ಮನೋವೈಕಲ್ಯ ಹೊಂದಿರುವ ವ್ಯಕ್ತಿಗಳ ಸ್ವ-ಉದ್ಯೋಗಕ್ಕೆ ಹಣಕಾಸಿನ ನೆರವು
ತೀವ್ರತರ ಮಾನಸಿಕ ವಿಕಲತೆ ಹೊಂದಿರುವಂತಹ ಬಹಳಷ್ಟು ಜನರಿಗೆ ದೀರ್ಘಾವಧಿ ಚಿಕಿತ್ಸೆಗಳ ಅಗತ್ಯವಿರುತ್ತದೆ ಮತ್ತು ಇಂತಹ ದೀರ್ಘಾವಧಿಯ ಅಸ್ವಸ್ಥತೆಯು ಅವರ ಜೀವಿತಾವಧಿಯ ಬಹಳಷ್ಟು ಅಮೂಲ್ಯ ಸಮಯವನ್ನು ವ್ಯಯಿಸುವಂತೆ ಮಾಡುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ, ಅದರ ಜೊತೆಗೇ ಅವರ ಬದುಕಿಗೆ ಕಾಯಕಲ್ಪ ನೀಡುವ ಮತ್ತು ಜೀವನ ಸಾಗಿಸಲು ಅಗತ್ಯವಿರುವ ವೃತ್ತಿಪರ ತರಬೇತಿಯ ಅಗತ್ಯವೂ ಇದೆ. ಇದರಿಂದ ಅವರ ದುಡಿಮೆಗೆ ನೆರವಾಗುವಂಥ ಕೌಶಲ್ಯಗಳು ವೃದ್ಧಿಯಾಗುತ್ತವೆ. ಅವರ ಆಸಕ್ತಿ ಮತ್ತು ಕೌಶಲ್ಯದ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ ತರಬೇತಿ ಅಥವಾ ಸ್ವ-ಉದ್ಯೋಗ ನಡೆಸಲು ಅಗತ್ಯವಿರುವ ತರಬೇತಿಯನ್ನೂ ನೀಡಲಾಗುತ್ತದೆ.
ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಬಗೆಯ ವೈಕಲ್ಯ ಹೊಂದಿರುವವರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಮೂಲಕ ಅವರು ಸ್ವಂತ ಉದ್ಯೋಗ ಪ್ರಾರಂಭಿಸಲು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲದ ನೆರವು ನೀಡಲಾಗುತ್ತದೆ.
** ಈ ಯೋಜನೆಗಳು ಮನೋವೈಕಲ್ಯ ಅಥವಾ ಮಾನಸಿಕ ಅಸ್ವಸ್ಥತೆ ಹೊಂದಿರುವಂತಹ ವ್ಯಕ್ತಿಗಳಿಗೆ ಅನ್ವಯಿಸುತ್ತವೆ.
ಆಧಾರ ಯೋಜನೆ
ಈ ಯೋಜನೆಯನ್ನು ‘ವಿಶಿಷ್ಟ ಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ (Department of Empowerment of Differently Abled and Senior Citizens, Government of Karnataka)ವು ರೂಪಿಸಿದೆ. ಈ ಯೋಜನೆಯ ರೂಪುರೇಷೆಗಳ ಪ್ರಕಾರ; ಅಂಧರು, ಕಿವುಡರು, ಮಾನಸಿಕ ಅಸ್ವಸ್ಥರು, ಅಂಗವಿಕಲರು ಮತ್ತು ಕುಷ್ಟರೋಗಿಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
- ಸಹಾಯಧನದ ಮೊತ್ತ : ಅರ್ಹ ಫಲಾನುಭವಿಗಳು ತಲಾ 2-5 ಲಕ್ಷದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
- ಅರ್ಹತೆ : ಸಾಲಕ್ಕೆ ಅರ್ಜಿ ಸಲ್ಲಿಸುವವರು ವಾರ್ಷಿಕ ವರಮಾನದ ಪ್ರಮಾಣ ಪತ್ರ, ಅಂಗವೈಕಲ್ಯತೆಯ ಪ್ರಮಾಣ ಪತ್ರ ಮತ್ತು ಇತರ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಯೋಜನೆಯ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ.
ಉದ್ಯೋಗಿನಿ ಯೋಜನೆ
ಇದು ದೈಹಿಕ ಹಾಗು ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವಂತಹ ಮಹಿಳೆಯರಿಗಾಗಿ, ಕರ್ನಾಟಕ ರಾಜ್ಯಸರ್ಕಾರವು ರೂಪಿಸಿರುವ ಯೋಜನೆಯಾಗಿದೆ.
- ಅರ್ಹತೆ : ಯಾವುದೇ ರೀತಿಯ ಅಂಗವಿಕಲ ಮಹಿಳೆಯರು ಅರ್ಜಿ ಸಲ್ಲಿಸಬಹುದು.
- ಸಹಾಯ ಧನದ ಮೊತ್ತ : ಅರ್ಹ ಫಲಾನುಭವಿಗಳು ಯಾವುದೇ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾಂತೀಯ ಗ್ರಾಮೀಣ ಬ್ಯಾಂಕುಗಳಿಂದ ತಲಾ ರೂ. 1 ಲಕ್ಷದವರೆಗೆ ಸಾಲ ತೆಗೆದುಕೊಳ್ಳಬಹುದು. ಈ ಸಾಲವನ್ನು ಪಡೆದುಕೊಳ್ಳುವ ಮಹಿಳಾ ಅಂಗವಿಕಲರಿಗೆ ಯಾವುದೇ ವರಮಾನದ ಮಿತಿ ಇರುವುದಿಲ್ಲ. ಅಷ್ಟೇ ಅಲ್ಲ, “ದ ಸ್ಟೇಟ್ ವುಮೆನ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್” ನಿಂದ ಮಂಜೂರಾದ ಸಾಲದ ಮೊತ್ತಕ್ಕೆ ಶೇಕಡಾ 30ರಷ್ಟು ಸಬ್ಸಿಡಿ ಕೂಡಾ ದೊರೆಯುತ್ತದೆ. ಫಲಾನುಭವಿಗಳು ಬೇಕರಿ, ರೇಷ್ಮೆ ನೇಯ್ಗೆಯ ಉದ್ಯಮ, ಪಾದರಕ್ಷೆಗಳ ತಯಾರಿಕಾ ಘಟಕ ಮುಂತಾದ ತಮಗೆ ಲಾಭದಾಯಕವೆನಿಸುವ ಯಾವುದೇ ಉದ್ಯಮವನ್ನು ನಡೆಸಬಹುದು.
- ಸಂಪರ್ಕಿಸಬೇಕಾದ ವಿಳಾಸ : ಡೈರಕ್ಟರೇಟ್ ಆಫ್ ವುಮೆನ್ ಅ್ಯಂಡ್ ಚೈಲ್ಡ್ ಡೆವಲಪ್ಮೆಂಟ್.
ಹೆಚ್ಚಿನವಿವರಗಳನ್ನು ಇಲ್ಲಿ ಪಡೆಯಿರಿ.