ಹರೆಯದ ಮಕ್ಕಳೊಂದಿಗಿನ ನಿಮ್ಮ ಸಂಬಂಧ

Youth, today, have it all. So it seems. They have their own sets of challenges, struggles and dreams. Dr Shyamala Vatsa analyzes factors that potentially impact the mental wellbeing and health of the Indian youth.

ನಾನು ಈ ಮೊದಲೇ ತಿಳಿಸಿದಂತೆ, ಹರೆಯದ ಮಕ್ಕಳು ಪಾಲಕರೊಡನೆ ಮುಕ್ತ, ವಿಶ್ವಾಸಪೂರ್ಣ ಸಂಬಂಧ ಹೊಂದಿರುವುದಕ್ಕಿಂತ ಉತ್ತಮ ಸಂಗತಿ ಇನ್ನೊಂದಿಲ್ಲ. ಅನಗತ್ಯವಾಗಿ ರೇಗುತ್ತಾರೆಂಬ ಭಯವಿಲ್ಲದೇ ಪಾಲಕರೊಂದಿಗೆ ಮುಕ್ತವಾಗಿ ಬೆರೆಯುವ ಸ್ವಾತಂತ್ರ ಹದಿಹರೆಯದ ಮಕ್ಕಳಿಗೆ ಅಗತ್ಯವಾಗಿರುತ್ತದೆ. ಮೇಲ್ನೋಟಕ್ಕೆ ಅವಿವೇಕಿಗಳೆನಿಸುವ ಪಾಲಕರು ಕೂಡಾ ಮನಸ್ಸಿನಲ್ಲಿ ಮಕ್ಕಳ ಒಳಿತನ್ನೇ ಬಯಸುತ್ತಾರೆ. ಆದರೆ ಕೆಲವೊಮ್ಮೆ ಪಾಲಕರು ತಮ್ಮ ಮಗ ಅಥವಾ ಮಗಳಿಗೆ ಒಳ್ಳೆಯದು ಎಂದು ಭಾವಿಸುವ ಸಂಗತಿಗಳು ಮಕ್ಕಳಿಗೆ ರುಚಿಸದಿರಬಹುದು. ಅವರಲ್ಲಿ ಒಬ್ಬರು ತಪ್ಪಾಗಿರಬಹುದು ಅಥವಾ ಇಬ್ಬರೂ ಸರಿಯಿರಬಹುದು.

ನನಗೆ ತಿಳಿದಿರುವಂತೆ ಪಾಲಕರು ಮತ್ತು ಮಕ್ಕಳ ನಡುವೆ ವಿಭಿನ್ನ ಅಭಿಪ್ರಾಯಗಳನ್ನು ಉಂಟುಮಾಡುವ ಸಾಮಾನ್ಯ ಸಂಗತಿಗಳೆಂದರೆ:

  • ಮಕ್ಕಳ ಶೈಕ್ಷಣಿಕ ಪ್ರದರ್ಶನ ಮತ್ತು ಪಾಲಕರ ನಿರೀಕ್ಷೆಗಳು.
  • ಸಾಮಾಜಿಕ ಜಾಲತಾಣಗಳು/ ಇಂಟರ್ನೆಟ್ ನಲ್ಲಿ ಕಾಲಕಳೆಯುವಿಕೆ.
  • ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ಸಹ ಸ್ನೇಹಿತರ ಜೊತೆ ತಡರಾತ್ರಿ ಹೋಗುವುದು.
  • ಬಾಯ್ ಫ್ರೆಂಡ್/ಗರ್ಲ್ ಫ್ರೆಂಡ್ ಹೊಂದಿರುವುದು.
  • ಮದ್ಯ, ಧೂಮಪಾನ ಮತ್ತು ಮಾದಕ ವಸ್ತಗಳ ವ್ಯಸನ.
  • ಪಾಲಕರೆಡೆಗೆ ಋಣಾತ್ಮಕ ಮತ್ತು ಅವಿಧೇಯ ಮನೋಭಾವ.
  • ಮನೆಯ ನಿಯಮಗಳನ್ನು ಪಾಲಿಸದಿರುವುದು, ಉದಾ, ಪಿಜ್ಜಾದ ಖಾಲಿಯಾದ ಬಾಕ್ಸನ್ನು ಮಂಚದ ಕೆಳಗಡೆ ಇಡುವುದು ಇತ್ಯಾದಿ.
  • ವಾಸ್ತವಿಕವಾಗಿರುವ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಲಕ್ಷಣಗಳು.

ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪಾಲಕರು ಮತ್ತು ಮಕ್ಕಳ ನಡುವೆ ಬಾಲ್ಯದಿಂದಲೂ ಉತ್ತಮ ಬಾಂಧವ್ಯವಿರಬೇಕಾದದ್ದು ಅಗತ್ಯ. ಯಾವುದೇ ಸಂಬಂಧವು ದೃಢಗೊಳ್ಳಲು ವಿಶ್ವಾಸ ಮತ್ತು ಗೌರವ ಬಹು ಮುಖ್ಯ. ಅದರಲ್ಲಿ ವಿಶ್ವಾಸಕ್ಕೆ ಮೊದಲ ಸ್ಥಾನವಿದೆ. ಎಲ್ಲಾ ಚಿಕ್ಕ ಮಕ್ಕಳು ಪಾಲಕರನ್ನು ನಂಬುತ್ತಾರೆ. ಈ ವಿಶ್ವಾಸವನ್ನುಳಿಸಿ ಕೊಳ್ಳುವುದು ಪಾಲಕರ ಕರ್ತವ್ಯ. ಇದು ಶೈಶವದಲ್ಲಿ ಆರಂಭಿಸಿ ಬಾಲ್ಯ ಮತ್ತು ಹದಿಹರೆಯದಲ್ಲಿಯೂ ಮುಂದುವರೆಯುತ್ತದೆ. ಭಿನ್ನಾಭಿಪ್ರಾಯ ಮತ್ತು ವಾದವಿವಾದಗಳನ್ನು ಸಂಪೂರ್ಣ ತಪ್ಪಿಸಲಾಗದಿದ್ದರೂ, ಪರಸ್ಪರರೆಡೆಗಿನ ಗೌರವ ಸಂಬಂಧವನ್ನು ಹಿಡಿದಿಡಬಲ್ಲದು. ‘ನಾನು ಹೇಳದಂತೆ ಆಗಬೇಕು’ ಎನ್ನುವ ಬದಲು ಅಥವಾ ಸಿಡುಕುವುದರ ಬದಲಾಗಿ ಭಿನ್ನಾಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕ ಹಾಗೂ ತಾರ್ಕಿಕ ರೀತಿಯಲ್ಲಿ ಬಗೆಹರಿಸಿಕೊಂಡರೆ ಮಕ್ಕಳಿಗೆ ತಮ್ಮ ಪಾಲಕರು ಸಿಡುಕರಲ್ಲ ಎಂಬುದು ಅರಿವಾಗುತ್ತದೆ. ಹಾಗಿದ್ದಾಗ ಮೇಲ್ಕಾಣಿಸಿದ ಸಂದರ್ಭಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದಲ್ಲಿ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಆಗ ಮಕ್ಕಳು ತಮ್ಮ ಹಾಗೂ ಪಾಲಕರ ನಡುವೆ ಮಾತುಕತೆ ಮತ್ತು ಪರಿಹಾರಗಳು ಸಾಧ್ಯವಿದೆಯೆಂದು ನಂಬುತ್ತಾರೆ.

ಕೆಲವೊಮ್ಮೆ ಪಾಲಕರು ಮತ್ತು ಮಕ್ಕಳು ಇಬ್ಬರೂ ತಾರ್ಕಿಕವಾಗಿ ಯೋಚಿಸುತ್ತಿದ್ದಾಗ್ಯೂ ಪರಿಹಾರ ಸಾಧ್ಯವಾಗುತ್ತಿರುವುದಿಲ್ಲ. ಆಗ ಅವರು ಸಾಮಾನ್ಯವಾಗಿ ಮೂರನೇ ವ್ಯಕ್ತಿಯನ್ನು, ಸಂಬಂಧಿಕರನ್ನು ಅಥವಾ ಪಾಲಕರ ಸ್ನೇಹಿತರನ್ನು ಮಧ್ಯಸ್ಥಿಕೆ ವಹಿಸಲು ಕರೆಯುತ್ತಾರೆ. ಅದೂ ವಿಫಲವಾದರೆ ಮುಕ್ತ ಮಾತುಕತೆ ಹಾಗೂ ಪೂರ್ವಾಗ್ರಹವಿಲ್ಲದ ಸಲಹೆಗಾಗಿ ವೃತ್ತಿಪರ ಆಪ್ತಸಲಹೆಗಾರರನ್ನು ಭೇಟಿ ಮಾಡುವುದು ಒಳ್ಳೆಯದು. ಇದಕ್ಕೆ ಉದಾಹರಣೆಯಾಗಿ ಕಳೆದ ವರ್ಷ ನನ್ನ ಬಳಿ ಆಪ್ತಸಮಾಲೋಚನೆಗಾಗಿ ಪಾಲಕರು ಕರೆತಂದ 15 ವರ್ಷದ ಹುಡುಗಿಯ ವಿವರವನ್ನು ನೀಡಬಯಸುತ್ತೇನೆ. ಆಕೆಯು ಓದಿನಲ್ಲಿ ಕನಿಷ್ಟ ಗ್ರೇಡುಗಳನ್ನು ಪಡೆಯುತ್ತಿದ್ದಳು. ಮತ್ತು ಆಕೆಯ ಪಾಲಕರು ಆಕೆಯನ್ನು ಸೋಮಾರಿ ಮತ್ತು ಓದುವುದಿಲ್ಲ ಎಂದು ಭಾವಿಸಿದ್ದರು. ಆದರೆ ಆಕೆಗೆ ಅಟೆನ್ಶನ್ ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD), ಇರುವುದು ಕಂಡು ಬಂತು. ನಾವು ಚಿಕಿತ್ಸೆಯನ್ನು ಶುರು ಮಾಡಿದ ಮೇಲೆ ಆಕೆಯು ತನ್ನ ಐಸಿಎಸ್ ಸಿ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದಳು!

ಹದಿಹರೆಯದ ಮಕ್ಕಳು ಮೇಲ್ನೋಟಕ್ಕೆ ಕೆಟ್ಟ ನಡವಳಿಕೆಯನ್ನು ತೋರುವುದು ತಮ್ಮ ನೈಜ ಮಾನಸಿಕ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿಯಾಗಿರಬಹುದು. ಈ ಸಮಸ್ಯೆಯು ಗೋಚರವಾಗುವುದಿಲ್ಲವಾದ್ದರಿಂದ ಮೇಲ್ನೋಟಕ್ಕೆ ಕಾಣಿಸುವ ಅವರ ನಡವಳಿಕೆಯನ್ನಷ್ಟೇ ಪರಿಗಣಿಸಲಾಗುತ್ತದೆ. ಆತಂಕಗೊಂಡ ಮಕ್ಕಳು ಕೆಲವೊಮ್ಮೆ ಕುಡಿತ, ಧೂಮಪಾನ ಮುಂತಾದ ಚಟಗಳ ಮೊರೆ ಹೋಗಿರಬಹುದು. ಅದೇ ರೀತಿ ಮನೋವಿಕಾರಕ್ಕೆ ಒಳಗಾದ ಮಕ್ಕಳಿಗೆ ಗದರಿಕೆಯ ಧ್ವನಿ ಕೇಳುತ್ತಿರಬಹುದು ಅಥವಾ ಅವರು ತಮ್ಮ ಲ್ಯಾಪ್ ಟಾಪನ್ನು ಯಾರೋ ಹ್ಯಾಕ್ ಮಾಡಿದ್ದಾರೆಂದು ಭಾವಿಸಬಹುದು. ಇಂತಹ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ಕೆಲವೊಮ್ಮೆ “ಇವನಿಗೆ ಕಾಲೇಜಿನಲ್ಲಿ ಹಾಜರಾತಿ ಕಡಿಮೆಯಾಗಿದೆ” ಎನ್ನುವ ಅಥವಾ “ಈಕೆ ರಾತ್ರಿಯೆಲ್ಲಾ ಲ್ಯಾಪ್ ಟಾಪಿನ ಮುಂದೆ ಕೂತಿದ್ದು ಹಗಲೆಲ್ಲಾ ನಿದ್ದೆ ಮಾಡುತ್ತಾಳೆ” ಎಂಬ ದೂರಿನೊಂದಿಗೆ ನಮ್ಮಲ್ಲಿ ಕರೆತರುತ್ತಾರೆ. ಅವರಿಗೆ ತಮ್ಮ ಮಕ್ಕಳ ಮನಸ್ಸಿನಲ್ಲಿ ಆಗುತ್ತಿರುವ ತಾಕಲಾಟದ ಅರಿವಿರುವುದಿಲ್ಲ.

ಇಲ್ಲಿ ನಾನು ಹೇಳಲೇಬೇಕಾದ ಇನ್ನೊಂದು ಸಂಗತಿಯಿದೆ. ಕೆಲವು ಮಕ್ಕಳಿಗೆ ತಾವು ಮಾಡುವ ಕೆಲಸದಿಂದಾಗಬಹುದಾದ ಅಪಾಯ ಅಥವಾ ಪರಿಣಾಮಗಳ ಬಗ್ಗೆ ಯೋಚಿಸುವುದೇ ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳು ಹೋದಲ್ಲೆಲ್ಲಾ ತೊದರೆಯನ್ನು ಅನುಭವಿಸುತ್ತಾರೆ. ಅವರಿಗೆ ಬೇರೆಯವರು ಏನೆಂದುಕೊಳ್ಳುತ್ತಾರೆ ಎಂಬುದೇ ತಿಳಿಯುವುದಿಲ್ಲ ಮತ್ತು ಸಮಾಜ ಹಾಗೂ ಕುಟುಂಬ ತನ್ನಿಂದ ಏನು ನಿರೀಕ್ಷಿಸುತ್ತಿದೆ ಎಂಬ ತಿಳುವಳಿಕೆಯೇ ಇರುವುದಿಲ್ಲ. ಇದು ಸಂಪೂರ್ಣ ಬೇರೆಯದೇ ಸಮಸ್ಯೆಯಾಗಿದ್ದು ಈ ವಿಚಾರದಲ್ಲಿ ಮಕ್ಕಳಿಗೆ ಪಾಲಕರೊಂದಿಗಿರುವ ಅಥವಾ ಪಾಲಕರಿಗೆ ಮಕ್ಕಳೊಂದಿಗಿರುವ ಸಮಸ್ಯೆಯನ್ನು ಎಲ್ಲಾ ಬಾರಿ ಅಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ.

ಹಿರಿಯರು ಸಮಸ್ಯೆಯೆಂದು ಭಾವಿಸುವ ಹದಿಹರೆಯದವರ ನಡವಳಿಕೆಯ ಮೂಲವನ್ನು ಕಂಡುಹಿಡಿಯಲು ಬಹಳ ಸಹನೆ ಬೇಕಾಗುತ್ತದೆ. ಆಪ್ತಸಮಾಲೋಚಕರನ್ನು ಕಾಣುವುದು ಕಳಪೆ ಪಾಲನೆಯ ಲಕ್ಷಣವೆಂದು ಪರಿಗಣಿದಬೇಕಾಗಿಲ್ಲ. ಇದು ಜ್ವರದಿಂದ ಬಳಲುತ್ತಿರುವ ಮಗುವಿನ ಸೋಂಕನ್ನು ಪತ್ತೆಹಚ್ಚಲು ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದಷ್ಟೇ ಸಹಜಕ್ರಿಯೆಯಾಗಿರುತ್ತದೆ.

ಪಾಲಕರು ಮಕ್ಕಳ ಬಹುದೊಡ್ಡ ಆಧಾರವಾಗಿರುತ್ತಾರೆ ಮತ್ತು ಮಕ್ಕಳು ಪಾಲಕರ ಹರ್ಷಕ್ಕೆ ಕಾರಣವಾಗಿರುತ್ತಾರೆ. ಆದ್ದರಿಂದ ಹದಿಹರೆಯದ ಕ್ಲೇಶಗಳನ್ನು ತಡೆಯುವ ಗಟ್ಟಿ ಕಟ್ಟವಾಗಿ ಈ ಸಂಬಂಧವನ್ನು ಇಬ್ಬರೂ ಪವಿತ್ರವೆಂದು ಪರಿಗಣಿಸಿ ಅಮೂಲ್ಯವೆಂದು ರಕ್ಷಿಸಬೇಕು.

ಡಾ. ಶ್ಯಾಮಲಾ ವತ್ಸರವರು ಬೆಂಗಳೂರು ಮೂಲದ ಮನೋವೈದ್ಯರಾಗಿದ್ದು, ಸುಮಾರು 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹದಿಹರೆಯದವರ ಕುರಿತ ಈ ಅಂಕಣವು ಈ ಜಾಲತಾಣದಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ. ನಿಮಗೆ ಈ ಲೇಖನದ ಕುರಿತು ಯಾವುದೇ ಸಂದೇಹ ಅಥವಾ ಪ್ರತಿಕ್ರಿಯೆಗಳಿದ್ದರೆ columns@whiteswanfoundation.org ಈ ವಿಳಾಸಕ್ಕೆ ಬರೆಯಿರಿ.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org