ಕಾನೂನು ವಿಷಯಗಳು

ರೋಗಿಗಳಿಗೆ

ವೈಟ್ ಸ್ವಾನ್ ಫೌಂಡೇಶನ್

Q

ಯಾವಯಾವ ಪರಿಸ್ಥಿತಿಗಳಲ್ಲಿ ನಾನು ಮಾನಸಿಕ ಆರೋಗ್ಯ ಕೇಂದ್ರ ಅಥವಾ ನರ್ಸಿಂಗ್ ಹೋಂಗೆ ದಾಖಲಾಗಬಹುದು?

A

ನೀವು ಸ್ವಯಂ ಪ್ರೇರಣೆಯಿಂದ ಆಸ್ಪತ್ರೆಯೊಂದಕ್ಕೆ  ದಾಖಲಾಗಬಹುದು. ಅಥವಾ ಒಂದೊಮ್ಮೆ ನೀವು ಅಪ್ರಾಪ್ತವಯಸ್ಕರಾಗಿದ್ದು ನಿಮ್ಮ ಪೋಷಕರು ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬಂದಾಗ, ನಿಮ್ಮನ್ನು  ಒಳರೋಗಿಯಾಗಿ  ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವುದು ಅವಶ್ಯಕತೆಯಿದೆ ಎಂದು ವೈದ್ಯರು ಭಾವಿಸಿದರೆ, ನಿಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬಹುದು. (ಮಾನಸಿಕ ಆರೋಗ್ಯ ಕಾಯ್ದೆ 1987 ರ 15, 16 ಮತ್ತು 17 ನೇ ವಿಧಿಗಳ ಅನ್ವಯ)

Q

ನನ್ನ ಇಚ್ಛೆಗೆ ವಿರುದ್ಧವಾಗಿ ನಾನು ಆಸ್ಪತ್ರೆಗೆ ದಾಖಲಾಗಬಹುದೆ?

A

ಕೆಲವು ಸಂದರ್ಭಗಳಲ್ಲಿ ನಿಮ್ಮ ಸಂಬಂಧಿಗಳು ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಆಸ್ಪತ್ರೆಗೆ ಸೇರಿಸಬಹುದು. ನೀವು ಸ್ವಯಂ ನಿಮಗೆ ಮತ್ತು ಇತರರಿಗೆ ಅಪಾಯವನ್ನುಂಟುಮಾಡಬಹುದು ಎಂದು ನಿಮ್ಮ ಮನೋವೈದ್ಯರು ಅಥವಾ ಸಂಬಂಧಿಗಳು ಭಾವಿಸಿದರೆ, ಮತ್ತು ನಿಮಗೆ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ದೀರ್ಘಾವಧಿ ಚಿಕಿತ್ಸೆ ಅಗತ್ಯವಿದ್ದರೆ, ಆಗ ಅವರು ನ್ಯಾಯಾಧೀಶರ ಬಳಿ ಸ್ವೀಕಾರ ಆಜ್ಞೆಗಾಗಿ (ದಾಖಲಾತಿಗೆ ಆದೇಶ) ಅರ್ಜಿ ಸಲ್ಲಿಸಬಹುದು.  ನಿಮಗೆ ಚಿಕಿತ್ಸೆ ಅಗತ್ಯವಿದೆ ಎಂದು ನ್ಯಾಯಾಧೀಶರಿಗೆ ಮನವರಿಕೆಯಾದಲ್ಲಿ ಆಗ ನಿಮ್ಮನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಬಹುದು. (ಮಾನಸಿಕ ಆರೋಗ್ಯ ಕಾಯ್ದೆ ೧೯೮೭ರ ವಿಧಿ ೧೯ರ ಅನ್ವಯ)

Q

ಅನಗತ್ಯವಾಗಿ ಆಸ್ಪತ್ರೆಯಲ್ಲಿ ನನ್ನನ್ನು ಬಂಧಿಸಲಾಗಿದೆ ಎಂದು ನನಗೆ ಅನ್ನಿಸತೊಡಗಿದರೆ ಏನು ಮಾಡಬಹುದು?

A

ಅನಗತ್ಯವಾಗಿ ನಿಮ್ಮನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗಿದೆ  ಎಂದು ನೀವು ಭಾವಿಸಿದರೆ,ಬಿಡುಗಡೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಈ ಕುರಿತು ನೀವು ನ್ಯಾಯವಾದಿಗಳ ಸಲಹೆಯನ್ನು  ಸಹ  ಪಡೆಯಬಹುದು. ಪ್ರತಿ ಜಿಲ್ಲಾ ನ್ಯಾಯಾಲಯದಲ್ಲಿ ನಿಮಗೆ ಉಚಿತವಾದ ಕಾನೂನು ನೆರವು ಲಭ್ಯವಿದೆ. (ಮಾನಸಿಕ ಆರೋಗ್ಯ ಕಾಯ್ದೆಯ 91ನೇ ವಿಧಿಯ ಅನ್ವಯ)  ಸಹಾಯಕ್ಕಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾನವ ಹಕ್ಕುಗಳ ಆಯೋಗಕ್ಕೂ ನೀವು ಮೊರೆ ಹೋಗಬಹುದು.

 

Q

ನಾನು ಚೇತರಿಸಿಕೊಂಡಿದ್ದೇನೆ ಎಂದು ಭಾವಿಸಿದರೆ ಆಸ್ಪತ್ರೆಯಿಂದ ಬಿಡುಗಡೆ ಕೋರಿ ಅರ್ಜಿ ಹಾಕಬಹುದೆ?

A

ಒಂದೊಮ್ಮೆ ಸ್ವಯಂಪ್ರೇರಣೆಯಿಂದ  ನೀವು ಆಸ್ಪತ್ರೆಗೆ ದಾಖಲಾಗಿದ್ದರೆ, ಹೆಚ್ಚು ಸಮಯ ಆಸ್ಪತ್ರೆಯಲ್ಲಿರುವುದು ಅಗತ್ಯವಿಲ್ಲ ಎಂದು ನಿಮಗೆ ಅನ್ನಿಸಿದಾಗ ಆಸ್ಪತ್ರೆಯಿಂದ ಬಿಡುಗಡೆ ಕೋರಿ ಮನವಿ ಸಲ್ಲಿಸಬಹುದು. ನೀವು ಚೇತರಿಸಿಕೊಂಡಿದ್ದೀರಿ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದರೆ, ಆಗ ಮುಂದಿನ 24 ಗಂಟೆಯೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು (ಮಾನಸಿಕ ಆರೋಗ್ಯ ಕಾಯ್ದೆಯ 18ನೇ ವಿಧಿ ಅನ್ವಯ)

Q

ಆಸ್ಪತ್ರೆಯಿಂದ ಬಿಡುಗಡೆ ಕೋರಿ ನೀವು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಬಹುದೇ?

A

ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿಮ್ಮ ತೀರ್ಮಾನದಿಂದ ನಿಮಗೆ ಒಳಿತಾಗುವುದಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟರೆ ಸಂಬಂಧಿಸಿದವರು ನಿಮ್ಮ ಮನವಿಯನ್ನು ತಿರಸ್ಕರಿಸಬಹುದು. ಈ ಕೆಳಗೆ ವಿವರಿಸಿಲಾಗಿರುವ ಪ್ರಕ್ರಿಯೆಯನ್ನು ಅವರು ಪಾಲಿಸಿದಲ್ಲಿ ಮಾತ್ರ ಅದು ಸಾಧ್ಯವಾಗುತ್ತದೆ.

Q

ಆಸ್ಪತ್ರೆಯಿಂದ ಬಿಡುಗಡೆ ಕೋರಿ ಸಲ್ಲಿಸಿದ ನನ್ನ ಮನವಿ ಯಾವಯಾವ ಸಂದರ್ಭಗಳಲ್ಲಿ ತಿರಸ್ಕೃತವಾಗಬಹುದು?

A

ನೀವು ಗುಣಮುಖರಾಗಿಲ್ಲ ಎಂದು ವೈದ್ಯರು ಭಾವಿಸಿದರೆ ಆಗ ಅವರು ನಿಮ್ಮ ಬಿಡುಗಡೆ ಮನವಿಪತ್ರ ಪಡೆದ 72 ಗಂಟೆಯೊಳಗೆ  ಇಬ್ಬರು ವೈದ್ಯಾಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಬೇಕು. ಈ ವೈದ್ಯಾಧಿಕಾರಿಗಳು ಪ್ರತ್ಯೇಕವಾಗಿ ನಿಮ್ಮನ್ನು ತಪಾಸಣೆಗೆ ಒಳಪಡಿಸುತ್ತಾರೆ . ಅವರು ಕೂಡ ನೀವು ಗುಣಮುಖರಾಗಿಲ್ಲ ಎಂದು ತೀರ್ಮಾನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುವುದು ಅಗತ್ಯವಿದೆ ಎಂಬ ಅಭಿಪ್ರಾಯ ಪಟ್ಟರೆ,  ಆಗ ವೈದ್ಯರು ನಿಮ್ಮ ಬಿಡುಗಡೆ ಮನವಿಯನ್ನು ತಿರಸ್ಕರಿಸಬಹುದು ಮತ್ತು 90 ದಿನಗಳವರೆಗೆ  ಚಿಕಿತ್ಸೆ ಮುಂದುವರಿಸಬಹುದು. ಒಮ್ಮೆ ಹೀಗಾದರೆ ನೀವು ಮನೋರೋಗ ಆಸ್ಪತ್ರೆಯಲ್ಲಿ ಅಥವಾ ನರ್ಸಿಂಗ್‌ ಹೋಂನಲ್ಲಿ ಸ್ವತಂತ್ರ ರೋಗಿಯಾಗಿ ಉಳಿಯುವುದಿಲ್ಲ (ಮಾನಸಿಕ ಆರೋಗ್ಯ ಕಾಯ್ದೆಯ ವಿಧಿ 18(3))

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org