ಶಿಕ್ಷಣ

ಪೋಷಕರ ನೆರವು ಅವಶ್ಯ

ವೈಟ್ ಸ್ವಾನ್ ಫೌಂಡೇಶನ್

ಹದಿನೆಂಟು ವರ್ಷಕ್ಕೆ ಮೇಲ್ಪಟ್ಟ ವಿದ್ಯಾರ್ಥಿ ಸಮಾಲೋಚಕರನ್ನು ಕಾಣುವಾಗ ಅದರಲ್ಲಿನ ಸಂಪೂರ್ಣವಾದ ಗೌಪ್ಯದ ಹಕ್ಕನ್ನು ಹೊಂದಿರುತ್ತಾನೆ, ಯಾಕೆಂದರೆ ಸಮಾಲೋಚನೆಯಲ್ಲಿ  ವೈಯಕ್ತಿಕ ಸಂಗತಿಗಳ ಬಗ್ಗೆ ಮಾತನಾಡುತ್ತಾರೆ .

ಆ ಗೌಪ್ಯ ಕಾಪಾಡಿಕೊಳ್ಳುವುದೇ ಸಮಾಲೋಚನೆ ಮತ್ತು ಸಮಾಲೋಚಕರ ವಿಶ್ವಾಸದ ಹೆಗ್ಗುರುತು. ಬಹಳಷ್ಟು ಸಮಾಲೋಚಕ ಸಂಸ್ಥೆಗಳು ಸಮಾಲೋಚನೆಗೆ ಮುನ್ನ  ಸಹಮತ (consent) ಫಾರ್ಮ್ ಭರ್ತಿ ಮಾಡಲು ಹೇಳುತ್ತಾರೆ. ಅಂದರೆ  ಆತ್ಮಹತ್ಯೆ, ಪರರಿಗೆ ಅಪಾಯ ತಂದೊಡ್ಡುವ ಸಂದರ್ಭವಿದ್ದಲ್ಲಿ, ನ್ಯಾಯಾಲಯದ ಪಾತ್ರವಿದ್ದಲ್ಲಿ ಅಗತ್ಯ ಮಾಹಿತಿಯನ್ನು ನಿರ್ಧಿಷ್ಟ ಜನರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಆದರೆ ಆ ಸಂದರ್ಭ ತುಂಬಾ ಕಡಿಮೆ ಎಂದೇ ಹೇಳಬಹುದು. ಉಳಿದಂತೆ ಬೇರೆ ವಿವರಗಳೂ ಇರುತ್ತವೆ. ಹಾಗಾಗಿ ವಿದ್ಯಾರ್ಥಿಯ ಸಮಸ್ಯೆಯ ವಿವರಗಳು ಗೌಪ್ಯವಾಗಿ ಉಳಿದುಕೊಳ್ಳುತ್ತವೆ ಎಂದು ಧಾರಾಳವಾಗಿ ನಂಬಬಹುದು.

ಸಮಾಲೋಚನೆಯಲ್ಲಿ ವಿದ್ಯಾರ್ಥಿಯ ತಂದೆ ತಾಯಿಯನ್ನು ಸೇರಿಸಿಕೊಂಡರೆ  ಪರಿಣಾಮ ಉತ್ತಮವಾರಿಗುತ್ತದೆ ಎಂದು ಸಮಾಲೋಚಕರಿಗೆ ಅನ್ನಿಸಿದಲ್ಲಿ ಅದನ್ನವರು ಮಾಡಬಹುದು. ಅಥವಾ ತಂದೆ ತಾಯಿಯರ ನಡುವಿನ ಸಮಸ್ಯೆ ವಿದ್ಯಾರ್ಥಿಯ ವಿದ್ಯಾಭ್ಯಾಸದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದರೆ ಪೋಷಕರನ್ನು ಸಮಾಲೋಚನೆಯಲ್ಲಿ ಒಳಗೊಳ್ಳಬಹುದು.

ಹಾಗಿದ್ದೂ ಪ್ರೌಢರ ಸಮಾಲೋಚನೆಯ ಸಂದರ್ಭದಲ್ಲಿ ಪೋಷಕರ ಒಳಗೊಳ್ಳುವಿಕೆಯು ಸದಾ ಚರ್ಚೆಯ ವಿಷಯವೇ ಆಗಿದೆ. ಗೌಪ್ಯ ಎನ್ನುವುದು ಬಲುಮುಖ್ಯ ಸಂಗತಿಯಾದ್ದರಿಂದ ಕಾಲೇಜಿನ ವಿದ್ಯಾರ್ಥಿಗಳು ತಂದೆ ತಾಯಿಯರ ಒಳಗೊಳ್ಳುವಿಕೆಯನ್ನು ಒಪ್ಪದೇ ಇರಬಹುದು. ಈ ಸಮಸ್ಯೆ ಇರುವಾಗ ತಂದೆ ತಾಯಿರನ್ನು ಒಳಗೊಳ್ಳಬೇಕೇ ಬೇಡವೇ  ಅನ್ನುವ ವಿಷಯ ಸಮಾಲೋಚಕನಿಗೆ ಗೊಂದಲವೇ ಸರಿ.

ಒಂದು ವೇಳೆ ಸಮಸ್ಯೆಯ ಪರಿಹಾರಕ್ಕಾಗಿ ಪೋಷಕರನ್ನು ಸೇರಿಸಿಕೊಂಡರೆ ಬಹಳಷ್ಟು ಸಂದರ್ಭದಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳ ಪರವಾಗಿ ವಾದ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಸಮಾಲೋಚಕರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಅವರಿಗಿರುವುದಿಲ್ಲ, ಅಲ್ಲದೆ ತಮ್ಮ ಮಕ್ಕಳು ತಪ್ಪು ಮಾಡಲಾರರು ಎಂದೇ ಅವರು ವಾದ ಮಾಡುತ್ತಾರೆ.

ನನ್ನದೇ ಅನುಭವದ ಒಂದು ಉದಾಹರಣೆಯನ್ನು ಹೇಳುವೆ.

ಒಮ್ಮೆ ಒಬ್ಬ ತಾಯಿಯಲ್ಲಿ ನಾನು ನಿವೇದಿಸಿಕೊಂಡೆ,  "ನೋಡಿ ನಿಮ್ಮ ಮಗ ಯಾವುದೇ ಮಾದಕ ದ್ರವ್ಯ ತೆಗೆದುಕೊಳ್ಳುತ್ತಿರುವನೋ ಎಂದು ನೀವೊಮ್ಮೆ ಅವನ ವರ್ತನೆಯನ್ನು ಗಮನಿಸಬೇಕು"  ಎಂದು. ಅದಕ್ಕವಳು ಕೋಪಗೊಂಡು ಹೇಳಿದರು  "ನನ್ನ ಮಗನಿಗೆ ದುರಭ್ಯಾಸಗಳಿಲ್ಲ. ಸಮಾಲೋಚಕರು ಅವನ ಮೇಲೆ ಸುಮ್ಮನೇ ಆರೋಪಗಳನ್ನು ಮಾಡುತ್ತಿದ್ದಾರೆ." ಎಂದು ವಾದಿಸಿದರು. ಮುಂದೆ ಅವರೇ ಒಂದು ತಿಂಗಳ ಬಳಿಕ ಮಗನು ತುಂಬಾ ಕಂಗಾಲಾಗಿರುವಂತೆ ಕಂಡು ಅವನ ಕೋಣೆಯಲ್ಲಿ ಮಾದಕ ದ್ರವ್ಯ ಸಿಕ್ಕಿದ್ದನ್ನು ಅವರೇ ಬಂದು ಹೇಳಿದರು. ಹಾಗಾಗಿ ಇಂಥ ಸಂಗತಿಗಳನ್ನು ಪೋಷಕರಿಗೆ ವಿವರಿಸಲು ಬಲು ಸೂಕ್ಷ್ಮವಾದ ಜಬ್ದಾರಿಯು ಸಮಾಲೋಚಕರದ್ದಾಗಿರುತ್ತದೆ, ಅಥವ ಇದನ್ನೆಲ್ಲ ಅವರಿಗೆ ಹೇಳದೇನೆ ನಿರ್ವಹಿಸುವ ಕೆಲಸವೂ ಅವರದ್ದಾಗಬಹುದು.

ತಮ್ಮ ಮಕ್ಕಳ ಗುಟ್ಟುಗಳೆಲ್ಲ ಬೀದಿಗೆ ಬರಬಲ್ಲವೆಂಬ ಭಯವೇ ಅವರನ್ನು ಇದಕ್ಕೆಲ್ಲ ಒಪ್ಪದಂತೆ ತಡೆಯಬಹುದು. ಇದೆಲ್ಲ ಸಮಾಲೋಚಕನಿಗೆ ದೊಡ್ಡ ಸಮಸ್ಯೆಯೇ ಆಗಿದ್ದರೂ ಅಧ್ಯಯನಗಳು ಹೇಳುವಂತೆ ಹದಿ ಹರೆಯದ ಸಮಸ್ಯೆಗಳ ನಿವಾರಣೆಯ ವಿಷಯದಲ್ಲಿ ಕುಟುಂಬ ಸದಸ್ಯರ ಒಳಗೊಳ್ಳುವಿಕೆಯು ಬಹಳ ಮುಖ್ಯ , ಏಕೆಂದರೆ ಇದು ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ . ಸುಲಭವಾಗುತ್ತದೆ. ಹಾಗಿದ್ದರೂ ಪೋಷಕರ ಒಳಗೊಳ್ಳುವಿಕೆಯ ಕುರಿತಾಗಿ ನಿರ್ಣಯ ತೆಗೆದುಕೊಳ್ಳಬೇಕಾದ್ದು ಸಮಾಲೋಚಕರ ಕೆಲಸವೇ ಆಗಿದೆ.

ಪೋಷಕರ ಸಂಪರ್ಕ ಮಾಡುವ ಮುನ್ನ ಯಾವ ಯಾವ ವಿಷಯಗಳನ್ನು ಅವರಲ್ಲಿ ಹೇಳಬಹುದು ಮತ್ತು ಯಾವುದನ್ನು ಹೇಳಲಾಗದು ಎಂಬುದರ ಕುರಿತು ಸಮಾಲೋಚಕನು ನಿರ್ಧರಿಸಬೇಕು. ಉದಾ- ತನ್ನ ಮಗಳಿಗೆ ಒಬ್ಬ ಹುಡುಗ ಕಾಲೇಜಿನಲ್ಲಿ ತೊಂದರೆ ಮಾಡುತ್ತಿದ್ದಾನೆ ಎನ್ನುವ ದೂರು ಬಂದರೆ ತಕ್ಷಣವೇ ಅದನ್ನು ವಿದ್ಯಾರ್ಥಿಯ ಮನೆಗೆ ತಿಳಿಸಲೇ ಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ಮತ್ತು ಶಿಸ್ತಿನ ಕ್ರಮ ಎರಡೂ ಅಗತ್ಯವಾಗುತ್ತದೆ.

ವಿದ್ಯಾರ್ಥಿಗಳ ಹಿತವನ್ನೇ ಮನಸಿನಲ್ಲಿಟ್ಟುಕೊಂಡು ಸರಿಯಾದ ನಿರ್ಣಯಕ್ಕೆ ಬರುವುದಕ್ಕೆ ಮತ್ತು ಹಿತವಾದ ಸಂಬಂಧವನ್ನು ಕಾಯ್ದುಕೊಳ್ಳುವುದಕ್ಕೆ ಕಾಲೆಜಿನ ಸಮಾಲೋಚಕರು ಶ್ರಮ ಪಡಬೇಕಾಗುತ್ತದೆ.

ವಿದ್ಯಾರ್ಥಿಯ ತಂದೆ ತಾಯಿಯರೊಂದಿಗೆ ಸಂವಹನ ನಡೆಸುವ ಯಾವುದೇ ಅವಕಾಶದಲ್ಲೂ (ಉದಾ- ಪೋಷಕ ಮತ್ತು ಶಿಕ್ಷಕರ ಮೀಟಿಂಗ್. ಇದು ಕಾಲೇಜಿನ ಹಂತದಲ್ಲಿ ಅಷ್ಟೇನೂ ನಡೆಯುವುದಿಲ್ಲ. ಹಾಗಿದ್ದೂ ಆಗೊಮ್ಮೆ ಈಗೊಮ್ಮೆ ನಡೆಯಬಹುದು) ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರದ್ದಾಗಿದೆ. ಅದು ತಮ್ಮ ಮಕ್ಕಳ ಕುರಿತು ಕಾಲೇಜಿಗೂ ಕಾಳಜಿಯಿದೆ ಎನ್ನುವುದನ್ನು ಪಾಲಕರಿಗೆ ಅರಿವಾಗಿಸುತ್ತದೆ.

ಡಾ. ಉಮಾ ವಾರಿಸ್, ಮುಖ್ಯ ಸಮಾಲೋಚಕರು, ಜೈನ್ ಯುನಿವರ್ಸಿಟಿ, ಬೆಂಗಳೂರು.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org