ಶಿಕ್ಷೆ ವಿಧಿಸುವುದು ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೆ?

ಮನೆ ಮತ್ತು ಶಾಲೆಯಲ್ಲಿ ಸಾಮಾನ್ಯವಾಗಿ ತಪ್ಪು ಮಾಡಿದಾಗ ಮಕ್ಕಳಿಗೆ ಹೊಡೆದು ಕಲಿಸುವುದು ವಾಡಿಕೆ. ಅಷ್ಟಕ್ಕೂ, ಇದುವೇ ಅವರಿಗೆ ಶಿಸ್ತನ್ನು ಕಲಿಸುವ ಪರಿಣಾಮಕಾರಿ ವಿಧಾನ ತಾನೇ?

ಮನೆ ಮತ್ತು ಶಾಲೆಯಲ್ಲಿ ಸಾಮಾನ್ಯವಾಗಿ ತಪ್ಪು ಮಾಡಿದಾಗ ಮಕ್ಕಳಿಗೆ ಹೊಡೆದು ಕಲಿಸುವುದು ವಾಡಿಕೆ. ಅಷ್ಟಕ್ಕೂ, ಇದುವೇ ಅವರಿಗೆ ಶಿಸ್ತನ್ನು ಕಲಿಸುವ ಪರಿಣಾಮಕಾರಿ ವಿಧಾನ ತಾನೇ? ಹೌದು, ಇದು ಬಹಳ ಸುಲಭವಾದ ದಾರಿ. ಆದರೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದು ಬೇರೆಯೇ ಆದ ಕತೆ. ಚಿಕ್ಕ ತಪ್ಪಿಗೂ ಹೊಡೆತ ತಿನ್ನುವ ಅನೇಕ ಮಕ್ಕಳನ್ನು ನಾನು ಭೇಟಿಯಾಗಿದ್ದೇನೆ. ಚಿಕ್ಕವರಿದ್ದಾಗ, ಬರಿಗೈಯಿಂದ, ಅಳತೆಪಟ್ಟಿ, ಕೋಲು ಅಥವಾ ಬಿಸಿಯಾದ ಸಲಾಕೆಯಿಂದ (ನನ್ನ ಹಿಂದಿನ ಲೇಖನದಲ್ಲಿ ತಿಳಿಸಿದಂತೆ) ಹೊಡೆತ ತಿಂದ ವಯಸ್ಕರನ್ನು ಭೇಟಿಯಾಗಿದ್ದೇನೆ. ವಾಸ್ತವವೇನೇ ಇರಲಿ, ಇಂತಹ ವಿಷಯಗಳು ನನ್ನನ್ನು ಬಹಳ ಕಳವಳಗೊಳಿಸುತ್ತವೆ (ಮತ್ತು ಇದು ನಾನು ನಿಭಾಯಿಸಬೇಕಾದ ಸಂಗತಿ.) ಹಾಗಾಗಿಯೇ, ಮಕ್ಕಳನ್ನು ಹೊಡೆಯಲು ಪಾಲಕರಿಗಿರುವ ಕಾರಣಗಳೇನು? ಹಾಗೂ ಇದು ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಯಾವ ರೀತಿ ಪರಿಣಾಮವನ್ನು ಉಂಟು ಮಾಡಬಹುದೆಂದು ನಾನು ಯೋಚಿಸಲು ಆರಂಭಿಸಿದೆ.

ಹಾಗಾದರೆ, ಯಾವುದೇ ಪಾಲಕರು ತಮ್ಮ ಮಕ್ಕಳನ್ನು ದೈಹಿಕವಾಗಿ ಯಾಕೆ ಹಿಂಸಿಸುತ್ತಾರೆ? ಬಹಳ ವರ್ಷಗಳ ಕಾಲ ನಾನು ಪಾಲಕರೊಂದಿಗೆ ನಡೆಸಿದ ಮಾತುಕತೆಯಿಂದ ಅನೇಕ ಕಾರಣಗಳು ನನ್ನ ಗಮನಕ್ಕೆ ಬಂದಿವೆ. ಅವುಗಳಲ್ಲಿ ಮುಖ್ಯವಾದ ಒಂದೆಂದರೆ, ಅವರೂ ಕೂಡಾ ಹಾಗೆಯೇ ಬೆಳೆದು ಬಂದಿದ್ದಾರೆ. ಮಕ್ಕಳಿಗೆ ಶಿಸ್ತನ್ನು ಕಲಿಸಲು ಈ ರೀತಿ ಹೊಡೆಯುವುದು ಅವರಿಗೆ ತಿಳಿದಿರುವ ಏಕಮಾತ್ರ ವಿಧಾನವಾಗಿದೆ. ತಮ್ಮ ಪಾಲಕರು ಹೊಡೆತ ನೀಡಿದ್ದರಿಂದಾಗಿ ತಾವು ಸರಿಯಾಗಿಯೇ ಬೆಳೆದಿದ್ದೇವೆ. ಆದ್ದರಿಂದ ತಮ್ಮ ಮಕ್ಕಳೂ ಚೆನ್ನಾಗಿಯೇ ಬೆಳೆಯುತ್ತಾರೆ ಎಂದು ಅಂತಹ ಪಾಲಕರು ನನಗೆ ಹೇಳುತ್ತಾರೆ. ಮಕ್ಕಳಿಗೆ ಹೊಡೆಯದೇ ಅವರಿಗೆ ಶಿಸ್ತನ್ನು ಕಲಿಸಲು ಸಾಧ್ಯವೇ? ಎಂಬುದು ಅವರ ಸಾಮಾನ್ಯ ಪ್ರಶ್ನೆ. ನಾನು ಅಂತಹ ಪಾಲಕರನ್ನು ಕೇಳುವುದಿಷ್ಟು, “ನಿಮಗೆ ಈ ರೀತಿಯ ಸಂದರ್ಭವುಂಟಾಗಿದ್ದಾಗ ನೀವು ಹೊಡೆತವನ್ನು ತಿನ್ನಲು ಇಷ್ಟಪಡುತ್ತಿದ್ದಿರಾ? ಆಗ ನಿಮಗೆ ಹೇಗನ್ನಿಸುತ್ತಿತ್ತು? ಇದು ಬಹಳ ವರ್ಷಗಳ ಹಿಂದಿನ ಮಾತಾಗಿರಬಹುದು. ಆದರೆ ಒಮ್ಮೆ ಹಿಂತಿರುಗಿ ನೆನಪಿಸಿಕೊಂಡರೆ, ಆ ಭಯ, ಸಿಟ್ಟು, ಹತಾಶೆ ಮತ್ತು ನೋವು, ತಾನು ಒಳ್ಳೆಯವನಲ್ಲವೆಂಬ ಭಾವ, ದುಃಖ ಮತ್ತು ಹೊಡೆದವರ ಮೇಲಿನ ಸಿಟ್ಟು ಸಹಿತವಾಗಿ ಎಲ್ಲವೂ ಮರುಕಳಿಸುತ್ತವೆ!

ಇನ್ನು ಮಕ್ಕಳನ್ನು ಹೊಡೆಯಲು ಎರಡನೆಯ ಕಾರಣವೆಂದರೆ, ಆತಂಕ ಮತ್ತು ಅಸಹಾಯಕತೆ- ಮಗುವಿನ ಸಾಧನೆ ಹಾಗೂ ಭವಿಷ್ಯದ ಬಗ್ಗೆ ಆತಂಕ ಮತ್ತು ಅದು ತಮ್ಮ ನಿಯಂತ್ರಣದಲ್ಲಿಲ್ಲವೆಂಬ ಅಸಹಾಯಕತೆ. ಸಮಾಜವು ತಮ್ಮ ಮಕ್ಕಳ ಬಗ್ಗೆ ಯಾವ ರೀತಿ ಯೋಚಿಸಬಹುದು, ತಮ್ಮ ಮಕ್ಕಳು ಮುಂದೆ ಏನಾಗಬಹುದು, ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಮಕ್ಕಳು ಸರಿಯಾಗಿ ಬೆಳೆಯದಿದ್ದಲ್ಲಿ ಸಮಾಜವು ತಮ್ಮ ಬಗ್ಗೆ ಏನೆಂದುಕೊಳ್ಳಬಹುದು ಎಂಬ ಬಗ್ಗೆ ಪಾಲಕರು ಆತಂಕಿತರಾಗಿರುತ್ತಾರೆ. ತಿಳಿದೋ, ತಿಳಿಯದೆಯೋ, ಇದೇ ಅವರ ಎಲ್ಲ ಆತಂಕ, ಒತ್ತಡ, ಹತಾಶೆ ಹಾಗೂ ಸೋಲಿನ ಭಾವನೆಗೆ ದಾರಿಯಾಗುತ್ತದೆ. ತಮ್ಮ ಬಗ್ಗೆಯೇ ಸಿಟ್ಟಾಗುವ ಅವರು ಈ ರೀತಿಯಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ, ಅವರ ಈ ಸಿಟ್ಟು ಅಸಹಾಯಕರಾದ ಅವರ ಮಕ್ಕಳ ಮೇಲೆ ತಿರುಗುತ್ತದೆ. ಇದು ಪಾಲಕರಿಗೆ ಮಕ್ಕಳ ಕಾರ್ಯಗಳ ಮೇಲೆ ನಿಯಂತ್ರಣ ಸಾಧಿಸಿದ ಭಾವನೆಯನ್ನು ಉಂಟುಮಾಡಬಹುದು.
ಮಕ್ಕಳನ್ನು ಬೆಳೆಸುವಾಗ ಹೊಡೆಯುವುದು ಅತ್ಯವಶ್ಯಕ ಎಂಬ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿವೆ. ಕೆಲವು ಪಾಲಕರು ತಾವು ಬಿಗಿಯಾಗಿರಬೇಕು ಮತ್ತು ಮಕ್ಕಳಿಗೆ ತಮ್ಮ ಬಗ್ಗೆ ಹೆದರಿಕೆಯಿರಬೇಕು ಎಂದು ಭಾವಿಸುತ್ತಾರೆ. ಇದು ಅವರಿಗೆ ಎಲ್ಲವೂ ತಮ್ಮ ನಿಯಂತ್ರಣದಲ್ಲಿದೆ ಎಂಬ ಭಾವನೆಯನ್ನು ಉಂಟುಮಾಡುತ್ತದೆ. ಇದಕ್ಕೆ ವಿರುದ್ಧವಾಗಿ ಮಕ್ಕಳು ತಮ್ಮ ಪಾಲಕರನ್ನು ಸಂಪೂರ್ಣ ನಿಯಂತ್ರಣ ತಪ್ಪಿದವರೆಂದೂ, ಮತ್ತು ತಮಗೆ ಮಾರ್ಗದರ್ಶನ ಮಾಡಿ ಸರಿಯಾದ ಮಾರ್ಗದಲ್ಲಿ ನಡೆಸಬಲ್ಲರು ಎಂಬ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಇನ್ನು ಕೆಲವು ಪಾಲಕರು ತಾವು ಹೊಡೆಯುವುದರಿಂದ ಮಕ್ಕಳಿಗೆ ತಮ್ಮ ಬಗ್ಗೆ ಭಯವಿರುತ್ತದೆ, ಅದರಿಂದ ಅವರು ತಮ್ಮ ಕರ್ತವ್ಯದ ಕುರಿತು ಗಮನ ಕೊಡುತ್ತಾರೆ, ಸರಿಯಾದ ದಾರಿಯಲ್ಲಿ ನಡೆದು ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ ಎಂದು ನಂಬುತ್ತಾರೆ. ಬದಲಾಗಿ ಮಕ್ಕಳು ತಮ್ಮ ಪಾಲಕರ ಕಣ್ಣು ತಪ್ಪಿಸಿ ತಮಗೆ ಬೇಕಾದ ಹಾಗೇ ಮಾಡುವುದನ್ನೂ ಮತ್ತು ಇದರ ಬಗ್ಗೆ ಪಾಲಕರಿಗೆ ಸುಳಿವು ಸಿಗದಂತೆ ನೋಡಿಕೊಳ್ಳುವುದನ್ನೂ ಕಲಿಯುತ್ತಾರೆ! ಇದರಿಂದ ಮಕ್ಕಳಿಗೆ ಪಾಲಕರ ಬೆನ್ನ ಹಿಂದೆ ತಪ್ಪು ಕೆಲಸವನ್ನು ಮಾಡಲು ಪ್ರೇರೇಪಿಸದಂತಾಗುತ್ತದೆ. ಭಯದಿಂದಾಗಿ ಅವರು ತಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ವಿಫಲರಾಗುತ್ತಾರೆ. ಭಯವು ಅವರು ಸೊಲುವುದನ್ನು ತಪ್ಪಿಸಬಹುದು ಆದರೆ ಅವರ ಜೀವನವನ್ನು ಸಂತೋಷಕರವಾಗಿಸುವುದಿಲ್ಲ ಮತ್ತು ಅವರ ನಿಜವಾದ ಸಾಮರ್ಥ್ಯವನ್ನು ಹೊರಹಾಕಲು ಸಹಾಯವಾಗುವುದಿಲ್ಲ.

ಮಕ್ಕಳನ್ನು ಹೊಡೆಯದೇ ಶಿಸ್ತಿನಿಂದ ಬೆಳೆಸುವ ಬೇರೆ ಸರಿಯಾದ ವಿಧಾನವಿರುವುದಿಲ್ಲ ಎಂದು ಕೆಲವು ಪಾಲಕರು ಭಾವಿಸುತ್ತಾರೆ. ಆದರೆ ಇದು ತಿಳಿದಷ್ಟು ಪರಿಣಾಮಕಾರಿ ವಿಧಾನವಲ್ಲ. ಹಿಂಸೆಯು ಸ್ವೀಕಾರಾರ್ಹವೆಂಬ ನಂಬಿಕೆಯನ್ನು ಇದು ಮಕ್ಕಳಲ್ಲಿ ಬೆಳೆಸುತ್ತದೆ. ಅದಲ್ಲದೇ ಮಕ್ಕಳು ತಾವು ಬೇರೆಯವರ ಭಾವನೆಗಳನ್ನು ಪರಿಗಣಿಸಿ ಗೌರವಿಸುವ ಅಗತ್ಯವಿಲ್ಲವೆಂದು ಭಾವಿಸಿಕೊಳ್ಳುತ್ತಾರೆ. ಅಂತೆಯೇ ತಾವೂ ಗೌರವಕ್ಕೆ ಅಥವಾ ಪ್ರೀತಿಗೆ ಅರ್ಹರಲ್ಲವೆಂದು ಭಾವಿಸುವಂತೆ ಮಾಡುತ್ತದೆ.

ಶಿಕ್ಷೆ ನೀಡುವುದರಿಂದ ಮಾತ್ರವೇ ಪರಿಣಾಮಕಾರಿಯಾಗಿ ಶಿಸ್ತನ್ನು ಕಲಿಸಲು ಸಾಧ್ಯವೆಂದು ಕೆಲವು ಪಾಲಕರು ತಿಳಿದಿರುತ್ತಾರೆ. ಇದರಿಂದ ಅಂತಹ ಪಾಲಕರ ಮೇಲೆ ಮಕ್ಕಳು ದ್ವೇಷ ಮತ್ತು ನಿರಾಕರಣೆಯ ಭಾವನೆಯನ್ನು ತಾಳುತ್ತಾರೆ. ಶಿಸ್ತು ಪರಿಣಾಮಕಾರಿಯಾಗಬೇಕಾದರೆ ಅದರ ಪರಿಣಾಮಗಳ ಬಗ್ಗೆ ಮೊದಲೇ ತಿಳಿದಿರಬೇಕು ಮತ್ತು ಅದು ಜಾರಿಯಾಗುವ ಬಗ್ಗೆ ಸಂಪೂರ್ಣ ಖಾತ್ರಿಯಿರಬೇಕು.

ಈ ಹಿಂದೆ ಮಾಡಿದ ತಪ್ಪಿಗೆ ಶಿಕ್ಷೆ ಕೊಡುವುದರಿಂದ ಮಗುವು ಶಿಸ್ತನ್ನು ಕಲಿಯುತ್ತದೆ ಎಂದು ಕೆಲವು ಪಾಲಕರು ಭಾವಿಸಿರುತ್ತಾರೆ. ಆದರೆ ಮುಂದಾಗಬಹುದಾದ ತಪ್ಪನ್ನು ತಡೆಯುವುದು ಶಿಸ್ತನ್ನು ಕಲಿಸುವ ಉದ್ದೇಶ. ಇದಕ್ಕೆ ಪಾಲಕರ ಧೋರಣೆಯಲ್ಲಿ ಸಂಪೂರ್ಣವಾದ ಬದಲಾವಣೆಯಾಗಬೇಕಾದ ಅವಶ್ಯಕತೆಯಿದೆ. ಆಗ ಹೊಡೆತದಿಂದಾಗುವ ನೋವು ಅಪ್ರಸ್ತುತವಾಗುತ್ತದೆ. ಅದರ ದೈಹಿಕ ನೋವಿಗಿಂತ ಮಿಗಿಲಾಗಿ ತಪ್ಪು ಮಾಡಿದರೆ ಶಿಕ್ಷೆ ತಪ್ಪಿದ್ದಲ್ಲವೆಂಬ ತಿಳುವಳಿಕೆ ಪ್ರಧಾನವಾಗುತ್ತದೆ.

ಹಾಗಾಗಿ ಶಿಸ್ತನ್ನು ಕಲಿಸುವ ಮತ್ತು ಪೋಷಿಸುವ ಭಾಗವಾಗಿ ಮಕ್ಕಳಿಗೆ ಹೊಡೆಯುವುದರಿಂದ ಹಲವಾರು ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳು ಉಂಟಾಗುತ್ತವೆ. ಮೊದಲನೆಯದಾಗಿ ಮಗುವು ಯಾವಾಗಲೂ ಭಯದಲ್ಲಿ ಬದುಕುತ್ತದೆ. ಪ್ರಚೋದನೆಗೆ ಹಿಂಸೆಯು ಸ್ವೀಕಾರಾರ್ಹ ಪ್ರತಿಕ್ರಿಯೆಯೆಂದು ತಿಳಿದು ತಾನೂ ಕೂಡಾ ಅದನ್ನೇ ಕಲಿಯುತ್ತದೆ. ತಾವೂ ಕೂಡಾ ಶಕ್ತಿಶಾಲಿಯೆಂದು ತೋರಿಸಿಕೊಳ್ಳಲು ಅವರು ಅವರು ಶಾಲೆಯಲ್ಲಿ ಪುಂಡರಾಗಬಹುದು ಅಥವಾ ತುಂಬಾ ಬಾಗಿದ, ಹೆದರಿದ ಮಗುವಾಗಿ ಇನ್ನೊಬ್ಬರ ಪುಂಡಾಟಕ್ಕೆ ಗುರಿಯಾಗಬಹುದು. ಅವರು ಕೇವಲ ಸೋಲಿನಿಂದ ತಪ್ಪಿಸಿಕೊಳ್ಳಲು ಕೆಲಸ ಮಾಡಬಹುದು. ತಮ್ಮ ನಿಜವಾದ ಸಾಮರ್ಥ್ಯವನ್ನು ಉಪಯೋಗಿಸಿ ಹೆಚ್ಚಿನದನ್ನು ಸಾಧಿಸುವ ಸ್ವಪ್ರೇರಣೆಯಿಲ್ಲದೇ, ಜೀವನವನ್ನು ಅನುಭವಿಸಲು ವಿಫಲರಾಗಬಹುದು. ಪಾಲಕರ ಜೊತೆಗೆ ನಿಧಾನವಾಗಿ ಬೆರೆಯುವುದನ್ನು ಕಡಿಮೆ ಮಾಡಿ , ತಮ್ಮ ನೈಜ ಭಾವನೆ ಮತ್ತು ಕೆಲಸಗಳನ್ನು ಅವರಿಂದ ಮುಚ್ಚಿಡಬಹುದು. ಪಾಲಕರ ಜೊತೆಗೆ ಪ್ರೀತಿಪೂರ್ವಕ, ಆತ್ಮೀಯ, ಹಂಚಿಕೊಳ್ಳುವಿಕೆ, ನಂಬಿಕೆ ಮತ್ತು ಕಾಳಜಿಯಿಂದ ಕೂಡಿದ ಸಂಬಂಧದ ಬದಲು ನೆಪ ಮಾತ್ರದ ಸಂಬಂಧ ಉಳಿಯುವಂತಾಗಬಹುದು.

ಆದ್ದರಿಂದ ಪಾಲಕರು ತಮ್ಮ ಆತಂಕವನ್ನು ಮತ್ತು ತಮ್ಮ ಹಿಂದಿನ ಜೀವನದ ಕೊರತೆಗಳನ್ನು ನಿಭಾಯಿಸಲು ಸರಿಯಾದ ಮಾರ್ಗವನ್ನು - ಉದಾಹರಣೆಗೆ ಧ್ಯಾನ, ಸ್ನೇಹಿತರೊಂದಿಗೆ ಮಾತನಾಡುವುದು ಅಥವಾ ಆಪ್ತ ಸಮಾಲೋಚಕರ ಸಹಾಯವನ್ನು ಪಡೆಯುವುದು - ಮುಂತಾದ ಮಾರ್ಗಗಳನ್ನು ಕಂಡುಕೊಳ್ಳಬೇಕು. ಒಂದು ವೇಳೆ ನೀವೇ ನಿಮ್ಮ ಮಗುವಿನ ಜಾಗದಲ್ಲಿ ಇದ್ದಿದ್ದರೆ ನಿಮಗೆ ಏನನ್ನಿಸುತ್ತಿತ್ತು ಎಂಬುದನ್ನು ಯೋಚಿಸಿ.

ನನ್ನ ಪ್ರಕಾರ ಪಾಲಕರು ತಮ್ಮ ಮಕ್ಕಳನ್ನು ಹಿಂದೆ ಮುಂದೆ ಯೋಚಿಸದೇ ಹೊಡೆಯುತ್ತಾರೆ. ಆ ಕ್ಷಣದ ಪ್ರಚೋದನೆಗೆ ಒಳಗಾಗಿ ಹೊಡೆಯುತ್ತಾರೆಯೇ ಹೊರತು ಅವರು ಬೇಕಂತಲೇ ತಮ್ಮ ಮಕ್ಕಳಿಗೆ ನೋವು ಮಾಡುವ ಉದ್ದೇಶದಿಂದ ಹಾಗೆ ಮಾಡಿರುವುದಿಲ್ಲ. ಆ ಕ್ಷಣದ ಪ್ರಚೋದನೆಗೆ ಒಳಪಟ್ಟು ಅವರು ಮಾಡುವ ಕೆಲಸದಿಂದ ಮಕ್ಕಳ ಮೇಲೆ ಆಗುವ ದೀರ್ಘಾವಧಿ ಪರಿಣಾಮಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕಿದೆ. ಒಂದು ವೇಳೆ ಅವರು ಮತ್ತೆ ಮಕ್ಕಳನ್ನು ಹೊಡೆಯಬೇಕಾಗಿ ಬರುವ ಸಂದರ್ಭದಲ್ಲಿ ಇನ್ನೊಮ್ಮೆ ಯೋಚಿಸಬೇಕು ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿರಬೇಕು.

ಮೌಲಿಕಾ ಶರ್ಮಾರವರು ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿದ್ದಾರೆ. ಪ್ರಸ್ತುತ, ಜಾಗತಿಕ ಕಾರ್ಮಿಕ ಕಲ್ಯಾಣ ಕಂಪೆನಿ ‘ವರ್ಕ್ಪ್ಲೇಸ್ ಆಪ್ಷನ್ಸ್’ ಜೊತೆ ಜೆಲಸ ಮಾಡುತ್ತಿರುವ ಇವರು ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಈ-ಮೇಲ್ ಮಾಡಿ. 

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org