ನನ್ನ ದೇಹ ನನ್ನದು – ಈ ವಿಶ್ವಾಸದೊಂದಿಗೆ ಮಕ್ಕಳನ್ನು ಬೆಳೆಸುವುದು ಹೇಗೆ

ನನ್ನ ದೇಹ ನನ್ನದು – ಈ ವಿಶ್ವಾಸದೊಂದಿಗೆ ಮಕ್ಕಳನ್ನು ಬೆಳೆಸುವುದು ಹೇಗೆ

ನನ್ನ ದೇಹ ನನ್ನದು – ಈ ವಿಶ್ವಾಸದೊಂದಿಗೆ ಮಕ್ಕಳನ್ನು ಬೆಳೆಸುವುದು ಹೇಗೆ ? ನಮ್ಮ ದೇಹವನ್ನು ಕುರಿತು ಸಕಾರಾತ್ಮಕ ಭಾವನೆ ತಳೆಯುವುದು! ಹೀಗೆಂದರೇನು?

ದೇಹದ ಆಕಾರ ಮತ್ತು ಗಾತ್ರವನ್ನು ಕುರಿತು- ನಮ್ಮ ದೇಹ ಹೀಗೆಯೇ ಇದೆ ಎಂದು ಒಪ್ಪಿಕೊಳ್ಳುವುದು. ದೇಹ ಹೇಗೇ ಇರಲಿ - ನಮ್ಮ ದೇಹದ ಬಗ್ಗೆ ಹಿತವಾದ ಭಾವನೆ ಇಟ್ಟುಕೊಳ್ಳುವುದು. ನಿಮ್ಮ ಸ್ವ ಸಾಮಥ್ರ್ಯ ಅಥವಾ ನಿಮ್ಮ ಯೋಗ್ಯತೆಗೂ ನೀವು ಹೇಗೆ ಕಾಣುತ್ತೀರಿ ಎನ್ನುವುದಕ್ಕೂ ಸಂಬಂಧವಿಲ್ಲ ಎಂದು ಅರ್ಥ ಮಾಡಿಕೊಳ್ಳುವುದು.   ನಿಮ್ಮ ದೇಹದ ಒಂದು ಅಂಗದ ಬಗ್ಗೆ ನಿಮ್ಮಲ್ಲಿ ಸ್ವ ಪ್ರಜ್ಞೆ ಇದೆಯೇ (ಉದಾಹರಣೆಗೆ ನನ್ನ ತೊಡೆಗಳು ದಪ್ಪವಾಗಿವೆ) ? ಅಥವಾ ನಿಮ್ಮ ದೇಹ ಹೇಗೆ ಕಾಣುತ್ತದೆ ಎನ್ನುವ ಬಗ್ಗೆ, ಅದನ್ನು ನಿರೂಪಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ, ಹವ್ಯಾಸವಾಗಿ ಬಂದಿರುವ ನಂಬಿಕೆ, ಅಭಿಪ್ರಾಯಗಳು ನಿಮಗಿವೆಯೇ (ಉದಾಹರಣೆಗೆ ದಪ್ಪಗಿರುವವರು ಕೆಟ್ಟವರು ಅಥವಾ ಕಪ್ಪಗಿರುವವರನ್ನು ನಂಬಬಾರದು ಇತ್ಯಾದಿ) ? ಈ ನಂಬಿಕೆ, ಅಭಿಪ್ರಾಯಗಳು ಎಲ್ಲಿಂದ ಹುಟ್ಟಿಕೊಳ್ಳುತ್ತವೆ ಎಂದು ನಿಮಗೆ ತಿಳಿದಿದೆಯೇ ?

ಸಾಮಾನ್ಯವಾಗಿ ನಾವು ನಮ್ಮ ದೇಹದ ಬಗ್ಗೆ ಅಥವಾ ನಾವು ಹೇಗೆ ಕಾಣುತ್ತೇವೆ ಎನ್ನುವುದರ ಬಗ್ಗೆ, ನಮಗೆ ಕೇಳಿಬರುವ ಅಭಿಪ್ರಾಯಗಳನ್ನೇ ಆಧರಿಸಿ ಕೆಲವು ನಂಬಿಕೆಗಳನ್ನು ಬೆಳೆಸಿಕೊಳ್ಳುತ್ತೇವೆ. ಮಕ್ಕಳಾಗಿದ್ದಾಗ ತಂದೆ ತಾಯಿಯರು, ಶಿಕ್ಷಕರು ಅಥವಾ ಹಿರಿಯರ ಮಾತುಗಳು ಈ ನಂಬಿಕೆಗೆ ಪುಷ್ಟಿ ನೀಡುತ್ತವೆ.  ಕೆಲವೊಮ್ಮೆ ನಾವು ಈ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗಬಹುದು.

ಅದರಲ್ಲೂ ನಂಬಿಕೆಗಳು ನಮಗೆ ಅನುಕೂಲಕರವಾಗಿ ಇಲ್ಲದಿದ್ದರೆ ಇದು ಸಾಧ್ಯ. ಕೆಲವೊಮ್ಮೆ  ನಾವು ನಮ್ಮನ್ನು ನೋಡುವ ಬಗೆ ಮತ್ತು ನಾವು ಬೇರೆಯವರನ್ನು ನೋಡುವ ಬಗೆ ಈ ನಂಬಿಕೆಗಳ ಅನುಸಾರ ಇರುತ್ತದೆ. ಇಲ್ಲಿ ನಮ್ಮ ತಾರತಮ್ಯಗಳು ಹೇಗೆ ಇರುತ್ತವೆ ಎಂಬ ಪರಿವೆಯೇ ನಮಗೆ ಇರುವುದಿಲ್ಲ. 

ಮಕ್ಕಳ ಮೇಲೆ ಪ್ರಭಾವ ಬೀರುವ ಅಭಿಪ್ರಾಯಗಳು

"ನಿನ್ನ ದಪ್ಪ ಹೊಟ್ಟೆಯನ್ನು ನೋಡಿಕೋ!"

"ಅವನು ಎಷ್ಟು ಕಪ್ಪಗಿದ್ದಾನೆ, ಅಲ್ವಾ?"

"ಎಷ್ಟು ಸುಂದರವಾಗಿದ್ದಾಳೆ ಆ ಹುಡುಗಿ!"

"ನೀನು ಜಿಮ್ ವ್ಯಾಯಾಮಕ್ಕೆ ಹೋಗುವುದು ಒಳ್ಳೆಯದು."

"ಕೇಕ್ ಕೊಡಬೇಡ, ನಾನು ತೂಕ ಕಳೆದುಕೊಳ್ಳುತ್ತಿದ್ದೇನೆ!"

ಮಕ್ಕಳ ದೇಹದ ಚಿತ್ರಣದ ಮೇಲೆ ಪ್ರಭಾವ ಬೀರುವುದೇನು?

ಮೂರು ಅಥವಾ ನಾಲ್ಕು  ವರ್ಷದ ಮಕ್ಕಳು ಸಾಮಾನ್ಯವಾಗಿ ತಾವು ಸುತ್ತಲೂ ನೋಡಿದ ಅಥವಾ ಕೇಳಿಸಿಕೊಂಡ ವಿಷಯಗಳಿಂದ ಪ್ರಭಾವಕ್ಕೊಳಗಾಗುತ್ತಾರೆ. ಮಕ್ಕಳ ಮೇಲೆ ಗಾಢವಾದ ಪ್ರಭಾವ ಬೀರುವಂತಹ ಕೆಲವು ಕೆಲಸಗಳನ್ನು ಸಾಮಾನ್ಯವಾಗಿ ಪೋಷಕರು, ಹಿರಿಯರು ಮಾಡುತ್ತಾರೆ.

ನಿಮ್ಮ ಬಗ್ಗೆ ನೀವು ಏನು ಹೇಳುತ್ತೀರಿ?

ತಮ್ಮ ಸುತ್ತ ಇರುವ ತಂದೆ ತಾಯಿಯರು ಮತ್ತು ಮನೆಯಲ್ಲಿನ ಹಿರಿಯರು ಹೇಗೆ ವರ್ತಿಸುತ್ತಾರೆ ಎಂದು ಗಮನಿಸುತ್ತಲೇ ಮಕ್ಕಳು ಅವರನ್ನು ಅನುಕರಿಸುತ್ತವೆ.  ನಿಮ್ಮ ಬಗ್ಗೆ ಮತ್ತು ನಿಮ್ಮ ದೇಹದ ಬಗ್ಗೆ ನೀವು ಏನು ಹೇಳುತ್ತೀರಿ ಎನ್ನುವುದರ ಬಗ್ಗೆ ಗಮನವಿಡಿ. ನೀವು ದಪ್ಪಗಿರುವುದಾಗಿ ಅಥವಾ ಕಪ್ಪಗಿರುವುದಾಗಿ ಹೇಳಿಕೊಳ್ಳುವಿರೋ ಅಥವಾ ನಿಮ್ಮ ಭಾರವಾದ ತೋಳುಗಳ ಬಗ್ಗೆ ಹೇಳುವಿರೋ ಅಥವಾ ಕೆಲವು ಉಡುಪುಗಳನ್ನು ಧರಿಸಿದರೆ ಹೇಗೆ ಕಾಣುವಿರಿ ಎಂದು ಗಮನಿಸಿ ಅಂತಹ ಉಡುಪು ಧರಿಸಬಾರದು ಎಂದು ಹೇಳುವಿರೋ?

ಈ ರೀತಿಯ ಅಭಿಪ್ರಾಯಗಳು, ಟೀಕೆಗಳು ಮಕ್ಕಳಲ್ಲಿ, ತಮ್ಮ ದೇಹದಲ್ಲೂ ಏನಾದರೂ ಸಮಸ್ಯೆ ಇದೆಯೇ ಎಂಬ ಭಾವನೆಯನ್ನು ಮೂಡಿಸುತ್ತದೆ. 

ನೀವು ಬೇರೆಯವರ ಬಗ್ಗೆ ಏನು ಹೇಳುತ್ತೀರಿ?

ಸಾಮಾನ್ಯವಾಗಿ ನಾವು ಮತ್ತೊಬ್ಬರನ್ನು ಕುರಿತು ಮಾತನಾಡುವಾಗ, ಅದರ ಅರ್ಥ ತಿಳಿದುಕೊಳ್ಳದೆಯೇ ಕೆಲವು ವಿಶೇಷಣಗಳನ್ನು ಬಳಸುತ್ತೇವೆ :

ಆ ಹುಡುಗಿ ತೆಳ್ಳಗಿದ್ದಾಳೆ, ಅವನಿಗೆ ಹೊಟ್ಟೆ ದಪ್ಪಗಿದೆ, ಆ ಹೆಂಗಸಿಗೆ ಮೂಗು ದೊಡ್ಡದಾಗಿದೆ, ಆ ಮಗು ಚೆಂದ ಇದೆ... ಹೀಗೆ.

ಈ ಮಾತುಗಳನ್ನು ಕೇಳಿಸಿಕೊಳ್ಳುವ ಮಗು, ದೇಹದಲ್ಲಿ ಕಾಣುವ ಈ ಅಂಶಗಳೇ ವ್ಯಕ್ತಿಯನ್ನು ಗುರುತಿಸಲು ನೆರವಾಗುವ ಅಂಶಗಳು ಎಂದು ಅರ್ಥಮಾಡಿಕೊಳ್ಳುತ್ತದೆ.

ನೀವು ಬಳಸುವ ಪದಗಳ ಪ್ರಭಾವ

ಅನೇಕ ಕುಟುಂಬಗಳಲ್ಲಿ ದಪ್ಪ ಮತ್ತು ಕಪ್ಪು ಎನ್ನುವ ಪದಗಳು, ಕೆಟ್ಟದು ಎನ್ನುವ ಅರ್ಥ ಬರುವಂತೆ ಬಳಸಲಾಗುತ್ತದೆ. ( "ಛೆ, ಅವಳು ಎಷ್ಟು ಕಪ್ಪಗಿದ್ದಾಳೆ!" ಎನ್ನುವುದು).

ತೆಳ್ಳಗಿದ್ದಾರೆ, ಸುಂದರವಾಗಿದ್ದಾರೆ ಎನ್ನುವ ಬದಗಳು ಸ್ವೀಕರಿಸಬಹುದಾದ ಪದಗಳಾಗಿ ಬಳಕೆಯಾಗಿರುತ್ತವೆ. ಈ ಪದಗಳ ಹಿಂದಿರುವ ಕಳಂಕವನ್ನು ತೆಗೆದುಹಾಕಲು ನೀವು ಮಕ್ಕಳ ಬಳಿ ಮಾತನಾಡುವಾಗ, ಈ ಪದಗಳು ಕೇವಲ ಆಕಾರವನ್ನು ಸೂಚಿಸುವುದಕ್ಕೇ ಹೊರತು ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಯಪಡಿಸಿ. 

ನೀವು ಅಹಾರಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಸ್ಪಷ್ಟತೆ ಇಲ್ಲದಿರುವುದು

ನೀವು ದಪ್ಪಗಾಗುವಿರಿ ಎಂಬ ಕಾರಣಕ್ಕೆ ಏನಾದರೂ ತಿನ್ನುವಾಗ ಎರಡನೆ ಬಾರಿ ಉಣಬಡಿಸಿದರೆ ಬೇಡ ಎನ್ನುವಿರಾ ? ನಿಮ್ಮ ದೇಹದ ತೂಕ ಹೆಚ್ಚಾಗಿರುವ ಚಿಂತೆಯಿಂದ ಕೆಲವು ಆಹಾರಗಳ ತಿನ್ನುವುದನ್ನೇ ಬಿಟ್ಟಿರುವಿರಾ ?

ಮಕ್ಕಳ ಎದುರಿನಲ್ಲಿ ದೇಹವನ್ನು ದಪ್ಪ ಮಾಡುವ ಆಹಾರದ ಬಗ್ಗೆ ಮಾತನಾಡಬೇಡಿ. ಹಾಗೆ ಮಾತನಾಡುವುದರಿಂದ ನಾವು ದಪ್ಪಗಾಗಲು ಆಹಾರವೇ ಕಾರಣ ಎಂದು ಮಕ್ಕಳು ಅರ್ಥಮಾಡಿಕೊಳ್ಳುತ್ತವೆ. 

ಬದಲಾಗಿ ನೀವು ಏನು ಮಾಡಬಹುದು:

ಯಾವುದೇ ಷರತ್ತು ಇಲ್ಲದೆ ಒಪ್ಪಿಕೊಳ್ಳುವುದು: ನಿಮ್ಮ ಮಕ್ಕಳ ಬಳಿ ಮಾತನಾಡುವಾಗ ಅವರು ಯಾರು ಮತ್ತು ಅವರನ್ನು ಹೇಗೆ ವಿಭಿನ್ನ ರೀತಿಯಲ್ಲಿ ನೋಡಲಾಗುತ್ತದೆ ಎಂದು ತಿಳಿಯಪಡಿಸಿ, ಅದರಲ್ಲಿ ಅವರು ಕಾಣುವ ರೀತಿಯೂ ಒಂದು ಎನ್ನುವುದನ್ನು ಅರ್ಥಮಾಡಿಸಿ. ಅವರ ದೇಹದ ತೂಕ ಅಥವಾ ಚೆಲುವಿಗಿಂತಲೂ ಹೆಚ್ಚಿನ ಘನತೆ ಅವರಿಗೆ ಇದೆಯೆಂದೂ, ಸೌಂದರ್ಯಕ್ಕೂ ಚರ್ಮದ ಬಣ್ಣಕ್ಕೂ ಸಂಬಂಧ ಇಲ್ಲವೆಂದೂ ಅರ್ಥ ಮಾಡಿಸಿ. 

ಅವರ ಬಗ್ಗೆ ಅಥವಾ ಅವರೊಡನೆ ಮಾತನಾಡುವಾಗ  ಅವರು ಹೇಗೆ ಕಾಣುತ್ತಾರೆ ಎಂದು  ಬಣ್ಣಿಸುವ ಪದಗಳನ್ನು ಬಳಸಬೇಡಿ – ಕುಳ್ಳು, ಲಂಬೂ, ಉದ್ದ, ದಪ್ಪ ಹೀಗೆ.

ಕೆಲವೊಮ್ಮೆ ಪೋಷಕರು ಈ ಪದಗಳನ್ನು ಪ್ರೀತಿಯಿಂದಲೇ ಬಳಸುತ್ತಾರೆ. ಅವರು ಅದೇ ಅರ್ಥದಲ್ಲಿ ಬಳಸಿರುವುದಿಲ್ಲ. ಆದರೆ ಇದು ಮಕ್ಕಳ ಮನಸಿನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಅವರು ಹೇಗೆ ಕಾಣುತ್ತಾರೆ ಎನ್ನುವ ಬಗ್ಗೆ ಯಾರಾದರೂ ಛೇಡಿಸಿದರೆ, ನಾನು ಹೇಗಿದ್ದೇನೋ ಅದನ್ನೇ ಇಷ್ಟಪಡುತ್ತೇನೆ ಎಂದು ಹೇಳುವಂತೆ ಹೇಳಿಕೊಡಿ.

ಅವರು ಹೇಗೆ ಕಾಣುತ್ತಾರೆ ಎನ್ನುವುದನ್ನು ಸೂಚಿಸದ ರೀತಿಯಲ್ಲಿ ಅವರ ಪ್ರಶಂಸೆ ಮಾಡಿ. ನೀವು ಅವರನ್ನು ಪ್ರಶಂಸಿಸಲು ಕಾರಣವೇನು ಎನ್ನುವುದನ್ನು ತಿಳಿಸಿ, ಅವರ ಗುಣ, ಲಕ್ಷಣ, ಪ್ರತಿಭೆ ಮತ್ತು ಅವರು ಮಾಡುವ ಕೆಲಸ ಇತ್ಯಾದಿ.

ಮಕ್ಕಳ ಬಳಿ ಅವರ ದೇಹವನ್ನು ಕುರಿತು ಮತ್ತು ಅಪೇಕ್ಷಿತ ಬದಲಾವಣೆಗಳ ಕುರಿತು ಮಾತನಾಡಿ: ಮಕ್ಕಳು ಹರೆಯಕ್ಕೆ ಬರುತ್ತಿರುವಂತೆಯೇ ಮಕ್ಕಳು ತಮ್ಮ ದೇಹದಲ್ಲಿ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ಅವರ ದೇಹದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಪ್ರಜ್ಞ ಮೂಡಿಸಿಕೊಂಡು ಕೆಲವೊಮ್ಮೆ ಮುಜುಗರ ಪಡಬಹುದು. ದೇಹದಲ್ಲಿ ಮಕ್ಕಳು ಯಾವ ಬದಲಾವಣೆಗಳನ್ನು ನಿರೀಕ್ಷಿಸಬಹುದು ಮತ್ತು ಏಕೆ ಬದಲಾವಣೆ ಉಂಟಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿಕೊಡಿ.

ಮಕ್ಕಳಲ್ಲಿ ಲೈಂಗಿಕ ಲಕ್ಷಣಗಳ ಸೂಚನೆಗಳು ಕಂಡುಬರುವ ಪ್ರೌಢಾವಸ್ಥೆಯ ಸಮಯ ಬೇಗನೆ ಕಾಣಿಸಲಿ, ವಿಳಂಬವಾಗಲಿ ಪೋಷಕರಿಗೆ ಗಲಿಬಿಲಿಯಾಗುತ್ತದೆ. ಆಗ ಬೆಳವಣಿಗೆಯ ವೇಗ ಪ್ರತಿಯೊಂದು ಮಗುವಿನಲ್ಲೂ ಭಿನ್ನವಾಗಿರುತ್ತದೆ ಎಂದು ಅವರಿಗೆ ತಿಳಿಸಿಕೊಡಿ. 

ಮಾತುಕತೆಯ ಸಂವಹನ ಮಾರ್ಗಗಳನ್ನು ಮುಕ್ತವಾಗಿಡಿ: ನಿಮ್ಮ ಮಕ್ಕಳ ಕಾಳಜಿಗಳನ್ನು ಮತ್ತು ಅವರ ಮನಸಿನಲ್ಲಿ ಹುಟ್ಟುವ ಪ್ರಶ್ನೆಗಳನ್ನು ಕೇಳಿಸಿಕೊಂಡು ಪ್ರತಿಕ್ರಿಯೆ ನೀಡಲು ನೀವು ಸಿದ್ಧರಾಗಿದ್ದೀರಿ ಎಂದು ಅವರಿಗೆ ಖಚಿತಪಡಿಸಿ. ಅವರು ನಿಮ್ಮ ಬಳಿ ಮಾತನಾಡಿದಾಗ ತಕ್ಷಣವೇ ಪ್ರತಿಕ್ರಿಯೆ ನೀಡದೆ ಅಥವಾ ಸಮಸ್ಯೆಗೆ ಪರಿಹಾರ ಸೂಚಿಸದೆ, ತಾಳ್ಮೆಯಿಂದ ಕೇಳಿಸಿಕೊಳ್ಳಿ.

ಅವರ ಮನಸಿನಲ್ಲಿರುವುದನ್ನು ಹೇಳಿಕೊಳ್ಳಲು ಅವಕಾಶ ಕೊಡಿ. ಅವರ ಕಾಳಜಿಯನ್ನು ಎಲ್ಲರ ಕಾಳಜಿ ಎನ್ನುವಂತೆ ತಿಳಿಯಪಡಿಸಿ ("ನನಗೂ ಸಹ ನನ್ನ ಹರೆಯದ ವಯಸ್ಸಿನಲ್ಲಿ ಮೊಡವೆಗಳಾಗಿದ್ದವು. ಇತರರು ಏನು ಹೇಳುತ್ತಾರೋ ಎಂದು ಆತಂಕವಾಗುತ್ತಿತ್ತು..." ಹೀಗೆ).

ಅವರನ್ನು ಕಾಡುತ್ತಿರುವ ಚಿಂತೆ ಯಾವುದು ಎಂದು ತಿಳಿದುಕೊಳ್ಳಿ. ದೈಹಿಕ ಆರೋಗ್ಯ ಮುಖ್ಯ ಗಾತ್ರವಲ್ಲ ಎಂದು ಒತ್ತಿಹೇಳಿ : ಎಲ್ಲ ಮನುಷ್ಯರೂ ವಿಭಿನ್ನವಾದ ದೇಹ ವಿನ್ಯಾಸ ಹೊಂದಿರುತ್ತಾರೆ, ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ, ಮನುಷ್ಯನ ದೇಹ ಹೀಗೆಯೇ ಇರಬೇಕು ಎಂಬ ನಿಯಮವೇನಿಲ್ಲ ಎನ್ನುವುದನ್ನು ನಿಮ್ಮ ಮಗುವಿಗೆ ಅರ್ಥಮಾಡಿಸಿ. ಅವರ ದೇಹವನ್ನು ನೋಡಿಕೊಳ್ಳುವಾಗ ದೇಹದ ಆರೋಗ್ಯ ಮತ್ತು ಸ್ಥಿರತೆಯ ದೃಷ್ಟಿಯಿಂದ ನೋಡಲು ಹೇಳಿ.

ಅವರದೇ ವಯಸ್ಸಿನ ಇತರ ಮಕ್ಕಳು ಮಾಡಲಾಗದ ಕೆಲಸಗಳನ್ನು ಇವರು ಮಾಡಲು ಸಾಧ್ಯವೇ ? ದೈಹಿಕವಾಗಿ ಚಟುವಟಿಕೆಯಿಂದ ಇದ್ದಾರೆಯೇ ? ಚೆನ್ನಾಗಿ ನಿದ್ರೆ ಮಾಡುತ್ತಿದ್ದಾರೆಯೇ ? ದಿನಪೂರ್ತಿ ತೊಂದರೆ ಇಲ್ಲದೆ ಕೆಲಸ ನಿರ್ವಹಿಸುವ ಶಕ್ತಿ ಅವರಲ್ಲಿದೆಯೇ ? ದೇಹದ ತೂಕಕ್ಕಿಂತಲೂ ಈ ಅಂಶಗಳ ಬಗ್ಗೆ ಹೆಚ್ಚು ಯೋಚಿಸಲು ಹೇಳಿ.

ನೀವು ಮಕ್ಕಳ ಬಳಿ ಅವರ ದೇಹ ತೂಕದ ಬಗ್ಗೆ ಮಾತನಾಡಬೇಕಾದರೆ ಪ್ರಾಮಾಣಿಕತೆಯಿಂದ ಇದ್ದುದನ್ನು ಇದ್ದ ಹಾಗೆಯೇ ಹೇಳಿ; “ ನಿನ್ನ ತೂಕ ಹೆಚ್ಚಾಗಿರುವುದರಿಂದ  ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ, ನಿನ್ನ ಮೂಳೆಗಳು ದುರ್ಬಲವಾಗುತ್ತವೆ, ಜ್ವರ ಅಥವಾ ಶೀತದಂತೆ ನಿನ್ನ ದೇಹದ ಮೇಲೆ ಪರಿಣಾಮ ಬೀರುತ್ತದೆ ” ಎಂದು ಹೇಳಿ.

ಆಹಾರ ಸೇವಿಸುವಾಗ ಆರೋಗ್ಯಕರ ಆಹಾರದ ಬಗ್ಗೆ ಗಮನವಿಡಿ: ಹಸಿವಾದಾಗ ತಿನ್ನುವ ಬಯಕೆ ಉಂಟಾಗುತ್ತದೆ, ಈ ಸಂದರ್ಭದಲ್ಲಿ ದೇಹದ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ಬೇಕಾದಷ್ಟು ಆಹಾರ ಸೇವಿಸುವಂತೆ ಮಕ್ಕಳಿಗೆ ಹೇಳಿಕೊಡಿ. ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ, ನಿಮ್ಮ ಮಕ್ಕಳು ಯಾವಾಗ , ಹೇಗೆ ಮತ್ತು ಎಷ್ಟು ಜಂಕ್ ಫುಡ್ ತಿನ್ನಬಹುದು ಎಂದು ಮಾರ್ಗದರ್ಶನ ನೀಡಬಹುದು.

ನಿಮ್ಮ ಬಗ್ಗೆ ಕಾಳಜಿ ಹೊಂದಿರಿ: ಮಕ್ಕಳನ್ನು ಸಾಕಿ ಸಲಹುವುದು ಸುಲಭ ಕೆಲಸವಲ್ಲ. ನಮ್ಮಲ್ಲಿ ಅನೇಕರು ಅವರ ದೇಹದ ಬಗ್ಗೆ ತಮ್ಮದೇ ಆದ ತಾರತಮ್ಯಗಳನ್ನು, ನಂಬಿಕೆಗಳನ್ನು ಹೊಂದಿರುತ್ತಾರೆ. ಅದನ್ನು ಬದಲಾಯಿಸುವುದೂ ಸುಲಭವಲ್ಲ. ಕೆಲವು ತಿಂಗಳುಗಳೂ ಸಾಲುವುದಿಲ್ಲ. ಹಾಗಾಗಿ ನಿಮಗೆ ಯಾವುದೇ ವಿಷಯದಲ್ಲಿ ಅಸಮಧಾನವಿದ್ದರೆ ನಿಮ್ಮ ಬಗ್ಗೆ ನೀವು ಕಾಳಜಿ ಹೊಂದುವ ಮೂಲಕ ನಿಮ್ಮ ಕೈಲಾದಮಟ್ಟಿಗೆ ಉತ್ತಮ ರೀತಿಯಲ್ಲಿ ದೇಹ ಕಾಪಾಡಿಕೊಳ್ಳಲು ಪ್ರಯತ್ನಿಸಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org