ಆಟಿಸಂ ಸ್ಪೆಕ್ಟ್ರಂ ದೌರ್ಬಲ್ಯ (ಎ ಎಸ್ ಡಿ)

ಆಟಿಸಂ ಸ್ಪೆಕ್ಟ್ರಂ ದೌರ್ಬಲ್ಯ (ಎ ಎಸ್ ಡಿ)

ಆಟಿಸಂ ಸ್ಪೆಕ್ಟ್ರಂ ದೌರ್ಬಲ್ಯ (ಎ.ಎಸ್.ಡಿ) ವ್ಯಾಪ್ತಿಗೆ ಒಳಪಡುವ ಬೆಳವಣಿಗೆಯ ಸಮಸ್ಯೆಗಳು ಯಾವುವು ?

ಆಟಿಸಂ ಸ್ಪೆಕ್ಟ್ರಂ ವ್ಯಾಪ್ತಿಗೆ ಒಳಪಡುವ ಕೆಲವು ದೌರ್ಬಲ್ಯಗಳ ಪಕ್ಷಿನೋಟ ಇಲ್ಲಿದೆ :

ಆಟಿಸ್ಟಿಕ್  ದೌರ್ಬಲ್ಯ: ಒಂದು ಮಗುವಿನಲ್ಲಿ ಎ ಎಸ್ ಡಿ ದೌರ್ಬಲ್ಯದ ಎಲ್ಲ ಲಕ್ಷಣಗಳೂ ಕಂಡುಬಂದರೆ ಅದು ಆಟಿಸಂ ಸಮಸ್ಯೆಯಿಂದ ಬಳಲುತ್ತಿದೆ ಎಂದು ನಿರ್ಧರಿಸಬಹುದು.

ಆಸ್ಪರ್ಜರ್ಸ್ ಲಕ್ಷಣಗಳು: ಆಟಿಸಂ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಂಡಾಗ ಆಸ್ಪರ್ಜರ್ಸ್ ದೌರ್ಬಲ್ಯ ಎಂದು ಗುರುತಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳಲ್ಲಿ ಸಾಮಾಜಿಕ, ಭಾವನಾತ್ಮಕ ಕೌಶಲಗಳಲ್ಲಿ ಸಮಸ್ಯೆ ಎದುರಾಗುತ್ತದೆ. ಮಕ್ಕಳು ಕೆಲವು ವಿಷಯಗಳ ಬಗ್ಗೆ ತೀವ್ರವಾದ ಆಸಕ್ತಿ ತೋರುತ್ತಾರೆ.  ಭಾಷೆಯ ಬಳಕೆಯಲ್ಲಿ ಅಥವಾ ಸ್ಪರ್ಶದ ತೊಂದರೆಗಳು ಇರುವುದಿಲ್ಲ.

ಹರಡುವ ಬೆಳವಣಿಗೆಯ ದೌರ್ಬಲ್ಯ (ಪಿ ಡಿ ಡಿ-ಎನ್ ಒ ಎಸ್ ಅಥವಾ Pervasive Developmental Disorder-Not Otherwise Specified): ಪಿಡಿಡಿ ಸಮಸ್ಯೆಯನ್ನು ಪೂರ್ಣ ಪ್ರಮಾಣದ ಆಟಿಸಂ ಎಂದು ಹೇಳಲಾಗುವುದಿಲ್ಲ. ಈ ದೌರ್ಬಲ್ಯ ಎದುರಿಸುವ ಮಕ್ಕಳಲ್ಲಿ ಆಟಿಸಂ ಸಮಸ್ಯೆಯ  ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಆದರೆ ಎಲ್ಲ ಲಕ್ಷಣಗಳೂ ಕಾಣುವುದಿಲ್ಲ. ಉದಾಹರಣೆಗೆ  ಮಗು ಮಾತನಾಡುವುದನ್ನು ನಿಧಾನವಾಗಿ ಕಲಿಯುತ್ತದೆ ಅಥವಾ ಒಂದೇ ರೀತಿಯ ವರ್ತನೆಯನ್ನು ಪದೇ ಪದೇ ತೋರುತ್ತಿರುತ್ತದೆ. ಇಂತಹ ಮಕ್ಕಳು ಪಿಡಿಡಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಎಂದು ಭಾವಿಸಬಹುದು.

ರೆಟ್ ದೌರ್ಬಲ್ಯ (ರೆಟ್ ಸಿಂಡ್ರೋಮ್): ಎಕ್ಸ್ ಕ್ರೊಮೋಸೋಮ್ ನಲ್ಲಿ ಕಾಣಿಸಿಕೊಳ್ಳುವ  ಗಂಭೀರವಾದ ಮತ್ತು ಅಪರೂಪದ ದೌರ್ಬಲ್ಯವನ್ನು ರೆಟ್ ದೌರ್ಬಲ್ಯ ಎಂದು ಗುರುತಿಸಲಾಗುತ್ತದೆ. ಈ ಸಮಸ್ಯೆ ಎದುರಿಸುವ ಮಕ್ಕಳು ಸಹಜವಾಗಿಯೇ ವಯಸ್ಸಿಗೆ ಅನುಗುಣವಾಗಿ ಬೆಳೆಯುತ್ತಾರೆ ಆದರೆ ಕೌಶಲಗಳನ್ನು ಪಡೆಯುವಲ್ಲಿ ನಿಧಾನಗತಿ ತೋರುತ್ತಾರೆ. ಸಂವಹನ ಕೌಶಲ್ಯದಲ್ಲಿ ವಿಫಲರಾಗುತ್ತಾರೆ. ಕೈಗಳನ್ನು ಸರಿಯಾದ ಉದ್ದೇಶಕ್ಕೆ ಸೂಕ್ತ ರೀತಿಯಲ್ಲಿ ಬಳಸುವುದಿಲ್ಲ.

ಚಿಕ್ಕಂದಿನ ಶಿಥಿಲಾವಸ್ಥೆಯ ದೌರ್ಬಲ್ಯ (ಸಿ ಡಿ ಡಿ - Childhood Disintegrative Disorder): ಇದು ಬಹಳ ಅಪರೂಪದ ಸಮಸ್ಯೆಯಾಗಿದ್ದು ಆರಂಭದ ದಿನಗಳಲ್ಲಿ ಎಲ್ಲ ರೀತಿಯಲ್ಲೂ ಮಕ್ಕಳು ಸಹಜವಾದ ಬೆಳವಣಿಗೆಯನ್ನು ಹೊಂದುತ್ತಿದ್ದರೂ ,ಸ್ಪೆಕ್ಟ್ರಮ್ ದೌರ್ಬಲ್ಯಗಳಿಗಿಂತಲೂ ನಿಧಾನವಾಗಿ ಈ ಸಂದರ್ಭದಲ್ಲಿ ಕೌಶಲ್ಯದ ಹಿನ್ನಡೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಎದುರಿಸುವ ಮಕ್ಕಳು ಭಾಷಾ ಕಲಿಕೆ, ಸಾಮಾಜಿಕ ನಡತೆ, ವರ್ತನೆ ಮತ್ತು ಇತರ ಎಲ್ಲ ಬೆಳವಣಿಗೆಗಳ ಹಂತದಲ್ಲೂ ಕೌಶಲ್ಯದ ಹಿನ್ನಡೆಯನ್ನು ಅನುಭವಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಆಸ್ಪರ್ಜರ್ ಸಮಸ್ಯೆ, ಆಟಿಸ್ಟಿಕ್ ದೌರ್ಬಲ್ಯ, ಪಿಡಿಡಿ-ಎನ್ ಒ ಎಸ್ ಎಲ್ಲವನ್ನೂ ಪ್ರತ್ಯೇಕವಾಗಿ ತಪಾಸಣೆಗೊಳಪಡಿಸಲಾಗುತ್ತಿತ್ತು. ಆದರೆ ಈಗ ಈ ಎಲ್ಲ ದೌರ್ಬಲ್ಯಗಳನ್ನೂ ಒಂದೇ ಬಾರಿಗೆ ತಪಾಸಣೆಗೊಳಪಡಿಸಿ ಆಟಿಸಂ ಸ್ಪ್ರೆಕ್ಟ್ರಂ ದೌರ್ಬಲ್ಯ ಎಂದು ಗುರುತಿಸಲಾಗುತ್ತದೆ.

ಆಟಿಸಂ ಸ್ಪೆಕ್ಟ್ರಂ ದೌರ್ಬಲ್ಯದ ಸಂಕೇತಗಳು ಯಾವುವು?

ಆಟಿಸಂ ಸ್ಪೆಕ್ಟ್ರಂ ಸಮಸ್ಯೆ ಇರುವ ಯಾವುದೇ ಮಗುವಿನಲ್ಲಿ ಮೂರು ಪ್ರಮುಖ ಲಕ್ಷಣಗಳಿರುತ್ತವೆ:

1. ಸಾಮಾಜಿಕ ಪರಸ್ಪರ ಸಂಬಂಧದ ಸಮಸ್ಯೆ (ಇತರರೊಡನೆ ಸಂಬಂಧ ಬೆಳೆಸುವಲ್ಲಿ ಕೊರತೆ)

2. ಸಂಪರ್ಕ ಮತ್ತು ಸಂವಹನದ ಕೊರತೆ ( ಮಾತಿನ ಮೂಲಕ ಅಥವಾ ಸಂಜ್ಞೆಯ ಮೂಲಕ ವ್ಯಕ್ತಪಡಿಸುವಲ್ಲಿ ದೌರ್ಬಲ್ಯ ಇರುತ್ತದೆ. ಸಾಂಕೇತಿಕವಾಗಿ ಪ್ರತಿಕ್ರಯಿಸಲು ಅಥವಾ ಆಂಗಿಕವಾಗಿ ವ್ಯಕ್ತಪಡಿಸಲು ತೊಂದರೆ ಎದುರಾಗುತ್ತದೆ).

3. ಸಾಮಾಜಿಕ ಕಲ್ಪನೆಯ ಕೊರತೆ ( ಚಿಂತನೆಯಲ್ಲಿ ಮತ್ತು ಸಂಘಟನೆಯಲ್ಲಿ ಹೊಂದಾಣಿಕೆ ಇರುವುದಿಲ್ಲ).

ಈ ಮಕ್ಕಳಿಗೆ ಇತರ ಕೌಶಲಗಳ ಸಮಸ್ಯೆಯೂ ಬೆಳವಣಿಗೆಯ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಕೈಗಳನ್ನು ಜೋಡಿಸಿ ಹಿಡಿದುಕೊಳ್ಳುವುದು, ಓಲಾಡುವುದು ಮುಂತಾದ ವರ್ತನೆ ಪದೇ ಪದೇ ಕಾಣಿಸಿಕೊಳ್ಳುತ್ತದೆ.

ಒಂದು ಮಗುವಿನಲ್ಲಿ ಎ ಎಸ್ ಡಿ ಸಮಸ್ಯೆಯನ್ನು ಗುರುತಿಸುವುದು ಹೇಗೆ ?

ಮಕ್ಕಳಲ್ಲಿ ಎ ಎಸ್ ಡಿ ಸಮಸ್ಯೆ ಇರುವುದೋ ಇಲ್ಲವೋ ಎಂದು ತಿಳಿದುಕೊಳ್ಳುವ ನಿಟ್ಟಿನಲ್ಲಿ ನಡೆಸುವ ತಪಾಸಣೆಯ ಮೂಲ ಉದ್ದೇಶ ಎಂದರೆ ಮಕ್ಕಳ ಬೆಳವಣಿಗೆ ತಡವಾಗಿದೆಯೇ ಎಂದು ತಿಳಿದುಕೊಳ್ಳುವುದಾಗಿರುತ್ತದೆ. ವೃತ್ತಿಪರರು ಸಾಮಾನ್ಯವಾಗಿ ಇಂತಹ ತಪಾಸಣೆ ನಡೆಸುವಾಗ ಎಮ್-ಚಾಟ್-ಆರ್/ಎಫ್ ಮಾದರಿಯನ್ನು ಅನುಸರಿಸುವ ಮೂಲಕ ಎ ಎಸ್ ಡಿ ದೌರ್ಬಲ್ಯದಿಂದಾಗುವ ಅಪಾಯಗಳನ್ನು ತಿಳಿದುಕೊಳ್ಳುತ್ತಾರೆ. ಈ ರೀತಿಯ ತಪಾಸಣೆಯ ನಂತರ ವಿವರವಾದ ಪರಿಶೀಲನೆ ನಡೆಸಿ  ಸಮಸ್ಯೆಯ ಅಂದಾಜು ಮಾಡುತ್ತಾರೆ.  ಮಕ್ಕಳಲ್ಲಿ ಸಮಸ್ಯೆ ಇರುವ ಸೂಚನೆ ಬೇಗನೆಯ ಲಭ್ಯವಾದರೆ ಬೇಗನೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಕಾಲ ಕಳೆದಂತೆ ಮಕ್ಕಳಿಂದ ಹೆಚ್ಚಿನ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಲೂ ಸಾಧ್ಯ.

ನಿಮ್ಮ ಮಕ್ಕಳಲ್ಲಿನ ಸಮಸ್ಯೆಯನ್ನು ನೀವೇ ತಪಾಸಣೆ ಮಾಡಿ ತಿಳಿದುಕೊಳ್ಳಲು ಇಲ್ಲಿ ಕೆಲವು ಅಂಶಗಳನ್ನು ಒದಗಿಸಲಾಗಿದೆ. ನಿಮ್ಮ ಮಗು ಬೆಳವಣಿಗೆಯ ವಿವಿಧ ಹಂತಗಳಲ್ಲಿ ನಿರೀಕ್ಷಿತ ಮಟ್ಟ ತಲುಪುತ್ತಿದೆಯೇ ಎಂದು ತಿಳಿದುಕೊಳ್ಳಲು ಇದು ನೆರವಾಗುತ್ತದೆ. ನಂತರ ಮಗುವಿನ ಬೆಳವಣಿಗೆಯ ಬಗ್ಗೆ ಸೂಕ್ತ ಮಾಹಿತಿ ನೀಡುವ ಶಿಶುವೈದ್ಯರ ಸಲಹೆ ಪಡೆದು, ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಮುಂದುವರೆಸಬಹುದು. ಈ ಸಲಹೆಯ ಪಟ್ಟಿ ವೃತ್ತಿಪರ ತಪಾಸಣೆಗೆ ಬದಲಾಗಿ ಬಳಸಲು ಸಾಧ್ಯವಾಗುವುದಿಲ್ಲ.

ಎ ಎಸ್ ಡಿ ಗುರುತಿಸುವುದು ಹೇಗೆ ?

ಎ ಎಸ್ ಡಿ ಸಮಸ್ಯೆಯನ್ನು ಗುರುತಿಸುವುದಕ್ಕೆ ಯಾವುದೇ ನಿರ್ದಿಷ್ಟ ವಂಶವಾಹಿಯ ತಪಾಸಣೆಯಾಗಲೀ, ವೈದ್ಯಕೀಯ ತಪಾಸಣೆಯಾಗಲೀ ಇಲ್ಲ. ಆದರೆ ವೃತ್ತಿಪರರು ಈ ಸಮಸ್ಯೆಯನ್ನು ಗುರುತಿಸಲು ಎ ಡಿ ಒ ಎಸ್ (Autism Diagnostic Observation Schedule) ಎಂಬ ತಪಾಸಣಾ ಸಲಕರಣೆಯನ್ನು ಬಳಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯ.  ಮಗುವಿನ ಕೌಶಲ್ಯ ಬೆಳವಣಿಗೆ, ಸಂವಹನ ಸಾಮರ್ಥ್ಯ, ಸಾಮಾಜಿಕ ಪ್ರತಿಕ್ರಿಯೆ, ಸ್ಪರ್ಶದ ಅರಿವು ಇದೇ ಮುಂತಾದ ಮಾರ್ಗಗಳ ಮೂಲಕ ಸ್ಪಷ್ಟವಾಗಿ ತಿಳಿಯಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಮಕ್ಕಳಲ್ಲಿ ಆಟಿಸಂ ಸಮಸ್ಯೆ ಇರುವುದು ಬೇಗನೆ ತಿಳಿದುಬರುತ್ತದೆ.

ಕೆಲವು ಸಂದರ್ಭಗಳಲ್ಲಿ ಮಕ್ಕಳಲ್ಲಿ ಆಟಿಸಂ ಸಮಸ್ಯೆಯ ಸುಳಿವು ಬೇಗನೆ ತಿಳಿದುಬರುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲಿ  ಮಗು ಎರಡರಿಂದ ಎರಡೂವರೆ ವರ್ಷದವರೆಗೆ ಉತ್ತಮ ಬೆಳವಣಿಗೆಯನ್ನು ಹೊಂದಿದ್ದು ನಂತರ ಕೆಲವು ವಿಷಯಗಳಲ್ಲಿ ಕೌಶಲ್ಯದ ಕೊರತೆಯನ್ನು ಎದುರಿಸುತ್ತದೆ. ಇದನ್ನು ಆಟಿಸ್ಟಿಕ್ ಹಿನ್ನಡೆ ಎಂದು ಕರೆಯಲಾಗುತ್ತದೆ. ಎ ಎಸ್ ಡಿ ಹೊಂದಿರುವ ಅನೇಕ ಮಕ್ಕಳಲ್ಲಿ ಇತರ  ವೈದ್ಯಕೀಯ ಅಥವಾ ಮಾನಸಿಕ ಸಮಸ್ಯೆಗಳೂ ತಲೆದೋರಬಹುದು.  ಇದನ್ನು ಕಮಾರ್ಬಿಡಿಟಿ ಎನ್ನಲಾಗುತ್ತದೆ. ಆಟಿಸಂಗೆ ಸಂಬಂಧಿಸಿದ ಕಮಾರ್ಬಿಡ್ ಸಮಸ್ಯೆಗಳೆಂದರೆ ಎ ಡಿ ಹೆಚ್ ಡಿ, ಆತಂಕ, ಖಿನ್ನತೆ, ಸ್ಪರ್ಶ ಸೂಕ್ಷ್ಮತೆ, ಬೌದ್ಧಿಕ ದೌರ್ಬಲ್ಯ, ಟಾರೆಟ್ ಸಮಸ್ಯೆ ಮುಂತಾದವು. ಈ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರತ್ಯೇಕವಾಗಿ ತಪಾಸಣೆ ನಡೆಸಬೇಕಾಗುತ್ತದೆ.

ಎ ಎಸ್ ಡಿ ಸಮಸ್ಯೆ ಇರುವ ಮಕ್ಕಳ ವಿಶೇಷ ಸಾಮರ್ಥ್ಯಗಳೇನು?

ಆಟಿಸಂ ಸಮಸ್ಯೆ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಹೊರಜಗತ್ತಿನೊಡನೆ ಬೆರೆಯುವುದರಲ್ಲಿ ಕೊರತೆ ಎದುರಿಸುತ್ತಾರೆ. ಆದರೆ ಅವರಲ್ಲಿ ಕೆಲವು ವಿಶೇಷ ಸಾಮರ್ಥ್ಯವೂ ಇರುವ ಸಾಧ್ಯತೆಗಳಿರುತ್ತವೆ. ಇದರಿಂದಲೇ ಇಂತಹ ಮಕ್ಕಳು ನಂತರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆಟಿಸಂ ಸಮಸ್ಯೆ ಹೊಂದಿರುವ ಮಕ್ಕಳು ಸಾಧಾರಣವಾದ ಅಥವಾ ಕೊಂಚ ಉತ್ತಮ ಎನ್ನಬಹುದಾದ ಕೌಶಲ್ಯಗಳನ್ನು ಹೊಂದಿರುವುದೇ ಆದರೆ ಅವುಗಳಲ್ಲಿ ಮುಖ್ಯವಾಗಿ ಈ ಕೆಳಗಿನವುಗಳನ್ನು ಗುರುತಿಸಬಹುದು.

· ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಜ್ಞಾನ ಹೊಂದಿರುವುದು

· ಅಚ್ಚುಕಟ್ಟಾಗಿ, ಸಂಘಟಿತರಾಗಿ ಇರುವುದು

· ಅಮೂರ್ತ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಪ್ರತಿಭೆ

· ಸಮಸ್ಯೆಯನ್ನು ಬಗೆಹರಿಸುವ, ತಾರ್ಕಿಕವಾಗಿ ಯೋಚಿಸುವ ಶಕ್ತಿ

ಎ ಎಸ್ ಡಿ ಸಮಸ್ಯೆಗೆ ಕಾರಣಗಳೇನು?

ಆಟಿಸಂಗೆ ನಿರ್ದಿಷ್ಟವಾದ ಕಾರಣಗಳೇನು ಎಂದು ತಿಳಿದುಕೊಳ್ಳಲು ತಜ್ಞರು ಇನ್ನೂ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಆದರೆ ಸಂಶೋಧನೆಗಳ ಪ್ರಕಾರ ಇದು ವಂಶವಾಹಿಯಾಗಿ, ಜೈವಿಕ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳಿಂದಲೂ ಉದ್ಭವಿಸುತ್ತದೆ.

ಎ ಎಸ್ ಡಿ ಸಮಸ್ಯೆ ಪರಿಹಾರದಲ್ಲಿ ಅಗತ್ಯವಾದ ಪ್ರಯತ್ನಗಳೇನು?

ಎ ಎಸ್ ಡಿ ಸಮಸ್ಯೆ ಜೀವನವಿಡೀ ಕಾಡುವ ಒಂದು ದೌರ್ಬಲ್ಯ. ಇದು ವಾಸಿಯಾಗುವುದಿಲ್ಲ. ಆದರೆ ಸೂಕ್ತ ಚಿಕಿತ್ಸೆ ದೊರೆತರೆ ಮಗು ಸೂಕ್ತ ಕೌಶಲಗಳನ್ನು ಕಲಿತು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯ. ಮಗುವಿಗೆ 12 ರಿಂದ 18 ವರ್ಷ ವಯಸ್ಸಾಗುವುದರೊಳಗೆ ಎ ಎಸ್ ಡಿ ಸಮಸ್ಯೆಯನ್ನು ಕಂಡುಹಿಡಿಯಲು ಸಾಧ್ಯವಿರುವುದರಿಂದ ಉತ್ತಮ ಫಲಿತಾಂಶ ಪಡೆಯಲು ಶೀಘ್ರ ಚಿಕಿತ್ಸೆಯನ್ನು ನೀಡಬಹುದು.  ಎ ಎಸ್ ಡಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಅಂತರ್ ಶಿಸ್ತೀಯ, ರಚನಾತ್ಮಕ ಮತ್ತು ವಿಶೇಷ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದು. ಇದರಿಂದ ಮಗುವಿನ ಸಂವಹನ ಶಕ್ತಿ, ಸಾಮಾಜಿಕ ವರ್ತನೆಯನ್ನು ಸರಿಪಡಿಸಬಹುದು. ಎ ಎಸ್ ಡಿ ಸಮಸ್ಯೆ ಇರುವ ಮಕ್ಕಳಿಗೆ ನೀಡುವ ಚಿಕಿತ್ಸೆ ನಿರಂತರವಾಗಿದ್ದು, ಗಂಭೀರ ರೀತಿಯದ್ದಾಗಿದ್ದರೆ ಸಾಕಷ್ಟು ಪ್ರಗತಿ ಕಾಣಲು ಸಾಧ್ಯ.

ವರ್ತನೆ ಆಧಾರಿತ ಮಾರ್ಗಗಳು:

ಪ್ರಾಯೋಗಿಕ ವರ್ತನೆಯ ವಿಶ್ಲೇಷಣೆ (ಎ ಬಿ ಎ): ಎ ಬಿ ಎ ಮಾರ್ಗದಲ್ಲಿ ಆಟಿಸಂ ಸಮಸ್ಯೆ ಎದುರಿಸುತ್ತಿರುವ ಮಕ್ಕಳಲ್ಲಿ ಕಂಡುಬರುವ ವರ್ತನೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಈ ಚಿಕಿತ್ಸಾ ಮಾರ್ಗದಲ್ಲಿ ಮೂರು ಪ್ರಕ್ರಿಯೆಗಳಿರುತ್ತವೆ. ಬೋಧನೆ, ವರ್ತನೆ ಮತ್ತು ಪರಿಣಾಮ. ಈ ಮಾದರಿಯಲ್ಲಿ ಮಕ್ಕಳು ಉದ್ದೇಶಿತ ವರ್ತನೆ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳಲು ಸೂಕ್ತ ಪ್ರೋತ್ಸಾಹ ಮತ್ತು ಬಹುಮಾನ ನೀಡಲು ಪ್ರಯತ್ನಿಸಲಾಗುತ್ತದೆ. ಮಗುವಿನ ಮುನ್ನಡೆಯನ್ನು ಸೂಕ್ತವಾಗಿ ಗಮನಿಸಿ ನಿರ್ವಹಿಸಲಾಗುತ್ತದೆ. ಎಬಿಎ ಚಿಕಿತ್ಸಾ ಮಾರ್ಗದಲ್ಲಿ ಈ ಕೆಲವು ತಂತ್ರಗಳನ್ನು ಬಳಸಲಾಗುತ್ತದೆ.

ವಿವೇಕಯುತ ಪ್ರಯೋಗದ ತರಬೇತಿ (ಡಿ ಟಿ ಟಿ): ಡಿಟಿಟಿ ಮಾದರಿಯ ಮೂಲಕ ಮಗುವಿಗೆ ಸಂಕೀರ್ಣವಾದ ಕೆಲಸಗಳನ್ನು ಸುಲಭವಾಗಿ ಮಾಡುವ ಮಾರ್ಗಗಳನ್ನು ಬೋಧಿಸಲಾಗುತ್ತದೆ.  ಒಂದು ಗುರಿ ತಲುಪಲು ಬಳಸಬಹುದಾದ ಉಪಕರಣಗಳ  ಮೇಲೆ ಹಿಡಿತ ಸಾಧಿಸಲು ಕಲಿಸಲಾಗುತ್ತದೆ. ಸೂಕ್ತ ಪ್ರೋತ್ಸಾಹ ಮತ್ತು ಬಹುಮಾನಗಳನ್ನು ನೀಡುವ ಮೂಲಕ ಸರಿಯಾದ ಉತ್ತರ ಮತ್ತು ಉತ್ತಮ ವರ್ತನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಅಪೇಕ್ಷಿತ ಕೌಶಲ ಮತ್ತು ವರ್ತನೆಯನ್ನು ರೂಢಿಸಿಕೊಳ್ಳಲು ಹೇಳಿಕೊಡಲಾಗುತ್ತದೆ. ಮಗು ಕಲಿಯುವವರೆಗೂ ಸತತವಾಗಿ ಬೋಧನೆ ಮಾಡಲಾಗುತ್ತದೆ.

ಇಐಬಿಐ ಚಿಕಿತ್ಸೆ (ತ್ವರಿತ ಗಂಭೀರ ವರ್ತನೆಯನ್ನಾಧರಿಸಿದ ಚಿಕಿತ್ಸೆ): ಇದು ಎಬಿಎ ಚಿಕಿತ್ಸೆಯ ಮತ್ತೊಂದು ಮಾದರಿಯಾಗಿದ್ದು  ಮೂರು ವರ್ಷದ ಕೆಳಗಿನ , ಹೆಚ್ಚೆಂದರೆ ಐದು ವರ್ಷದ ಕೆಳಗಿನ ಮಕ್ಕಳಲ್ಲಿ ಇರಬಹುದಾದ ಆಟಿಸಂ ಸಂಬಂಧಿತ ವರ್ತನೆಗಳನ್ನು ಸರಿಪಡಿಸಲು ಅನುಸರಿಸಲಾಗುತ್ತದೆ.

ಪ್ರಮುಖ ಪ್ರತಿಕ್ರಿಯಾ ತರಬೇತಿ (ಪಿ ಆರ್ ಟಿ): ಮಕ್ಕಳ ಬೆಳವಣಿಗೆಯಲ್ಲಿ ಕಂಡುಬರುವ ನಾಲ್ಕು ಪ್ರಮುಖ ಹಂತಗಳನ್ನೇ ಗಮನದಲ್ಲಿಟ್ಟುಕೊಂಡು ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ನಾಲ್ಕು ಕ್ಷೇತ್ರಗಳೆಂದರೆ ಪ್ರೇರಣೆ, ಸ್ವಯಂ ನಿರ್ವಹಣೆ, ಸ್ವಯಂ ತೊಡಗುವಿಕೆ ಮತ್ತು ಸೂಕ್ತ ಪ್ರತಿಕ್ರಿಯೆ. ಈ ಮಾದರಿಯನ್ನು ಅನುಸರಿಸುವಾಗ ಮಗುವಿನ ಮೇಲೆ ಕೇಂದ್ರೀಕೃತವಾದ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸಕರು ಯಾವುದೋ ಒಂದು ಚಟುವಟಿಕೆಯನ್ನು ಅಥವಾ ಮಗುವಿಗೆ ಇಷ್ಟವಾದ ಆಟಿಕೆಯನ್ನು ನೀಡುವ ಮೂಲಕ ಮಗು ಗುರಿ ತಲುಪುವಂತೆ ಮಾಡುತ್ತಾರೆ.

ಸಂಯೋಜಿತ (ಒಟ್ಟುಗೂಡಿಸಿದ) ಚಿಕಿತ್ಸೆ ಅಟಿಸ್ಟಿಕ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸಂವಹನ ಕೊರತೆ ಇರುವ ಮಕ್ಕಳಿಗೆ ತಿಳುವಳಿಕೆ ನೀಡಿ ಚಿಕಿತ್ಸೆ ನೀಡುವ ವಿಧಾನವನ್ನು ಟಿಇಎಸಿಸಿಎಚ್ ಎಂದು ಕರೆಯಲಾಗುತ್ತದೆ. ಈ ಚಿಕಿತ್ಸೆಯಲ್ಲಿ ರಚನಾತ್ಮಕ ತರಬೇತಿ ನೀಡಲಾಗುವುದರಿಂದ ಈಗಾಗಲೇ ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಕೌಶಲ್ಯವನ್ನು ಹೆಚ್ಚಿಸಲು ಸಾಧ್ಯ. ಟಿಇಎಸಿಸಿಎಚ್ ಚಿಕಿತ್ಸೆಯ ಮೂಲ ಉದ್ದೇಶ ಎಂದರೆ ಆಟಿಸಂನಿಂದ ಬಳಲುತ್ತಿರುವ ಮಕ್ಕಳು ಆದಷ್ಟು ಮಟ್ಟಿಗೆ ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ಮಾಡಲು ನೆರವಾಗುವುದೇ ಆಗಿದೆ.

ಬೆಳವಣಿಗೆ ಕೇಂದ್ರಿತ ವಿಧಾನ

ಬೆಳವಣಿಗೆ ಕೇಂದ್ರಿತ, ವ್ಯಕ್ತಿಗತ ಭಿನ್ನತೆಯ, ಸಂಬಂಧಗಳನ್ನು ಆಧರಿಸಿದ ವಿಧಾನವನ್ನು ಫ್ಲೋರ್ ಟೈಮ್ ಎಂದೂ, ಡಿಐಆರ್ ವಿಧಾನ ಎಂದೂ ಕರೆಯಲಾಗುತ್ತದೆ. ಈ ವಿಧಾನವನ್ನು ಅನುಸರಿಸುವಾಗ ಮಕ್ಕಳಲ್ಲಿನ ಭಾವನೆಗಳು, ಉನ್ಮತ್ತ ಮನಸ್ಥಿತಿ ಮತ್ತು ಸಂಬಂಧಗಳನ್ನು ಬೆಳೆಸುವ ಮನೋಭಾವ ಮುಂತಾದುವನ್ನು ಗಮನಿಸಲಾಗುತ್ತದೆ. ಮಗು ಸಂಜ್ಞೆಗೆ, ಸಂಕೇತಗಳಿಗೆ, ಶಬ್ದಕ್ಕೆ ಮತ್ತು ವಾಸನೆಗೆ ಹೇಗೆ ಸ್ಪಂದಿಸುತ್ತದೆ ಎಂದು ತಿಳಿಯುವ ಪ್ರಯತ್ನವನ್ನು ಈ ವಿಧಾನದ ಮೂಲಕ ಮಾಡಲಾಗುತ್ತದೆ.

ಪ್ರಮಾಣಿತ ಮಾದರಿಗಳು :

ವೃತ್ತಿ ಆಧಾರಿತ ಚಿಕಿತ್ಸೆ: ವೃತ್ತಿ ಆಧಾರಿತ ಚಿಕಿತ್ಸೆಯಲ್ಲಿ ಆಟಿಸಂ ಸಮಸ್ಯೆ ಇರುವ ಮಗುವಿಗೆ ನೆರವಾಗಲು ಹಲವು  ವೈವಿಧ್ಯಮಯ ತಂತ್ರಗಳನ್ನು ಅನುಸರಿಸಲಾಗುತ್ತದೆ.  ಇದರಿಂದ ಆಟಿಸಂ ಸಮಸ್ಯೆ ಇರುವ ಮಕ್ಕಳು ದಿನನಿತ್ಯದ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಮಾಡಲಾಗುತ್ತದೆ. ಮೋಟರ್ ಕೌಶಲ್ಯಗಳಲ್ಲಿ ಮಗು ಹೆಚ್ಚು ಪ್ರಭಾವಶಾಲಿಯಾಗುವಂತೆ ಮಾಡಲಾಗುತ್ತದೆ.

· ವಾಕ್ ಚಿಕಿತ್ಸೆ: ಸಾಮಾನ್ಯವಾಗಿ  ವಾಕ್ ಚಿಕಿತ್ಸೆ ನೀಡುವವರು ಮಗುವಿನೊಡನೆ ಬೆರೆತು ಅವರ ಸಂವಹನ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತಾರೆ. ಈ ಚಿಕಿತ್ಸಕರು ಸಂಜ್ಞೆಗಳ ಮೂಲಕ, ಚಿತ್ರಗಳಿರುವ ಫಲಕಗಳ  ಮೂಲಕ ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಮಗು ಇತರರಿಗೆ ತನ್ನ ಭಾವನೆಗಳನ್ನು ಮತ್ತು ಯೋಚನೆಗಳನ್ನು ತಿಳಿಸಲು ನೆರವಾಗುತ್ತಾರೆ. ಅಂತರ್ ಶಿಸ್ತೀಯ ಚಿಕಿತ್ಸೆಯ ಮಾರ್ಗದಲ್ಲಿ ವಾಕ್ ಚಿಕಿತ್ಸೆಯನ್ನು ನೀಡುವುದು ಅವಶ್ಯಕ. ಏಕೆಂದರ ಆಟಿಸಂ ಇರುವ ಮಕ್ಕಳಿಗೆ ಸಂವಹನದ ಕೊರತೆ ಹೆಚ್ಚಾಗಿರುತ್ತದೆ.

· ಇಂದ್ರಿಯಗಳನ್ನು ಸಂಯೋಜಿಸುವ ಚಿಕಿತ್ಸೆ: ಈ ಚಿಕಿತ್ಸೆ ಮಗುವಿನಲ್ಲಿ ಸಂಕೇತ, ಸಂಜ್ಞೆ, ಶಬ್ದ ಮತ್ತು ವಾಸನೆ ಮುಂತಾದ ಇಂದ್ರಿಯ ಗ್ರಾಹ್ಯ ಸಮಸ್ಯೆಗಳನ್ನು ಎದುರಿಸಲು ನೆರವಾಗುತ್ತದೆ. ಈ ಚಿಕಿತ್ಸೆಯ ಮೂಲಕ ಮಗು ಯಾವುದೋ ಒಂದು ಶಬ್ದದಿಂದ ತೊಂದರೆಗೊಳಗಾಗುವಂತಿದ್ದರೆ, ಅಥವಾ ಯಾರೂ ತನ್ನನ್ನು ಮುಟ್ಟಬಾರದು ಎಂಬ ಭಾವನೆ ಹೊಂದಿದ್ದರೆ ಅದನ್ನು ಸರಿಪಡಿಸಬಹುದು. ಮಕ್ಕಳು ತಮ್ಮ ಇಂದ್ರಿಯ ಗ್ರಹಿಕೆಯನ್ನು ಉತ್ತಮಪಡಿಸಿಕೊಂಡರೆ ಅವರ ಚಲನವಲಗಳ    ಮೇಲೆ , ಭಾವನೆಗಳ ಮೇಲೆ, ಶಬ್ದಗಳ ಮೇಲೆ ನಿಯಂತ್ರಣ ಸಾಧಿಸುವುದೇ ಅಲ್ಲದೆ ಅವರಲ್ಲಿನ ಸಾಮಾಜಿಕ ಕೌಶಲಗಳೂ ಉತ್ತಮವಾಗುತ್ತವೆ.

ಇತರ ಮಾದರಿಗಳು

· ಸಂಗೀತ ಚಿಕಿತ್ಸೆ: ಎ ಎಸ್ ಡಿ ಸಮಸ್ಯೆ ಇರುವ ಮಕ್ಕಳಿಗೆ ಸಂಗೀತ ಚಿಕಿತ್ಸೆ ನೀಡುವ ಮೂಲಕ ನಿರ್ದಿಷ್ಟ ಸಂಗೀತ ಆಧರಿತ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ. ಇದರಿಂದ ಆಟಿಸಂ ಇರುವ ಮಕ್ಕಳಲ್ಲಿ ಸಾಮಾಜಿಕ ಕೌಶಲ ಮತ್ತು ಸಂವಹನ ಕೌಶಲ ಹೆಚ್ಚಾಗುತ್ತದೆ.

· ಚಿತ್ರ ವಿನಿಯಮ ಸಂವಹನ ಪದ್ಧತಿ (ಪಿಇಸಿಎಸ್): ಈ ಚಿಕಿತ್ಸಾ ಮಾದರಿಯನ್ನು ಸಾಮಾನ್ಯವಾಗಿ ಸಂವಹನ ಸಾಮರ್ಥ್ಯವೇ ಇಲ್ಲದ ಅಥವಾ ಕೊಂಚ ಮಟ್ಟಿಗೆ ಇರುವ , ಆಟಿಸಂ ಸಮಸ್ಯೆ ಇರುವ ಮಕ್ಕಳಲ್ಲಿ ಪ್ರಯೋಗ ಮಾಡಲಾಗುತ್ತದೆ. ಚಿತ್ರಗಳು, ಸಂಕೇತಗಳು ಅಥವಾ ಕಾರ್ಡ್ ಗಳನ್ನು ಬಳಸಿ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ.

ಟಿಪ್ಪಣಿ : ಕೆಲವು ಸಂಶೋಧನೆಗಳ ಪ್ರಕಾರ ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಆರಂಭದ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಮಕ್ಕಳ ಬೆಳವಣಿಗೆಗೆ ನೆರವಾಗಬಹುದು. ಆದ್ದರಿಂದ ನಿಮ್ಮ ಮಕ್ಕಳಿಗೆ ಆಟಿಸಂ ಸಮಸ್ಯೆ ಅಥವಾ ಇತರ ಯಾವುದೇ ಬೆಳವಣಿಗೆಯ ಸಮಸ್ಯೆ ಇರುವ ಅನುಮಾನ ಬಂದ ಕೂಡಲೇ ನೀವು ಶಿಶು ವೈದ್ಯರನ್ನು ಕಾಣುವುದು ಒಳ್ಳೆಯದು. ಅನೇಕ ಚಿಕಿತ್ಸಾ ಕೇಂದ್ರಗಳು ಈ ಸಂದರ್ಭದಲ್ಲಿ ಒತ್ತಡಕ್ಕೊಳಗಾಗಿರುವ, ಆತಂಕಕ್ಕೊಳಗಾಗಿರುವ ಪೋಷಕರಿಗೆ, ಪಾಲಕರಿಗೆ ಆಪ್ತ ಸಲಹೆ ನೀಡುವ ಮೂಲಕ ನೆರವಾಗುತ್ತವೆ.  ಯಾವ ರೀತಿಯ ತರಬೇತಿ ಲಭ್ಯವಿದೆ ಎನ್ನುವುದನ್ನು ನಿಮಗೆ ಪರಿಚಯ ಇರುವ ಚಿಕಿತ್ಸಕರಿಂದ ತಿಳಿದುಕೊಳ್ಳಿ . ಹಾಗೆಯೇ ಮಗುವಿಗೆ ಶೀಘ್ರ ಚೇತರಿಸಿಕೊಳ್ಳಲು ನೆರವಾಗುವಂತೆ ಮಾಡಲು ನಿಮ್ಮ ಅಗತ್ಯತೆ ಏನಿದೆ ಎನ್ನುವುದನ್ನು ಚಿಕಿತ್ಸಕರಿಂದ ತಿಳಿದುಕೊಂಡು ಅದರಂತೆ ನಡೆದುಕೊಳ್ಳಿ.

ಎ ಎಸ್ ಡಿ ಸಮಸ್ಯೆ ಇರುವವರನ್ನು ಸಲಹುವ ಕುರಿತು

ತಮ್ಮ  ಮಕ್ಕಳಿಗೆ ಆಟಿಸಂ ಸಮಸ್ಯೆ ಇದೆ ಎಂದು ತಿಳಿದ ಕೂಡಲೇ ಪಾಲಕರು ಅಥವಾ ಪೋಷಕರು ತೀವ್ರ ಆಘಾತಕ್ಕೊಳಗಾಗುತ್ತಾರೆ, ಆತಂಕಕ್ಕೊಳಗಾಗುತ್ತಾರೆ. ಅವರಲ್ಲಿ ಒತ್ತಡ ಹೆಚ್ಚಾಗುತ್ತದೆ. ಅನೇಕ ಪೋಷಕರು, ವಿಶೇಷವಾಗಿ ನೌಕರಿಯಲ್ಲಿರುವ ತಾಯಂದಿರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮಕ್ಕಳ ಪಾಲನೆಯಲ್ಲಿ ತೊಡಗುತ್ತಾರೆ. ಮನೆಗಳಲ್ಲಿ ಹಲವು ಹೊಂದಾಣಿಕೆಗಳು ಕಂಡುಬರುತ್ತವೆ.  ಇತರ ಮಕ್ಕಳೂ ಸಹ ಎ ಎಸ್ ಡಿ ಸಮಸ್ಯೆ ಇರುವ ತಮ್ಮ ಸೋದರ ಅಥವಾ ಸೋದರಿಯರೊಂದಿಗೆ  ಹೊಂದಿಕೊಂಡು ನಡೆದುಕೊಳ್ಳುತ್ತಾರೆ. ಕುಟುಂಬದ ಇತರ ಸದಸ್ಯರು ಇಂತಹ ಮಕ್ಕಳಿಗೆ ಹೆಚ್ಚಿನ ನೆರವು ನೀಡುತ್ತಾರೆ.  ಅಂತಹ ಮಕ್ಕಳ ಹಿತಾಸಕ್ತಿಗೆ ಅನುಗುಣವಾಗಿ, ಅವರ  ಮನಸ್ಥಿತಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಡೆಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆಟಿಸಂ ಇರುವ ಮಕ್ಕಳನ್ನು ಪೋಷಣೆ ಮಾಡುವಾಗ  ಹಲವು ಸವಾಲುಗಳು ಎದುರಾಗುತ್ತವೆ. ಆದರೆ ಪೋಷಕರಿಗೆ ಉತ್ತಮ ಜ್ಞಾನ ಇದ್ದಲ್ಲಿ ಅವರು ತಮ್ಮ ಮಕ್ಕಳಿಗಾಗಿ ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ. 

ಇಂತಹ ಪರಿಸ್ಥಿತಿಯಲ್ಲಿ, ಪೋಷಕರಾಗಿ, ಪಾಲಕರಾಗಿ ನೀವು ಹೀಗೆ ಮಾಡಬಹುದು:

  • ಆಟಿಸಂ ಕುರಿತು ಆದಷ್ಟೂ ಮಾಹಿತಿ ಸಂಗ್ರಹಿಸಿ. ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ನೀವೂ ಹಲವು ಚಿಕಿತ್ಸಾ ಮಾದರಿಗಳನ್ನು ಕಲಿಯಬಹುದು.

  • ಎಲ್ಲ ದಿನನಿತ್ಯದ ಚಟುವಟಿಕೆಗಳನ್ನೂ ನಿಯತಕಾಲಿಕವಾಗಿ ಯೋಜನಾಬದ್ಧವಾಗಿಸಿ.

  • ವೃತ್ತಿಪರರ ನೆರವು ಪಡೆಯಿರಿ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಆಪ್ತ ಸಮಾಲೋಚಕರ ಸಲಹೆ ಪಡೆಯಿರಿ.

  • ಈ ರೀತಿಯ ಮಕ್ಕಳ ಪೋಷಕರು ಮಾತ್ರವೇ ಇತರ ಪೋಷಕರು, ಪಾಲಕರು ಎದುರಿಸುವ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಹಾಗಾಗಿ ಪೋಷಕರು ಮತ್ತು ಪಾಲಕರು ಆಟಿಸಂ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಮತ್ತು ಅವರ ಪೋಷಕರೊಡನೆ ಸಹಕರಿಸುವ ಗುಂಪುಗಳಲ್ಲಿ ಭಾಗವಹಿಸಿ.

  • ನಿಮಗಾಗಿ ಸಮಯವನ್ನು ಕಾಪಾಡಿಕೊಳ್ಳಿ. ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಈ ಲೇಖನವನ್ನು ಸಿದ್ಧಪಡಿಸಲು  ಬೆಂಗಳೂರಿನಲ್ಲಿರುವ ಡಿ ಇ ಎ ಎಲ್ ಎಲ್ ಟ್ರಸ್ಟಿನ ದೀಪಾ ಭಟ್ ನಾಯರ್ ಅವರಿಂದ  ಮಾಹಿತಿ ಮತ್ತು ಸಲಹೆಯನ್ನು ಪಡೆಯಲಾಗಿದೆ.

Related Stories

No stories found.