ಒತ್ತಡದಿಂದ ಕೂಡಿದ ಬಾಲ್ಯ ಜೀವನ ಖಿನ್ನತೆಗೆ ಕಾರಣವಾಗುತ್ತದೆಯೇ ?

ಒತ್ತಡದಿಂದ ಕೂಡಿದ ಬಾಲ್ಯ ಜೀವನ ಖಿನ್ನತೆಗೆ ಕಾರಣವಾಗುತ್ತದೆಯೇ ?

ಒತ್ತಡದಿಂದ ಕೂಡಿದ ಬಾಲ್ಯ ಜೀವನ ಖಿನ್ನತೆಗೆ ಕಾರಣವಾಗುತ್ತದೆಯೇ ?

ಡಾ ಶ್ಯಾಮಲಾ ವತ್ಸ

ನಾನು ನಮನ್ ನನ್ನು 2012ರಲ್ಲಿ ಭೇಟಿಯಾಗಿದ್ದೆ. ಅವರೊಡನೆ ಅವರ ತಂದೆ ತಾಯಿ ಸಹ ಬಂದಿದ್ದರು. “ ಅವನು ಬಾಲ್ಯದಿಂದಲೇ ಒಂದು ಸಮಸ್ಯೆಯಾಗಿದ್ದಾನೆ ” ಎಂದು ಪೋಷಕರು ಹೇಳಿದ್ದರು. ಶಾಲೆಯ ಆಡಳಿತ ಮಂಡಳಿಗಳು ಈ ಹುಡುಗ “ಇತರ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಾನೆ, ಗೊಂದಲ ಸೃಷ್ಟಿಸುತ್ತಾನೆ ” ಎಂದು ಕಾರಣ ಹೇಳುತ್ತಿದ್ದುದರಿಂದ  ಹತ್ತು ವರ್ಷಗಳಲ್ಲಿ ನಾಲ್ಕು ಶಾಲೆಗಳನ್ನು ಬದಲಾಯಿಸಲಾಗಿತ್ತು.

ಈಗ ನಾಮನ್‍ಗೆ 19 ವರ್ಷ ವಯಸ್ಸು. ಗಂಭೀರವಾದ ಮಾದಕ ವ್ಯಸನಕ್ಕೆ ತುತ್ತಾಗಿದ್ದಾನೆ. ದಿನವಿಡೀ ತನ್ನ ಕೋಣೆಯಲ್ಲೇ ಕಾಲ ಕಳೆಯುವ ನಮನ್ ಸಂಜೆಯ ವೇಳೆ ವೀಡ್ ಪಾರ್ಟಿಗಳಿಗೆ ಹೋಗುವುದು  ವಾಡಿಕೆ. ತಮ್ಮ ಮಗ ಮಾದಕ ವಸ್ತುಗಳ ಸೇವನೆಯನ್ನು ಬಿಟ್ಟು ಕಾಲೇಜಿಗೆ ಹೋಗಬೇಕು ಎನ್ನುವುದು ಪೋಷಕರ ಆಸೆ. ಹಾಗಾಗಿ ಸಲಹೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ನಾನು ಅವನೊಡನೆ ಏಕಾಂಗಿಯಾಗಿ ಮಾತನಾಡಿದೆ. ತನ್ನ ಜೀವನದ ಬಗ್ಗೆ ನಮನ್ ಹೇಳಿದ ಅಂಶಗಳಲ್ಲಿ ಪ್ರಮುಖವಾದವುಗಳೆಂದರೆ :  ತನ್ನ ತಂದೆತಾಯಿಯರ ನಡುವಿನ ಸಂಬಂಧ ಸದಾ ಅಸ್ಪಷ್ಟ ಮತ್ತು ಅನೇಕ ಅಡ್ಡಿ ಆತಂಕಗಳಿಂದ ಕೂಡಿದ್ದು ಇದರಿಂದ ತನ್ನ ಬಾಲ್ಯ ಜೀವನವಿಡೀ ನಮನ್ ಆತಂಕದಲ್ಲೇ ಕಳೆದಿದ್ದ : ತಾಯಿ ಸದಾ ಸಿಡಿಮಿಡಿಗೊಳ್ಳುವ ಸ್ವಭಾವದವರಾಗಿದ್ದು ಸಣ್ಣ ಪುಟ್ಟ ತಪ್ಪಿಗೂ ಅವನಿಗೆ ಹೊಡೆಯುತ್ತಿದ್ದರು ; ತಂದೆ ಇವನ ಮೇಲೆ ಸದಾ ಕೂಗಾಡುವುದೇ ಅಲ್ಲದೆ ಅಪ್ರಯೋಜಕ ಎಂದು ನಿಂದಿಸುತ್ತಿದ್ದರು : ಪ್ರತಿಯೊಂದು ಹೊಸ ಶಾಲೆಗೆ ಸೇರಿದಾಗಲೂ ನಮನ್‍ಗೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು : ಶಾಲೆಯಲ್ಲಿ ನಮನ್‍ನ ಗೊಂದಲ ಸೃಷ್ಟಿಸುವ ವರ್ತನೆಯ ಕಾರಣ ತಿಳಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡುತ್ತಿರಲಿಲ್ಲ : 2011ರ ಜೂನ್ ತಿಂಗಳಲ್ಲಿ ನಮನ್ ಬ್ಯುಸಿನೆಸ್ ಮೇನೇಜ್‍ಮೆಂಟ್ ಕೋರ್ಸ್‍ಗೆ ಸೇರ್ಪಡೆಯಾಗಿದ್ದ ಏಕೆಂದರೆ ಅವನ ತಂದೆ, ನಮನ್ ತಮ್ಮ ಕುಟುಂಬದ ವ್ಯಾಪಾರವನ್ನು ಮತ್ತಷ್ಟು ಉತ್ತಮಗೊಳಿಸಬೇಕು ಎಂದು ಬಯಸಿದ್ದರು.

ನಮನ್‍ಗೆ ಬರೆಯುವುದರಲ್ಲಿ ಹೆಚ್ಚು ಆಸಕ್ತಿ ಇತ್ತು. ಶಾಲೆಯಲ್ಲೂ ಇಂಗ್ಲಿಷ್ ಮತ್ತು ಇತಿಹಾಸದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದ. ಐಜಿಸಿಎಸ್‍ಇ ಪರೀಕ್ಷೆಯಲ್ಲಿ ಹತ್ತನೆಯ ದರ್ಜೆ ಪಡೆದಿದ್ದ. 11 ಮತ್ತು 12ನೆಯ ದರ್ಜೆಗೆ ಅವನನ್ನು ಸಿಬಿಎಸ್‍ಇ ಪಠ್ಯಕ್ರಮ ಇರುವ ಕಾಲೇಜಿಗೆ ಸೇರಿಸಲು ಅವನ ತಂದೆ ತಾಯಿ ನಿರ್ಧರಿಸಿದ್ದರು. ಹಾಗೂ ಹೀಗೂ ನಮನ್ ಒಪ್ಪಿಕೊಂಡಿದ್ದ. ಆದರೆ ಈ ಕೋರ್ಸ್ ಅವನಿಗೆ ಆಸಕ್ತಿದಾಯಕವಾಗಿರಲಿಲ್ಲ. ಕೆಲವೇ ದಿನಗಳಲ್ಲಿ ತಾನು ಶೈಕ್ಷಣಿಕವಾಗಿ ನಡೆದಿದ್ದ ಹಾದಿಯಲ್ಲಿ ನಮನ್ ದಿಕ್ಕುಕಾಣದಂತಾದ. ತದನಂತರ ಅವನನ್ನು ಬ್ಯುಸಿನೆಸ್ ಮೇನೇಜ್‍ಮೆಂಟ್ ಕಾಲೇಜಿಗೆ ಸೇರಿಸಿದ್ದರು.

ಈ ಯುವಕ ಖಿನ್ನನಾಗಿದ್ದ ಆದರೆ ಹಾಗೆ ಕಾಣುತ್ತಿರಲಿಲ್ಲ ಏಕೆಂದರೆ ಏನೋ ಕಳೆದುಕೊಂಡವನಂತೆ ಇರುತ್ತಿದ್ದ. ಅವನ ಬದುಕಿನ ಮಾರ್ಗವನ್ನು ಬದಲಿಸುವ ಭರವಸೆ ಅವನಿಗೆ ಇರಲಿಲ್ಲ, ಎಲ್ಲ ಪ್ರಯತ್ನಗಳನ್ನೂ ಕೈಬಿಟ್ಟಿದ್ದ. ಈ ಸ್ಥಿತಿ ತಲುಪಿದ್ದಕ್ಕಾಗಿ ಅವನು ಕಣ್ಣೀರು ಹಾಕಲೂ ಇಲ್ಲ ಏಕೆಂದರೆ ಅವನು ನನ್ನನ್ನೇ ಕೇಳಿದ ಪ್ರಶ್ನೆ ಎಂದರೆ “ ಬದಲಿಸಿ ಏನು ಪ್ರಯೋಜನ ”?

ತನ್ನ ಜೀವನವನ್ನು ಅರ್ಥಮಾಡಿಕೊಳ್ಳಲು ನಮನ್ ಅಂತರ್ಜಾಲದಲ್ಲಿ ತತ್ವಶಾಸ್ತ್ರವನ್ನು ಓದುತ್ತಿದ್ದ. ಆಲ್ಬರ್ಟ್ ಕಮು ಎಂಬ ದಾರ್ಶನಿಕರ “ ಬದುಕು ಎನ್ನುವುದು ಮೂಲತಃ ಅಸಂಬದ್ಧವಾದುದು ಅದನ್ನು ವಿವೇಕಯುತವಾಗಿ ಅನುಕರಿಸಬಾರದು ” ಎನ್ನುವ ನಿಲುವಿನಲ್ಲಿ ನಮನ್ ಅರ್ಥ ಕಂಡುಕೊಂಡಿದ್ದ. ಅದರಂತೆಯೇ ನಡೆದುಕೊಳ್ಳುತ್ತಿದ್ದ. ಹಾಗಾಗಿ ನಮನ್ ತನ್ನ ಬದುಕು ಅಸಂಬದ್ಧವಾದುದು ಎಂಬ ವಾಸ್ತವವನ್ನು ಅರಿತಂತೆಯೇ ನಡೆದುಕೊಳ್ಳುತ್ತಿದ್ದು, ಯಾವುದೇ ನಿರೀಕ್ಷೆ, ಆಕಾಂಕ್ಷೆಗಳಿಲ್ಲದೆ ಬದುಕಬೇಕು, ಬೇರೆ ಆಯ್ಕೆಗಳೇ ಇಲ್ಲ ಎಂದು ಭಾವಿಸಿದ್ದ.

“ ನಾನು ತಾರ್ಕಿಕ ಅಥವಾ ವೈಜ್ಞಾನಿಕ ಮನೋಭಾವದ ವ್ಯಕ್ತಿಯಲ್ಲ, ಹೆಚ್ಚು ಕ್ರಿಯಾಶೀಲ ಮತ್ತು ಅಂತರ್‍ದೃಷ್ಟಿ ಇರುವವನು ” ಎಂದು ಹೇಳಿದ ನಮನ್, ತನ್ನ ಶೈಕ್ಞಣಿಕ ಸಾಧನೆಗಳೂ ಬಹಳ ಮುಖ್ಯವಾದುದು ಎಂದು ಬಿಂಬಿಸುವಂತೆ ವರ್ತಿಸಲು ಪ್ರಯತ್ನಿಸುತ್ತಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇರುವ ಚೆನ್ನಾಗಿ ಓದುವ ಮಕ್ಕಳನ್ನು ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಹಗಲಿರುಳೂ ಓದುತ್ತಿದ್ದ ಮಕ್ಕಳನ್ನು ಕಂಡರೆ ಅಸೂಯೆ ಪಡುತ್ತೇನೆ ಎಂದು ನಮನ್ ಹೇಳುತ್ತಾನೆ. ಕೆಲವೊಮ್ಮೆ ಅವರಂತೆಯೇ ಆಗಲು ಬಯಸಿದರೂ ನಮನ್‍ಗೆ ತನ್ನಿಂದ ಅದು ಸಾಧ್ಯವಾಗದು ಎಂದು ತಿಳಿದಿತ್ತು.

ನಾವು ನಮನ್‍ಗೆ ಖಿನ್ನತೆಯನ್ನು ಹೋಗಲಾಡಿಸುವ ಧ್ಯಾನ ಮಾಡುವ ವಿಧಾನ ಹೇಳಿಕೊಡಲು  ನಿರ್ಧರಿಸಿದೆವು. ಏಕೆಂದರೆ ಅವನು ಮುಕ್ತವಾಗಿ ಮಾತನಾಡುತ್ತಿದ್ದ ಮತ್ತು ಅಮೂರ್ತ ನೆಲೆಯಲ್ಲಿ ವಿಷಯಗಳನ್ನು ಚರ್ಚೆ ಮಾಡಲು ಸಿದ್ಧನಾಗಿದ್ದ.

ಧ್ಯಾನ ಮಾಡುವ ಮೂರನೆಯ ಹಂತ ಮುಗಿಯುವ ವೇಳೆಗೆ ನಮನ್‍ನ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದ, ಅವನ ಉದಾಸೀನತೆ ಕಡಿಮೆಯಾಗಿತ್ತು,  ತನ್ನ ಜಡತ್ವದ ಮೂಲಕ ಹೇಗೆ ತನ್ನ ಅವಕಾಶಗಳನ್ನು ಕಳೆದುಕೊಂಡಿದ್ದೆ ಎಂದು ನಮನ್‍ಗೆ ಅರಿವಾಗಿತ್ತು. ಇದು ಅವನಲ್ಲಿ ಅಡಗಿದ್ದ ಖಿನ್ನತೆಯನ್ನು ಬಯಲುಮಾಡಿತ್ತು.  ನಾನು ಅಲ್ಪ ಪ್ರಮಾಣದ ಖಿನ್ನತೆ ನಿರೋಧಕ ಔಷಧಿಯನ್ನು ನೀಡಲಾರಂಭಿಸಿದ್ದೆ. ಇದು ಅವನ ಒಳನೋಟಗಳನ್ನು ಬಾಧಿಸುತ್ತಿದ್ದ ಆತಂಕಗಳನ್ನು ದೂರಪಡಿಸುತ್ತಿತ್ತು.

ಐದನೆಯ ಹಂತದಲ್ಲಿ ನಮನ್ ನನ್ನ ಬಳಿಗೆ ಬಂದು, ತಾನು ಬ್ಯುಸಿನೆಸ್ ಕೋರ್ಸ್‍ನಿಂದ ಹೊರಬರುತ್ತಿದ್ದೇನೆ, ಲಿಬರಲ್ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಯನ ಮಾಡುತ್ತೇನೆ ಎಂದು ಹೇಳಿದ. ಕೂಡಲೇ ನಗರವನ್ನು ತೊರೆದ ನಮನ್‍ನನ್ನು ನಾನು ಮತ್ತೆ ಭೇಟಿಯಾಗಲು ಸಾಧ್ಯವಾಗಲಿಲ್ಲ.  ಬಾಲ್ಯದ ಕಹಿ ಅನುಭವಗಳಿಂದ ಅವನ ಮೇಲೆ ಉಂಟಾಗಿದ್ದ ವ್ಯತಿರಿಕ್ತ ಪರಿಣಾಮಗಳು ಅವನನ್ನು ದುರ್ಬಲನನ್ನಾಗಿ ಮಾಡಿದ್ದು ಇದನ್ನು ಸರಿಪಡಿಸಲು ನಮನ್‍ಗೆ ಮನಶ್ಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸಲು ನಾನು ಯೋಚಿಸಿದ್ದೆ. ಅಡ್ಡದಾರಿಯಲ್ಲಿ ನಡೆಯುವ ಅವನ ಹವ್ಯಾಸವನ್ನು ತಪ್ಪಿಸಿ ಸರಿದಾರಿಗೆ ತರಲು ಯೋಚಿಸಿದ್ದೆ.

ನಮನ್‍ನಂತಹುದೇ ಚರಿತ್ರೆ ಇರುವ ಯುವಕರು ಕಂಡುಬರುವುದು ಅಸಾಮಾನ್ಯವೇನಲ್ಲ.  ತಮ್ಮ ಬಾಲ್ಯ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನಿರಂತರವಾದ ಆತಂಕಗಳನ್ನು ಎದುರಿಸುವವರಲ್ಲಿ ಇದು ಸಹಜ.

ಬೆಳೆಯುವ ಹಂತದಲ್ಲಿ ಕೊಂಚ ಮಟ್ಟಿನ ಒತ್ತಡ ಸ್ವಾಭಾವಿಕ ಮತ್ತು ಸಹಜ. ಇದು ಜನರನ್ನು ಗಟ್ಟಿಗೊಳಿಸುತ್ತದೆ, ವಯಸ್ಕರಾದ ಮೇಲೆ ಜೀವನದ ಕಠಿಣ ಸನ್ನಿವೇಶಗಳನ್ನು ಎದುರಿಸಲು ಇದು ನೆರವಾಗುತ್ತದೆ. ಆದರೆ ನಿರಂತರವಾದ ಒತ್ತಡ ಮಿದುಳಿನ ಹಿಪ್ಪೋಕ್ಯಾಂಪಸ್ ಮತ್ತು ಅಮಿಗ್ಡಲಾ ನರನಾಡಿಗಳಲ್ಲಿ ಶಾಶ್ವತವಾದ ಬದಲಾವಣೆಗಳನ್ನು ಉಂಟುಮಾಡುತ್ತದೆ. ಕೆಲವು ವರ್ಷಗಳ ನಂತರ ಇಂತಹ ಮಕ್ಕಳು ಹೆಚ್ಚಿನ ಒತ್ತಡಗಳಿಗೆ ಒಳಗಾಗುತ್ತಾರೆ. ಕೆಲವು ಮಕ್ಕಳು ದೀರ್ಘಕಾಲದ ಒತ್ತಡವನ್ನು ಸಹಿಸಿಕೊಂಡು ಮುನ್ನಡೆಯುವ ಸಾಮಥ್ರ್ಯವನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.  ಆದರೆ ಕೆಲವು ವರ್ಷಗಳ ನಂತರ ವಯಸ್ಕರಾದ ಮೇಲೆ ಒತ್ತಡ ಉಂಟುಮಾಡುವ ಅಂಶಗಳಿಂದ ಖಿನ್ನತೆಗೊಳಗಾಗುವಷ್ಟು ದುರ್ಬಲರಾಗಿರುತ್ತಾರೆ.

ಖಿನ್ನತೆ ಕಾರಣವಾಗುವ ಮತ್ತೊಂದು ಅಂಶ ಎಂದರೆ ವಂಶವಾಹಿಯಾಗಿ ಬಂದಿರುವ ದೌರ್ಬಲ್ಯ ಕೆಲವು ಜಿನೋಟೈಪ್ಸ್ (ವಂಶಾವಳಿ) ಹೊಂದಿರುವ ಜನರು ಒತ್ತಡಗಳನ್ನು ಎದುರಿಸಿದಾಗ ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ. ಕೆಲವು ಜಿನೋಟೈಪ್ ಇರುವವರು ಗಟ್ಟಿಯಾಗುತ್ತಾರೆ.

ಖಿನ್ನತೆ ಎನ್ನುವುದು ಸ್ವಭಾವತಃವಾಗಿಯೂ ಬರುತ್ತದೆ ಮತ್ತು ಬೆಳೆಯುವ ವಿಧಾನದಿಂದಲೂ ಉಂಟಾಗುತ್ತದೆ. ಬಾಲ್ಯದಲ್ಲಿ ಹೆಚ್ಚಿನ ಒತ್ತಡ ಇಲ್ಲದಿದ್ದರೆ ವಂಶವಾಹಿಯಾಗಿ ದೌರ್ಬಲ್ಯ ಹೊಂದಿರುವ ಮಕ್ಕಳೂ ಕೆಲವೊಮ್ಮೆ ದೃಢತೆಯಿಂದ ಬೆಳೆಯುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಆರೋಗ್ಯಕರವಾಗಿ ಬೆಳೆದ ಮಗು ಅತಿಯಾದ ನಿರಂತರ ಒತ್ತಡಗಳನ್ನು ಎದುರಿಸುತ್ತಿದ್ದರೆ ದೊಡ್ಡವರಾದ ಮೇಲೆ ತೀವ್ರವಾದ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ನಮನ್‍ಗೂ ಸಹ ಬಹುಶಃ ಹೀಗೆಯೇ ಆಗಿರಬಹುದು.

ಖಿನ್ನತೆ ನಿಯಂತ್ರಿಸುವ ಔಷಧಗಳು ಖಿನ್ನತೆಯ ಲಕ್ಷಣಗಳನ್ನು ಮತ್ತು ಆತಂಕಗಳನ್ನು ದೂರ ಮಾಡುತ್ತವೆ. ತೀವ್ರವಾದ ದೀರ್ಘ ಕಾಲಿಕ ಒತ್ತಡಗಳಿಂದ ಹಾಳಾಗುವ ನಾಡಿ ಕಣಗಳನ್ನೂ ಸರಿಪಡಿಸುತ್ತವೆ. ಅಲ್ಪ ಕಾಲದ ಧ್ಯಾನ, ಮಾನಸಿಕ ಚಿಕಿತ್ಸೆಯಿಂದ ನಮನ್‍ನಂತಹ ಖಿನ್ನತೆಗೊಳಗಾದ ಮಕ್ಕಳಿಗೆ ನೆರವಾಗುವುದಲ್ಲದೆ ಅವರ ಜೀವನವನ್ನು ಹಸನಾಗಿಸುತ್ತವೆ. ಇದರ ಮೂಲಕ ಖಿನ್ನತೆಯ ಪ್ರಕರಣಗಳನ್ನು ಕಡಿಮೆ ಮಾಡಲೂ ಸಾಧ್ಯ.

ಈ ಸರಣಿಯಲ್ಲಿ ಡಾ ಶ್ಯಾಮಲಾ ವತ್ಸ, ಹದಿಹರೆಯದ ಮಕ್ಕಳು ತಮ್ಮ ಮಾನಸಿಕ ಸಮಸ್ಯೆಗಳನ್ನು ಮರೆಮಾಚುವ ಸಾಮಥ್ರ್ಯ ಹೊಂದಿರುತ್ತಾರೆ ಎನ್ನುವುದನ್ನು ಹೇಳಲು ಇಚ್ಚಿಸುತ್ತಾರೆ. ಈ ಲೇಖನಗಳಲ್ಲಿ ಮಾನಸಿಕ ದೌರ್ಬಲ್ಯದ ಆರಂಭಿಕ ಲಕ್ಷಣಗಳು ಹೇಗೆ ಹದಿಹರೆಯದವರ ವರ್ತನೆಯನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.  ಅನಗತ್ಯವಾಗಿ ನೋವು ಅನುಭವಿಸುವ ಯುವ ಜನತೆಯ ಕಥೆಗಳಲ್ಲಿ ಹೇಳುವಂತೆ, ಗೆಳೆಯರು ಮತ್ತು ಕುಟುಂಬದ ಸದಸ್ಯರು ಸಾಮಾನ್ಯವಾಗಿ ಕಾಣದಂತಹ ವರ್ತನೆಗಳನ್ನು ಗಮನಿಸಿ, ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ನೆರವು ಪಡೆಯುವುದು ಒಳಿತು.

ಡಾ ಶ್ಯಾಮಲ ವತ್ಸ ಬೆಂಗಳೂರಿನಲ್ಲಿ ನೆಲೆಸಿರುವ ಮನಶ್ಶಾಸ್ತ್ರ ತಜ್ಞರಾಗಿದ್ದು ಕಳೆದ 20 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿದ್ದಾರೆ. ನಿಮ್ಮಲ್ಲಿ ಯಾವುದೇ ಪ್ರಶ್ನೆಗಳು, ಅಭಿಪ್ರಾಯಗಳು ಇದ್ದು ಹಂಚಿಕೊಳ್ಳಲು ಬಯಸುವಿರಾದರೆ ಅವರನ್ನು ಈ ವಿಳಾಸದಲ್ಲಿ ಸಂಪರ್ಕಿಸಿ : columns@whiteswanfoundation.org

Related Stories

No stories found.