ಸ್ನೇಹಿತರ ಸುತ್ತ ಸುಳಿಯುವ ಜೀವನ

ಹಲವರಿಗೆ, ವಿಶೇಷವಾಗಿ ಯುವಜನರಿಗೆ ಸ್ನೇಹಿತರು ಜೀವನದ ಬಹುಮುಖ್ಯ ಅಂಗವಾಗಿರುತ್ತಾರೆ. ಅವರು ಶಾಲೆ, ಕಾಲೇಜು ಮತ್ತು ಕಛೇರಿಗಳಲ್ಲಿ ಸ್ನೇಹಿತರ ಜೊತೆ ಸಮಯ ಕಳೆಯುವುದಲ್ಲದೇ, ಶಾಲೆ ಮತ್ತು ಕಛೇರಿಗಳ ಸಮಯ ಮುಗಿದ ಮೇಲೂ ಅವರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಜೀವನಕ್ಕೆ ವಿಶೇಷವಾದ ಶಕ್ತಿ, ಬೆಂಬಲ ಮತ್ತು ಮೋಜನ್ನು ಸ್ನೇಹಿತರು ಒದಗಿಸುವುದು ಗೆಳೆತನವನ್ನು ಇನ್ನಷ್ಟು ಗಾಢವೂ, ಅರ್ಥಪೂರ್ಣವೂ ಆಗಿಸುತ್ತದೆ.

ನೀವು ಪ್ರೌಢಶಾಲೆ, ಕಾಲೇಜು ಅಥವಾ ಈಗ ತಾನೇ ಉದ್ಯೋಗಕ್ಕೆ ಸೇರಿದ್ದಲ್ಲಿ ಸ್ನೇಹಿತರೊಂದಿಗೆ ಬಹಳ ಸಮಯ ಕಳೆಯುತ್ತೀರಿ. ನಿಮ್ಮ ಸುತ್ತಲಿನ ಜನರನ್ನು ಅರ್ಥಮಾಡಿಕೊಳ್ಳಲು ತೊಡಗುತ್ತೀರಿ. ಇದರಿಂದ ನಿಮಗೂ ಮತ್ತು ಅವರಿಗೂ ತೊದರೆಯಾಗದಂತೆ ಸಂದರ್ಭಗಳನ್ನು ನಿಭಾಯಿಸುವುದನ್ನು ಕಲಿಯುತ್ತೀರಿ. ಶಾಲೆ ಹಾಗೂ ಕಛೇರಿಯಲ್ಲಿರುವ ವ್ಯಕ್ತಿಗಳೊಂದಿಗೆ ಸಾಮಾಜಿಕವಾಗಿ ಬೆರೆಯುವುದು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದದ್ದು.

ಯುವಜನರ ನಡುವಿನ ಸ್ನೇಹವು ಅತ್ಯಂತ ಭಾವನಾತ್ಮಕವಾಗಿದ್ದು, ಅವರ ನಡುವಿನ ನಿಯತ್ತು ಮತ್ತು ವಿಶ್ವಾಸ ಬಹಳ ಗಟ್ಟಿಯಾಗಿರುತ್ತದೆ. ಒಬ್ಬ ಸ್ನೇಹಪರ ಸಹಪಾಠಿಯನ್ನು ಪಡೆಯುವುದು ಮತ್ತು ಒಂದೇ ರುಚಿಯ ಅಭಿರುಚಿಯನ್ನು ಹಂಚಿಕೊಳ್ಳುವುದು ಒಂದು ಅದ್ಭುತ ಅನುಭವವಾಗಿರುತ್ತದೆ.

ನೀವು ವಿಶ್ವಾಸವಿರಿಸುವ ಸ್ನೇಹಿತರ ಗುಂಪಿನ ಭಾಗವಾಗಿರುವುದು ಹಾಗೂ ಸಮಾನ ಮನಸ್ಕರಿಂದ ಗೆಳೆತನ ಸಂಪಾದಿಸುವುದು ಈ ಎರಡೂ ಬಹಳ ರೋಚಕವಾದ ವಿಷಯವಾಗಿವೆ. ನೀವು ಬಾಲ್ಯನ್ನು ಕಳೆದು ಹದಿಹರೆಯದ ಹೊಸ ಪ್ರಪಂಚಕ್ಕೆ ಕಾಲಿಟ್ಟಾಗ ನಿಮ್ಮ ಸ್ನೇಹಿತರ ಗುಂಪು ಆ ಹೊಸ ಪ್ರಪಂಚಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ವಿಷಯಗಳನ್ನು ನಿಮ್ಮಲ್ಲೇ ಅದುಮಿಟ್ಟುಕೊಳ್ಳುವ ಬದಲು ನೀವು ಅದನ್ನು ಸ್ನೇಹಿತರ ಬಳಿ ನಿರಾತಂಕವಾಗಿ ಹಂಚಿಕೊಳ್ಳುತ್ತೀರಿ.

ಆರಂಭದಲ್ಲಿ ಅಂದರೆ, ಎಂಟನೆಯ ತರಗತಿಯಲ್ಲಿ ಎಂದಿಟ್ಟುಕೊಳ್ಳೋಣ, ಅಲ್ಲಿ ಸ್ನೇಹಿತರ ಗುಂಪುಗಳಿರುತ್ತವೆ. ಆನಂತರ ಎಂಟರಿಂದ ಹನ್ನೆರಡನೆಯ ತರಗತಿಯ ನಡುವೆ ಅವರಲ್ಲಿ ಕೆಲವರು ತಮ್ಮದೇ ಬೇರೆಯ ಗುಂಪನ್ನು ರಚಿಸಿಕೊಳ್ಳಬಹುದು. ಕೆಲವು ಶಾಲೆಗಳಲ್ಲಿ ಅತಿಯಾದ ಪಿಯರ್ ಫ್ರೆಶರ್ ಇರುತ್ತದೆ. ಇನ್ನು ಕೆಲವೆಡೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ವಿಷಯದಲ್ಲಿ ಒತ್ತಡವಿರುತ್ತದೆ. ಅಲ್ಲದೇ ಹೆಚ್ಚಿನ ಯುವಕರು ತಮ್ಮ ಅಧ್ಯಯನಕ್ಕೆ ತೊಂದರೆ ಮಾಡುವ ಮತ್ತು ಡೇಟಿಂಗ್ ನಂತಹ ವಿಷಯಗಳಿಗೆ ಸೆಳೆಯುವ ಸ್ನೇಹಿತರನ್ನು ದೂರವಿಡಲು ಬಯಸುತ್ತಾರೆ. ಅದೂ ಅಲ್ಲದೇ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸರಿ-ತಪ್ಪುಗಳ ಕಲ್ಪನೆಯಿರುತ್ತದೆ.

ಈ ಸಮಯದಲ್ಲಿ ಉಂಟಾದ ಕೆಲವು ಸಂಬಂಧಗಳು ಸ್ವಲ್ಪ ಸಮಯದ ನಂತರ ನಾವು ಮುಂಚೆ ಅಂದುಕೊಂಡ ರೀತಿಯಲ್ಲಿಲ್ಲ ಎಂಬ ಅರಿವಾಗಿ ಮುರಿದುಹೋಗಬಹುದು. ತಮ್ಮ ಸಂಬಂಧಗಳ ಬಗ್ಗೆ ಯುವಕರು ತುಂಬ ಸೀರಿಯಸ್ ಆಗಿದ್ದರೂ ಕೂಡಾ ಇದು ಸಂಬಂಧಗಳ ಮಟ್ಟಿಗೆ ಪ್ರಯೋಗಶೀಲ ಸಮಯವಾಗಿರುತ್ತದೆ. ಆದರೆ ಯುವ ಜನರು ಹೊಸ ಹೊಸ ಅನುಭವಗಳಿಗೆ ತೆರೆದುಕೊಂಡಂತೆ ವೇಗವಾಗಿ ಬದಲಾಗುತ್ತಿರುತ್ತಾರೆ. ಉದಾಹರಣೆಗೆ ಒಂದೇ ದಂಪತಿಗಳ ಹಿರಿಯ ಮತ್ತು ಕಿರಿಯ ಮಕ್ಕಳು ತಮ್ಮ ಪಾಲಕರ ಕುರಿತು ಬೇರೆ ಬೇರೆ ರೀತಿಯ ಅನುಭವಗಳನ್ನು ಹೊರಹಾಕುತ್ತಾರೆ. ಏಕೆಂದರೆ ಒಂದೊಂದು ಮಗುವನ್ನು ಬೆಳೆಸುತ್ತಾ ಪಾಲಕರೂ ಬದಲಾಗಿರುತ್ತಾರೆ!

ಈ ನಿಟ್ಟಿನಲ್ಲಿ ನನ್ನ ಸಲಹೆಯೆಂದರೆ, ಪಿಜ್ಜಾವನ್ನು ತುಂಡರಿಸುವಂತೆ ನೀವು ಎಚ್ಚರವಾಗಿರುವ ದಿನದ 16-18 ಗಂಟೆಗಳ ಕಾಲವನ್ನು ಕೂಡಾ ವಿಭಾಗಿಸಿಕೊಳ್ಳಿ. ಆ ಭಾಗಗಳಲ್ಲಿ ಎರಡಕ್ಕಿಂತ ಹೆಚ್ಚು ಭಾಗಗಳನ್ನು ಸ್ನೇಹಿತರಿಗೆ ಮೀಸಲಿಡಬೇಡಿ. ನಿಮ್ಮ ವೈಯಕ್ತಿಕ ಕೆಲಸ, ಶಾಲೆಯ ಕೆಲಸ, ಕುಟುಂಬ ಮತ್ತು ಓದಿನಂತಹ ಉಳಿದ ಚಟುವಟಿಕೆಗಳಿಗೂ ಸಮಯ ನೀಡಿ. ನಿಮಗೆ ಖುಷಿಯೆನಿಸುವ, ಉದಾಹರಣೆಗೆ, ನಾಯಿಯೊಂದಿಗೆ ವಾಕಿಂಗ್ ಮಾಡುವ ಚಟುವಟಿಕೆಗಳಿಗೂ ಅವಕಾಶವಿರಲಿ. ಈ ರೀತಿ ನಿಮ್ಮ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಂಡರೆ ಯಾವ ಕಾರ್ಯವೂ ಹಿಂದೆ ಉಳಿಯುವುದಿಲ್ಲ.

ಜನರು ಸ್ನೇಹಿತರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವುದಲ್ಲದೇ ಅವರಲ್ಲಿ ಬಹಳ ವಿಶ್ವಾಸವಿರಿಸುತ್ತಾರೆ. ಕೆಲವೊಮ್ಮೆ ಸಂಬಂಧಗಳಲ್ಲಿ ವಿಶ್ವಾಸದ್ರೋಹ ನಡೆಯುತ್ತದೆ. ಇವರಿಗೆ ಅವರೇ ಪ್ರಪಂಚ ಎಂಬಂತಿದ್ದವರೂ ಕೂಡಾ ಬೇರೆಯಾಗುತ್ತಾರೆ. ಇಂತಹ ವಿಷಯಗಳು ನಿಮಗೆ ಬಹಳ ಆಘಾತವನ್ನುಂಟುಮಾಡಬಹುದು. ಒಂದು ವೇಳೆ ನಿಮ್ಮ ಎದುರಿಗೆ ಹನ್ನೆರಡನೆಯ ತರಗತಿಯ ಫೈನಲ್ ಪರೀಕ್ಷೆ ಅಥವಾ ವೃತ್ತಿಪರ ಕಾಲೇಜುಗಳ ಸೆಮಿಸ್ಟರ್ ಎಕ್ಸಾಮುಗಳಿದ್ದರೆ ನಿಮಗೆ ಸಹಾಯದ ಅಗತ್ಯವಿರುತ್ತದೆ.

ನಿಮ್ಮ ಸ್ನೇಹಿತರೂ ಕೂಡಾ ಪರೀಕ್ಷೆಯನ್ನು ಎದುರಿಸಬೇಕಾಗಿರುವುದರಿಂದ ಅವರ ಮೇಲೆ ಹೆಚ್ಚು ಒತ್ತಡ ಹಾಕುವುದು ಸರಿಯಲ್ಲ. ನಿಮ್ಮ ಒಡಹುಟ್ಟಿದವರು ಮತ್ತು ಪಾಲಕರು ನಿಮ್ಮನ್ನು ವಿಮರ್ಶಿಸುವಂತೆ ಕಂಡರೂ ನಿಮ್ಮ ಸಹಾಯಕ್ಕೆ ಬರಬಲ್ಲರು. ಸಾಧ್ಯವಿದ್ದರೆ ಅವರಲ್ಲಿ ಹೇಳಿಕೊಳ್ಳಿ. ಏನೇ ಆದರೂ ಹತಾಶೆಗೆ ಒಳಗಾಗಬೇಡಿ. ನಿಮ್ಮ ಸುತ್ತಲೂ ಇರುವವರಿಂದ ಬೆಂಬಲ ದೊರೆಯದಿದ್ದರೆ ನಿಮ್ಮ ಶಾಲೆಯ ಆಪ್ತ ಸಮಾಲೋಚಕರು ಅಥವಾ ವೈದ್ಯರನ್ನು ಭೇಟಿಮಾಡಿ. ಅವರಲ್ಲಿ ಒಬ್ಬರು ನಿಮ್ಮನ್ನು ಸಮಾಧಾನಗೊಳಿಸಿ ಮತ್ತೆ ಮೊದಲಿನಂತಾಗಲು ಸಹಾಯ ಮಾಡುತ್ತಾರೆ. ಇಲ್ಲವೇ ಅಗತ್ಯ ಕಂಡುಬಂದರೆ ಮನಃಶಾಸ್ತ್ರಜ್ಞರನ್ನು ಸಂಪರ್ಕಿಸುವಂತೆ ಸೂಚಿಸಬಹುದು.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org