕ್ತಿಯನ್ನು ಮರೆಯುತ್ತೇವೆ. ಆಗ ಪೋಷಕರು, ಶಿಕ್ಷಕರು, ಆಪ್ತಸಮಾಲೋಚಕರು ಅಥವಾ ಸ್ನೇಹಿತರು ನಿಮ್ಮ ಬಲವನ್ನು ನಿಮಗೆ ನೆನಪಿಸಿ ಹುರಿದುಂಬಿಸಬಹುದು. ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡು ಈ ರೀತಿಯ ಆತಂಕವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಬಹುದು.

 ಸಲಹೆ ಪಡೆಯಲು: ಪೋಷಕರು, ಶಿಕ್ಷಕರು, ಆಪ್ತಸಮಾಲೋಚಕರು ಅಥವಾ ಸ್ನೇಹಿತರು ನಿಮಗೆ ಸಮಯದ ಉಪಯೋಗ ಹೇಗೆ ಮಾಡಬೇಕೆಂದು ತಿಳಿಸಬಹುದು. ಸಹಪಾಠಿಗಳು ಅಥವಾ ಸೀನಿಯರ್ಸ್ ತಾವು ಹೇಗೆ ಸಮಯದ ಬಳಕೆ ಮಾಡುತ್ತಾರೆ, ಯಾವ ವಿಷಯಗಳು ಪರೀಕ್ಷೆಗೆ ಮುಖ್ಯ ಎಂದು ಸಲಹೆ ನೀಡಬಹುದು.

ಯಾರೊಂದಿಗೆ ಮಾತನಾಡಬಹುದು?

ನೀವು ನಂಬುವ, ಗೌರವಿಸುವ ಸಹಪಾಠಿ, ಪೋಷಕರು, ಸೀನಿಯರ್, ಶಿಕ್ಷಕರು ಅಥವಾ ಆಪ್ತಸಮಾಲೋಚಕರೊಂದಿಗೆ ನಿಮ್ಮ ಆತಂಕವನ್ನು ಹಂಚಿಕೊಳ್ಳಬಹುದು. ಸ್ವತಃ ಆತಂಕಕ್ಕೆ ಒಳಗಾಗಿರುವ ಸಹಪಾಠಿಯೊಂದಿಗೆ ಮಾತನಾಡಬೇಡಿ. ಒಂದೇ ರೀತಿಯ ಅನುಭವಗಳನ್ನು ಹೊಂದಿರುವ ನೀವಿಬ್ಬರು ಇನ್ನಷ್ಟು ಗಾಬರಿಗೆ ಒಳಗಾಗಬಹುದು. ನೀವು ಆಯ್ಕೆ ಮಾಡುವ ವ್ಯಕ್ತಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಮತ್ತೊಬ್ಬರೊಂದಿಗೆ ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡಿ.

ಮಾತನಾಡುವ ಬದಲು ಬರೆಯಬಹುದೇ?

ಖಂಡಿತವಾಗಿಯೂ ಬರೆಯಬಹುದು. ಇನ್ನೊಬ್ಬರೊಂದಿಗೆ ಮಾತನಾಡುವಷ್ಟೇ, ಬರೆಯುವುದೂ ಸಹಾಯಕ. ಬರೆಯುವಾಗ ನಿಮ್ಮ ಆಲೋಚನೆಗಳನ್ನು ಅರಿತು, ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡು ಮನಸ್ಸನ್ನು ಹಗುರಗೊಳಿಸಬಹುದು.

ಯಾವಾಗ ಸ್ಕೂಲ್/ಕಾಲೇಜಿನ ಆಪ್ತಸಮಾಲೋಚಕರ ಬಳಿ ಹೋಗಬೇಕು?

ನೀವು ಒತ್ತಡ ಅಥವಾ ಆತಂಕಕ್ಕೆ ಒಳಗಾಗಿದ್ದರೆ, ನಿಮ್ಮ ಸ್ಕೂಲ್/ಕಾಲೇಜಿನ ಆಪ್ತಸಮಾಲೋಚಕರ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ. ನಿಮ್ಮ ಆತಂಕ ಬಹಳ ತೀವ್ರವಾಗಿದ್ದು ನಿಮ್ಮ ದೈನಂದಿನ ಚಟುವಟಿಕೆಯ ಮೇಲೆ ಪರಿಣಾಮವನ್ನು ಬೀರುತ್ತಿದ್ದರೆ ನೇರವಾಗಿ ಆಪ್ತಸಮಾಲೋಚಕರನ್ನು ಭೇಟಿಯಾಗಿ. ನಿಮ್ಮ ಸ್ಕೂಲ್/ಕಾಲೇಜಿನಲ್ಲಿ ಆಪ್ತಸಮಾಲೋಚಕರ ಸೌಲಭ್ಯ ಇಲ್ಲ ಮತ್ತು ಮಾನಸಿಕ ಆರೋಗ್ಯ ತಜ್ಞರ ಬಗ್ಗೆ ನಿಮಗೆ ತಿಳಿದಿಲ್ಲ ಎಂದರೆ ಸಹಾಯವಾಣಿಗೆ ಕರೆಮಾಡಿ.

ಈ ಲೇಖನವನ್ನು ನಿಮ್ಹಾನ್ಸಿನ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿರುವ ಡಾಮಂಜುಳಾ ಅವರು ನೀಡಿದ ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org