ಅಭಿರುಚಿ ಮತ್ತು ವಾಸ್ತವ

ಹದಿನೆಂಟು ವರ್ಷ, ಭಾರತದಲ್ಲಿ ಈ ವಯಸ್ಸಿನಲ್ಲಿ ನೀವು ಏನನ್ನು ಓದುತ್ತೀರಿ ಮತ್ತು ಯಾವ ವೃತ್ತಿಯನ್ನು ಆಯ್ದುಕೊಳ್ಳುತ್ತೀರಿ ಎಂಬ ಬಗ್ಗೆ ತೀರ್ಮಾನಿಸಬೇಕೆಂದು ನಿರೀಕ್ಷಿಸುವ ವಯಸ್ಸು. ಹದಿನೆಂಟರ ವಯಸ್ಸಿನ ಬಹುತೇಕರಿಗೆ ಹನ್ನೆರಡನೆಯ ಗ್ರೇಡ್ ಒಂದು ಭಯಾನಕ ಅನುಭವಾಗಿರುತ್ತದೆ. ಆ ಪ್ರಾಯದವರು ಆ ಸಮಯದಲ್ಲಿ ಮಾನಸಿಕವಾಗಿ ಸಾಕಷ್ಟು ತೊಳಲಾಟವನ್ನು ಅನುಭವಿಸಬಹುದು.

ಶಕ್ತಿಗುಂದಿಸುವ ಆತಂಕ ಹಾಗೂ ನರ್ವಸ್ ಬ್ರೇಕ್ ಡೌನ್ ಗಳು ಈ ಸಂದರ್ಭದಲ್ಲಿ ಸಾಮಾನ್ಯವಾಗಿರುತ್ತದೆ. ಅತಿಯಾದ ಆತಂಕದಿಂದಾಗಿ ನಿಮ್ಮ ಮಕ್ಕಳು ಖಿನ್ನತೆಗೆ ಜಾರಬಹುದು ಮತ್ತು ಪರೀಕ್ಷೆಯನ್ನು ಎದುರಿಸಲು ಅಶಕ್ತರಾಗಬಹುದು. ಆದ್ದರಿಂದ ಪ್ರತೀ ವರ್ಷ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ, ಏಕಾಗ್ರತೆಯ ಸಮಸ್ಯೆ, ಮರೆಗುಳಿತನ, ಕ್ರೈಯಿಂಗ್ ಸ್ಪೆಲ್ಸ್, ಅತಿಯಾದ ಕೋಪ ಮತ್ತು ನಿದ್ರಾಹೀನತೆಯ ಸಮಸ್ಯೆಗಾಗಿ ಆಪ್ತ ಸಮಾಲೋಚನೆಗೆ ಬರುತ್ತಾರೆ.

ನಮ್ಮ ದೇಶದಲ್ಲಿ ಹೆಚ್ಚಿನ ಜನರ ಪ್ರಕಾರ ಅವರ ಮಕ್ಕಳ ಭವಿಷ್ಯದ ಜೀವನ ಮಟ್ಟವು ಅವರ ಹನ್ನೆರಡನೆಯ ಗ್ರೇಡಿನ ಫಲಿತಾಂಶದಲ್ಲಿ ಅಡಗಿದೆ. ಆದರೆ ಅವರು ಮಕ್ಕಳಿಗೂ ಕೂಡಾ ತಮ್ಮದೇ ಆದ ಭಯಗಳಿವೆ ಎಂದು ಅರ್ಥಮಾಡಿಕೊಳ್ಳಬೇಕು. ಅದಾಗಲೇ ಆತಂಕಗೊಂಡಿರುವ ಅವರ ಮೇಲೆ ಇನ್ನಷ್ಟು ಒತ್ತಡ ಹೇರಬಾರದು. ಬದಲಿಗೆ ಅವರನ್ನು ಬೆಂಬಲಿಸಬೇಕು. ಅಂತಿಮ ಪರೀಕ್ಷೆಗಳ ಸಂದರ್ಭದಲ್ಲಿ ನಮ್ಮ ದೇಶದ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಷಯಗಳು ಇಲ್ಲದ ದಿನಗಳು ಅತ್ಯಂತ ವಿರಳವಾಗಿರುತ್ತದೆ.

ಸಾಧಾರಣ ಸಂಬಳ ಪಡೆಯುವ, ನಿವೃತ್ತಿಯ ಅಂಚಿನಲ್ಲಿರುವ, ಆರ್ಥಿಕವಾಗಿ ಅಷ್ಟೇನೂ ಅನುಕೂಲವಲ್ಲದ ಕುಟುಂಬದ ಪಾಲಕರು ಇನ್ನು 4 ರಿಂದ 5 ವರ್ಷದಲ್ಲಿ ಮಗ/ಮಗಳು ಕುಟುಂಬದ ಜವಾಬ್ದಾರಿ ಹೊರಲು ಸಮರ್ಥರಾಗಲೆಂದು ಬಯಸುತ್ತಾರೆ. ಆದ್ದರಿಂದ 18 ವರ್ಷದ ಮಕ್ಕಳು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಒಂದಿಲ್ಲೊಂದು ಕೋರ್ಸಿಗೆ ಪ್ರವೇಶ ಪಡೆಯುತ್ತಾರೆ. ನಂತರದ 4 ವರ್ಷ ಉತ್ತಮ ಗ್ರೇಡಿನಲ್ಲಿ ಕೋರ್ಸನ್ನು ಮುಗಿಸಲು ಶ್ರಮ ಪಡುತ್ತಾರೆ. ತಾವು ಮಾಡುತ್ತಿರುವ ಕೋರ್ಸನ್ನು ತಾವು ನಿಜವಾಗಿಯೂ ಇಷ್ಟಪಡುತ್ತಿದ್ದೇವೆಯೇ ಎಂದು ಯೋಚಿಸಲು ಅವರಿಗೆ ಸಮಯವಿರುವುದಿಲ್ಲ. ಅವರಿಗೆ ಆ ಸೌಭಾಗ್ಯವಿರುವುದಿಲ್ಲ.

ಒಂದು ವೇಳೆ ನಿಮಗೆ ಆಯ್ಕೆಯ ಸ್ವಾತಂತ್ರವಿದ್ದಲ್ಲಿ ನೀವು ಏನು ಮಾಡುತ್ತೀರಿ? ನೀವು ಸ್ವಲ್ಪ ಹಿಂದೆ ಹೋಗಿ ‘ನಾನು ನಿಜವಾಗಿ ಏನನ್ನು ಬಯಸುತ್ತೇನೆ?’ ಎಂದು ಯೋಚಿಸಿ. ನೀವು ಸರಿಯಾದ ನಿರ್ಧಾರಕ್ಕೆ ಬರಲು ನಿಮ್ಮ ಬಳಿ ಲಭ್ಯವಿರುವ ಕೋರ್ಸು ಮತ್ತು ಕಾಲೇಜುಗಳ ಹಾಗೂ ನಿಮ್ಮ ಆಸೆಯ ಕುರಿತಾದ ಮಾಹಿತಿಯಿರಬೇಕು. ಪಾಲಕರು, ಶಿಕ್ಷಕರು, ಆಪ್ತಸಮಾಲೋಚಕರು ನಿಮಗೆ ಈ ಕುರಿತು ಮಾರ್ಗದರ್ಶನ ನೀಡಬಹುದು. ಆದರೆ ನಿಮಗೆ ಯಾವುದು ಹೊಂದುತ್ತದೆ ಮತ್ತು ಅದು ಹೇಗೆ ನಿಮ್ಮ ಆದಾಯದ ಮೂಲವಾಗಬಹುದು ಎಂಬುದನ್ನು ನೀವೇ ನಿರ್ಧರಿಸಬೇಕಾಗುತ್ತದೆ.

ನಿಮ್ಮಲ್ಲಿ ಅಗತ್ಯ ಕೌಶಲವಿದ್ದರೆ ವಿಭಿನ್ನ ವೃತ್ತಿಯನ್ನು ಆಯ್ದುಕೊಳ್ಳುವುದು ತಪ್ಪೇನಲ್ಲ. ಆದರೆ ನೀವು ಅದರಲ್ಲಿ ಔನ್ನತ್ಯವನ್ನು ತಲುಪದಿದ್ದರೆ ಕೆಲವೊಮ್ಮೆ ವೈಫಲ್ಯವನ್ನು ಅನುಭವಿಸಬೇಕಾಗುತ್ತದೆ. ಉದಾಹರಣೆಗೆ ವೃತ್ತಿಪರ ಕ್ರೀಡೆ, ಇಂತಹ ಸಂದರ್ಭದಲ್ಲಿ ಆಪ್ತ ಸಮಾಲೋಚನೆಗೆ ಬರುವ ಯುವಕರು ಬರ್ನ್ಟ್ ಔಟ್ ಆಗಿರುತ್ತಾರೆ. ಬರ್ನ್ಟ್ ಔಟ್ ಎನ್ನುವುದು ದೀರ್ಘಕಾಲೀನ ಬಳಲಿಕೆ, ಕುಂದಿದ ಉತ್ಸಾಹ, ಸಿನಿಕತೆ ಮತ್ತು ಕಾರ್ಯಕಾರಿತ್ವದ ಕೊರತೆಯನ್ನು ತಿಳಿಸುವ ಮನೋವೈಜ್ಞಾನಿಕ ಪದವಾಗಿದೆ. ಬರ್ನ್ಟ್ ಔಟ್ ನ ವಿರುದ್ಧ ಪದ ತೊಡಗಿಸಿಕೊಳ್ಳುವಿಕೆ. ಇದು ಉತ್ಸಾಹ, ಮಗ್ನತೆ ಮತ್ತು ಕಾರ್ಯಕಾರಿತ್ವದ ಲಕ್ಷಣಗಳನ್ನು ಹೊಂದಿದೆ. ಮುಖ್ಯವಾಗಿ ನೀವು ಆಯ್ದುಕೊಳ್ಳುವ ವೃತ್ತಿಯು ನಿಮ್ಮನ್ನು ಹಿಡಿದಿರುವಂತಿರಬೇಕು.

ಭಾರತದ ಸಂದರ್ಭದಲ್ಲಿ ನೀವು ನಿಮ್ಮ ಆಯ್ಕೆಯ ಬಗ್ಗೆ ಪಾಲಕರನ್ನು ಒಪ್ಪಿಸಬೇಕಾಗುತ್ತದೆ. ಏಕೆಂದರೆ ಅವರು ನಿಮ್ಮ ಅಧ್ಯಯನಕ್ಕೆ ಧನಸಹಾಯ ಮಾಡುತ್ತಿರುತ್ತಾರೆ. ಉದಾಹರಣೆಗೆ ನಿಮಗೆ ಫಿಸಿಕ್ಸ್ ಮತ್ತು ಗಣಿತದಲ್ಲಿ ಹೆಚ್ಚು ಅಂಕಗಳು ಬಂದಿರುತ್ತವೆ ಆದರೂ ನೀವು ಪತ್ರಿಕೋದ್ಯಮವನ್ನು ಕಲಿಯಲು ಬಯಸುತ್ತೀರಿ. ನೀವು ಒಂದು ಐಐಟಿ ಯಲ್ಲಿ ಬಿ.ಇ ಮುಗಿಸಿದ ದಿನದಿಂದಲೇ ಚೆನ್ನಾಗಿ ಸಂಪಾದಿಸತೊಡಗುತ್ತೀರಿ. ಆದ್ದರಿಂದ ನೀವು ಆ ಬಗ್ಗೆ ಪ್ರಯತ್ನಿಸಬೇಕೆಂದು ಅವರು ಬಯಸುತ್ತಾರೆ.

ಆದರೆ ನಿಮ್ಮ ಆಯ್ಕೆ ಪತ್ರಿಕೋದ್ಯಮವೇ ಏಕೆ? ಎಂಬ ಬಗ್ಗೆ ಅವರನ್ನು ಒಪ್ಪಿಸಬೇಕಾಗುತ್ತದೆ. ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲವೆಂದು ನಿಮ್ಮ ಮನೆಯವರ ಮೇಲೆ ಸಿಟ್ಟಾಗುವುದರಲ್ಲಿ ಅರ್ಥವಿಲ್ಲ. ಜಗತ್ತಿನ ವಿವಿಧ ಕಡೆ ಅದರಲ್ಲೂ ನಮ್ಮ ದೇಶದಲ್ಲಿ STEM ( ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಮತ್ತು ಆದಾಯ ಉತ್ತಮವಾಗಿರುತ್ತದೆ ಎಂಬ ಭಾವನೆಯಿದೆ. ಈ ಕುರಿತು ಮನಸ್ಸಿನ ದ್ವಂದ್ವಗಳು ದೀರ್ಘಕಾಲದವರೆಗೆ ಉಳಿಯುತ್ತದೆ ಮತ್ತು ತಾಕಲಾಟದಲ್ಲಿ ಕೊನೆಯಾಗುತ್ತದೆ. ಹೆಚ್ಚಿನ ಯುವಕರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ನಿರ್ಧಾರವನ್ನು ತಾರ್ಕಿಕವಾಗಿ ಯೋಚಿಸಿ ತೆಗೆದುಕೊಳ್ಳಬೇಕಾದದ್ದು. ಇದು ಯುವಕರ ಸ್ವಂತಿಕೆಯ ಭಾವ, ಅವರ ವಿಶ್ವಾಸ, ಭರವಸೆ ಮತ್ತು ಜೀವನವನ್ನು ಶೋಧಿಸುವ ಅವರ ಸಂತೋಷವನ್ನು ಕಸಿದುಕೊಂಡು ಅವರ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ತಮಗಿಷ್ಟವಿಲ್ಲದ ಕೋರ್ಸಿಗೆ ದೂಡಲ್ಪಟ್ಟ ವಿದ್ಯಾರ್ಥಿಗಳು ವರ್ಷಗಳು ಕಳೆದರೂ ಕಾಡಾ ವಿಷಯಗಳನ್ನು ಪಾಸ್ ಮಾಡಲಾಗದೇ ಆಪ್ತ ಸಮಾಲೋಚನೆಗೆ ಬರುತ್ತಾರೆ. ಆಯ್ದುಕೊಂಡ ಕೋರ್ಸನ್ನು ಮುಗಿಸುವ ಅನಿವಾರ್ಯತೆಯಿಂದ ಬಹುಶಃ ಓದಿದ ನಂತರ ವೃತ್ತಿ ಮತ್ತು ಆದಾಯದ ವಿಷಯದಲ್ಲಿ ನೆಮ್ಮದಿ ಸಿಗಬಹುದೆಂಬ ಆಸೆಯಿಂದ ಅತೃಪ್ತ ಮನಸ್ಸಿನಿಂದಲೇ ಮುಂದುವರೆಯುತ್ತಾರೆ.

ವೃತ್ತಾಕಾರದ ತೂತಿನಲ್ಲಿ ಸಿಕ್ಕಿಬಿದ್ದ ಚೌಕಾಕಾರದ ವಸ್ತುವಿನಂತೆ ತಮಗಿಷ್ಟವಿಲ್ಲದ ಆದರೆ ಉದ್ಯೋಗ ನೀಡಬಹುದಾದ ವೃತ್ತಿಪರ ಕೋರ್ಸಿನಲ್ಲಿ ಬಿದ್ದು ತೊಡಲಾಡುತ್ತಿರುವ ಅಂತಹ ವಿದ್ಯಾರ್ಥಿಗಳು ತಾನು ಯಾರು? ಅಥವಾ ‘ತನಗೆ ನೆನಪಿನಶಕ್ತಿಯ ಕೊರತೆಯುಂಟಾಗಿದೆ’ ಎಂಬ ದೂರಿನೊಂದಿಗೆ ನಮ್ಮಲ್ಲಿ ಬರುತ್ತಾರೆ. ಅವರ ಕೋರ್ಸಿನ ವಿಷಯವನ್ನು ಗ್ರಹಿಸುವುದು ಅವರಿಗೆ ಕಷ್ಟವೆನಿಸುತ್ತದೆ.

ಅವರಿಗೆ ತಾವು ಮೂರ್ಖರೆಂದೆನಿಸಬಹುದು ಅಥವಾ ತಾವು ಬಯಸುತ್ತಿರುವುದು ಏನು ಎಂಬುದರ ಬಗ್ಗೆ ಅವರು ಗೊಂದಲಕ್ಕೊಳಗಾಗುತ್ತಾರೆ. ಈ ರೀತಿಯ ಖಿನ್ನತೆ ಹಲವು ಬಾರಿ ಮೇಲ್ನೋಟದಲ್ಲಿ ತಿಳಿಯುವುದಿಲ್ಲ. ಏಕೆಂದರೆ ವ್ಯಕ್ತಿಗಳಿಗೆ ತಾವು ತಮ್ಮ ಬಯಕೆಗಳಿಂದ ಎಷ್ಟು ದೂರ ಬಂದಿದ್ದೇವೆ ಮತ್ತು ತಾವು ಬದಲಾದ ಪರಿಸ್ಥಿತಿಗೆ ಎಷ್ಟರ ಮಟ್ಟಿಗೆ ಹೊಂದಿಕೊಂಡಿದ್ದೇವೆಂಬುದು ಗಮನಕ್ಕೆ ಬಂದಿರುವುದಿಲ್ಲ.

ಶಿಕ್ಷಣತಜ್ಞರ ಪ್ರಕಾರ, ನಿಮ್ಮ ಭೌದ್ಧಿಕ ವಿಕಾಸದ ಜೊತೆಗೆ ನಿಮ್ಮ ಸ್ವಂತದ ವ್ಯಕ್ತಿತ್ವವನ್ನು ಬೆಳೆಸುವುದು ಶಿಕ್ಷಣದ ಗುರಿಯಾಗಿರುತ್ತದೆ. ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಸ್ವಾಯತ್ತತೆ, ಸಮಗ್ರತೆ, ಮತ್ತು ಸಾಮರಸ್ಯ ಈ ಮೂರು ಗುಣಗಳನ್ನು ನೀವು ಬೆಳೆಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಸ್ವಾಯತ್ತತೆಯಿಂದ ನೀವು ಸ್ವತಂತ್ರವಾಗಿ ಯೋಚಿಸಬಲ್ಲಿರಿ. ಸಮಗ್ರತೆಯಿಂದ ಸ್ಪಷ್ಟತೆ ದೊರೆಯುತ್ತದೆ. ಮತ್ತು ಸಾಮರಸ್ಯದಿಂದ ನಿಮ್ಮ ಯೋಚನೆ ಮತ್ತು ಭಾವನೆಗಳು ಪರಸ್ಪರ ಅನುಕೂಲವಾಗಿರುತ್ತದೆ. ಇದರಿಂದ ಯಾವುದೇ ಮಾನಸಿಕ ಘರ್ಷಣೆ ಉಂಟಾಗುವುದಿಲ್ಲ.

ಅಸ್ತಿತ್ವವಾದದ ಪರಿಭಾಷೆಯಲ್ಲಿ ಸ್ವಾಯತ್ತವಾಗಿರುವುದೆಂದರೆ ಹೊರಗಿನ ಒತ್ತಡಗಳನ್ನು ಎದುರಿಸಿ ನಿಮ್ಮತನವನ್ನು ಉಳಿಸಿಕೊಳ್ಳುವುದು. ಭಾರತದಲ್ಲಿ ಶಿಕ್ಷಣದ ಕುರಿತ ಚರ್ಚೆಯು ಈ ದಿಕ್ಕಿನಲ್ಲಿ ಸಾಗುತ್ತಿದೆ. ಆದರೆ ಇದು ಮುಖ್ಯವಾಹಿನಿಗೆ ಬರಲು ಇನ್ನೂ ಸಮಯ ಬೇಕು.

ಪ್ರಸ್ತುತ ಜಗತ್ತಿನಲ್ಲಿ, ಹೆಚ್ಚಿನವರಿಗೆ ಶಿಕ್ಷಣವು ಉದ್ಯೋಗವನ್ನು ಗಳಿಸಿ ಕುಟುಂಬವನ್ನು ಪೋಷಿಸುವ ಹಾಗೂ ಈಗಾಗಲೇ ಶಿಕ್ಷಣಕ್ಕಾಗಿ ಮಾಡಿರುವ ಸಾಲವನ್ನು ತೀರಿಸುವ ಒಂದು ಮಾಧ್ಯಮವಾಗಿದೆ. ಮಾಸ್ಲೋನ ‘ಹೈರಾರ್ಕಿ ಆಫ್ ನೀಡ್ಸ್’ ತಿಳಿಸುವಂತೆ ಯುವಕರು ಕೂಡಾ ತಮ್ಮ ಪ್ರಾಥಮಿಕ ಅವಶ್ಯಕತೆಗಳು ಈಡೇರುವವರೆಗೆ ಸಮಗ್ರತೆ ಅಥವಾ ತಮ್ಮನ್ನು ತಾವು ಅರಿತುಕೊಳ್ಳುವುದರ ಬಗ್ಗೆ ಹೆಚ್ಚು ಒತ್ತು ನೀಡಲಾರರು. ಕೆಚ್ಚುಳ್ಳ ಕೆಲವು ಮಕ್ಕಳು ಮಾತ್ರ ಅಂಜಿಕೆಯನ್ನು ತೊರೆದು, ಸಿದ್ಧಚೌಕಟ್ಟುಗಳನ್ನು ಮೀರುವತ್ತ ಪ್ರಯತ್ನಿಸುತ್ತಾರೆ. ಭವಿಷ್ಯದಲ್ಲಿ ಮಕ್ಕಳು ಶಿಕ್ಷಣಕ್ಕಾಗಿ ತಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಸಂದರ್ಭ ಬರಬಾರದು ಎಂಬ ಭರವಸೆಯೇ ಬೆಳಕಾಗುತ್ತದೆ.  

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org