ಸಂಸ್ಥೆಯು ಮಾನಸಿಕ ಅಸ್ವಸ್ಥ ಉದ್ಯೋಗಿಗಳಿಗೆ ಬೆಂಬಲ ನೀಡಲು ಸಾಧ್ಯ
ಕಾನೂನು ವಿಷಯಗಳು

ಸಂಸ್ಥೆಯು ಮಾನಸಿಕ ಅಸ್ವಸ್ಥ ಉದ್ಯೋಗಿಗಳಿಗೆ ಬೆಂಬಲ ನೀಡಲು ಸಾಧ್ಯ

ವೈಟ್ ಸ್ವಾನ್ ಫೌಂಡೇಶನ್

ಮಾನಸಿಕ ಕಾಯಿಲೆಯಿಂದ ಚೇತರಿಸಿಕೊಂಡ ವ್ಯಕ್ತಿ ಕೆಲಸಕ್ಕೆ ಹಿಂದಿರುಗಿದರೆ ಅವರ ಯೋಗಕ್ಷೇಮಕ್ಕೆ ಒಳ್ಳೆಯದು. ತಮ್ಮ ಕೆಲಸ ಮಾಡುತ್ತಾ ಇದ್ದರೆ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಪ್ರತಿನಿತ್ಯ ಕೆಲಸಕ್ಕೆ ಹೋಗಿ ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಅವರ ಆತ್ಮವಿಶ್ವಾಸ ಮತ್ತು ಆತ್ಮಗೌರವ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿಯ ಸಹೋದ್ಯೋಗಿಗಳಿಗೆ ಮಾನಸಿಕ ಅಸ್ವಸ್ಥತೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡುತ್ತದೆ ಮತ್ತು ಜೊತೆಗೂಡಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗುತ್ತದೆ.

ಹಲವಾರು ಸಂಸ್ಥೆಗಳಲ್ಲಿ ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಗೆ ಕೆಲಸ ಕೊಡುವುದಿಲ್ಲ. ಆದರೆ ಕೆಲವು ಸಂಸ್ಥೆಗಳು ಸಂದರ್ಭದ ಆಧಾರದ ಮೇಲೆ ಮಾನಸಿಕ ಅಸ್ವಸ್ಥ ಉದ್ಯೋಗಿಗಳಿಗೆ ಬೆಂಬಲ ನೀಡುತ್ತಾರೆ. ಸಂಸ್ಥೆಗಳಲ್ಲಿ ಮಾನಸಿಕ ಸಮಸ್ಯೆ ಕುರಿತ ಯಾವುದೇ ಕಾರ್ಯನೀತಿ ಇಲ್ಲ. ಇದು, ಮಾನಸಿಕ ಅಸ್ವಸ್ಥ ವ್ಯಕ್ತಿ ಮತ್ತು ಸಂಸ್ಥೆಯ ಆಡಳಿತ ವರ್ಗ, ಇಬ್ಬರಿಗೂ ಸವಾಲಿನ ಅಂಶ. ಒಂದೆಡೆ, ಸಮಸ್ಯೆಯಲ್ಲಿರುವ ವ್ಯಕ್ತಿಗೆ ತನ್ನ ಉದ್ಯೋಗ ಸುರಕ್ಷತೆಯ ಬಗ್ಗೆ ಚಿಂತೆ ಮತ್ತೊಂದೆಡೆ, ಆಡಳಿತ ವರ್ಗ ಸೂಕ್ತ ಕಾರ್ಯನೀತಿ ಇಲ್ಲದಿರುವ ಕಾರಣದಿಂದ, ಉದ್ಯೋಗಿಗೆ ನೆರವು ನೀಡುವುದಿಲ್ಲ.

ಮಾನಸಿಕ ಅಸ್ವಸ್ಥತೆಯುಳ್ಳ ವ್ಯಕ್ತಿಗೆ, ತನ್ನ ಕೆಲಸಕ್ಕೆ ಹಿಂದಿರುಗಲು ಕೆಲವು  ಕಾರಣಗಳಿಂದ ಆತಂಕ ಉಂಟಾಗಬಹುದು :

 • ನಾನು ಕಳಂಕಕ್ಕೆ ಒಳಗಾಗುತ್ತೇನಾ?

 • ಕೆಲಸ ಕಳೆದುಕೊಳ್ಳುತ್ತೇನಾ? ಅಥವಾ ಪ್ರಮೋಷನ್ ಸಿಗುವುದಿಲ್ಲವೇ?

 • ನನ್ನ ಸಹೋದ್ಯೋಗಿಗಳು ನನ್ನನ್ನು ಮತ್ತು ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವರೇ?

 • ಕೆಲಸದ ಒತ್ತಡವನ್ನು ನಿಭಾಯಿಸಲು ನನ್ನಿಂದ ಸಾಧ್ಯವೇ ?

 • ಉದ್ಯೋಗದ ಸ್ಥಳದಲ್ಲಿ ಒತ್ತಡ ನಿಭಾಯಿಸಲು ಸಾಧ್ಯವೇ ?

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಮಾನಸಿಕ ಅಸ್ವಸ್ಥತೆಯಿರುವ ಜನರಿಗೆ ಹೆಚ್ಚು ಅವಕಾಶ ನೀಡಲು ಉದ್ಯೋಗ ಸಂಸ್ಥೆಗಳು ಏನು ಮಾಡಬಹುದು ?    

ನಾವು  ಸೂಪರ್ ವೈಸರ್, ಹೆಚ್ ಆರ್ ಮ್ಯಾನೇಜರ್ ಮತ್ತು ಮಾನಸಿಕ ಆರೋಗ್ಯ ತಜ್ಞರು, ಇವರೊಂದಿಗೆ ಮಾತನಾಡಿದೆವು.  ಉದ್ಯೋಗ ಸಂಸ್ಥೆಗಳಲ್ಲಿ  ಮಾನಸಿಕ ಅಸ್ವಸ್ಥರಿಗೆ ಬೆಂಬಲಪೂರಕ ವಾತಾವರಣ ನಿರ್ಮಿಸಲು ಏನು ಮಾಡಬಹುದು ಎಂಬುದಕ್ಕೆ ಅವರ ಸಲಹೆಗಳು ಹೀಗಿವೆ :

 • ಹಲವಾರು ಸಂಸ್ಥೆಗಳಲ್ಲಿ ಎಂಪ್ಲಾಯೀ ಅಸಿಸ್ಟೆಂಟ್ ಪ್ರೋಗ್ರಾಮ್ ಗಳನ್ನು ಅಳವಡಿಸಲಾಗಿದೆ. (EAPs). ಮಾನಸಿಕ ಆರೋಗ್ಯ ವನ್ನು ಈ ಯೋಜನೆಯಲ್ಲಿ ಸೇರಿಸಿ ಉದ್ಯೋಗಿಗಳಿಗೆ ಅರಿವು ಮೂಡಿಸಿದರೆ ಕಳಂಕವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಪ್ರಾರಂಭಿಸಲು ಸಹಾಯವಾಗುತ್ತದೆ.

 • ಅಗತ್ಯವಿದ್ದಾಗ , ದೂರವಾಣಿಯ ಮೂಲಕ ಮಾನಸಿಕ ತಜ್ಞರ ಸಹಾಯ ಪಡೆಯಲು ವ್ಯವಸ್ಥೆ ಮಾಡಬೇಕು.

 • ತುರ್ತು ಪರಿಸ್ಥಿತಿಯಲ್ಲಿ ಮಾನಸಿಕ ಸಮಸ್ಯೆಗೆ ಸಹಾಯ ಪಡೆಯಲು ಅಗತ್ಯ ಮಾಹಿತಿ ಮತ್ತು ದೂರವಾಣಿ ಸಂಖ್ಯೆಯನ್ನು ಪೋಸ್ಟರ್ ಅಥವಾ ಸೂಚನಾ ಪತ್ರಗಳಲ್ಲಿ ಪ್ರಕಟಿಸಿ ಅಂಟಿಸಬೇಕು. ಉದ್ಯೋಗಿಗಳ ಗೌಪ್ಯತೆ ಕಾಪಾಡಲು ಭರವಸೆ ನೀಡಬೇಕು.

 • ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ (ಹಿರಿಯ ಅಧಿಕಾರಿ, ಕಾರ್ಯನೀತಿ ನಿರ್ಮಿಸುವ ಅಧಿಕಾರಿಗಳನ್ನೂ ಸೇರಿ) ಮಾನಸಿಕ ಆರೋಗ್ಯ ಮತ್ತು ಅದರ ಸೂಕ್ಷ್ಮತೆಗಳ ಕುರಿತು ಅರಿವು ಮೂಡಿಸಬೇಕು. ಇದರಿಂದ ಉದ್ಯೋಗಿಗಳ ನಡುವೆ ಯಾವುದೇ ತಾರತಮ್ಯ ಅಥವಾ ಕಿರುಕುಳ ಇರುವುದಿಲ್ಲ ಎಂಬ ವಿಶ್ವಾಸ ನೀಡಬೇಕು.

 • ಮಾನಸಿಕ ಸಮಸ್ಯೆ ಇರುವ ಉದ್ಯೋಗಿಯೊಂದಿಗೆ ವ್ಯವಹರಿಸುವಾಗ ಸೂಕ್ಷ್ಮವಾಗಿ ವರ್ತಿಸಿ. ನೀವು ನೀಡುವ ಕೆಲಸದಿಂದ ವ್ಯಕ್ತಿಯ ಒತ್ತಡ ಮತ್ತಷ್ಟು ಹೆಚ್ಚಾಗದಿರಲಿ. ಒಂದು ವೇಳೆ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಮ್ಯಾನೇಜರ್ ಗೆ ಏನಾದರೂ ಸಲಹೆ ಬೇಕಾದರೆ, ಅವರು ತಜ್ಞರ ಸಹಾಯ ಪಡೆಯಲು ಅವಕಾಶ ಮಾಡಿಕೊಡಿ.

ಬೆಂಗಳೂರಿನ ಆಪ್ತ ಸಮಾಲೋಚಕರಾದ ಮೌಲಿಕ ಶರ್ಮರವರ ಅಭಿಪ್ರಾಯದಂತೆ , ಸಂಸ್ಥೆಯ ಕಾರ್ಯನೀತಿಯಲ್ಲಿ ಉದ್ಯೋಗಿಯ ಮಾನಸಿಕ ಯೋಗಕ್ಷೇಮ ಕುರಿತು ಪ್ರಾಮುಖ್ಯತೆ ನೀಡಿದಾಗ, ಮೇಲೆ ಸೂಚಿಸಿದ ಅಂಶಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. “ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳಿಗೆ ಮಾನಸಿಕ ಅಸ್ವಸ್ಥತೆ ಮತ್ತು ಅದರ ಲಕ್ಷಣ ಕುರಿತು ತರಬೇತಿ ನೀಡುವುದು, ವ್ಯಕ್ತಿಯೊಂದಿಗೆ ಸಹಜವಾಗಿ ವರ್ತಿಸುವುದು ಹೇಗೆ ? ಮತ್ತು ಕೆಲಸದ ಕ್ರಮದಿಂದಾಚೆ ಆಲೋಚಿಸುವುದು, ಇತ್ಯಾದಿ ವಿಷಯಗಳ ಕಡೆ ಗಮನ ನೀಡಿದಾಗ ಮಾನಸಿಕ ಆರೋಗ್ಯ ಬಗ್ಗೆ ಹೆಚ್ಚಿನ ಅರಿವು ಉಂಟಾಗುತ್ತದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org