ಮಗು ಹಾಗೂ ತಾಯಿಯ ಮಾನಸಿಕ ಸ್ವಾಸ್ಥ್ಯ: ಒಂದು ಸಂಭಾಷಣೆ

​“ಕುಟುಂಬದವರ ಮತ್ತು ಪ್ರಸೂತಿ ತಜ್ಞರ ಬೆಂಬಲವು ತಾಯಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.”

ಗರ್ಭಾವಸ್ಥೆಯು ಮಹಿಳೆಯರ ಜೀವನದ ಪ್ರಮುಖ ಘಟ್ಟವಾಗಿದೆ. ಮಹಿಳೆಗೆ ಮಾತ್ರವಲ್ಲ, ಬೆಳವಣಿಗೆಯ ಹಂತದಲ್ಲಿರುವ ಭ್ರೂಣಕ್ಕೂ ಇದು ಪ್ರಮುಖವಾದದ್ದು. ಏಕೆಂದರೆ, ಭ್ರೂಣವು ಮಗುವಾಗಿ ಬೆಳೆಯುವ ಮತ್ತು ಹೆರಿಗೆಯ ನಂತರ ಹಂತಗಳಲ್ಲಿ ಕೆಲವು ಪರಿಣಾಮಗಳಿಗೆ ತಾಯಿಯ ಗರ್ಭಾವಸ್ಥೆಯು ಕಾರಣವಾಗಿರುತ್ತದೆ. ಆದ್ದರಿಂದ ಗರ್ಭಾವಸ್ಥೆಯ  ಈ ಹಂತದಲ್ಲಿ ತಾಯಿಯ ಹಾಗೂ ಮಗುವಿನ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ.

ನಿಮ್ಹಾನ್ಸ್’ನಲ್ಲಿ ಕಾರ್ಯನಿರ್ವಹಿಸುತ್ತಿರುವ ನವಜಾತ ಶಿಶು ತಜ್ಞರು ಹಾಗೂ ಮನೋವೈದ್ಯರಾಗಿರುವ ಡಾ.ಪ್ರಭಾಚಂದ್ರ ಮತ್ತು ಪ್ರಸೂತಿ ತಜ್ಞರಾಗಿರುವ ಡಾ.ಲತಾ ವೆಂಕಟರಾಂರವರ ನಡುವೆ ನಡೆದ ಈ ಸಂಭಾಷಣೆಯು ಗರ್ಭಾವಸ್ಥೆ ಹಾಗೂ ನಂತರದ ದಿನಗಳಲ್ಲಿ ಮಹಿಳೆಯ ಮಾನಸಿಕ ಸ್ವಾಸ್ಥ್ಯದ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರಭಾಚಂದ್ರ: ಒಬ್ಬ ಪ್ರಸೂತಿ ತಜ್ಞರಾಗಿ ನೀವು ಗರ್ಭಿಣಿಯ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಏನು ಹೇಳುತ್ತೀರಿ?

ಲತಾ  ವೆಂಕಟರಾಂ: ಕೇವಲ ಮಹಿಳೆಯದ್ದಷ್ಟೇ ಅಲ್ಲ, ಬೆಳವಣಿಗೆಯ ಹಂತದಲ್ಲಿರುವ ಭ್ರೂಣದ ಹಾಗೂ ನವಜಾತ ಶಿಶುವಿನ ಮಾನಸಿಕ ಸ್ವಾಸ್ಥ್ಯವೂ ಪ್ರಮುಖ ಅಂಶವಾಗಿದೆ. ಬೆಳವಣಿಗೆಯ ಹಂತದಲ್ಲಿರುವ ಅಥವಾ ಜನಿಸಿದ ಶಿಶು ಸ್ವಸ್ಥವಾಗಿರಬೇಕಾದರೆ ತಾಯಿಯ ಮಾನಸಿಕಸ್ವಾಸ್ಥ್ಯ ಉತ್ತಮವಾಗಿರುವುದು ಅತಿಮುಖ್ಯ. ಕೆಲವೊಮ್ಮೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅರಿವಿಗೆ ಬರುವುದೇ ಇಲ್ಲ. ನನ್ನ ಪ್ರಕಾರ ಮಹಿಳೆ ತನ್ನ ಮಾನಸಿಕ ಅಸ್ವಸ್ಥತೆಯನ್ನು ಅಷ್ಟು ಸುಲಭವಾಗಿ ಹೇಳಿಕೊಳ್ಳುವುದಿಲ್ಲ. ಮತ್ತು ಪ್ರಸೂತಿತಜ್ಞರು ತಮ್ಮಕೆಲಸದ ಒತ್ತಡದಿಂದ ಅಥವಾ ಅಜಾಗರೂಕತೆಯಿಂದ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ. ತಾಯಿ ಹಾಗೂ ಮಗು (ಭ್ರೂಣ) ಇಬ್ಬರೂ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.

ತಾಯಿಯಾದವಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ ಅಥವಾ ಅವಳಿಗೇನಾದರೂ ಮಾನಸಿಕ ಸಮಸ್ಯೆಗಳಿದ್ದರೆ; ಅವಧಿಗೆ ಮುನ್ನ ಹೆರಿಗೆಯಾಗುವ ಸಾಧ್ಯತೆಗಳಿರುತ್ತವೆ. ಅಷ್ಟೇ ಅಲ್ಲ, ಜನಿಸಿದ ಮಗುವಿನ ತೂಕ ಕಡಿಮೆಯಾಗುವುದು, ಬೆಳವಣಿಗೆ ಚೆನ್ನಾಗಿ ಆಗದಿರುವುದೇ ಮೊದಲಾದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಶಿಶುವಿನ ತೂಕ ಕಡಿಮೆಯಾಗಿದೆ ಅಂದರೆ, ಅದು ಗರ್ಭದಲ್ಲಿರುವಾಗ ಸರಿಯಾಗಿ ಬೆಳವಣಿಗೆಯಾಗಿಲ್ಲ ಎಂದರ್ಥ. ಮತ್ತು ಅದರ ಪರಿಣಾಮ ಬಹಳ ಕಾಲದವರೆಗೂ ಮಗುವನ್ನು ಬಾಧಿಸುವುದು. ನೀವು ಹೇಳಿದಹಾಗೆ, ಆ ಶಿಶು ಮಧುಮೇಹಿಯಾಗಬಹುದು, ಅಧಿಕ ರಕ್ತದೊತ್ತಡದಿಂದ ಬಳಲಬಹುದು ಮತ್ತು ಮುಂದಿನ ವರ್ಷಗಳಲ್ಲಿ, ನಡುವಯಸ್ಸಿನಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಹಾಗೆಯೇ ಏಕಾಗ್ರತೆಯ ಕೊರತೆ, ಉದ್ವೇಗ, ಸ್ಕೀಝೋಫ್ರೇನಿಯಾದಂತಹ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮತ್ತು ಮಗು ಬೆಳೆದಂತೆಲ್ಲಾ ಆ ಸಮಸ್ಯೆಗಳು ಅಧಿಕವಾಗಲೂಬಹುದು.

ಪಿ ಸಿ : ಹೌದು; ನನಗನ್ನಿಸುತ್ತದೆ, ನಾವು ಮಹಿಳೆಯ ಗರ್ಭಾವಸ್ಥೆ  ಹಾಗೂ ಹೆರಿಗೆಯ ನಂತರದ ದಿನಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮತ್ತು ಉತ್ತಮ ಮಾನಸಿಕ ಸ್ವಾಸ್ಥ್ಯಕ್ಕಾಗಿ ನಮ್ಮ ಸಮಯ, ಹಣ ಹಾಗೂ ಆಲೋಚನೆಗಳನ್ನು ಮೀಸಲಿಡಬೇಕು.

ಎಲ್ ವಿ : ಖಂಡಿತವಾಗಿಯೂ….

ಪಿ ಸಿ : ಪ್ರಸೂತಿ ತಜ್ಞರಾಗಿ, ತಾಯಿಯ ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಗಮನಕ್ಕೆ ಬಂದ ಪ್ರಮುಖ ಅಂಶಗಳು ಯಾವುವು?

ಎಲ್ ವಿ : ಹಲವುಬಾರಿ ಮಹಿಳೆಯರು ತಮಗಿರುವ ಮಾನಸಿಕ ಸಮಸ್ಯೆಗಳನ್ನು ಗುರುತಿಸಿಕೊಂಡಿರುವುದಿಲ್ಲ. ಇದೇ ಅತಿ ದೊಡ್ಡ ಸಮಸ್ಯೆ. ಆದ್ದರಿಂದ ತಜ್ಞವೈದ್ಯರು ಆ ಸಮಸ್ಯೆಗಳನ್ನು ಗುರುತಿಸಲು ಬೇಕಾದ ಅಗತ್ಯ ತರಬೇತಿಯನ್ನು ಪಡೆದಿರಬೇಕು. ನಾನು ಅಂಥವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಶಿಕ್ಷಣದ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಅವರು ಏನನ್ನು ಹೇಳುತ್ತಿದ್ದಾರೆ, ಯಾವ ಸಂದರ್ಭದಲ್ಲಿ ಹೇಳುತ್ತಿದ್ದಾರೆ ಮತ್ತು ಗರ್ಭಾವಸ್ಥೆಯಲ್ಲಿ ಯಾವ ಅಂಶಗಳು ಸಾಮಾನ್ಯವಾಗಿ ಕಂಡುಬರುತ್ತವೆ, ಇತ್ಯಾದಿ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು.

ಗರ್ಭಧಾರಣೆ ಒಂದು ಸ್ವಾಭಾವಿಕ ಪ್ರಕ್ರಿಯೆ. ಪ್ರತಿಯೊಬ್ಬ ಮಹಿಳೆಯೂ ಗರ್ಭ ಧರಿಸಲು ಸಮರ್ಥಳು ಮತ್ತು ಹೆಚ್ಚಿನವರಿಗೆ ಸಹಜ ಹೆರಿಗೆಯೇ ಆಗುತ್ತದೆ ಎಂಬುದು ನನ್ನ ಅನಿಸಿಕೆ. ಆದರೆ ಹೆರಿಗೆ ಕೆಲವೊಮ್ಮೆ ಪ್ರಯಾಸಕರವಾಗಿರುತ್ತದೆ. ಆದ್ದರಿಂದ ಗರ್ಭಾವಸ್ಥೆಯ ಸಮಯದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು, ಉಲ್ಲಾಸದಿಂದ ಇರುವುದು ಅತ್ಯಗತ್ಯ.

ಈ ನಿಟ್ಟಿನಲ್ಲಿ ಮಹಿಳೆಯರಿಗೆ ಅರಿವು ಮೂಡಿಸುವ ಸಾಕಷ್ಟು ಮಾಹಿತಿ ದೊರೆಯುತ್ತವೆ. ಆ ಎಲ್ಲವನ್ನೂ ಪ್ರಯತ್ನಿಸಬೇಕೆಂದು ನಾನು ಹೇಳುವುದಿಲ್ಲ. ಆಯಾ ಮಹಿಳೆಯ ಸನ್ನಿವೇಶ ಮತ್ತು ಸ್ವಭಾವಕ್ಕೆ ತಕ್ಕಂತೆ ಸೂಕ್ತವಾದುದನ್ನು ಪಡೆದು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು; ಮತ್ತು ತಜ್ಞ ವೈದ್ಯರೊಡನೆ ಸಮಾಲೋಚನೆ ನಡೆಸಬೇಕು. ಇದು ಗರ್ಭಿಣಿಯು ತನ್ನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಸಹಕರಿಸುತ್ತದೆ ಎಂದು ನನ್ನ ಅನ್ನಿಸಿಕೆ.

ಗರ್ಭಿಣಿಯಾಗಿರುವ ಸಮಯದಲ್ಲಾದರೂ ಮಹಿಳೆಯರು ತಮ್ಮ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ತಮ್ಮ ಜೀವನಶೈಲಿಯನ್ನು ಬದಲಿಸಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ. ಸಣ್ಣ ಕುಟುಂಬ ಹೊಂದಿರುವವರು, ಕುಟುಂಬದಲ್ಲಿ ಸೂಕ್ತ ತಿಳುವಳಿಕೆ ನೀಡುವಂಥ ಹಿರಿಯರು ಇಲ್ಲದೆ ಇರುವಾಗ, ಅಥವಾ ಹೆರಿಗೆಯ ಬಗ್ಗೆ ತಿಳಿಹೇಳುವ ಆಪ್ತರು ಯಾರೂ ಇಲ್ಲದೇ ಇರುವ ಸಂದರ್ಭದಲ್ಲಿ ಮಹಿಳೆಯರ ಮಾನಸಿಕ ಒತ್ತಡ ಅಧಿಕವಾಗಿರುತ್ತದೆ.

ನಮ್ಮ ಈ ಸಂಭಾಷಣೆ ಸಂತಸ ನೀಡುತ್ತಿದೆ. ಮನಶಾಸ್ತ್ರಜ್ಞರ ಮತ್ತು ಪ್ರಸೂತಿತಜ್ಞರ ಅಭಿಪ್ರಾಯಗಳನ್ನೊಳಗೊಂಡ ಈ ಸಂಭಾಷಣೆಯು ಗರ್ಭಿಣಿಯರಿಗೆ ಮತ್ತು ತಾಯಂದಿರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ ಅಂದುಕೊಳ್ಳುತ್ತೇನೆ.

ಕುಟುಂಬದ ಸದಸ್ಯರು ಮತ್ತು ಪತಿಯ ಪಾತ್ರದ ಮಹತ್ವದ ಕುರಿತು:

ಪಿ ಸಿ : ಗರ್ಭಿಣಿ ಮಹಿಳೆಯ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿಡುವ ನಿಟ್ಟಿನಲ್ಲಿ ವೈದ್ಯರು ಮತ್ತು ಕುಟುಂಬದ ಸದಸ್ಯರು ಯಾವ ರೀತಿಯಲ್ಲಿ ಸಹಕರಿಸಬೇಕು ಎನ್ನುವ ಬಗ್ಗೆ ಕೆಲವು ಸಲಹೆಗಳನ್ನು ನೀಡಬಲ್ಲಿರಾ? ಈ ಕುರಿತು ಅವರು ಸಾಕಷ್ಟು ಕಾಳಜಿ ವಹಿಸುತ್ತಿದ್ದರೂ, ಕೆಲವು ಬಾರಿ ಮನಸ್ಸು ಸಕಾರಾತ್ಮಕತೆಗಿಂತ ಹೆಚ್ಚು ನಕಾರಾತ್ಮಕತೆಯ ಕಡೆಗೇ ಹೆಚ್ಚು ವಾಲುತ್ತದೆ. ನೀವು ಗರ್ಭಿಣಿಯರಲ್ಲಿ ಇದನ್ನು ಗಮನಿಸಿಯೇ ಇರುತ್ತೀರಿ. ನಿಮ್ಮಲ್ಲಿ ಚಿಕಿತ್ಸೆಗೆ ಬರುವ ಅಂತಹಾ ಮಹಿಳೆಯರಿಗೆ ನೀವು ಯಾವ ಸಲಹೆ ನೀಡುತ್ತೀರಿ?

ಎಲ್ ವಿ : ನನ್ನ ಪ್ರಕಾರ ವೈದ್ಯರು, ಕುಟುಂಬವರ್ಗದವರು - ತಾಯಿ, ಅತ್ತೆ ಎಲ್ಲರೂ ಆಕೆಯನ್ನು ಸಂತುಷ್ಟಳಾಗಿರುವಂತೆ ನೊಡಿಕೊಳ್ಳಬೇಕು. ಗರ್ಭಧಾರಣೆಯು ಪ್ರತಿಯೊಬ್ಬ ಮಹಿಳೆಯಲ್ಲೂ ಕಂಡುಬರುವ ಸ್ವಾಭಾವಿಕ ಪ್ರಕ್ರಿಯೆ. ಅದರಿಂದ ಏನೂ ತೊದರೆಗಳಾಗುವುದಿಲ್ಲ ಎಂದು ತಿಳಿಹೇಳಬೇಕು. ಗರ್ಭಿಣಿಯು ತನ್ನ ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳುವುದು ಅತಿಮುಖ್ಯ. ನಾನು ಈಗಾಗಲೇ ಹೇಳಿದಂತೆ, ಈ ಸಮಯದಲ್ಲಿ ಜೀವನಶೈಲಿಯಲ್ಲಿ ಬದಲಾವಣೆಯ ಅಗತ್ಯವಿರುತ್ತದೆ. ಅತಿಯಾಗಿ ಕೆಲಸ ಮಾಡುವುದು ಒಳ್ಳೆಯದಲ್ಲ. ಹಾಗೆಯೇ, ಕೆಲಸ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದೂ ಸರಿಯಲ್ಲ. ಹೆರಿಗೆ ಹಾಗೂ ಮಗುವಿನ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ವಿಭಿನ್ನರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಒತ್ತಡಗಳನ್ನು ಕಡಿಮೆಮಾಡಿಕೊಳ್ಳಲು ಪ್ರಯತ್ನಿಸಬೇಕು.

ಗರ್ಭಾವಸ್ಥೆಯಲ್ಲಿ ಸೃಜನಶೀಲ ಚಿಂತನೆಗಳು ಮೂಡುತ್ತವೆ. ಈ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ತಮ್ಮ ಆನಂದವನ್ನು ತಮ್ಮಲ್ಲಿಯೇ ಹುಡುಕಿಕೊಳ್ಳಲು ಗರ್ಭಿಣಿಯು ಪ್ರಯತ್ನಿಸಬೇಕು. ಹಾಗೆಯೇ, ಯೋಗಾಭ್ಯಾಸ ಮಾಡುವುದು ಕೂಡಾ ಒಳ್ಳೆಯದು. ಇದು ಗರ್ಭಿಣಿ ಮಹಿಳೆಯ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಯೋಗ ಹಾಗು ಗರ್ಭಾವಸ್ಥೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಧ್ಯಯನಗಳು ನಡೆದಿವೆ. ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸದ ಕೊಡುಗೆ ಅಪಾರ ಎಂಬುದು ಈವರೆಗಿನ ನಿದರ್ಶನಗಳಿಂದ ಸಾಬೀತಾಗಿದೆ. ಯೋಗಾಭ್ಯಾಸದಿಂದ ಮಾನಸಿಕ ಒತ್ತಡಗಳು ಕಡಿಮೆಯಾಗುವುದಷ್ಟೇ ಅಲ್ಲದೆ; ಕೆಲವು ದೈಹಿಕ ಸಮಸ್ಯೆಗಳೂ ಶಮನಗೊಳ್ಳುತ್ತದೆ. ಮಾನಸಿಕ ಒತ್ತಡದ ನಿಯಂತ್ರಣದಿಂದ ಹೆರಿಗೆ ಸಂದರ್ಭದಲ್ಲಿ ಉಂಟಾಗಬಹುದಾದ ಕೆಲವು ಸಮಸ್ಯೆಗಳು (ಹೆರಿಗೆನೋವು) ಕಡಿಮೆಯಾಗುತ್ತವೆ ಮತ್ತು ಸಹಜ ಹೆರಿಗೆ (ನಾರ್ಮಲ್ ಡೆಲವರಿ) ಆಗುವ ಸಾಧ್ಯತೆಗಳಿರುತ್ತವೆ.

ಪಿ ಸಿ : ಗರ್ಭಿಣಿಯ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪತಿಯ ಪಾತ್ರದಬಗ್ಗೆ ನಿಮ್ಮ ಅನಿಸಿಕೆ ಏನು? ಏಕೆಂದರೆ ಅವರು ತಮ್ಮ ಪರಿಧಿಯಲ್ಲಿ ಆಲೋಚಿಸುತ್ತಿರುತ್ತಾರೆ. ಅವರಿಗೆ ಮಹಿಳೆಯರ ಸಮಸ್ಯೆಗಳ ಅರಿವು ಇರುವುದಿಲ್ಲ. ಅವರು ಎಲ್ಲವನ್ನೂ ಹಾರ್ಮೋನ್ ಗಳ ಗುಣಲಕ್ಷಣವೆಂದು ಭಾವಿಸುತ್ತಾರೆ. ಆದ್ದರಿಂದ ಆ ಸಂದರ್ಭದಲ್ಲಿ ತಾಯಿಯ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಅವರ ಪಾತ್ರದ ಮಹತ್ವವೇನು?

ಎಲ್ ವಿ : ಗರ್ಭಾವಸ್ಥೆಯಲ್ಲಿ ಸಹಜವಾಗಿಯೇ ಮಾನಸಿಕ ತುಮುಲಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಪತಿಯು ಅರ್ಥಮಾಡಿಕೊಂಡು, ತನ್ನ ಪತ್ನಿಗೆ ಬೆಂಬಲವಾಗಿರಬೇಕು. ಅವಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ತನಗೆ ಅಪಾರವಾದ ಕಾಳಜಿಯಿದೆಯೆಂದು ಆಕೆಗೆ ಮನದಟ್ಟು ಮಾಡಿಸಬೇಕು. ಇದು ಅತಿಮುಖ್ಯ. ಗರ್ಭಿಣಿಯಾದಾಗಿನಿಂದ ಹೆರಿಗೆಯವರೆಗೂ, ಅನಂತರವೂ ಪತಿಯ ಬೆಂಬಲ ಅತ್ಯಗತ್ಯ. ಹೆರಿಗೆಯ ನಂತರದ ಸಮಸ್ಯೆಗಳು ಮತ್ತಷ್ಟು ಭಿನ್ನವಾಗಿರುತ್ತವೆ. ಆ ಸಮಸ್ಯೆಗಳನ್ನು ಎದುರಿಸುವುದು ಒಂದು ಸವಾಲಾಗಿದೆ. ಏಕೆಂದರೆ ನೀವು ತಾಯಿಯ ಜೊತೆಜೊತೆಗೆ, ಹೊಸದಾಗಿ ಸೇರ್ಪಡೆಗೊಂಡ ಆ ಪುಟ್ಟ ಮಗುವಿನ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ (ನಿಮ್ಮ ಸ್ವಂತ ಕೆಲಸಕಾರ್ಯಗಳ ಜೊತೆಗೆ).ಈ ಸಂದರ್ಭದಲ್ಲಿ ಸಾಮಾಜಿಕವಾಗಿ ಹಲವಾರು ಸಮಸ್ಯೆಗಳು ಎದುರಾಗಬಹುದು. ಮತ್ತು ಇರುವ ಸಮಸ್ಯೆಗಳ ಜೊತೆಗೆ ಆಹಾರ ಸೇವನೆಯ ನಿಯಂತ್ರಣ ಮತ್ತು ನಿರ್ಬಂಧ, ನಿದ್ರಾಹೀನತೆ ಮೊದಲಾದ ಇತರ ಸಮಸ್ಯೆಗಳೂ ಸೇರ್ಪಡೆಯಾಗಿರುತ್ತವೆ. ಪತ್ನಿಯ ಜೊತೆಗೆ ನೀವೂ ಸರಿಸಮವಾಗಿ ನಿಂತು ಅವೆಲ್ಲವನ್ನೂ ಎದುರಿಸಬೇಕಾಗುತ್ತದೆ.

ಪಿ ಸಿ : ಈ ಸಂದರ್ಭದಲ್ಲಿ ಪತಿ ಅಥವಾ ಕುಟುಂಬವರ್ಗದವರು ಸೂಕ್ತ ಬೆಂಬಲನೀಡಬೇಕು. ಒಬ್ಬ ತಂದೆಯಾಗಿ ಕೇವಲ ದುಡಿಮೆಯಷ್ಟೇ ಅಲ್ಲ, ತಾಯಿ - ಮಗುವಿನ ಬಗ್ಗೆಯೂ ಸ್ವಲ್ಪಕಾಳಜಿ ವಹಿಸಿ ಎಂದು ನಾವು ಆಗಾಗ್ಗೆ ಹೇಳುತ್ತಿರುತ್ತೇವೆ. ರಾತ್ರಿ ವೇಳೆಯಲ್ಲಿ ಒಂದೆರಡು ಗಂಟೆ ನಿದ್ರಾಭಂಗವಾದರೂ ಸರಿ, ತಾನು ಅನುಸರಿಸಿಕೊಂಡು ಹೋಗಬೇಕು. ಇದರಿಂದ ತಾಯಿಯ ಮೇಲಿನ ಒತ್ತಡ ಸ್ವಲ್ಪಮಟ್ಟಿಗಾದರೂ ಹಗುರವಾಗಿ. ಆಕೆಯ ಮಾನಸಿಕಸ್ವಾಸ್ಥ್ಯ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಅಲ್ಲವೆ?

ಎಲ್ ವಿ : ಹೌದು. ನೀವು ಹೇಳುತ್ತಿರುವುದು ಸರಿಯಾಗಿದೆ.

ಗರ್ಭಾವಸ್ಥೆಯಲ್ಲಿ ಹಾಗೂ ಗರ್ಭಧಾರಣೆಗೆಮುಂಚಿತವಾಗಿ ಕಂಡುಬರುವ ಮಾನಸಿಕ ಸಮಸ್ಯೆಗಳು.

ಪಿ ಸಿ : ಕೆಲವು ಮಹಿಳೆಯರಿಗೆ ಗರ್ಭಧಾರಣೆಗೆ ಮುಂಚಿತವಾಗಿಯೇ ಹಲವಾರು ಮಾನಸಿಕ ಸಮಸ್ಯೆಗಳಿರುತ್ತವೆ. ಉದ್ವೇಗ, ವೈಯಕ್ತಿಕ ಸಮಸ್ಯೆಗಳು, ಒತ್ತಡ ಮುಂತಾದವುಗಳಿಂದ ಮಾನಸಿಕ ಆರೋಗ್ಯ ಹದಗೆಟ್ಟಿರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ, ಚಿಕಿತ್ಸೆಗೆ ಬರುವ ಗರ್ಭಿಣಿಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವಂತೆ ಪ್ರಸೂತಿತಜ್ಞರು ಉತ್ತೇಜಿಸಬೇಕು. ಕೆಲವು ಮಹಿಳೆಯರು ಗರ್ಭಧಾರಣೆಯ ನಂತರ ಹಳೆಯ ಸಮಸ್ಯೆಗಳನ್ನು ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸಿ  ಸುಮ್ಮನಾಗಿಬಿಡುತ್ತಾರೆ. ಅಂತಹ ಮಹಿಳೆಯರಿಗೆ ನಿಮ್ಮ ಸಲಹೆಯೇನು?

ಎಲ್ ವಿ : ಗರ್ಭಧಾರಣೆಗೆ ಮೊದಲು ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದ ಪಕ್ಷದಲ್ಲಿ, ಅಂತಹ ಮಹಿಳೆಯರು ಮನಃಶಾಸ್ತ್ರಜ್ಞರನ್ನು ಕಾಣುವುದು ಅತಿಮುಖ್ಯ.. ಅವರು ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಆಪ್ತಸಮಾಲೋಚಕರೊಂದಿಗೆ ಚರ್ಚಿಸುವುದು ಇನ್ನೂ ಉತ್ತಮ. ಮಾನಸಿಕತ ಜ್ಞರನ್ನು, ಆಪ್ತಸಮಾಲೋಚಕರನ್ನು ಕಾಣುವ ಬಗ್ಗೆ ಅವರಿಗೆ ಕೆಲವು ಪೂರ್ವಾಗ್ರಹಗಳಿರುತ್ತವೆ. ಅದರಿಂದ ಮೊದಲು ಹೊರಗೆ ಬರಬೇಕು. ಹಾಗೂ ಯಾವುದೇ ಹಿಂಜರಿಕೆಯಿಲ್ಲದೆ ಮನಃಶಾಸ್ತ್ರಜ್ಞರ ಸಲಹೆ ಪಡೆಯಬೇಕು.  ಇಲ್ಲದಿದ್ದರೆ ಮುಂದೆ ಗರ್ಭಾವಸ್ಥೆಯ ಸಮಯದಲ್ಲಿ ತೀವ್ರತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪಿ ಸಿ : ಹೌದು. ನೀವು ಈಗಾಗಲೇ ತಿಳಿಸಿದಂತೆ ಹಲವು ಮಹಿಳೆಯರು ಗರ್ಭಿಣಿಯಾದ ನಂತರ ಮಾನಸಿಕ ಸಮಸ್ಯೆಗಳಿಗೆ ಸೇವಿಸುತ್ತಿದ್ದ ಔಷಧಿಗಳನ್ನು ನಿಲ್ಲಿಸಿಬಿಡುತ್ತಾರೆ. ಆ ಔಷಧಗಳು ಗರ್ಭದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಅವರ ಭಯ. ಸರಿಯಾದ ಚಿಕಿತ್ಸೆ ಮತ್ತು ಉಪಚಾರಗಳನ್ನು ನೀಡದೆ ಹೋದರೆ, ಮಾನಸಿಕ ಸಮಸ್ಯೆಗಳು ಇನ್ನೂ ತೀವ್ರವಾದ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲವು ಎಂದು ಅವರಿಗೆ ಅರ್ಥ ಮಾಡಿಸಬೇಕಾಗುತ್ತದೆ. ಹಾಗೆಯೇ, ವೈದ್ಯರಿಂದ ಶಿಫಾರಸು ಮಾಡಲ್ಪಟ್ಟ ಸುರಕ್ಷಿತ ಔಷಧಗಳಿಂದ ಗರ್ಭದ ಮೇಲೆ ಯಾವ ದುಷ್ಪರಿಣಾಮವೂ ಉಂಟಾಗುವುದಿಲ್ಲ ಎಂಬುದನ್ನೂ ಮನದಟ್ಟು ಮಾಡಬೇಕಾಗುತ್ತದೆ.

ಎಲ್ ವಿ : ನೀವು ಅಂತಹ ಮಹಿಳೆಯರಿಗೆ ಸಾಧ್ಯವಾದಷ್ಟೂ ಕಡಿಮೆ ಪ್ರಮಾಣದ, ಆಯಾ ಸಂದರ್ಭಕ್ಕೆ ಸೂಕ್ತವಾದ ಔಷಧವನ್ನು ಸೂಚಿಸಿರುತ್ತೀರಿ  ಅಥವಾ ಮೊದಲು ನೀಡುತ್ತಿದ್ದ ಚಿಕಿತ್ಸೆಗೆ ಪರ್ಯಾಯ ಸೂಚಿಸುತ್ತೀರಿ ಅಲ್ಲವೆ? ಆದ್ದರಿಂದ ಗರ್ಭಿಣಿಯರು ಮಾನಸಿಕ ಸ್ವಾಸ್ಥ್ಯಕ್ಕೆ ಔಷಧವನ್ನು ಸೇವಿಸಲು ಭಯ ಪಡುವ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.

ಪಿ ಸಿ : ಅವರು ತಮಗೇನಾಗುತ್ತಿದೆ, ತಮ್ಮಲ್ಲಿರುವ ಭಯ ಅಥವಾ ಉದ್ವೇಗಕ್ಕೆ ಕಾರಣಗಳೇನು ಎಂಬುದನ್ನು ಮುಕ್ತವಾಗಿ      ಪ್ರಸೂತಿ ತಜ್ಞರೊಂದಿಗೆ ಹೇಳಿಕೊಳ್ಳಬೇಕು. ಪರಿಸ್ಥಿತಿ ಗಂಭೀರವಾಗಿಯೇನೂ ಇಲ್ಲದೆ, ಔಷಧಗಳ ಅಗತ್ಯವಿಲ್ಲ ಎಂದಾದರೆ, ನಾವು ಅದನ್ನು ನಿಲ್ಲಿಸಿ ಸೈಕೋಥೆರಪಿ ಅಥವಾ ಇತರೆ ವಿಧಾನಗಳ ಮೇಲೆ ಗಮನ ಹರಿಸಬಹುದು. ಆದರೆ ಗರ್ಭಿಣಿಗೆ ನಿಜವಾಗಿಯೂ ತೀವ್ರ ಸಮಸ್ಯೆಯಿದ್ದು, ಔಷಧ ತೆಗೆದುಕೊಳ್ಳಲು ಅನಗತ್ಯವಾಗಿ ಭಯಪಡುತ್ತಿದ್ದಾರೆ ಎಂದಾದರೆ, ಅವರಿಗೆ ಸಮಾಧಾನ ಹೇಳಿ ನಿರ್ದಿಷ್ಟ ಸಮಯದವರೆಗೆ ಔಷಧ ಮುಂದುವರೆಸುವಂತೆ ಸೂಚಿಸಬಹುದು.

ಹೆರಿಗೆಯನಂತರ ಮಹಿಳೆಯ ಯೋಗಕ್ಷೇಮ

ಪಿ ಸಿ : ಹೆರಿಗೆಯ ನಂತರದ ಸಮಯವು ಅತ್ಯಂತ ಸಂಕೀರ್ಣವಾದದ್ದು. ಈ ಸಮಯದಲ್ಲಿ ಮಹಿಳೆಯರಲ್ಲಿ ಮಾನಸಿ ಕಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ ಹೆರಿಗೆಯ ನಂತರ ಆಚರಿಸುವ ಕೆಲವು ಸಾಂಪ್ರದಾಯಿಕ ಕಟ್ಟುಪಾಡುಗಳು ಹೆರಿಗೆಯ ನಂತರದ ಮಹಿಳೆಯ ಸೂಕ್ಷ್ಮ ಮನಸ್ಥಿತಿಗೆ ಬಹಳ ಬೇಗ ಘಾಸಿ ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ಓಡಾಟ, ಬೆರೆಯುವಿಕೆ, ಮಾತು, ಚಟುವಟಿಕೆಗಳ ಮೇಲೆ ಹೇರುವ ನಿರ್ಬಂಧ, ಆಹಾರದಲ್ಲಿ ಪಥ್ಯ – ಇವೇ ಮೊದಲಾದವುಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.

ಎಲ್ ವಿ : ಖಂಡಿತವಾಗಿಯೂ ಹೌದು. ಕುಟುಂಬದವರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದು, ಹೆಣ್ಣುಮಗುವೇನಾದರೂ ಜನಿಸಿದರೆ, ಅವರು ತಾಯಿಯ ಮೇಲೆ ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಇದರಿಂದ ಆಕೆಯ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಕ್ರಮೇಣ ಉದ್ವೇಗವೂ ಹೆಚ್ಚಾಗಿ, ಮಾನಸಿಕ ಸ್ವಾಸ್ಥ್ಯ ಹದಗೆಡಲು ಪ್ರಮುಖ ಕಾರಣವಾಗುತ್ತದೆ.  

ಪಿ ಸಿ : ಹೆರಿಗೆಯ ನಂತರ ಅಶಕ್ತಳಾಗಿರುವ ಮಹಿಳೆಯ ಮುಂದೆ “ನಿನ್ನ ಮಗು ಸುಂದರವಾಗಿಲ್ಲ” ಅಥವಾ “ನಿನ್ನಮಗು ತುಂಬಾ ಸಣ್ಣದಾಗಿದೆ” ಎಂದೆಲ್ಲ ಮೂದಲಿಸಿದರೆ, ಇಂತಹ ಹೇಳಿಕೆಗಳು ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಮಾನಸಿಕವಾಗಿ ಕುಗ್ಗಿರುವ, ಒತ್ತಡಕ್ಕೊಳಗಾಗಿರುವ, ತಾವು ತಮ್ಮಕುಟುಂಬದವರ ಮನಸ್ಸಿಗೆ ತೃಪ್ತಿ ನೀಡಿಲ್ಲ ಎಂದು ನೊಂದುಕೊಳ್ಳುವ ಮಹಿಳೆಯರನ್ನು ನಾವು ನೋಡಿದ್ದೇವೆ.

ಸಾಮಾನ್ಯವಾಗಿ ಮಹಿಳೆಯರು ಹೆರಿಗೆಯನ್ನು ತಮ್ಮ ತವರುಮನೆಯಲ್ಲಿ ಮಾಡಿಸಿಕೊಳ್ಳುತ್ತಾರೆ. ಆದ್ದರಿಂದ ಬಾಣಂತಿಯು ಕೆಲವು ತಿಂಗಳವರೆಗೆ ಅಲ್ಲಿಯೇ ಇರುತ್ತಾಳೆ. ಈ ಸಂದರ್ಭದಲ್ಲಿ ಕುಟುಂಬದ ಪಾತ್ರವೇನಿರಬೇಕು?

ಎಲ್ ವಿ : ಬಾಣಂತಿಯು ಎಲ್ಲಿಯೇ ಇರಲಿ, ಆಕೆಗೆ ಸೂಕ್ತ ಪೋಷಣೆಯನ್ನು ನೀಡುವುದು ಪ್ರಮುಖ ವಿಷಯ. ಹೆರಿಗೆಯ ನಂತರ ಆಹಾರ ಸೇವನೆಗೆ ಕೆಲವು ನಿಬಂಧನೆಗಳಿವೆ. ಕುಡಿಯುವ ನೀರು, ಪೌಷ್ಟಿಕಾಂಶವಿರುವ ಆಹಾರ ಸೇವನೆ, ಹೊರಗೆ ಹೋಗುವುದು ಇತ್ಯಾದಿಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ಈ ನಿರ್ಬಂಧಗಳೂ ಮಾನಸಿಕ ಸಮಸ್ಯೆಗಳಿಗೆ ಕೊಡುಗೆ ನೀಡುತ್ತವೆ.

ಇಲ್ಲಿ ಇನ್ನೊಂದು ಪ್ರಮುಖ ವಿಷಯವೇನೆಂದರೆ, ತನ್ನ ಮಗುವನ್ನು ಪೋಷಿಸುತ್ತಿರುವ ಆ ಮಹಿಳೆಗೆ ಯಾವ ರೀತಿಯ ಬೆಂಬಲ ಬೆಂಬಲ ನೀಡಬೇಕು ಎನ್ನುವುದು. ಮಹಿಳೆಯು ಮಾನಸಿಕ ಒತ್ತಡಕ್ಕೆ ಒಳಗಾದರೆ ಅಥವಾ ಅನಾರೋಗ್ಯದಿಂದಿದ್ದರೆ; ಬಾಣಂತನದಲ್ಲಿ ಸೂಕ್ತ ಆರೈಕೆ ಮಾಡದಿದ್ದರೆ, ಅದು ಮಗುವಿಗೆ ಮೊಲೆಯುಣಿಸುವುದರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕುಟುಂಬದವರು ಮಹಿಳೆಗೆ ಸೂಕ್ತ ಬೆಂಬಲ ನೀಡಬೇಕು. ಅನಗತ್ಯವಾದ ಆಚರಣೆಗಳನ್ನು ಕೈಬಿಡಬೇಕು. ಧಾರ್ಮಿಕ ಆಚರಣೆಗಳು ಅರ್ಥಗರ್ಭಿತವಾಗಿದ್ದರೆ ಒಳ್ಳೆಯದು. ಆದರೆ ಅದರಿಂದ ಮಹಿಳೆಯು ಒತ್ತಡಕ್ಕೊಳಗಾಗುವಂತಿರಬಾರದು. ಅದು ಅವಳಿಗೂ ಸಂತೋಷ ನೀಡುವಂತಿರಬೇಕು. ಅವಳು ಸಂತೋಷದಿಂದ ಮಾಡಲು ಒಪ್ಪಿಕೊಳ್ಳುವಂತಹ ವಿಷಯಗಳನ್ನು ಪ್ರೋತ್ಸಾಹಿಸಬೇಕು. ಇದರಲ್ಲಿ  ಪತಿಯ ಪಾತ್ರ ಪ್ರಮುಖವಾದದ್ದು. ಗಂಡನಾದವನು ಹೆಂಡತಿ ಮತ್ತು ಮಾವನ ಮನೆಯವರ ನಡುವೆ ಸಿಲುಕಿರುತ್ತಾನೆ ಎಂಬ ವಿಷಯ ನಮಗೆ ಗೊತ್ತಿದೆ. ಆತ ನಡುವೆ ಮಾತನಾಡುವುದು ಸಾಧ್ಯವಾಗದೆ ಹೋಗಬಹುದು. ಆದರೆ ತನ್ನ ಪತ್ನಿ ಮತ್ತು ಮಗುವಿನ ಮಾನಸಿಕ ಆರೋಗ್ಯಕ್ಕಾಗಿ ಹಸ್ತಕ್ಷೇಪ ಮಾಡುವುದು ಮತ್ತು ಆಕೆಯ ಬೆಂಬಲಕ್ಕೆ ನಿಲ್ಲುವುದು ಅತ್ಯಗತ್ಯ ಅನ್ನುವುದು ನನ್ನ ಅಭಿಪ್ರಾಯ.

ಪಿ ಸಿ : ಒಂದು ವೇಳೆ ಮಹಿಳೆಗೇನಾದರೂ ಮಾನಸಿಕ ಸಮಸ್ಯೆಗಳಿದ್ದರೆ ಮಗು ಜನಿಸಿದ ಮೇಲೆ ಎಲ್ಲವೂ ಸರಿಹೋಗುತ್ತದೆ ಎಂದು ಕುಟುಂಬದವರು ಭಾವಿಸುತ್ತಾರೆ. ಆದರೆ ತಾಯ್ತನವನ್ನು ಅನುಭವಿಸಲು ಯಾವುದೇ ಮಹಿಳೆ ಮುಂಚಿತವಾಗಿಯೇ ಸಿದ್ಧಳಾಗಿರಬೇಕೆಂಬುದು ನನ್ನ ಅನಿಸಿಕೆ..ತಾಯಿಯಾಗುವ ಪ್ರಕ್ರಿಯೆ ಕ್ಷಣ ಮಾತ್ರದಲ್ಲಿ ಆಗುವಂಥದ್ದೇನಲ್ಲ. ಯಾರೂ ಹಾಗೆ ಇದ್ದಕ್ಕಿದ್ದಂತೆ ತಾಯ್ತನದ ಭಾವನೆ ಹುಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ತಾಯಂದಿರು, ನಾನು ಮಗುವಿನೊಂದಿಗೆ ಉತ್ತಮ ಬಾಂಧವ್ಯ ಹೊಂದಲಾಗುತ್ತಿಲ್ಲ, ಪ್ರೀತಿಯನ್ನು ಅನುಭವಿಸಲಾಗುತ್ತಿಲ್ಲವೆಂದು ದುಃಖದಿಂದ ಹೇಳುವುದನ್ನು ನಾನು ಕೇಳಿದ್ದೇನೆ.  ಬಾಣಂತಿಯು ನಿತ್ರಾಣಳಾಗಿರುವುದು, ದಣಿದಿರುವುದು, ಮಗು ಇನ್ನೂ ಚಿಕ್ಕದಾಗಿರುವುದು – ಇಂತಹ ಸಂದರ್ಭಗಳಲ್ಲಿ  ಇಂತಹ ಭಾವನೆಗಳು ಬರುವುದು ಸಹಜ. ಎಲ್ಲ ತಾಯಂದಿರೂ “ಸೂಪರ್ ಮಾಮ್” ಆಗಲೇಬೇಕೆಂದೇನಿಲ್ಲ. ಸಮಯ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ನನ್ನ ಬಳಿ ಬರುವವರಿಗೆ ನಾನು ಹೆಳುವುದು ಇದನ್ನೇ.

ಎಲ್ ವಿ : ತಾಯಿಯ ಹಾಗೂ ಕುಟುಂಬದವರ ಅಪೇಕ್ಷೆಗಳು ಬಹಳಷ್ಟಿರಬಹುದು. ಆದರೆ ನೀವು ವಾಸ್ತವತೆಯನ್ನು ತಿಳಿಸಬೇಕು ಮತ್ತು ವೈದ್ಯರೂ ಸಹ ಇದನ್ನು ಅನುಮೋದಿಸಬೇಕು ಎಂಬುದು ನನ್ನ ಅಭಿಪ್ರಾಯ.

ಪಿ ಸಿ : ತೀವ್ರ ಒತ್ತಡಕ್ಕೊಳಗಾಗಿರುವ ಅಥವಾ ಸಣ್ಣಪುಟ್ಟ ಮಾನಸಿಕ ಸಮಸ್ಯೆಗಳಿರುವ ಗರ್ಭಿಣಿ / ಬಾಣಂತಿಯ ಕುಟುಂಬದವರು “ನಿನಗೆ ಮುದ್ದಾದ ಮಗುವಿದೆ. ನೀನು ಸಂತೋಷದಿಂದಿರಬೇಕು. ಏಕೆ ದುಃಖಿಸುತ್ತೀಯ? ಏಕೆ ಅಳುತ್ತೀಯ?” ಎಂದು ಕೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಅವರ ಕುಟುಂಬದವರು ಹಿಂದೆ ಅವಳು ಇದ್ದಹಾಗೆಯೇ ಈಗಲೂ ಇದ್ದಾಳೆಯೇ, ಏನಾದರೂ ಬದಲಾವಣೆಯ ಲಕ್ಷಣಗಳು ಕಂಡುಬರುತ್ತಿದೆಯೇ, ಅವಳು ಏನಾದರೂ ನೋವನ್ನು ಅನುಭವಿಸುತ್ತಿದ್ದಾಳೆಯೇ, ಮಗುವಿನಿಂದ ದೂರವಿರುತ್ತಾಳೆಯೇ, ಸರಿಯಾಗಿ ನಿದ್ರಿಸುತ್ತಿದ್ದಾಳೋ ಇಲ್ಲವೋ ಎಂಬೆಲ್ಲಾ ವಿಷಯಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದು ಮುಖ್ಯವಾಗುತ್ತದೆ.

ಎಲ್ ವಿ : ಗರ್ಭಿಣಿ / ಬಾಣಂತಿಯು ತನಗೆ ತಾನೆ ಆರೈಕೆ ಮಾಡಿಕೊಳ್ಳುತ್ತಿದ್ದರೆ, ಈ ವಿಷಯವನ್ನು ಪ್ರಸೂತಿತಜ್ಞರಿಗೆ ಅಥವಾ ಮಕ್ಕಳ ವೈದ್ಯರಿಗೆ ತಿಳಿಸಬೇಕು. ನಾವು ವೈದ್ಯರು ಮತ್ತು ತಜ್ಞರು ನಮ್ಮ ಬಳಿ ಬರುವವರ ಪ್ರತಿಯೊಂದು ಲಕ್ಷಣವನ್ನೂ ಎಚ್ಚರಿಕೆಯಿಂದ ಗಮನಿಸಿರುತ್ತೇವೆ ಮತ್ತು ಅಗತ್ಯ ಬಿದ್ದಲ್ಲಿ, ಅವರನ್ನು ನಿಮ್ಮ ಬಳಿ ಕಳುಹಿಸುತ್ತೇವೆ.

ಯಾವಾಗಲೂ ತುಂಬಿಕೊಂಡೇ ಇರುವ ನಮ್ಮ ಪ್ರಸವಪೂರ್ವ ಚಿಕಿತ್ಸಾಲಯಗಳಲ್ಲಿ ಗರ್ಭಿಣಿಯರ / ಬಾಣಂತಿಯರ ಮಾನಸಿಕ ಸಮಸ್ಯೆಗಳಿಗೆ ಸೂಕ್ತಪರಿಹಾರ ಒದಗಿಸಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ನವಜಾತಶಿಶುಗಳು ಮತ್ತು ತಾಯಂದಿರಿಗಾಗಿಯೇ ಒಂದು ವಿಶೇಷ ಸೌಲಭ್ಯಗಳುಳ್ಳ ಚಿಕಿತ್ಸಾಲಯವನ್ನು ಪ್ರಾರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಒಳ್ಳೆಯದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org