ಯುವಜನರಲ್ಲಿ ಸಾಮಾಜಿಕ ಆತಂಕ

ಸಾಮಾಜಿಕ ಆತಂಕವನ್ನು ಸಂಕೋಚವೆಂದು ತಪ್ಪು ಭಾವಿಸುವುದುಂಟು.

ಸ್ವಲ್ಪ ಮಟ್ಟದ ಒತ್ತಡ, ಆತಂಕಗಳು ಸ್ವಾಭಾವಿಕ. ದಿಢೀರ್ ಪ್ರಶ್ನೆಗಳು, ಹೊಸ ಸವಾಲುಗಳು, ಸಭೆ-ಸಮಾರಂಭಗಳಿಗೆ ತೆರೆದುಕೊಂಡಾಗ ಒಂದಷ್ಟು ಹೊತ್ತು ಅನುಭವವಾಗಿ ನಂತರ ಕಣ್ಮರೆಯಾಗುವ ಆತಂಕ ಸಹಜವಾದುದು. ಆದರೆ ಸಾಮಾಜಿಕ ಆತಂಕದ ಸಮಸ್ಯೆ ಸಹಜವಾದ ಆತಂಕವಲ್ಲ. ಅದು ದಿನನಿತ್ಯದ ದಿಗಿಲು, ಮುಜುಗರಗಳಂತಲ್ಲ. ಸಂದರ್ಭಕ್ಕೆ ಅಗತ್ಯವಿರುವುದಕ್ಕಿಂತ ತೀರಾ ವಿಪರೀತವಾದ, ತನ್ನನ್ನು ತಾನು ನಿರ್ವಹಿಸಿಕೊಳ್ಳಲಾರದಷ್ಟು ತೀವ್ರವಾದ, ಸಾಮಾಜಿಕ ಸಂದರ್ಭಗಳಿಂದಲೇ ವಿಮುಖಗೊಳಿಸುವಷ್ಟು ಅತಿಯಾದ ತಲ್ಲಣವನ್ನುಂಟುಮಾಡುವ ಮನೋವ್ಯಾಧಿಯದು!

ಯುವ ಜನತೆಯ ಆತ್ಮವಿಶ್ವಾಸ, ಆತ್ಮಗೌರವದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಈ ತೀವ್ರ ಸಾಮಾಜಿಕ ಆತಂಕದ ಸಮಸ್ಯೆ ಸ್ನೇಹ-ಸಂಬಂಧಗಳು, ವಿದ್ಯಾಭ್ಯಾಸ, ವ್ಯಕ್ತಿತ್ವ, ವೃತ್ತಿಜೀವನದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

ಆತಂಕವೇ ಸಮಸ್ಯೆ!: ರಂಜಿತ್ 23ರ ಯುವಕ. ಪದವಿ ಓದಿಕೊಂಡಿದ್ದಾನೆ. ಅವನಿಗೆ ಕೆಲಸದ್ದೇ ಸಮಸ್ಯೆ. ಪದವಿ ಮುಗಿದು ಎರಡು ವರ್ಷವಾದರೂ ಆತ ಎದುರಿಸಿದ ಸಂದರ್ಶನ ಒಂದು ಮಾತ್ರ. ಅದರಲ್ಲೂ ಸರಿಯಾಗಿ ಉತ್ತರಿಸಲಾಗದೇ, ತನ್ನನ್ನು ತಾನು ನಿರ್ವಹಿಸಲಾಗದೇ ಒದ್ದಾಡಿದ್ದಾನೆ. ಆ ಕೆಟ್ಟ ಅನುಭವದ ನಂತರ ಸಂದರ್ಶನವೆಂದರೆ ವಿಪರೀತ ಭಯ ಕಾಡತೊಡಗಿದೆ. ರಂಜಿತ್ ತಾನು ಬಾಲ್ಯದಿಂದಲೂ ತೀರಾ ನಾಚಿಕೆ ಸ್ವಭಾವ ಹೊಂದಿದವನೆಂದು, ಜನರೆಂದರೆ ದಿಗಿಲುಗೊಳ್ಳುತ್ತಿದ್ದನೆಂದು ಹೇಳಿಕೊಳ್ಳುತ್ತಾನೆ. ಆಟ-ಚುವಟಿಕೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾನೆ.

ಎಲ್ಲರ ಮುಂದೆ ಮಾತನಾಡುವ, ಆಡುವ, ಪ್ರಶ್ನಿಸುವ ಸಂದರ್ಭಗಳನ್ನು ಬಾಲ್ಯದಿಂದಲೂ ತಪ್ಪಿಸಿಕೊಂಡೇ ಬಂದಿದ್ದಾನೆ. ಮೊದಲಿನಿಂದಲೂ ಎಲ್ಲಾ ಕೆಲಸಗಳಲ್ಲೂ ಅವನ ಪೋಷಕರೇ ಮುಂದಾಳತ್ವ ವಹಿಸುತ್ತಾ ಬಂದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಆತನಿಗೆ ಸಮಾರಂಭಗಳು, ಜನರೊಡನೆ ಮಾತನಾಡುವ ಸಂದರ್ಭಗಳು ಆತಂಕ ಹುಟ್ಟಿಸುತ್ತಿವೆ. ಜೊತೆಗೆ ಎಲ್ಲಿ ತನ್ನ ಆತಂಕ ಗೊತ್ತಾಗಿಬಿಡುವುದೋ, ತಾನು ಅಸಮರ್ಥನೆಂದು ಭಾವಿಸಿಬಿಡುವರೋ ಎಂಬ ಆತಂಕದಿಂದ ಸಂದರ್ಶನಗಳಿಗೆ ಹೋಗಲಾಗುತ್ತಿಲ್ಲ, ಕೆಲಸಕ್ಕೆ ಸಂಬಂಧಿಸಿದ ಪ್ರೆಸೆಂಟೇಶನ್, ಗ್ರೂಪ್ ಡಿಸ್ಕಶನ್‍ಗಳ ಭಯ ಕಾಡುತ್ತಿದೆ. ತನ್ನ ಭವಿಷ್ಯದ ಬಗ್ಗೆ ತೀವ್ರ ಆತಂಕಕ್ಕೊಳಗಾಗಿದ್ದಾನೆ.

ನೀವು ಸಮಸ್ಯೆಗೊಳಗಾಗಿದ್ದೀರಾ?

ಸಾಮಾಜಿಕ ಆತಂಕವನ್ನು ಸಂಕೋಚವೆಂದು ತಪ್ಪು ಭಾವಿಸುವುದುಂಟು. ಸಂಕೋಚದ ಸ್ವಭಾವವಿರುವ ವ್ಯಕ್ತಿಯಲ್ಲಿ ಸಾಮಾಜಿಕ ಆತಂಕ ಇರಬಹುದು ಅಥವಾ ಇಲ್ಲದಿರಬಹುದು. ಸಾಮಾಜಿಕ ಆತಂಕದ ಸಮಸ್ಯೆಯಿದ್ದಾಗ ಸಂಕೋಚ ಅದರ ಒಂದು ಅಂಶವಾಗಿ ಅನುಭವವಾಗುತ್ತಿರಬಹುದು. ಸಂಕೋಚವೋ, ಸಾಮಾಜಿಕ ಆತಂಕವೋ ಗುರುತಿಸುವುದು ಮುಖ್ಯ!

ಸಾಮಾಜಿಕ ಆತಂಕದಿಂದ ಜರ್ಝರಿತನಾದ ವ್ಯಕ್ತಿ ಹೊರಗಿನ ಮುಜುಗರ, ಅವಮಾನದ ಭಯದಿಂದ ಸಾಮಾಜಿಕ ತೊಡಗುವಿಕೆ, ಪ್ರದರ್ಶನವನ್ನು ಬೇಡುವ ಸನ್ನಿವೇಶದಿಂದ ತಪ್ಪಿಸಿಕೊಳ್ಳುತ್ತಾನೆ. ತನಗೆ ಆಗುತ್ತಿರುವ ಆತಂಕ ಅಗತ್ಯಕ್ಕಿಂತ ವಿಪರೀತವಾದದ್ದು ಎಂದು ತಿಳಿದರೂ ಅದನ್ನು ಹತ್ತಿಕ್ಕುವಲ್ಲಿ ಅಸಹಾಯಕನಾಗಿರುತ್ತಾನೆ. ಆತಂಕದ ಸಮಸ್ಯೆ ದೈಹಿಕ ಹಾಗೂ ಮಾನಸಿಕ ಎರಡೂ ರೀತಿಯಲ್ಲಿ ವ್ಯಕ್ತವಾಗುತ್ತದೆ. ಇದು ದಿನಚರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಬದುಕನ್ನು ಏರುಪೇರಾಗಿಸುತ್ತದೆ.

 ಆತಂಕ ಸಮಸ್ಯೆಯಿದ್ದರೆ ಕಾಣಿಸಿಕೊಳ್ಳುವ ಭಾವನಾತ್ಮಕ - ವರ್ತನೆಯ ಲಕ್ಷಣಗಳು ಈ ರೀತಿಯಿರುತ್ತವೆ:

 • ಸಾಮಾಜಿಕ ಸನ್ನಿವೇಶದಲ್ಲಿ ಅವಮಾನಕ್ಕೀಡಾಗಬಹುದೆಂಬ ಭಯ. ಮುಜುಗರವಾಗುವ ರೀತಿಯಲ್ಲಿ ತಾನು ವರ್ತಿಸಿಬಿಟ್ಟರೆ? ಇತರರು ತನ್ನ ಬಗ್ಗೆ ಏನೆಂದುಕೊಂಡಾರು ಎಂಬ ಆತಂಕ
 • ಅಪರಿಚಿತ ವ್ಯಕ್ತಿಗಳು, ಸ್ಥಳ, ಸನ್ನಿವೇಶದ ಭಯ. ಭಯವಾಗುವ ಸನ್ನಿವೇಶ/ಚಟುವಟಿಕೆಗಳ ನಿರೀಕ್ಷೆಯೂ ಆತಂಕ ಹುಟ್ಟಿಸುತ್ತದೆ.
 • ತಾನು ಆತಂಕಗೊಂಡಿದ್ದೇನೆ ಎಂಬುದು ಬೇರೆಯವರಿಗೆ ಗೊತ್ತಾಗಿಬಿಟ್ಟರೆ ಎಂಬ ಭಯ. ದೈಹಿಕ ಲಕ್ಷಣಗಳಾದ ಬೆವರುವುದು, ನಡುಕ ಮುಂತಾದವುಗಳಿಂದ ಎಲ್ಲಿ ಅಪಮಾನಕ್ಕೊಳಗಾಗುತ್ತೇನೋ ಎನ್ನುವ ಆತಂಕ
 • ಜನರೊಡನೆ ಬೆರೆಯುವುದು, ಆತಂಕವಾಗುವ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳುವುದು

ದೈಹಿಕ ಲಕ್ಷಣಗಳು: ಜೋರಾದ ಎದೆಬಡಿತ, ಹೊಟ್ಟೆಯಲ್ಲಿ ಸಂಕಟ, ನಡುಕ, ಕಷ್ಟಕರ ಉಸಿರಾಟ, ತಲೆತಿರುಗು ಮೊದಲಾದವು ಆತಂಕ ಹುಟ್ಟಿಸುವ ಆಲೋಚನೆಗಳು: ನನ್ನನ್ಯಾರೂ ಇಷ್ಟಪಡುವುದಿಲ್ಲ, ನನ್ನ ಆತಂಕ ಜನರಿಗೆ ಗೊತ್ತಾಗಬಲ್ಲದು, ಮೊದಲಾದವು.

ಯುವಜನರಲ್ಲಿ ಸಾಮಾನ್ಯವಾಗಿ ಗುರುತಿಸಬಹುದಾದ ಲಕ್ಷಣಗಳು: 

 • ಎಲ್ಲರೆದುರು ಮಾತನಾಡಲು, ತಿನ್ನಲು ಹಿಂಜರಿಕೆ
 • ಮಾತನಾಡುವಾಗ ಕಣ್ಣುತಪ್ಪಿಸವುದು, ತಪ್ಪು ಮಾಡುವ ಭಯ
 • ಕೆಲಸ, ಶಾಪಿಂಗ್, ಸಭೆ-ಸಮಾರಂಭದಿಂದ ತಪ್ಪಿಸಿಕೊಳ್ಳುವುದು
 • ಸ್ನೇಹ-ಸಂಬಂಧಗಳಿಂದ ವಿಮುಖತೆ
 • ಹಿರಿಯರು, ಅಧಿಕಾರದಲ್ಲಿರುವವರೊಡನೆ ಮಾತನಾಡಲು ಹಿಂಜರಿಕೆ

ಕಾರಣಗಳು: ಅನುವಂಶೀಯತೆ, ಹಿಂದಿನ ಕಹಿ ಅನುಭವಗಳು, ಬಾಲ್ಯದಲ್ಲಾದ ಕಲಿಕೆ, ಋಣಾತ್ಮಕ ಆಲೋಚನಾ ಕ್ರಮ ಮೊದಲಾದವು ಸಮಾಜಿಕ ಆತಂಕ ಮೊಳೆಯಲು ಪ್ರಮುಖ ಕಾರಣಗಳು

ಸಾಮಾಜಿಕ ಆತಂಕ ಸಮಸ್ಯೆ ಮತ್ತು ಯುವಜನತೆ:

 ಸಾಮಾಜಿಕ ಆತಂಕ ಸಮಸ್ಯೆ ಯುವಜನತೆಯಲ್ಲಿ ಒಂಟಿತನ, ಖಿನ್ನತೆ, ಮಾದಕ ವಸ್ತುಗಳ ಸೇವನೆ ಮೊದಲಾದ ತೀವ್ರ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಆತಂಕದ ತೀವ್ರತೆಯನ್ನು ಕಡಿಮೆ ಮಾಡಲು ಯುವಜನ ಮಾದಕ ದ್ರವ್ಯದ ಮೊರೆ ಹೋಗುವುದು ಆತಂಕಕಾರಿ. ಸಾಮಾಜಿಕ ಆತಂಕವನ್ನು ಬಹಳ ಮೊದಲೇ ಗುರುತಿಸುವುದು ಅಗತ್ಯ. ಸಾಮಾನ್ಯವಾಗಿ ಹದಿಹರೆಯದಲ್ಲಿ ಸಮಸ್ಯೆ ಕಾಣಿಸಬಹುದಾದರೂ 3-4  ವಯಸ್ಸಿನಿಂದಲೇ ಆತಂಕದ ಲಕ್ಷಣಗಳನ್ನು ಗುರುತಿಸಬಹುದಾಗಿರುತ್ತದೆ.

ಆತಂಕ ಸಮಸ್ಯೆಯಿರುವ ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ-ಪಾಟಗಳಿಂದ, ಪಠ್ಯೇತರ ಚುವಟಿಕೆಗಳಿಂದ ಹಿಂದೆ ಸರಿಯುತ್ತಾ ಅವಕಾಶವಂಚಿತರಾಗುತ್ತಾರೆ. ಬೆಳೆದಂತೆ, ಸಾಮರ್ಥ್ಯವಿದ್ದರೂ ಜನರೊಡನೆ ವ್ಯವಹರಿಸಬೇಕಾದ ಕ್ಷೇತ್ರಗಳಿಂದ (ಉದಾ: ಡಾಕ್ಟರ್, ಲಾಯರ್, ಲೆಕ್ಚರರ್) ದೂರ ಸರಿಯುವುದರಿಂದ ತಮ್ಮ ಯೋಗ್ಯತೆಗೆ ತಕ್ಕ ಜೀವನವನ್ನು ಆರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ, ಹೆಚ್ಚಿನ ಸಂಪರ್ಕ ಬೇಡುವ ಜವಾಬ್ದಾರಿಗಳಿಂದ ದೂರವಿರುತ್ತಾರೆ, ಪ್ರಮೋಷನ್‍ಗಳು-ವೃತ್ತಿ ಜೀವನದ ಯಶಸ್ಸಿನಿಂದ ವಂಚಿತರಾಗುತ್ತಾರೆ. ಹೊಸ ಪರಿಚಯಗಳು, ಅರ್ಥಪೂರ್ಣ ಸಂಬಂಧಗಳನ್ನು ಹೊಂದುವಲ್ಲಿ ಸೋಲುತ್ತಾರೆ, ಜೀವನ ಸಂಗಾತಿಯ ಆಯ್ಕೆ ಮಾಡಿಕೊಳ್ಳಬೇಕಾದಾಗ ತೊಂದರೆಗೊಳಗಾಗುತ್ತಾರೆ.

ಚಿಕಿತ್ಸಾ ಮಾರ್ಗಗಳು:

ಸಾಮಾಜಿಕ ಆತಂಕ ಗುಣಪಡಿಸಬಹುದಾದ ಸಮಸ್ಯೆ. ಅಗತ್ಯವಾದ ಚಿಕಿತ್ಸಾಕ್ರಮದ ಪಾಲನೆಯಿಂದ ಚೇತರಿಕೆ ಸಾಧ್ಯ. ಸಾಮಾಜಿಕ ಕೌಶಲಗಳ ಕಲಿಯುವಿಕೆ ಸಹಾಯಕಾರಿ. ಸೈಕೋಥೆರಪಿ(ಟಾಕ್‍ಥೆರಪಿ)ಗಳಲ್ಲಿ ಕಾಗ್ನಿಟಿವ್ ಬಿಹೇವಿಯರ್ ಥೆರಪಿ (ಸಿಬಿಟಿ) ಪರಿಣಾಮಕಾರಿ ಚಿಕಿತ್ಸೆಯಾಗಿದೆ. ತೀವ್ರ ಸಮಸ್ಯೆಯಿದ್ದರೆ ವೈದ್ಯಕೀಯ ನೆರವು ಅವಶ್ಯಕ. 

ಪ್ರೀತಿಪಾತ್ರರಲ್ಲಿ ಸಾಮಾಜಿಕ ಆತಂಕವಿದ್ದಾಗ:

 • ಸಮಸ್ಯೆಗೆ ಮಾನಸಿಕ ತಜ್ಞರ ಸಹಾಯ ಪಡೆಯುವಂತೆ ಪ್ರೇರೇಪಿಸಿ
 • ಸಮಸ್ಯೆಯನ್ನು ಆಲಿಸಿ. ಕ್ಷುಲ್ಲಕವೆನಿಸಿದರೂ ಅವರ ನೋವು, ಕಷ್ಟಗಳನ್ನು ಕೇಳಿಸಿಕೊಳ್ಳಿ. ಆದರೆ ಋಣಾತ್ಮಕ ಆಲೋಚನೆಗಳನ್ನು ಉತ್ತೇಜಿಸದಿರಿ
 • ಒಳ್ಳೆಯ, ಪೂರಕ ವರ್ತನೆಗಳನ್ನು ಪ್ರದರ್ಶಿಸಿದಾಗ ಪ್ರಶಂಸಿಸಿ, ಸಕಾರಾತ್ಮಕ ಮಾತುಗಳನ್ನಾಡಿ.
 • ಆತಂಕದ ಪ್ರತಿಕ್ರಿಯೆಗಳನ್ನು ಉತ್ತೇಜಿಸದಿರಿ. ಹಾಗೇ ಆತಂಕದ ಸಂದರ್ಭಗಳಿಂದ ರಕ್ಷಿಸಲು ತೊಡಗದಿರಿ. ನೀವು ತೋರುವ ಕಾಳಜಿಯೇ ಸಮಸ್ಯೆಯನ್ನು ಮತ್ತಷ್ಟು ಪುಷ್ಠೀಕರಿಸಿಬಿಡಬಹುದು.

ನೀವು ಮಾಡಬಹುದಾದ್ದು:

ತೀವ್ರವಾದ ಸಾಮಾಜಿಕ ಆತಂಕದಿಂದ ನೀವು ಬಾಧಿತರಾಗಿದ್ದರೆ ತಜ್ಞರ ಸಹಾಯ ಪಡೆಯಲು ಹಿಂಜರಿಯದಿರಿ. ಅದರೊಟ್ಟಿಗೆ ನೀವೂ ಅಳವಡಿಸಿಕೊಳ್ಳಬಹುದಾದ ಕ್ರಮಗಳು ಇಲ್ಲಿವೆ:

 • ಯಾವ ಸನ್ನಿವೇಶದಿಂದ ತಪ್ಪಿಸಿಕೊಳ್ಳುತ್ತಿದ್ದೀರಿ ಪರೀಕ್ಷಿಸಿ. ತಪ್ಪಿಸಿಕೊಂಡಾಗ ಆತಂಕ ಆ ಕ್ಷಣ ಕಡಿಮೆಯಾದಂತೆನಿಸಿರೂ ಅದೇ ಆತಂಕವನ್ನು ಮತ್ತಷ್ಟು ಉತ್ತೇಜಿಸುವುದು ಎಂದು ಅರಿಯಿರಿ. ತಪ್ಪಿಸಿಕೊಳ್ಳುವುದರಿಂದ ಎಲ್ಲರೊಡನೆ ಬೆರೆತು ಆತಂಕವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶದಿಂದ ವಂಚಿತರಾಗುತ್ತಿರುವಿರಿ ಎಂಬುದು ನೆನಪಿರಲಿ.
 • ನಿಮ್ಮ ಆತಂಕಗಳು ನಿಜವೇ ಎಂದು ಪರಿಶೀಲಿಸಿ ನೋಡಿ. ಉದಾ: ನಾನೆಂದರೆ ಇಷ್ಟವಿಲ್ಲ ಅದಕ್ಕೇ ಮಾತನಾಡುತ್ತಿಲ್ಲ ಎಂದು ಆತಂಕಿಸುವ ಮೊದಲು ಆ ವ್ಯಕ್ತಿ ತನ್ನ ಕೆಲಸದಲ್ಲಿ ನಿರತವಾಗಿರುವುದರಿಂದ ಮಾತನಾಡಲು ಅಸಾಧ್ಯವಾಗಿರಬಹುದೇ ಪರೀಶೀಲಿಸಿ.
 • ನಿಮ್ಮಲ್ಲಿ ಅತ್ಯಂತ ಆತಂಕ ಉಂಟು ಮಾಡುವುದರಿಂದ ಹಿಡಿದು ಅತಿ ಕಡಿಮೆ ಆತಂಕವಾಗುವ ಸರಳ ವಿಚಾರದವರೆಗೆ ಎಲ್ಲವನ್ನು ಪಟ್ಟಿ ಮಾಡಿ. ಯಾವುದು ಸುಲಭ ಸಾಧ್ಯವೋ ಅದನ್ನು ಮೊದಲು ಮಾಡಿ ನಂತರ ಕಷ್ಟದ ವಿಚಾರಗಳಿಗೆ ತೊಡಗಿಸಿಕೊಳ್ಳುತ್ತಾ ಬನ್ನಿ. ಒಂದೊಂದು ಪುಟ್ಟ ಭಯವನ್ನು ಎದುರಿಸಿದಾಗಲೂ ನಿಮ್ಮನ್ನು ನೀವೇ ಅಭಿನಂದಿಸಿ, ಪ್ರೋತ್ಸಾಹಿಸಿಕೊಳ್ಳಿ!
 • ಜನರನ್ನು ಭೇಟಿಯಾದಾಗ ನಿಮ್ಮ ವರ್ತನೆಯ ಬಗ್ಗೆಯೇ ನೀವು ಯೋಚಿಸುವುದು ಬಿಟ್ಟು ಎದುರಿನ ವ್ಯಕ್ತಿ, ಸಂಭಾಷಣೆ, ಸುತ್ತಲಿನ ವಾತಾವರಣದ ಮೇಲೆ ಗಮನವಿಡಿ.
 • ಋಣಾತ್ಮಕ ಆಲೋಚನೆಗಳನ್ನು ಸುಮ್ಮನೆ ಒಪ್ಪದೇ ಪ್ರಶ್ನಿಸಿ. ಆಲೋಚನೆ ಸರಿಯಾದುದೇ ಎಂದು ವಿಮರ್ಶಿಸಿ ಉದಾ: ‘ನಾನು ಗೆಲ್ಲವುದಿಲ್ಲ’ ಎನಿಸಿದರೆ ಗೆಲ್ಲಲಾರೆ ಎನಿಸಲು ಕಾರಣವೇನು? ಒಮ್ಮೆ ಗೆಲ್ಲದಿದ್ದರೆ ಯಾವಾಗಲೂ ಸೋಲುತ್ತೇನೆ ಎಂದೇ? ಪ್ರಶ್ನಿಸಿ ವಿಮರ್ಶಿಸಿ!
 • ಸ್ಮಾರ್ಟ್ ಫೋನು, ಕಂಪ್ಯೂಟರ್‍ಗಳನ್ನು ಅತಿಯಾಗಿ ಬಳಸುತ್ತಿರುವಿರಾ? ನಿಜವಾದ ವ್ಯಕ್ತಿ/ಸಂದರ್ಭ ಎದುರಿಸಲಾಗದ ಆತಂಕವೇ ಕಾರಣವಿದ್ದಿರಬಹುದೇ ನೋಡಿರಿ. ನೈಜ ಸಂದರ್ಭ, ನಿಜ ವ್ಯಕ್ತಿಗಳ ಭೇಟಿಗೆ ಪ್ರಾಶಸ್ತ್ಯ ಕೊಡಿ.
 • ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ. ಒಳ್ಳೆಯ ನಿದ್ರೆ-ಆಹಾರ-ವ್ಯಾಯಾಮಗಳುಳ್ಳ ದಿನಚರಿ ಸಮಸ್ಯೆಯನ್ನು ತಹಬದಿಗೆ ತರಬಲ್ಲದು.
 • ಆತಂಕ ನಿವಾರಣೆಗೆ ಮಾದಕ ವಸ್ತುಗಳ ಮೊರೆ ಹೋಗದಿರಿ. ಅವು ಹೊಸ ಸಮಸ್ಯೆಗಳನ್ನು ಸೃಷ್ಠಿಸುವವೇ ವಿನಃ ಪರಿಹರಿಸುವುದಿಲ್ಲ.
 • ನಿಮ್ಮೂರಿನಲ್ಲಿ ಸಾಮಾಜಿಕ ಆತಂಕಕ್ಕೆ ಸಂಬಂಧಿಸಿದ ಸಪೋರ್ಟ್ ಗುಂಪುಗಳಿಗೆ ಸದಸ್ಯರಾಗಿ ಬೆಂಬಲ ಪಡೆಯಿರಿ.
 • ಆತಂಕವಾದಾಗ ನಿಮ್ಮ ಉಸಿರಾಟವನ್ನು ಆದಷ್ಟು ದೀರ್ಘ ಮತ್ತು ಆಳವಾಗಿಸಿ ರಿಲ್ಯಾಕ್ಸ್ ಆಗಿ. ಹಾಗೇ ಮನಸ್ಸಿಗೆ ಹಿತಕೊಡುವ ಯಾವುದಾದರೂ ಚಟುವಟಿಕೆಯನ್ನು ದಿನಚರಿಯಲ್ಲಿರಿಸಿ.        

Related Stories

No stories found.