ಹದಿಹರೆಯದ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ?

ಹದಿಹರೆಯದ ಮೆದುಳಿನ ಕಾರ್ಯನಿರ್ವಹಣೆ ಮತ್ತು ಬೆಳವಣಿಗೆಯನ್ನು ಅರಿತುಕೊಳ್ಳುವ ಬಗೆ

“ವೈನ್ ಕುಡಿದು ಕೆಲವರು ಪ್ರಬುದ್ಧರಾಗುವ ಹಾಗೆ ಹದಿಹರೆಯದವರು ನಿಸರ್ಗದಿಂದ ಪ್ರೇರೇಪಿತರಾಗಿರುತ್ತಾರೆ”

~ ಅರಿಸ್ಟಾಟಲ್.

ತಾರುಣ್ಯದಲ್ಲಿ ಬಹಳಷ್ಟು ಹದಿಹರೆಯದ ಹುಡುಗ – ಹುಡುಗಿಯರ ಭಾವನೆಗಳು ಮತ್ತು ನಡವಳಿಕೆಗಳು ಬದಲಾಗುತ್ತವೆ. ಈ ಬದಲಾವಣೆಗಳನ್ನು ಅವರ ಮನಸ್ಸಿನಲ್ಲಿ ಉಂಟಾಗುವ ಕೆಲವು ಗೊಂದಲಗಳ ಮೂಲಕ ಗುರುತಿಸಬಹುದು. ವಯಸ್ಕರು ಯಾವ ರೀತಿಯಾಗಿ ತಾವು ಮಾನಸಿಕ ಬದಲಾವಣೆ, ಭಾವುಕತೆ ಮತ್ತು ಖಿನ್ನತೆಗೊಳಗಾಗುತ್ತಿದ್ದೇವೆ ಎಂಬುದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆಯೋ, ಅಂತೆಯೇ ಹದಿಹರೆಯದವರೂ ತಮ್ಮ ಭಾವನೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಒದ್ದಾಡುತ್ತಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಶಾಲೆಗಳಲ್ಲಿ ಜೀವಶಾಸ್ತ್ರದ ಪುಸ್ತಕಗಳು ಹದಿಹರೆಯದವರ ಶರೀರದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಹೇಳುತ್ತವೆ. ಆದರೆ ಅವರ ಮೆದುಳಿನಲ್ಲಿ ಉಂಟಾಗುವ ಮತ್ತು ನಡವಳಿಕೆಗಳಲ್ಲಿ ಕಂಡು ಬರುವ ಬದಲಾವಣೆಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ.

ನಾವು ಕೆಲವು ಹದಿಹರೆಯದ ಹುಡುಗ - ಹುಡುಗಿಯರೊಡನೆ ನಡೆಸಿದ ಸಮಾಲೋಚನೆಯನ್ನೇ ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳೋಣ. ಒಬ್ಬ ತರುಣ ಸಿನಿಮಾವನ್ನು ನೋಡಲು ಮಾಲ್ ನ ಒಳಗಡೆ ಪ್ರವೇಶಿಸುತ್ತಾನೆ. ಆದರೆ ಮರಳಿ ಬರುವಾಗ ತಾನು ಬಹಳ ದಿನಗಳಿಂದ ಕೂಡಿಟ್ಟಿದ್ದ ಹಣವನ್ನೆಲ್ಲಾ ಖರ್ಚು ಮಾಡಿ, ಹೊಸ ಫೋನನ್ನು ಖರೀದಿಸಿರುತ್ತಾನೆ. ಇನ್ನೊಬ್ಬ, ಒಂದು ಹೊಸ ಸ್ಕೇಟ್ ಬೋರ್ಡನ್ನು ಖರೀದಿಸಿ, ತನ್ನಮನೆಯ ಮೇಲ್ಛಾವಣಿಯ ಮೇಲೆ ಸ್ಕೇಟಿಂಗ್ ಮಾಡಲು ಹೋಗಿ ಬಿದ್ದು ಗಾಯಗೊಳ್ಳುತ್ತಾನೆ. ಮತ್ತೊಬ್ಬ ಇನ್ನೇನೋ ಹೊಸತನ್ನು ಮಾಡುವ ಉತ್ಸಾಹದಿಂದ ಮಿತ್ರರೊಡಗೂಡಿ ಡ್ರಗ್ಸ್ ಮತ್ತು ಮದ್ಯಪಾನದಂತಹ ದುರಭ್ಯಾಸಗಳನ್ನು ಕಲಿತು ಬಿಡುತ್ತಾನೆ. ಈ ರೀತಿಯಾಗಿ ಅವರೆಲ್ಲ ಮುಂದೆ ತಲೆದೋರಬಹುದಾದ ತೊಂದರೆಗಳನ್ನು ನಿರ್ಲಕ್ಷಿಸಿ ಅಪಾಯಗಳನ್ನು ತಂದುಕೊಂಡು ಬಿಡುತ್ತಾರೆ. ಇಂತಹ ಮನಸ್ಥಿತಿಗೆ ಕಾರಣವಾದರೂ ಏನು?

ಬಹುಪಾಲು ಮೆದುಳಿನ ಬೆಳವಣಿಗೆ ಬಾಲ್ಯಾವಸ್ಥೆಯಲ್ಲಿಯೇ ಆಗುತ್ತದೆಯೆಂಬ ನಂಬಿಕೆಯಿದೆ. ಬಹುತೇಕ, ಮೆದುಳಿನ ಗಾತ್ರದ ಶೇಕಡಾ 90ರಷ್ಟು ಬೆಳವಣಿಗೆ 6ನೇ ವಯಸ್ಸಿನಲ್ಲಿಯೇ ಆಗಿರುತ್ತದೆ. ಮುಂದುವರೆದು 20ರ ಪ್ರಾಯದವರೆಗೂ ವಿಕಸನಗೊಳ್ಳುತ್ತಿರುತ್ತದೆ ಮತ್ತು ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ಈ ಬೆಳವಣಿಗೆಯನ್ನು ನವೀಕರಣಗೊಳ್ಳುತ್ತಿರುವ ಈಗಿನ ಅಂತರ್ಜಾಲ ವ್ಯವಸ್ಥೆಗೆ ಹೋಲಿಸಬಹುದಾಗಿದೆ. ಅಂದರೆ, ಹೊಸಹೊಸ ಸಂಪರ್ಕಗಳನ್ನು ಕಲ್ಪಿಸುವುದು ಮತ್ತು ನಿರುಪಯುಕ್ತವಾದ ಹಳೆಯ ಜಾಲಗಳನ್ನು ತೆಗೆದುಹಾಕುವುದು. ಮೆದುಳಿನ ಒಳಗೆ ಸಂಭವಿಸುವ ವಿವಿಧ ಸಂವಹನಗಳಿಗೆ ಅದರೊಳಗಿನ ಸಂಪರ್ಕಜಾಲಗಳು ಕಾರಣವಾಗಿವೆ.

ಹದಿಹರೆಯದವರ ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳುವುದು

ಮೆದುಳಿನಲ್ಲಿ ಎರಡು ಪ್ರಮುಖ ಭಾಗಗಳಿರುತ್ತವೆ: ಪ್ರಿಫ್ರಂಟಲ್ ಕಾರ್ಟೆಕ್ಸ್ ಮತ್ತು ಲಿಂಬಿಕ್ ಸಿಸ್ಟಮ್. ಮೆದುಳಿನಲ್ಲಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂಬ ಭಾಗವು ಕಾರಣಗಳನ್ನು ತಿಳಿದುಕೊಳ್ಳಲು, ಯೋಚಿಸಲು, ಕ್ರಿಯಾಶೀಲರಾಗಲು ಮತ್ತು ನಿಯಂತ್ರಣದಲ್ಲಿರಲು ಸಹಕರಿಸುತ್ತದೆ. ಲಿಂಬಿಕ್ ಸಿಸ್ಟಮ್ ನಮ್ಮ ಭಾವನೆಗಳನ್ನು ನಿರ್ವಹಿಸಲು, ಅಂದರೆ ಕೋಪ, ಅಪಾಯದ ಮುನ್ನೆಚ್ಚರಿಕೆ ಮುಂತಾದವುಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ.

ಪ್ರಿಫ್ರಂಟಲ್ ಕಾರ್ಟೆಕ್ಸ್, ಲಿಂಬಿಕ್ ಸಿಸ್ಟಮ್ ನ ಬೆಳವಣಿಗೆಯ ನಂತರದಲ್ಲಿ ವಿಕಸನಗೊಳ್ಳುತ್ತದೆ. ಆದ್ದರಿಂದ ತರುಣ -ತರುಣಿಯರು, ಕಾರಣಗಳು, ತರ್ಕ ಅಥವಾ ಮನಸ್ಸಿನ ಆವೇಗಗಳನ್ನು ಪರಿಗಣಿಸದೆ ಹೆಚ್ಚಾಗಿ ಅವರ ಭಾವನೆಗಳ ಗುಲಾಮರಾಗಿರುತ್ತಾರೆ. ಬಾಲ್ಯಾವಸ್ಥೆ ಅಥವಾ ವೃದ್ಧಾಪ್ಯಕ್ಕಿಂತ ಯೌವನಾವಸ್ಥೆಯಲ್ಲಿ ಕಾರ್ಯಕ್ಕೆ ತಕ್ಕ ಪ್ರತಿಫಲಗಳು ಶೀಘ್ರವಾಗಿ ದೊರೆಯುತ್ತವೆ. ಆದ್ದರಿಂದ ಅವರು ಕೆಲವು ದುಸ್ಸಾಹಸಗಳಿಗೆ ಕೈ ಹಾಕುವ ಅಪಾಯವೂ ಇರುತ್ತದೆ.

ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ನಡೆಸಲು, ಯೋಚಿಸಲು ಸಹಕಾರಿಯಾಗಿರುವ ಮೆದುಳಿನ ಭಾಗವಾದ ಪ್ರಿಫ್ರಂಟಲ್ ಕಾರ್ಟೆಕ್ಸ್ 20ರ ಹರೆಯದವರೆಗೂ ಸಂಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ. ಹದಿಹರೆಯದ ಯುವಕರು ಕೆಲವು ವಿಷಯಗಳ ಬಗ್ಗೆ ನಿರಾಸಕ್ತಿ ಅಥವಾ ಆಲಸ್ಯ ತೋರಲು ಈ ಅಪೂರ್ಣವಾದ ಬೆಳವಣಿಗೆ ಕಾರಣವೆಂದು ವಿವರಿಸಬಹುದು. ಯಾವುದಾದರೊಂದು ಕೆಲಸ ಮಾಡಬೇಕು ಅನ್ನಿಸಿದರೆ, ಅದರ ಬಗ್ಗೆ ಹೆಚ್ಚು ಯೋಚಿಸಲು ಹೋಗದೆ ಅದನ್ನು ಮಾಡಲು ಮುಂದಾಗಿ ಬಿಡುತ್ತಾರೆ. ಇದರಿಂದ ಸಮಸ್ಯೆಗಳೇ ಹೆಚ್ಚು.

ಹದಿಹರೆಯದವರನ್ನು ಕ್ರಿಯಾಶೀಲರನ್ನಾಗಿಸಲು “ಪ್ಲಾಸ್ಟಿಸಿಟಿ ಆಫ್ ಬ್ರೈನ್” ಪ್ರಮುಖವಾದದ್ದು. ಅವರಲ್ಲಿ ಈಗಾಗಲೇ ಇರುವ ಕೆಲವು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಹೊಸ ಬಗೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನಾವು ಪ್ರೋತ್ಸಾಹ ನೀಡಬೇಕು. ಯಾವ ರೀತಿಯಲ್ಲಿ ಒಬ್ಬ ಹೂದೋಟದ ಮಾಲಿ ಒಂದು ಗಿಡವನ್ನು ಹುಲುಸಾಗಿ ಬೆಳೆಸಲು ಕಾಲಕಾಲಕ್ಕೆ ಅದರ ಪ್ರಯೋಜನವಿಲ್ಲದ ಭಾಗಗಳನ್ನು ಕತ್ತರಿಸುತ್ತ ಇರುತ್ತಾನೆಯೋ, ಹಾಗೆಯೇ ಮೆದುಳಿನಲ್ಲಿರುವ ಕೆಲವೊಂದು ಹಳೆಯದಾದ, ನಿರುಪಯುಕ್ತವಾದ ವಿಷಯಗಳನ್ನು ಕತ್ತರಿಸಿ ತೆಗೆದು ಹೊಸ ಆಲೋಚನೆಗಳನ್ನು ಈ ಪ್ರಾಯದಲ್ಲಿ ಬೆಳೆಸಿಕೊಳ್ಳಬೇಕು.

ವಯಸ್ಕರ ಕರ್ತವ್ಯಗಳೇನು?

ವಯಸ್ಕರಾಗಿ, ಹದಿಹರೆಯದವರನ್ನು ನಾವು ನಿಯಂತ್ರಿಸುತ್ತಿದ್ದೇವೆ ಅಥವಾ ನಾವು ಅವರ ‘ಬಾಸ್’ಗಳಂತೆ ವರ್ತಿಸುತ್ತಿದ್ದೇವೆ ಎಂಬ ಭಾವನೆ ಅವರಲ್ಲಿ ಮೂಡದಂತೆ ನೋಡಿಕೊಳ್ಳಬೇಕು. ಈ ವಯಸ್ಸಿನಲ್ಲಿ ಮೆದುಳು ಸುಲಭವಾಗಿ ಹೊಂದಿಕೊಳ್ಳುತ್ತದೆ ಮತ್ತು ಮಾರ್ಪಾಡಾಗುವಂತಹ ಸ್ಥಿತಿಯಲ್ಲಿರುತ್ತದೆ. ಒಳ್ಳೆಯ ಮಾರ್ಗದರ್ಶನದಿಂದ ಹಾಗೂ ಬೆಂಬಲದಿಂದ ಹದಿಹರೆಯದ ಮೆದುಳನ್ನು ವಿಕಸನಗೊಳ್ಳುವಂತೆ ಮಾಡಬಹುದು. ಈ ವಯೋಮಾನದಲ್ಲಿರುವವರು ಯಾವುದೇ ರೀತಿಯ ಕಳಂಕ ತಂದುಕೊಳ್ಳದಂತೆ, ಕೆಟ್ಟ ಕೆಲಸಗಳನ್ನು ಮಾಡದಂತೆ, ದುಸ್ಸಾಹಸಗಳಿಗೆ ಕೈ ಹಾಕದಂತೆ ಮತ್ತು ಸದಾ ಜಾಗೃತರಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅವರುಗಳು ಹತಾಶರಾಗಿ ಬಿಡುತ್ತಾರೆ ಮತ್ತು ಹಟಮಾರಿ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ.  

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org