ನಾನು ಮಾನಸಿಕ ಕಾಯಿಲೆಯನ್ನು ಹೊಂದಿದ್ದೇನೆ

ತಾಯಿಯಾಗುವ ನಿರ್ಧಾರವು ಒಬ್ಬ ಮಹಿಳೆಯ ಜೀವನದ ಪ್ರಮುಖವಾದ ನಿರ್ಧಾರವಾಗಿರುತ್ತದೆ. ಒಂದು ವೇಳೆ ಮಹಿಳೆಗೆ ಮಾನಸಿಕ ಕಾಯಿಲೆಯಿದ್ದಲ್ಲಿ ಅಥವಾ ಈ ಹಿಂದೆ ಮಾನಸಿಕ ಕಾಯಿಲೆಯಿಂದ ಬಳಲಿದ್ದರೆ, ಈ ನಿರ್ಧಾರವು ಇನ್ನೂ ಹೆಚ್ಚು ಗಮನಾರ್ಹವಾಗುತ್ತದೆ. ಒಂದು ವೇಳೆ ನಿಮಗೆ ಮಾನಸಿಕ ಕಾಯಿಲೆಯಿದ್ದಲ್ಲಿ ಅಥವಾ ಈ ಹಿಂದೆ ಮಾನಸಿಕ ಕಾಯಿಲೆಯಿಂದ ಬಳಲಿದ್ದರೆ, ಹಲವಾರು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಮಗುವಿನ ಬಗ್ಗೆ ಯೋಚಿಸುವ ಮೊದಲು ಒಮ್ಮೆ ಮಾನಸಿಕ ತಜ್ಞರನ್ನು ಭೇಟಿಯಾಗಿ.
ನಿಮ್ಮ ಕುಟುಂಬದ ಸದಸ್ಯರು ಅಥವಾ ನಿಮ್ಮ ಸಂಗಾತಿಯು ಈ ಚರ್ಚೆಯಲ್ಲಿ ಭಾಗಿಯಾದರೆ ಇನ್ನೂ ಒಳ್ಳೆಯದು. ಯಾಕೆಂದರೆ, ಕೆಲವೊಮ್ಮೆ ಇದರಿಂದ ದೊರೆಯುವ ಮಾಹಿತಿಯಿಂದ ನಿಮಗೆ ಬೇಸರವಾಗಬಹುದು.
ನೀವು ತಜ್ಞರೊಂದಿಗೆ ಚರ್ಚಿಸಬೇಕಾದ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ:
  • ಈ ಹಿಂದೆ ನೀವು ಮಾನಸಿಕ ಕಾಯಿಲೆಯನ್ನು ಹೊಂದಿದ್ದರೆ, ಗರ್ಭಧಾರಣೆಯ ಸಮಯದಲ್ಲಿ ಮತ್ತೆ ಅಸ್ವಸ್ಥರಾಗುವ ಸಂಭವವಿರುತ್ತದೆಯೇ?  ಗರ್ಭಧಾರಣೆಯು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ? ಹಿಂದೆ ನೀವು ಔಷಧಗಳನ್ನು ತೆಗೆದುಕೊಂದಿದ್ದರೆ, ಅದು ಭ್ರೂಣದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆಯೇ?
  • ನೀವು ಈಗಲೂ ಔಷಧವನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ಅದು ಮಗುವಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ? ಗಂಭಿರವಾದ ಪರಿಣಾಮವನ್ನು ಹೊಂದಿರುತ್ತದೆಯೇ, ಇದಕ್ಕೆ ಯಾವುದಾದರೂ ಪರ್ಯಾಯ ಔಷಧಗಳಿವೆಯೇ ಅಥವಾ ನೀವು ಔಷಧಗಳನ್ನು ಬಳಸದೇ ಇರಬಹುದೇ?
  • ಔಷಧದಿಂದ ಸ್ತನ್ಯಪಾನದ ಮೇಲೆ ಯಾವ ರೀತಿಯ ಪರಿಣಾಮವುಂಟಾಗುತ್ತದೆ? ಮಗುವಿನ ಆರೋಗ್ಯದ ಮೇಲೆ ಏನಾದರೂ ಪರಿಣಾಮವುಂಟಾಗುತ್ತದೆಯೇ?
  • ಮಗುವೂ ಮಾನಸಿಕ ಖಾಯಿಲೆಗೆ ತುತ್ತಾಗಬಹುದೇ?
  • ಮಗುವಿನ ಜನನದ ನಂತರ ಏನಾದರೂ ತೊಂದರೆಯಾಗುತ್ತದೆಯೇ? ಏನಾದರೂ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ?
ನಿಮ್ಮ ಪ್ರಸೂತಿತಜ್ಞರಲ್ಲಿ ಚರ್ಚಿಸಬೇಕಾದ ಅಗತ್ಯವಾದ ಅಂಶಗಳು ಯಾವವು?
ಸರಿಯಾಗಿ ನಿರ್ವಹಿಸಿದರೆ, ಮಾನಸಿಕ ಕಾಯಿಲೆಯನ್ನು ಹೊಂದಿರುವ ಮಹಿಳೆಯರಲ್ಲಿ ಗರ್ಭಧಾರಣೆಯು ಆರಾಮದಾಯಕವಾಗುತ್ತದೆ. ಮಾನಸಿಕ ತಜ್ಞರು ನಿಮ್ಮ ಗರ್ಭಧಾರಣೆಯ ಅಪಾಯ ಮತ್ತು ಪ್ರಯೋಜನಗಳನ್ನು ವಿಶ್ಲೇಷಿಸುವುದು ಬಹಳ ಮುಖ್ಯವಾಗಿರುತ್ತದೆ. ನೀವು ಸ್ವಲ್ಪ ಸಮಯದವರೆಗೆ ಆರೋಗ್ಯದಿಂದಿದ್ದರೂ ಸಹ ಮಾನಸಿಕ ಕಾಯಿಲೆಯು ಬಹಳ ಅಪಾಯದಿಂದ ಕೂಡಿರುತ್ತದೆ. ಕೆಲವೊಮ್ಮೆ ನಿಮಗೆ ಮಗುವನ್ನು ಪಡೆಯಲು ಇನ್ನೂ ಕೆಲವು ತಿಂಗಳುಗಳ ಕಾಲ ಕಾಯಲು ತಿಳಿಸಬಹುದು.  
ಏಕೆಂದರೆ, ನೀವು ಆಗಷ್ಟೇ ಮತ್ತೊಮ್ಮೆ ಕಾಯಿಲೆಗೆ ಒಳಗಾಗಿರಬಹುದು ಆಥವಾ ನಿಮ್ಮ ಸಮಸ್ಯೆಯು ಮರುಕಳಿಸುತ್ತಿರಬಹುದು. ಪ್ರತಿಯೊಂದು ಮಾನಸಿಕ ಕಾಯಿಲೆಯು, ಉದಾಹರಣೆಗೆ, ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೀನಿಯಾ ಮತ್ತು ಉಳಿದವು, ತಮ್ಮತಮ್ಮ ಪ್ರತ್ಯೇಕ ಅಪಾಯದ ಅಂಶಗಳನ್ನು ಹೊಂದಿರುತ್ತವೆ. ಆದ್ದರಿಂದ ಗರ್ಭಧಾರಣೆಗೆ ಯೋಚಿಸುವ ಮೊದಲು ಮನೋವೈದ್ಯರ ಬಳಿ ಚರ್ಚಿಸುವುದು ಒಳ್ಳೆಯದು. 
ಆರೈಕೆ
ನಿಮಗೆ ಮಾನಸಿಕ ಕಾಯಿಲೆಯ ಹಿನ್ನೆಯೆಯಿದ್ದು, ಗರ್ಭಧಾರಣೆಗೆ ಯೋಚಿಸುತ್ತಿದ್ದಲ್ಲಿ, ಆರೈಕೆಯ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು.  ಇದನ್ನು ನಿಮ್ಮ ಮನೋವೈದ್ಯರು ಮತ್ತು ಪ್ರಸೂತಿ ತಜ್ಞರ ಬಳಿ ಚರ್ಚಿಸಿ ನಿರ್ಧರಿಸಬೇಕು. ಇದರಿಂದ ನಿಮ್ಮ ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಅವರು ಆರೈಕೆ ನೀಡುವುದು ಸಾಧ್ಯವಾಗುತ್ತದೆ.
ನಿಮಗೆ, ನಿಮ್ಮ ಸಂಗಾತಿಗೆ ಮತ್ತು ಮನೆಯವರಿಗೆ ಎಚ್ಚರಿಕೆ ವಹಿಸಬೇಕಾದ ಲಕ್ಷಣಗಳ ಕುರಿತು ತಿಳಿಸಲಾಗುತ್ತದೆ. ಒಂದುವೇಳೆ ಸಮಸ್ಯೆಯುಂಟಾದರೆ ಏನು ಮಾಡಬೇಕು ಮತ್ತು ತುರ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತಾರೆ. ಇದರಿಂದ ನಿಮಗೆ ಸಮಸ್ಯೆಯಾದಾಗ ಒಂದು ಪರ್ಯಾಯ ಸಹಾಯ ಮಾರ್ಗವು ದೊರೆಯುತ್ತದೆ. 
ಸಮಸ್ಯೆಗಳಿದ್ದರೂ, ಮಾನಸಿಕ ಖಾಯಿಲೆಯಿರುವವರು ಸುಲಭವಾಗಿ ಗರ್ಭಧಾರಣೆಯ ಅವಧಿಯನ್ನು ದಾಟಿ ಒಳ್ಳೆಯ ತಾಯಂದಿರಾಗುತ್ತಾರೆ. ಆದರೆ ಮುಖ್ಯವಾಗಿ ಅಗತ್ಯ ಮಾಹಿತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರಬೇಕು. ಇದರಿಂದ ಅಕಸ್ಮಾತ್ತಾಗಿ ತೊಂದರೆಯಾದರೆ ಗಾಬರಿಯಾಗುವುದಿಲ್ಲ.  

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org