ಹದಿಹರೆಯದವರಲ್ಲಿ ರೂಪದ ಸಮಸ್ಯೆ

ನಮ್ಮನ್ನು ನಾವು ಹೇಗೆ ನೋಡುತ್ತೇವೆ ಮತ್ತು ನಮ್ಮ ದೇಹದ ಬಗ್ಗೆ ಹೇಗೆ ಯೋಚಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಮನಸ್ಥಿತಿ ನಿರ್ಧಾರವಾಗುತ್ತದೆ. ತಮ್ಮ ದೇಹದ ಆಕಾರ, ರೂಪದ ಬಗ್ಗೆ ತೃಪ್ತಿ ಇದ್ದವರಲ್ಲಿ ಆತ್ಮವಿಶ್ವಾಸವಿರುತ್ತದೆ. ಆದರೆ ಇದರ ಬಗ್ಗೆ ಬೇಸರವಿದ್ದರೆ, ತಮ್ಮ ಆಕಾರ ಬದಲಾಯಿಸಲು ಪ್ರಯತ್ನ ಪಡುತ್ತಾರೆ ಮತ್ತು ಇದರ ಬಗ್ಗೆ ಕೊರಗುತ್ತಾರೆ.

ಇದು ಸಮಸ್ಯೆಯಾಗುವುದು ಯಾವಾಗ ?

ಸಾಮಾನ್ಯವಾಗಿ ನಮ್ಮ ರೂಪದ ಬಗ್ಗೆ ನಮಗೆ ಸಂಪೂರ್ಣ ತೃಪ್ತಿ ಇರುವುದಿಲ್ಲ. ಬದಲಾಗಿ, ಒಂದಲ್ಲಾ ಒಂದು ಬದಲಾವಣೆ ಬಯಸುತ್ತೇವೆ. ಈ ಅತೃಪ್ತಿ ಕೆಲವರಲ್ಲಿ ಆತಂಕಕ್ಕೆ/ಚಿಂತೆಗೆ ದಾರಿ ಮಾಡಿಕೊಡುತ್ತದೆ; ತಮ್ಮಕೆಲಸ, ಓದು, ದಿನನಿತ್ಯದ ಚಟುವಟಿಕೆ, ಇತರ ಜವಾಬ್ದಾರಿಗಳ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ.ಇದನ್ನು ರೂಪದ ಸಮಸ್ಯೆ ಎಂದು ಹೇಳುತ್ತೇವೆ.

ಸಾಮಾನ್ಯವಾಗಿ ರೂಪದ ಸಮಸ್ಯೆ ಗಂಡು ಮತ್ತು ಹೆಣ್ಣು, ಇಬ್ಬರಲ್ಲೂ ಕಂಡುಬರುತ್ತದೆ. ಆದರೆ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತದೆ. ಉದಾಹರಣೆಗೆ ಹೆಣ್ಣುಮಕ್ಕಳು ತೆಳ್ಳಗೆ, ಬೆಳ್ಳಗೆ ಸದಾ ಯುವತಿಯಂತೆ ಕಾಣಬೇಕು ಎಂದುಕೊಂಡರೆ,  ಗಂಡುಮಕ್ಕಳು ದಷ್ಟಪುಷ್ಠವಾಗಿ ಮೈಕಟ್ಟು ತುಂಬಿಕೊಂಡ ಪೈಲ್ವಾನರಂತೆ ಕಾಣಬೇಕು ಎಂದು ಬಯಸುತ್ತಾರೆ.

ಹದಿಹರೆಯದವರ ರೂಪ

ಹದಿಹರೆಯಕ್ಕೆ ಬಂದ ಯುವಕ/ಯುವತಿಯರು ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಕುಟುಂಬದ ವಾತಾವರಣ, ಟೆಲಿವಿಷನ್, ಸಿನಿಮಾ, ಜಾಹೀರಾತುಗಳು, ಫ್ಯಾ‍ಷನ್ ಟ್ರೆಂಡ್ಗಳು ಇತ್ಯಾದಿ ಹಲವಾರು ಅಂಶಗಳು ಹದಿಹರೆಯದವರ ರೂಪ/ದೇಹದ ಮೇಲೆ ಪ್ರಭಾವ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದ ಪ್ರಭಾವ ಹೆಚ್ಚಾಗಿದೆ. ಫೇಸ್ಬುಕ್ ನಲ್ಲಿ ತಮ್ಮ ಚಿತ್ರಕ್ಕೆ ಸ್ನೇಹಿತರು ಹೆಚ್ಚು ಲೈಕ್ಸ್ ಮಾಡಲಿ ಎಂದು ಬಯಸುತ್ತಾರೆ.

ಹದಿಹರೆಯದವರು ತಮ್ಮ ರೂಪದ ಬಗ್ಗೆ ಮುಜುಗರ ಪಟ್ಟುಕೊಳ್ಳಲು/ ನಕಾರಾತ್ಮಕ ಭಾವ ಬೆಳಸಿಕೊಳ್ಳಲು ಹಲವಾರು ಕಾರಣಗಳಿವೆ:

 • ತಮ್ಮ ರೂಪ, ದೇಹಾಕೃತಿಯ ಬಗ್ಗೆ, ಕುಟುಂಬದವರು ಮತ್ತು ಸ್ನೇಹಿತರು ಟೀಕೆ ಮಾಡುತ್ತಾರೆ. ಉದಾಹರಣೆಗೆ ದಪ್ಪಗಿರುವವರನ್ನು ಡುಮ್ಮ, ಗಿಡ್ಡಗಿರುವವರನ್ನುಕುಳ್ಳಿ ಎಂದು ಅಪಹಾಸ್ಯ ಮಾಡುವುದು.
 • ಶಾಲೆ, ಕಾಲೇಜುಗಳಲ್ಲಿ ಅಪಹಾಸ್ಯಕ್ಕೆ ಒಳಗಾಗುವುದು.
 • ಸೋಷಿಯಲ್ ಮೀಡಿಯಾದಲ್ಲಿ  (ಫೇಸ್ಬುಕ್, ಇನ್ಸ್ಟಾಗ್ರಾಂ) ಇತರರ ರೂಪಕ್ಕೆ ಹೋಲಿಸಿ ಸ್ವತಃ ಕೀಳರಿಮೆ ಹೊಂದುವುದು.
 • ಸದಾ ಪರ್ಫೆಕ್ಟ್ ಆಗಿರಬೇಕು ಎನ್ನುವ ಮನೋಭಾವ.
 •  ಆತ್ಮವಿಶ್ವಾಸದ ಕೊರತೆ.

ರೂಪದ ಸಮಸ್ಯೆ ಇರುವ ಹದಿಹರೆಯದವರು ಸದಾ ಮೂಢಿಯಾಗಿರುತ್ತಾರೆ. ಸಭೆ,ಸಮಾರಂಭಗಳಂತಹ ಸಾಮಾಜಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಾರೆ. ಏಕೆಂದರೆ ಜನರ ಜೊತೆ ಬೆರೆಯಲು ತಾವು ಅರ್ಹರಲ್ಲ ಎಂಬ ಕೀಳರಿಮೆ ಇರುತ್ತದೆ. ಈ ರೀತಿ ಭಾವನೆ ಮುಂದುವರೆದರೆ, ವ್ಯಕ್ತಿಯ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿ ಖಿನ್ನತೆ ಅಥವಾ ಆತಂಕದಂತಹ ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಸಮಸ್ಯೆ ತೀವ್ರವಾದಾಗ ಈಟಿಂಗ್ ಡಿಸಾರ್ಡರ್ ಅಥವಾ ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ ಗಳಿಗೆ ದಾರಿಯಾಗುತ್ತದೆ.

 ರೂಪದ ಬಗ್ಗೆ ಕೀಳರಿಮೆಯ ಲಕ್ಷಣಗಳು

ನಿಮ್ಮ ಮಕ್ಕಳಲ್ಲಿ ರೂಪದ ಸಮಸ್ಯೆ ಇದೆ ಎಂದು ಗುರುತಿಸುವುದು ಹೇಗೆ ? ಕೆಲವು ಲಕ್ಷಣಗಳು ಹೀಗಿವೆ :

 • ಯಾವಾಗಲೂ ಕನ್ನಡಿ ನೋಡಿಕೊಳ್ಳುವುದು.
 • ಸಭೆ, ಸಮಾರಂಭಗಳಿಂದ ದೂರ ಉಳಿಯುವುದು.
 • ಪದೇ ಪದೇ ಕ್ಯಾಲೋರಿ ಚೆಕ್ ಮಾಡುವುದು, ಡಯಟ್ ಮಾಡುವುದು.
 • ತಮ್ಮ ರೂಪದ ಬಗ್ಗೆ ಇತರರ ಅಭಿಪ್ರಾಯವನ್ನು  ಪದೇ ಪದೇ ಕೇಳುವುದು.
 • “ನಾನು ಚೆನ್ನಾಗಿಲ್ಲ”, “ಇನ್ನೂ ಚೆನ್ನಾಗಿರಬೇಕಿತ್ತು” ಎಂದು ತಮ್ಮ ದೇಹ/ರೂಪದ ಬಗ್ಗೆ  ಕೀಳಾಗಿ ಭಾವಿಸುವುದು.
 • ರೂಪ ಬದಲಾಯಿಸಿಕೊಳ್ಳಲು ಯೋಚನೆ, ಪ್ರಾಸ್ಟಿಕ್ ಸರ್ಜರಿಯ ಬಗ್ಗೆ ಮಾತನಾಡುವುದು.
 • ಜಿಮ್ಗೆ ಹೋಗುವ ಗೀಳು ಅಥವಾ ತೆಳ್ಳಗಾಗಲು ಪ್ರಯತ್ನಿಸುವುದು.

ಮಕ್ಕಳು ಕೆಲವೊಮ್ಮೆ ದೊಡ್ಡವರ ನಡವಳಿಕೆಯನ್ನು ಅನುಕರಿಸುತ್ತಾರೆ. ಒಂದು ವೇಳೆ ಮನೆಯಲ್ಲಿ ದೊಡ್ಡವರು ಆಹಾರದ ಬಗ್ಗೆ, ತಮ್ಮ ರೂಪದ ಬಗ್ಗೆ ಪರ್ಫೆಕ್ಷನಿಸ್ಟ್ ಗಳಾಗಿದ್ದರೆ, ಮಕ್ಕಳೂ ಸಹ ಅದನ್ನೇ ಅನುಕರಿಸುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಎದುರು ರೂಪ, ನಿಲುವಿನ ಬಗ್ಗೆ ಎಚ್ಚರಿಕೆಯಿಂದ ನೆಡೆದುಕೊಳ್ಳಬೇಕು.

ಮಕ್ಕಳು ತಮ್ಮ ರೂಪದ ಬಗ್ಗೆ ಒಳ್ಳೆಯ ಭಾವನೆ ಬೆಳಸಿಕೊಳ್ಳಲು ಪೋಷಕರು ಹೀಗೆ ಸಹಾಯ ಮಾಡಬಹುದು :

 • ಇತರ ಮಕ್ಕಳೊಂದಿಗೆ, ಒಡಹುಟ್ಟಿದವರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಅದರಲ್ಲಿಯೂ ರೂಪದ ಬಗ್ಗೆ ಹೋಲಿಸಬೇಡಿ.
 • ಮಕ್ಕಳಲ್ಲಿರುವ ಒಳ್ಳೆಯ ಗುಣಗಳನ್ನು ಪ್ರಶಂಸೆ ಮಾಡಿ.( ಕರುಣೆ, ಉಪಕಾರದ ಗುಣ, ಇತ್ಯಾದಿ) ಅವರ ಪ್ರತಿಭೆಯನ್ನು ಉತ್ತೇಜಿಸಿ.
 • ಅಕ್ಕಪಕ್ಕದವರು, ನೆಂಟರು ಅಪಹಾಸ್ಯ ಮಾಡದಂತೆ ನೋಡಿಕೊಳ್ಳಿ.

ಮಾಹಿತಿ ಕೊಡುಗೆ : ಡಾ. ಪೌಲಮಿ ಸುಧೀರ್, ಸೈಕಲಾಜಿಸ್ಟ್, ನಿಮ್ಹಾನ್ಸ್ .

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org