ದೌರ್ಜನ್ಯಕ್ಕೆ ಒಳಗಾದ ವೃದ್ದರು ಹೇಗೆ ಕಾಣಿಸುತ್ತಾರೆ?
ಉಮಾ 60ನೇ ವಯಸ್ಸಿನಲ್ಲಿ ತಮಗೆ ಬೆಂಬಲವಾಗಿದ್ದ ಗಂಡನನ್ನು ಕಳೆದುಕೊಂಡರು. ನಂತರ ಅವರು ತಮ್ಮ ಮಕ್ಕಳನ್ನು ಆಶ್ರಯಿಸಬೇಕಾಗಿ ಬಂತು. ಮೊದಲೆಲ್ಲ ಮಕ್ಕಳು ತಾಯಿಯನ್ನು ಆದರದಿಂದಲೇ ಬರಮಾಡಿಕೊಂಡರು. ಸ್ವಲ್ಪ ಕಾಲ ಕಳೆದ ಮೇಲೆ ಉಮಾ ಅವರಿಗೆ ತಾವು ಮನೆಯಲ್ಲಿ ಏಕಾಂಗಿ ಅನ್ನುವ ಭಾವನೆ ಕಾಡತೊಡಗಿತು. ಸಮಸ್ಯೆಗಳು ಆರಂಭವಾಗಿದ್ದು ಆಗಿನಿಂದಲೇ. ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದ ಉಮಾ ಅವರು ಮಕ್ಕಳ ಮನೆಯಲ್ಲಿ ತಮ್ಮ ಕಾಳಜಿ ತಾವೇ ವಹಿಸಿಕೊಳ್ಳಬೇಕಾಗಿತ್ತು. ಅವರ ಮಕ್ಕಳು ಬೇರೆಯದೇ ಆಹಾರ ಶೈಲಿಗೆ ಒಗ್ಗಿಕೊಂಡಿದ್ದರಿಂದಲೂ ಉಮಾ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಯ್ತು. ತಮ್ಮ ಮಕ್ಕಳಿಂದ ಚಿಕ್ಕ ಸಹಾಯ ಪಡೆಯಲಿಕ್ಕೂ ಉಮಾ ಹಿಂಜರಿಯುತ್ತಿದ್ದರು. ಮಕ್ಕಳು ಕಿರಿಕಿರಿಗೊಂಡಾರೆಂದು ಸಮೀಪದ ಪಾರ್ಕಿಗೆ ಡ್ರಾಪ್ ಕೇಳಲಿಕ್ಕೂ ಹಿಂದೆಮುಂದೆ ನೋಡುತ್ತಿದ್ದರು. ಅವರಿಗೆ ತಮ್ಮ ತಾಯಿಯೊಡನೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಕುಟುಂಬಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲೂ ಅವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ತನ್ನನ್ನು ಅಲಕ್ಷ್ಯ ಮಾಡಲಾಗುತ್ತಿದೆ ಎಂದು ಉಮಾ ಹತಾಶರಾಗತೊಡಗಿದರು. ಒಂಟಿತನವನ್ನು ಅನುಭವಿಸತೊಡಗಿದರು. ಇದರಿಂದ ಹೊರಗೆ ಬರುವುದು ಹೇಗೆಂದು ತಿಳಿಯದಾದರು.
ವಯೋವೃದ್ಧರು ಅನುಭವಿಸುವ ವ್ಯಥೆಗಳೇನು ಅನ್ನುವುದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ಕಥೆಯನ್ನು ನೀಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO)ಯು ವೃದ್ಧರ ಮೇಲಿನ ದೌರ್ಜನ್ಯವನ್ನು - ಒಂದು ಬಾರಿ ಅಥವಾ ಮತ್ತೆ ಮತ್ತೆ ನಡೆಸಲಾಗುವ; ಅಥವಾ ಸೂಕ್ತ ಕ್ರಮದ ಕೊರತೆಯಿರುವ; ನಂಬಿಕೆಯ ನಿರೀಕ್ಷೆ ಇರುವ ಯಾವುದೇ ಸಂಬಂಧಗಳ ನಡುವೆ ಉಂಟಾಗುವ; ವೃದ್ಧರಿಗೆ ನೋವುಂಟು ಮಾಡುವ ಅಥವಾ ಅವರನ್ನು ಯಾತನೆಗೆ ತಳ್ಳುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಿದೆ.
ಹೆಲ್ಪ್’ಏಜ್ ಇಂಡಿಯಾ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ 50%ರಷ್ಟು ವೃದ್ಧರು ದೌರ್ಜನ್ಯವನ್ನು ದಾಖಲಿಸಿದ್ದಾರೆ. ಪರಿಣಿತರು ಹೇಳುವಂತೆ ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಇನ್ನೂ ಹೆಚ್ಚುತ್ತಿದ್ದು, ತುಂಬಾ ಜನರು ಹಿಂಜರಿಕೆಯಿಂದ ದಾಖಲಿಸದೆ ಬಿಟ್ಟಿದ್ದಾರೆ. ನಮ್ಮ ಸಮಾಜದಲ್ಲಿ ಹೆಚ್ಚಾಗಿ ದೌರ್ಜನ್ಯವನ್ನು ದಾಖಲಿಸುವವರ ಮೇಲೆಯೇ ಕಳಂಕ ಹೊರಿಸುವುದು ಈ ಹಿಂಜರಿಕೆಗೆ ಕಾರಣವಾಗಿದೆ.
ವೃದ್ಧರ ಮೇಲಿನ ದೌರ್ಜನ್ಯ ಮೌಖಿಕವೂ ಆಗಿರಬಹುದು, ಭಾವನಾತ್ಮಕವೂ ಆಗಿರಬಹುದು, ಲೈಂಗಿಕವೂ ಆಗಿರಬಹುದು. ಇಂಥಾ ಪ್ರಕರಣಗಳಲ್ಲಿ ದೌರ್ಜನ್ಯ ಎಸಗುವವರು ಬಹುತೇಕ ವೃದ್ಧರ ಆಪ್ತರೇ ಆಗಿರುತ್ತಾರೆ. ಅವರ ವಯಸ್ಕ ಮಕ್ಕಳು ಅಥವಾ ಅವರಿಗೆ ಆಶ್ರಯ ನೀಡಿದವರೇ ಆಗಿರುತ್ತಾರೆ ಎಂದು ವರದಿಯು ಹೇಳುತ್ತದೆ.
ವೃದ್ಧರ ಮೇಲಿನ ದೌರ್ಜನ್ಯ ಅಥವಾ ನಿರ್ಲಕ್ಷ್ಯದ ಲಕ್ಷಣಗಳೇನು?
- ದೈಹಿಕ ಹಿಂಸೆ– ಕಣ್ಣಿಗೆ ಕಾಣುವಂಥ ಬರೆ ಅಥವಾ ಗಾಯಗಳು, ಮೂಳೆ ಮುರಿತ.ಅಥವಾ ಸ್ನಾಯು ಕಡಿತ.
- ಅಪೌಷ್ಠಿಕತೆಯ ಚಿಹ್ನೆಗಳು – ಆಹಾರ ಸರಿಯಾಗಿ ನೀಡದೆ ಇರುವುದು.
- ವೃದ್ಧಾಪ್ಯವನ್ನು ಕೀಳಾಗಿ ನಿಂದಿಸುವುದು – “ಮುದುಕನಿಗೆ ಅರಳುಮರಳು” ಇತ್ಯಾದಿಯಾಗಿ ನಿಂದಿಸುವುದು.
- ವೃದ್ಧರನ್ನು ‘ಹೊರೆ’ ಎಂದೂ ‘ನಿಷ್ಪ್ರಯೋಜಕ’ರೆಂದೂ ಕರೆಯುವುದು.
- ಹಣವನ್ನು ಕೊಡಲು ನಿರಾಕರಿಸುವುದು ಮತ್ತು ಅವರ ಅಗತ್ಯಗಳನ್ನು ಪೂರೈಸದೆ ಇರುವುದು.
- ಕುಟುಂಬದ ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅವರ ಸಲಹೆ ಕೇಳದೆ ಇರುವುದು ಅಥವಾ ಅವರನ್ನು ಹೊರಗಿಡುವುದು
- ವೃದ್ಧರಿಗೆ ಹಿಡಿಸದ ಆಹಾರವನ್ನು ನೀಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನಲು ಕೊಡದೆ ಇರುವುದು
- ಹರಿದ ಬಟ್ಟೆಯಲ್ಲೇ ಇರಬಿಡುವುದು ಮತ್ತು ನಿರ್ಗತಿಕರ ಹಾಗೆ ಕಾಣುವಂತೆ ಇರಿಸುವುದು; ಇದರಿಂದ ಚರ್ಮದ ಸೋಂಕು ತಗಲುವ ಸಾಧ್ಯತೆಗಳೂ ಇರುತ್ತವೆ
ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆಯೇ ದೈಹಿಕ ಸಾಮರ್ಥ್ಯ ಹಾಗೂ ಬುದ್ದಿ ಸಾಮರ್ಥ್ಯಗಳು ಕ್ಷೀಣಿಸುತ್ತಾ ಹೋಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಪಾಲಕರಿಗೆ ವೃದ್ಧರ ಈ ಸಮಸ್ಯೆಗಳ ಅರಿವು ಇರುವುದಿಲ್ಲ. ಈ ಅರಿವಿನ ಕೊರತೆಯಿಂದಾಗಿಯೇ ಅವರು ತಮ್ಮನ್ನು ಆಶ್ರಯಿಸಿದ ವೃದ್ಧರ ಸರಿಯಾದ ಕಾಳಜಿ ವಹಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಈ ನಿರ್ಲಕ್ಷ್ಯವೇ ದೌರ್ಜನ್ಯವಾಗಿ ಬದಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಪಾಲಕರು ಕೂಡಾ ವೃದ್ಧರು ಅನುಭವಿಸುವ ಆತಂಕವನ್ನು ಅನುಭವಿಸುತ್ತ ಇರುತ್ತಾರೆ. ಆಶ್ರಿತರನ್ನು ಎಷ್ಟು ನೋಡಿಕೊಂಡರೂ ಅದನ್ನು ಗುರುತಿಸುವವರಿಲ್ಲ, ಮೆಚ್ಚಿಕೊಳ್ಳುವುದಿಲ್ಲ ಎಂದು ಅವರು ಉದ್ವಿಗ್ನರಾಗಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಪಾಲನೆಯ ಹೊಣೆ ಹೊತ್ತವರು ವೃತ್ತಿಪರ ಆಪ್ತಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.
ವೃದ್ಧರ ಮೇಲಿನ ದೌರ್ಜನ್ಯಕ್ಕೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಆರ್ಥಿಕ ಕಾರಣವೂ ಒಂದು. ದೌರ್ಜನ್ಯ ನಡೆಸುವವರು ತಮ್ಮನ್ನು ಆಶ್ರಯಿಸಿರುವ ವೃದ್ಧರಿಂದ ಅವರ ಆಸ್ತಿಪಾಸ್ತಿ ಅಥವಾ ದುಡಿಮೆಯ ಹಣವನ್ನು ಪಡೆಯಲು ಮೋಸ ಮಾಡುತ್ತಾರೆ. ಇದು ವೃದ್ಧರನ್ನು ಮತ್ತಷ್ಟು ದುರ್ಬಲರನ್ನಾಗಿಸುತ್ತದೆ. ಹಣವೂ ಕೈಬಿಟ್ಟುಹೋದ ಮೇಲೆ ಅವರು ಆಶ್ರಯದಾತರ ಮೇಲೆ ಮತ್ತಷ್ಟು ಅವಲಂಬಿತರಾಗಬೇಕಾಗುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ವೃದ್ಧರನ್ನು ನಿರ್ಗತಿಕರನ್ನಾಗಿ ಬಿಟ್ಟುಬಿಡುವುದೂ ಉಂಟು. ಅದರಲ್ಲೂ ಆಶ್ರಿತ ವೃದ್ಧರು ಆಶ್ರಯದಾತ ಪಾಲಕರನ್ನು ಅವರ ಬಾಲ್ಯದಲ್ಲಿ ಕಷ್ಟಕ್ಕೀಡು ಮಾಡಿದ್ದರೆ, ಕೆಟ್ಟದಾಗಿ ನಡೆಸಿಕೊಂಡಿದ್ದರೆ ದೌರ್ಜನ್ಯದ ಪ್ರಮಾಣ ಇನ್ನೂ ಹೆಚ್ಚಿನದಾಗಿರುತ್ತದೆ. ಇದರಿಂದ ವೃದ್ಧರು ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಆಸರೆಗಳಿಲ್ಲದೆ ಅಕ್ಷರಶಃ ಅನಾಥರಾಗುತ್ತಾರೆ.
ವೃದ್ಧರೇಕೆ ತಮ್ಮ ಮೇಲಿನ ದೌರ್ಜನ್ಯವನ್ನು ದಾಖಲಿಸುವುದಿಲ್ಲ?
ದೌರ್ಜನ್ಯವನ್ನು ಎದುರಿಸುತ್ತಿರುವ ವೃದ್ಧವ್ಯಕ್ತಿಯು ನಿರಾಕರಣೆ, ಅವಮಾನ, ಅಸಹಾಯಕತೆ ಮತ್ತಿತರ ಮಾನಸಿಕ ಕಷ್ಟಗಳನ್ನು ಅನುಭವಿಸುತ್ತಿರಬಹುದು. ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಲೂ ಇರಬಹುದು. ತಮ್ಮ ಅನುಭವವನ್ನು ಹೇಳಿಕೊಳ್ಳುವುದರಿಂದ ತಾವೇ ಕೀಳಾಗುತ್ತೇವೆ ಎಂದು ಅವರು ಭಾವಿಸಲೂಬಹುದು. ತಮಗೆ ತಾವೇ ನಿಷ್ಪ್ರಯೋಜಕರೆಂದು ಭಾವಿಸಿ ಆತ್ಮವಿಶ್ವಾಸದ ಕೊರತೆಯಿಂದ ನರಳುತ್ತಿರಬಹುದು. ಈ ಎಲ್ಲ ಭಾವನೆಗಳೂ ಅವರಲ್ಲಿ ಖಿನ್ನತೆ, ಉದ್ವೇಗ ಅಥವಾ ಆತಂಕಗಳನ್ನು ಸೃಷ್ಟಿಸಬಹುದು.
ದೌರ್ಜನ್ಯಕ್ಕೆ ಒಳಗಾಗುವ ವೃದ್ಧರಲ್ಲಿ ತಪ್ಪಿತಸ್ಥ ಮನೋಭಾವ ಹಾಗೂ ಸತ್ತು ಹೋಗಬೇಕೆನ್ನುವ ಭಾವನೆ ಆವರಿಸುವುದು ಸಾಮಾನ್ಯ. ವೃದ್ಧರ ಮೇಲೆ ನಡೆಯುವ ಯಾವುದೇ ಬಗೆಯ ದೌರ್ಜನ್ಯ ಅವರ ಮನಸಿನ ಮೇಲೆ ತೀವ್ರತರ ಪರಿಣಾಮ ಬೀರಿ ಅಸ್ವಸ್ಥರನ್ನಾಗಿಸುತ್ತದೆ. ಇಂಥ ಸಂದರ್ಭಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಮಾಜ ಸೇವಕರು ಅಥವಾ ವೃತ್ತಿಪರ ಆಪ್ತಸಮಾಲೋಚಕರನ್ನು ಸಂಪರ್ಕಿಸಿ ಸಲಹೆ – ಸಹಕಾರಗಳನ್ನು ಪಡೆಯಬೇಕು.
ನೀವು ಕೂಡ ಇಂಥ ದೌರ್ಜನ್ಯವನ್ನು ಎದುರಿಸುತ್ತಿದ್ದೀರಿ ಎನಿಸಿದಲ್ಲಿ ಅಥವಾ ನಿಮ್ಮ ಪರಿಚಯದ ಯಾರಾದರೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಲ್ಲಿ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್’ನ ಆಪ್ತಸಹಾಯವಾಣಿ ಸಂಖ್ಯೆ 1090ಗೆ ಕರೆ ಮಾಡಿ.
ಆಕರಗಳು:
- https://www.ncbi.nlm.nih.gov/pmc/articles/PMC4961478/
- https://www.sciencedirect.com/science/article/pii/S0140673604171444
ನಿಮ್ಹಾನ್ಸ್’ನ ಡಾ.ಸಂತೋಷ್ ಅವರ ಪೂರಕ ಮಾಹಿತಿಯೊಂದಿಗೆ