ಹರೆಯದ ವಯಸ್ಸಿನವರ ಮಿದುಳಿನಲ್ಲಿ

ಹರೆಯದ ವಯಸ್ಸಿನವರ ಮಿದುಳಿನಲ್ಲಿ

ಹರೆಯದ ವಯಸ್ಸಿನವರ ಮಿದುಳಿನಲ್ಲಿ

ಹರೆಯದ ವಯಸ್ಸಿನವರ ಮಿದುಳಿನಲ್ಲಿ  ನನಗೇಕೆ ಹೀಗೆನಿಸುತ್ತದೆ ? ನನ್ನ ಭಾವಾವೇಶವನ್ನು ಅರ್ಥಮಾಡಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ? ನನ್ನ ಚಟುವಟಿಕೆಗಳನ್ನು ಇತರರು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ ? ನನ್ನ ಸುತ್ತಲಿನ ವಯಸ್ಕರು ಹಠಾತ್ತನೆ ಏಕೆ ವಿಭಿನ್ನವಾಗಿ ವರ್ತಿಸುತ್ತಿದ್ದಾರೆ ? ನನ್ನ ಮೇಲೆ ನನಗೇ ನಿಯಂತ್ರಣ ಸಾಧಿಸಲು ಏಕೆ ಸಾಧ್ಯವಾಗುತ್ತಿಲ್ಲ ? ನನಗೆ ಮಾತ್ರವೇ ಹೀಗಾಗುವುದೇ ? ನಾನು ಯಾರ ಬಳಿ ಕೇಳಲಿ ? ನಾನು ಏನು ಮಾಡಲಿ ? ಇನ್ನು ಯಾರನ್ನೂ ನಂಬಲು  ನನ್ನಿಂದ ಸಾಧ್ಯವೇ ಇಲ್ಲ...

ಹರೆಯದ ವ್ಯಕ್ತಿಯಾಗಿ ನಿಮ್ಮಲ್ಲಿ ಈ ಪ್ರಶ್ನೆಗಳು ಮೂಡುತ್ತವೆಯೇ ?

ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವಂತೆ ಮಾಡಲು ಈ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡೋಣ.

ಏನಾಗುತ್ತಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ನನಗೇಕೆ ಇಷ್ಟೊಂದು ಗೊಂದಲವಾಗುತ್ತಿದೆ ?

ಇದು ನಿಮಗೆ ಮಾತ್ರವೇ ಅಲ್ಲ. ಹರೆಯದ ವಯಸ್ಸಿನ ಎಲ್ಲರಲ್ಲೂ ಇದೇ ರೀತಿಯ ಗೊಂದಲ, ಜುಗುಪ್ಸೆ ಇರುತ್ತದೆ. ನಿಮ್ಮ ದೇಹದಲ್ಲಿರುವ ಹಾರ್ಮೋನುಗಳ ಪ್ರಭಾವದಿಂದ ಮತ್ತು ಈ ಹಂತದಲ್ಲಿ ನಿಮ್ಮ ಮಿದುಳು ಬೆಳೆಯುವುದರಿಂದ ನಿಮ್ಮಲ್ಲಿ ಈ ರೀತಿಯ ಉತ್ಕಟ ಭಾವನೆಗಳು ಹುಟ್ಟುತ್ತವೆ.

ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಉಪಯುಕ್ತ, ಇದರಿಂದ ನಿಮ್ಮ ಮುಂದಿನ ಹಂತದ ಪರಿವರ್ತನೆ ಸುಲಭವಾಗುತ್ತದೆ. ಬೆಳವಣಿಗೆಯ ಈ ಹಂತದಲ್ಲಿ ನಿಮ್ಮ ದೇಹ ಮಾತ್ರವೇ ಅಲ್ಲ ನಿಮ್ಮ ಮಿದುಳು  ಸಹ ಬದಲಾವಣೆಗಳನ್ನು ಕಾಣುತ್ತದೆ.

ಮಿದುಳಿನ ಪ್ರಮುಖ ಬೆಳವಣಿಗೆಯ ಹಂತರ ಆರನೆಯ ವರ್ಷದಲ್ಲಿ ಕಂಡುಬರುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ ಆದರೆ 20ರ ಹರೆಯದವರೆಗೂ ಮಿದುಳು ಬೆಳವಣಿಗೆಯನ್ನು ಕಾಣುತ್ತಲೇ ಇರುತ್ತದೆ. ತಾರ್ಕಿಕ ಆಲೋಚನೆ, ತರ್ಕಬದ್ಧತೆ, ನಿರ್ಣಯ ಕೈಗೊಳ್ಳುವುದು, ಯೋಜನೆ ರೂಪಿಸುವುದು, ಕಾರ್ಯನಿರ್ವಹಣೆ ಮತ್ತಿತರ ಬೌದ್ಧಿಕ ಪ್ರಕ್ರಿಯೆಗಳ ದೃಷ್ಟಿಯಿಂದ ಹರೆಯದ ವಯಸ್ಸಿನಲ್ಲಿ ಮಿದುಳಿನಲ್ಲಿ ಉಂಟಾಗುವ ಬೆಳವಣಿಗೆಗಳು ಮಹತ್ವದ ಪಾತ್ರ ವಹಿಸುತ್ತವೆ.

ಹರೆಯದ ವಯಸ್ಸಿನವರ ಮಿದುಳಿನಲ್ಲಿ ಉಂಟಾಗುವ ವಿಭಿನ್ನ ಬದಲಾವಣೆಗಳನ್ನು ನೋಡೋಣ:

ಹಾರ್ಮೋನ್‍ಗಳ ಬದಲಾವಣೆ ನಿಮ್ಮ ಸುತ್ತಲಿನ ವಯಸ್ಕರು ಸಾಮಾನ್ಯವಾಗಿ ಹರೆಯದ ವಯಸ್ಸಿನವರ ವರ್ತನೆಯಲ್ಲಿ ಬದಲಾವಣೆಯಾಗಲು ಹಾರ್ಮೋನ್‍ಗಳೇ ಕಾರಣ ಎಂದು ಹೇಳುವುದನ್ನು ಕೇಳಿರುತ್ತೀರಿ. ನಿಮಗೆ ತಿಳಿದಿರುವಂತೆ ನೀವು ಪ್ರೌಡಾವಸ್ಥೆಗೆ ಬಂದರೆ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಹಾರ್ಮೋನ್‍ಗಳು ಬಿಡುಗಡೆಯಾಗುತ್ತವೆ. ಹಾಗಾಗಿಯೇ ಈ ಹಂತದಲ್ಲಿ ನೀವು ಕ್ಷಣ ಮಾತ್ರದಲ್ಲಿ ನಿರ್ಧಾರಗಳನ್ನು ತಳೆಯುತ್ತೀರಿ. ಆದರೆ ಹಾರ್ಮೋನ್‍ಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ವಿಚಾರಗಳಿವೆ.

ಮಿದುಳಿನಲ್ಲಿ ಬಹಳಷ್ಟು ಬೆಳವಣಿಗೆಗಳು ನಿದ್ರಾವಸ್ಥೆಯಲ್ಲಿದ್ದಾಗ ನಡೆಯುತ್ತವೆ. ಹೊಸ ಸಂಪರ್ಕಗಳು ಹುಟ್ಟಿಕೊಳ್ಳುತ್ತವೆ, ನಮ್ಮ ನೆನಪುಗಳು ಗಟ್ಟಿಯಾಗುತ್ತವೆ. ಬೆಳವಣಿಗೆಗೆ ನೆರವಾಗುವ ಹಾರ್ಮೋನ್‍ಗಳನ್ನು ಪಿಟ್ಯುಟರಿ ಗ್ಲಾಂಡ್ ದೇಹದೊಳಕ್ಕೆ ಬಿಡುಗಡೆ ಮಾಡುತ್ತದೆ. ಆದ್ದರಿಂದಲೇ ಹೊಸತಾಗಿ ಏನನ್ನೇ ಕಲಿಯಬೇಕೆಂದರೂ ನಿದ್ರೆ ಬಹಳ ಮುಖ್ಯವಾಗುತ್ತದೆ. ಆದರೆ ಈ ಹಂತದಲ್ಲಿ ನಿದ್ರಾ ಭಂಗವಾವುದೇ ಹೆಚ್ಚು.

ನಮ್ಮ ನಿದ್ರೆಯನ್ನು ಎರಡು ಹಾರ್ಮೋನ್‍ಗಳು ನಿರ್ವಹಿಸುತ್ತವೆ. ಕಾರ್ಟಿಸಾಲ್ ಮತ್ತು ಮೆಲಟೋನಿನ್. ಕಾರ್ಟಿಸಾಲ್ ನಮ್ಮನ್ನು ಎಚ್ಚರಿಸಲು ನೆರವಾದರೆ ಮೆಲಟೊನಿನ್ ನಮಗೆ ನಿದ್ರೆ ಬರಿಸುತ್ತದೆ. ನಿದ್ರೆಯ ಬಗ್ಗೆ ನಡೆದಿರುವ ಸಂಶೋಧನೆಗಳ ಅನುಸಾರ ವಯಸ್ಕರಲ್ಲಿ ಮೆಲಟೋನಿನ್ ಸರಿಸುಮಾರು ರಾತ್ರಿ 10 ಗಂಟೆಯ ವೇಳೆಗೆ ಬಿಡುಗಡೆಯಾಗುತ್ತದೆ. ಆದರೆ ಹರೆಯದ ವಯಸ್ಸಿನವರಿಗೆ  ನೀವು ಗಮನವಿಟ್ಟು ಮಾಡುವ ಯಾವುದಾದರೂ ಕೆಲಸದಲ್ಲಿ ನಿರತರಾಗಿದ್ದರೆ, ಮೆಲಟೋನಿನ್ ಬಿಡುಗಡೆಯಾಗುವುದು ತಡವಾಗುತ್ತದೆ. ಇದು ಸಾಂಸ್ಕತಿಕ ವಿಚಾರವೇ ಇರಬಹುದು, ನಿಮ್ಮ ಗೆಳೆಯರ ಪಾರ್ಟಿ ತಡವಾಗಿರಬಹುದು, ಆದರೆ ಜೈವಿಕವಾಗಿ ಮೆಲಟೋನಿನ್ ಬಿಡುಗಡೆಯಾಗುವುದು ವಿಳಂಬವಾಗುವುದರಿಂದಲೇ ನಿದ್ರೆ ತಡವಾಗುತ್ತದೆ. ನೀವು ಬೆಳಿಗ್ಗೆ ಬೇಗನೆದ್ದು ಶಾಲೆಗೋ, ಕಾಲೇಜಿಗೋ ಹೋಗುವಿರಾದರೆ,  ನಿಮಗೆ ರಾತ್ರಿ ಸರಿಯಾದ ನಿದ್ರೆ ಇಲ್ಲದಿದ್ದಾಗ, ಕಿರಿಕಿರಿ ಉಂಟಾಗುತ್ತದೆ. 

ನಿಮ್ಮ ದೈಹಿಕ ಮತ್ತು ಮಿದುಳಿನ ಬೆಳವಣಿಗೆಯ ದೃಷ್ಟಿಯಿಂದ ಕನಿಷ್ಟ ಆರು ಗಂಟೆಗಳ ವಿರಾಮದ ನಿದ್ರೆ ಅತ್ಯವಶ್ಯಕ. ನೀವು ನಿಮ್ಮ ನಿತ್ಯ ಚಟುವಟಿಕೆಗಳನ್ನು ನಿರ್ಧರಿಸುವಾಗ ಓದು, ಮನರಂಜನೆ ಇನ್ನಿತರ ಕಾರ್ಯಕ್ರಮಗಳೊಡನೆ ನಿಮ್ಮ ನಿದ್ರೆಗಾಗಿಯೂ ಆರು ಗಂಟೆಯನ್ನು ನಿಗದಿಪಡಿಸಿಕೊಳ್ಳಿ. ನಿಮ್ಮ ಸಮಯವನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ನಿಮ್ಮ ತಂದೆ ತಾಯಿಯರ ಅಥವಾ ಮನೆಯಲ್ಲಿನ ಹಿರಿಯರ ನೆರವು ಪಡೆಯಬಹುದು.

ಪ್ರೀಫ್ರಂಟಲ್ ಲೋಬ್(ಹಣೆಯ ಮುಂಭಾಗದ ಮೂಳೆಯ ತಳಭಾಗ) ಬೆಳವಣಿಗೆ ಪ್ರೀಫ್ರಂಟಲ್ ಲೋಬ್ ನಾವು ತೆಗೆದುಕೊಳ್ಳುವ ಎಲ್ಲ ವೈಚಾರಿಕ ನಿರ್ಣಯಗಳಿಗೆ ಕಾರಣವಾಗುವ ಭಾಗ ಎಂದರೆ ಮೆದುಳಿನಲ್ಲಿರುವ ಹಣೆಯ ಮುಂಭಾಗದ ಮೂಳೆಯ ತಳಭಾಗ. ಇದನ್ನು ಪ್ರೀಫ್ರಂಟಲ್ ಲೋಬ್ ಎನ್ನಲಾಗುತ್ತದೆ.

ಯಾವುದೇ ಒಂದು ಕ್ರಿಯೆ, ನಿರ್ಧಾರ ಮತ್ತು ತರ್ಕ, ಆವೇಗದ ನಿಯಂತ್ರಣ, ವರ್ತನೆಯ ಉತ್ಕಟತೆ ಇವೆಲ್ಲಕ್ಕೂ ಸಂಬಂಧಿಸಿದಂತೆ ಇರುವ ಅಪಾಯಗಳನ್ನು ಪರಾಮರ್ಶಿಸುವುದಕ್ಕೆ ಈ ಅಂಗ ನೆರವಾಗುತ್ತದೆ. ವಯಸ್ಕರಲ್ಲಿ ಈ ಭಾಗವು ಸಂಪೂರ್ಣ  ಬೆಳವಣಿಗೆಯಾಗಿರುತ್ತದೆ ಮತ್ತು ಮಿದುಳಿನ ಎಲ್ಲ ಭಾಗಗಳಿಗೂ ಸಂಪರ್ಕ ಹೊಂದಿರುತ್ತದೆ. ಹಾಗಾಗಿ ವಯಸ್ಕರ ಮಿದುಳು ಸಮಗ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲ ಕಡೆಗಳಿಂದಲೂ ಮಾಹಿತಿಯನ್ನು ಸರಿದೂಗಿಸುತ್ತದೆ, ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.

ಹರೆಯದ ಮಕ್ಕಳಲ್ಲಿ ಈ ಭಾಗ ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ ಮತ್ತು 20 ವಯಸ್ಸಿನ ಆಸುಪಾಸುವರೆಗೂ ಬೆಳವಣಿಗೆ ಮುಂದುವರೆಯುತ್ತದೆ. ರಚನಾತ್ಮಕವಾಗಿ ಬೆಳವಣಿಗೆಯಾಗುವುದೇ ಅಲ್ಲದೆ ಈ ಭಾಗ ಪರಿಪೂರ್ಣವಾಗಿ ಕೆಲಸ ಮಾಡುವುದೂ ಇಲ್ಲ. ವಯಸ್ಕರ ಮಿದುಳಿನಲ್ಲಿ ಮಾಹಿತಿಯನ್ನು ರವಾನಿಸುಷ್ಟು ವೇಗವಾಗಿ ಹರೆಯದ ಮಕ್ಕಳಲ್ಲಿ ರವಾನಿಸುವುದಿಲ್ಲ. ಇದಕ್ಕೆ ನ್ಯೂರಾನ್ಸ್ ಕಾರಣ.

ಮಿದುಳಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮಾಹಿತಿಯನ್ನು ರವಾನೆ ಮಾಡಲು ನೆರವಾಗುವ ಕಣಗಳಿಗೆ ನ್ಯೂರಾನ್ಸ್ ಎನ್ನಲಾಗುತ್ತದೆ. ಇವುಗಳ ಮೇಲ್ಮೈ ವಲಯವನ್ನು ಮೀಲಿನ್ ಶೀತ್ ಎಂಬ ವಸ್ತು ಪದರದಂತೆ ಮುಚ್ಚಿರುತ್ತದೆ. 

ಮೀಲೀನ್ ಶೀತ್ ಇದ್ದ ಕಣಗಳು, ಇದು ಇಲ್ಲದಿರುವ ಕಣಗಳಿಗಿಂತಲೂ ನೂರು ಪಟ್ಟು ವೇಗವಾಗಿ ಮಾಹಿತಿಯನ್ನು ರವಾನಿಸುತ್ತದೆ. ನಿಮಗೇ ತಿಳಿಯುವಂತೆ ನಿಮ್ಮ ಮಿದುಳಿನಲ್ಲಿ ನ್ಯೂರಾನ್ಸ್ ಇನ್ನೂ ಬೆಳವಣಿಗೆಯಾಗುತ್ತಲೇ ಇರುತ್ತದೆ. ಹಾಗಾಗಿ ಮಾಹಿತಿಯ ರವಾನೆಯಾಗುವುದು ನಿಧಾನವಾಗುತ್ತದೆ ಮತ್ತು  ಆವೇಗ ಹೆಚ್ಚಾಗಿರುತ್ತದೆ. ನ್ಯೂರಾನ್‍ಗಳ ಮೇಲೆ ಮೀಲಿನ್ ಪದರಗಳು ಹರಡುವುದು ಮೊದಲು ಮಿದುಳಿನ ಹಿಂಭಾಗದಲ್ಲಿ ಆರಂಭವಾಗುತ್ತದೆ. ಈ ಭಾಗವು ಹರೆಯದ ವಯಸ್ಸಿನ ಮಕ್ಕಳ ಭಾವನೆಗಳು ಮತ್ತು ಭಾವಾವೇಶಗಳಿಗೆ ಕಾರಣವಾಗಿರುತ್ತದೆ. ಹಾಗಾಗಿ ಈ ವಯಸ್ಸಿನಲ್ಲಿರುವ ನೀವು ಭಾವನಾತ್ಮಕವಾಗಿ ದುರ್ಬಲರಾಗಿರುತ್ತೀರಿ ಮತ್ತು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ.

ನಿಮ್ಮ ಬಾಲ್ಯಾವಸ್ಥೆಗಿಂತಲೂ ಈ ವಯಸ್ಸಿನಲ್ಲಿ ನಿಮ್ಮ ಭಾವಾವೇಶಗಳು ಹೆಚ್ಚು ಬೇಗನೆ ವ್ಯಕ್ತವಾಗುತ್ತದೆ. ಇದು ಕೆಲವೊಮ್ಮೆ ನಿಮ್ಮ ನಿಯಂತ್ರಣವನ್ನೂ ಮೀರುತ್ತದೆ. ಈ ಸನ್ನಿವೇಶಗಳಲ್ಲಿ ನೀವು ಹೆಚ್ಚು ಆವೇಗಕ್ಕೊಳಗಾಗಿ ಅವಸರದ ನಿರ್ಧಾರ ಕೈಗೊಳ್ಳುತ್ತೀರಿ. ಈ ನಿರ್ಧಾರಗಳು ತರ್ಕಕ್ಕೆ ನಿಲುಕದ ಭಾವಾವೇಶಕ್ಕ ಒಳಗಾಗಿ ತೆಗೆದುಕೊಳ್ಳಲಾಗುತ್ತದೆ.

ಈ ಸಮಸ್ಯೆಯನ್ನು ಎದುರಿಸಲು ಇರುವ ಒಂದು ಮಾರ್ಗ ಎಂದರೆ ಹಠಾತ್ತನೆ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಮತ್ತು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅದರಿಂದ ಉಂಟಾಗುವ ಲಾಭ ನಷ್ಟಗಳನ್ನು ಅಳೆದು ತೂಗಿ ಮುಂದುವರೆಯುವುದು. ಈ ಪ್ರಕ್ರಿಯೆಯಲ್ಲಿ ನೀವು ಇತರರ ನೆರವನ್ನೂ ಪಡೆಯಬಹುದು. ಆದರೆ ನೀವು ನಿಮ್ಮ ವಿಚಾರವನ್ನು ಹಂಚಿಕೊಳ್ಳುವ ವ್ಯಕ್ತಿ ಮತ್ತೊಬ್ಬ ಹರೆಯದ ವಯಸ್ಸಿನವರು ಆಗಿರಬಾರದು ಮತ್ತು  ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಗಳಿಗೇ ಒಳಗಾಗುತ್ತಿರಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಹಾಗಾಗಿ ನಿಮ್ಮ ಪೋಷಕರು, ಹಿರಿಯ ಸೋದರ ಅಥವಾ ಸೋದರಿ, ಶಿಕ್ಷಕರು ಅಥವಾ ಪೋಷಕರು ಆಗಬಹುದು.

ಸಿನಾಪ್ಟಿಕ್ ಪ್ರೂನಿಂಗ್  ನಿಮ್ಮ ಮಿದುಳಿನಲ್ಲಿನ ಸಂಪರ್ಕಗಳು ಕೇವಲ ಗುಣಾತ್ಮಕವಾಗಿ ಮಾತ್ರ ಬದಲಾವಣೆಯಾಗುವುದಿಲ್ಲ, ಅದರ ಪ್ರಮಾಣವೂ ಬದಲಾವಣೆಯಾಗುತ್ತಿರುತ್ತದೆ.  ನೀವು ನಿಮ್ಮ ಹರೆಯದ ವಯಸ್ಸನ್ನು ಕಳೆಯುತ್ತಿರುವಂತೆ  ಸಂಪರ್ಕದ ಕೊಂಡಿಗಳು ಕಡಿಮೆಯಾಗುತ್ತಿರುತ್ತವೆ.  ಐದು ವರ್ಷದವರಾಗಿದ್ದಾಗ ಮಿದುಳಿನ ಒಂದು ಭಾಗದಿಂದ ಮತ್ತೊಂದಕ್ಕೆ 15 ಸಂಪರ್ಕದ ಕೊಂಡಿಗಳನ್ನು ಹೊಂದಿದ್ದರೆ ಈಗ ನಿಮಗೆ ಎರಡೇ ಕೊಂಡಿಗಳಿರುತ್ತವೆ. ಇವೆರಡೂ ಹೆಚ್ಚು ಬಳಕೆಯಾಗುವಂತಹುದಲ್ಲ. ಇತರ ಕೊಂಡಿಗಳು ಬಳಕೆಯಾಗದೆ ನಿರುಪಯುಕ್ತವಾಗಿಬಿಡುತ್ತವೆ.

ಈ ಸಂಪರ್ಕಗಳು ಮೊದಲಿನ ಹದಿನೈದು ಕೊಂಡಿಗಳಿಗಿಂತಲೂ ಗಟ್ಟಿಯಾಗಿರುತ್ತವೆ. ಇದರಿಂದ ಮಿದುಳು ವ್ಯವಸ್ಥಿತವಾಗುತ್ತದೆ, ಚಿಂತನಾ ಪ್ರಕ್ರಿಯೆ ಕ್ರಮಬದ್ಧವಾಗಿರುತ್ತದೆ, ಮಾಹಿತಿ ಬಹಳ ಸುಲಭವಾಗಿ ರವಾನೆಯಾಗುತ್ತದೆ. ಅಮಿಗ್ಡಲ ಮತ್ತು ಲಿಂಬಿಕ್ ವ್ಯವಸ್ಥೆ ಮದ್ಯಪಾನ ಮಾಡಲು ಕಾನೂನು ಪ್ರಕಾರ 21 ವರ್ಷ ಆಗಿರಬೇಕು ಏಕೆ ಗೊತ್ತೇ ? ಇದನ್ನು ಓದಿ ತಿಳಿದುಕೊಳ್ಳಿ. ನಮ್ಮೊಳಗಿನ ಭಾವಾವೇಶಗಳಿಗೆ ಲಿಂಬಿಕ್ ವ್ಯವಸ್ಥೆ ಮತ್ತು ಅಮಿಗ್ದಲ ಕಾರಣವಾಗಿರುತ್ತದೆ. ಮಿದುಳಿನ ಈ ಭಾಗ ಪ್ರೀಫ್ರಂಟಲ್ ಕಾರ್ಟೆಕ್ಸ್ ಗಿಂತಲೂ ಮುಂಚಿತವಾಗಿ ಬೆಳವಣಿಗೆಯಾಗುತ್ತದೆ.

ಭಾವಾವೇಶಗಳನ್ನು ಗುರುತಿಸುವಲ್ಲಿ ಪ್ರೀಫ್ರಂಟಲ್ ಕಾರ್ಟೆಕ್ಸ್ ನೆರವಾಗುತ್ತದೆ. ಆದ್ದರಿಂದಲೇ ನಿಮಗೆ ಭಾವನಾತ್ಮಕ ಸನ್ನಿವೇಶಗಳಲ್ಲಿ ನಿಯಂತ್ರಣ ಸಾಧಿಸುವುದು ಕಷ್ಟ ಎನಿಸುತ್ತದೆ.  ಇದು ಮಿದುಳಿಗೆ ಆಹ್ಲಾದ ಮತ್ತು ಪ್ರತಿಫಲದ ಭಾಗವಾಗಿರುತ್ತದೆ. ಅಪಾಯವನ್ನು ಗುರುತಿಸುವ ಭಾಗ ಇನ್ನೂ ಬೆಳವಣಿಗೆಯ ಹಂತದಲ್ಲಿರುವಾಗಲೇ ಈ ಭಾಗ ಪೂರ್ಣ ಬೆಳವಣಿಗೆ ಹೊಂದಿರುತ್ತದೆ. ಆದ್ದರಿಂದಲೇ ನೀವು ಮಾದಕ ದ್ರವ್ಯ, ಮದ್ಯಪಾನ, ಅಸುರಕ್ಷಿತ ವಾಹನ ಚಲಾವಣೆ ಮುಂತಾದುವುದರ ಮೂಲಕ ಅಪಾಯಕಾರಿ ವರ್ತನೆ ಅನುಸರಿಸಿ ಪ್ರತಿಫಲ ನಿರೀಕ್ಷಿಸುತ್ತೀರಿ. 

ಮದ್ಯಪಾನ ಸೇವಿಸಲು ಕಾನೂನು ಪ್ರಕಾರ 21 ವರ್ಷ ಎಂದು ಏಕೆ ನಿಗದಿಪಡಿಸಿದ್ದಾರೆ ಎಂದರೆ ನಿಮ್ಮ ಮಿದುಳು ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು, ಮದ್ಯಪಾನದಂತಹ ಯಾವುದೇ ವಸ್ತು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಈ ವಯಸ್ಸಿನಲ್ಲಿ ಅತಿಯಾಗಿ ಮದ್ಯಪಾನ ಮಾಡುವುದರಿಂದ ನೀವು ವ್ಯಸನಕ್ಕೆ ಬಲಿಯಾಗುವ ಸಾಧ್ಯತೆಗಳೂ ಇರುತ್ತವೆ. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org