ಆತ್ಮಹತ್ಯೆಯ ಆಲೋಚನೆ

ಪರೀಕ್ಷೆಯ ಸಮಯದಲ್ಲಿ ಒತ್ತಡ, ಕಿರಿಕಿರಿ, ಆತಂಕ ಎದುರಿಸುತ್ತಿರುವ ಮಕ್ಕಳು ಅಥವಾ ಹದಿಹರೆಯದವರು ನಿಮಗೆ ಗೊತ್ತೇ? ಅದನ್ನು ಅವರು ಹೇಗೆ ನಿಭಾಯಿಸುತ್ತಿದ್ದಾರೆ? ಈ ಒತ್ತಡ ತಡೆಯಲು ಅವರಿಂದ ಸಾಧ್ಯವೇ ಎಂದು ಯೋಚಿಸಿದ್ದೀರಾ?

ಪರೀಕ್ಷೆಯ ಮುಂಚಿನ ಕೆಲ ದಿನಗಳಲ್ಲಿ ಮಕ್ಕಳು, ತಮ್ಮ ಹಾಗು ಇತರರ ನಿರೀಕ್ಷೆಯನ್ನು ಪೂರೈಸುವ ಒತ್ತಡದಲ್ಲಿರುವುದು ಸಹಜ. 

ದೊಡ್ಡವರಂತೆ ಭಾವನೆಗಳನ್ನು ಎಲ್ಲರ ಬಳಿ ಹೇಳಿಕೊಳ್ಳಲು, ಸಹಾಯ ಪಡೆಯಲು ಮಕ್ಕಳು ಕಷ್ಟ ಪಡಬಹುದು. ಆದರೆ ಅದರಿಂದ ಅವರ ನಡವಳಿಕೆಯಲ್ಲಾಗುತ್ತಿರುವ ಬದಲಾವಣೆಯನ್ನು ಹಿರಿಯರು ಗಮನಿಸಬೇಕು.

ಸಾಮಾನ್ಯವಾಗಿ ಆತ್ಮಹತ್ಯೆಯ ಕುರಿತು ಯೋಚಿಸುತ್ತಿರುವ ಮಕ್ಕಳು ಅಥವಾ ಯುವಕರು ಕೆಳಗೆ ಹೇಳಿರುವ ನಡವಳಿಕೆ ತೋರಬಹುದು-. 

  • ಸಾವಿನ ಬಗ್ಗೆ ಮಾತನಾಡುವುದು ಅಥವಾ ಸಾಯಲು ಇಚ್ಛಿಸುವುದು
  • ಹೆಚ್ಚು ಮೌನವಾಗಿರುವುದು, ಅಥವಾ ಸದಾ ಕೋಣೆಯಲ್ಲೇ ಇರುವುದು
  • ಒಂಟಿಯಾಗಿರಲು ಬಯಸುವುದು
  • ಅತಿಯಾಗಿ ಅಥವಾ ಅತಿ ಕಡಿಮೆ ತಿನ್ನುವುದು; ಹೆಚ್ಚು ಜಂಕ್ ತಿಂಡಿ, ಕೆಫಿನ್ ಇರುವ ಪಾನೀಯಗಳನ್ನು ಕುಡಿಯುವುದು
  • ಸಣ್ಣ ಸಣ್ಣ ವಿಷಯಗಳಿಗೂ ಸಿಟ್ಟಾಗುವುದು, ಕಿರಿಕಿರಿಗೊಳ್ಳುವುದು
  • ಮನೆಯವರ ಮೇಲೆ ಸಿಡುಕುವುದು
  • ಸಹಜವಾಗಿ ಅಷ್ಟು ಆತಂಕ ಪಡದ ಅವರು ತುಂಬಾ ಆತಂಕ ಪಡುವುದು
  • ಈ ಮೊದಲು ಇಷ್ಟಪಡುತ್ತಿದ್ದ ಕೆಲಸಗಳಲ್ಲಿ ನಿರಾಸಕ್ತಿ ತೋರುವುದು
  • ಸ್ನೇಹಿತರನ್ನು, ಸಂಬಂಧಿಕರನ್ನು ಮತ್ತೆ ನೋಡದಿರಬಹುದು ಎಂಬ ಭಾವನೆಯಲ್ಲಿ ಅವರನ್ನು ಭೇಟಿ ಮಾಡುವುದು
  •  ಇಷ್ಟವಾದ ವಸ್ತುಗಳನ್ನು ತ್ಯಜಿಸುವುದು
  • ಆಲ್ಕೋಹಾಲ್, ಸಿಗರೇಟ್, ಆನ್ ಲೈನ್ ಶಾಪಿಂಗ್ ಮುಂತಾದ ಚಟಗಳನ್ನು ಬೆಳೆಸಿಕೊಳ್ಳುವುದು

ಅತಿಯಾದ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಮಾತಿನ ಮೂಲಕ ಸುಳಿವುಗಳನ್ನು ನೀಡುತ್ತಾರೆ. ಉದಾಹರಣೆಗೆ: "ನಾನು ಸತ್ತು ಹೋದರೆ ಪರೀಕ್ಷೆ ಬರೆಯಬೇಕಿಲ್ಲ" ಅಥವಾ " ನನ್ನಿಂದಾಗಿಯೇ ನಿಮಗೆಲ್ಲಾ ಚಿಂತೆ."

ಯಾರು ಇಂತಹ ಮನಸ್ಥಿತಿಗೆ ಈಡಾಗಬಹುದು?

ಓದುವ ಅಥವಾ ಓದದ ಯಾವುದೇ ಮಕ್ಕಳಾದರೂ ಈ ಸಮಸ್ಯೆಗೆ ತುತ್ತಾಗಬಹುದು. ಈ ಹಿಂದೆ ಆಘಾತಕ್ಕೊಳಗಾಗಿರುವ ಮಗು ಅಥವಾ ತುಂಬಾ ನಿರೀಕ್ಷೆ (ಪೋಷಕರಿಂದ, ಶಿಕ್ಷಕರಿಂದ) ಎದುರಿಸುವ ಮಕ್ಕಳಲ್ಲಿ ಆತ್ಮಹತ್ಯೆಯ ಯೋಚನೆ ಹೆಚ್ಚು.

ನಾನು ಹೇಗೆ ಸಹಾಯ ಮಾಡಬಹುದು?

ಮೇಲೆ ತಿಳಿಸಿರುವ ಯಾವುದಾದರೂ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ, ನೀವು ಅವರ ಸಹಾಯಕ್ಕೆ ಇದ್ದೀರೆಂದು ಅವರಿಗೆ ತಿಳಿಸಿ.

ಅವರ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾತನಾಡುತ್ತಾ ಮಗು ಆತ್ಮಹತ್ಯೆಯ ಬಗ್ಗೆ ಯೋಚಸುತ್ತಿದೆಯೇ ಎಂದು ಪರೀಕ್ಷಿಸಿ. ಅವರಲ್ಲಿ ಆತ್ಮಹತ್ಯೆಯ ಆಲೋಚನೆ ಇದೆಯೇ ಎಂದು ಸೂಕ್ಷ್ಮವಾಗಿ ಕೇಳಿ ತಿಳಿಯಿರಿ. ಅವರು ಹೌದು ಎಂದು ಉತ್ತರಿಸಿದರೆ ಎಷ್ಟು ದಿನಗಳಿಂದ ಈ ಯೋಚನೆ ಕಾಡುತ್ತಿದೆ, ಯಾವುದಾದರೂ ಮಾರ್ಗವನ್ನೂ ಈಗಾಗಲೇ ಯೋಚಿಸಿರುವರೇ (ನೀವೇ ಸೂಚಿಸದಿರಿ), ಈ ಯೋಚನೆ ಬಂದಾಗ ಅವರಿಗೆ ಏನನಿಸುತ್ತದೆ ಎಂದು ಕೇಳಿ. ಇದರಿಂದ ಅಪಾಯ ಎಷ್ಟಿದೆ ಮತ್ತು ನೀವು ಹೇಗೆ ಸಹಾಯ ಮಾಡಬಹುದು ಎಂದು ತಿಳಿಯುತ್ತದೆ.

ಸಾಮಾನ್ಯವಾಗಿ ಯಾರಿಗಾದರೂ "ನೀವು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೀರಾ" ಎಂದು ಕೇಳಿದರೆ ಅವರು ಆತ್ಮಹತ್ಯೆಗೆ ಪ್ರಯತ್ನಿಸಬಹುದು ಎಂಬ ತಪ್ಪು ಕಲ್ಪನೆ ಇದೆ. ಆದರೆ ತಜ್ಞರ ಪ್ರಕಾರ, ಈ ವಿಷಯದ ಬಗ್ಗೆ ಮಾತನಾಡಿದರೆ ವ್ಯಕ್ತಿಗೆ, ತನ್ನ ದುಃಖ ಕೇಳಿಸಿಕೊಳ್ಳುವ, ಕಾಳಜಿ ತೋರುವ ಒಬ್ಬರಿದ್ದಾರೆ ಎಂಬ ಸಮಾಧಾನ ಸಿಗುತ್ತದೆ.

ನೀವು ಒಬ್ಬ ಒಳ್ಳೆಯ ಸ್ನೇಹಿತರಾಗಿ, ಯಾವುದೇ ಅಭಿಪ್ರಾಯ ನೀಡದೇ ಅವರ ಸಮಸ್ಯೆಯನ್ನು ಆಲಿಸಬೇಕು. ನಿನ್ನ ಯೋಚನೆ ತಪ್ಪು ಎಂದು ಒಮ್ಮೆಲೇ ಹೇಳುವ ಬದಲು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಉದ್ದೇಶ ವ್ಯಕ್ತಪಡಿಸಬೇಕು.

  • ವಿದ್ಯಾರ್ಥಿಗಳು ಕಡಿಮೆ ಅಪಾಯದಲ್ಲಿದ್ದರೆ (ಆತ್ಮಹತ್ಯೆಯ ಯೋಚನೆಯು ಅಷ್ಟಾಗಿ ಇರದಿದ್ದರೆ), ಅವರ ಸಂಪರ್ಕದಲ್ಲಿದ್ದು ಅವರ ನಡವಳಿಕೆಗಳನ್ನು ಗಮನಿಸಿ. ಅವರ ಸಮಸ್ಯೆ ಕೇಳಲು ನೀವು ಸದಾ ಸಿದ್ಧ ಎಂದು ತಿಳಿಸಿ.
  • ಅಪಾಯದ ಮಟ್ಟ ತೀವ್ರವಾಗಿದ್ದರೆ (ಆತ್ಮಹತ್ಯೆ ಮತ್ತು ಅದರ ವಿಧಾನಗಳ ಬಗ್ಗೆ ಯೋಚಿಸುತ್ತಿದ್ದರೆ), ನಿಮಗೆ ತಿಳಿಸುವ ಪ್ರಯತ್ನ ಮಾಡಿದ್ದಕಾಗಿ ಮೆಚ್ಚುಗೆ ತಿಳಿಸಿ. ಅವರು ಈಗಾಗಲೇ ಆತ್ಮಹತ್ಯೆಗೆ ಬೇಕಾದ ವಸ್ತು ತಂದಿಟ್ಟುಕೊಂಡಿದ್ದರೆ ಅದನ್ನು ಕೇಳಿ ಪಡೆದುಕೊಳ್ಳಿ. ಅವರಿಗೆ ಈ ಯೋಚನೆಗಳು ಕಾಡುವ ಸಂದರ್ಭವನ್ನು ನಿಭಾಯಿಸಲು ಸಹಾಯ ಮಾಡಿ. ಅವರೊಂದಿಗೆ ಫೋನ್ ನಲ್ಲಿ ಮಾತನಾಡುವುದು ಅಥವಾ ಅವರೊಂದಿಗೆ ಹೊರಗೆ ಹೋಗುವುದು ಹೀಗೆ.

ಈ ವಿಷಯವನ್ನು ಅವರ ಪೋಷಕರಿಗೆ ತಿಳಿಸಿ ಮತ್ತು ಆದಷ್ಟು ಬೇಗ ಮಾನಸಿಕ ತಜ್ಞರನ್ನು, ಶಾಲೆಯ ಆಪ್ತಸಮಾಲೋಚಕರನ್ನು ಭೇಟಿಯಾಗಲು ಸೂಚಿಸಿ. ಪೋಷಕರು ಇದಕ್ಕೆ ಹಿಂಜರಿದರೆ, ಅವರ ಕುಟುಂಬದ ವೈದ್ಯರನ್ನು ಭೇಟಿಯಾಗಲು ತಿಳಿಸಿ. ವೈದ್ಯರು ಅಗತ್ಯವಿರುವ ಸಲಹೆ ನೀಡಿ ತಜ್ಞರನ್ನು ಭೇಟಿಯಾಗಲು ಸೂಚಿಸಬಹುದು.

ನಿಮ್ಮ ಮಧ್ಯಸ್ಥಿಕೆಯು ಒಂದು ಪ್ರಾಣವನ್ನು ಉಳಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org