ಗರ್ಭಿಣಿಯರಾಗಿರುವಾಗ ಮತ್ತು ಹೆರಿಗೆಯ ನಂತರದಲ್ಲಿ ಉಂಟಾಗುವ ಆತಂಕ ಮತ್ತು ಮಾನಸಿಕ ಯಾತನೆಯನ್ನು ಎದುರಿಸುವ ಬಗೆ: ಕೋವಿಡ್-19ಗೆ ಸಂಬಂಧಿಸಿದಂತೆ

ಗರ್ಭಿಣಿಯರಾಗಿರುವಾಗ ಮತ್ತು ಹೆರಿಗೆಯ ನಂತರದಲ್ಲಿ ಉಂಟಾಗುವ ಆತಂಕ ಮತ್ತು ಮಾನಸಿಕ ಯಾತನೆಯನ್ನು ಎದುರಿಸುವ ಬಗೆ: ಕೋವಿಡ್-19ಗೆ ಸಂಬಂಧಿಸಿದಂತೆ

ನಿಮ್ಹಾನ್ಸ್ ಪ್ರಸವಪೂರ್ವ ಮಾನಸಿಕ ಆರೋಗ್ಯ ಸೇವೆ ಬೆಂಗಳೂರು ಭಾರತ - ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಾರ್ಗಸೂಚಿಗಳ ಟಿಪ್ಪಣಿ
Published on

ಕೋವಿಡ್-19ಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರಲ್ಲಿ ಮತ್ತು ಬಾಣಂತಿಯರಲ್ಲಿ ಯಾವ ರೀತಿಯ ಚಿಂತೆಗಳು ಕಾಡುತ್ತವೆ ?

1.   ನನಗೆ ಸೋಂಕು ತಗುಲದಂತೆ ತಡೆಗಟ್ಟುವುದು ಹೇಗೆ ?

2.   ಗರ್ಭದಲ್ಲಿರುವ ನನ್ನ ಮಗುವಿಗೆ ವೈರಾಣು ಸೋಂಕಿದರೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ?

3.   ಪ್ರಸವಕ್ಕೆ ಮುನ್ನ ಮತ್ತು ನಂತರ ನನ್ನ ಗಂಡ ಅಥವಾ ತಾಯಿ ನನ್ನೊಡನೆ ಇರಲು ಅವಕಾಶ ನೀಡುತ್ತಾರೆಯೇ ?

4.   ನಾನು ನೌಕರಿಗೆ ಹೋದರೆ ಸಾರಿಗೆ ಸೌಲಭ್ಯ ಇರುತ್ತದೆಯೇ ?

5.   ಪ್ರಸವದ ನಂತರ ತಪಾಸಣೆಗಾಗಿ ಅಥವಾ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಹೋಗುವುದು ಸುರಕ್ಷಿತವೇ ? 

6.   ಗರ್ಭಿಣಿಯಾಗಿರುವಾಗ ಕೈಗಳನ್ನು ತೊಳೆಯಲು ಹೆಚ್ಚಾಗಿ ಸ್ಯಾನಿಟೈಸರ್ ಬಳಸುವುದು ಸುರಕ್ಷಿತವೇ ?

7.   ನಾನು ಕೋವಿಡ್-19 ಸೋಂಕು ಇದೆಯೋ ಇಲ್ಲವೋ ತಿಳಿಯಲು ತಪಾಸಣೆ ಮಾಡಿಸಬೇಕೇ ?

8.   ಮಗುವಿಗೆ ಮೊಲೆ ಹಾಲು ಕುಡಿಸುವುದು ಸುರಕ್ಷಿತವೇ ?

9.   ನನ್ನ ಸಂಬಂಧಿಕರು ಮಗುವನ್ನು ಎತ್ತಿಕೊಳ್ಳಬಹುದೇ ? 

10.   ನನ್ನನ್ನು ನೋಡಲು ಯಾರೂ ಬರಲು ಸಾಧ್ಯವಾಗದಿದ್ದಾಗ, ಮಗುವಿನ ಆರೈಕೆ ಮಾಡಲು ನನಗೆ ಯಾರ ಬೆಂಬಲವೂ ಇಲ್ಲದಿದ್ದಾಗ ನನ್ನ ಮನಸ್ಸು ಖಿನ್ನವಾಗುವುದನ್ನು ತಡೆಯುವುದು ಹೇಗೆ ?

ಲಭ್ಯವಿರುವ ಪುರಾವೆಗಳನ್ನು ಆಧರಿಸಿದ ಕೆಲವು ವಾಸ್ತವ ಸಂಗತಿಗಳು :

1.   ಗರ್ಭಾವಸ್ಥೆಯ ಆರಂಭದ ಹಂತದಲ್ಲಿರುವ ಮಹಿಳೆಯರಿಗೆ ಗರ್ಭಪಾತವಾಗುವ ಸಂಭವ ಹೆಚ್ಚಾಗಿರುತ್ತದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ.

2.   ವೈರಾಣು ನಿಮ್ಮ ಗರ್ಭದಲ್ಲಿನ ಶಿಶುವಿನಲ್ಲಿ ಊನ ಉಂಟುಮಾಡುತ್ತದೆ ಎನ್ನಲಾಗಲೀ, ನೀವು ಗರ್ಭಿಣಿಯಾಗಿರುವಾಗ ವೈರಾಣು ನಿಮ್ಮಿಂದ ಗರ್ಭದಲ್ಲಿರುವ ಶಿಶುವಿಗೆ ರವಾನೆಯಾಗುತ್ತದೆ ಎನ್ನಲಾಗಲೀ  ಯಾವುದೇ ಪುರಾವೆಗಳಿಲ್ಲ.

3.   ಆಗತಾನೇ ಹುಟ್ಟಿದ ಮಗು ಮತ್ತು ಚಿಕ್ಕ ಮಕ್ಕಳು ಸೋಂಕಿನಿಂದ ಅಥವಾ ಅದರಿಂದ ಉಂಟಾಗುವ ಸಮಸ್ಯೆಗಳಿಂದ ಹೆಚ್ಚಾಗಿ ಬಾಧಿತರಾಗುವುದಿಲ್ಲ. ಪ್ರಸವ ಪೂರ್ವ ತಪಾಸಣೆಗಳನ್ನು ನಿಯತಕಾಲಿಕವಾಗಿ ಮಾಡಿಸುತ್ತಿದ್ದರೆ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಭ್ರೂಣದ ಹಂತದ ಪರೀಕ್ಷೆ, ಗರ್ಭದ ಹಂತ ಪರೀಕ್ಷೆ ಇವುಗಳನ್ನು ಮುಂಚಿನಂತೆಯೇ ಮಾಡಿಸುತ್ತಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.

4.   ನಿಮ್ಮ ಮಗುವಿನ ಜನನಕ್ಕೆ ಆಸ್ಪತ್ರೆಯೇ ಸೂಕ್ತ ಮತ್ತು ಸುರಕ್ಷಿತ ಸ್ಥಳ. ಇಲ್ಲಿ ನಿಮಗೆ ಎಲ್ಲ ರೀತಿಯ ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ ಮತ್ತು ತುರ್ತು ಸಂದರ್ಭದ ಎಲ್ಲ ಸೌಲಭ್ಯಗಳೂ ದೊರೆಯುತ್ತವೆ.

5.   ತಮ್ಮ ಮಗುವಿಗೆ ಮೊಲೆ ಹಾಲು ನೀಡುವ ಮಹಿಳೆಯರನ್ನು ಹುರಿದುಂಬಿಸಿ, ಮೊಲೆಯುಣಿಸಲು  ಪ್ರೋತ್ಸಾಹಿಸಬೇಕು. ಈಗ ಲಭ್ಯವಿರುವ ಮಾಹಿತಿಯ ಅನುಸಾರ ವೈರಾಣು ಮೊಲೆ ಹಾಲಿಗೂ ಹರಡುತ್ತದೆ ಎನ್ನಲು ಯಾವುದೇ ಪುರಾವೆಗಳಿಲ್ಲ.

6.   ಒಂದು ವೇಳೆ ತಾಯಿಗೆ ಕೋವಿದ್ 19 ಸೋಂಕು ತಗುಲಿದ್ದರೆ ಅಥವಾ ತಗುಲುವ ಅನುಮಾನ ಇದ್ದರೆ ಆಕೆಯನ್ನು ಮಗುವಿನಿಂದ ಹಠಾತ್ತನೆ ಪ್ರತ್ಯೇಕಿಸಬಾರದು. ಬದಲಾಗಿ ಶುಚಿತ್ವ ಮತ್ತು ಸ್ವಚ್ಚತೆ ಕಾಪಾಡುವಂತೆ ಹೇಳಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಪ್ರೋತ್ಸಾಹಿಸಬೇಕು. ಮೊಲೆ ಹಾಲು ಕುಡಿಸುವಾಗ, ಬಾಟಲಿಯಲ್ಲಿ ಹಾಲು ಕುಡಿಸುವಾಗ, ಮಾತನಾಡುವಾಗ ಮುಖಕ್ಕೆ ಮಾಸ್ಕ್ ಧರಿಸಲು ಸಲಹೆ ನೀಡಬೇಕು

ಕೊಂಚ ಮಟ್ಟಿನ ಆತಂಕ ಸ್ವಾಭಾವಿಕವಾಗಿರುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಈ ಸಂದರ್ಭದಲ್ಲಿ ಬೇರೆಯವರೊಡನೆ ಮಾತನಾಡಲು ಇದು ನೆರವಾಗುತ್ತದೆ. ಸ್ನೇಹಿತರೊಡನೆ ಮತ್ತು ನಿಮ್ಮ ಕುಟುಂಬದ ನಂಬಿಕಸ್ಥರೊಡನೆ ಮುಕ್ತವಾಗಿ ಮಾತನಾಡಿ.

ಕೆಲವೊಮ್ಮೆ ಆತಂಕ ತೀವ್ರ ಹೆಚ್ಚಾಗುತ್ತದೆ ಮತ್ತು ನೀವು ನಿಮ್ಮ ಆರೋಗ್ಯ ಸೇವೆ ಒದಗಿಸುವವರ ಬಳಿ ಧಾವಿಸಬೇಕಾಗುತ್ತದೆ. ಅದು ನಿಮ್ಮ ಹತ್ತಿರದ ವೈದ್ಯರೇ ಆಗಿರಬಹುದು ಅಥವಾ ಶುಶ್ರೂಷಕಿಯೇ ಆಗಿರಬಹುದು. 

ನನ್ನಲ್ಲಿ ಆತಂಕ ಮತ್ತು ಯಾತನೆ ಹೆಚ್ಚಾಗಿದೆ ಅಥವಾ ಸಹಜವಾಗಿದೆ ಎಂದು ಹೇಗೆ ತಿಳಿಯುತ್ತದೆ ?

ನಿಮ್ಮಲ್ಲಿ ಆತಂಕ ಹೆಚ್ಚಾಗಿರುವುದೋ, ಮಾನಸಿಕ ಯಾತನೆ ತೀವ್ರವಾಗಿರುವುದೋ ಎಂದು ತಿಳಿಯಲು ನಿಮ್ಮಲ್ಲಿ ಕಾಣುವ ಕೆಲವು ಲಕ್ಷಣಗಳನ್ನು ನೀವು ಗುರುತಿಸಬಹುದು :

  • ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಭರವಸೆ ನೀಡಿದ ನಂತರವೂ ಸೋಂಕು ತಗುಲಿಬಿಡುತ್ತದೆ ಎಂಬ ತೀವ್ರವಾದ ಚಿಂತೆ ಕಾಡುತ್ತದೆ.
  • ಆತಂಕದಿಂದ ಸರಿಯಾಗಿ ನಿದ್ರೆ ಬರುವುದಿಲ್ಲ 
  • ಕೋವಿದ್ 19ರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಯ ಮೇಲೆ ಹೆಚ್ಚಿನ ಗಮನಹರಿಸುವುದು.
  • ಕುಟುಂಬದ ಸದಸ್ಯರಲ್ಲಿ ಸೋಂಕು ನಿಯಂತ್ರಣ ನಿಯಮಗಳ ಬಗ್ಗೆ ತೀವ್ರವಾಗಿ ಆತಂಕ ಪಡುವುದು.
  • ನೌಕರಿಗೆ ಹೋಗಲಾಗುತ್ತಿಲ್ಲ ಎಂದು ತುಂಬಾ ಚಿಂತೆ ಮಾಡುವುದು.
  • ಪ್ರತ್ಯೇಕವಾಗಿರುವುದಕ್ಕೆ ಮತ್ತು ಕುಟುಂಬದ ಸದಸ್ಯರನ್ನು ಹಾಗೂ ಸ್ನೇಹಿತರನ್ನು ಭೇಟಿ ಮಾಡಲಾಗದಿರುವುದಕ್ಕೆ ವಿಷಾದ ಮತ್ತು ಕೋಪ ವ್ಯಕ್ತಪಡಿಸುವುದು.
  • ಆತಂಕ ಪಡುವುದು, ಅಸ್ವಸ್ಥರಂತೆ ಭಾವಿಸುವುದು ಮತ್ತು ತುದಿಗಾಲಲ್ಲಿ ನಿಂತಂತೆ ವರ್ತಿಸುವುದು.
  • ಚಿಂತೆ ಮಾಡುವುದನ್ನು ಬಿಡಲು ಸಾಧ್ಯವಾಗದಿರುವುದು ಮತ್ತು ನಿಯಂತ್ರಿಸಲಾಗದಿರುವುದು.
  • ವಿರಮಿಸುವಲ್ಲಿ ಎದುರಿಸುವ ತೊಂದರೆ
  • ಕೂತಲ್ಲಿ ಕೂರಲಾಗದೆ ಒದ್ದಾಡುವುದು.
  • ಬೇಗನೆ ಕೋಪಗೊಳ್ಳುವುದು ಮತ್ತು ಕಿರಿಕಿರಿ ಮಾಡುವುದು
  • ಏನೋ ಅನಾಹುತ ಸಂಭವಿಸುತ್ತದೆ ಎಂದು ಭಯಪಡುವುದು.

ಗರ್ಭಿಣಿ ಮಹಿಳೆಯರು ಅಥವಾ ಆಗತಾನೇ ಜನಿಸಿದ ಶಿಶುವನ್ನು ಹೊಂದಿರುವ ತಾಯಂದಿರುವ ಆತಂಕಗೊಳ್ಳುವುದರಿಂದ ತಪ್ಪಿಸಿಕೊಳ್ಳುವುದು ಹೇಗೆ ?

ಇದಕ್ಕೆ ನಾಲ್ಕು ಮಾರ್ಗಗಳಿವೆ. ಹಂಚಿಕೊಳ್ಳುವುದು, ಯೋಜನೆ ರೂಪಿಸುವುದು, ಆತಂಕ ಉಂಟುಮಾಡುವ ಆಲೋಚನೆಗಳನ್ನು ಕಡಿಮೆ ಮಾಡುವುದು ಮತ್ತು ವಿಶ್ರಾಂತಿ ಪಡೆಯುವುದು.

A. ಹಂಚಿಕೊಳ್ಳುವುದು: 

1.   ನಿಮ್ಮ ತಜ್ಞ ವೈದ್ಯರೊಡನೆ, ಶುಶ್ರೂಷಕಿಯೊಡನೆ ಅಥವಾ ಪ್ರಾಥಮಿಕ ವೈದ್ಯರೊಡನೆ ನಿರಂತರ ಸಂಪರ್ಕದಲ್ಲಿರಿ. ನಿಮಗೆ ತೀವ್ರ ಆತಂಕವಾಗಿದ್ದರೆ ಅಥವಾ ಚಿಂತಿತರಾಗಿದ್ದರೆ ಅವರನ್ನು ಹೇಗೆ ಸಂಪರ್ಕಿಸುವುದು ಎಂದು  ಅವರಿಂದಲೇ ಕೇಳಿ ತಿಳಿದುಕೊಂಡಿರಿ. ಆಸ್ಪತ್ರೆ ಅಥವಾ ಕ್ಲಿನಿಕ್‍ನ ದೂರವಾಣಿ ಸಂಖ್ಯೆಯನ್ನು ತಿಳಿದುಕೊಂಡಿರಿ.

2.   ನಿಮ್ಮ ದಿನಚರಿಯನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಿ. ವಿಶ್ರಾಂತಿ, ಹವ್ಯಾಸಗಳು, ಕೆಲಸ ಮತ್ತು ವ್ಯಾಯಾಮ. ಈ ನಾಲ್ಕನ್ನು ಸಮಾನ ಅವಧಿಗೆ ನಿಗದಿಪಡಿಸಿ ಅಂತೆಯೇ ಪಾಲಿಸಿ.

3.   ಒಂಟಿಯಾಗಿರಲು ಪ್ರಯತ್ನಿಸಬೇಡಿ. ನಿಮ್ಮ ಸಂಬಂಧಿಕರೊಡನೆ ಮತ್ತು ಸ್ನೇಹಿತೆಯರೊಡನೆ ದೂರವಾಣಿ ಕರೆಯ ಮೂಲಕ, ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿರಿ.

4.   ಮನಸು ಕೆಡಿಸುವ ಸಾಮಾಜಿಕ ಮಾಧ್ಯಮಗಳು ಮತ್ತು ಟಿವಿ ಕಾರ್ಯಕ್ರಮಗಳಿಂದ ದೂರವಿರಿ. ಯಾವುದೇ ರೀತಿಯ ನಕಾರಾತ್ಮಕ ಸಂದೇಶಗಳನ್ನು ಕಳಿಸಕೂಡದು ಎಂದು ನಿಮ್ಮ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ತಿಳಿಸಿ. ತುಂಬಾ ಹೆಚ್ಚಿನ ಸಂದೇಶಗಳಿದ್ದರೆ ಅಂತಹ ಗುಂಪಿನಿಂದ ಹೊರಬನ್ನಿ.

5.   ಸಾಮಾಜಿಕವಾಗಿ ಪ್ರತ್ಯೇಕವಾಗಿರುವ ಸಂದರ್ಭದಲ್ಲಿ ನೀವು ಗರ್ಭಿಣಿಯಾಗಿರುವಾಗ ನೆರವೇರಿಸುವ ಹಲವು ಆಚರಣೆಗಳಿಂದ ವಂಚಿತರಾಗುತ್ತೀರಿ. ಇದು ನಿಮಗೆ ನಿರಾಸೆ ಮೂಡಿಸಬಹುದು. ಇಂತಹ ಸನ್ನಿವೇಶದಲ್ಲಿ ಕೆಲವೇ ಹತ್ತಿರದ ಕುಟುಂಬ ಸದಸ್ಯರು ಇರುವಂತೆ ಸರಳವಾದ ಸಮಾರಂಭವನ್ನು ಏರ್ಪಡಿಸಿ ನಿಮ್ಮನ್ನು ನೀವು ಸಂತೈಸಿಕೊಳ್ಳಿ. ಫೋಟೋಗಳನ್ನು ಇತರರೊಡನೆ ಹಂಚಿಕೊಳ್ಳುವ ಮೂಲಕ ತೃಪ್ತಿಪಟ್ಟುಕೊಳ್ಳಿ. 

B. ತಯಾರಿಕೆ ಮತ್ತು ಯೋಜನೆ ರೂಪಿಸುವುದು :

 ಆತಂಕವನ್ನು ನಿಭಾಯಿಸುವ ಒಂದು ಉತ್ತಮ ಮಾರ್ಗ ಎಂದರೆ ಎದುರಾಗಬಹುದಾದ ಅಪಾಯವನ್ನು ಎದುರಿಸಲು ಸಿದ್ಧರಾಗುವುದು. ಕೆಲವು ವಿಚಾರಗಳಲ್ಲಿ ಯೋಜನೆ ರೂಪಿಸುವುದು ಕಷ್ಟವಾದರೂ ನೀವು ಆಸ್ಪತ್ರೆಗೆ ತರಾತುರಿಯಲ್ಲಿ ಭೇಟಿ ನೀಡಬೇಕಾದ ಸನ್ನಿವೇಶವನ್ನು ಎದುರಿಸಲು ಮುಂಚಿತವಾಗಿಯೇ ಯೋಜನೆ ರೂಪಿಸಿಕೊಂಡಿರಿ.

1.   ಆಂಬುಲೆನ್ಸ್ ಸೇವೆಗಳು, ನಿಮ್ಮ ಇಬ್ಬರು ಮೂವರು ಸ್ನೇಹಿತರು ಮತ್ತು ಹತ್ತಿರದ ಕುಟುಂಬ ಸದಸ್ಯರು ಇವರ ದೂರವಾಣಿ ಸಂಖ್ಯೆಯನ್ನು ಬಳಿಯಲ್ಲೇ ಇಟ್ಟುಕೊಂಡಿರಿ. ಅಗತ್ಯವಿದ್ದರೆ ಕೂಡಲೇ ನೆರವು ಬೇಕು ಎಂದು ಅವರಿಗೆ ಕರೆ ಮಾಡಿ.

2.   ಹೆರಿಗೆಯ ನಂತರದ ವೈದ್ಯಕೀಯ ವಿವರ ಇರುವ ಕಾರ್ಡಿನ ಸ್ಕ್ಯಾನ್ ಆಗಿರುವ ಪ್ರತಿಯನ್ನು ಕಳಿಸಿ, ಅಸ್ಪತ್ರೆಯ ಮತ್ತು ವೈದ್ಯರ ದೂರವಾಣಿ ಸಂಖ್ಯೆಯನ್ನು ನಿಮ್ಮ ಹತ್ತಿರದ ಸ್ನೇಹಿತರೊಡನೆ ಮತ್ತು ಕುಟುಂಬದವರೊಡನೆ ಹಂಚಿಕೊಳ್ಳಿ . ಆಗ ಅಗತ್ಯ ಬಿದ್ದರೆ ಅವರು ಆಸ್ಪತ್ರೆಗೆ ಬಂದು ನಿಮ್ಮೊಡನೆ ಇರುತ್ತಾರೆ. ಕಫ್ರ್ಯೂ ಅಥವಾ ಲಾಕ್ ಡೌನ್ ಇದ್ದರೆ ಅವರು ಈ ಕಾರ್ಡಿನ ಪ್ರತಿಯನ್ನು ಪೊಲೀಸರಿಗೆ ತೋರಿಸಬೇಕಾಗುತ್ತದೆ. 

3.   ಮಗು ಹುಟ್ಟಿದ ಕೂಡಲೇ ಶಿಶು ವೈದ್ಯರ ದೂರವಾಣಿ ಸಂಖ್ಯೆಯನ್ನು ನಿಮ್ಮ ಬಳಿ ಇಟ್ಟುಕೊಂಡು, ಲಸಿಕೆಗಳನ್ನು ಹಾಕಲು ಏನು ಮಾಡಬೇಕು ಎಂದು ತಿಳಿದುಕೊಳ್ಳಿ.

C. ಆತಂಕಕಾರಿ ಆಲೋಚನೆಗಳನ್ನು ಕಡಿಮೆ ಮಾಡುವುದು

ಚಿಂತೆ ಕಡಿಮೆ ಮಾಡಲು ನೀವು ಏನು ಮಾಡಬಹುದು ?

•   ನಿಮ್ಮ ಮುಖ್ಯವಾದ ಚಿಂತೆ ಏನು ಎಂದು ಹೇಳಿ. ಇದರಿಂದ ನೀವು ಇತರ ಅನೇಕ ವಿಷಯಗಳ ಬಗ್ಗೆ ಚಿಂತಿತರಾಗುವುದನ್ನು ತಪ್ಪಿಸಬಹುದು. ಅದು ಹೆರಿಗೆಯನ್ನು ಕುರಿತದ್ದೇ ? ಮಗುವಿನ ಆರೋಗ್ಯದ ಬಗ್ಗೆಯೇ ? ಲಾಕ್ ಡೌನ್ ವೇಳೆ ಮನೆಯ ದಿನಸಿ ತರಲು ಹೋದ ನಿಮ್ಮ ಪತಿ ಮನೆಗೆ ಹೇಗೆ ಹಿಂದಿರುಗುತ್ತಾರೆ ಎನ್ನುವ ಯೋಚನೆಯೇ ?

•   ಕೆಲವೊಮ್ಮೆ ನಮ್ಮ ಚಿಂತೆಗಳನ್ನು ಮುಕ್ತವಾಗಿ ಹೇಳುವುದರಿಂದ ಕೆಲವು ಚಿಂತೆಗಳು ಅನಗತ್ಯವಾದದ್ದು ಎಂದು ತಿಳಿಯಲು ಸಾಧ್ಯವಾಗುತ್ತದೆ. 

•   ಸಾಮಾಜಿಕ ಮಾಧ್ಯಮಗಳಿಂದ, ಬ್ಲಾಗ್‍ಗಳಿಂದ, ಚರ್ಚೆಯ ಗುಂಪುಗಳಿಂದ ದೂರ ಉಳಿಯುವ ಮೂಲಕ , ಚಿಂತೆಗೆ ಮತ್ತಷ್ಟು ಪುಷ್ಟಿ ನೀಡುವುದನ್ನು ತಪ್ಪಿಸಿ. ಅಥವಾ ಈಗಾಗಲೆ ಉರಿಯುತ್ತಿರುವ ಬೆಂಕಿಗೆ ಪೆಟ್ರೊಲ್ ಸುರಿಯದಿರಿ.

•   ಈ ಸನ್ನಿವೇಶದಲ್ಲಿ ನಾನು ಎಲ್ಲ ಆಯ್ಕೆಗಳನ್ನೂ ಗಮನಿಸಿದ್ದೇನೆಯೇ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ.

ಮಾಡಬೇಕಾದ ಸಕಾರಾತ್ಮಕ ಕೆಲಸಗಳು :

•   ನಿಮ್ಮ ಚಿಂತೆಯನ್ನು ಕುರಿತೇ ಅಲ್ಲ, ಯಾರಾದರೂ ಒಬ್ಬರೊಡನೆ ಸುಮ್ಮನೆ ಮಾತನಾಡಿ.

•   ನೀವು ಇಷ್ಟಪಡುವ ಚಟುವಟಿಕೆಯಲ್ಲಿ ತೊಡಗಿ ಅದರಲ್ಲೇ ತಲ್ಲೀನರಾಗಿ. ಓದುವುದು, ಸಂಗೀತ ಕೇಳುವುದು,  ಒಗಟು ಬಿಡಿಸುವುದು, ವಾಕ್ ಹೋಗುವುದು, ನಿಮ್ಮ ಸುತ್ತಲಿನ ಮಕ್ಕಳೊಡನೆ ಆಟ ಆಡುವುದು, ಹೊಸ ಅಡುಗೆ ಮಾಡುವುದು, ಕಪಾಟುಗಳನ್ನು ಶುಚಿಗೊಳಿಸುವುದು, ಕಸೂತಿ ಮಾಡಲು ಯತ್ನಿಸುವುದು, ಸ್ಫೂರ್ತಿ ನೀಡುವ ಮಾತುಗಳನ್ನು ಬರೆದು ಪೋಸ್ಟರ್ ಮಾಡುವುದು, ದಿನಚರಿ ಅಥವಾ ಬ್ಲಾಗ್ ಬರೆಯುವುದು, ಇತ್ಯಾದಿ.

•   ನಿಮಗೆ ಅನುಕೂಲಕರವಾದ ಆರಾಮವಾದ ಸನ್ನಿವೇಶ ಸೃಷ್ಟಿಮಾಡಲು ದಾರಿಗಳನ್ನು ಹುಡುಕಿ- ಸ್ಪೂರ್ತಿ ನೀಡುವ ಉಪನ್ಯಾಸ, ಮಧುರ ಸಂಗೀತ, ಶ್ಲೋಕ ಹೇಳಿಕೊಳ್ಳುವುದು ಆದರ್ಶ ನೀತಿ ಇರುವ ಪುಸ್ತಕ ಓದುವುದು ಇತ್ಯಾದಿ.

•   ಕೃತಜ್ಞತೆಯನ್ನು ಸೂಚಿಸುವ ಪುಸ್ತಕವನ್ನು ಬರೆಯಿರಿ, ನೀವು ಯಾರು ಯಾರಿಗೆ ಕೃತಜ್ಞತೆ, ಧನ್ಯವಾದ ಸಲ್ಲಿಸಬೇಕೋ ಎಲ್ಲರ ಹೆಸರನ್ನು ಪಟ್ಟಿ ಮಾಡಿ.

D. ವಿರಮಿಸುವುದು ಮತ್ತು ಗಮನ ಇಡುವುದು :

ವಿಶ್ರಾಂತಿ ಪಡೆಯುವ ಮಾರ್ಗಗಳನ್ನು ಕಂಡುಕೊಳ್ಳಿ. ಯೋಗ, ಧ್ಯಾನ, ದೀರ್ಘ ಉಸಿರಾಟ, ಗಮನ ಇಡುವುದು. ಇದಕ್ಕೆ ನಿಮಗೆ ಯಾವುದೇ ಉಪಕರಣಗಳು ಬೇಕಿಲ್ಲ. ಯಾವುದೇ ಅಡೆತಡೆ ಇಲ್ಲದೆ, ಎಲ್ಲವೂ ಸೂಕ್ತವಾಗಿರುವ ಸಮಯ ಅಥವಾ ಅವಕಾಶಕ್ಕಾಗಿ ಪ್ರಯತ್ನಿಸಬೇಡಿ. 

ವಿಶ್ರಾಂತಿಗಾಗಿ ಕೆಲವು ಸರಳ ವ್ಯಾಯಾಮಗಳು :

•   ಗಮನ ಕೇಂದ್ರೀಕರಿಸಿ ಉಸಿರಾಡುವುದು : ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಕುರ್ಚಿ ಅಥವಾ ಹಾಸಿಗೆಯ ಮೇಲೆ ವಿರಮಿಸಿ. ನಿಮ್ಮ ಪಾದ ನೆಲದ ಮೇಲಿರುವಂತೆ ನೋಡಿಕೊಳ್ಳಿ. ನಿಮ್ಮ ಉಸಿರಾಟವನ್ನು ಗಮನಿಸಿ. ಒಳಗೆಳೆದುಕೊಳ್ಳುವಾಗ ಮತ್ತು ಹೊರಗೆ ಬಿಡುವಾಗ ನಿಮ್ಮ ಉಸಿರಾಟವನ್ನು ಗಮನಿಸಿ. ನಿಮ್ಮ ಆಲೋಚನೆಗಳು ಅತ್ತಿತ್ತ ಹರಿದಾಡುತ್ತಿರುವುದು ಗಮನಕ್ಕೆ ಬಂದರೆ ಅವುಗಳನ್ನು ನಿಮ್ಮ ಉಸಿರಾಟದೊಳಗೆ ಸೆಳೆದುಕೊಳ್ಳಿ. ನಿಮ್ಮ ಸುತ್ತ ಏನಾದರೂ ಸದ್ದು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವಂತಿದ್ದರೆ ( ಕಾಲಿಂಗ್ ಬೆಲ್, ಹಕ್ಕಿಯ ಚಿಲಿಪಿಲಿ ಸದ್ದು, ವಾಹನ ಸಂಚಾರದ ಸದ್ದು ಇತ್ಯಾದಿ) ಸದ್ದನ್ನು ಗಮನಿಸಿ ಆದರೆ ನಿಮ್ಮ ಗಮನವನ್ನು ಉಸಿರಾಟದತ್ತ ತನ್ನಿ. ಇದನ್ನು ನೀವು ಹತ್ತು ಬಾರಿ ಉಸಿರಾಡುವವರೆಗೆ ಮಾಡಹುದು. ಅಥವಾ ಒಂದು ನಿಮಿಷ, ಮೂರು ನಿಮಿಷ, ಐದು ನಿಮಿಷ ಮಾಡಬಹುದು. ಮೆಲ್ಲನೆ ನಿಮ್ಮ ಕಣ್ಣು ತೆರೆಯಿರಿ.

•   ಸತತ ಉಸಿರಾಟ : 1-2-3-4 ಎಣಿಸಿಕೊಂಡು ಉಸಿರು ಎಳೆದುಕೊಳ್ಳಿ. ನಂತರ 1-2-3-4 ಎಣಿಸಿಕೊಂಡು ಉಸಿರು ಹಿಡಿಯಿರಿ. ಮತ್ತೆ 1-2-3-4 ಎಣಿಸಿಕೊಂಡು ಉಸಿರು ಬಿಡಿ. ಇದನ್ನು ಐದು ಬಾರಿ ಮಾಡಿ ಅಥವಾ ನಿಮಗೆ ಶಾಂತವಾಗುವವರೆಗೂ ಮುಂದುವರೆಸಿ.

ಹೆರಿಗೆಯ ಮುನ್ನ ಮತ್ತು ಹೆರಿಗೆಯ ನಂತರ ಮಹಿಳೆಯರಿಗೆ ನೆರವಾಗಲು ಕುಟುಂಬದ ಸದಸ್ಯರು ಏನು ಮಾಡಬಹುದು ?

1.   ಅತಿ ಹೆಚ್ಚು ಆತಂಕ ಅಥವಾ ಮಾನಸಿಕ ಯಾತನೆಯ ಲಕ್ಷಣಗಳ ಬಗ್ಗೆ ತಿಳಿದುಕೊಂಡಿರಿ.

2.   ಮಹಿಳೆಯ ಚಿಂತೆಗಳನ್ನು ಅಲ್ಲಗಳೆಯಬೇಡಿ – ಈ ರೀತಿ ಭಾವಿಸುವುದು ಸ್ವಾಭಾವಿಕ ಎಂದು ಆಕೆಗೆ ಮನದಟ್ಟು ಮಾಡಿ.

3.   ಆಕೆಯ ಕೆಲವು ಚಿಂತೆಗಳನ್ನು ನಿವಾರಿಸಲು ಯತ್ನಿಸಿ, ಆಕೆ ತನ್ನ ಚಿಂತೆಗಳ್ನು ಕುರಿತು ತನಗೆ ಆರೋಗ್ಯ ಸೇವೆ ಒದಗಿಸುವವರೊಡನೆ ಮಾತನಾಡುವಂತೆ ಪ್ರೇರೇಪಿಸುವ ಮೂಲಕ ತನ್ನ ಮೇಲೆ ಒತ್ತಡ ಹೆಚ್ಚಿಸಿಕೊಳ್ಳುವುದನ್ನು ತಪ್ಪಿಸಿ.

4.   ಆಕೆ ತನ್ನ ನಿತ್ಯ ಚಟುವಟಿಕೆಗಳನ್ನು ಅನುಸರಿಸುವಂತೆ ಎಚ್ಚರವಹಿಸಿ ಮತ್ತು ಆಕೆಯೊಡನೆ ಮಾತನಾಡುತ್ತಿರಿ.

5.   ನೀವು ಅವರೊಡನೆ ಸೇರಿ ಮಾಡಬಹುದಾದ ಚಟುವಟಿಕೆಯನ್ನು ಕಂಡುಹಿಡಿಯಿರಿ- ಆಟ ಆಡುವುದು, ಕಸೂತಿ ಮಾಡುವುದು, ಕಥೆ ಹೇಳುವುದು ಇತ್ಯಾದಿ.

6.   ಅವರ ಬಳಿ ಆಕೆಯ ವೈದ್ಯಕೀಯ ವರದಿಗಳು, ಆಸ್ಪತ್ರೆಯ ಕಾರ್ಡ್, ಮಗುವಿನ ಕಾರ್ಡ್ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಹತ್ತಿರ ಅವೆಲ್ಲವೂ ಇದೆ ಎನ್ನುವುದನ್ನು ಆಕೆಗೆ ಖಚಿತಪಡಿಸಿ. ಆಕೆ ನೋವು ಹೆಚ್ಚಾದರೆ, ಪ್ರಸವ ವೇದನೆ ಹೆಚ್ಚಾದರೆ, ರಕ್ತಸ್ರಾವವಾದರೆ, ಹೆರಿಗೆಯ ಸಮಯ ಎದುರಾದರೆ ಏನು ಮಾಡಬೇಕು ಎನ್ನುವುದನ್ನು ನಿಗದಿಪಡಿಸಿಕೊಳ್ಳಿ. ಲಾಕ್ ಡೌನ್ ಮುಂದುವರೆದರೆ ಮಗುವಿನ ಆರೈಕೆಗಾಗಿ ಏನು ಮಾಡಬಹುದು ಎಂದು ಯೋಜನೆ ಸಿದ್ಧಪಡಿಸಿಕೊಳ್ಳಿ.

7.   ವಿಶ್ರಾಂತಿ ಪಡೆಯುವ, ವಿರಮಿಸುವ ಸರಳ ವಿಧಾನಗಳನ್ನು ಆಕೆಗೆ ಹೇಳಿಕೊಡಿ ನೀವೂ ಅವರೊಡನೆ ಸೇರಿ ಅದನ್ನು ಅನುಸರಿಸಿ.

8.   ನಿಮಗೆ ಆತಂಕ ಉಂಟಾದರೆ ಅದರ ಬಗ್ಗೆ ಮತ್ತೊಬ್ಬರೊಡನೆ ಮಾತನಾಡಿ, ಆಕೆಯ ಆತಂಕ ಹೆಚ್ಚಿಸಬೇಡಿ.

9.   ನವಜಾತ ಶಿಶು ಇರುವ ತಾಯಿ ಚೆನ್ನಾಗಿ ನಿದ್ರೆ ಮಾಡುವಂತೆ ನೋಡಿಕೊಳ್ಳಿ, ಮಗುವಿನ ಆರೈಕೆಗೆ ನೆರವಾಗಿ. ಮಗುವಿಗಾಗಿ ಹಾಡು ಹೇಳಲು ಆಕೆಯನ್ನು ಪ್ರೋತ್ಸಾಹಿಸಿ, ಮಗುವಿನೊಡನೆ ಆಟವಾಡಲು ಹುರಿದುಂಬಿಸಿ. ಮೊಬೈಲ್, ಟಿವಿ ಮುಂತಾದ ಪರದೆ ವೀಕ್ಷಣೆಯ ಸಮಯವನ್ನು ಕಡಿಮೆ ಮಾಡಿ.

10.   ಲಾಕ್ ಡೌನ್ ಅಥವಾ ಸಾಮಾಜಿಕ ಪ್ರತ್ಯೇಕೀಕರಣದ ಕಾರಣ, ಮಕ್ಕಳ ಜನನಕ್ಕೆ ಸಂಬಂಧಿಸಿದ ಕೆಲವು ಆಚರಣೆಗಳು ಈ ಸಂದರ್ಭದಲ್ಲಿ ಸಾಧ್ಯವಾಗದೆ ಇರಬಹುದು. ಮನೆಯಲ್ಲೇ ಸರಳವಾಗಿ ಆಚರಿಸಬಹುದಾದ ಸರಳ ವಿಧಾನಗಳ ಬಗ್ಗೆ ಯೋಚಿಸಿ. ಮಗುವಿನ ಮೊದಲ ತಿಂಗಳು ಪೂರೈಸಿದಾಗ ನೆನಪಿನ ಪುಸ್ತಕ ಬರೆಯುವುದು, ಸ್ನೇಹಿತರಿಂದ ಸಂದೇಶಗಳನ್ನು ಬರೆಯುವುದು, ಅಜ್ಜಿ ತಾತ ಮತ್ತು ಸಂಬಂಧಿಕರ ಸಂದೇಶಗಳನ್ನು ದಾಖಲಿಸುವುದು, ಹಾಡುಗಳನ್ನು ರೆಕಾರ್ಡ್ ಮಾಡುವುದು, ಲಾಲಿ ಹಾಡುಗಳನ್ನು ರೆಕಾರ್ಡ್ ಮಾಡುವುದು, ಸಂದೇಶಗಳನ್ನು ರೆಕಾರ್ಡ್ ಮಾಡುವುದು ಮತ್ತು ಇವೆಲ್ಲವನ್ನೂ ಮಗುವಿನ ತಾಯಿಗೆ ಮತ್ತು ಮಗುವಿಗೆ ಕೇಳಿಸುವುದು ಇತ್ಯಾದಿ. ಈ ಸಣ್ಣ ಪುಟ್ಟ ಚಟುವಟಿಕೆಗಳು ಮಗುವಿನ ತಾಯಿಗೆ, ತನ್ನ ಪತಿ ಅಥವಾ ತಂದೆ ತಾಯಿ ದೂರ ಇದ್ದರೂ, ಸಾಂತ್ವನ, ಸಮಾಧಾನ ನೀಡುತ್ತವೆ.

ಮೂಲಗಳು :

  • https://www.mohfw.gov.in/
  • https://www.who.int/news-room/q-a-detail/q-a-on-covid-19-pregnancy-childbirth-and-breastfeeding 
  • https://www.rcog.org.uk/en/guidelines-research-services/guidelines/coronavirus-pregnancy/covid- 19-virus-infection-and-pregnancy/ 
  • https://ranzcog.edu.au/statements-guidelines/covid-19-statement 

ಟಿಪ್ಪಣಿ :

ಇದು ಶೈಕ್ಷಣಿಕ ಮಾಹಿತಿಯಾಗಿದೆಯೇ ಹೊರತು ವೈದ್ಯಕೀಯ ಸಲಹೆ ಅಲ್ಲ. ನಿಮಗೆ ಸಹಾಯ ಬೇಕಾದರೆ ನಿಮ್ಮ ವೈದ್ಯರನ್ನೋ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನೋ ಸಂಪರ್ಕಿಸಿ.

ಈ ಮಾಹಿತಿಯನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ ಬೆಂಗಳೂರು, ಪ್ರಸವ ಪೂರ್ವ ಮಾನಸಿಕ ಆರೋಗ್ಯ ಸೇವಾ ಕೇಂದ್ರದ ವತಿಯಿಂದ ಸಿದ್ಧಪಡಿಸಲಾಗಿದೆ. ಮಾರ್ಚ್ 27 2020 

NIMHANS Perinatal Mental Health Helpline - 8105711277

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org