ಅಂಗವಿಕಲತೆ ಪ್ರಮಾಣ ಪತ್ರ: ಏಕೆ ಮತ್ತು ಹೇಗೆ ಪಡೆಯಬೇಕು?

Q

ಅಂಗವಿಕಲತೆ ಪ್ರಮಾಣ ಪತ್ರ ಎಂದರೇನು?

A

1995ರಲ್ಲಿ ಭಾರತೀಯ ಸಂಸತ್ತು ಅಂಗವಿಕಲತೆ ಹೊಂದಿರುವ ವ್ಯಕ್ತಿಗಳ ಕಾಯ್ದೆ 1995ನ್ನು (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ತಿ ಭಾಗವಹಿಸುವಿಕೆ) ಅನುಮೋದಿಸಿತು. ಇದು ಕೆಲವು ಪ್ರಕಾರದ ಅಸಾಮರ್ಥ್ಯಗಳನ್ನು ಗುರುತಿಸಿ ಅಂತಹ ವ್ಯಕ್ತಿಗಳಿಗೆ ಕೆಲವು ವಿಶೇಷ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಒದಗಿಸಿತು. ಅವುಗಳೆಂದರೆ:

  • ವಿಶೇಷ ಸಾಮರ್ಥ್ಯ  ಹೊಂದಿರುವ ಮಕ್ಕಳಿಗೆ ಉಚಿತ ಶಿಕ್ಷಣ
  • ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ
  • ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ
  • ಭೂ ಹಂಚಿಕೆ ಯೋಜನೆಯಲ್ಲಿ ಆದ್ಯತೆ
  • ಸಾಮಾಜಿಕ ಭದ್ರತೆ ಯೋಜನೆಗಳು
  • ಯಾವುದೇ ಸಂದರ್ಭದಲ್ಲಿ ಈ ಸವಲತ್ತುಗಳ ನಿರಾಕರಣೆಯನ್ನು ಅಂಗವಿಕಲ ಕಲ್ಯಾಣ ಇಲಾಖೆ ಆಯುಕ್ತರ ಮುಖಾಂತರ ಪರಿಹರಿಸಿಕೊಳ್ಳುವ ಹಕ್ಕನ್ನು ಈ ವ್ಯಕ್ತಿಗಳಿಗೆ ನೀಡಲಾಗಿದೆ.

ಕಾನೂನಿನ ಅಡಿಯಲ್ಲಿ ಹೆಸರಿಸಲಾಗಿರುವ ವಿವಿಧ ಪ್ರಕಾರದ ಅಂಗವಿಕಲತೆಗಳಲ್ಲಿ ಮನೋಸಾಮಾಜಿಕ ಅಂಗವಿಕಲತೆಯನ್ನು ಮಾನಸಿಕ ಅಸ್ವಸ್ಥತೆ/ಖಾಯಿಲೆ ಎಂದು ಗುರುತಿಸಲಾಗಿದೆ. ಆದಾಗ್ಯೂ ಕಾನೂನು ಮತ್ತು ಎಲ್ಲ ಯೋಜನೆ ಸವಲತ್ತುಗಳು ಅನ್ವಯಿಸುವುದು ವ್ಯಕ್ತಿಯು ಯಾವುದೇ ಬಗೆಯ ಅಂಗವಿಕಲತೆಯನ್ನು ಶೇ.40ಕ್ಕಿಂತ ಹೆಚ್ಚು ಹೊಂದಿದ್ದರೆ ಮತ್ತು ಅದನ್ನು ದೃಢಪಡಿಸುವ ಪ್ರಮಾಣ ಪತ್ರ ಹೊಂದಿದ್ದರೆ ಮಾತ್ರ.

Q

ನಾನು ಅಂಗವಿಕಲತೆ ಪ್ರಮಾಣ ಪತ್ರ ಪಡೆಯಲು ಅರ್ಹನೆ?

A

ಮನೋಸಾಮಾಜಿಕ ವಿಶೇಷ ಸಾಮರ್ಥ್ಯತೆ ತೀರಾ ಸಂಕೀರ್ಣವಾದದ್ದು. ಆದ್ದರಿಂದ ಇದರ ಪ್ರಮಾಣ ಪತ್ರ ದೃಢೀಕರಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಅಸ್ಥಿರತೆಗಳಿವೆ. ದೈಹಿಕ ಊನದಿಂದ ಉಂಟಾದ ಅಂಗವಿಕಲತೆ ಪ್ರಮಾಣವನ್ನು ಲೆಕ್ಕ ಹಾಕುವುದು ಸುಲಭ. ಆದರೆ ಮನೋಸಾಮಾಜಿಕ ಅಂಗವಿಕಲತೆಯನ್ನು ಅಷ್ಟು ಸುಲಭವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಅದಕ್ಕೆ ಭಾರತೀಯ ಅಂಗವಿಕಲತೆ ಮೌಲ್ಯಮಾಪನ ಮತ್ತು ನಿರ್ಧಾರ ಮಾಪಕ (ಐಡಿಇಎಎಸ್‌)ದಲ್ಲಿ ಉಲ್ಲೇಖಿಸಲಾಗಿರುವ ಮಾರ್ಗಸೂಚಿಗಳನ್ನು ಪ್ರಸ್ತುತ ಬಳಸಲಾಗುತ್ತಿದೆ.

ಮನೊ ಸಾಮಾಜಿಕ ಅಂಗವಿಕಲತೆ ಪ್ರಮಾಣವನ್ನು ಇದೇ ಉದ್ದೇಶಕ್ಕಾಗಿ ರಚಿತವಾಗಿರುವ ಸಮಿತಿಯಿಂದ ದೃಢೀಕರಿಸಬೇಕು. ಎಲ್ಲ ಮಾನಸಿಕ ಆರೋಗ್ಯ ಸಂಸ್ಥೆಗಳು ಸಮಿತಿ ರಚನೆ ಕುರಿತು ಮಾಹಿತಿ ಹೊಂದಿರುತ್ತವೆ ಮತ್ತು ನೀವು ಅಂಗವಿಕಲತೆ ಪ್ರಮಾಣ ಪತ್ರ ನೀಡಲು ಈ ಸಮಿತಿ ಯಾವಾಗ ಲಭ್ಯವಿದೆ ಎಂದು ಕೇಳಿ ತಿಳಿದುಕೊಳ್ಳಬಹುದು ಅಥವಾ ನೀವು ರಾಜ್ಯ ಅಂಗವಿಕಲ ಕಲ್ಯಾಣ ಇಲಾಖೆ ಆಯುಕ್ತರ ಬಳಿ ಈ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಸಮಿತಿ ಸಾಮಾನ್ಯವಾಗಿ ಈ ಕೆಳಗಿನವರನ್ನು ಒಳಗೊಂಡಿರುತ್ತದೆ:

ಎ) ಸಂಸ್ಥೆಯ ಮುಖ್ಯಸ್ಥರು ಅಂದರೆ ಅಧ್ಯಕ್ಷರು ಅಥವಾ ಕುಲಪತಿ ಅಥವಾ ವೈದ್ಯಕೀಯ ಅಧೀಕ್ಷಕ ಅಥವಾ ಅವರ ಪರವಾಗಿ ನೇಮಕಗೊಂಡ ಅಧಿಕಾರಿ.

ಬಿ) ಓರ್ವ ಮನೋವೈದ್ಯರು

ಸಿ) ಓರ್ವ ವೈದ್ಯರು

ಸಮಿತಿಗೆ ನಿಮ್ಮ ವೈದ್ಯಕೀಯ ಇತಿಹಾಸದೊಂದಿಗೆ ವಿವರಗಳನ್ನು ನಿರ್ದಿಷ್ಟ ಅರ್ಜಿ ಪತ್ರ ತುಂಬಿ ಸಲ್ಲಿಸಬೇಕು. ನಿಮ್ಮಲ್ಲಿ ಕನಿಷ್ಟ ಶೇ.40ಕ್ಕಿಂತ ಕಡಿಮೆ ಅಂಗವಿಕಲತೆ ಇದ್ದರೆ ಅಂಗವಿಕಲತೆ ಪ್ರಮಾಣ ಪತ್ರವನ್ನು ನೀಡಲಾಗುವುದಿಲ್ಲ.

Q

ನನ್ನ ಅಂಗವಿಕಲತೆ ಪ್ರಮಾಣ ಪತ್ರವನ್ನು ಹೇಗೆ ಮೌಲ್ಯಮಾಪನ ಮಾಡುತ್ತಾರೆ?

A

ಮನೋಸಾಮಾಜಿಕ ಅಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಐಡಿಎಎಸ್‌ ಮಾಪಕದಲ್ಲಿ 4 ಭಾಗಗಳಿವೆ. ಅದರ ಆಧಾರದ ಮೇಲೆ ಓರ್ವ ವ್ಯಕ್ತಿಯ ಮನೋಸಾಮಾಜಿಕ ಅಸಾಮರ್ಥ್ಯವನ್ನು ಅಳೆಯಲಾಗುತ್ತದೆ.  ಮೌಲ್ಯಮಾಪನ ಕ್ರಮ ವಿವರವಾಗಿದ್ದು ಅದರಲ್ಲಿನ ಅಂಶಗಳ ಸಾರಾಂಶ ರೂಪದ ಮಾಹಿತಿ ಇಲ್ಲಿದೆ:

  1. ವ್ಯಕ್ತಿ  ತನ್ನ ಕುರಿತು ಯಾವರೀತಿ ಕಾಳಜಿ ಹೊಂದಿದ್ದಾನೆ?(ವೈಯಕ್ತಿಕ ಆರೈಕೆ): ವ್ಯಕ್ತಿ ಶುಚಿತ್ವಕ್ಕೆ ಗಮನ ಕೊಡುತ್ತಾನೆಯೋ ಹೇಗೆ?-ಸ್ನಾನ ಮಾಡುವನೊ, ಶೌಚ ಸ್ವಚ್ಛಗೊಳಿಸುವ ಅಭ್ಯಾಸ ಹೊಂದಿದ್ದಾನೆಯೆ? ಸರಿಯಾಗಿ ತನ್ನನ್ನು ಅಲಂಕರಿಸಿಕೊಳ್ಳುತ್ತಾನೆಯೆ? ಸರಿಯಾಗಿ ಬಟ್ಟೆ ಧರಿಸುತ್ತಾನೆಯೆ? ಸರಿಯಾಗಿ ಆಹಾರ ಸೇವಿಸಿ ತಮ್ಮ ಆರೋಗ್ಯವನ್ನು ಸ್ವನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾನೆಯೆ?
  2. ಸಂಬಂಧಗಳು ಮತ್ತು ಚಟುವಟಿಕೆಗಳನ್ನು ವ್ಯಕ್ತಿಯು ತನ್ನೊಂದಿಗೆ ಮತ್ತು ಇತರರೊಂದಿಗೆ (ಸಾಮಾಜಿಕ ಸಂಬಂಧಗಳು): ಹೇಗೆ ನಿರ್ವಹಿಸುತ್ತಾನೆ: ವ್ಯಕ್ತಿ ಸೂಕ್ತವಾದ ಮಾರ್ಗದಲ್ಲಿ ಸಾಮಾಜಿಕ ಸಂಬಂಧ ಮತ್ತು ಸಂವಹನ ಆರಂಭಿಸಲು ಮತ್ತು ಸೂಕ್ತ ರೀತಿಯಲ್ಲಿ ಅದನ್ನು ನಿಭಾಯಿಸಲು ಸಮರ್ಥನೇ?
  3. ವ್ಯಕ್ತಿಯು ಪರಿಣಾಮಕಾರಿಯಾಗಿ ಮಾತನಾಡಬಲ್ಲನೆ ಮತ್ತು ಇತರರು ಹೇಳಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಮರ್ಥನೆ? (ಸಂವಹನ ಮತ್ತು ಅರ್ಥೈಸಿಕೊಳ್ಳುವಿಕೆ): ವ್ಯಕ್ತಿ ಸಂದರ್ಭಕ್ಕೆ ತಕ್ಕಂತೆ ಮಾತನಾಡಲು ಮತ್ತು ಪ್ರತಿಕ್ರಿಯೆಗೆ ಸಮರ್ಥನೆ?
  4. ವ್ಯಕ್ತಿ ತನ್ನ ವೃತ್ತಿ ಜೀವನಕ್ಕೆ ಹೊಂದಿಕೊಳ್ಳಬಲ್ಲನೆ?: ವ್ಯಕ್ತಿ ಒಂದು ವೃತ್ತಿ ಅಥವಾ ಮನೆಕೆಲಸಗಳನ್ನು ಮಾಡಲು ಅಥವಾ ಶೈಕ್ಷಣಿಕ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಸಮರ್ಥನೆ?

ಈ ಪ್ರಕ್ರಿಯೆ ತುಸು ಗಂಭೀರವಾಗಿದ್ದು  ಮೌಲ್ಯಮಾಪನ ಸಂದರ್ಭದಲ್ಲಿ ನಿಮ್ಮ ವೈದ್ಯಕೀಯ ಇತಿಹಾಸವನ್ನು ಗಮನಿಸುವುದು ಅಗತ್ಯವಿರುತ್ತದೆ. ನಿಮ್ಮನ್ನು ಮೌಲ್ಯಮಾಪನ ಮಾಡುವದು ಒಂದು ಸುದೀರ್ಘವಾದ ಪ್ರಕ್ರಿಯೆಯಾಗಿದ್ದು ಹಲವು ಸಲ ನೀವು ಸಮಿತಿಯನ್ನು ಅಥವಾ ಮೌಲ್ಯಮಾಪನ ಮಂಡಳಿಯನ್ನು ಭೇಟಿ ಮಾಡಬೇಕಾಗಬಹುದು. ಇದನ್ನು ಗಮನದಲ್ಲಿಟ್ಟುಕೊಳ್ಳಿ.

Q

ನಾನು ಅಂಗವಿಕಲತೆ ಪ್ರಮಾಣ ಪತ್ರಪಡೆಯಬಹುದೆ?

A

ಅಂಗವಿಕಲತೆ ಪ್ರಮಾಣ ಪತ್ರ ಕಡ್ಡಾಯವಲ್ಲ. ನೀವು ಅಂಗವಿಕಲತೆ ಪ್ರಮಾಣಪತ್ರ ಹೊಂದಿದ್ದರೆ ನಿಮ್ಮ ರಾಜ್ಯದಲ್ಲಿ ಲಭ್ಯವಿರುವ ಯೋಜನೆಗಳ ಆಧಾರದ ಮೇಲೆ ಕೆಳಗಿನ  ಸವಲತ್ತುಗಳನ್ನು ಪಡೆಯಬಹುದು:

1) ಸಾರಿಗೆಯಲ್ಲಿ ರಿಯಾಯಿತಿ

2) ಪಿಡಿಎಸ್‌ (ರೇಷನ್‌) ಯೋಜನೆಯಲ್ಲಿ ಹೆಚ್ಚುವರಿ ಭತ್ಯೆ

3) ಭೂಮಿ/ಗೃಹ ಹಂಚಿಕೆ ಯೋಜನೆಗಳಲ್ಲಿ ಆದ್ಯತೆ

4) ಅಂಗವಿಕಲತೆ ಭತ್ಯೆ/ಪಿಂಚಣಿ

5) 1995ರ ಕಾಯ್ದೆ ಅಡಿಯಲ್ಲಿ ನೀಡಲಾಗಿರುವ ವಿಶೇಷ ಹಕ್ಕುಗಳ ಉಲ್ಲಂಘನೆ ವಿರುದ್ಧ ರಾಜ್ಯ/ಕೇಂದ್ರ ಅಂಗವಿಕಲ ಕಲ್ಯಾಣ ಇಲಾಖೆ ಆಯುಕ್ತರ ಬಳಿ ದೂರು ನೀಡುವ ಅವಕಾಶ.

ಇದು ನಿಮ್ಮ ಆದಾಯವನ್ನು ಆಧರಿಸುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಭಿನ್ನಚೇತನ ಪ್ರಮಾಣ ಪತ್ರಪಡೆದರೂ ನಿಮ್ಮ ಆದಾಯ ಒಂದು ಹಂತಕ್ಕಿಂತ ಹೆಚ್ಚಿದ್ದರೆ ನೀವು ಇವುಗಳಲ್ಲಿ ಕೆಲವು ಸವಲತ್ತು ಪಡೆಯಲು ಅನರ್ಹರಾಗಬಹುದು.

ವ್ಯಕ್ತಿಗೆ ಮನೋಸಾಮಾಜಿಕ ಖಾಯಿಲೆಯಿದ್ದರೆ ಪ್ರಸ್ತುತದಲ್ಲಿ, ಕಾಯ್ದೆಯ ಪ್ರಕಾರ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅರ್ಹತೆಯಿಲ್ಲ.

Q

ಯಾವುದೇ ಆಸ್ಪತ್ರೆಯಲ್ಲಿ ಖಾಯಿಲೆಗೆ ಬೇಕಿರುವ ಚಿಕಿತ್ಸೆ, ಔಷಧ ಪಡೆಯಲು ಅಂಗವಿಕಲತೆ ಪ್ರಮಾಣ ಪತ್ರ ಅನಿವಾರ್ಯವೆ?

A

ಮನೋಸಾಮಾಜಿಕ ವಿಶೇಷ ಸಾಮರ್ಥ್ಯ ಪ್ರಮಾಣ ಪತ್ರ ಹೊಂದಿರುವುದರಿಂದ ನಿಮ್ಮ ಸಾಂವಿಧಾನಿಕ ಹಕ್ಕುಗಳ ಬಳಕೆಗೆ ಯಾವುದೇ ಅಡೆತಡೆಗಳಿರುವುದಿಲ್ಲ.  ಇದು ನಿಮ್ಮನ್ನು ಮಾನಸಿಕ ಆರೋಗ್ಯ ಕಾಯ್ದೆಯಡಿಯಲ್ಲಿ ಒಳಗೊಳ್ಳುವಂತೆ ಮಾಡುವುದಿಲ್ಲ ಅಥವಾ ಇದರಿಂದ ನಿಮಗೆ ಹೆಚ್ಚಿನ ನಿಗಾ ಏನೂ ದೊರೆಯಲಾರದು. ಇದರಿಂದಾಗಿ ನೀವು ನಿಯಮಿತ ಪರೀಕ್ಷೆಗಳಿಗೆ ಒಳಪಡಬೇಕೆಂದೇನೂ ಇಲ್ಲ ಅಥವಾ ನಿಮ್ಮನ್ನು ‘ಮಾನಸಿಕ ಅಸ್ವಸ್ಥರು’ ಎಂದು ಘೋಷಿಸಿ ಯಾವುದೇ ವ್ಯತಿರಿಕ್ತ ಪರಿಣಾಮವನ್ನೂಉಂಟುಮಾಡುವುದಿಲ್ಲ. 

ನೀವು ಹಲವು ಅಸಾಮರ್ಥ್ಯಗಳನ್ನು ಹೊಂದಿದ್ದಲ್ಲಿ, ಉದಾಹರಣೆಗೆ ಮನೋಸಾಮಾಜಿಕ ಅಂಗವಿಕಲತೆ, ಶ್ರವಣ ದೋಷ, ದೃಷ್ಟಿ ದೋಷ, ದೈಹಿಕ ಅಂಗವಿಕಲತೆ ಇತ್ಯಾದಿಗಳನ್ನು ಹೊಂದಿದ್ದರೆ, ನಿಮ್ಮನ್ನು ಬಹು ಅಂಗವಿಕಲತೆ ಹೊಂದಿರುವ ವ್ಯಕ್ತಿ ಎಂದು ಗುರುತಿಸಬಹುದು. ಆಗ ನೀವು ನ್ಯಾಷನಲ್‌ ಟ್ರಸ್ಟ್‌ ಕಾಯ್ದೆ 1999ರ ಅಡಿಯಲ್ಲಿನ ಯೋಜನೆಗಳಿಗೆ ಅರ್ಹತೆ ಪಡೆಯುವಿರಿ.

Q

ಅಂಗವಿಕಲತೆ ಪ್ರಮಾಣ ಪತ್ರದ ಅಂಗೀಕಾರಾರ್ಹತೆ (ವ್ಯಾಲಿಡಿಟಿ) ಏನು?

A

ಅಂಗವಿಕಲತೆ ಪ್ರಮಾಣಪತ್ರವನ್ನು ರಾಜ್ಯಸರಕಾರಗಳು ನೀಡಿದಾಗ್ಯೂ ಸಮಿತಿ ನೀಡಿದ ಅಂಗವಿಕಲತೆ ಪ್ರಮಾಣ ಪತ್ರ ಭಾರತದಾದ್ಯಂತ ಸ್ವೀಕೃತವಾಗುತ್ತದೆ. ಉದಾಹರಣೆಗೆ ನೀವು ತಮಿಳುನಾಡಿನಲ್ಲಿ ರೈಲು ಪ್ರಯಾಣ ಮಾಡುತ್ತಿದ್ದರೆ, ಮತ್ತು ನಿಮ್ಮ ಪ್ರಮಾಣ ಪತ್ರ ದಿಲ್ಲಿಯಿಂದ ನೀಡಲ್ಪಟ್ಟಿದ್ದರೆ, ನೀವು ಅದೇ ಪ್ರಮಾಣ ಪತ್ರದ ಸಹಾಯದಿಂದ ವಿಶೇಷ ಸಾಮರ್ಥ್ಯವುಳ್ಳವರಿಗಾಗಿ  ಮೀಸಲಾಗಿರುವ ರೈಲ್ವೆ ರಿಯಾಯಿತಿಯನ್ನು ಅಥವಾ ಮೀಸಲು ಪ್ರಯಾಣ ಬೋಗಿಗಳನ್ನು ಪಡೆದುಕೊಳ್ಳಬಹುದು.

ನಿಮ್ಮ ಸ್ಥಿತಿ ಜೀವನ ಪರ್ಯಂತ ಹಾಗೇ ಇರುತ್ತದೆ ಎಂದು ಸಮಿತಿ ಭಾವಿಸಿದರೆ ಅಂಗವಿಕಲತೆ ಪ್ರಮಾಣ ಪತ್ರ ಶಾಶ್ವತವಾಗಿರುತ್ತದೆ. ಆದಾಗ್ಯೂ, ಮನೋಸಾಮಾಜಿಕ ವಿಶೇಷ ಸಾಮರ್ಥ್ಯ ಸ್ಥಿತಿ ಭವಿಷ್ಯದಲ್ಲಿ ಬದಲಾಗಬಹುದು ಎಂದು ಸಮಿತಿ ಭಾವಿಸುತ್ತದೆ. ಹೀಗಾಗಿ ಪ್ರಮಾಣ ಪತ್ರ ಮರು ನವೀಕರಣ ಮಾಡುವ ಮೊದಲು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

Q

ನಾನು ಅಂಗವಿಕಲತೆ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿ ಸಿಗದಿದ್ದರೆ ಏನು ಮಾಡುವುದು?

A

ನೀವು ಪ್ರಮಾಣ ಪತ್ರಕ್ಕೆ ಅರ್ಹರಲ್ಲ ಎಂದು ನಿಮ್ಮ ಅರ್ಜಿಯನ್ನು ಸಮಿತಿ ನಿರಾಕರಿಸಿದರೆ, ನಿಮ್ಮನ್ನು ತಪ್ಪಾಗಿ ಪರೀಕ್ಷಿಸಲಾಗಿದೆ ಎಂದು ನೀವು ಭಾವಿಸಿದರೆ, ಅಥವಾ ನಿಮ್ಮ ಅರ್ಜಿ ವಿಳಂಬವಾಗುತ್ತಿದೆ ಎನ್ನಿಸಿದರೆ ನೀವು ರಾಜ್ಯ ಅಂಗವಿಕಲ ಕಲ್ಯಾಣ ಇಲಾಖೆ ಆಯುಕ್ತರ ಬಳಿ ನಿಮ್ಮ ಅರ್ಜಿ ತಿರಸ್ಕೃತವಾಗಿರುವ ಅರ್ಜಿಯ ಝೆರಾಕ್ಸ್ ಪ್ರತಿಯೊಂದಿಗೆ ದೂರು ಸಲ್ಲಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org