ಗರ್ಭಿಣಿಯರಲ್ಲಿ ಖಿನ್ನತೆ

ಪ್ರತಿಯೊಂದು ಭಾವೀ ತಾಯಿಗೂ ಈ ಅವಧಿಯಲ್ಲಿ ಸರಿಯಾದ ಕಾಳಜಿ ಮತ್ತು ಪರಾನುಭೂತಿಯ ಅವಶ್ಯಕತೆಯಿರುತ್ತದೆ.

ತಾಯ್ತನವು ಮಹಿಳೆಯ ಜೀವನದ ಒಂದು ಸಂಕೀರ್ಣ ಅವಧಿಯಾಗಿದೆ. ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವು ಈ ಸಮಯದಲ್ಲಿ ಕುಸಿಯುವುದರಿಮದ ಪ್ರತಿಯೊಂದು ಭಾವೀ ತಾಯಿಗೂ ಈ ಅವಧಿಯಲ್ಲಿ ಸರಿಯಾದ ಕಾಳಜಿ ಮತ್ತು ಪರಾನುಭೂತಿಯ ಅವಶ್ಯಕತೆಯಿರುತ್ತದೆ.

ಕೆಲವು ಮಹಿಳೆಯರಿಗೆ ಗರ್ಭಧಾರಣೆಯು ಸಂತೋಷದ ಅವಧಿಯಾಗಿದ್ದರೆ, ಇನ್ನು ಕೆಲವರಿಗೆ ಸವಾಲಿನ ಸಮಯವಾಗಿರುತ್ತದೆ. ಹಲವಾರು ಜೈವಿಕ ಮತ್ತು ಮನೋಸಾಮಾಜಿಕ ಅಂಶಗಳು ಅವರಲ್ಲಿ ಖಿನ್ನತೆ, ಆತಂಕ, ಒಸಿಡಿ ಮತ್ತು ಪ್ರಸವಾನಂತರದ ಸೈಕೋಸಿಸ್ ನಂತಹ ಮಾನಸಿಕ ಸಮಸ್ಯೆಯನ್ನು ಉಂಟುಮಾಡುತ್ತವೆ.

ಗರ್ಭಿಣಿಯ ದೈಹಿಕ ಆರೋಗ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯ ರಕ್ಷಣೆಗೂ ನೀಡಬೇಕು.

ಗರ್ಭಾವಸ್ಥೆ

ಒಂಬತ್ತು ತಿಂಗಳ ಗರ್ಭಾವಸ್ಥೆಯ ಸಮಯವನ್ನು ಪ್ರಸವಪೂರ್ವ ಅವಧಿಯೆನ್ನುತ್ತಾರೆ. ಈ ಸಮಯದಲ್ಲಿ ಕೆಲವು ಜೈವಿಕ ಮತ್ತು ಮಾನಸಿಕ ಕಾರಣದಿಂದಾಗಿ ಮಹಿಳೆಯರು ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಆದರೆ, ಖಿನ್ನತೆಯ ಲಕ್ಷಣಗಳು ಗರ್ಭಾವಸ್ಥೆಯ ಉಳಿದ ಸಹಜ ಲಕ್ಷಣಗಳಾದ ಕಿರಿಕಿರಿಯೆನಿಸುವುದು, ಸುಸ್ತು, ನಿದ್ರೆ ಮತ್ತು ಹಸಿವಿನ ತೊಂದರೆಯನ್ನೇ ಹೊಂದಿರುವುದರಿಂದ, ಇಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಪತ್ತೆಯಾಗದೇ ಉಳಿಯುತ್ತವೆ.

ಪ್ರಸವಪೂರ್ವದಲ್ಲಿ ಖಿನ್ನತೆಗೆ ಕಾರಣವಾಗಬಹುದಾದ ಕೆಲವು ಅಂಶಗಳು:

 • ವೈವಾಹಿಕ ಸಂಬಂಧದಲ್ಲಿನ ಸಮಸ್ಯೆಗಳು
 • ಯೋಜಿಸಿರದ ಅಥವಾ ಬೇಡದ ಗರ್ಭಧಾರಣೆ
 • ಕೌಟುಂಬಿಕ ದೌರ್ಜನ್ಯ
 • ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಪ್ರಸವಾನಂತರದ ಸೈಕೋಸಿಸ್ ಮತ್ತು ಉಳಿದ ಮಾನಸಿಕ ಖಾಯಿಲೆಗಳ ಕೌಟುಂಬಿಕ ಹಿನ್ನೆಲೆ
 • ಒಸಿಡಿ ಅಥವಾ ಆಘಾತದಿಂದಾದ ಒತ್ತಡದ ಸಮಸ್ಯೆಗಳಂತಹ ಖಾಯಿಲೆಗಳ ಈ ಮುಂಚೆಯೆ ಇದ್ದಲ್ಲಿ ಗರ್ಭಧಾರಣೆಯ ಸಮಯದಲ್ಲಿ ಉಲ್ಬಣಿಸಬಹುದು.
 • ಮೊದಲಿನಿಂದಲೂ ಇರುವ ಮಾನಸಿಕ ಖಾಯಿಲೆಗಳ ಔಷಧವನ್ನು ಗರ್ಭಧಾರಣೆಯ ವೇಳೆಯಲ್ಲಿ ನಿಲ್ಲಿಸುವುದು.
 • ಈ ಹಿಂದಿನ ಗರ್ಭಧಾರಣೆಯಲ್ಲಿನ ತೊಡಕು ಅಥವಾ ಮಗುವನ್ನು ಕಳೆದುಕೊಂಡಿರುವುದು.
 • ಆರ್ಥಿಕ ಸಮಸ್ಯೆ
 • ಕುಡಿತ, ಮಾದಕ ಪದಾರ್ಥಗಳ ಚಟ ಅಥವಾ ಔಷಧಗಳ ವ್ಯಸನ
 • ಗ್ರಾಮೀಣ ಪ್ರದೇಶದಿಂದ ಕೌಟುಂಬಿಕ, ಸಾಮಾಜಿಕ ಬೆಂಬಲವಿರದ ನಗರಕ್ಕೆ ವಲಸೆ
 • ಅತಿಯಾದ ಕೆಲಸದ ಒತ್ತಡ ಅಥವಾ ಡೆಡ್ ಲೈನ್ ಪ್ರೆಶರ್.

ಗರ್ಭಧಾರಣೆಯಲ್ಲಿ ಸಹಜವಾದ ಬದಲಾವಣೆಗಳು

ಅಸಹಜ ಲಕ್ಷಣಗಳು

ಗರ್ಭಧಾರಣೆಯ ಸಂದರ್ಭದಲ್ಲಿ ಪ್ರತಿ ಮಹಿಳೆಯಲ್ಲಿಯೂ ಕೆಲವು ಸಾಮಾನ್ಯ ಬದಲಾವಣೆಗಳು ಕಂಡುಬರುತ್ತವೆ. ಹಾರ್ಮೋನಿನಲ್ಲಾಗುವ ಬದಲಾವಣೆ ಇದಕ್ಕೆ ಕಾರಣವಾಗಿದೆ.

ಮೊದಲನೆಯ ತ್ರೈಮಾಸಿಕದಲ್ಲಿ ತಲೆತಿರುಗುವುದು/ವಾಂತಿ

ಮನಸ್ಥಿತಿಯಲ್ಲಿನ ಬದಲಾವಣೆಗಳು, ಭಾವನಾತ್ಮಕ ಅಥವಾ ದುಃಖದ ಭಾವ

ಕಿರಿಕಿರಿಯೆನಿಸುವುದು

ಕುಸಿದ ಆತ್ಮಗೌರವ

 • ದೇಹದ ಆಕೃತಿಯ ಬಗ್ಗೆ ಯೋಚನೆ
 • ಮೂರನೆಯ ತ್ರೈಮಾಸಿಕದಲ್ಲಿ ನಿದ್ರೆಯ ಸಮಸ್ಯೆಗಳು
 • ಮೊದಲು ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಹೆಚ್ಚೆನಿಸುವ ಬಳಲಿಕೆ
 • ಮಗುವಿನ ಕ್ಷೇಮ ಮತ್ತು ಹೆರಿಗೆಯ ಕುರಿತ ಆತಂಕ

ಈ ಕೆಳಗಿನ ಲಕ್ಷಣಗಳು ಮಹಿಳೆಯು ಪ್ರಸವಪೂರ್ವ ಖಿನ್ನತೆಯಿಂದ ಬಳಲುತ್ತಿರುವುದನ್ನು ಸೂಚಿಸುತ್ತವೆ:

ತೂಕದ ಕುಸಿತ ಅಥವಾ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚದಿರುವುದು.

ಮಾರ್ನಿಂಗ್ ಸಿಕ್ ನೆಸ್ ನಿಂದ ಚೇತರಿಸಿಕೊಂಡ ಮೇಲೂ ನಿರಂತರವಾಗಿ ಹಸಿವೆ ಕಡಿಮೆಯಾಗುವುದು.

ನಿದ್ರೆಯ ಅವಧಿ ಮತ್ತು ಸಮಯದಲ್ಲಿ ಬದಲಾವಣೆಗಳು.

ಕೋಪಗೊಳ್ಳುವುದು ಮತ್ತು ಅವಿಶ್ರಾಂತ ಭಾವನೆ.

 • ಬಳಲಿಕೆ ಅಥವಾ ಶಕ್ತಿಹೀನತೆ.
 • ತನಗೆ ಪ್ರಾಮುಖ್ಯತೆಯಿಲ್ಲವೆಂಬ ಅಥವಾ ಪಶ್ಚಾತ್ತಾಪದ ಭಾವನೆ.
 • ಆಸಕ್ತಿ ಇಲ್ಲದಿರುವುದು ಅಥವಾ ಯಾವುದೇ ಚಟುವಟಿಕೆಯಿಂದಲೂ ಸಂತೋಷ ದೊರೆಯದಿರುವುದು.
 • ಏಕಾಗ್ರತೆಯ ಕೊರತೆ.
 • ಸಾವು ಅಥವಾ ಆತ್ಮಹತ್ಯೆಯ ಯೋಚನೆ.

ಗರ್ಭಧಾರಣೆಯ ಸಂದರ್ಭದಲ್ಲಿ ನಿಮ್ಮಲ್ಲಿ, ನಿಮ್ಮ ಪತ್ನಿ/ಮಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಜ್ಞರ ಸಹಾಯ ಪಡೆಯಿರಿ.  

ಪ್ರಮುಖ ಸೂಚನೆ: ಪ್ರಸವಪೂರ್ವ ಖಿನ್ನತೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು. ಖಿನ್ನತೆಗೆ ಒಳಗಾದ ಮಹಿಳೆಗೆ ಸೂಕ್ತವಾದ ಚಿಕಿತ್ಸೆ ಕೊಡಿಸಿದರೆ, ಹೆರಿಗೆಗೆ ಮೊದಲು ಆಕೆಯು ಚೇತರಿಸಿಕೊಳ್ಳುತ್ತಾಳೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org