ನೀವು ನಿಮ್ಮ ಭಯ ಮತ್ತು ಆತಂಕಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದೀರಾ?

ನಾನು ಈ ಲೇಖನದಲ್ಲಿ ಎರಡು ರೀತಿಯ ಭಯ ಮತ್ತು ಆತಂಕಗಳ ಬಗ್ಗೆ ವಿಶ್ಲೇಷಿಸಲು ಮತ್ತು ವಿವರಿಸಲು ಬಯಸುತ್ತೇನೆ. ಮೊದಲನೆಯದು, ಚಿಕ್ಕಂದಿನಿಂದಲೇ ನಮ್ಮಲ್ಲಿ ಬೆಳೆದು ಬಂದಿರುವ ನಂತರ ವಯಸ್ಕರಾದಾಗ ಅಥವಾ ಪಾಲಕರಾದಾಗಲೂ ಹತ್ತಿಕ್ಕಲಾರದಂತಹ ಭಯ ಮತ್ತು ಆತಂಕಗಳು. ಎರಡನೆಯದು ನಮ್ಮ ಮಕ್ಕಳ ಮತ್ತು ಅವರ ಭವಿಷ್ಯದ ಕುರಿತಾದವುಗಳು.

ಮೊದಲನೆಯವುಗಳಿಗೆ ನಾವು ಹೆಚ್ಚು ದೂರ ಹೋಗಬೇಕಾದ ಅಗತ್ಯವಿಲ್ಲ. ಉದಾಹರಣೆಗೆ ನಾಯಿಗಳನ್ನು ಕುರಿತ ನನ್ನ ಆತಂಕವನ್ನೇ ತೆಗೆದುಕೊಳ್ಳಿ. ನನಗೆ ಇದು ಹೇಗೆ ಶುರುವಾಯಿತೆಂದು ಗೊತ್ತು. ನನ್ನ ತಂದೆಗೆ ನಾಯಿಗಳೆಂದರೆ ಭಯ. ಅವರು ತನಗೆ ನಾಯಿಗಳ ಬಗ್ಗೆ ಇರುವ ಭಯಕ್ಕೆ ಹಲವಾರು ಕಾರಣಗಳನ್ನು ಕೊಡುತ್ತಿದ್ದರಲ್ಲದೇ ಅಂತಹ ಭಯಕ್ಕೆ ಕಾರಣವಾದ ಘಟನೆಗಳನ್ನು ವಿವರಿಸುತ್ತಿದ್ದರು. ಅವುಗಳನ್ನು ಕೇಳುತ್ತಾ ನನಗೇ ಗೊತ್ತಿಲ್ಲದಂತೆ ನಿಧಾನವಾಗಿ ನಾನೂ ಸಹ ನಾಯಿಗಳನ್ನು ಕುರಿತು ಭಯವನ್ನು ಬೆಳೆಸಿಕೊಂಡೆ. ನಾನು ಈ ಬಗ್ಗೆ ಹೆಚ್ಚು ಯೋಚಿಸಲೂ ಇಲ್ಲ. ನನಗೆ ಇದು ಸಹಜವೆನಿಸುತ್ತಿತ್ತು.

ಆದರೆ ನಾಯಿಯನ್ನು ಸಾಕಿರುವ ಸ್ನೇಹಿತೆಯ ಮನೆಗೆ ಹೋಗುವಾಗ ಮಾತ್ರ ಚಿಂತೆಯಾಗುತ್ತಿತ್ತು. ಆಗ ಆಕೆ ನಾಯಿಯನ್ನು ಇನ್ನೊಂದು ಕೋಣೆಯಲ್ಲಿ ಕೂಡಿ ಹಾಕುತ್ತಿದ್ದಳು. ಈ ರೀತಿ ನನ್ನ ಭಯ ಸಣ್ಣ ಅನಾನುಕೂಲವಾಗಿತ್ತೇ ಹೊರತು ಅದರಿಂದ ಹೆಚ್ಚಿನ ಪರಿಣಾಮವೇನೂ ಆಗಲಿಲ್ಲ. ನನ್ನ ಜೀವನ ಸಹಜವಾಗಿಯೇ ಕಳೆಯುತ್ತಿತ್ತು.

ಆಮೇಲೆ ನಾನು ಪಾಲಕಳಾದೆ. ನಾಯಿಗಳ ಬಗೆಗಿನ ನನ್ನ ಭಯವನ್ನು ಮಗಳಿಗೂ ವರ್ಗಾಯಿಸಬೇಕೇ? ಇಲ್ಲ. ಅದಕ್ಕಾಗಿ ನಾನು ನಾಯಿ ಇರುವವರ ಮನೆಗಳಿಗೆ ಹೋಗುವಾಗ ನಾನು ಭಯದಿಂದ ಕಂಪಿಸುತ್ತಿದ್ದರೂ ಧೈರ್ಯದ ಮುಖವಾಡವನ್ನು ಧರಿಸುತ್ತಿದ್ದೆ. ನಾನು ಮಗಳಿಗೆ ಕೆಲವೊಮ್ಮೆ ನಾಯಿಗಳನ್ನು ಮುದ್ದಿಸಲು ಪ್ರೋತ್ಸಾಹಿಸಿದರೂ ಕೂಡಾ ನಾನು ಸ್ವತಃ ಹಾಗೆ ಮಾಡಲು ಧೈರ್ಯವಾಗುತ್ತಿರಲಿಲ್ಲ. ಅದೃಷ್ಟವಶಾತ್ ನನ್ನ ಪತಿಗೆ ಈ ರೀತಿಯ ಭಯವಿರದ ಕಾರಣ ಇವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿತ್ತು.

ಆದ್ದರಿಂದ ನನ್ನ ಮಗಳಿಗೆ ಸಹಾಯವಾಯಿತು. ಅವಳಿಗೆ ನಾಯಿಗಳೆಂದರೆ ಭಯವಿರಲಿಲ್ಲ. ಬದಲಿಗೆ ಅವುಗಳನ್ನು ಇಷ್ಟಪಡುತ್ತಿದ್ದಳು ಮತ್ತು ತನಗಾಗಿ ಒಂದು ನಾಯಿ ಇರಬೇಕೆಂದು ಬಯಸುತ್ತಿದ್ದಳು. ನಾನು ಕೂಡಾ ಧೈರ್ಯದಿಂದ ಒಪ್ಪಿಕೊಂಡೆ. ಏಕೆಂದರೆ ನಾನು ಅದು ಕೇವಲ ಮಾತುಕತೆಯಲ್ಲಿಯೇ ಮುಗಿಯುವ ವಿಷಯವೆಂದು ಭಾವಿಸಿದ್ದೆ. ಆದರೆ ಆಕೆ ಅದಕ್ಕೆ ಅಂಟಿಕೊಂಡಳು. ಮೂರು ವರ್ಷ ನಾನು ಇಲ್ಲದ ನೆಪಗಳನ್ನು ಹೇಳಿಯೂ ಫಲಕಾರಿಯಾಗದಿದ್ದ ಮೇಲೆ ಬೀಗಲ್ ಜಾತಿಯ 5 ವರ್ಷದ ಸಿನಾಮನ್ ನನ್ನು ಮನೆಗೆ ಕರೆತರಲು ಹೊರಟೆವು. ಅಂದು ಮನೆಗೆ ವಾಪಸ್ಸಾಗುವಾಗ ನಾನು ನನ್ನ ಭವಿಷ್ಯದ ಕುರಿತು ಚಿಂತಿತಳಾಗಿದ್ದೆ. ನನ್ನ ಮನೆಯಲ್ಲಿ ಇನ್ನು ನಾನು ಮೊದಲಿನಂತೆ ಇರಲು ಸಾಧ್ಯವೇ ಎನಿಸುತ್ತಿತ್ತು.

ಈಗ ಅದೆಲ್ಲ ಇತಿಹಾಸ. ನಾನೀಗ ನಾಯಿಗಳನ್ನು ಇಷ್ಟಪಡುತ್ತೇನೆ. ಮುದ್ದಾದ ನಾಯಿ ಎದುರು ಬಂದರೆ ಪ್ರೀತಿಯಿಂದ ಮಾತನಾಡಿಸುತ್ತೇನೆ. ನಾನು ನಾಯಿಯನ್ನು ಕಂಡು ಹೆದರುತ್ತಿದ್ದ ಪರಿಸ್ಥಿತಿಯಿಂದ ಅವುಗಳನ್ನು ಪ್ರೀತಿಸುವಂತೆ ನನ್ನಲ್ಲಿ ಆದ ಬದಲಾವಣೆಗೆ ಮತ್ತು ನಾಯಿಗಳನ್ನು ಕುರಿತ ನನ್ನ ಆತಂಕವನ್ನು ನನ್ನ ಮಗಳಿಗೆ ವರ್ಗಾಯಿಸದಿದ್ದ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಆದರೆ ನಾನು ನನ್ನ ಆತಂಕವನ್ನು ಗುರುತಿಸಿ ಅದನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸದಿದ್ದರೆ ಬಹುಶಃ ನನ್ನ ಮಗಳು ಕೂಡಾ ಅದೇ ಭಯ ಮತ್ತು ಆತಂಕದಿಂದ ಬಳಲಬೇಕಾಗಿತ್ತು.

ಎರಡನೇ ರೀತಿಯ ಭಯ ಮತ್ತು ಆತಂಕಗಳು ನಮ್ಮ ಮಕ್ಕಳ ಭವಿಷ್ಯದ ಕುರಿತಾದಂತವು. ಅವರು ಕಷ್ಟಪಟ್ಟು ಓದದೇ ಹೋದರೆ ಏನಾಗಬಹುದು? ಅವರು ಪರೀಕ್ಷೆಯಲ್ಲಿ ಫೇಲಾಗಿಬಿಟ್ಟರೆ ಏನು ಮಾಡುವುದು? ಅವರು ಹೋಂ ವರ್ಕ್ ಅಥವಾ ಪ್ರಾಜೆಕ್ಟುಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸದಿದ್ದರೆ ಏನು ಗತಿ? ಅವರಿಗೆ ಒಳ್ಳೆಯ ಕಾಲೇಜು ಸಿಗದಿದ್ದರೆ ಏನು ಮಾಡುವುದು? ಅವರು ದೇಶದಲ್ಲಿಯೇ ಒಳ್ಳೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದದಿದ್ದರೆ ಅವರಿಗೆ ಉತ್ತಮ ಕೆಲಸ ದೊರೆಯುವುದೇ? ಹೇಳಿ ಕೇಳಿ ಇದು ಸ್ಪರ್ಧಾತ್ಮಕ ಯುಗ.

ಅವರಿಗೆ ಹೋರಾಡುವುದು ಗೊತ್ತಿಲ್ಲದಿದ್ದರೆ ಈ ಪ್ರಪಂಚದಲ್ಲಿ ಬಾಳಬಲ್ಲರೇ? ಅವರು ಸ್ವಾರ್ಥಿಗಳಾಗಿ ಬಿಟ್ಟರೆ ಸಂಬಂಧಗಳನ್ನು ಹೇಗೆ ನಿಭಾಯಿಸುತ್ತಾರೆ? ಅವರು ಗೌರವಯುತ ವೃತ್ತಿಯನ್ನು ಸಂಪಾದಿಸಲು ವಿಫಲರಾದರೆ ಎಲ್ಲರೂ ನನ್ನ ಪಾಲನೆಯ ಬಗ್ಗೆ ಏನೆಂದುಕೊಳ್ಳಬಹುದು? ನನ್ನ ಮಕ್ಕಳು ಕೆಟ್ಟ ಸಹವಾಸಕ್ಕೆ ಬಿದ್ದರೆ ಏನು ಮಾಡುವುದು? ನಾನು ಹೋದ ಮೇಲೆ ಅವರ ಕಥೆಯೇನು? ನನ್ನ ಮಗುವಿಗೆ ಅನಾರೋಗ್ಯವಾದರೆ ಏನಾಗಬಹುದು?

ಎಷ್ಟೊಂದು ಬಗೆಯ ಆತಂಕಗಳು… ಪ್ರತಿಯೊಂದೂ ಸಹಜವಾದವು ಮತ್ತು ನ್ಯಾಯೋಚಿತವಾದವು. ಪಾಲನೆಯ ಕಾರ್ಯದ ಅರ್ಧಪಾಲು ಆತಂಕದಲ್ಲಿಯೇ ಕಳೆಯುತ್ತದೆ. ಆದರೆ, ಆತಂಕವೇ ನಮ್ಮ ಜೀವನದ ಬಹುಪಾಲನ್ನು ನುಂಗದಿರುವಂತೆ ನಾವು ನೋಡಿಕೊಳ್ಳಬೇಕು.

ನಮ್ಮ ಮಕ್ಕಳ ಭವಿಷ್ಯದ ಕುರಿತ ನಮ್ಮ ಆತಂಕ ನಾವು ಅವರೊಂದಿಗೆ ಕಳೆಯುವ ಸಮಯದ ಮೇಲೆ ಪ್ರಭಾವ ಬೀರುತ್ತದೆಯೇ? ಅವರು ಇನ್ನು ಹತ್ತು ವರ್ಷಗಳ ನಂತರ ಒಳ್ಳೆಯ ಕಾಲೇಜಿಗೆ ಸೇರಬೇಕೆಂದು (ನಮ್ಮ ನಿಯಂತ್ರಣದಲ್ಲಿಲ್ಲದ) ಇಂದು ನಾವು ಅವರ ಜೊತೆಗೆ ಆಡದೇ ಇಡೀ ಹೊತ್ತು ಹೋಂ ವರ್ಕ್ ಮತ್ತು ಮತ್ತು ಅಭ್ಯಾಸ ಮಾಡಲು ಒತ್ತಾಯಿಸುತ್ತಿದ್ದೇವೆಯೇ? ಅಥವಾ ನಾವು ಅವರ ಭವಿಷ್ಯತ್ತಿಗೆ ಹಣ ಹೊಂದಿಸುವ ಗೋಜಿನಲ್ಲಿ (ಇದು ಕೂಡಾ ನಿಯಂತ್ರಣದಲ್ಲಿಲ್ಲ) ಅವರ ಜೊತೆ ಸಮಯ ಕಳೆಯುವುದನ್ನು ಕಳೆದುಕೊಳ್ಳುತ್ತಿದ್ದೇವೆಯೇ? ಅವರ ಭವಿಷ್ಯತ್ತಿನ ಬಗೆಗಿನ ಆತಂಕದಿಂದಾಗಿ ಅವರಿಂದ ದೂರಾಗಿದ್ದೆವೆಯೇ? ಒಟ್ಟಿನಲ್ಲಿ, ಹೇಗಾದರೂ ಸರಿ, ನಮಗೆ ಅವರ ಭವಿಷ್ಯವನ್ನು ನಿಯಂತ್ರಿಸಬೇಕಾಗಿದೆ.

ನನ್ನ ಪ್ರಕಾರ (ವ್ಯಂಗ್ಯವಾಗಿ ಹೇಳಬೇಕೆಂದರೆ) ಅದಕ್ಕಿರುವ ದಾರಿಯೆಂದರೆ ನಾವೆಷ್ಟೇ ಕಠಿಣವಾಗಿ ಪ್ರಯತ್ನಿಸಿದರೂ ನಮ್ಮ ನಿಯಂತ್ರಣಕ್ಕೆ ಸಿಗದ ಅಂಶಗಳನ್ನು ಕುರಿತು ತಲೆಕೆಡಿಸಿಕೊಳ್ಳಬಾರದು. ಬದಲಾಗಿ ನಮ್ಮ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕು.

ನಮ್ಮ ಆತಂಕಗಳನ್ನು ಮಕ್ಕಳು- ಪಾಲಕರು ಎಂಬ ಸಂಬಂಧದ ಪರಿಧಿಯ ಹೊರಗೆ ಪರಿಹರಿಸಿಕೊಳ್ಳಬೇಕು. ಅಂತಹ ಆತಂಕ, ಭಯವನ್ನು ಗುರುತಿಸಿ, ಅರ್ಥಮಾಡಿಕೊಂಡು, ಆಪ್ತ ಸಮಾಲೋಚಕರ ಅಥವಾ ಸ್ನೇಹಿತರ ಸಹಾಯದಿಂದ ಅವನ್ನು ಪರಿಹರಿಸಿಕೊಳ್ಳಬೇಕು.

ಇಂದಿನ ಕ್ಷಣಗಳನ್ನು ನಿಮ್ಮ ಮಗುವಿನ ಜೊತೆ ಪೂರ್ಣ ಮನಸ್ಸಿನಿಂದ ಕಳೆಯಬೇಕು. ನಿಮ್ಮ ಮಕ್ಕಳು ತಮಗೆ ಅವಶ್ಯಕತೆಯಿರುವಾಗ ವಿಶ್ವಾಸವಿರಿಸಬಲ್ಲ, ತಮ್ಮ ವೈಫಲ್ಯವನ್ನು ಹಂಚಿಕೊಳ್ಳಬಲ್ಲ ಸಂಬಂಧವನ್ನು ಕಟ್ಟಿಕೊಡಿ. ಅಂತಹ ವಿಶ್ವಾಸವು ಅವರಲ್ಲಿ ಧೈರ್ಯ ಸಾಮರ್ಥ್ಯವನ್ನು ತುಂಬಿ ತಾವು ಅಂದುಕೊಂಡಿದ್ದನ್ನು ಸಾಧಿಸಲು ನೆರವಾಗುತ್ತದೆ.

ಮತ್ತೆ ಮತ್ತೆ ಹೇಳುತ್ತಿದ್ದೇನೆ, ಅವರು ವಿಶ್ವಾಸವಿರಿಸಬಲ್ಲ ಸಂಬಂಧ ಅಗತ್ಯವೇ ಹೊರತು ಬ್ಯಾಂಕ್ ಬ್ಯಾಲೆನ್ಸ್ ಅಲ್ಲ!

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org