ಪಾಲಕ ಪಾತ್ರ ಪರಿಪೂರ್ಣ, ನಿಸ್ವಾರ್ಥ ಅಥವಾ ಸ್ವಾರ್ಥಭರಿತವಾದದ್ದೇ?

ನನ್ನ ಕೆಲವು ಲೇಖನಗಳನ್ನು ಓದಿದ ಬಳಿಕ ನೀವು ಪಾಲಕರಾಗಿ ನಿಮ್ಮ ಲಾಲನೆ-ಪಾಲನೆಯ ಸಾಮರ್ಥ್ಯದ ಬಗ್ಗೆ ಶಂಕೆಗೊಳಗಾಗಿರಬಹುದು ಎಂಬುದರತ್ತ ನನ್ನ ಗಮನವಿದೆ. ನೀವು ಎಷ್ಟು ಭಯಗೊಂಡಿರಬಹುದೆಂದರೆ, ನೀವು ಏನೇ ಮಾಡಿದರೂ ನಿಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗಬಹುದು  ಎಂದು ಯೋಚಿಸುತ್ತಿರಬಹುದು. ಅಥವಾ ನಿಮ್ಮ ಮಗುವಿನ ಭವಿಷ್ಯ ಹಾಗೂ ಅದನ್ನು ನಿಭಾಯಿಸುವ ನಿಮ್ಮ ಸಾಮರ್ಥ್ಯದ ಕುರಿತು ನೀವು ಈಗಾಗಲೇ ಅಷ್ಟೊಂದು ತಲೆಕೆಡಿಸಿಕೊಳ್ಳದೆಯೂ ಇರಬಹುದು.

ಆದರೆ ಪ್ರಿಯ ಓದುಗರೇ, ಈ ಲೇಖನಗಳಲ್ಲಿ ನನ್ನ ಉದ್ದೇಶವು ಪಾಲಕರಾಗಿರುವ ಖುಷಿಯಿಂದ ನಿಮ್ಮನ್ನು ವಿಮುಖರನ್ನಾಗಿ ಮಾಡುವುದಾಗಲೀ ಅಥವಾ ನಿಮ್ಮಲ್ಲಿ ಭಯ ಹುಟ್ಟಿಸುವುದಾಗಲೀ ಖಂಡಿತಾ ಅಲ್ಲ. ಅದರ ಬದಲು ಹೇಗೆ ಕೆಲವು ಸರಳ ವಿಚಾರಗಳು ಕೂಡಾ ತಪ್ಪಾಗಿರಬಹುದು ಮತ್ತು ನಾವು ಮನಸ್ಸು ಮಾಡಿದರೆ ಅದನ್ನು ಹೇಗೆ ಸುಲಭದಲ್ಲಿ ಸರಿಪಡಿಸಬಹುದು ಎಂಬುದನ್ನು ತಿಳಿಸುವುದಾಗಿದೆ.

ಜೀವನದ ಉಳಿದ ಭಾಗದಂತೆಯೇ ಮಕ್ಕಳ ಲಾಲನೆ-ಪಾಲನೆಯು ಕೂಡಾ ಜೀವನ ಯಾತ್ರೆಯ ಒಂದು ಅಂಗ. ನಾವು ಇದನ್ನು ಆನಂದದಾಯಕವಾದ ಒಂದು ಪ್ರವಾಸದಂತೆ, ಸುತ್ತಲಿನ ಸುಂದರ ವಿಷಯಗಳನ್ನು ಆಸ್ವಾದಿಸುತ್ತಾ, ಪ್ರಯಾಣದಲ್ಲಿ ಎದುರಾಗುವ ಅಡೆತಡೆಗಳನ್ನು ಎದುರಿಸುತ್ತಾ ಸಾಗಬಹುದು ಅಥವಾ ಇದನ್ನೊಂದು ಕಷ್ಟದ ಪ್ರಯಾಣವೆಂದು ಭಾವಿಸಿ ಎದುರಾಗುವ ಅಡೆತಡೆಗಳು ಇದನ್ನು ಇನ್ನಷ್ಟು ಜಟಿಲಗೊಳಿಸಿ ನಾವು ಗಮ್ಯವನ್ನು ತಲುಪುವ ಸಮಯವನ್ನು ಮತ್ತಷ್ಟು ವಿಳಂಬಗೊಳಿಸುತ್ತಿವೆಯೆಂದು ಭಾವಿಸಿಕೊಳ್ಳಬಹುದು.

ಇವೆರಡರ ಆಯ್ಕೆ ನಮಗೆ ಬಿಟ್ಟಿದ್ದು. ನಾವು ಯಾವ ದೃಷ್ಟಿಕೋನದಿಂದ ನೋಡಿದರೂ ನಮ್ಮ ಯೋಚನೆ ಮತ್ತು ನೀರೀಕ್ಷೆಗಳು ತುಂಬ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಪರಿಪೂರ್ಣರಾಗಬೇಕೆಂದು ನಿರೀಕ್ಷಿಸುತ್ತೇವೆಯೇ? ಪಾಲಕರಾಗಿ ನಮ್ಮೆಲ್ಲಾ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೊಂದಿಗೆ ಸ್ವೀಕರಿಸುತ್ತೇವೆಯೇ?  ನಾವು ನಮ್ಮ ತಪ್ಪುಗಳು ಮತ್ತು ಕುಂದುಕೊರತೆಗಳನ್ನು ಜೀವನದ ಭಾಗಗಳೆಂದು ಪರಿಗಣಿಸಲು ಸಿದ್ಧರಿದ್ದೇವೆಯೇ?

ಒಬ್ಬ ವ್ಯಕ್ತಿಯು ಪಾಲಕನಾದ ತಕ್ಷಣ –“ನಾನೀಗ ಪರಿಪೂರ್ಣನಾಗಬೇಕು, ನಾನು ಇನ್ನು ಈ ವಿಷಯದಲ್ಲಿ ತಪ್ಪು ಮಾಡಬಾರದು,” ನಾನು ಪಾಲಕಳಾಗಿ/ನಾಗಿ ಸರಿಯಾಗಿ ಜವಾಬ್ದಾರಿ ನಿರ್ವಹಿಸಲಿಲ್ಲವೆಂದು ಯಾರೂ ಹೇಳಬಾರದು” ‘ಇನ್ನು ಮುಂದೆ ಜನರು ನನ್ನ ಮಗುವನ್ನು ನೋಡಿ ನನ್ನನ್ನು ಅಳೆಯುತ್ತಾರೆ” ಎಂದು ಯೋಚಿಸತೊಡಗುತ್ತಾರೆ..

ಪಾಲನೆ-ಪೋಷಣೆಯ ಕಾರಣದಿಂದಾಗಿ ಅತಿಯಾದ ಜವಾಬ್ದಾರಿಯ ಭಾವನೆಯನ್ನು ತಾಳುತ್ತಾರೆ. ನಾನೂ ಕೂಡಾ ನನ್ನ ನವಜಾತ ಶಿಶುವನ್ನು ನೋಡಿದಾಗ ಈ ಮಗುವು ನನ್ನ ಸಂಪೂರ್ಣ ಜವಾಬ್ದಾರಿಯೆಂದೂ ಮತ್ತು ಇದು ನನ್ನ ಮೇಲೆ ಅವಲಂಬಿತವಾಗಿದೆ ಎಂದು ಯೋಚಿಸುತ್ತಿದ್ದೆ . ಅದರಿಂದ ನನ್ನಿಂದ ಏನಾದರೂ ತಪ್ಪಾದರೆ ಎಂಬ ಭಯ ಶುರುವಾಯಿತು. ನಾನು ಜವಾಬ್ದಾರಿಯನ್ನು ನಿರ್ವಹಿಸಲು ಅಸಮರ್ಥಳಾದರೆ? ನನಗೇನಾದರೂ ಆಗಿಬಿಟ್ಟರೆ? ನನ್ನ ಮಗು ನನ್ನನ್ನು ನೆನಪಿಸಿಕೊಳ್ಳುವುದೇ ಎಂಬೆಲ್ಲಾ ಯೋಚನೆಗಳು ಸುಳಿಯತೊಡಗಿದವು.

ಪಾಲಕರಾಗಿ ಈ ಪ್ರಯಾಣದ ತುಂಬ ನಾವು ನಮ್ಮೊಳಗೇ ಸಂಘರ್ಷಿಸುವಂತೆ ಮಾಡುವ ಯೋಚನೆ ಮತ್ತು ಭಾವನೆಗಳು – ಭರವಸೆ ಮತ್ತು ಭಯ, ಪ್ರೀತಿ ಮತ್ತು ಕೋಪ, ಖುಷಿ ಮತ್ತು ದುಃಖ, ಆಶಾವಾದ ಮತ್ತು ನಿರಾಶಾವಾದ, ವಿಶ್ವಾಸ ಮತ್ತು ಅನುಮಾನ, ನಿಸ್ವಾರ್ಥ ಮತ್ತು ಗೌಪ್ಯವಾಗಿ ಏನನ್ನೋ ಬಯಸುವುದು, ಸ್ವತಂತ್ರವಾಗಿರುವುದನ್ನು ಕಲಿಸುವುದು, ನಿಮ್ಮ ಮಕ್ಕಳು ತಮ್ಮಿಷ್ಟದಂತೆ ಆಗಲಿ ಎಂದು ಹೇಳುತ್ತಾ ನಿಮ್ಮ ಇಷ್ಟಗಳನ್ನು ಪೂರೈಸಿಕೊಳ್ಳುವುದು – ಈ ತರಹ ಅನೇಕ ಯೋಚನೆಗಳು ಬರುತ್ತವೆ.

ಅದೇ ರೀತಿ ‘ಪಾಲಕ’ ಎನ್ನುವ ನಮ್ಮ ಪಾತ್ರವು ನಿಸ್ವಾರ್ಥ ಪ್ರವೃತ್ತಿಯೇ ಅಥವಾ ಸ್ವಾರ್ಥಭರಿತವಾದದ್ದೇ? ನನಗೆ ಮೊದಲ ಬಾರಿಗೆ ಈ ಪ್ರಶ್ನೆ ಎದುರಾದಾಗ ನಾನು ಪಾಲಕ ಪಾತ್ರವು ಸಂಪೂರ್ಣ ಸ್ವಾರ್ಥರಹಿತವಾದದ್ದು ಎಂದು ತಿಳಿದಿದ್ದೆ. ಅದಕ್ಕೆ ವಿರುದ್ಧ ರೀತಿಯಲ್ಲಿ ಯೋಚಿಸುವುದು ಸಾಧ್ಯವಿರಲಿಲ್ಲ. ಆದರೆ ಈಗ ಯೋಚಿಸಿದಾಗ ನನಗೇ ಇದರ ಕುರಿತು ಸ್ಪಷ್ಟತೆಯಿಲ್ಲ. ಬಹುಶಃ ಪಾಲನೆಯು ಇವೆರಡರ ಸಂಗಮವೂ ಆಗಿರಬಹುದು.

 ನೀವು ಪರಿಪೂರ್ಣರೂ ಅಲ್ಲ ಅಸಮರ್ಥರೂ ಅಲ್ಲ. ಹಾಗೆ ಆಗಬೇಕಾಗಿಯೂ ಇಲ್ಲ. ಪಾಲಕರಾಗಿ ನಿಮ್ಮನ್ನು ನೀವು ಯಾವ ಅತಿಯಾದ ಅಂಚಿಗೂ ಹೋಲಿಸಿಕೊಳ್ಳುವುದು ಬೇಕಾಗಿಲ್ಲ. ನೀವು ಸರಿಯಾಗಿದ್ದೀರಿ ಮತ್ತು ಆ ಸಂದರ್ಭಕ್ಕೆ ನೀವು ಮಾಡುತ್ತಿರುವುದು ಸರಿಯಾಗಿದೆ ಎಂದೇ ತಿಳಿಯಿರಿ.

ನಿಮ್ಮ ನಂಬಿಕೆಗಳು ಬದಲಾದರೆ ಅಥವಾ ಸಂದರ್ಭಗಳು ಬದಲಾದರೆ ನೀವು ವರ್ತಿಸುವ ರೀತಿಯೂ ಬದಲಾಗಬಹುದು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ನೀವು ಉತ್ತಮವಾದುದ್ದನ್ನೇ ಮಾಡುತ್ತಿರುವಿರಿ. ಅದು ಸ್ವಾರ್ಥವೇ ಅಥವಾ ನಿಸ್ವಾರ್ಥವೇ ಎಂಬ ಯೋಚನೆಯೇ ಅಸಂಗತವಾದದ್ದು. ನಿಮ್ಮ ಮೇಲೆ ನಂಬಿಕೆ ಇಡಿ. ಕೊನೆಗೆ ನಿಜವಾಗಿಯೂ ಮುಖ್ಯವಾಗುವುದು ನಿಮ್ಮ ಪ್ರಯಾಣವನ್ನು ನೀವೆಷ್ಟು ಆನಂದಿಸಿದ್ದೀರಿ ಎಂಬುದೇ ಅಲ್ಲವೇ?

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org