ಪ್ರಸವಾ ನಂತರದ ಖಿನ್ನತೆ

ಪ್ರಸವದ ನಂತರ ತಂದೆ ಕೂಡ ಖಿನ್ನತೆಯನ್ನು ಅನುಭವಿಸಬಹುದು.

ಪ್ರಸವಾವಧಿಯ ಸಮಯ:  ಗರ್ಭಧಾರಣೆಯ 22ನೆಯ ವಾರದಿಂದ ಆರಂಭವಾಗಿ ಶಿಶು ಜನನದ 7ನೆಯ ದಿನದವರೆಗಿನ ಅವಧಿಯನ್ನು ಪ್ರಸವಾವಧಿ ಎನ್ನುತ್ತಾರೆ. ಈ ಅವಧಿಯಲ್ಲಿ ತಾಯಿ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು  ಮಾಡಿಕೊಳ್ಳಬೇಕಾಗುತ್ತದೆ.

ಸಹಜವಾದ ಬೇಬಿ ಬ್ಲೂ ಇದು ಸಹಜವಲ್ಲ
ಶಿಶುವಿನ ಜನನದ 2 ರಿಂದ 5 ದಿನಗಳ ಅವಧಿಯಲ್ಲಿ ಕೆಲವು ನೂತನ ತಾಯಂದಿರು ಬೇಬಿ ಬ್ಲೂ ಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ಭಾವನಾತ್ಮಕ ಏರಿಳಿತವು ಸಹಜವಾಗಿದ್ದು, ತಾತ್ಕಾಲಿಕವಾಗಿರುತ್ತದೆ. ಇದು ತಾಯಂದಿರಿಂದ ತಾಯಂದಿರಿಗೆ ವ್ಯತ್ಯಾಸ ವಾಗುತ್ತದೆ. ಬೇಬಿ ಬ್ಲೂ ಉಂಟಾದಾಗ ಹೆಚ್ಚಿನ ತಾಯಂದಿರು 10 ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

ಎರಡು ವಾರಗಳ ನಂತರವೂ ಅಳುವುದು, ಕಿರಿಕಿರಿಯೆನಿಸುವುದು ಮತ್ತು ಉಳಿದ ಭಾವನಾತ್ಮಕ ಸಮಸ್ಯೆಗಳು ಮುಂದುವರೆದರೆ ಇದು ಪ್ರಸವಾವಧಿಯ ಖಿನ್ನತೆಯ ಲಕ್ಷಣವಾಗಿರಬಹುದು. 

ನಿಮ್ಮಲ್ಲಿ ಅಥವಾ ನಿಮ್ಮ ಹೆಂಡತಿ/ ಮಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಜ್ಞರ ಸಹಾಯ ಪಡೆಯಿರಿ.

ಮುಖ್ಯ ಸೂಚನೆ: ಪ್ರಸವಾನಂತರದ ಖಿನ್ನತೆಯು ತಾಯಿ, ತಂದೆ ಮತ್ತು ಮಗುವನ್ನು ಬಾಧಿಸಬಹುದು. ತಾಯಿ ಮಗುವಿನ ಬಾಂಧವ್ಯವು ಹಾಳಾಗಬಹುದು. ಪ್ರಸವದ ನಂತರ ತಂದೆ ಕೂಡ ಖಿನ್ನತೆಯನ್ನು ಅನುಭವಿಸಬಹುದು. ಆದ್ದರಿಂದ ಇದು ಸಂಪೂರ್ಣ ಕುಟುಂಬದ ಯೋಗಕ್ಷೇಮಕ್ಕೆ ಧಕ್ಕೆ ತರುತ್ತದೆ.

ಪ್ರಸವಾನಂತರದ ಖಿನ್ನತೆಗೆ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಈ ಸಮಸ್ಯೆಗೆ ಚಿಕಿತ್ಸೆ ದೊರಕದಿದ್ದರೆ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ ಹೊಸ ತಾಯಂದಿರು ಆರು ತಿಂಗಳನಂತರವೂ ಸಮಸ್ಯೆಯಿಂದ ಬಳಲುತ್ತಾರೆ.

ಪ್ರಸವಾನಂತರದ ಅವಧಿ

ಮಗು ಜನನದಿಂದ ಆರಂಭವಾಗಿ ನಂತರದ 6 ವಾರಗಳ ಅವಧಿಯನ್ನು ಪ್ರಸವಾನಂತರದ ಅವಧಿ ಎನ್ನುತ್ತಾರೆ. ಹೆರಿಗೆಯ ಮೊದನೆಯ ವಾರದ ನಂತರ ಮಾನಸಿಕವಾಗಿ ಮತ್ತು ಹಾರ್ಮೋನಿನ ಅಂಶಗಳು ತಾಯಿಯ ಮನಸ್ಥಿತಿ ಮತ್ತು ಭಾವನೆಗಳನ್ನು ಪ್ರಭಾವಿಸುತ್ತವೆ. ಹೆಚ್ಚಿನ ತಾಯಂದಿರು ಅತ್ಯಂತ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಅಳುವುದು, ಕಿರಿಕಿರಿಗೊಳ್ಳುವುದು, ಆತಂಕ, ಹಸಿವಿನ ತೊಂದರೆ, ತಲೆನೋವು ಮತ್ತು ಮರೆಗುಳಿತನದಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇವು ‘ಪ್ರಸವಾನಂತರದ ಅವಧಿಯಲ್ಲಿ ಕಂಡುಬರುವ ಬೇಬಿ ಬ್ಲೂ’ದ ಲಕ್ಷಣಗಳಾಗಿವೆ.

ಈ ಲಕ್ಷಣಗಳು ಮುಂದುವರೆದು ಗಂಭೀರ ಸ್ವರೂಪವನ್ನು ತಾಳಿದರೆ ಪ್ರಸವಾನಂತರದ ಖಿನ್ನತೆಗೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ಸಾಧ್ಯವಿದೆ. ಮಗುವಿನ ಜನನದ ಮೊದಲ ಆರು ವಾರಗಳಲ್ಲಿ ತಾಯಂದಿರು ಗಂಭೀರ ರೂಪದ ಖಿನ್ನತೆಗೆ ಒಳಗಾಗಬಹುದು. ಚಿಕಿತ್ಸೆ ಒದಗಿಸದಿದ್ದಲ್ಲಿ ಇದು ಆರು ತಿಂಗಳು ಅಥವಾ ಇನ್ನೂ ಹೆಚ್ಚಿನ ಅವಧಿಯವರೆಗೆ ಮುಂದುವರೆಯಬಹುದು ಮತ್ತು ತಾಯಿ, ಮಗು ಸೇರಿದಂತೆ ಸಂಪೂರ್ಣ ಕುಟುಂಬವನ್ನು ಬಾಧಿಸಬಹುದು.

ಪ್ರಸವಾನಂತರದ ಖಿನ್ನತೆಯ ಕೆಲವು ಲಕ್ಷಣಗಳು:

 • ಸುಸ್ತು, ಕಿರಿಕಿರಿ ಮತ್ತು ನಿರಂತರ ಬಳಲಿಕೆ.

 • ಸ್ವಗೌರವದ ಕುಸಿತ ಹಾಗೂ ತಮ್ಮ ಪಾಲನೆಯ ಸಾಮರ್ಥ್ಯದ ಬಗ್ಗೆ ಅನುಮಾನ.

 • ಮಗುವಿನ ಕುರಿತು ನಿರಂತರವಾಗಿ ಯೋಚಿಸುವುದು ಅಥವಾ ಮಗುವಿನ ಆರೈಕೆಯಲ್ಲಿ ಅನಾಸಕ್ತಿ.

 • ಮನೆಯ ಬದಲಾದ ದೈನಂದಿನ ವೇಳಾಪಟ್ಟಿಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು.

 • ಮಗುವಿನ ಅನಿಶ್ಚಿತ ಆಹಾರ ಮತ್ತು ನಿದ್ರೆಯ ಸಮಯದಿಂದಾಗಿ ನಿದ್ರೆಯ ತೊಂದರೆ ಉಂಟಾಗುವುದು

 • ಮಗುವು ಮಲಗಿದಾಗಲೂ ವಿಶ್ರಾಂತಿ ಪಡೆಯಲು ಸಾಧ್ಯವಾಗದಿರುವುದು.

 • ಗರ್ಭಧಾರಣೆ ಅಥವಾ ಹೆರಿಗೆಯ ಮೊದಲು ತೊಡಗಿಕೊಳ್ಳುತ್ತಿದ್ದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದಿರುವುದರ ಬಗ್ಗೆ ಅತಿಯಾದ ಬೇಸರ.

 • ಏಕಾಗ್ರತೆಯ ಕೊರತೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿರುವುದು.

 • ಆತಂಕದ ದೈಹಿಕ ಲಕ್ಷಣಗಳು, ಹೃದಯ ಬಡಿತದಲ್ಲಿ ಏರಿಳಿತ, ನಿರಂತರ ತಲೆನೋವು, ಕೈ ಬೆವರುವುದು.

 • ನಿಯಂತ್ರಣ ಕಳೆದುಕೊಂಡಂತೆ ಅನಿಸುವುದು ಅಥವಾ ಅತಿಯಾದ ಕ್ರಿಯಾಶೀಲತೆ.

 • ಕುಟುಂಬದವರು ಮತ್ತು ಸ್ನೇಹಿತರ ಜೊತೆ ಸಮಯ ಕಳೆಯಲು ಅನಾಸಕ್ತಿ.

 • ಋಣಾತ್ಮಕ ಯೋಚನೆಗಳು ಹಾಗೂ ತಮ್ಮ ಮತ್ತು ಭವಿಷ್ಯದ ಬಗ್ಗೆ ಭರವಸೆ ಇಲ್ಲದಿರುವುದು.

 • ಕೋಪ, ದುಃಖ, ಕಳೆದುಕೊಂಡ ಭಾವ, ಅಳುವುದು ಮುಂತಾದ ಅನುಭವಗಳು.

 • ಹಸಿವಿನಲ್ಲಿ ಬದಲಾವಣೆ.

 • ಕುಟುಂಬದವರು ಮತ್ತು ಸ್ನೇಹಿತರ ಮಾತುಗಳಿಗೆ ಸೂಕ್ಷ್ಮವಾಗಿ ವರ್ತಿಸುವುದು.

 • ತಮಗೆ ಅಥವಾ ಮಗುವಿಗೆ ಹಾನಿಮಾಡಿಕೊಳ್ಳಬೇಕೆಂಬ ಯೋಚನೆ.

 • ತಪ್ಪಿತಸ್ಥ ಮತ್ತು ನಾಚಿಕೆಯ ಭಾವನೆ ಹಾಗೂ ಯಾತನೆಯನ್ನುಂಟು ಮಾಡುವ ಯೋಚನೆಗಳು.

ಪ್ರಸವಾ ನಂತರದ ಖಿನ್ನತೆಗೆ ಚಿಕಿತ್ಸೆ

ಪ್ರಸವಾ ನಂತರದದ ಖಿನ್ನತೆಯ ಚಿಕಿತ್ಸೆಯಲ್ಲಿ ಮಾನಸಿಕ ಮತ್ತು ಔಷಧಿಯ ಚಿಕಿತ್ಸೆಗಳೆರಡೂ ಪರಿಣಾಮಕಾರಿಯೆನಿಸಿವೆ.

ಪ್ರಸವಾ ನಂತರದ ಮನಸ್ಥಿತಿ ಮತ್ತು ಆತಂಕದ ಸಮಸ್ಯೆಗಳಿಗೆ ಸಹಾಯ ಮತ್ತು ಚಿಕಿತ್ಸೆಯನ್ನು ಪಡೆಯುವುದು ಮುಖ್ಯವಾಗಿರುತ್ತದೆ. ಸಿಬಿಟಿ ಮತ್ತು ಇಂಟರ್ ಪರ್ಸನಲ್ ಥೆರಪಿಯಂತಹ ಮನಃಶಾಸ್ತ್ರೀಯ ಚಿಕಿತ್ಸೆಗಳು ಪ್ರಸವಾನಂತರದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮಸ್ಯೆಗೆ ಚಿಕಿತ್ಸೆ ಪಡೆಯದಿದ್ದರೆ ಇಡೀ ಕುಟುಂಬವು ಯಾತನೆಯಲ್ಲಿಯೇ ಕಳೆಯಬೇಕಾಗುತ್ತದೆ.

ಗಮನಿಸಿ: ಗಂಭೀರ ಖಿನ್ನತೆ ಅಥವಾ ಬೈಪೊಲಾರ್ ಡಿಸಾರ್ಡರಿನಿಂದ ಬಳಲುವ ಮಹಿಳೆಯರಿಗೆ ಔಷಧಗಳ ಅವಶ್ಯಕತೆಯಿರುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org