ಮಕ್ಕಳ ಪಾಲನೆ ಮತ್ತು ಮಾನಸಿಕ ಆರೋಗ್ಯ ಒಂದಕ್ಕೊಂದು ಹೇಗೆ ಸಂಬಂಧಿಸಿವೆ?

1997 ರಲ್ಲಿ ನಾನು ಪಾಲಕಳಾಗುವುದರೊಂದಿಗೆ ಮಾನಸಿಕ ಆರೋಗ್ಯದ ಜೊತೆಗಿನ ನನ್ನ ಪಯಣವು ಆರಂಭವಾಯಿತು. ಆ ಸಮಯದಲ್ಲಿ ನಾನು ನನ್ನ ಪೂರ್ಣಾವಧಿಯ ಉತ್ತಮ ಉದ್ಯೋಗವನ್ನು ತೊರೆದು ಪೂರ್ಣ ಪ್ರಮಾಣದ ಪಾಲಕಳಾಗಲು ನಿರ್ಧರಿಸಿದ್ದೆ.

ಒಟ್ಟಾರೆ ಜೀವನ ಮತ್ತು ಮುಖ್ಯವಾಗಿ ನನ್ನ ಜೀವನ, ಅದರಂತೆ, ನನ್ನ ಸಂಬಂಧಗಳು, ನಂಬಿಕೆ ಮತ್ತು ಮೌಲ್ಯಗಳು, ಬೇರೆಯವರು ಮಕ್ಕಳನ್ನು ಹೇಗೆ ಪೋಷಿಸುತ್ತಿದ್ದಾರೆ ಮತ್ತು ನಾನೇನು ಮಾಡುತ್ತಿದ್ದೇನೆ? ಸರಿ-ತಪ್ಪುಗಳು, ನಾನು ಅಂದುಕೊಂಡಂತೆ ಪರಿಪೂರ್ಣ ತಾಯಿಯಾಗುತ್ತಿದ್ದೇನೆಯೆ? - ಹೀಗೆ ತಾಯಿಯಾಗುವುದರೊಂದಿಗೆ ಹಲವು ವಿಷಯಗಳೆಡೆಗಿನ ನನ್ನ ದೃಷ್ಟಿಕೋನವೇ ಬದಲಾಯಿತು.

ಈ ನಡುವೆ ಒಬ್ಬ ಯುವ ತಾಯಿಯಾದ ನನಗೆ ಸಮಯವೇ ನಿಂತುಹೋದಂತೆ ಭಾಸವಾಗುತ್ತಿತ್ತು. ನನ್ನ ಜೀವನದಲ್ಲಿ ಏನೇನೂ ಬದಲಾಗುತ್ತಿಲ್ಲವೆಂದು ತೀವ್ರವಾಗಿ ಅನಿಸುತ್ತಿತ್ತು. ಬಹಳ ವೇಗವಾಗಿ ಸಂತೋಷದಿಂದ ಕಳೆದುಹೋಗುತ್ತಿದ್ದ ಸಮಯದ ಜ್ಞಾಪನೆಯೆಂಬಂತೆ ಮಗುವು ಹಂತಹಂತವಾಗಿ ಬೆಳೆಯುತ್ತಿತ್ತು. ನೋಡನೋಡುತ್ತಿದ್ದಂತೆ ಮಗಳು ಹದಿಹರೆಯಕ್ಕೆ ಬಂದಳು. ಕೆಲವೇ ದಿನಗಳಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗುವಳು. ಮಕ್ಕಳು ಬಹು ಬೇಗ ಬೆಳೆದು ಬಿಡುತ್ತಾರೆ ಮತ್ತು ಅವರ ಬೆಳವಣಿಗೆಯಲ್ಲಿ ಅದ್ಭುತ ಮತ್ತು ಅನನ್ಯ ರೀತಿಯಲ್ಲಿ ನಮ್ಮ ಬೆಳವಣಿಗೆಯು ಅಡಕವಾಗಿರುತ್ತದೆ.

ಮಕ್ಕಳನ್ನು ಪೋಷಿಸುವುದು ಎಂದರೆ – ಸವಾಲುಗಳು, ಗೊಂದಲ, ಹತಾಶೆ, ಆತಂಕ, ಸಂತೋಷ, ನೋವು ಪ್ರೀತಿ, ಕೋಪ, ಮೆಚ್ಚುಗೆಯಿಲ್ಲದ ಕೆಲಸ, ಕೊನೆಯಿಲ್ಲದ ಇರುವಿಕೆ ಮತ್ತು ಬೇಷರತ್ ಪ್ರೀತಿ. ನಾವೆಲ್ಲರೂ ಪೋಷಕತ್ವದ ಜವಾಬ್ದಾರಿ ಮತ್ತು ಅದು ನಿಡುವ ಖುಷಿಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಕೇವಲ ನಮ್ಮ ಮಕ್ಕಳ ಮಾನಸಿಕ ಆರೋಗ್ಯದ ಮೇಲಲ್ಲದೇ, ನಮ್ಮ ಮೇಲೆಯೂ ಪರಿಣಾಮ ಬೀರುತ್ತದೆ.

2007 ರಲ್ಲಿ ನಾನು ಬಾಹ್ಯವಾಗಿ, ಒಬ್ಬ ಆಪ್ತ ಸಮಾಲೋಚಕಿಯಾಗುವ ಪ್ರಯತ್ನದ ಮೂಲಕ ಮತ್ತು ಆಂತರಿಕವಾಗಿ ನನ್ನ ಜೀವನಕ್ಕೆ ಹೊಸ ಅರ್ಥ ಕಂಡುಕೊಳ್ಳುವ ಮೂಲಕ, ಪಾಲಕಳಾಗಿ ಒಂದು ಹೊಸ ಮಜಲನ್ನು ಆರಂಭಿಸಿದೆ. ಅಂದಿನಿಂದ ನಾನು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. 5 ವರ್ಷಗಳ ಕಾಲ ಶಾಲೆಯೊಂದರಲ್ಲಿ ಆಪ್ತ ಸಮಾಲೋಚಕಿಯಾಗಿ ಕಾರ್ಯನಿರ್ವಹಿಸಿದ್ದೇನೆ.

ಅಲ್ಲದೇ ಹದಿಹರೆಯದವರು, ದಂಪತಿಗಳು ಮತ್ತು ಕುಟುಂಬಸ್ಥರಿಗೆ ಜೀವನದ ಹೊಸ ಅರ್ಥವನ್ನು ಕಂಡುಕೊಳ್ಳಲು ನೆರವಾಗಿದ್ದೇನೆ. ರಾಷ್ಟ್ರೀಯ ದೈನಿಕವೊಂದರಲ್ಲಿ, ಹದಿಹರೆಯದವರು ಮತ್ತು ಯುವ ಜನರಿಗಾಗಿ ಪರೀಕ್ಷೆ, ಒತ್ತಡ, ಗುರಿ ಸಾಧನೆ - ಹೀಗೆ ಹಲವು ವಿಷಯಗಳ ಬಗ್ಗೆ ಅಂಕಣವನ್ನು ಬರೆಯುತ್ತಿದ್ದೇನೆ. ನನ್ನಲ್ಲಿಗೆ ಬರುವ ಹಲವರು ಪೋಷಕತ್ವದ ಜವಾಬ್ದಾರಿಯನ್ನು ನಿಭಾಯಿಸಲು ಹೆಣಗುತ್ತಿರುವವರಾಗಿದ್ದಾರೆ.

ನಿಷ್ಕ್ರಿಯ ಪಾಲಕರಿಂದ ಬೇಸರಗೊಂಡ ಹರೆಯದ ಮಕ್ಕಳು ಕೂಡಾ ಬರುತ್ತಾರೆ. ನಾನು ಪಾಲಕರು ಮತ್ತು ಶಿಕ್ಷಕರಿಗಾಗಿ ಕಾರ್ಯಾಗಾರವನ್ನು ನಡೆಸುತ್ತೇನೆ ಮತ್ತು ಇದರ ಮೂಲಕ ಅವರಿಗೆ ತಮ್ಮ ಮಾನಸಿಕ ಆರೋಗ್ಯದ ಜೊತೆಜೊತೆಗೆ ತಮ್ಮ ನಿಗಾದಲ್ಲಿರುವ ಮಕ್ಕಳ ಮಾನಸಿಕ ಆರೋಗ್ಯದ ಕಾಳಜಿಯ ಬಗೆಗೂ ತಿಳಿಸಿಕೊಡುತ್ತೇನೆ.

ಇತ್ತೀಚೆಗೆ ನನ್ನನ್ನು ಭೇಟಿ ಮಾಡಿದ ವ್ಯಕ್ತಿಯೊಬ್ಬರಿಂದ ಮಕ್ಕಳ ಮಾನಸಿಕ ಆರೋಗ್ಯ ಮತ್ತು ನಾವು ಮಕ್ಕಳನ್ನು ಪಾಲಿಸುವ ವಿಧಾನಗಳಿಗಿರುವ ಕೊಂಡಿಯನ್ನು ಮತ್ತೊಮ್ಮೆ ಗಮನಿಸಲು ಸಾಧ್ಯವಾಯಿತು. ನನ್ನ ಭೇಟಿಗೆ ಬಂದ ಯುವಕ ಕೆಲ ದಿನಗಳ ಮೊದಲು ಆತ್ಮಹತ್ಯೆಗೆ ಪ್ರಯತ್ನಿಸಿದ್ದ.

ಪ್ರಾರಂಭಿಕ ತುರ್ತು ಚಿಕಿತ್ಸೆಯ ನಂತರ ವೈದ್ಯರು ಅವನನ್ನು ನನ್ನಲ್ಲಿಗೆ ಕಳುಹಿಸಿದ್ದರು. ಆ ಯುವಕನಿಗೆ ಮನೆಯವರು ವಿದ್ಯಾಭ್ಯಾಸವನ್ನು ಕೂಡಾ ಪೂರ್ತಿಗೊಳಿಸಲು ಬಿಡಲಿಲ್ಲ. ತಾವು ಭಾವಿಸಿದಂತೆ ಒಳ್ಳೆಯದೆಂಬ ಕಾರಣಕ್ಕಾಗಿ ವಿದೇಶದಲ್ಲಿರುವ ತಮ್ಮ ಸಂಬಂಧಿಯ ಜೊತೆಗೆ ಕೆಲಸ ಮಾಡುವುದು ಸೂಕ್ತ ಎಂದು ಅಂದುಕೊಂಡಿದ್ದರು.

ಆದರೆ, ಆ ಸಂಬಂಧಿಯು ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ವ್ಯವಹಾರದಲ್ಲಿ ತೊಡಗಿರುವುದು ತಿಳಿದ ಮೇಲೆ ಈ ಯುವಕ ಮನೆಗೆ ಹಿಂತಿರುಗಿ ಬಂದುಬಿಟ್ಟ. ಇಷ್ಟಾಗಿಯೂ, ಕೌಟುಂಬಿಕ ಸಂಬಂಧಗಳನ್ನು ಹೆಚ್ಚೆಂದು ತಿಳಿದ ಮನೆಯವರು ಮತ್ತೆ ಆ ಸಂಬಂಧಿಯೊಂದಿಗೆ ಕೆಲಸ ಮಾಡುವಂತೆ ಇವನಿಗೆ ಒತ್ತಡ ಹೇರತೊಡಗಿದರು. ನನ್ನ ಬಳಿ ಬಂದಿದ್ದ ವ್ಯಕ್ತಿ ಮನೆ ಬಿಟ್ಟು ಹೋಗಿ ಹೊಸದಾಗಿ ಉದ್ಯೋಗ ಆರಂಭಿಸಿದ. ಮನೆಯವರ ಸಂಪರ್ಕವನ್ನೇ ಕಡಿದುಕೊಂಡ.

ಆ ಸಮಯದಲ್ಲೇ ನನ್ನ ಬಳಿ ಬಂದಿದ್ದ. ಅವನ ಪಾಲಕರು ಅವರ ನಿರ್ಧಾರಗಳನ್ನು ಪ್ರಶ್ನಿಸುವ ಹಾಗೂ ಇವನ ಅನಿಸಿಕೆಗಳನ್ನು ಹೇಳಿಕೊಳ್ಳು ಸ್ವಾತಂತ್ರ್ಯವನ್ನು ಅವನಿಗೆ ನೀಡಿರಲಿಲ್ಲ. ಈತನ ಕೂಡು ಕುಟುಂಬವು ಇವನಿಂದ ಬಯಸುತ್ತಿರುವುದು ಮತ್ತು ಈತ ತನಗೆ ಸರಿಯೆಂದು ತಿಳಿದಿರುವುದರ ನಡುವಿನ ಘರ್ಷಣೆ ಎಷ್ಟು ತೀವ್ರವಾಯಿತೆಂದರೆ ಅವನು ಇದೆಲ್ಲವನ್ನು ಕೊನೆಗಾಣಿಸಲು ತೀರ್ಮಾನಿಸುವಂತಾಯಿತು.

ಪಾಲಕರು ಇವನ ಕುರಿತು ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸಲು ಅವನಿಗೆ ಅಧಿಕಾರವೇ ಇರಲಿಲ್ಲ. ಅದರಂತೆ ಅವನು ನಡೆಯಲೇಬೇಕಿತ್ತು. ಅವನಿಗೆ ಮನೆ ಕೂಡಾ ಜೈಲಿನಂತೆ ಅನಿಸತೊಡಗಿತ್ತು. ಆ ಬಂಧನದಿಂದ ಆತ ಹೊರಹೋಗಲು ಬಯಸುತ್ತಿದ್ದ. ನಾವು ಬಹಳ ಕಡಿಮೆ ಸಮಯದಲ್ಲಿ ಈ ಸಮಸ್ಯೆಗೆ ಅರ್ಥಪೂರ್ಣ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಯಿತು.

ಅವರ ಆಜ್ಞೆಯನ್ನು ಮೀರುವುದರಲ್ಲಿ ಯಾವ ತಪ್ಪಿಲ್ಲ ಮತ್ತು ಆತನಿರುವ ಮಾನಸಿಕ ಜೈಲಿನಿಂದ ಹೊರಬರುವಂತೆ ಸೂಚಿಸಿ ನಾನು ಅವನಿಗೆ ಸಲಹೆ ನೀಡಿದೆ. ಆತ ಮತ್ತೆ ಬದುಕಲು ಅಣಿಯಾದ… ಆದರೆ ಈ ಬಾರಿ ತನ್ನ ಇಚ್ಛೆಯನುಸಾರ!

ಈ ಅಂಕಣವು ನಮ್ಮ ಮಕ್ಕಳ ಮಾನಸಿಕ ಆರೋಗ್ಯ ಮತ್ತು ನಮ್ಮ ಪಾಲನಾ ವಿಧಾನಗಳಿಗಿರುವ ಸಂಬಂಧವನ್ನು ತಿಳಿಸಿಕೊಡುವ ಒಂದು ಪ್ರಯತ್ನವಾಗಿದೆ. ಅಲ್ಲದೇ ಇದು ನಾವು ಇಂದು ಏನಾಗಿದ್ದೇವೆಯೊ ಅದಕ್ಕೆ ಮತ್ತು ನಮ್ಮ ಮಾನಸಿಕ ಆರೋಗ್ಯಕ್ಕೆ ನಮ್ಮ ಪಾಲಕರ ಕೊಡುಗೆಯನ್ನು ಸಹ ವಿಶ್ಲೇಷಿಸುತ್ತದೆ.

ಕೆಲವೊಮ್ಮೆ ನಾವು ನಮ್ಮ ಮಕ್ಕಳಿಗೆ ಯಾವುದು ಒಳ್ಳೆಯದೋ ಅದನ್ನೇ ಮಾಡಲು ಪ್ರಯತ್ನಿಸಿದರೂ ಸಹ, ಎಲ್ಲಾ ವೇಳೆಯಲ್ಲಿಯೂ ಅವರು ಮಾನಸಿಕವಾಗಿ ಆರೊಗ್ಯಯುತ ಜೀವನ ನಡೆಸಲು ಮತ್ತು ಮಾನಸಿಕವಾಗಿ ಆರೋಗ್ಯವಂತ ವಯಸ್ಕರಾಗಿ ರೂಪುಗೊಳ್ಳಲು ಅವಕಾಶ ಅಥವಾ ಉತ್ತೇಜನ ನೀಡುತ್ತಿಲ್ಲದಿರಬಹುದು. ಆದರೂ ನಾವು ಕೂಡಾ ನಾವು ಉತ್ತಮ ಪಾಲಕರೆಂದು ನಂಬಬೇಕು.

ಸದೃಢ, ಆರೋಗ್ಯವಂತ, ಉತ್ಪಾದಕ ಮತ್ತು ಸಂಪೂರ್ಣ ಸಕ್ರಿಯ ವ್ಯಕ್ತಿಗಳನ್ನಾಗಿ ಮಕ್ಕಳನ್ನು ರೂಪಿಸಬಲ್ಲೆವೆಂಬ ವಿಶ್ವಾಸವಿರಿಸಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಸ್ವಯಮನುಮಾನ, ತಿಳಿದಿರುವುದು ಮತ್ತು ಏನು ಗೊತ್ತಿಲ್ಲದೇ ಇರುವುದು, ಮನಸ್ಸಿಲ್ಲದ ಮನೆವಾರ್ತೆ ಮತ್ತು ಎಲ್ಲವನ್ನೂ ಬಿಟ್ಟು ಸ್ವತಂತ್ರವಾಗುವುದು, ಕಲಿಸುವುದು ಮತ್ತು ಕಲಿಯುವುದು, ಸ್ವೀಕರಿಸುವುದು ಮತ್ತು ಪ್ರಶ್ನಿಸುವುದು, ವರ್ತಮಾನದಲ್ಲಿ ಬದುಕುವುದು ಮತ್ತು ಭವಿಷ್ಯದ ಬಗ್ಗೆ ಚಿಂತಿಸುವುದು (ನಮ್ಮ ಮತ್ತು ಮಕ್ಕಳ)-ಈ ಜೋಡಿಗಳ ನಡುವಿನ ವ್ಯತ್ಯಾಸವನ್ನು ಅರಿಯುವುದರಲ್ಲಿಯೇ ನಮ್ಮ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಕೀಲಿಕೈ ಅಡಗಿದೆ.

ನಾನು ಬರೆಯುತ್ತಿರುವ ಬಹಳ ವಿಷಯಗಳು ಮಗುವಾಗಿ, ಪಾಲಕಳಾಗಿ, ಆಪ್ತ ಸಮಾಲೋಚಕಳಾಗಿ ನನ್ನ ಅನುಭವಗಳನ್ನು (ಸಹಾಯಕ್ಕೆ ಬಂದ ಮತ್ತು ಬರದ) ಒಳಗೊಂಡಿದೆ. ಆದರೆ ಗೌಪ್ಯತೆಯನ್ನು ಕಾಪಾಡುವ ಕಾರಣದಿಂದ ಅವುಗಳನ್ನು ಯಾವಯಾವುದೆಂದು ವಿಂಗಡಿಸಲಾಗುವುದಿಲ್ಲ.

ನಾವು ಜೊತೆಯಾಗಿ ಈ ವಿಷಯವನ್ನು ಪರಿಶೋಧಿಸುತ್ತಿರುವುದರಿಂದ ನಿಮ್ಮ ಪ್ರಶ್ನಗಳಿದ್ದರೆ ಉತ್ತರಿಸಲು ಬಯಸುತ್ತೇನೆ. ಪ್ರತಿ ಲೇಖನದಲ್ಲಿಯೂ ನಿಮ್ಮ ಒಂದೊಂದು ಪ್ರಶ್ನೆಗೆ ಉತ್ತರಿಸಲು ಬಯಸುತ್ತೇನೆ. ಹಾಗಾಗಿ ಕಲಿಯುವ ಮತ್ತು ಹೊಸತನ್ನು ಹುಡುಕುವ ಈ ಪ್ರಯತ್ನದಲ್ಲಿ ನೀವು ಭಾಗಿಯಾಗಿ.

ಮೌಲಿಕಾ ಶರ್ಮಾ ಅವರು ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿದ್ದಾರೆ. ಪ್ರಸ್ತುತ, ಜಾಗತಿಕ ಕಾರ್ಮಿಕ ಕಲ್ಯಾಣ ಕಂಪೆನಿ ‘ವರ್ಕಪ್ಲೇಸ್ ಆಪ್ಷನ್ಸ್’ ಜೊತೆ ಜೆಲಸ ಮಾಡುತ್ತಿರುವ ಇವರು ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಈ-ಮೇಲ್ ಮಾಡಿ. ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುವ ಈ ಅಂಕಣ ಸರಣಿಯಲ್ಲಿ ನೀವು ಕೇಳುವ ಪ್ರಶ್ನೆಗಳನ್ನು ಉತ್ತರಿಸಲಾಗುವುದು.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.