ಹರೆಯ ಅಥವಾ ಹರೆಯದ ವಯಸ್ಸು

ಹದಿಹರೆಯದವರ ಸ್ವಭಾವ

ಸಾಮಾನ್ಯವಾಗಿ ಹದಿಹರೆಯದವರು ತಮ್ಮನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಭಾವಿಸುತ್ತಾರೆ.

test

ಸ್ವಲ್ಪ ಉಪದ್ರಕಾರಿ ಮಕ್ಕಳ ಪಾಲಕರು ಮಾತ್ರ ಈ ಶಬ್ಧವನ್ನು ಬಳಸುವುದನ್ನು ನಾನು ಕೇಳಿದ್ದೇನೆ. ತಡರಾತ್ರಿಯವರೆಗೂ ಮನೆಯಿಂದ ಹೊರಗುಳಿಯುವ, ಅತಿಯಾಗಿ ಮಧ್ಯವನ್ನು ಸೇವಿಸುವ, ಮಧ್ಯಾಹ್ನದವರೆಗೂ ಮಲಗಿರುವ ಮತ್ತು ಅತ್ಯಂತ ಕಡಿಮೆ ದರ್ಜೆಯನ್ನು ಗಳಿಸುವ ಮಗ ಅಥವಾ ಮಗಳ ಬಗ್ಗೆ ಚಿಂತೆಗೊಳಗಾದ ಪಾಲಕರು ಇವರಾಗಿರುತ್ತಾರೆ. ಅವರ ಪ್ರಕಾರ ಮಕ್ಕಳು ನಿದ್ರಿಸಲು, ಬಟ್ಟೆಗಳನ್ನು ಲಾಂಡ್ರಿ ಮಾಡಿಕೊಳ್ಳಲು ಮನೆಯನ್ನು ಬಳಸುತ್ತಾರೆ ಹಾಗೂ ಪಾಲಕರನ್ನು ಎಟಿಎಮ್ ಎಂದು ಭಾವಿಸುತ್ತಾರೆ. ಇದನ್ನಿಲ್ಲಿ ನಾನು ಕೇವಲ ಉದಾಹರಿಸುತ್ತಿದ್ದೇನೆ ಅಷ್ಟೆ.

ಇಂತಹ ಪಾಲಕರು, ಕೋಪದಿಂದ ಅಬ್ಬರಿಸುವುದು ಹಾಗೂ ಸಾಧುವಲ್ಲದ ಭಾಷೆಯನ್ನು ಬಳಸುವುದು ಹದಿಹರೆಯದವರ ಸಾಮಾನ್ಯ ಲಕ್ಷಣವೆಂದು ಭಾವಿಸಿರುತ್ತಾರೆ. ನನ್ನೆದುರು ಖುರ್ಚಿಯಲ್ಲಿ ಓರೆಯಾಗಿ ಕುಸಿದು ಕುಳಿತ ಸಿಡುಕು ಮೋರೆಯ/ ಉದಾಸೀನ ಭಾವದ ಹದಿಹರೆಯದ ವ್ಯಕ್ತಿಗೆ ನೋವಾಗದ ರೀತಿಯಲ್ಲಿ ಆತ್ಮಪೂರ್ವಕವಾಗಿ, ಒಂದು ಸಣ್ಣ ನಗೆ ಸೂಸುತ್ತಾ ಇದನ್ನವರು ಹೇಳುತ್ತಾರೆ.

ವಿಚಿತ್ರವೆನಿಸಿದರೂ, ಶಾಲೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆಯುವ, ಸ್ನೇಹಿತರನ್ನು ತಮಗೆ ಪರಿಚಯಿಸುವ ಹಾಗೂ ಯಾವುದೇ ಚಿಂತೆಗೆ ಆಸ್ಪದವಿಲ್ಲದಂತೆ (ವಿಶೇಷವಾಗಿ ನಗರದ ಹೆಣ್ಣು ಮಕ್ಕಳ ವಿಚಾರದಲ್ಲಿ) ಹೊತ್ತಿಗೆ ಸರಿಯಾಗಿ ಮನೆಗೆ ಬರುವ ತಮ್ಮ ಮಗಳ ಬಗ್ಗೆ ಪಾಲಕರು ಹೇಳುತ್ತಾರೆ, “ ಅವಳು ತುಂಬಾ ಒಳ್ಳೆಯ ಮಗು, ಟಿಪಿಕಲ್ ಟಿನೇಜರ್ ತರಹವಲ್ಲ” ಎಂದು! ಒಂದು ವೇಳೆ ಅವರು ತಡರಾತ್ರಿಯವರೆಗೂ ಮನೆಯ ಹೊರಗೆ ಪಾರ್ಟಿ ಮಾಡುತ್ತಿರಬೇಕಾದರೂ ತಾವಿರುವ ಜಾಗದ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿ, ಮದ್ಯ ಸೇವಿಸದವರಿಂದಲೇ ಮನೆಗೆ ಡ್ರಾಪ್ ಪಡೆಯುತ್ತಾರೆ. ಇದರ ಬಗ್ಗೆ ಪಾಲಕರಿಗೆ ಅರಿವೇ ಇರುವುದಿಲ್ಲ!

ನಾನು ಭೇಟಿ ಮಾಡಿದ ಬಹಳ ಜನ ಹದಿಹರೆಯದವರು ತಮ್ಮ ಗ್ರೇಡ್ ಗಳ ಬಗ್ಗೆ ಮತ್ತು ಉತ್ತಮ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರೇನೂ ಪರಿಪೂರ್ಣತೆಯ ಮೂರ್ತಿಗಳಲ್ಲ, ಆಗಬೇಕಾಗಿಯೂ ಇಲ್ಲ. ಅವರೂ ಆಗೀಗ ಸಣ್ಣಪುಟ್ಟ ತಪ್ಪುಗಳನ್ನು ಮಾಡಬಹುದು. ಒಮ್ಮೊಮ್ಮೆ ಪರೀಕ್ಷೆಯಲ್ಲಿ ಫೇಲಾಗಿರಬಹುದು, ಮಧ್ಯಾಹ್ನದ ಕ್ಲಾಸನ್ನು ತಪ್ಪಿಸಿ ಸ್ನೇಹಿತರೊಂದಿಗೆ ತಿರುಗಾಡಲು ಹೋಗಿರಬಹುದು.

ಅವರು ಎಲ್ಲವನ್ನೂ ಪಾಲಕರಿಗೆ ಹೇಳದಿರಬಹುದು, ಅದು ಕೂಡ ಸಹಜವೇ. ತಮ್ಮ ಕಾರ್ಯಗಳ ಜವಾಬ್ಧಾರಿಯನ್ನು ತಾವೇ ಹೊರುವ ಸ್ವತಂತ್ರ ವ್ಯಕ್ತಿಗಳಾಗುವುದು, ಅದುವೇ ಬೆಳವಣಿಗೆಯ ವಿಧಾನ. ಅವರು ತಮ್ಮ ಪಾಲಕರು ನಂಬಿದ ವಿಚಾರಗಳನ್ನು ಪಾಲಿಸಬೆಕೆಂದೇನಿಲ್ಲ. ಆದರೆ ಅವರೂ ಕೂಡ ತಮ್ಮ ಕುಟುಂಬದವರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಮತ್ತು ಪಾಲಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸಲು ಇಷ್ಟಪಡುತ್ತಾರೆ.

ಟಿಪಿಕಲ್ ಹಿರಿಯ ನಾಗರಿಕರಿಗಿಂತ ಹೆಚ್ಚಿನ ಟಿಪಿಕಲ್ ಟಿನೇಜರುಗಳೇನಿಲ್ಲ ಬಿಡಿ. ಒಬ್ಬ ಸ್ವತಂತ್ರ ವಯಸ್ಕನಾಗಿ ನಿಲ್ಲುವುದು ಯೌವನದ ಸಹಜ ಅಗತ್ಯವಾಗಿದ್ದು ಇದು ನಾವು ಜೀವನವೆಂದು ಕರೆಯುವ ಬದುಕಿನ ಒಂದು ಸಹಜ ಪ್ರಕ್ರಿಯೆಯಾಗಿದೆ. ಅವರು ಮಾಡುವ ಎಲ್ಲ ಕಾರ್ಯಗಳೂ ಈ ಜನ್ಮಜಾತ ಅವಶ್ಯಕತೆಗಾಗಿಯೇ ಇರುತ್ತದೆ.

ನಾನು ಹದಿಹರೆಯದ ಕ್ಲೇಷಗಳನ್ನು ಗೌಣವಾಗಿ ಪರಿಗಣಿಸುತ್ತಿಲ್ಲ. ವೈಯಕ್ತಿಕ ಅಸ್ತಿತ್ವ, ದೈಹಿಕ ಸೌಂದರ್ಯ, ಶೈಕ್ಷಣಿಕ ಸಾಧನೆ, ಸ್ನೇಹಿತರೊಂದಿಗಿನ ಸಂಬಂಧಗಳು ಹಾಗೂ ಕಾಲೇಜು ಆಯ್ಕೆ ಮುಂತಾಗಿ ಹದಿ ವಯಸ್ಸು ಒಂದು ರೀತಿಯಲ್ಲಿ ಪ್ರಯತ್ನಕಾಲ, ಸಂಧಿಕಾಲ ಅಥವಾ ಗೊಂದಲದ ಕಾಲ ಎಂಬುದನ್ನು ಹದಿವಯಸ್ಸಿನ ಯಾರೇ ಆದರೂ ಹೇಳುತ್ತಾರೆ. ಆದರೆ, ಈ ಎಲ್ಲ ವಿಷಯಗಳಿಗೆ ಸಂಬಂಧಿಸಿ ಅವರನ್ನು ನರಕೂಪಕ್ಕೆ ತಳ್ಳಬಹುದಾದ ಪರಿಸ್ಥಿತಿಗಳ ಮಟ್ಟಕ್ಕೆ ಏರಿಸುವುದನ್ನು ಮಾತ್ರ ನಾನು ನಿರಾಕರಿಸುತ್ತೇನೆ. ಆ ನಿಟ್ಟಿನಲ್ಲಿ ಅನುಮಾನವಿಲ್ಲ. ಆದರೆ, ಈ ರೀತಿಯ ‘ಅಟ್ಟಕ್ಕೇರಿಸುವಿಕೆ’ ಬಹುತೇಕ ಹದಿಹರೆಯದವರನ್ನು ಬಾಧಿಸುವುದಿಲ್ಲ.

ಆದರೆ ಎಲ್ಲಿಂದ ಈ ರೂಢಮಾದರಿ ಹುಟ್ಟಿಕೊಂಡಿತು? ‘ಟಿಪಿಕಲ್ ಟೀನೇಜರ್ಸ್’ ಎಂದರೆ ಹೆಚ್ಚಿನ ಬಾರಿ ತೊಂದರೆಗೊಳಗಾದ ಹದಿಹರೆಯದವರೇ ಆಗಿರುತ್ತಾರೆ. ಅವರಲ್ಲಿ ಅಭದ್ರತೆ ಮನೆಮಾಡಿಕೊಂಡಿದ್ದು, ತಮ್ಮ ಬಗ್ಗೆಯೇ ಅಹಿತಕರವಾದ ಭಾವನೆಯಿಂದ ಬಾಧೆಪಡುತ್ತಿರುತ್ತಾರೆ. ಭಾವೋದ್ರೇಕ ಅಥವಾ ಆಕ್ರಮಣಕಾರಿ ಮನೋಭಾವದಿಂದ ಅವರು ತಮ್ಮ ಕುಂದುಕೊರತೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಿರುತ್ತಾರೆ. ಅವರ ಸಮಸ್ಯೆಯು ಹೆಚ್ಚಿನ ಬಾರಿ ಸ್ವಭಾವ ಹಾಗೂ ಸಂಬಂಧಗಳಿಂದ ಉದ್ಭವಿಸಿದ ಸಮ್ಮಿಶ್ರ ಫರಿಣಾಮವಾಗಿರುತ್ತದೆ.

ಈ ರೀತಿ ತೊಂದರೆಗೊಳಗಾದ ಹದಿಹರೆಯದ ವ್ಯಕ್ತಿ ಭ್ರಮನಿರಸನಗೊಂಡಿರಬಹುದು, ಸಿಟ್ಟಾಗಿರಬಹುದು ಅಥವಾ ದುಃಖಿತನಾಗಿರಬಹುದು. ಆತ ಅಥವಾ ಆಕೆಯು ಖಿನ್ನತೆಗೆ ಒಳಗಾಗಿರಬಹುದು ಇಲ್ಲವೇ ಎಲ್ಲರಿಂದ ದೂರಹೋಗಲು ಪ್ರಯತ್ನಿಸುತ್ತಿರಬಹುದು. ಏಕಾಂಗಿತನ ಮತ್ತು ಗೊಂದಲಗಳನ್ನು ಹೇಳಿಕೊಂಡು ಹಗುರಾಗಲು ಯಾರೂ ಇಲ್ಲದಿರಬಹುದು.

ಪ್ರತಿಯೊಬ್ಬರಿಗೂ ಜೀವನದ ಒಂದಲ್ಲಾ ಒಂದು ಹಂತದಲ್ಲಿ ಸಾಂತ್ವನ/ಬೆಂಬಲದ ಅವಶ್ಯಕತೆಯಿರುತ್ತದೆ ಮತ್ತು ಅದನ್ನು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಅಪರಿಚಿತರೊಬ್ಬರಿಗೆ ಕರೆ ಮಾಡಿ ಭೇಟಿಯ ಸಮಯ ನಿಗದಿಪಡಿಸಿಕೊಳ್ಳುವ ಮೊದಲನೆಯ ಹೆಜ್ಜೆ ಸ್ವಲ್ಪ ಕಷ್ಟದ ಕೆಲಸವೇ ಎಂಬುದು ನನಗೆ ಗೊತ್ತು ಏಕೆಂದರೆ ಮಕ್ಕಳು ನನ್ನ ಬಳಿ ಹಾಗೆಯೇ ಹೇಳುತ್ತಾರೆ. ಮೊದಲ ಬಾರಿಗೆ ಕರೆ ಮಾಡಿದಾಗ ಒಂದೋ ಅವರು ಹೆದರಿರುತ್ತಾರೆ ಅಥವಾ ಅವರು ಆತಂಕಗೊಳ್ಳದೇ ಶಾಂತವಾಗಿರಲು ಪ್ರಯತ್ನಿಸಿದರೂ ತಮ್ಮ ಭಯವನ್ನು ಮರೆಮಾಚುವಲ್ಲಿ ವಿಫಲರಾಗುತ್ತಾರೆ.

ತಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು ಎಂಬ ಯೋಚನೆಯಿಂದ ಹದಿಹರೆಯದವರು ಹೆಚ್ಚಿನ ಬಾರಿ ಪ್ತಸಮಾಲೋಚನೆಯ ತಮ್ಮ ಮೊದಲ ಭೇಟಿಯಲ್ಲಿ ವಿಶ್ವಾಸವಿಡುವುದಿಲ್ಲ. ಮೊದಲ ಭೇಟಿಯ ನಂತರ ಎಷ್ಟೋ ಹದಿವಯಸ್ಸಿನ ಮಕ್ಕಳು ತಮ್ಮ ಮುಂದಿನ ಸೆಶನ್ನನ್ನು ಕಾತರದಿಂದ ಎದುರು ನೋಡುವುದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ, ಏಕೆಂದರೆ ಮೊದಲ ಭೇಟಿಯಲ್ಲೇ ತಮ್ಮೆಲ್ಲಾ ಗೊಂದಲಗಳನ್ನು ಹೊರಹಾಕಿಕೊಂಡಿರುವುದರಿಂದ ಅವರಿಗೆ ಬಹಳ ನಿರಾಳವೆನೆಸುತ್ತಿರುತ್ತದೆ. ಅವರು ಈಗ ಸ್ಪಷ್ಟವಾಗಿ ಯೋಚಿಸಬಲ್ಲವರಾಗಿರುತ್ತಾರೆ ಮತ್ತು ಅವರಲ್ಲಿ ಭರವಸೆಯು ಮರುಕಳಿಸಿರುತ್ತದೆ.

ಎಷ್ಟೋ ಬಾರಿ ಖಿನ್ನತೆ ನಿವಾರಣಾ ಔಷಧಗಳನ್ನು ವೈದ್ಯರ ಸಲಹೆಯಂತೆ ಕೆಲವು ತಿಂಗಳುಗಳವರೆಗೆ ತೆಗೆದುಕೊಳ್ಳುವುದರಿಂದ ಅವರಿಗೆ ಪ್ರಯೋಜನವಾಗುತ್ತದೆ. ದೀರ್ಘಾವಧಿಯ ಒತ್ತಡ ಹಾಗೂ ದಿಢೀರ್ ಆಘಾತವು ವ್ಯಕ್ತಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ಖಿನ್ನತೆ ನಿವಾರಣಾ ಔಷಧಗಳು ತಕ್ಕ ಮಟ್ಟಿಗೆ ಪ್ರಯೋಜನಕಾರಿಯಾಗಿವೆ. ಅವು ಯಾವುದೇ ವ್ಯಸನವನ್ನು ಉಂಟುಮಾಡುವುದಿಲ್ಲ ಅಥವಾ ಜನರು ನಂಬುವಂತೆ ವ್ಯಕ್ತಿಗಳನ್ನು ಜೊಂಬಿಗಳನ್ನಾಗಿ ಪರಿವರ್ತಿಸುವುದಿಲ್ಲ. ಆತಂಕ ಮತ್ತು ಖಿನ್ನತೆಯನ್ನು ಔಷಧಗಳ ನೆರವಿನ ಚಿಕಿತ್ಸೆಯಿಂದ ಯಶಸ್ವಿಯಾಗಿ ನಿವಾರಿಸಬಹುದು.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org