ದೌರ್ಜನ್ಯಕ್ಕೊಳಗಾದ ವಯೋವೃದ್ಧರಿಗೆ ಹೇಗೆ ಸಹಾಯ ಮಾಡಬಹುದು?

ದೌರ್ಜನ್ಯಕ್ಕೊಳಗಾದ ವಯೋವೃದ್ಧರಿಗೆ ಹೇಗೆ ಸಹಾಯ ಮಾಡಬಹುದು?

ಹಲವೊಂದು ವಿಷಯಗಳು ವೃದ್ಧರ ಮೇಲಿನ  ದೌರ್ಜನ್ಯಕ್ಕೆ ಕಾರಣವಾಗುತ್ತವೆ. ಅದೇನೇ ಇರಲಿ. ನಿಮ್ಮ ಪರಿಚಯದ ಯಾರಾದರೂ ಇಂಥ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿದು ಬಂದರೆ ನೀವೇನು ಮಾಡುತ್ತೀರಿ? ಹಾಗೆ ದೌರ್ಜನ್ಯ ಮಾಡುವವರು ಕುಟುಂಬದ ಸದಸ್ಯರೇ ಆಗಿದ್ದರೆ ಅಥವಾ ದೌರ್ಜನ್ಯಕ್ಕೆ ಒಳಗಾಗುತ್ತಿರುವ ವೃದ್ಧರು ಆರ್ಥಿಕವಾಗಿ ಅವರನ್ನು ಅವಲಂಬಿಸಿದ್ದರೆ, ಆಗ ನೀವೇನು ಮಾಡಬಲ್ಲಿರಿ?

ಆ ವೃದ್ಧರಿಗೆ ತಮ್ಮ ಮೇಲೆ ದೌರ್ಜನ್ಯ ಮಾಡುವವರನ್ನು ಸಾರ್ವಜನಿಕವಾಗಿ ಅವಮಾನಿಸಲು ಇಷ್ಟವಾಗದೇ ಹೋಗಬಹುದು; ಅದರಿಂದಾಗಿಯೇ ನಿಮ್ಮ ಸಹಾಯವನ್ನು ನಿರಾಕರಿಸಬಹುದು. ಇಂತಹ ಸಂದರ್ಭದಲ್ಲಿ  ಅವರ ಸಹಾಯಕ್ಕಾಗಿ ನೀವು ಅನುಸರಿಸಬೇಕಾದ ಕೆಲವು ಹಂತಗಳು:

  • ಜೀವಹಾನಿಯಾಗುವಂಥ ದೌರ್ಜನ್ಯ ನಡೆದ ಸಂದರ್ಭದಲ್ಲಿ, ವಯೋವೃದ್ಧರ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೇಳಬಹುದು ಅಥವಾ ಅವರನ್ನು ನೋಡಿಕೊಳ್ಳಬಹುದಾದ ಕುಟುಂಬದ ಇತರ ಯಾವುದೇ ಸದಸ್ಯರನ್ನು ಸಂಪರ್ಕಿಸಲು ನೀವು ಸಹಾಯ ಮಾಡಬಹುದು.

  • ವೃದ್ಧರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ವಿಶ್ವಾಸ ಗಳಿಸಿಕೊಳ್ಳಿ. ಕೆಲವು ವಯಸ್ಸಾದವರು ಒಂಟಿತನ ಅನುಭವಿಸುತ್ತ ಇರುತ್ತಾರೆ. ತಮ್ಮ ಭಾವನೆಗಳನ್ನು, ಆತಂಕಗಳನ್ನು ಹಂಚಿಕೊಳ್ಳಲು ವಿಶ್ವಾಸಾರ್ಹ ವ್ಯಕ್ತಿಗಳು ಇರುವುದಿಲ್ಲ. ಇಂಥ ಸಂದರ್ಭದಲ್ಲಿ ನೀವು ಅವರ ಸಹಾಯ ಮಾಡಬಹುದು. ನೀವು ಅವರಿಗೆ ಭಾವನಾತ್ಮಕ ಬೆಂಬಲ ಕೊಡುವುದು ಮಾತ್ರವಲ್ಲ, ಅವರು ತಮಗಾಗಿ ತಾವೇ ದನಿ ಎತ್ತುವಷ್ಟು ಆತ್ಮವಿಶ್ವಾಸವನ್ನು ತುಂಬಿ ಪ್ರೋತ್ಸಾಹಿಸಿ.

  • ಕೆಲವೊಮ್ಮೆ ಮಕ್ಕಳಿಗೆ/ಕುಟುಂಬಸ್ಥರಿಗೆ ತಾವು ವೃದ್ಧರನ್ನು ಹೇಗೆ ನಡೆಸಿಕೊಳ್ತಿದ್ದೇವೆ ಅನ್ನುವ ಎಚ್ಚರವೇ ಇರುವುದಿಲ್ಲ. ಅವರಿಗೆ ಬೇಕಾಗಿರುವುದೇನು? ತಾವು ಅವರೊಡನೆ ಹೇಗೆ ವರ್ತಿಸಬೇಕು ಎನ್ನುವ ಅರಿವೂ ಇರುವುದಿಲ್ಲ. ಆದ್ದರಿಂದ ಅವರೊಡನೆ ಸೂಕ್ಷ್ಮವಾಗಿ ಮಾತನಾಡಿ, ವೃದ್ಧರ ಅಗತ್ಯಗಳ ಹಾಗೂ ಮನಸ್ಥಿತಿಯ ಬಗ್ಗೆ ಅರಿವು ಮೂಡಿಸಲು ಯತ್ನಿಸಿ. ಇದರಿಂದ ಅವರು ವೃದ್ಧರೊಂದಿಗಿನ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲೂಬಹುದು.  

  • ಕೆಲವೊಮ್ಮೆ ಕುಟುಂಬದ ಸದಸ್ಯರ ನಡುವೆ ಸರಿಯಾದ ಮಾತುಕತೆ ಇರುವುದಿಲ್ಲ ಆಗ ಇಂಥ ಸಮಸ್ಯೆಗಳು ಬರುತ್ತವೆ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರೂ ಒಂದಾಗಿ ಆಪ್ತ ಸಲಹೆಗಾರರ ಜೊತೆ ಸಮಾಲೋಚನೆ (ಫ್ಯಾಮಿಲಿ ಥೆರಪಿ) ನಡೆಸುವುದು ಒಳ್ಳೆಯದು. (ಬಹಳ ಬಾರಿ ಮಾನಸಿಕ ದೌರ್ಜನ್ಯಗಳಿಗೆ ಪರಸ್ಪರ ಮಾತುಕತೆಯ ಕೊರತೆಯಿಂದ ಉಂಟಾಗುವ ತಪ್ಪು ತಿಳಿವಳಿಕೆಗಳೇ ಕಾರಣವಾಗಿರುತ್ತವೆ).

  • ಇಂಥದ್ದೇ ದೌರ್ಜನ್ಯ ಎದುರಿಸಿರುವ / ಎದುರಿಸುತ್ತಿರುವ ಇನ್ನಿತರ ವೃದ್ಧರ ಬಳಿ ಮಾತನಾಡಿ ಪರಸ್ಪರ ಸಹಕಾರಕ್ಕಾಗಿ ಒಂದು ಗುಂಪನ್ನು ರಚಿಸಲು ಸಹಾಯ ಮಾಡಿ.

ನಿಮ್ಮ ಗಮನಕ್ಕೆ ಬಂದಂತೆ ಯಾರಾದರೂ ವೃದ್ಧರು ದೌರ್ಜನ್ಯ ಎದುರಿಸುತ್ತಿದ್ದಲ್ಲಿ, ನೈಟಿಂಗೇಲ್ ಮೆಡಿಕಲ್ ಟ್ರಸ್ಟ್’ನ ವೃದ್ಧರ ಸಹಾಯ ವಾಣಿ ಸಂಖ್ಯೆ 1090ಕ್ಕೆ; ಅಥವಾ ಹೆಲ್ಪೇಜ್ ಹೆಲ್ಪ್ ಲೈನ್ ಸಂಖ್ಯೆ 1800 – 180 – 1253 ಕ್ಕೆ ಕರೆ ಮಾಡಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org