ಮಗುವಿನ ನಿರೀಕ್ಷೆಯಷ್ಟೇ ಆರೋಗ್ಯ ಕಾಳಜಿಯೂ ಮುಖ್ಯ

ಸಾಮಾನ್ಯವಾಗಿ ಮಹಿಳೆ ಗರ್ಭಿಣಿಯಾಗಿದ್ದಾಗ ದೇಹ ಹಾಗೂ ಮನಸಿನಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ. ಇವುಗಳಿಗೆ ಹೊಂದಿಕೊಳ್ಳಲು ಕಷ್ಟಪಡುವ ಬದಲು ವೈದ್ಯಕೀಯ ನೆರವನ್ನು ಪಡೆಯುವುದು ಸೂಕ್ತ.

ವ್ಯಕ್ತಿಯ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರಾಧಾನ್ಯತೆ. ಗರ್ಭಿಣಿಯಾದಾಗ ಆಕೆಯಲ್ಲಿ ಇನ್ನೊಂದು ಜೀವ ಬೆಳೆಯುತ್ತಿರುವುದರಿಂದ ಆಕೆಯ ಮಾನಸಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ನಮ್ಮ ಪ್ರಕಾರ ಗರ್ಭಾವಸ್ಥೆಯು ಸಂತೋಷದ, ಖುಷಿಯ ಸಮಯವಾಗಿದೆ. ಆದರೆ ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನಿನ ಬದಲಾವಣೆಯಿಂದಾಗಿ ಭಾವನಾತ್ಮಕ ಏರಿಳಿತಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕೆಲವೊಮ್ಮೆ ಮರೆತು ಬಿಡುತ್ತವೆ. ಇದರ ಜೊತೆಗೆ ಗರ್ಭಿಣಿ ಮಹಿಳೆಯು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕೂಡಾ ಎದುರಿಸಬೇಕಾಗುತ್ತದೆ.

ಮೊದಲ ಬಾರಿಗೆ ತಾಯಿಯಾಗುತ್ತಿರುವ ಮಹಿಳೆಗೆ ಗರ್ಭಾವಸ್ಥೆ ಒತ್ತಡದಿಂದ ಕೂಡಿರಬಹುದು. ನಿರ್ದಿಷ್ಟ ವಯಸ್ಸನ್ನು ದಾಟಿದ ಮಹಿಳೆಗೆ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಆತಂಕವಿರಬಹುದು. ಭಯಭೀತಳಾಗಬಹುದು.

ಗರ್ಭಧಾರಣೆಗೆ ಮೊದಲು:
ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ವೈದ್ಯರು ಅಥವಾ ಪ್ರಸೂತಿ ತಜ್ಞರನ್ನು ಸಂಪರ್ಕಿಸಿ. ಯಾವುದೇ ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳಿ ಮತ್ತು ಅನುಮಾನಗಳನ್ನು ಪರಿಹರಿಸಿಕೊಳ್ಳಿ. ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳುವುದರಿಂದ ಗರ್ಭಧಾರಣೆಯ ಸಮಯದಲ್ಲಿ ಆರೋಗ್ಯವಾಗಿರುವುದು ಸಾಧ್ಯವಾಗುತ್ತದೆ.

ಗರ್ಭಧಾರಣೆಯ ಸಮಯದಲ್ಲಿ:

ನನ್ನ ದೇಹದಲ್ಲಾಗುವ ಬದಲಾವಣೆಗಳನ್ನು ಹೇಗೆ ನಿಭಾಯಿಸಬೇಕು?
ಗರ್ಭಧಾರಣೆಯ ಅವಧಿಯಲ್ಲಿ ನಿಮ್ಮ ದೇಹ ಮತ್ತು ಆರೋಗ್ಯದಲ್ಲಿ ಹಲವಾರು ಬದಲಾವಣೆಗಳಾಗುವುದರಿಂದ ನೀವು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ನೀವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗುತ್ತದೆ. ಈ ಬದಲಾವಣೆಗಳನ್ನು ಆರೋಗ್ಯಕರವಾಗಿ ನಿರ್ವಹಿಸಲು ಈ ಕೆಳಗಿನ ಅಂಶಗಳನ್ನು ನೆರವಾಗುತ್ತವೆ.

 • ಈ ಹಂತವನ್ನು ಅನುಭವಿಸಿರುವ ನಿಮ್ಮ ತಾಯಿ ಸಹೋದರಿ ಅಥವಾ ಸ್ನೇಹಿತೆಯ ಜೊತೆ ಮಾತನಾಡಿ. ಈ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಓದಿ.
 • ಈ ಬದಲಾವಣೆಗಳನ್ನು ಎದುರಿಸುವುದು ಕಷ್ಟವೆನಿಸಿದರೆ, ಸ್ನೇಹಿತರು, ಮನೆಯ ಸದಸ್ಯರು ಅಥವಾ ಆಪ್ತಸಮಾಲೋಚಕರ ಜೊತೆ ಮಾತನಾಡಿ.
 • ಹಾರ್ಮೋನಿನ ಬದಲಾವಣೆಗಳಿಂದಾಗಿ ಆತಂಕ ಅಥವಾ ಮನಸ್ಥಿತಿಯಲ್ಲಿ ಏರಿಳಿತಗಳು ಕಂಡುಬರಬಹುದು. ಪ್ರಸೂತಿ ತಜ್ಞರ ಜೊತೆ ಯಾವ ಅಂಶಗಳು ಸಹಜ ಮತ್ತು ಯಾವ ಸಂದರ್ಭದಲ್ಲಿ ಸಹಾಯವನ್ನು ಪಡೆಯಬೇಕು ಎಂಬುದರ ಕುರಿತು ಮಾತನಾಡಿ.

ನನ್ನ ಮಾನಸಿಕ ಆರೋಗ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?

 • ವೈದ್ಯರು ಯಾವುದೇ ಬದಲಾವಣೆಗಳನ್ನು ಸೂಚಿಸುವವರೆಗೆ ನಿಮ್ಮ ದೈನಂದಿನ ಚಟುವಟಿಕೆಗಳು ಎಂದಿನಂತೆಯೇ ಇರಲಿ. ಮನೆಯ ಕೆಲಸವನ್ನು ಮಾಡಲು ಯಾವುದೇ ತೊಂದರೆಯಿಲ್ಲ!
 • ನಿಮ್ಮ ದೇಹದ ಅಗತ್ಯಕ್ಕನುಸಾರವಾಗಿ ಸಾಕಷ್ಟು ವಿಶ್ರಾಂತಿ ಪಡೆಯಿರಿ
 • ನಿಯಮಿತ ವ್ಯಾಯಾಮ ಮಾಡಿ – ನಡೆಯುವುದು ಅಥವಾ ಯೋಗಾಭ್ಯಾಸದಂತಹ ಹಗುರ ವ್ಯಾಯಾಮಗಳು ನಿಮ್ಮನ್ನು ದೈಹಿಕವಾಗಿ ಸುಸ್ಥಿತಿಯಲ್ಲಿರಿಸುತ್ತವೆ.
 • ಮಗುವು ಹೊಟ್ಟೆಯಲ್ಲಿ ಚಲಿಸಲು ಪ್ರಾರಂಭಿಸಿದ ಮೇಲೆ ನೀವು ಮಗುವಿನೊಂದಿಗೆ ಮಾತನಾಡಬಹುದು ಅಥವಾ ಹಾಡಬಹುದು. ಇದರಿಂದ ನೀವು ಹೆರಿಗೆಗೆ ಮುಂಚೆ ಮಗುವಿನೊಂದಿಗೆ ಭಾಂಧವ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.
 • ನಿಮ್ಮ ಭಾವನೆಗಳು ಮತ್ತು ಆತಂಕವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ. ನಿಮಗಾಗಿ ಸಮಯವನ್ನು ಮೀಸಲಿಡಿ: ಪುಸ್ತಕವನ್ನು ಓದಿ, ಸಂಗೀತವನ್ನು ಕೇಳಿ ಅಥವಾ ಚಲನಚಿತ್ರವನ್ನು ವೀಕ್ಷಿಸಿ.
 • ಪೌಷ್ಠಿಕಾಂಶಭರಿತ ಆಹಾರವನ್ನು ಸೇವಿಸಿ: ವಿಭಿನ್ನ ಬಗೆಯ ಆಹಾರಗಳು ನಿಮ್ಮ ಹಸಿವನ್ನು ಹೆಚ್ಚಿಸಬಹುದು. ಸಮತೋಲನ ಆಹಾರವನ್ನು ಸೇವಿಸುವ ಬಗ್ಗೆ ಗಮನಕೊಡಿ. ನೀವು ಬಯಸಿದ ಆಹಾರವನ್ನು ಕೂಡ ಸೇವಿಸಿ
 • ಮಗುವಿನ ಕುರಿತ ಯೋಜನೆಗಳಲ್ಲಿ ನಿಮ್ಮ ಸಂಗಾತಿಯನ್ನು ಸೇರಿಸಿಕೊಳ್ಳಿ. ನಿಮ್ಮ ಹೆರಿಗೆಪೂರ್ವ ವೈದ್ಯಕೀಯ ಪರೀಕ್ಷೆಗಳಿಗೆ ಅವರನ್ನು ಕರೆದುಕೊಂಡು ಹೋಗಿ.
 • ನಿಮ್ಮ ಅವಶ್ಯಕತೆಗಳಿಗೂ ಆದ್ಯತೆ ನೀಡಿ. ನಿಮ್ಮ ಬಗ್ಗೆ ಕಾಳಜಿವಹಿಸಿ ಮತ್ತು ನಿಮ್ಮ ಸುತ್ತಲೂ ಇರುವವರಿಗೆ ನಿಮ್ಮ ಅವಶ್ಯಕತೆಗಳನ್ನು ಸ್ಪಷ್ಟವಾಗಿ ತಿಳಿಸಿ.
 • ನಿಮಗೆ ಆತಂಕವುಂಟಾಗುತ್ತಿದ್ದರೆ ಗರ್ಭಧಾರಣೆಯ ಬಗ್ಗೆ ಜಾಸ್ತಿ ಓದಬೇಡಿ. ಕೆಲವು ವೆಬ್ ಸೈಟುಗಳು ನಿಮ್ಮಲ್ಲಾಗುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಮತ್ತು ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ಅವುಗಳನ್ನು ಬಳಸಿಕೊಳ್ಳಿ.
 • ನಿಮಗೆ ಯಾವುದೇ ಅನುಮಾನ ಅಥವಾ ಆತಂಕಗಳಿದ್ದರೆ ವೈದ್ಯರ ಬಳಿ ಚರ್ಚಿಸಲು ಹಿಂಜರಿಯಬೇಡಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org