ಹರೆಯ ಅಥವಾ ಹರೆಯದ ವಯಸ್ಸು

ಬ್ರೇಕ್ ಅಪ್ ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ನಾಂದಿಯಾಗಬಹುದು

ಡಾ. ಶ್ಯಾಮಲಾ ವತ್ಸ

ವಿವರಣೆಗೆ ನಿಲುಕದಷ್ಟು ಉತ್ಕಟವಾಗಿ ನೀವು ಯಾರನ್ನಾದರೂ ಇಷ್ಟಪಡುತ್ತಿರಬಹುದು. ಅವರ ಕುರಿತು ನಿಮಗೆ ಒಂದಿಷ್ಟು ಸುಂದರ ಕಲ್ಪನೆಗಳಿರಬಹುದು. ಆದರೆ ನೀವು ಅವರನ್ನು ಅಷ್ಟೊಂದು ಆಳವಾಗಿ ಕಾಳಜಿ ಮಾಡಲು, ಪ್ರೀತಿಸಲು ಕಾರಣವೇನೆಂದು ನಿಮಗೆ ತಿಳಿಯದೆ ಇರಬಹುದು. ನೀವು ಪರಸ್ಪರರ ಸಾಂಗತ್ಯವನ್ನು ಇಷ್ಟಪಡುತ್ತಿರಬಹುದು, ನಿಮಗೆ ಹಂಚಿಕೊಂಡು ನಗಲು ಹಲವು ವಿಷಯಗಳಿರಬಹುದು, ಸಂಗೀತ, ಸಿನಿಮಾ, ಪುಸ್ತಕಗಳು ಮತ್ತು ವ್ಯಕ್ತಿಗಳನ್ನು ಕುರಿತ ನಿಮ್ಮ ಅಭಿರುಚಿಯಲ್ಲಿ ಸಾಮ್ಯತೆಯಿರಬಹುದು. ನಿಮ್ಮ ಜಗತ್ತು ಸುಂದರವಾಗಿದ್ದು ನೀವು ಕೂಡಾ ಸಂತೋಷಗೊಂಡಿರಬಹುದು. ಈ ಅನುಭೂತಿ ಶಾಶ್ವತವಾಗಿರಲೆಂದು ನೀವು ಬಯಸಬಹುದು.

ಆದರೆ ಯಾವಾಗಲೂ ಸಂಗತಿಗಳು ನೀವು ಅಂದುಕೊಂಡಂತೆ ಘಟಿಸುವುದಿಲ್ಲ. ಇಂತಹ ಸಂಬಂಧಗಳಲ್ಲಿಯೂ ಬ್ರೇಕಪ್ ಆಗಬಹುದು. ಪ್ರತಿ ಸಂಬಂಧವೂ ವಿವಾಹದಲ್ಲಿ ಅಥವಾ ನೋಂದಣಿ ಆಫೀಸಿನಲ್ಲಿಯೇ ಕೊನೆಗೊಳ್ಳುವುದಿಲ್ಲ. ಅಲ್ಲದೇ ನೀವು ಕೂಡಾ ಮದುವೆಯ ಬಗ್ಗೆ ಗಂಭೀರವಾಗಿ ಆಲೋಚಿಸಿಲ್ಲದಿರಬಹುದು. ಆ ವ್ಯಕ್ತಿಯನ್ನು ನೀವು ಇಷ್ಟ ಪಡುತ್ತೀರಿ ಅವರ ಸಾಂಗತ್ಯವು ನಿಮಗೆ ಹಿಡಿಸುತ್ತದೆ ಎಂಬುದಷ್ಟೇ ನಿಮಗೆ ಗೊತ್ತು. “ನನ್ನನ್ನು ಸ್ವಲ್ಪ ನನ್ನ ಪಾಡಿಗೆ ಬಿಡು” ಎಂಬ ಮಾತು ನಿಮ್ಮ ಸಂಗಾತಿಯಿಂದ ಬಂದಾಗ ಅದು ಬ್ರೇಕ್‍ಅಪ್‍ನ ಮುನ್ಸೂಚನೆಯೂ ಆಗಿರಬಹುದು.

ಇದು ನಿಮ್ಮ ಮೊದಲನೆಯ ಬ್ರೇಕ್ ಅಪ್ ಆಗಿದ್ದಲ್ಲಿ ನೀವು ಅವರ ಮತ್ತು ಅವರೊಂದಿಗೆ ಕಳೆದ ಕ್ಷಣಗಳ ನೆನಪಿನಲ್ಲಿ ಉಳಿದೆಲ್ಲ ಸಂಗತಿಗಳನ್ನು ಕಡೆಗಣಿಸಬಹುದು. ಸ್ನೇಹಿತರು, ಮನೆಯವರು, ಗ್ರೇಡುಗಳು, ಆಹಾರ, ಜಿಮ್ ಎಲ್ಲವನ್ನೂ ಬಿಟ್ಟು ದುಃಖಿತರಾಗಬಹುದು. ಈ ದುಃಖವು ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಕ್ಕಿಂತ ಕಡಿಮೆಯಾಗಿರುವುದಿಲ್ಲ. ನಿಮ್ಮ ಸಂಬಂಧವು ಮುರಿದು ಬಿದ್ದಿದೆ ಮತ್ತು ನೀವು ಆಘಾತದಲ್ಲಿರುತ್ತೀರಿ.

ನಿಮಗೆ ಈ ಬ್ರೇಕ್ ಅಪ್ ಕುರಿತು ಮನ್ಸೂಚನೆ ಏಕೆ ದೊರೆಯಲಿಲ್ಲ? ಈ ಬಗ್ಗೆ ಅಲ್ಲಿ ಮೊದಲೇ ಕೆಲವು ಸುಳಿವುಗಳಿರಬಹುದು. ಇಂತಹ ಸಂಗತಿಗಳು ಅಚಾನಕ್ಕಾಗಿ ಘಟಿಸಲು ಸಾಧ್ಯವಿಲ್ಲ. ನೀವು 16 ಅಥವಾ 17 ವರ್ಷಗಳಿರುವಾಗ ಡೇಟಿಂಗ್ ಶುರುವಾಗಿದ್ದು, ಈಗ ನೀವು 20 ಅಥವಾ 21ಕ್ಕೆ ಕಾಲಿಟಿದ್ದರೆ, ನೀವೊಬ್ಬ ಬೇರೆಯದೇ ವ್ಯಕ್ತಿಯಾಗಿ ರೂಪುಗೊಂಡಿರಬಹುದು ಮತ್ತು ನೀವು ಮೊದಲನೆಯ ಬಾರಿ ಭೇಟಿಯಾದ ಸಮಯದಲ್ಲಿದ್ದಂತೆ ಈಗ ನಿಮ್ಮ ನಡುವಿನ ಸಾಮ್ಯತೆಗಳು ಕಡಿಮೆಯಾಗಿರಬಹುದು ಅಥವಾ ನಿಮ್ಮಲ್ಲಿ ಯಾರಾದರೂ ಒಬ್ಬರು ಉಳಿದವರಿಗಿಂತ ಹೆಚ್ಚು ಹೊಂದಿಕೊಂಡಿರಬಹುದು ಮತ್ತು ಅದರ ಕಲ್ಪನೆಯು ನಿಮಗೆ ಈಗ ಆಗುತ್ತಿರಬಹುದು.

ನಿಮ್ಮ ಗೆಳತಿಗೆ ಇನ್ಯಾರದೋ ಸಾಂಗತ್ಯವು ಹೆಚ್ಚು ಆಪ್ತವೆನಿಸುತ್ತಿರಬಹುದು. ಇದರರ್ಥ ನಿಮ್ಮಲ್ಲಿ ಕೊರತೆಯಿದೆ ಎಂದರ್ಥವಲ್ಲ. ಬದಲಿಗೆ ಆಕೆಯ ಆದ್ಯತೆಗಳು ಬದಲಾಗಿವೆ ಅಷ್ಟೇ. ಆದ್ದರಿಂದ ಆಕೆ ತನ್ನ ಗೊಂದಲದ ಕುರಿತು ಮತ್ತು ತನಗೆ ಎಲ್ಲವನ್ನು ಸರಿಪಡಿಸಲು ಸಮಯಬೇಕೆಂದು ಕೇಳಿದರೆ ಅದರಲ್ಲಿ ತಪ್ಪೇನೂ ಇಲ್ಲ. ಆದ್ದರಿಂದ ನೀವಿಬ್ಬರೂ ಕುಳಿತು ಉಚಿತ ಮಾತುಕತೆಯ ಮೂಲಕ ನಿಮ್ಮ ಸಂಬಂಧವನ್ನು ಉತ್ತಮಪಡಿಸಿಕೊಳ್ಳಬಹುದು ಅಥವಾ ಬೇರೆಯಾಗಲು ತೀರ್ಮಾನಿಸಬಹುದು. ನೀವು ಬೇರೆಯಾಗಲು ತೀರ್ಮಾನಿಸಿದರೆ ನೋವಾಗುವುದು ಸಹಜ.

ಆದರೆ ಪ್ರತಿ ಬಾರಿ ನೀವು ಬಯಸಿದ್ದನ್ನು ಪಡೆಯಲು ಬಯಸಿದಾಗ ನಿರಾಸೆಯಾಗುವ ಸಂಭವನೀಯತೆ ಇದ್ದೇ ಇರುತ್ತದೆ. ಕೆಲವು ಕಾಲದವರೆಗೆ ನೀವು ನಿಮ್ಮದೇ ಲೋಕದಲ್ಲಿ ಅಡಗಿ ಕುಳಿತುಕೊಳ್ಳಲು ಬಯಸಬಹುದು. ಆದರೆ ಕೆಲವು ಸಮಯದ ನಂತರ ನೀವು ಸುಧಾರಿಸಿಕೊಂಡು ಜೀವನದಲ್ಲಿ ಮುಂದೆ ಸಾಗುವುದು ಅನಿವಾರ್ಯವಾಗುತ್ತದೆ.

ನಿಮ್ಮ ಸುತ್ತಮುತ್ತಲಿನ ಆಪ್ತವಲಯವನ್ನು ನೀವು ಗುರುತಿಸಿದರೆ ನೀವು ಅಂದುಕೊಂಡದ್ದಕ್ಕಿಂತ ಮುಂಚೆ ಮತ್ತು ಅಂದುಕೊಂಡದ್ದಕ್ಕಿಂತ ವೇಗದಲ್ಲಿ ನಿಮ್ಮ ಜಗತ್ತು ಸುಧಾರಿಸಿಕೊಳ್ಳುತ್ತದೆ. ನೀವು ಒಂದು ಶಾಶ್ವತ ಸಂಬಂಧದ ಬಗ್ಗೆ ಯೋಚಿಸುವ ಮುನ್ನ ಹೆಚ್ಚು ಹೆಚ್ಚು ಜನರನ್ನು ಮೊದಲು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಅವರೊಂದಿಗಿನ ಒಡನಾಟದಿಂದ ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆದ್ದರಿಂದ ನಿರ್ಣಾಯಕ ಘಟ್ಟದಲ್ಲಿ ಒಂದು ಸಂಬಂಧದ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಸುಲಭವಾಗುತ್ತದೆ ಹಾಗೂ ವಿವಾಹದಂತಹ ಜವಾಬ್ದಾರಿಯುತ ಸಂಬಂಧಕ್ಕೆ ಬದ್ಧವಾಗಿರುವುದು ಸಾಧ್ಯವಾಗುತ್ತದೆ.

ಒಂದು ವೇಳೆ ನಿಮ್ಮ ನಡುವೆ ಬ್ರೇಕ್‍ಅಪ್ ಆಗಿದ್ದು ಹಲವು ತಿಂಗಳ ಬಳಿಕವೂ ನೀವು ತೀವ್ರವಾದ ಖಿನ್ನತೆ ಮತ್ತು ದುಃಖದಿಂದ ಬಳಲುತ್ತಿದ್ದಲ್ಲಿ ಏನು ಮಾಡುವಿರಿ? ಅತಿ ದುಃಖದ ಅವಸ್ಥೆಯು ನಿಮ್ಮನ್ನು ನಿಧಾನವಾಗಿ ಕೊಲ್ಲಬಹುದು. ಬ್ರೇಕ್‍ಅಪ್ ನಿಮ್ಮ ಜೀವನದ ಉಳಿದೆಲ್ಲ ಅಂಶಗಳನ್ನು ಹಾಳು ಮಾಡುತ್ತಿದ್ದರೆ- ಉದಾಹರಣೆಗೆ ನಿಮ್ಮ ದೈಹಿಕ ಆರೋಗ್ಯ, ಅಭ್ಯಾಸ, ನಿಮ್ಮ ಸಾಮಾಜಿಕ ಜೀವನ- ಆಗ ನೀವು ಖಿನ್ನತೆಗೆ ಜಾರುವ ಸಾಧ್ಯತೆಯಿರುತ್ತದೆ.

ನಿಮ್ಮ ಆಪ್ತ ಸ್ನೇಹಿತರಿಗೂ ಕೂಡಾ ನಿಮ್ಮನ್ನು ಸಮಾಧಾನ ಪಡಿಸುವುದು ಸಾಧ್ಯವಾಗುವುದಿಲ್ಲ. ಬಹುಶಃ ಇಂತಹ ಸಂದರ್ಭದಲ್ಲಿ ನಿಮಗೆ ಮಾನಸಿಕ ತಜ್ಞರ ನೆರವಿನ ಅವಶ್ಯಕತೆಯುಂಟಾಗುತ್ತದೆ. ನಿಮ್ಮ ಖಿನ್ನತೆಯು ತೀವ್ರವಾಗಿದ್ದು, ಬಹಳ ಕಾಲದಿಂದ ನೀವು ಖಿನ್ನತೆಯಿಂದ ಬಳಲುತ್ತಿದ್ದಲ್ಲಿ ಔಷದೋಪಚಾರವು ಬೇಕಾಗಬಹುದು.

ನಮ್ಮ ದೇಶದಲ್ಲಿ ಪಾಲಕರು ತಮ್ಮ ಮಗ ಇಲ್ಲವೇ ಮಗಳು ಸಂಬಂಧಗಳಲ್ಲಿ ಬೀಳುವುದನ್ನು ಒಪ್ಪಿಕೊಳ್ಳುವುದಿಲ್ಲ. ಸರಿಯಾದ ಸಮಯ ಬಂದಾಗ ಮಕ್ಕಳಿಗೆ ಹಿರಿಯರು ನಿಶ್ಚಯಿಸಿದ ರೀತಿಯಲ್ಲಿ ವಿವಾಹ ಮಾಡುವುದು ಒಳ್ಳೆಯದು ಎಂದು ಅವರು ಭಾವಿಸಿರುತ್ತಾರೆ. ಹಲವು ಯುವಕ, ಯುವತಿಯರು ಇದನ್ನು ಒಪ್ಪುತ್ತಾರೆ ಏಕೆಂದರೆ ಅವರಿಗೆ ತಮ್ಮ ಸಮುದಾಯ ಮತ್ತು ಪಾಲಕರ ಆಯ್ಕೆಯ ಬಗ್ಗೆ ವಿಶ್ವಾಸವಿರುತ್ತದೆ.

ಕೆಲವರು ಜೀವನದಲ್ಲಿ ಏನನ್ನಾದರೂ ಸಾಧಿಸುವವರೆಗೂ ಅಂತಹ ಸಂಬಂಧಗಳಿಂದ ದೂರವಿರಲು ಬಯಸುತ್ತಾರೆ. ಅದು ಸರಿಕೂಡ. ನಿಮ್ಮ ಸ್ನೇಹಿತರಿಗೆ ಗೆಳೆಯ ಅಥವಾ ಗೆಳತಿಯಿದ್ದಾಳೆಂಬ ಒತ್ತಡದಿಂದ ನೀವು ಸಂಬಂಧಗಳಿಗೆ ಜಾರುವುದು ಸರಿಯೇ? ಅಂತಹ ಸಂಬಂಧಗಳಿಗೆ ಸತ್ವವಿರುವುದಿಲ್ಲ. ಅವು ಕೇವಲ ನೋವನ್ನು ನೀಡುತ್ತವೆ.

ಸಂಬಂಧಗಳು ಪೂರ್ವಯೋಜಿತವಾಗಿರುವುದಿಲ್ಲ. ಎರಡು ಜೀವಗಳು ಒಬ್ಬರೊಂದಿಗೆ ಒಬ್ಬರು ಮಾತನಾಡುತ್ತಾ, ಸಮಯ ಕಳೆಯಲು ಆರಂಭಿಸಿದಂತೆ ತಾವು ಸಂಗಾತಿಗಳಾಗುವ ಸಾಧ್ಯತೆಯ ಬಗ್ಗೆ ಯೋಚಿಸ ತೊಡಗುತ್ತಾರೆ. ಆದರೆ ದಿನಕಳೆದಂತೆ ಅವರ ನಡುವಿನ ಸಮನ್ವಯತೆ ಜಾಸ್ತಿಯಾಗಬಹುದು, ಕಡಿಮೆಯಾಗಬಹುದು ಅಥವಾ ಅನಿಶ್ಚಿತವಾಗಿ ಕೊನೆಯಾಗಬಹುದು.

ಸಂಬಂಧದಲ್ಲಿರುವ ಇಬ್ಬರೂ ತಾವು ಅಂದುಕೊಂಡಿರುವಂತೆ ಒಬ್ಬರನ್ನೊಬ್ಬರು ಎಷ್ಟೋ ವೇಳೆ ನಿಜವಾಗಿಯೂ ಅರ್ಥಮಾಡಿಕೊಂಡಿರುವುದಿಲ್ಲ. ಇದರಿಂದ ಅವರ ನಡುವೆ ಉಂಟಾಗುವ ಅವಾಸ್ತವಿಕ ನಿರೀಕ್ಷೆಗಳಿಂದ ಸಂಬಂಧವು ಹಾಳಾಗುತ್ತದೆ. ಏಕೆಂದರೆ ಮನುಷ್ಯರಿಗೆ ತಮ್ಮ ಸ್ವಭಾವದ ಬಗ್ಗೆಯೆ ಸರಿಯಾಗಿ ತಿಳಿದಿರುವುದಿಲ್ಲ. ಹೀಗಿರುವಾಗ ಇನ್ನೊಬ್ಬ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಹೇಗೆ ತಿಳಿದಿರಲು ಸಾಧ್ಯ!

ಆದ್ದರಿಂದ ಬ್ರೇಕಪ್ ಅನ್ನು ಹೀಗೆ ಮಾತ್ರ ಅರ್ಥೈಸಬಹುದು: ಆರಂಭದಲ್ಲಿ ಆಕರ್ಷಕವಾಗಿದ್ದ ಸಂಬಂಧ ದಿನಕಳೆದಂತೆ ನಿರೀಕ್ಷಿಸಿದ ರೀತಿಯಲ್ಲಿ ಬೆಳವಣಿಗೆ ಹೊಂದದೆ ಕೊನೆಯಾಗುವುದು. ಅದು ನಿಮ್ಮ ಜೀವನವೆಂಬ ಪುಸ್ತಕದಲ್ಲಿನ ಒಂದು ಅಧ್ಯಾಯ, ಒಂದು ಅನುಭವ ಮಾತ್ರ. ಅದು ನಿಮ್ಮ ಮೌಲ್ಯವನ್ನು ಅಳೆಯುವ ಮಾಪನವಲ್ಲವೆಂದು ನೆನಪಿಡಿ.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org