ಸೌಂದರ್ಯಪ್ರಜ್ಞೆ ಪುರುಷರನ್ನು ಬಾಧಿಸುತ್ತದೆಯೇ ?

ಪುರುಷರಲ್ಲಿಯೂ ತಮ್ಮ ದೇಹದ ಕುರಿತು ಸೌಂದರ್ಯಪ್ರಜ್ಞೆ ಇರುತ್ತದೆ. ವಿಶೇಷವಾಗಿ ಹದಿಹರೆಯದ ಯುವಕರಲ್ಲಿ ಇದು ಹೆಚ್ಚಾಗಿರುತ್ತದೆ ಮತ್ತು ಅವರು ತಮ್ಮ ದೇಹದ ಆಕಾರದ ಬಗ್ಗೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ಈ ಕಾರಣದಿಂದ ಅವರು ಸ್ವಾವಲಂಬಿಗಳಾಗಿ, ಸಮಾಜದಲ್ಲಿ ಪ್ರತ್ಯೇಕವಾಗಿ ತಮ್ಮನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವ ಅವಧಿಯಲ್ಲಿ ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಾರೆ. ಅವರು ತಾವು ಎಲ್ಲರಿಗಿಂತ ಭಿನ್ನವಾಗಿರಬೇಕೆಂದು ಬಯಸುತ್ತಾರೆ. ಹದಿಹರೆಯದಲ್ಲಿ ಸೌಂದರ್ಯವು ಗುರುತು ಮತ್ತು ಹೆಗ್ಗಳಿಕೆಯ ಒಂದು ಪ್ರಮುಖ ಭಾಗವಾಗಿ ಬಿಡುತ್ತದೆ.

ಅದಕ್ಕೆ ಸರಿಯಾಗಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಡೇಟಿಂಗ್ ಆ್ಯಪ್ ಗಳು ದೇಹಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಮಹಿಳೆಯರು ತಮ್ಮ ಆಯ್ಕೆಯ ವಿಷಯದಲ್ಲಿ ಕೆಲವು ನಿರ್ದಿಷ್ಟ ಅಭಿಪ್ರಾಯಗಳನ್ನು ಹೊಂದಿರುವುದು ಪುರುಷರ ಮೇಲೆ ಹೆಚ್ಚು ಒತ್ತಡ ಹೇರುತ್ತದೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ನಡೆಸಿರುವ ಒಂದು ಸಮೀಕ್ಷೆಯು, ಮಹಿಳೆಯರಿಗೆ ಪುರುಷರ ದೇಹಸೌಂದರ್ಯವೇ ಮುಖ್ಯವೆಂದು ಪುರುಷರು ನಂಬಿರುವುದಾಗಿ ವರದಿ ನೀಡಿದೆ.

ಈ ಮಾತಿಗೆ ಸಾಕ್ಷಿ ಎಂಬಂತೆ, ಕಳೆದ ಹತ್ತು ವರ್ಷಗಳಲ್ಲಿ ಪುರುಷರ ಪ್ರಸಾಧನ ಸಾಮಗ್ರಿ ಕೈಗಾರಿಕೆಗಳು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪನೆಗೊಂಡಿವೆ. “ಎ ಎಸ್ ಎಸ್ ಓ ಸಿ ಹೆಚ್ ಎ ಎಮ್ “(ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅ್ಯಂಡ್ ಇಂಡಸ್ಟ್ರೀಸ್ ಆಫ್ ಇಂಡಿಯಾ) ನಡೆಸಿರುವ ಅಧ್ಯಯನದ ಪ್ರಕಾರ ಪುರುಷರ ಪ್ರಸಾಧನ ಸಾಮಾಗ್ರಿಗಳ ಕೈಗಾರಿಕೆಗಳು ಕಳೆದ ಐದು ವರ್ಷದಲ್ಲಿ ಶೇಕಡಾ 42ರಷ್ಟು ಹೆಚ್ಚಿದೆ. “ ಬ್ರಾಂಡ್ ಬಾಯ್ಸ್ ಅಡ್ವರ್ಟೈಸಿಂಗ್” ನ ಮಾಜಿ ಮಾರ್ಕೇಟಿಂಗ್ ಅಸೋಸಿಯೇಟ್ ಆದಿತ್ಯ ಗೌರ್, “ಕಾಂತಿವರ್ಧಕ ಕಂಪೆನಿಗಳಿಗೆ (ಪುರುಷರ ದೇಹಕಾಂತಿ ವರ್ಧಕಗಳು) ಈಗ ಹೆಚ್ಚು ಅವಕಾಶಗಳಿವೆ. ಈ ಹಿಂದೆ ಮಹಿಳೆಯರಿಗಾಗಿ ತಯಾರಿಸಲಾಗುತ್ತಿದ್ದ ಉತ್ಪನ್ನಗಳನ್ನೇ ಪುರುಷರು ಬಳಸುತ್ತಿದ್ದರು. ಆಗ ಅವುಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಅನಂತರ ಪುರುಷರಿಗೆಂದು ಪ್ರತ್ಯೇಕವಾಗಿ ವಿವಿಧ ಶ್ರೇಣಿಯ ಕಾಂತಿವರ್ಧಕ ಕಂಪೆನಿಗಳು ತಲೆಯೆತ್ತಿದವು” ಎಂದು ವಿವರಿಸುತ್ತಾರೆ.

ಈಗ ಪುರುಷರಿಗಾಗಿಯೇ ವಿಭಿನ್ನ ರೀತಿಯ ಫೇಸ್ ವಾಷ್, ಫೇಸ್ ಕ್ರೀಂ, ವ್ಯಾಕ್ಸ್ ಮತ್ತು ಬೇರ್ಡ್ ಜೆಲ್ ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ. ಪುರುಷರು ಹೇಗೆ ಕಾಣುತ್ತಾರೆ ಮತ್ತು ಅವರು ಇತರರಿಗಿಂತ ಯಾವ ರೀತಿ ಭಿನ್ನ ಎಂಬುವುದಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ.

ಸೌಂದರ್ಯಪ್ರಜ್ಞೆ ಮತ್ತು ಆಹಾರ ಕ್ರಮ ನ್ಯೂನತೆಗಳು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆಗಳು ಎಂದೇ  ಪರಿಗಣಿಸಲಾಗುತ್ತದೆ. ಆದರೆ, ಪುರುಷರು ಮಹಿಳೆಯರಿಗಿಂತ ನಾಲ್ಕುಪಟ್ಟು ಹೆಚ್ಚು ಸೌಂದರ್ಯಪ್ರಜ್ಞೆ ಹೊಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇದರಿಂದ ಸೌಂದರ್ಯ ಪ್ರಜ್ಞೆಯ ವಿಷಯದಲ್ಲಿ ಪುರುಷರು ಮತ್ತು ಸ್ತ್ರೀಯರಲ್ಲಿ ಅಂಥಾ ಭೇದವೇನಿಲ್ಲ ಎಂಬುದು ಸಾಬೀತಾಗುತ್ತದೆ.

“ಹಿಂದೆಲ್ಲ ಪುರುಷರು ಮಹಿಳೆಯರಂತೆ ತಮ್ಮ ಸೌಂದರ್ಯದ ಬಗ್ಗೆ ಅಥವಾ ದೇಹ ಸೌಷ್ಠವದ ಬಗ್ಗೆ ಹೆಚ್ಚು ಸಾಮಾಜಿಕ ಒತ್ತಡ ಅನುಭವಿಸುತ್ತಿರಲಿಲ್ಲ. ಪರಿಣಾಮವಾಗಿ, ಹೆಚ್ಚಿನ ಅಧ್ಯಯನಗಳನ್ನು ಮಹಿಳೆಯರ ಸೌಂದರ್ಯಪ್ರಜ್ಞೆ ಹಾಗೂ ಆಹಾರ ಪದ್ಧತಿಗಳ ಆಧಾರದ ಮೇಲೆಯೇ ನಡೆಸಲಾಗುತ್ತಿತ್ತು. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಮಾಪಕ ಹಾಗು ಉಪಕರಣಗಳನ್ನು ರೂಪಿಸಲಾಗುತ್ತಿತ್ತು. ಈಗ ಹಾಗಿಲ್ಲ. ಮಾಧ್ಯಮ ಹಾಗು ಕೆಲವು ಫಿಟ್ನೆಸ್ ಇಂಡಸ್ಟ್ರಿಗಳ ಬೆಳವಣಿಗೆಯ ನಂತರದಲ್ಲಿ, ಪುರುಷರು ಮಹಿಳೆಯರಷ್ಟೆ ಒತ್ತಡವನ್ನು ಅನುಭವಿಸತೊಡಗಿದ್ದಾರೆ. ಪುರುಷರ ಮೇಲೆ ಸೌಂದರ್ಯಪ್ರಜ್ಞೆಯ ವಿಚಾರಗಳನ್ನು ಹೇರಲಾಗುತ್ತಿದೆ. ಮಾಧ್ಯಮಗಳ ಪ್ರೇರಣೆಯಿಂದ ಪುರುಷರು ತಮ್ಮ ಪೌರುಷವನ್ನು ತೋರ್ಪಡಿಸಲು ದೇಹ ಸೌಂದರ್ಯವನ್ನು ಕಾಯ್ದುಕೊಳ್ಳುವ ಅನಿವಾರ್ಯ ಸೃಷ್ಟಿಸಲಾಗಿದೆ” ಎನ್ನುತ್ತಾರೆ ಬೆಂಗಳೂರಿನ ಸೈಕಾಲಜಿಸ್ಟ್ ಪಾರಸ್ ಶರ್ಮ.

ಮಹಿಳೆಯರು ತೆಳ್ಳಗೆ ಸುಂದರವಾಗಿರಬೇಕೆಂದು ಬಯಸುವುದು ಸಾಮಾನ್ಯ. ಎಲ್ಲಾ ಮಹಿಳೆಯರೂ ತೆಳ್ಳಗಾಗಬೇಕು, ತಮ್ಮ ತೂಕ ಕಡಿಮೆಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಪುರುಷರಿಗೆ ಇದು ಸಂಕೀರ್ಣ ವಿಷಯ. ಕೇವಲ ತೂಕ ಕಡಿಮೆ ಮಾಡಿಕೊಳ್ಳುವುದು ವಿಷಯವಲ್ಲ; ಸತತ ವ್ಯಾಯಾಮದಿಂದ ಕೊಬ್ಬಿಲ್ಲದ, ಬಲಿಷ್ಠ ಹಾಗು ಆಕರ್ಷಕವಾದ ಮೈಕಟ್ಟು ಹೊಂದುವುದು ಅವರಿಗೆ ಮುಖ್ಯವಾಗುತ್ತದೆ.

ನಿಮ್ಹಾನ್ಸ್ ನ ಡಾ.ಪ್ರಭಾಚಂದ್ರ ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಒಂದು ವರ್ಷದಲ್ಲಿ ದಾಖಲಾಗುವ ಆಹಾರ ವ್ಯತ್ಯಯ ಪ್ರಕರಣಗಳಲ್ಲಿ ಸರಿಸುಮಾರು 75ರಲ್ಲಿ 2 ಪ್ರಕರಣಗಳು ಮಾತ್ರ ಪುರುಷರದ್ದು. ಆಶ್ಚರ್ಯವೆಂದರೆ, ಅವರೂ ಕೂಡ “ಈಟಿಂಗ್ ಡಿಸಾರ್ಡರ್ಸ್ ನಾಟ್ ಅದರ್ವೈಸ್ ಸ್ಪೆಸಿಫೈಡ್ “(ಇ ಡಿ ಎನ್ ಓ ಎಸ್) ವಿಭಾಗದಲ್ಲಿರುತ್ತಾರೆ. ಇದರಿಂದ ಪುರುಷರು ಕೂಡಾ ಸೌಂದರ್ಯ ಪ್ರಜ್ಞೆ ಹಾಗು ಆಹಾರ ಕ್ರಮಗಳ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎನ್ನುವುದು ತಿಳಿದುಬರುತ್ತದೆ. ಆದರೆ ಈ ಪ್ರಕರಣಗಳು ತತ್’ಕ್ಷಣದಲ್ಲಿ ಬೆಳಕಿಗೆ ಬರುವುದಿಲ್ಲ.

ಅಮೆರಿಕೆಯಲ್ಲಿರುವ “ ಅಲಯನ್ಸ್ ಆಫ್ ಈಟಿಂಗ್ ಡಿಸಾರ್ಡರ್ಸ್ ಅವೇರ್ ನೆಸ್ “ ಸಂಸ್ಥೆಯ ಪ್ರಕಾರ, ಸರಿಸುಮಾರು 2.4ರಿಂದ 3.5ಮಿಲಿಯನ್ ಪುರುಷರು ವಿವಿಧ ರೀತಿಯ ಆಹಾರ ಕ್ರಮಗಳಿಂದಾಗುವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸುಮಾರು 20%ರಷ್ಟುಮಂದಿ “ಅನೊರೆಕ್ಸಿಯಾ”ದಿಂದ ಸಾವನ್ನಪ್ಪುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದನ್ನು ಹೆಚ್ಚು ಆದ್ಯತೆಯೊಂದಿಗೆ ಚರ್ಚಿಸುವ ಅಗತ್ಯವಿದೆ.

ತಮ್ಮ ಉದ್ವೇಗ ಹಾಗು ಖಿನ್ನತೆಯ ಮನಬಿಚ್ಚಿ ಮಾತನಾಡಲು ಆರಂಭಿಸಿರುವ ಪುರುಷರು, ತಾವು ಎದುರಿಸುತ್ತಿರುವ ಸೌಂದರ್ಯಪ್ರಜ್ಞೆ ಸಮಸ್ಯೆ ಮತ್ತು  ಆಹಾರ ವ್ಯತ್ಯಯದ ಪರಿಣಾಮಗಳ ಬಗ್ಗೆಯೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬೇಕು ಮತ್ತು ಈ ಮೂಲಕ ಆರೋಗ್ಯಕರವಾದ - ಗುಣಮಟ್ಟದ ಜೀವನ ನಡೆಸುವತ್ತ ಗಮನ ಹರಿಸಬೇಕು.

ಆಕರ :

Strother E, Lemberg R, Stanford SC and Turberville D. “Eating Disorders in Men: Underdiagnosed, Undertreated, and Misunderstood.” Eating Disorders. Oct 2012; 20(5);346-355.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org