ವೃದ್ಧಾಪ್ಯಕ್ಕೂ ನಿದ್ರಾಹೀನತೆಗೂ ಏನು ಸಂಬಂಧ?
ವಯಸ್ಸಾಗುತ್ತಾ ಹೋದಂತೆ ನಿದ್ರಾಹೀನತೆ ಸಹಜವಾಗಿ ಕಂಡುಬರುತ್ತದೆ. ವಾಸ್ತವದಲ್ಲಿ 60ವರ್ಷ ಮೇಲ್ಪಟ್ಟವರು ಹಲವು ಬಗಯೆಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದು ವೃದ್ಧಾಪ್ಯದಲ್ಲಿ ಕಂಡುಬರುವ ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಅಸಮರ್ಪಕವಾದ ನಿದ್ರೆಯು ಮಾನಸಿಕ ಸ್ವಾಸ್ಥ್ಯ ಹಾಗೂ ಯೋಗಕ್ಷೇಮದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಬೀರುತ್ತದೆ.
ಒಟ್ಟಾರೆಯಾಗಿ ನಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ನಿದ್ರೆಯ ಪಾತ್ರವೇನು ಎಂದು ಅರಿಯುವ ನಿಟ್ಟಿನಲ್ಲಿ, ನಾವು ನಿದ್ರೆ ಮತ್ತು ನಿದ್ರಾಹೀನತೆಯ ಬಗ್ಗೆ ಒಂದಷ್ಟು ಮೂಲಭೂತ ಸಂಗತಿಗಳನ್ನು ನೋಡೋಣ.
ನಿದ್ರೆ ಎಂದರೇನು ?
ನಮ್ಮ ಶರೀರದ ಆಂತರಿಕ ಅವಯವಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ನಾವು ಯಾವ ಪರಿವೆಯೂ ಇಲ್ಲದೆ, ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಇರುವಂಥ ಅವಸ್ಥೆ ಅಥವಾ ಸ್ಥಿತಿಯನ್ನು ನಿದ್ರೆ ಎಂದು ಕರೆಯಬಹುದು. ನಿದ್ರಾವಸ್ಥೆಯಲ್ಲಿ ನಮ್ಮ ದೇಹವು ಪ್ರೋಟೀನನ್ನು ಸಂಶ್ಲೇಷಿಸುತ್ತದೆ. ಎಚ್ಚರವಿದ್ದಾಗ ಉತ್ಪತ್ತಿಯಾಗುವ ಟಾಕ್ಸಿನ್ ಗಳನ್ನು ತೆಗೆದುಹಾಕುತ್ತದೆ. ನ್ಯೂರೋಟ್ರಾನ್ಸ್ಮಿಟರ್ ಗಳನ್ನು ಸಂಶ್ಲೇಷಿಸುತ್ತದೆ ಮತ್ತು ನರವ್ಯೂಹಗಳನ್ನು ದುರಸ್ತಿಪಡಿಸುತ್ತದೆ. ನಾವು ಎಚ್ಚರವಾಗಿರುವ ಸಂದರ್ಭದಲ್ಲಿ ಸರಿಯಾದ ಸ್ಪಂದನೆ ತೋರುವಂತಾಗಲು ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸಲು ಉತ್ತಮ ನಿದ್ರೆಯ ಅವಶ್ಯಕತೆ ಇರುತ್ತದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತನ್ನ ದಿನವನ್ನು ಉತ್ತಮವಾಗಿ ಪ್ರಾರಂಭಿಸುವಂತಾಗಲು, ತನ್ನ ಕೆಲಸಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಗಲು ಸರಾಸರಿ 6ರಿಂದ8 ಗಂಟೆಗಳ ಕಾಲ ನಿದ್ರೆಯ ಅವಶ್ಯಕತೆ ಇರುತ್ತದೆ. ವ್ಯಕ್ತಿಯ ಜೀವನಶೈಲಿ ಹಾಗೂ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಅವನ ಕಾರ್ಯಕ್ಷಮತೆ ಹಾಗೂ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.
ನಿದ್ರಾಹೀನತೆಯು ವೃದ್ಧಾಪ್ಯದಲ್ಲಿ ಏಕೆ ಕಾಣಿಸಿಕೊಳ್ಳುತ್ತದೆ ?
ವಯಸ್ಸಾದಂತೆಲ್ಲ ನಮ್ಮ ದೇಹದಲ್ಲಿನ ಇತರ ಚಟುವಟಿಕೆಗಳಂತೆಯೇ, ನಿದ್ರೆಯ ಗುಣಮಟ್ಟ ಮತ್ತು ಅವಧಿ ಕುಂಠಿತಗೊಳ್ಳುತ್ತದೆ. ವೈಜ್ಞಾನಿಕವಾಗಿ ಅರ್ಥೈಸುವ ದೃಷ್ಟಿಯಿಂದ ನಿದ್ರೆಯನ್ನು ಎರಡು ಬಗೆಯಾಗಿ ವಿಭಜಿಸಲಾಗಿದೆ : ಆರ್ ಇ ಎಮ್ (ರ್ಯಾಪಿಡ್ ಐ ಮೂಮೆಂಟ್) ಮತ್ತು ಎನ್ ಆರ್ ಇ ಎಮ್(ನಾನ್-ರ್ಯಾಪಿಡ್ ಐ ಮೂಮೆಂಟ್) ನಾನ್ ರ್ಯಾಪಿಡ್ ಐ ಮೂಮೆಂಟ್.
ನಿದ್ರೆಯು ನಮ್ಮ ದೇಹದ ಜೀವಕೋಶಗಳ ಬಳಲಿಕೆಯನ್ನು ಸರಿಪಡಿಸಲು ಹಾಗೂ ಕಾಯಕಲ್ಪ ನೀಡಲು ಅಗತ್ಯವಾಗಿ ಬೇಕಾದ ಅವಸ್ಥೆ. ಬೆಳವಣಿಗೆ, ಹಾರ್ಮೋನ್ ಉತ್ಪಾದನೆ ಮೊದಲಾದ ಚಟುವಟಿಕೆಗಳು ಈ ಅವಧಿಯಲ್ಲಿ ನಡೆಯುತ್ತವೆ.
ಎನ್ ಆರ್ ಇ ಎಮ್ - ವಿಶೇಷವಾಗಿ ಪುರುಷರಲ್ಲಿನ ವಯೋಸಹಜವಾದ ಬದಲಾವಣೆಗಳಿಗೆ ಪ್ರಮುಖ ಕಾರಣವಾಗಿರಬಹುದೆಂಬ ಸಂಶಯವಿದೆ. ”60ರ ವಯಸ್ಸಿನಲ್ಲಿ ಪುರುಷರಲ್ಲಿ ಸಹಜವಾಗಿ 15% ಇರಬೇಕಾದ ನಿದ್ರೆಯ ಪ್ರಮಾಣವು 3-4%ಗೆ ಇಳಿದಿರುತ್ತದೆ. ಮಹಿಳೆಯರಲ್ಲಿರುವ ಅಧಿಕ ಪ್ರಮಾಣದ ಈಸ್ಟ್ರೋಜೆನ್ ಪ್ರಮಾಣವು ಬದಲಾವಣೆಗಳನ್ನು ನಿಧಾನಿಸುತ್ತದೆ” ಎಂದು ನಿಮ್ಹಾನ್ಸ್ ನ ನ್ಯೂರೋಫಿಸಿಯಾಲಜಿ ವಿಭಾಗದ ಪ್ರೊಫೆಸರ್ ಆಗಿರುವ ಡಾ.ಬಿಂದು ಕುಟ್ಟಿ ಹೇಳುತ್ತಾರೆ.
ವಯಸ್ಸಾದಂತೆಲ್ಲ ಗಾಢನಿದ್ರೆಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಇದು ನಮ್ಮ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ನಮ್ಮ ಜ್ಞಾಪಕಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಕೆಲವು ಕೆಲಸಗಳನ್ನು ನಮಗೆ ಅರಿವಿಲ್ಲದೆ ಮತ್ತೆಮತ್ತೆ ಮಾಡುವಂತಾಗುತ್ತದೆ. ವಯಸ್ಸು ಹೆಚ್ಚುತ್ತ ಹೋದಂತೆಲ್ಲ ನಿದ್ರೆಯ ಅವಧಿ ಕಡಿತಕೊಳ್ಳುತ್ತದೆ ಮತ್ತು ನಡುನಡುವೆ ಎಚ್ಚರವಾಗುತ್ತಿರುತ್ತದೆ. ವಯಸ್ಸಾದಂತೆ ಹಾರ್ಮೋನುಗಳ ಕಾರ್ಯಕ್ಷಮತೆಯು ವ್ಯತ್ಯಯಗೊಳ್ಳುತ್ತದೆ. ವಿಶೇಷವಾಗಿ ಬೆಳವಣಿಗೆಯ ಹಾರ್ಮೋನ್ ಗಳಾದ - ಮೆಲಾಟೋನಿನ್ ಮತ್ತು ಕಾರ್ಟಿಸೋಲ್ ನಿದ್ರೆಯ ಗುಣಮಟ್ಟವನ್ನು ಕುಗ್ಗಿಸುತ್ತವೆ. 8 ಗಂಟೆಗಳ ನಿದ್ರಾ ಸಮಯದಲ್ಲಿ 2ಗಂಟೆ ಆರ್ ಇ ಎಮ್ ಗಾಗಿ ಮೀಸಲಾಗಿದೆ. ಇದು 70ವರ್ಷದವರೆಗೆ ಹೆಚ್ಚು ಕಂಡುಬರುವುದಿಲ್ಲ. ಆದರೆ, ನಂತರದ ವಯಸ್ಸಿನ ಬಹುಪಾಲು ಜನರು ಆರ್ ಇ ಎಮ್ ಗೊಳಗಾಗುತ್ತಾರೆ.
ನಿದ್ರಾಹೀನತೆಯು ಮಾನಸಿಕ ಸ್ವಾಸ್ಥ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
“ವೃದ್ಧಾಪ್ಯದಲ್ಲಿ 15%ರಷ್ಟು ಜನರು ಇನ್ಸೋಮ್ನಿಯಾದಿಂದ ಬಳಲುತ್ತಿದ್ದಾರೆ” ಎಂದು ಡಾ.ಬಿಂದು ಕುಟ್ಟಿ ಹೇಳುತ್ತಾರೆ. ಇನ್ಸೋಮ್ನಿಯಾವು ನಿದ್ರೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಹೊಂದಿರುತ್ತದೆ ಎಂದು ಅವರು ವಿವರಿಸುತ್ತಾರೆ.
ಒಬ್ಬ ವ್ಯಕ್ತಿ ಗಾಢ ನಿದ್ರೆಗೆ ಜಾರಲು ಬೇಕಾಗುವ ಸರಾಸರಿ ಕಾಲಾವಕಾಶವೆಂದರೆ - 15ನಿಮಿಷಗಳು. ಆದರೆ, ಇನ್ಸೋಮ್ನಿಯಾಕ್ಕೆ ಒಳಗಾದವರಲ್ಲಿ ಈ ಅವಧಿ ಹೆಚ್ಚಿನದಾಗಿರುತ್ತದೆ. ಇದರ ಪರಿಣಾಮವಾಗಿ ಅವರ ಭಾವಲಹರಿಯಲ್ಲಿ ಏರುಪೇರಾಗುತ್ತದೆ ಮತ್ತು ಮನೋಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.
ಇನ್ಸೋಮ್ನಿಯಾಕ್ಕೆ ಒಳಗಾದವರು ತಮ್ಮ ನಿದ್ರಾಹೀನತೆಯ ಬಗ್ಗೆ, ಮತ್ತು ಮುಂದೆ ತಲೆದೋರಬಹುದಾದ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಇನ್ಸೋಮ್ನಿಯಾ ತೀವ್ರವಾದಾಗ ಮಾನಸಿಕ ಖಿನ್ನತೆ, ಭಯ, ಉದ್ವೇಗ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿದ್ರಾಹೀನತೆಯು 24 x 7 ಕಾಲವೂ ಸದಾ ಸಕ್ರಿಯವಾಗಿರುವ ಯುವಕರ ಮೇಲೂ ಪರಿಣಾಮ ಬೀರುತ್ತದೆ. ವ್ಯಕ್ತಪಡಿಸಲಾಗದಂತಹ ಮತ್ತು ನಿರಂತರವಾದ ಮಾನಸಿಕ ಸಮಸ್ಯೆಗಳು ಇಂಥವರಲ್ಲಿ ಸಾಮಾನ್ಯವಾಗಿರುತ್ತದೆ. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 10 ರಿಂದ 30ರಷ್ಟುಮಂದಿ ನಿದ್ರಾಹೀನತೆಯ ಸಮಸ್ಯೆಗೆ ಒಳಗಾಗಿರುತ್ತಾರೆ.
ಇದಕ್ಕೆ ಪರಿಹಾರವೇನು ?
ವಯೋಸಹಜವಾಗಿ ಕಂಡುಬರುವ ನಿದ್ರಾಹೀನತೆಯ ಸಮಸ್ಯೆಯು ಬಹುತೇಕವಾಗಿ ದೈಹಿಕ ಸಮಸ್ಯೆಯಾಗಿರುತ್ತದೆ. ಆದ್ದರಿಂದ ಇಳಿ ವಯಸ್ಸಿನಲ್ಲಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಕೆಲವೊಂದು ಚಟುವಟಿಕೆಗಳ ಅಗತ್ಯವಿದೆ.
ವ್ಯಾಯಾಮ ಮತ್ತು ಯೋಗಾಭ್ಯಾಸ : ವಯಸ್ಸಾಂದಂತೆ, ಕಾರ್ಟಿಸೋಲ್ ಹಾಗೂ ಮೆಲಾಟೋನಿನ್ನಿನಲ್ಲಿ ಕಂಡುಬರುವ ಏರಿಳಿತಗಳನ್ನು ಯೋಗಾಭ್ಯಾಸ, ವ್ಯಾಯಾಮ ಮತ್ತು ಧ್ಯಾನದಿಂದ ನಿಯಂತ್ರಿಸಬಹುದಾಗಿದೆ. ಧ್ಯಾನವು ನಿದ್ರೆಯ ಗುಣಮಟ್ಟವನ್ನು ವೃದ್ಧಿಸುತ್ತದೆ ಮತ್ತು ನೆಮ್ಮದಿಯಾಗಿ ನಿದ್ರಿಸಲು ಸಹಕರಿಸುತ್ತದೆ.
ಆರೋಗ್ಯಕರವಾಗಿ ನಿದ್ರಿಸಿ :
- ಮಾನವ ಜೀವಿಗಳು ರಾತ್ರಿಯ ವೇಳೆಯಲ್ಲಿ ನಿದ್ರಿಸುವವರು. ಆದ್ದರಿಂದ ನಾವು ಹಗಲಿನ ವೇಳೆಯಲ್ಲಿ ನಿದ್ರಿಸದೇ ಸಕ್ರಿಯವಾಗಿರಬೇಕು.
- ಹಗಲು ನಿದ್ರಿಸುವುದನ್ನು ಕಡಿಮೆ ಮಾಡಿ; ಮತ್ತು ರಾತ್ರಿವೇಳೆಯ ನಿದ್ರೆಗೆ ಮಹತ್ವ ಕೊಡಿ. ನೀವು ಮಲಗಲು ಅವಕಾಶವಿರುವುದು ರಾತ್ರಿ ವೇಳೆಯಲ್ಲಿಮಾತ್ರ ಎಂಬ ಸಂದೇಶವನ್ನು ನಿಮ್ಮ ಮೆದುಳಿಗೆ ಕಳುಹಿಸಿ. ನಿದ್ರಿಸುವಾಗ ನಿಮ್ಮೆಲ್ಲಾ ವಿದ್ಯುನ್ಮಾನ ಉಪಕರಣಗಳನ್ನು ದೂರವಿಡಿ. ನಿದ್ರಿಸುವ ಮತ್ತು ಎಚ್ಚರಗೊಳ್ಳುವ ಸಮಯವನ್ನು ಸರಿಯಾಗಿ ನಿರ್ವಹಿಸುವುದರಿಂದ ನಿಮ್ಮೆಲ್ಲಾ ಚಟುವಟಿಕೆಗಳ ನಿರ್ವಹಣೆಯೂ ಸುಗಮವಾಗಿ ಸಾಗುತ್ತದೆ.
- ರಾತ್ರಿಯ ವೇಳೆ ಆಲ್ಕೋಹಾಲ್ ಮತ್ತು ಕೆಫೇನ್ ಸೇವನೆಯನ್ನು ಮಾಡದಿರಿ. ಇದರಿಂದ ಉತ್ತಮ ನಿದ್ರೆಗೆ ಅಡಚಣೆಯಾಗುತ್ತದೆ.
- ದಿನಾಂತ್ಯದಲ್ಲಿ ನೆಮ್ಮದಿಯಾಗಿರುವಂತೆ ನಿಮ್ಮನ್ನುನೀವು ನೋಡಿಕೊಳ್ಳಿ.
ಡಾ. ಬಿಂದು ಕುಟ್ಟಿ, professor at the department of neurophysiology at NIMHANS ಅವರು ನೀಡಿದ ಮಾಹಿತಿಯನ್ನಾಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.