ಹದಿಹರೆಯದವರಲ್ಲಿನ ಆತ್ಮಹತ್ಯೆಯನ್ನು ತಡೆಗಟ್ಟಬಹುದು

ನಮ್ಮಲ್ಲಿ ಹದಿಹರೆಯದವರಲ್ಲಿನ ಹೆಚ್ಚಿನ ಆತ್ಮಹತ್ಯೆಗಳು ಹಠಾತ್ತಾಗಿರುತ್ತವೆ ಮತ್ತು ಇದನ್ನು ಜೀವನ ಕೌಶಲ್ಯ ತರಬೇತಿಯೊಂದಿಗೆ ತಡೆಗಟ್ಟಬಹುದು.

ಪ್ರತಿನಿತ್ಯ, ನಾವು ದಿನಪತ್ರಿಕೆಯಲ್ಲಿ ಅಥವಾ ಸುದ್ದಿವಾಹಿನಿಗಳಲ್ಲಿ ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಓದುತ್ತೇವೆ ಅಥವಾ ಕೇಳುತ್ತೇವೆ. ಮನೋರೋಗ ತಜ್ಞರಾಗಿ ನಾವು ಕೂಡ ಇಂಥ ಕೆಲ ಪ್ರಕರಣಗಳ ಕುರಿತು ಕೇಳುತ್ತೇವೆ.

ಮಹೇಶ್‌, ೧೦ನೇ ತರಗತಿಯಲ್ಲಿ ಓದುತ್ತಿದ್ದ ೧೬ರ ಹರೆಯದ ಹುಡುಗ. ಓರ್ವ ಹುಡುಗಿಯನ್ನು ಪ್ರೀತಿಸಿದ್ದ. ಆದರೆ ಅವಳು ಈತನನ್ನು ತಿರಸ್ಕರಿಸಿ ಬೇರೆಯವನೊಂದಿಗೆ ಸ್ನೇಹ ಹೊಂದಿದ್ದಳು. ಇದನ್ನು ಮನಸ್ಸಿಗೆ ಹಚ್ಚಿಕೊಂಡ ಮಹೇಶ್‌ ತನ್ನ ಪಾಲಕರಿಗೆ ಒಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ.

ಮತ್ತೊಂದು ಪ್ರಕರಣದಲ್ಲಿ ೧೫ರ ಹರೆಯದ ಜಾನ್ವಿ, ತನ್ನ ಸ್ನೇಹಿತೆ ನಿಶಾ ಬಳಿ ೧೦ನೇ ತರಗತಿ ಅಂತಿಮ ಪರೀಕ್ಷೆಯ ಫಲಿತಾಂಶ ನೋಡಲು ಹೇಳಿದ್ದಳು. ತಾನು ಇಂಗ್ಲಿಷ್‌ನಲ್ಲಿ ಫೇಲಾಗಿದ್ದನ್ನು ಕೇಳಿ ಬೇಸರಗೊಂಡ ಜಾನ್ವಿ, ತನ್ನ ಪಾಲಕರಿಗೆ ಹೇಳದೆ, ಫಲಿತಾಂಶವನ್ನು ಖಚಿತಪಡಿಸಿಕೊಳ್ಳದೆ ಆತ್ಮಹತ್ಯೆ ಮಾಡಿಕೊಂಡಳು.

ಮತ್ತೊಂದು ಪ್ರಕರಣದಲ್ಲಿ ೧೮ ವರ್ಷದ ಪ್ರಜ್ಞಾಗೆ ತನ್ನ ಕೌಟಂಬಿಕ ಸಮಸ್ಯೆಯೆ ಮುಳುವಾಯ್ತು. ಪ್ರಜ್ಞಾಳ ತಂದೆ ಕುಡಿದು ಬಂದು ಮನೆಯಲ್ಲಿ ಆಕೆಯ ತಾಯಿಯೊಡನೆ ಗಲಾಟೆ ಮಾಡುತ್ತಿದ್ದ, ಹೊಡೆಯುತ್ತಿದ್ದ. ಪಾಲಕರ ವೈವಾಹಿಕ ಸಮಸ್ಯೆ ಪ್ರಜ್ಞಾಳ ಮೇಲೆ ಪರಿಣಾಮ ಬೀರಿತ್ತು. ಆಕೆಗೆ ಅಧ್ಯಯನದಲ್ಲಿ ಗಮನಹರಿಸಲು, ಇತರ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿನ ಗಲಾಟೆಗಳು ಆಕೆಯ ಗಮನವನ್ನು ಬೇರೆಡೆಗೆ ಎಳೆಯುತ್ತಿತ್ತು. ಈ ವಿಚಾರಗಳನ್ನು ಬೇರೆಯವರೊಂದಿಗೆ ಚರ್ಚಿಸದೆ ಪ್ರಜ್ಞಾ ಆತ್ಮಹತ್ಯೆಗೆ ಶರಣಾದಳು.

ಹರೆಯದವರು ಮತ್ತು ಅವರ ಭಾವನಾತ್ಮಕ ಸ್ಥಿತಿ:

ಹರೆಯದವರಲ್ಲಿ ಉತ್ಸಾಹ ಜಾಸ್ತಿ, ಬಲ ಹೆಚ್ಚು ಹಾಗೂ ಅತಿಯಾದ ಭಾವುಕತೆ. ಹೀಗಾಗಿ ಅವರು ಚಿಂತನೆಗೆ ತಮ್ಮದೆ ಆದ ದಾರಿ ಹೊಂದಿರುತ್ತಾರೆ. ಈ ಕಾರಣದಿಂದಾಗಿ ಸೋಲು, ನಿರಾಸೆ, ಒತ್ತಡ ಅಥವಾ ಬೇರೆ ಯಾವುದೇ ಬಗೆಯ ತೊಂದರೆಯಾದರೆ ಆ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗುತ್ತಾರೆ. ಈ ವೇಳೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಬೇರೆಯವರ ಸಹಾಯ ಎದುರು ನೋಡುವ ಬದಲು ಮಾದಕ ವಸ್ತು ಸೇವನೆ ಅಥವಾ ಆತ್ಮಹತ್ಯೆಯ ಮಾಡಿಕೊಳ್ಳುತ್ತಾರೆ.

ಹರೆಯದವರ ಆತ್ಮಹತ್ಯೆ ಯಾವುದೇ ಯೋಚನೆಯಿಲ್ಲದೆ ಹಠಾತ್ತಾಗಿ ಸಂಭವಿಸುತ್ತದೆ. ಸಂಕಷ್ಟದ ಸಮಯದಲ್ಲಿ ಬೇರೆಯವರ ಸಹಾಯ ಕೇಳುವುದು ದುರ್ಬಲತೆ ಎಂದು ಅವರು ತಪ್ಪಾಗಿ ಭಾವಿಸಿರುತ್ತಾರೆ. ಆದರೆ ಹರೆಯದವರಿಗೆ ಸಂಕಷ್ಟದ ಸಮಯದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಸಲಹೆ ಹಾಗು ಭಾವನಾತ್ಮಕ ಬೆಂಬಲ ನೀಡಿ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಬಲ್ಲರು ಎಂದು ಮನವರಿಕೆ ಮಾಡಿಕೊಡುವ ಅಗತ್ಯವಿದೆ.

 ವಾಸ್ತವಗಳು:

ಇಂದು ವಿಶ್ವದಾದ್ಯಂತದ ಹರೆಯದವರ ಸಾವಿಗೆ ಅತ್ಯಂತ ಪ್ರಮುಖ ಕಾರಣ ಆತ್ಮಹತ್ಯೆ ಮತ್ತು ಕಳೆದ ಕೆಲ ವರ್ಷಗಳಲ್ಲಿ ಹರೆಯದವರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೆಚ್ಚಾಗುತ್ತಿದೆ ಎಂದು ಸಾಕ್ಷ್ಯಾಧಾರಗಳು ತಿಳಿಸುತ್ತವೆ. ವೈಯಕ್ತಿಕ, ಕೌಟಂಬಿಕ, ಶಾಲೆ ಮತ್ತು ಮಾನಸಿಕ ಸೇರಿದಂತೆ ಬಹು ಅಂಶಗಳಿಂದ ಆತ್ಮಹತ್ಯೆ ಸಂಭವಿಸುತ್ತಿದೆ ಎಂಬುದು ಗಮನಿಸಬೇಕಾದ ಅಂಶ.  ವರ್ಷದಲ್ಲಿ ೭೧,೦೦೦ ಹರೆಯದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆ ಕಚೇರಿಯ (ಎನ್‌ಸಿಆರ್‌ಬಿ) ದಾಖಲೆಗಳ ಪ್ರಕಾರ ಭಾರತದಲ್ಲಿ ೧೦೦ರಲ್ಲಿ ೩೪ ಮಂದಿ ೧೫-೨೯ ವರ್ಷದಲ್ಲಿ ತಮ್ಮ ಬದುಕನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ೧೫-೨೯ ವಯೋಮಾನದವರಲ್ಲಿನ ಆತ್ಮಹತ್ಯೆ ಪ್ರಮಾಣ ೨೦೦೧ರಲ್ಲಿ ೩೮,೯೧೦ರಿಂದ ೨೦೧೨ರಲ್ಲಿ ೪೬,೬೩೫ಕ್ಕೆ ಏರಿಕೆಯಾಗಿದೆ. ಶೇ.೧೯.೯ರಷ್ಟು ಗಣನೀಯ ಏರಿಕೆ ಕಂಡಿದೆ.

ಜೀವನ ಕೌಶಲ್ಯ ತರಬೇತಿ:

ಹರೆಯದವರಲ್ಲಿನ ಹೆಚ್ಚಿನ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು, ಹತಾಶೆಯನ್ನು ನಿರ್ವಹಿಸುವುದು ಮತ್ತು ತಾರ್ಕಿಕವಾಗಿ ಬದುಕಿನ ಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಹರೆಯದವರಲ್ಲಿ ಜೀವನ ಕೌಶಲ್ಯ ಅಭಿವೃದ್ಧಿ ಮಾಡಬೇಕು. ಸಮಯ ನಿರ್ವಹಣೆ, ಪರಸ್ಪರ ಸಂಬಂಧಗಳನ್ನು ಸಾಕಾರಾತ್ಮವಾಗಿ ನಿಭಾಯಿಸುವುದು, ಅನುಭೂತಿಯಿಂದ ಕೂಡಿದ ಸಂಭಾಷಣೆ, ಒತ್ತಡ ನಿರ್ವಹಣೆ, ಸಮಸ್ಯೆ ಬಗೆಹರಿಸಿಕೊಳ್ಳುವುದು ಮತ್ತು ನಿರ್ಧಾರ ತೆಗೆದುಕೊಳ್ಳುವ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಆತ್ಮಹತ್ಯೆ ತಡೆಗಟ್ಟಿ ಉತ್ತಮ ಮಾನಸಿಕ ಸ್ವಾಸ್ತ್ಯ ಹೊಂದಿ ಬದುಕಲು ಸಹಕಾರಿ.

ಡಾ.ವೃಂದ ಎಂ.ಎನ್‌ - ಸಹಾಯಕ ಪ್ರಧ್ಯಾಪಕಿ, ಮನಸ್ಸಾಮಾಜಿಕ ಕಾರ್ಯ (psychiatric social work), ನಿಮ್ಹಾನ್ಸ್‌ ಬೆಂಗಳೂರು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org