ಹದಿಹರೆಯದಲ್ಲಿ ಜೀವನ ಕೌಶಲ್ಯದ ಮಹತ್ವ

ಹದಿಹರೆಯದ ಸಮಸ್ಯೆಗಳನ್ನು ನಿಭಾಯಿಸಲು ಹಲವು ತೆರನಾದ ಕಾಗ್ನಿಟಿವ್ ಮತ್ತು ಸಾಮಾಜಿಕ ಕೌಶಲ್ಯದ ಅಗತ್ಯವಿರುತ್ತದೆ

ಬಾಲ್ಯದಿಂದ ವಯಸ್ಕಾರಾಗಿ ಪರಿವರ್ತನೆಯಾಗುವ  ಸಮಯದಲ್ಲಿ ತೀವ್ರ ಶಾರೀರಿಕ ಬೆಳವಣಿಗೆ ಮತ್ತು ಮನೋಸಾಮಾಜಿಕ ಪ್ರಬುದ್ಧತೆಯು ಕಂಡುಬರುತ್ತದೆ. ಈ ಸಮಯದಲ್ಲಿ ಮಕ್ಕಳು ತಮ್ಮ ಪಾಲಕರು ಹಾಗೂ ಕುಟುಂಬದ ಹೊರಗೂ ಸಂಬಂಧಗಳನ್ನು ವಿಸ್ತರಿಸಿಕೊಳ್ಳುತ್ತಾರೆ. ತಮ್ಮ ಸ್ನೇಹಿತರು ಹಾಗೂ ಹೊರಗಿನ ಪ್ರಪಂಚದ ತೀವ್ರವಾದ ಪ್ರಭಾವಕ್ಕೆ ಒಳಗಾಗುತ್ತಾರೆ.

ಹದಿಹರೆಯದಲ್ಲಿ ಬೌದ್ಧಿಕ ಪ್ರಬುದ್ಧತೆಯ ಜೊತೆಗೆ ಮಾನಸಿಕ ಪ್ರಕ್ರಿಯೆಗಳು ಹೆಚ್ಚು ವಿಶ್ಲೇಷಣಾತ್ಮಕವಾಗುತ್ತವೆ. ಈ ಸಮಯದಲ್ಲಿ ಅವರು ಅಮೂರ್ತವಾಗಿ ಆಲೋಚಿಸುವುದು, ಸ್ಪಷ್ಟವಾಗಿ ಅಭಿವ್ಯಕ್ತಿ ಪಡಿಸುವುದು ಮತ್ತು ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿಯುತ್ತಾರೆ.

ಹದಿಹರೆಯದ ಮಕ್ಕಳು ಪುಟಿಯುವ ಉತ್ಸಾಹ ಹಾಗೂ ಸಾಹಸಶೀಲತೆಯನ್ನು ಹೊಂದಿರುತ್ತಾರೆ. ಜೊತೆಗೆ ಎಲ್ಲವನ್ನೂ ಪ್ರಯೋಗ ಮಾಡುವ ಕಾತುರ.  ಕೆಲವು ಮಕ್ಕಳು ತಮ್ಮ ದೇಹ ಮತ್ತು ಲೈಂಗಿಕತೆಯ ವಿಷಯದಲ್ಲಿ ಯಾರಿಗೂ ತಿಳಿಸದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು ಅಥವಾ ಕೆಟ್ಟ ಸಹವಾಸಕ್ಕೆ ಒಳಗಾಗಬಹುದು. ಆದ್ದರಿಂದ ಹದಿಹರೆಯವು ಜೀವನವನ್ನೇ ಬದಲಾಯಿಸುವ ಅವಧಿಯಾಗಿದ್ದು, ಮಕ್ಕಳು ಆ ಸಮಯದಲ್ಲಿ ಅತೀ ಹೆಚ್ಚಿನ ಸಾಮರ್ಥ್ಯ ಮತ್ತು ದೌರ್ಬಲ್ಯ ಎರಡನ್ನೂ ಹೊಂದಿರುತ್ತಾರೆ.

ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಹೊಸ ಸಂಬಂಧಗಳ ಕಡೆ ಆಕರ್ಷಣೆ, ವಿದ್ಯಾಭ್ಯಾಸ ಹಾಗೂ ಉದ್ಯೋಗದ ಬಗ್ಗೆ ಕಾಳಜಿ, - ಇವೇ ಮುಂತಾದ ಅಂಶಗಳು ಹದಿಹರೆಯದವರಲ್ಲಿ ಪ್ರಮುಖವಾಗಿ ಗುರುತಿಸಲಾಗಿದೆ. ಈ ವಯಸ್ಸಿನಲ್ಲಿ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಜಾಸ್ತಿಯಾಗಿರುತ್ತದೆ.

ಹೆಚ್ಚಿನ ಹದಿಹರೆಯದವರು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದರೆ, ಇನ್ನು ಕೆಲವರು ಪರದಾಡುತ್ತಾರೆ. ಈ ಅಂಶಗಳನ್ನು ಎಷ್ಟು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ಅವರ ವ್ಯಕ್ತಿತ್ವ, ಪಾಲಕರು, ಶಿಕ್ಷಕರು, ಸ್ನೇಹಿತರಿಂದ ದೊರೆಯುವ  ಮನೋ ಸಾಮಾಜಿಕ ಬೆಂಬಲ , ಮತ್ತು ಅವರು ಹೊಂದಿರುವ ಜೀವನ ಕೌಶಲ್ಯಗಳ ಮೇಲೆ  ಅವಲಂಬಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ, ಜೀವನ ಕೌಶಲ್ಯವನ್ನು, “ದೈನಂದಿನ ಜೀವನದಲ್ಲಿ ಉದ್ಭವಿಸುವ ನಿರೀಕ್ಷೆ ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಾದ ಸಕಾರಾತ್ಮಕ ನಡವಳಿಕೆ ಹಾಗೂ ಹೊಂದಾಣಿಕೆಯ ಸಾಮರ್ಥ್ಯ” ಎಂದು ವಿವರಿಸಿದೆ.

ಇಲ್ಲಿ ‘ಹೊಂದಾಣಿಕೆ’ ಎಂದರೆ ವಿವಿಧ ಪರಿಸ್ಥಿತಿಯಲ್ಲಿ ಅಥವಾ ಸನ್ನಿವೇಶದಲ್ಲಿ  ಆ ಸಂದರ್ಭಕ್ಕನುಸಾರವಾಗಿ ಪ್ರತಿಸ್ಪಂದಿಸುವ ಕೌಶಲ್ಯ ಆಗಿದೆ. ಸಕಾರಾತ್ಮಕ ನಡವಳಿಕೆಯು ವ್ಯಕ್ತಿಯ ದೂರದೃಷ್ಠಿ ಮತ್ತು ಎಂತಹ ಕಷ್ಟದ ಸನ್ನಿವೆಶದಲ್ಲಿಯೂ ಭರವಸೆ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ.

ಜೀವನ ಕೌಶಲ್ಯವು, ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ, ಸಮಸ್ಯೆಗೆ ಪರಿಹಾರ ಹುಡುಕುವುದು,  ವಿಮರ್ಶಾತ್ಮಕವಾಗಿ ಮತ್ತು ರಚನಾತ್ಮಕವಾಗಿ ಯೋಚಿಸುವುದು, ಪರಾನುಭೂತಿ, ತಮ್ಮ ಜೀವನವನ್ನು ಆರೋಗ್ಯಕರವಾಗಿ ಮತ್ತು ಉತ್ಪಾದಕತೆಯಿಂದ ನಿರ್ವಹಿಸುವುದನ್ನು ಕಲಿಯಲು ಅಗತ್ಯವಾದ ಮನೋಸಾಮಾಜಿಕ ವಿಧಾನಗಳನ್ನು ಒಳಗೊಂಡಿರುತ್ತದೆ. ಹದಿಹರೆಯದವರಿಗೆ ಜವಾಬ್ಧಾರಿಯುತವಾಗಿ ವರ್ತಿಸಲು, ಗುಣಾತ್ಮಕ ಕಾರ್ಯ ಮಾಡಲು ಹಾಗೂ ತಮ್ಮ ಜೀವನದಲ್ಲಿ ಎದುರಾಗುವ  ಬಿಕ್ಕಟ್ಟುಗಳನ್ನು ಪರಿಹರಿಸಲು, ಸನ್ನಿವೇಶದ ಒತ್ತಡವನ್ನು ನಿಭಾಯಿಸಲು ಉಪಯೋಗವಾಗುತ್ತದೆ.

ಆಲೋಚನಾ ಸಾಮರ್ಥ್ಯ ,ಮತ್ತು ಸಾಮಾಜಿಕ ಕೌಶಲ್ಯ

ಎರಡು ರೀತಿಯ ಕೌಶಲಗಳಿವೆ- ಆಲೋಚಿಸುವ ಕೌಶಲ್ಯ ಮತ್ತು ಇತರರೊಂದಿಗೆ ವ್ಯವಹರಿಸಲು ಅಗತ್ಯವಾದ ಸಾಮಾಜಿಕ ಕೌಶಲ್ಯ. ವೈಯಕ್ತಿಕ ಮಟ್ಟದ ಬೌದ್ಧಿಕ ಸಾಮರ್ಥ್ಯಕ್ಕೆ ಆಲೋಚನಾ ಕೌಶಲ್ಯವಿರಬೇಕು . ವ್ಯಕ್ತಿಯು ಇತರರ ಜೊತೆ ಹೇಗೆ ವಿವೇಚನೆಯಿಂದ ವ್ಯವಹರಿಸಬೇಕು ಎನ್ನುವುದು  ಸಾಮಾಜಿಕ ಕೌಶಲ್ಯ. 

ವೈಚಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ನಿಮ್ಮ ದೃಷ್ಟಿಕೋನವನ್ನು ಉಳಿದವರು ಒಪ್ಪಿಕೊಳ್ಳುವಂತೆ ಮಾಡಲು ಅಗತ್ಯವಾದ ಕೌಶಲ್ಯವನ್ನು ಭಾವನಾತ್ಮಕ ಕೌಶಲ್ಯ ಎನ್ನುತ್ತಾರೆ. ಇದಕ್ಕಾಗಿ ಹದಿಹರೆಯದವರಿಗೆ ತಮ್ಮ ಆಂತರಿಕ ಭಾವನೆಗಳು, ಗೊಂದಲ ಮತ್ತು ಒತ್ತಡವನ್ನು ಗುರುತಿಸಿ ನಿಭಾಯಿಸಲು ಹಾಗೂ ಒತ್ತಡವನ್ನು ನಿಭಾಯಿಸಲು ಕಲಿಸಬೇಕು. ಹದಿಹರೆಯದ ಮಕ್ಕಳ ಆರೋಗ್ಯಕರ ಬೆಳವಣಿಗೆಯ ಪ್ರಕ್ರಿಯೆಗೆ ಆಲೋಚನೆ ಮತ್ತು ಸಾಮಾಜಿಕ ಕೌಶಲ್ಯಗಳೆರಡೂ ಅಗತ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಪಟ್ಟಿ ಮಾಡಿರುವ ಹತ್ತು ಪ್ರಮುಖ ಜೀವನ ಕೌಶಲ್ಯಗಳೆಂದರೆ:

ಸ್ವ-ತಿಳುವಳಿಕೆ: ಎಂದರೆ ತಮ್ಮನ್ನು ತಾವು ಅರಿಯುವುದು. ತಮ್ಮ ವ್ಯಕ್ತಿತ್ವ, ಸಾಮರ್ಥ್ಯ ಮತ್ತು ದೌರ್ಬಲ್ಯಗಳು, ಅಭಿರುಚಿ ಮತ್ತು ಇಷ್ಟವಿಲ್ಲದ ಅಂಶಗಳ ಬಗ್ಗೆ ಅರಿಯುವುದು. 

ಪರಾನುಭೂತಿ: ನಮ್ಮ ಪ್ರೀತಿಪಾತ್ರರು ಮತ್ತು ಸಮಾಜದೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರಬೇಕಾದರೆ  ಅವರ ಅಗತ್ಯಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಮತ್ತೊಬ್ಬ ವ್ಯಕ್ತಿಯ ದೃಷ್ಠಿಯಿಂದ ಜೀವನವನ್ನು ನೋಡುವುದು ಪರಾನುಭೂತಿಯಾಗಿದೆ.

ಪರಾನುಭೂತಿಯು ಹದಿಹರೆಯದವರಿಗೆ ತಮ್ಮಿಂದ ಭಿನ್ನವಾಗಿರುವ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತದೆ. ಎಲ್ಲರೊಂದಿಗೆ (ಸ್ನೇಹಿತರು, ಕುಟುಂಬದವರು, ಸಮಾಜ) ಸ್ನೇಹಪೂರ್ವದಿಂದ ವರ್ತಿಸಲು ಕಲಿಸುತ್ತದೆ.

ವಿಮರ್ಶಾತ್ಮಕ ಆಲೋಚನೆಯಿಂದ ವಿಷಯ ಮತ್ತು ಅನುಭವಗಳನ್ನು ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ. ವಿಮರ್ಶಾತ್ಮಕ ಆಲೋಚನೆಯು ವಿಷಯವನ್ನು ನೋಡುವ ಅಥವಾ ನಿರ್ವಹಿಸುವ ನೂತನ ವಿಧಾನವಾಗಿದ್ದು ನಾಲ್ಕು ಭಾಗಗಳನ್ನು ಹೊಂದಿದೆ- ನಿರರ್ಗಳತೆ (ಹೊಸ ಆಲೋಚನೆ ಮೂಡುವುದು), ಸ್ಥಿತಿಸ್ಥಾಪಕತೆ (ದೃಷ್ಠಿಕೋನವನ್ನು ಸುಲಭವಾಗಿ ಬದಲಾಯಿಸುವುದು), ನೈಜತೆ (ಹೊಸತನ್ನು ಆಲೋಚಿಸುವುದು) ಮತ್ತು ವಿಸ್ತರಣೆ (ಉಳಿದವರ ವಿಚಾರಗಳನ್ನು ಬಳಸಿ ರಚನಾತ್ಮಕವಾದದ್ದನ್ನು ನಿರ್ವಹಿಸುವುದು).

ನಿರ್ಣಯ ತೆಗೆದುಕೊಳ್ಳುವ ಕೌಶಲ್ಯ: ಹದಿಹರೆಯದವರಿಗೆ ತಮ್ಮ ಜೀವನದ ಕುರಿತು ನಿರ್ಧಾರ ತೆಗೆದುಕೊಳ್ಳಲುವ ಕೌಶಲ್ಯವು ಅಗತ್ಯ. ಈ ಮೂಲಕ ತಮಗೆ ಲಭ್ಯವಿರುವ ವಿವಿಧ ಆಯ್ಕೆಗಳನ್ನು ವಿಶ್ಲೇಷಿಸಬಹುದು ಮತ್ತು ಬೇರೆ ಬೇರೆ ನಿರ್ಧಾರಗಳು ಜೀವನದ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲವು ಎಂದು ಅಂದಾಜಿಸಲು ಕಲಿಯುತ್ತಾರೆ.

ಸಮಸ್ಯೆ ಪರಿಹರಿಸುವ ಕೌಶಲ್ಯವು  ಒಂದು ಸಮಸ್ಯೆಯನ್ನು ವಸ್ತುನಿಷ್ಠವಾಗಿ ಅವಲೋಕಿಸಿ ಬೇರೆ ಬೇರೆ ಪರಿಹಾರ ಮಾರ್ಗಗಳನ್ನು ಆಲೋಚಿಸಲು ಮತ್ತು ಆ ಆಯ್ಕೆಗಳ ಲಾಭ ನಷ್ಟಗಳನ್ನು ವಿಶ್ಲೇಷಿಸಿ ನಿರ್ಧಾರಕ್ಕೆ ಬರುವುದನ್ನು ಕಲಿಸುತ್ತದೆ.

ಮಾತನಾಡುವ ಕೌಶಲ್ಯ: ಸಂದರ್ಭಗಳಿಗೆ ಅನುಸಾರವಾಗಿ ವಿವೇಚನೆಯಿಂದ ಮಾತನಾಡಲು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಂವಹನ ಕೌಶಲ್ಯ ಅವಶ್ಯ. 

ಒತ್ತಡ ನಿಭಾಯಿಸುವುದು: ಜೀವನದಲ್ಲಿ ಹಲವು ಸನ್ನಿವೇಶದಿಂದ ಸಂಭವಿಸುವ ಒತ್ತಡವನ್ನು ನಿಭಾಯಿಸಲು ತಿಳಿದಿರಬೇಕು. ಹದಿಹರೆಯದವರು ಈ ಒತ್ತಡಕ್ಕೆ ಕಾರಣವೇನು, ಇದಕ್ಕೆ ಪರಿಹಾರ ಯಾವುದು ಎಂಬ ವಿಷಯಗಳನ್ನು ತಿಳಿದಿರೆ ಉತ್ತಮ.

ಭಾವನೆಗಳನ್ನು ನಿರ್ವಹಿಸುವ ಕಲೆಯು ತಮ್ಮ ಮತ್ತು ಉಳಿದವರ ಭಾವನೆಗಳನ್ನು ಗುರುತಿಸುವುದು, ನಡವಳಿಕೆಯ ಮೇಲೆ ಭಾವನೆಗಳ ಪ್ರಭಾವವನ್ನು ಗ್ರಹಿಸುವುದು ಮತ್ತು ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸುವುದನ್ನು ಒಳಗೊಂಡಿರುತ್ತದೆ. 

ಡಾ. ಗರಿಮಾ ಶ್ರೀವಾಸ್ತವ ಅವರು ದೆಹಲಿ ಮೂಲದ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು, ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org