ಸಮಯದ ಉಪಯೋಗ

ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಓದಲು ಸಾಕಷ್ಟಿರುತ್ತದೆ. ಸಮಯದ ಉಪಯೋಗ ಸರಿಯಾಗಿ ಮಾಡಿದರೆ ಟೆನ್ಷನ್ ದೂರ ಆಗುತ್ತದೆ. 

ಎಲ್ಲಾ ವಿಷಯಗಳನ್ನು ಪರೀಕ್ಷೆಯ ಹಿಂದಿನ ದಿನ ಕೂತು ಬಾಯಿಪಾಠ ಮಾಡುವುದು ಮಕ್ಕಳ ಅಭ್ಯಾಸ. ಬದಲಾಗಿ ಮುಂಚಿನಿಂದ ಸ್ವಲ್ಪ ಸ್ವಲ್ಪವೇ ಓದುತ್ತಾ ವಿಷಯಗಳನ್ನು ಅರ್ಥ ಮಾಡಿಕೊಂಡರೆ, ಪರೀಕ್ಷೆಯ ಮುಂಚೆ ಆರಾಮಾಗಿರಬಹುದು. ಪ್ರತಿನಿತ್ಯ ಒಂದು ಗಂಟೆ ಒಂದು ವಿಷಯ ಓದುವಂತೆ ಟೈಮ್ ಟೇಬಲ್ ತಯಾರಿಸಿದರೂ ಸಾಕು. ಹಾಗೆಯೇ ಟಿ.ವಿ, ಇಂಟರ್ನೆಟ್. ಆಟ, ಹವ್ಯಾಸ ಎಲ್ಲದಕ್ಕೂ ಒಂದಿಷ್ಟು ಸಮಯ ಮೀಸಲಿಡಬೇಕು. ಯಾವಾಗಲೂ ಓದುವುದು ಅಥವಾ ಯಾವಾಗಲೂ ಓದದೇ ಬೇರೆ ಚಟುವಟಿಕೆಗಳನ್ನೇ ಮಾಡುವುದು, ಎರಡೂ ತಪ್ಪು.

ಯಾವುದು ಮುಖ್ಯ?

ಓದುವಾಗ ದೊಡ್ಡ ವಿಷಯಗಳನ್ನು ಸಣ್ಣ ಸಣ್ಣ ಭಾಗ ಮಾಡುವುದರಿಂದ ನಿಮಗೆ ಅದು ಸುಲಭವೆನಿಸುತ್ತದೆ. ಹಾಗೆಯೇ ಯಾವ ಕೆಲಸ ಯಾವಾಗ ಮಾಡಬೇಕು ಎಂದು ನಿರ್ಧಾರ ಮಾಡಲು ಈ ಮಾರ್ಗ ಉಪಯೋಗಿಸಿ:

ನಿಮ್ಮ ಪಠ್ಯಕ್ರಮವನ್ನು (syllabus) ಹೀಗೆ ಭಾಗ ಮಾಡಿ-

  • ಕೂಡಲೇ ಓದಬೇಕು
  • ಆದಷ್ಟು ಬೇಗ ಓದಿದರೆ ಒಳ್ಳೆಯದು
  • ಇದನ್ನು ನಾಳೆ/ಮುಂದಿನ ವಾರ ಓದಬಹುದು

ಟೈಮ್ ಟೇಬಲ್ ಹೇಗೆ ತಯಾರಿಸುವುದು?

ಟೈಮ್ ಟೇಬಲ್ ನಲ್ಲಿ ನೀವು ದಿನನಿತ್ಯ ಮಾಡುವ ಎಲ್ಲಾ ಕೆಲಸಗಳನ್ನೂ ಸೇರಿಸಬೇಕು.

  • ಸ್ಕೂಲ್ ಹೋಗುವುದು, ಹೋಮ್ ವರ್ಕ್ ಮಾಡುವುದು, ಓದುವುದು
  •  ಮನೆಯವರ ಜೊತೆ ಸಮಯ ಕಳೆಯುವುದು, ಆಟ, ಹವ್ಯಾಸ, ಪ್ರಯಾಣ
  • ಸ್ನಾನ, ವಿಶ್ರಾಂತಿ, ಟಿ.ವಿ. ನೋಡುವುದು, ಸಂಗೀತ ಕೇಳುವುದು, ಶಾಪಿಂಗ್, ಸ್ನೇಹಿತರೊಂದಿಗೆ ಸಮಯ ಕಳೆಯುವುದು, ಈಮೇಲ್, ಫೋನ್ ಕಾಲ್, ಮೆಸೇಜ್ ಮಾಡುವುದು ಇತ್ಯಾದಿ
  • ಊಟ ಮತ್ತು ನಿದ್ರೆ ಮಾಡುವುದು

ಮುಂದೂಡಿಕೆ

ವಿದ್ಯಾರ್ಥಿಗಳು "ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ " ಮಾಡುವುದೇ ಹೆಚ್ಚು. ಕೆಲಸ ಮಾಡುವುದಕ್ಕಿಂತ ಅದರ ಬಗ್ಗೆ ಯೋಚಿಸಿ ಭಯ ಪಡುವುದರಲ್ಲೇ ಸಮಯ ಕಳೆದುಹೋಗುತ್ತದೆ. ಓದಲು ಶುರು ಮಾಡುವುದೇ ದೊಡ್ಡ ಸವಾಲು. ಈ ಮೊದಲ ಹೆಜ್ಜೆ ಇಟ್ಟರೆ, ನಿಮಗೆ ಗೊತ್ತಿಲ್ಲದೇ ಬಹಳಷ್ಟು ಓದಿ ಮುಗಿಸುವಿರಿ. 

ಮುಂದೂಡುವುದನ್ನು ತಪ್ಪಿಸುವುದು:

  • ಭಯದಿಂದಾಗಿ ನೀವು ಕೆಲಸ ಮುಂದೂಡುತ್ತಿದ್ದರೆ, ಗುರಿ ಸಾಧಿಸಲು ಛಲದಿಂದ ಪ್ರಯತ್ನಿಸಿ. ಭಯ ತಾನಾಗಿಯೇ ಕಡಿಮೆಯಾಗುತ್ತದೆ. ವಿಷಯಗಳು ಬಹಳ ದೊಡ್ಡದು ಎನಿಸಿದರೆ, ಅದನ್ನು ಸಣ್ಣ ಭಾಗಗಳನ್ನಾಗಿ ಮಾಡಿ ಓದಿ. 
  • ಓದುವ ಜಾಗದಲ್ಲಿ ಏಕಾಗ್ರತೆಗೆ ಅಡ್ಡಿ ಮಾಡುವ ವಸ್ತುಗಳನ್ನು ಇಡಬೇಡಿ. ತುಂಬಾ ಹೊತ್ತು ಓದಿದರೂ ಏಕಾಗ್ರತೆ ಕಡಿಮೆಯಾಗಬಹುದು. ಆಗಾಗ ಸಣ್ಣ ವಿರಾಮ ತೆಗೆದುಕೊಳ್ಳಿ.
  • ನೀವು ಓದಲು ಪ್ರಾರಂಭಿಸಿದಾಗ ಇರುವ ಹುಮ್ಮಸ್ಸು ಕ್ರಮೇಣ ಕಡಿಮೆಯಾಗುತ್ತದೆ. ಹಾಗಾಗಿ ಮೊದಲು ಕಷ್ಟದ ವಿಷಯಗಳನ್ನು ಓದಿ ನಂತರ ಸುಲಭದ ವಿಷಯಗಳನ್ನು ಓದುವುದು ಒಳ್ಳೆಯದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org