ಮಾನಸಿಕ ಒತ್ತಡವು ಫೈಬ್ರೋಮಯಾಲ್ಜಿಯಾದ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?
ಫೈಬ್ರೋಮಯಾಲ್ಜಿಯಾ ಎಂದರೇನು?
ಫೈಬ್ರೋಮಯಾಲ್ಜಿಯಾ ಒಂದು ದೀರ್ಘಕಾಲದ ಮನೋವ್ಯಾಧಿಯಾಗಿದೆ. ಇದು ಸಾಮಾನ್ಯವಾಗಿ ದಣಿವು ಮತ್ತು ಅಂಗಾಂಗದ ನೋವನ್ನು ಒಳಗೊಂಡಿರುತ್ತದೆ. ಫೈಬ್ರೋಮಯಾಲ್ಜಿಯಾ ಹೊಂದಿರುವ ವ್ಯಕ್ತಿಯ ನೋವು ಯಾವುದೇ ಸ್ಕ್ಯಾನಿಂಗ್’ನಿಂದಲೂ ತಿಳಿದು ಬರುವುದಿಲ್ಲ. ಆದ್ದರಿಂದ ಈ ವ್ಯಾಧಿಗೆ ಚಿಕಿತ್ಸೆ ನೀಡುವುದು ಸ್ವಲ್ಪ ಕಷ್ಟದ ಸಂಗತಿ.
ಫೈಬ್ರೋಮಯಾಲ್ಜಿಯಾದ ಲಕ್ಷಣಗಳೇನು?
ಹಲವಾರು ವಾರಗಳಿಂದ ಅಥವಾ ತಿಂಗಳುಗಳಿಂದ ಈ ಕೆಳಗೆ ನೀಡಲಾಗಿರುವ ಸಮಸ್ಯೆಗಳು ನಿಮ್ಮಲ್ಲಿ ಕಂಡು ಬರುತ್ತಿದ್ದರೆ, ಅದು ಫೈಬ್ರೋಮಯಾಲ್ಜಿಯಾ ಆಗಿರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ನೀವು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ :
* ತೀವ್ರ ದಣಿವು.
* ರಾತ್ರಿಯ ಸಮಯದಲ್ಲಿ ಚೆನ್ನಾಗಿ ನಿದ್ರಿಸಿದ್ದರೂ, ಸುಸ್ತು ಕಂಡು ಬರುವುದು.
* ತಲೆನೋವು ಮತ್ತು ಅಂಗಾಂಗಗಳ ನೋವು.
* ಮತ್ತೆಮತ್ತೆ ಮರುಕಳಿಸುವ ಹತಾಶೆ ಮತ್ತು ಆತಂಕದ ಭಾವನೆಗಳು.
* ಕೆಲಸ ಮಾಡುವಾಗ ಅದರ ಮೇಲೆ ಗಮನ ಕೇಂದ್ರೀಕರಿಸಲು ಆಗದೆ ಇರುವುದು.
* ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು .
ಫೈಬ್ರೋಮಯಾಲ್ಜಿಯಾ ಉಂಟಾಗಲು ನಿರ್ದಿಷ್ಟ ಕಾರಣಗಳೇನೆಂದು ಈವರೆಗೆ ತಿಳಿದು ಬಂದಿಲ್ಲ. ಯಾವ ವ್ಯಕ್ತಿ ತೀವ್ರವಾದ ಒತ್ತಡವನ್ನು ಅಥವಾ ಮಾನಸಿಕ ಆಘಾತವನ್ನು ಅನುಭವಿಸುತ್ತಾನೆಯೋ ಅವನಲ್ಲಿ ಫೈಬ್ರೋಮಯಾಲ್ಜಿಯಾ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಆರೋಗ್ಯವಂತನಾಗಿ ಕಾಣುವ ವ್ಯಕ್ತಿ ಅಸಹಜವಾಗಿ ವರ್ತಿಸತೊಡಗಿದಾಗ ಅಥವಾ ವ್ಯಾಧಿಗೊಳಗಾದಾಗ ಆತನ ಸಮಸ್ಯೆಯನ್ನು ಅವನ ಗೆಳೆಯರಿಗಾಗಲೀ ಕುಟುಂಬದವರಿಗಾಗಲೀ ಅರ್ಥ ಮಾಡಿಕೊಳ್ಳುವುದು ಕಷ್ಟ. ಸ್ಕ್ಯಾನಿಂಗ್ ನಿಂದಲೂ ಯಾವುದೇ ದೈಹಿಕ ತೊಂದರೆಗಳನ್ನು ಗುರುತಿಸಲಾಗುವುದಿಲ್ಲ. ಆದರೆ, ಆ ವ್ಯಕ್ತಿಯ ಸುತ್ತಮುತ್ತಲಿನ ಜನರು ಅವನ ಮಾನಸಿಕ ಪರಿಸ್ಥಿತಿಯಿಂದ ಅಥವಾ ಚಿಂತೆಯಿಂದ ಆತನು ವ್ಯಾಧಿಗೊಳಗಾಗಿದ್ದಾನೆಂದು ತಿಳಿಯಬಹುದು.
ವ್ಯಕ್ತಿಯ ಮನಸ್ಸಿನ ಮೇಲೆ ಫೈಬ್ರೋಮಯಾಲ್ಜಿಯಾ ಹೇಗೆ ಪರಿಣಾಮ ಬೀರುತ್ತದೆ?
ಫೈಬ್ರೋಮಯಾಲ್ಜಿಯಾ ಒಬ್ಬ ವ್ಯಕ್ತಿಯ ಮೇಲೆ ಹಲವು ಬಗೆಗಳಲ್ಲಿ ಪರಿಣಾಮ ಬೀರುತ್ತದೆ. ಈ ರೋಗಕ್ಕೆ ತುತ್ತಾಗಿರುವವರಿಗೆ ತೀವ್ರ ಮೈಕೈ ನೋವು ಮತ್ತು ದಣಿವಿನಿಂದಾಗಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿಭಾಯಿಸುವುದಕ್ಕೆ ತುಂಬಾ ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ ಆ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ ಮತ್ತು ಕೀಳರಿಮೆಯಿಂದಾಗಿ ತನ್ನ ಕೆಲಸ ಕಾರ್ಯಗಳನ್ನು ನಿಭಾಯಿಸಲಾರದೆ ಹೋಗುತ್ತಾನೆ.
ಹೀಗೆ ಫೈಬ್ರೋಮಯಾಲ್ಜಿಯಾ ಮಾನಸಿಕ ವ್ಯಾಧಿಗೆ ಮೂಲವಾಗುತ್ತದೆ. ಈ ಬಗೆಯಲ್ಲಿ ವ್ಯಾಧಿಗೊಳಗಾಗಿರುವ ವ್ಯಕ್ತಿ ಅನುಭವಿಸುವ ನೋವು ಬರಿಗಣ್ಣಿಗೆ ಕಾಣಿಸುವುದಿಲ್ಲ ಮತ್ತು ಮೇಲೆ ಹೇಳಿರುವಂತೆ ಯಾವುದೇ ತರಹದ ಸ್ಕ್ಯಾನಿಂಗ್’ನಿಂದಲೂ ತಿಳಿದು ಬರುವುದಿಲ್ಲ. ಆದರೆ ನೋವು ನಿಜವಾಗಿಯೂ ತೀವ್ರವಾಗಿರುತ್ತದೆ. ಇಂತಹ ವ್ಯಕ್ತಿಗಳಿಗೆ ಹಾಸಿಗೆಯಿಂದ ಮೇಲೇಳುವುದೇ ಕಷ್ಟದ ಕೆಲಸವಾಗಿರುತ್ತದೆ. ಹತ್ತರಲ್ಲಿ ಒಂಭತ್ತು ಪ್ರಕರಣಗಳಲ್ಲಿ ಫೈಬ್ರೋಮಯಾಲ್ಜಿಯಾವನ್ನು ಗುರುತಿಸುವುದೇ ಅಸಾಧ್ಯವಾಗಿರುತ್ತದೆ. ಗುರ್ಗಾಂವ್’ನ ಮೇದಾಂತ ನರರೋಗ ಮತ್ತು ಮನಃಶಾಸ್ತ್ರಜ್ಞರಾದ ಡಾ.ನತಾಶ ಖುಲ್ಲರ್ ಅವರ ಪ್ರಕಾರ ಈ ವ್ಯಾಧಿಗೊಳಗಾಗಿರುವ ವ್ಯಕ್ತಿಗಳು ವೈದ್ಯರಿಂದ ಚಿಕಿತ್ಸೆ ಪಡೆದ ದೀರ್ಘಕಾಲದ ನಂತರವೂ ವಿವಿಧ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತಲೇ ಇರುತ್ತದೆ.
ಫೈಬ್ರೋಮಯಾಲ್ಜಿಯಾದ ಗುಣಲಕ್ಷಣಗಳು ಬಹುತೇಕವಾಗಿ ಮಾನಸಿಕ ಒತ್ತಡದ ಲಕ್ಷಣಗಳೊಂದಿಗೆ ಹೊಂದಾಣಿಕೆಯಾಗುತ್ತವೆ. ಫೈಬ್ರೋಮಯಾಲ್ಜಿಯಾ ರೋಗಿಗಳಲ್ಲಿ ಮಾನಸಿಕ ಒತ್ತಡ ಸಾಮಾನ್ಯವಾಗಿದ್ದು, ಹತ್ತು ಜನರಲ್ಲಿ ಒಂಭತ್ತು ಮಂದಿ ವ್ಯಾಧಿಗೊಳಗಾಗಿರುವವರು ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುತ್ತಾರೆ; ಮತ್ತು ಹತ್ತರಲ್ಲಿ ಆರು ಮಂದಿ ತಮ್ಮ ಜೀವಿತಾವಧಿಯಲ್ಲಿ ತೀವ್ರವಾದ ಒತ್ತಡ ಹಾಗೂ ನೋವನ್ನು ಅನುಭವಿಸುತ್ತಿರುತ್ತಾರೆ.
ಫೈಬ್ರೋಮಯಾಲ್ಜಿಯಾ ಮತ್ತು ಸ್ವಯಂ - ಆರೈಕೆ.
ಒತ್ತಡ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಅನುಸರಿಸುವುದರಿಂದ ಫೈಬ್ರೋಮಯಾಲ್ಜಿಯಾವು ಮಾನಸಿಕ ಆರೋಗ್ಯದ ಮೇಲೆ ಬೀರುವ ತೀವ್ರ ಪರಿಣಾಮಗಳನ್ನು ನಿಯಂತ್ರಿಸಬಹುದಾಗಿದೆ. ದೈಹಿಕವಾಗಿ ಫೈಬ್ರೋಮಯಾಲ್ಜಿಯಾಕ್ಕೆ ಸೂಕ್ತ ಚಿಕಿತ್ಸೆಯಿಲ್ಲ. ಆದರೆ ಕೆಲವು ವಿಧಾನಗಳನ್ನು ಅನುಸರಿಸಿ ನೋವಿನ ತೀವ್ರತೆಯನ್ನು ತಗ್ಗಿಸಬಹುದಾಗಿದೆ. ಹೀಗೆ ಚಿಕಿತ್ಸೆ ಪಡೆದ ನಂತರ ವೈದ್ಯರು ನಿಮಗೆ ಕೆಲವು ಸೂಚನೆಗಳನ್ನು, ನಿರ್ದಿಷ್ಟ ಜೀವನ ಶೈಲಿಯನ್ನು ಸೂಚಿಸಬಹುದು. ಅವನ್ನು ನೀವು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ವೈದ್ಯಕೀಯ ಚಿಕಿತ್ಸೆಯಲ್ಲಿ ನೋವು ನಿವಾರಕ ಮಾತ್ರೆಗಳು ಹಾಗೂ ಖಿನ್ನತೆ ಕಡಿಮೆ ಮಾಡುವ ಆ್ಯಂಟಿಡಿಪ್ರೆಸ್ಸೆಂಟ್’ಗಳನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯು ರೋಗಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಮತ್ತು ಇದರಿಂದ ವ್ಯಾಧಿಯನ್ನು ಸೂಕ್ತವಾಗಿ ನಿರ್ವಹಿಸಬಹುದಾಗಿದೆ. ಚಿಕಿತ್ಸೆಯ ಜೊತೆಗೇ ನೀವು ಅನುಸರಿಸಬೇಕಾದ ಅಂಶಗಳೂ ಇದ್ದು, ಅವು ಹೀಗಿವೆ:
* ಮನಃಶಾಸ್ತ್ರಜ್ಞರ ಸಲಹೆಯನ್ನು ಪಡೆಯಿರಿ ಮತ್ತು ಚಿಕಿತ್ಸಾ ವಿಧಾನಗಳನ್ನು ನಿರಂತರವಾಗಿ ಪಾಲಿಸಿ.
* ವೈದ್ಯರ ಸಲಹೆ - ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಇದರಿಂದ ಅಂಗಾಂಗಗಳ ನೋವನ್ನು ಕಡಿಮೆ ಮಾಡಬಹುದು. ಎಂದಾದರೂ ಒಂದು ದಿನ ವೈದ್ಯರು ತಿಳಿಸಿರುವ ಸೂಕ್ತ ವ್ಯಾಯಾಮವನ್ನು ಮಾಡಲು ಸಾಧ್ಯವಾಗದೆ ಹೋದಾಗ, ಮನೆಯಲ್ಲಿಯೇ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪ ಸಮಯ ನಡೆದಾಡುವುದು ಉತ್ತಮ.
* ಆರೋಗ್ಯಕರವಾದ, ಮಿತವಾದ ಆಹಾರವನ್ನು ಸೇವಿಸಿ.
* ಕುಟುಂಬದವರ ಮತ್ತು ಮಿತ್ರರ ಸಲಹೆ - ಸಹಕಾರಗಳನ್ನು ಪಡೆದುಕೊಳ್ಳಿ. ಇದರಿಂದ ನಿಮಗೆ ಮಾನಸಿಕವಾಗಿ ಹಲವು ಬಗೆಯ ಪ್ರಯೋಜನಗಳು ದೊರೆಯುತ್ತವೆ.
* ಮಾನಸಿಕ ಒತ್ತಡಕ್ಕೆ ಕಾರಣವಾಗಿರುವ ಅಂಶಗಳನ್ನು ಸೂಕ್ತವಾಗಿ ಪರಿಹರಿಸಿಕೊಳ್ಳಲು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳಲು ನಿಮ್ಮ ಚಿಕಿತ್ಸಕರ ಜೊತೆ ಮುಕ್ತವಾಗಿ ಚರ್ಚಿಸಿ, ನೆರವು ಪಡೆಯಿರಿ.
* ನಿದ್ರೆಗೆ ಕೊರತೆಯಾಗದಂತೆ, ಪೂರಕವಾದ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ಮಲಗುವ ಮುನ್ನ ಅವಶ್ಯವಿರುವ ಎಲ್ಲಾ ಕೆಲಸಗಳನ್ನೂ ಪೂರೈಸಿಯೇ ಮಲಗಿ. ಆಗ ನಿದ್ರೆಗೆ ತಡೆಯುಂಟಾಗುವುದಿಲ್ಲ.
ಈ ಲೇಖನವನ್ನು ಡಾ.ನತಾಶ ಖುಲ್ಲರ್ ಕುಮಾರ್, ಹಿರಿಯ ನರರೋಗ-ಮನಃಶಾಸ್ತ್ರಜ್ಞರು,ಮೇದಾಂತ,ದೆಹಲಿ ಇವರು ನೀಡಿದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.