ಮಗುವಿನೊಂದಿಗಿನ ಬಾಂಧವ್ಯ

ಹಲವು ಮಹಿಳೆಯರಿಗೆ ಗರ್ಭಾವಸ್ಥೆ ಹಾಗೂ ಪ್ರಸವಾನಂತರದ ಅವಧಿ ಅವರ ಜೀವನದ ಬಲು ಸಂತೋಷದ ಕ್ಷಣಗಳಾಗಿರುತ್ತವೆ. ಮಗುವನ್ನು ಮುದ್ದಾಡುವ ಮತ್ತು ಆರೈಕೆ ಮಾಡಬೇಕೆನ್ನುವ ಹಂಬಲ ಅವರಲ್ಲಿ ಸಹಜವಾಗಿರುತ್ತದೆ. ಆದರೆ, ಮಾನಸಿಕ ಆರೋಗ್ಯವನ್ನು ಪರಿಗಣಿಸಿದಾಗ ಸಹಜವೆಂದು ತೋರುವ ಈ ಕರ್ತವ್ಯಗಳು ಕೆಲವು ಮಹಿಳೆಯರಿಗೆ ಪ್ರಯಾಸಕರವೆನಿಸುತ್ತವೆ.  ಆದ್ದರಿಂದ ಅವರು ತಮ್ಮ ನವಜಾತ ಶಿಶುವಿನ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ.

ಬಾಂಧವ್ಯವು ಯಾವಾಗ ಆರಂಭವಾಗುತ್ತದೆ?
ಮಗುವಿನೊಂದಿಗೆ ತಾಯಿಯ ಬಾಂಧವ್ಯವು ಬೇರೆ ಬೇರೆ ಹಂತಗಳಲ್ಲಿ ಆರಂಭವಾಗುತ್ತದೆ. ಕೆಲವು ಮಹಿಳೆಯರಿಗೆ ಅವರು ತಾಯಿಯಾಗಲು ತೀರ್ಮಾನಿಸಿದಾಗಲೇ ಆರಂಭವಾದರೆ, ಇನ್ನು ಕೆಲವರಿಗೆ ಗರ್ಭಧಾರಣೆಯ ನಂತರ ಪ್ರಾರಂಭವಾಗುತ್ತದೆ. ಬಾಡಿಗೆ ತಾಯಂದಿರ ಮೂಲಕ ಮಗುವನ್ನು ಪಡೆದ ತಾಯಂದಿರಿಗೆ ಮಗುವು ಅವರ ಕೈಗೆ ಬಂಧ ಮೇಲೆ ಆರಂಭವಾಗಬಹುದು.

ಇವುಗಳಲ್ಲಿ 2 ವಿಧ:
ಭ್ರೂಣಾವಧಿಯ ಬಾಂಧವ್ಯ: ಈ ಬಾಂಧವ್ಯವು ಮಗುವು ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೇ ಆರಂಭವಾಗುತ್ತದೆ. ತಾಯಿಯು ಮಗುವಿನ ರೂಪ ಮತ್ತು ಲಿಂಗದ ಬಗ್ಗೆ ಯೋಚಿಸಲು ಆರಂಭಿಸುತ್ತಾಳೆ. ಈ ಹಂತದಲ್ಲಿ ಆಕೆಯು ಆಗಾಗ ತನ್ನ ಹೊಟ್ಟೆಯನ್ನು ಮುಟ್ಟಿಕೊಳ್ಳಬಹುದು/ನೇವರಿಸಿಬಹುದು, ತನ್ನ ಮಗುವಿಗೆ ಏನನ್ನಾದರೂ ಓದಿ ಹೇಳಬಹುದು ಅಥವಾ ಮಗುವಿನೊಂದಿಗೆ ಮಾತನಾಡಬಹುದು, ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಒದೆಯುವಿಕೆಯಂತಹ ಮಗುವಿನ ಪ್ರತಿಕ್ರಿಯೆಗಳನ್ನು ಸವಿಯಬಹುದು.

ಶಿಶುವಿನೊಂದಿಗೆ ಬಾಂಧವ್ಯ: ತಾಯಿ ಮತ್ತು ಮಗುವಿನ ನಡುವಿನ ಈ ಬಾಂಧವ್ಯವು ಶಿಶು ಜನಿಸಿದ ಬಳಿಕ ಆರಂಭವಾಗುತ್ತದೆ. ತಾಯಿಯು ಮಗುವಿನ ಆರೈಕೆ ಮಾಡುತ್ತಾಳೆ ಮತ್ತು ಪೋಷಿಸುತ್ತಾಳೆ. ಆಕೆಯು ಹಸಿವು, ನಿದ್ರೆ, ಕಿರಿಕಿರಿ ಮುಂತಾಗಿ ಮಗುವಿನ ಸಂಜ್ಞೆಗಳನ್ನು ಅರಿತುಕೊಂಡು ಅದರ ಅಗತ್ಯಗಳನ್ನು ಪೂರೈಸಲು ಕಲಿಯುತ್ತಾಳೆ. ತಾಯಿ ಮತ್ತು ಮಗುವಿನ ಬಾಂಧವ್ಯ ಗಟ್ಟಿಗೊಳ್ಳಲು ಸ್ತನ್ಯಪಾನವು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸ್ತನ್ಯಪಾನ, ಮುದ್ದಿಸುವುದು, ಅಪ್ಪಿಕೊಳ್ಳುವುದು, ಮಸಾಜ್ ಮಾಡುವುದು, ಮಗುವಿನೊಂದಿಗೆ ಲಲ್ಲೆಗರೆಯುವುದು ಮತ್ತು ಮಗುವನ್ನು ಸಮಾಧಾನ ಪಡಿಸುವಿಕೆಯಂತಹ ಕ್ರಿಯೆಗಳು ಮಗುವಿನ ಬೆಳವಣಿಗೆಯ ಹಂತಗಳೊಂದಿಗೆ (0-5 ವರ್ಷಗಳು) ವೃದ್ಧಿಯಾಗುತ್ತಾ ಬರುತ್ತವೆ. ಈ ಎಲ್ಲಾ ಅಭಿವ್ಯಕ್ತಿಗಳು ಸಹಜವಾದ ಬಾಂಧವ್ಯಕ್ಕೆ ನೆರವಾಗುತ್ತವೆ. ಇದರೊಟ್ಟಿಗೆ ತಾಯಿಯು ಹಂತಹಂತವಾಗಿ ಮಗುವಿನ ಮನೋಧರ್ಮಕ್ಕೆ ಹೊಂದಿಕೊಂಡು, ಮಗುವಿನ ಪ್ರತಿಕಿಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ.

ಸಮಸ್ಯೆಯು ಎಲ್ಲಿ ಆರಂಭವಾಗುತ್ತದೆ?
ಆಗತಾನೇ ತಾಯಿಯಾದ ಮಹಿಳೆಯು ತನ್ನ ಮಗುವಿನ ಬಗ್ಗೆ ಆತಂಕ, ಹತಾಶೆ, ದುಃಖ, ತಪ್ಪಿತಸ್ಥ ಭಾವನೆ, ಹೀಗೆ ಅನೇಕ ರೀತಿಯ ಭಾವನೆಗಳನ್ನು ಹೊಂದಿರುತ್ತಾಳೆ. ಮಗುವನ್ನು ನೊಡಿಕೊಳ್ಳುವ ಹೊಸ ಜವಾಬ್ಧಾರಿ, ನಿಯಮಿತವಾಗಿ ಅದರ ಯೋಗಕ್ಷೇಮ ನೊಡಿಕೊಳ್ಳುವುದು, ಒಳ್ಳೆಯ ತಾಯಿಯಾಗಬೇಕೆಂಬ ಒತ್ತಡ, ನಿದ್ರೆಯ ಕೊರತೆಯ ಜೊತೆ ಏಗುವುದು, ಸ್ತನ್ಯಪಾನ, ವೈವಾಹಿಕ ಮತ್ತು ಮನೆಯ ಉಳಿದ ಸಂಬಂಧಗಳನ್ನು ನಿಭಾಯಿಸುವುದು ಮುಂತಾದ ಕಾರ್ಯಗಳು ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಶ್ರಮವನ್ನು ಉಂಟುಮಾಡುತ್ತವೆ. ಸ್ವಲ್ಪಮಟ್ಟಿನ ಆತಂಕವು ಸಹಜವಾಗಿದ್ದರೂ ಸಹಿತ ಭಾವನಾತ್ಮಕ ಏರಿಳಿತಗಳಿಂದಾಗಿ ತಾಯಿಯ ದೈನಂದಿನ ಚಟುವಟಿಕೆ ಹಾಗೂ ಮಗುವಿನ ಜೊತೆಗಿನ ಸಂವಹನದ ಮೇಲೆ ಪ್ರಭಾವ ಬೀರಿದರೆ ಆ ಬಗ್ಗೆ ಸ್ವಲ್ಪ ಚಿಂತಿಸಬೇಕಾಗುತ್ತದೆ.

ಕೆಲವೊಮ್ಮೆ ಹತಾಶೆ ಅಥವಾ ಕಿರಿಕಿರಿ ಎನಿಸುವುದು

ತಾಯಿಯು ಮಗುವಿನ ಮೇಲೆ ಪದೇಪದೇ ಸಿಟ್ಟಾಗುವುದು

ಸುಸ್ತಾದಾಗ ನಿದ್ರಿಸಲು ಅಥವಾ ವಿಶ್ರಾಂತಿ ಪಡೆಯಲು ಸಹಾಯ ಮಾಡುವುದು

ತಾಯಿಯು ಮಗುವಿನ ಆರೈಕೆಯನ್ನು ಎಲ್ಲಾ ಸಮಯ ತನ್ನ ತಾಯಿ ಅಥವಾ ಸಂಬಂಧಿಗೆ ವಹಿಸುವುದು.

ತಾಯಿಯು ಮಗುವಿನ ಕಾರ್ಯವನ್ನು ನಿಭಾಯಿಸಲು ಸಾಧ್ಯವಾಗುವುದು ಮತ್ತು ಮಗುವಿನೊಂದಿಗೆ ಆಕೆಯ ಸಂಬಂಧವು ಸಂತೃಪ್ತಿಕರವಾಗುವುದು.

ಸ್ತನ್ಯಪಾನವನ್ನು ಕೇವಲ ಕರ್ತವ್ಯವೆಂದು ಭಾವಿಸುವುದು.

ಕೆಲವೊಮ್ಮೆ ತಾಯ್ತನವು ತಂದ ಬದಲಾವಣೆಗಳ ಕುರಿತು ಬೇಸರಿಸಿಕೊಳ್ಳುವುದು .

ಮಗುವಿನ ಆರೈಕೆಯಲ್ಲಿ ಯಾವುದೇ ಖುಷಿಯಿಲ್ಲದಿರುವಿಕೆ ಅಥವಾ ಆಕೆಗೆ ಮಗುವಾಗಿದ್ದು ಇಷ್ಟವಿಲ್ಲದಿರಬಹುದು, ದ್ವೇಷ ಅಥವಾ ಬೇಸರವಿರಬಹುದು.

ಇದರ ಜೊತೆಗೆ ಗಂಭೀರ ಸ್ವರೂಪದ ಆತಂಕ, ನಿದ್ರೆ ಇಲ್ಲದಿರುವಿಕೆ, ಖಿನ್ನತೆ ಮತ್ತು ಕಿರಿಕಿರಿಯು ತನ್ನ ದೈನಂದಿನ ಚಟುವಟಿಕೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇಂತಹ ನಡುವಳಿಕೆಗಳು ಕಂಡುಬಂದಲ್ಲಿ ಅದು ಯೋಚಿಸಬೇಕಾದ ವಿಷಯವಾಗಿದ್ದು ಆಕೆಯು ಒಬ್ಬ ಒಳ್ಳೆಯ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು.

ಒಂದು ವೇಳೆ ತಾಯಿಯು ಮಗುವನ್ನು ತ್ಯಜಿಸಿದರೆ?
ತಾಯಿಯು ಮಗುವನ್ನು ತ್ಯಜಿಸಲು ಹಲವಾರು ಕಾರಣಗಳಿರುತ್ತವೆ. ಒಂದುವೇಳೆ ತಾಯಿಗೆ:

  • ಈ ಮುಂಚೆ  ಮನೋವೈದ್ಯಕೀಯ ಕಾಯಿಲೆಯಿದ್ದು ಮಗುವಿನ ಆರೈಕೆ ಮಾಡಲು ಅಸಮರ್ಥಳಾಗಿರುವುದು.
  • ಒಂದು ವೇಳೆ ತನ್ನ ತಾಯಿಯಿಂದ ಆಕೆಯು ಸರಿಯಾದ ಪ್ರಸವಾನಂತರದ ಆರೈಕೆಯನ್ನು ಪಡೆಯದಿದ್ದರೆ ಆಕೆಯು ಮಗುವಿನೊಂದಿಗೂ ಅದೇ ರೀತಿ ವರ್ತಿಸಬಹುದು.
  • ಅಹಿತಕಾರಿ, ಆಘಾತಕಾರಿ ಹೆರಿಗೆಯಿಂದ ಬಳಲಿದ ತಾಯಿಯು ಮಗುವಿನ ಬಗ್ಗೆ ಕೋಪಗೊಂಡಿರಬಹುದು.
  • ಯೋಜಿತವಲ್ಲದ ಗರ್ಭಧಾರಣೆ ಅಥವಾ ಬಲವಂತದ ಗರ್ಭಧಾರಣೆ (ಉದಾಹರಣೆಗೆ ಲೈಂಗಿಕ ದೌರ್ಜನ್ಯ)
  • ಮಗುವಿನಲ್ಲಿ ನ್ಯೂನ್ಯತೆ ಅಥವಾ ಗಂಭೀರ ಖಾಯಿಲೆಯಿದ್ದರೆ ಕೆಲವು ತಾಯಿಯಂದಿರಿಗೆ ಮಗುವಿನ ಜೊತೆಗೆ ಬಾಂಧವ್ಯ ಸಾಧ್ಯವಾಗದಿರಬಹುದು.

ಭಾರತೀಯ ಕುಟುಂಬಗಳಲ್ಲಿ ಒಬ್ಬ ನೂತನ ತಾಯಿ ತನ್ನ ಕುಟುಂಬದ ಸದಸ್ಯರಿಂದ ಬಹಳಷ್ಟು ಬೆಂಬಲವನ್ನು ಪಡೆಯುವುದರಿಂದ (ಉದಾಹರಣೆಗೆ ತಾಯಿ ಅಥವಾ ಅತ್ತೆ) ಮಗುವನ್ನು ತ್ಯಜಿಸಲು ಇರುವ ಕಾರಣವನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಆದಕಾರಣ ಕುಟುಂಬದ ಸದಸ್ಯರು ಯಾವುದೇ ತರಹದ ಚಿಂತೆ, ಬೇಸರದ ಲಕ್ಷಣಗಳನ್ನು ಗುರುತಿಸಿ ತಾಯಿಯನ್ನು ಮಾನಸಿಕ ಆರೋಗ್ಯ ತಜ್ಞರ ಬಳಿ ಕರೆದುಕೊಂಡು ಹೋಗಬೇಕು.

ತಾಯಿ ಮಗುವಿನ ಭಾಂಧವ್ಯ ನಿರ್ವಹಣೆ
ಮನೋ-ಸಾಮಾಜಿಕ ಮಾರ್ಗವು ತಾಯಿ ಮತ್ತು ಮಗುವಿನ ಬಾಂಧವ್ಯದ ಸಮಸ್ಯೆಗಳನ್ನು ನಿಭಾಯಿಸಲು ಕೇವಲ ತಾಯಿಯನ್ನು (ಪ್ರಾಥಮಿಕ ಆರೈಕೆದಾರೆ) ಮಾತ್ರವಲ್ಲದೇ ಉಳಿದ ಕುಟುಂಬದ ಸದಸ್ಯರನ್ನು ಕೂಡ ಬಳಸಿಕೊಳ್ಳುತ್ತದೆ. ತಾಯಿಯು ಮಗುವಿನ ಅವಶ್ಯಕತೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಮತ್ತು ಆಕೆಯು ಮಗುವಿನ ಸಂಜ್ಞೆಗಳನ್ನು ಅರ್ಥಮಾಡಿಕೊಳ್ಳಬಲ್ಲಳೇ ಎಂದು ಚಿಕಿತ್ಸೆಯ ಅವಲೋಕನಾ ಹಂತದಲ್ಲಿ ಕುಟುಂಬದ ಸದಸ್ಯರನ್ನು ವಿಚಾರಿಸಲಾಗುತ್ತದೆ.

ಎರಡನೆಯದಾಗಿ, ಕೆಲವು ತಾಯಂದಿರಿಗೆ ಅವರು ಮಗುವಿನೊಂದಿಗೆ ಇರುವ ಕ್ಷಣಗಳ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತೋರಿಸಲಾಗುತ್ತದೆ. ಇದರಿಂದ ಆಕೆಗೆ ತಾನೇನು ಮಾಡುತ್ತಿದ್ದೇನೆ ಮತ್ತು ಹೇಗೆ ಸುಧಾರಿಸಿಕೊಳ್ಳಬೇಕು ಎಂಬ ಅರಿವಾಗುತ್ತದೆ.

ಸ್ನಾನಕ್ಕೆ ಮೊದಲು ಮಗುವಿಗೆ ಮಸಾಜ್ ಮಾಡುವಂತೆ ತಾಯಿಗೆ ಉತ್ತೇಜಿಸಬಹುದು. ಇಲ್ಲಿ ತಾಯಿಗೆ ಮಗುವನ್ನು ನೇವರಿಸಲು ಮತ್ತು ಮೃದುವಾಗಿ ಸ್ಪರ್ಶಿಸಲು ತಿಳಿಸಲಾಗುತ್ತದೆ. ಅಲ್ಲದೇ ಆಕೆಗೆ ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ಸಂವಹಿಸಲು ಅಂದರೆ ಮಾತನಾಡಲು ಹಾಗೂ ನಗಲು ಪ್ರೋತ್ಸಾಹಿಸಲಾಗುತ್ತದೆ.

ತಾಯಿ ಮತ್ತು ಮಗುವಿನ ಬಾಂಧವ್ಯವು ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಇಲ್ಲಿ ತಾಯಿಯನ್ನು ಆಕೆಯ ನಡವಳಿಕೆಗಾಗಿ ನಿಂದಿಸಬಾರದು. ಹೆಚ್ಚಿನ ಸಂದರ್ಭದಲ್ಲಿ ಸಮಾಜವು ತಾಯಿಯನ್ನು ದೂಷಿಸಬಹುದೆಂಬ ಭಯದಿಂದ ಕುಟುಂಬದ ಸದಸ್ಯರು ತಜ್ಞರ ಸಹಾಯವನ್ನು ಪಡೆಯುವುದಿಲ್ಲ. ಆದರೆ ಬಾಂಧವ್ಯದ ಸಮಸ್ಯೆಯನ್ನು ಚಿಕಿತ್ಸೆಯ ಮೂಲಕ ಸರಿಪಡಿಸಲು ಸಾಧ್ಯವಿದೆ. ವೃತ್ತಿಪರ ತಜ್ಞರ ಮಧ್ಯಸ್ಥಿಕೆಯಿಂದ ತಾಯಿಗೆ ತನ್ನ ಮಗುವಿನ ಜೊತೆ ವಾತ್ಸಲ್ಯಭರಿತ ಜೀವನವನ್ನು ನಡೆಸಲು ಅನುವಾಗುತ್ತದೆ. ಇಲ್ಲಿ ಮಗುವಿನ ಕಾಳಜಿಯನ್ನು ಸಂಪೂರ್ಣವಾಗಿ ಯಾರೂ ವಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ಮುಖ್ಯವಾದ ವಿಚಾರ. ಗಂಭೀರ ಬಾಂಧವ್ಯದ ಸಮಸ್ಯೆಯಿರುವ ತಾಯಂದಿರೂ ಕೂಡ ಮಗುವಿನ ಬಟ್ಟೆಯನ್ನು ಆಯ್ಕೆ ಮಾಡುವುದು, ಅವರನ್ನು ಹೊರಗಡೆ ಕರೆದುಕೊಂಡು ಹೋಗುವುದು ಮತ್ತು ಆಹಾರವನ್ನು ತಯಾರಿಸುವುದು (ಸ್ತನ್ಯಪಾನವನ್ನು ಹೊರತುಪಡಿಸಿ) ಮುಂತಾದ ಚಿಕ್ಕ ಚಕ್ಕ ಕೆಲಸಗಳನ್ನು ನಿಭಾಯಿಸಬಹುದು. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org