ತಾಯ್ತನ, ಉದ್ಯೋಗ ಎರಡನ್ನೂ ನಿಭಾಯಿಸುವುದು ಹೇಗೆ?

ನಾನು ಉದ್ಯೋಗವನ್ನು ಬಿಡಬೇಕೇ? ನನ್ನ ಮಗುವಿಗಾಗಿ ಆಯಾಳನ್ನು ಗೊತ್ತು ಮಾಡಬೇಕೇ? ಯಾವ ಉತ್ತರವು ನಿಮ್ಮ ಪರಿಸ್ಥಿತಿಗೆ ಸೂಕ್ತವೋ ಅದೇ ಸರಿಯಾದದ್ದು ಎನ್ನುತ್ತಾರೆ ಸೈಕಿಯಾಟ್ರಿಸ್ಟ್ ಡಾ.ಸಬೀನಾ ರಾವ್.

ನಾನು ಉದ್ಯೋಗವನ್ನು ಬಿಡಬೇಕೇ? ನನ್ನ ಮಗುವಿಗಾಗಿ ಆಯಾಳನ್ನು ಗೊತ್ತು ಮಾಡಬೇಕೇ? ಈ ಯಾವ ಪ್ರಶ್ನೆಗಳಿಗೂ ಸೂಕ್ತವಾದ ಒಂದೇ ಉತ್ತರವಿಲ್ಲ. ಯಾವ ಉತ್ತರವು ನಿಮ್ಮ ಪರಿಸ್ಥಿತಿಗೆ ಸೂಕ್ತವೋ ಅದೇ ಸರಿಯಾದದ್ದು ಎನ್ನುತ್ತಾರೆ ಸಾಕ್ರಾ ವರ್ಲ್ಡ್ ಹಾಸ್ಪಿಟಲ್ ನಲ್ಲಿ ಕನ್ಸಲ್ಟಿಂಗ್ ಸೈಕಿಯಾಟ್ರಿಸ್ಟ್ ಆಗಿರುವ ಡಾ. ಸಬೀನಾ ರಾವ್. ಮೂರು ಮಕ್ಕಳ ತಾಯಿಯಾಗಿರುವ ಇವರು ತಮ್ಮ ಕಚೇರಿಯ ವೇಳೆಯಲ್ಲಿ ಸಡಿಲತೆ ತೋರಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಿಗೆ ಆಭಾರಿಯಾಗಿದ್ದಾರೆ. ನಗರದ ಉದ್ಯೋಗಸ್ಥ ತಾಯಂದಿರು ತಪ್ಪಿತಸ್ಥ ಭಾವನೆಯಿಂದ ಬಳಲುವ ಅವಶ್ಯಕತೆಯಿಲ್ಲವೆಂದು ಹೇಳುವ ಡಾ. ರಾವ್ ಅವರು ಈ ಲೇಖನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಚರ್ಚಿಸಿದ್ದಾರೆ.

ಮಗುವನ್ನು ಹೊಂದುವ ನಿರ್ಧಾರವು ಜೀವನವನ್ನೇ ಬದಲಾಯಿಸುತ್ತದೆ. ಇಂದಿನ ಪಾಲಕರು ಈ ವಿಷಯದಲ್ಲಿ ಯಾವ ರೀತಿ ಯೋಚಿಸುತ್ತಾರೆ?
ಇಂದಿನ ಯುವಕರು ತಮ್ಮ ಅತ್ತೆ ಮಾವ ಅಥವಾ ಪಾಲಕರಿಂದ ದೂರವಾಗಿ ಬೃಹತ್ ನಗರಗಳಲ್ಲಿ ವಾಸಿಸುವುದರಿಂದ ಅವರ ಮೇಲೆ ಮದುವೆಯ ನಂತರ ಕೂಡಲೇ ಮಗುವನ್ನು ಪಡೆಯಬೇಕೆಂಬ ಒತ್ತಡವು ಬಹಳ ಮಟ್ಟಿಗೆ ಕಡಿಮೆಯಾಗಿದೆ.

ಸ್ವತಂತ್ರವಾಗಿ ವಿಚಾರ ಮಾಡುವ ಅವಕಾಶ ಹೆಚ್ಚುತ್ತಿದೆ. ಮಹಿಳೆಯರು ಕೂಡ ಆರ್ಥಿಕ ದೃಷ್ಠಿಯಿಂದ ಯೋಚಿಸಲಾರಂಭಿಸಿದ್ದಾರೆ. ಉದಾಹರಣೆಗೆ, ಕಂಪನಿಯು ತನ್ನನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬಲ್ಲದೇ? ನಾನು ಮತ್ತು ನನ್ನ ಸಂಗಾತಿ ಮಗುವನ್ನು ಪಡೆಯಲು ಆರ್ಥಿಕವಾಗಿ ಶಕ್ತರಾಗಿದ್ದೇವೆಯೇ? ಇತ್ಯಾದಿ.

ಕೆಲವು ಮಹಿಳೆಯರು ಗರ್ಭಧಾರಣೆಯು ಅವರ ಮೇಲೆ ಭಾವನಾತ್ಮಕವಾಗಿ ಯಾವ ಪರಿಣಾಮ ಬೀರಬಲ್ಲದೆಂದೂ ಯೋಚಿಸುತ್ತಾರೆ. ಈಗ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರನ್ನು ಹೊರೆಯೆಂದು ಭಾವಿಸಲಾಗುತ್ತಿಲ್ಲ. ಬದಲಿಗೆ ಉತ್ತಮ ಸಂಪನ್ಮೂಲವೆಂದೇ ಭಾವಿಸಲಾಗುತ್ತಿದೆ.

ಆದರೆ ಹೆಚ್ಚಿನ ಮಹಿಳೆಯರಿಗೆ ತಾನು ಉದ್ಯೋಗಕ್ಕೆ ತೆರಳಿದರೆ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದೇ ಸಮಸ್ಯೆ. ಮಗುವಿನ ಆಗಮನದಿಂದ ಜೀವನವೇ ಬದಲಾಗುತ್ತದೆ. ಇದು ನಿಮ್ಮ ದೇಹ, ಭಾವನೆಗಳು ಹಾಗೂ ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ ಎಂಬುದನ್ನೇ ಬದಲಾಯಿಸುತ್ತದೆ.

ಮಗು ಪಡೆಯುವ ಮುನ್ನ ಪೂರ್ವಸಿದ್ಧತೆ ಮಾಡಿಕೊಳ್ಳಿ
ಹೆಚ್ಚಿನ ದಂಪತಿಗಳಿಗೆ ಈ ಬಗ್ಗೆ ಯೋಚಿಸಲು ಸಮಯ ಸಿಗುವುದಿಲ್ಲ. ಸುಶಿಕ್ಷಿತ ಮಹಿಳೆಯರೂ ಕೂಡ ಸಮಾಜದ ಒತ್ತಡಕ್ಕೆ ಒಳಗಾಗುತ್ತಾರೆ. ಮಹಿಳೆಯರಿಗೆ ಮಗುವನ್ನು ಪಡೆಯಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಮದುವೆಯಾಗುವುದು, ಮಕ್ಕಳನ್ನು ಪಡೆಯುವುದೇ ಜೀವನದ ಸರಿಯಾದ ವಿಧಾನಗಳು ಎಂಬುದನ್ನು ಹೆಣ್ಣುಮಕ್ಕಳ ಮನಸ್ಸಿನಲ್ಲಿ ಚಿಕ್ಕವಯಸ್ಸಿನಿಂದಲೇ ತುಂಬಿಸಲಾಗುತ್ತದೆ.

ಪಾಲಕತ್ವವು ಯಾವ ರೀತಿ  ಇರಬಹುದೆಂದು ಊಹಿಸಲು  ಸಾಧ್ಯವಿಲ್ಲ. ಆದರೆ ಕೆಲವು ವಿಷಯಗಳನ್ನು ನೀವು ನಿಯಂತ್ರಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯೇನು? ನೀವು ಕೆಲಸದಿಂದ ಸ್ವಲ್ಪ ಸಮಯದವರೆಗೆ ಬಿಡುವನ್ನು ತೆಗೆದುಕೊಳ್ಳಲು ಬಯಸುವಿರಾ? ನೀವು ಉದ್ಯೋಗಕ್ಕೆ ಮರಳಿದ ನಂತರ ನಿಮ್ಮ ಬೆಂಬಲಕ್ಕೆ ಯಾರಾದರೂ ಇದ್ದಾರೆಯೇ? ಈ ವಿಷಯಗಳನ್ನು ಮುಂಚಿತವಾಗಿ ಯೋಚಿಸುವುದರಿಂದ ಕೆಲವು ವಿಷಯಗಳು ಸುಲಭವಾಗಬಹುದು.

ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸಬಹುದು? ಗರ್ಭಾವಸ್ಥೆಯು ಸುಲಭವಾಗಿರಬಹುದೇ? ಸಮಸ್ಯೆ ರಹಿತವಾಗಿರಬಹುದೇ? - ಇಂತಹ ವಿಷಯಗಳು ನಿಮ್ಮ ನಿಯಂತ್ರಣದಲ್ಲಿಲ್ಲ.

ಉದ್ಯೋಗಸ್ಥ ಮಹಿಳೆಯು ಗರ್ಭಿಣಿಯಾದಾಗ ಯಾವ ರೀತಿಯ ಒತ್ತಡಗಳನ್ನು ಎದುರಿಸಬೇಕಾಗುತ್ತದೆ?
ಭಾರತದಲ್ಲಿ ಕಂಪನಿಗಳು ಮಹಿಳಾ ಉದ್ಯೋಗಿಗಳು ಮಗುವನ್ನು ಪಡೆಯುವ ಯೋಚನೆಯನ್ನು ಅಷ್ಟಾಗಿ ಬೆಂಬಲಿಸುವುದಿಲ್ಲ. ಜೊತೆಗೆ ಲಭ್ಯವಿರುವ ಬೇಬಿಕೇರ್‌ನಂತಹ ಸೌಲಭ್ಯಗಳು, ಆಯಾಗಳ ದೊರೆಯುವಿಕೆ ಮತ್ತು ಇನ್ನಿತರ ವ್ಯವಸ್ಥೆಗಳು ಕೂಡ ಇಲ್ಲಿ ನಿರಾಶಾದಾಯಕವಾಗಿದೆ.

ನಗರಗಳಲ್ಲಿ ವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಮಹಿಳೆಯರು ಎಲ್ಲವನ್ನೂ ತಾವೇ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮಗುವನ್ನು ಪಡೆಯಲು ಬಯಸುವ ಮಹಿಳೆಯ ವಯಸ್ಸು ಹೆಚ್ಚಿದಂತೆ ಆಕೆಯ ಅತ್ತೆ ಮಾವಂದಿರ ಮತ್ತು ಪಾಲಕರ ವಯಸ್ಸು ಹೆಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳೆಯು ಏನು ಮಾಡಬೇಕು? ಅಂತಹ ಪರಿಸ್ಥಿತಿಯಲ್ಲಿ ಅವಳು ಕೆಲಸ ಮಾಡುವ ಕಂಪನಿಯು ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕಂಪನಿಗಳು ದೀರ್ಘವಾದ ಹೆರಿಗೆ ರಜೆ ಮತ್ತು ಕೆಲಸದ ಜಾಗದಲ್ಲಿ ಶಿಶುಗೃಹಗಳನ್ನು ಒದಗಿಸುವ ಮೂಲಕ ಮಹಿಳಾ ಉದ್ಯೋಗಿಗಳಿಗೆ ಬೆಂಬಲ ನೀಡಬಹುದು. ಮಹಿಳೆಯು ಪುರುಷನಷ್ಟೇ ಸಮರ್ಥಳಾಗಿದ್ದಾಳೆ. ಕಂಪನಿಯು ಉದ್ಯೋಗಸ್ಥ ಮಹಿಳೆಗೆ ತನ್ನ ತಾಯ್ತನವನ್ನು ನಿಭಾಯಿಸಲು ಸಮಯ ಮತ್ತು ಸ್ಥಳವನ್ನು ನೀಡಿದರೆ ಆಕೆಗೆ ಪ್ರೋತ್ಸಾಹ ದೊರೆತು ಇನ್ನಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾಳೆ.

ಮಗುವನ್ನು ಮನೆಯವರು ಅಥವಾ ಆಯಾಳ ಬಳಿ ಬಿಟ್ಟು ಕೆಲಸಕ್ಕೆ ತೆರಳುವ ಮಹಿಳೆಯ ಬಗ್ಗೆ ಸಮಾಜವು ಹೊಂದಿರುವ ಕಲ್ಪನೆಯಿಂದಾಗಿ ಉದ್ಯೋಗಸ್ಥ ಮಹಿಳೆಗೆ ಮಗುವನ್ನು ಪಡೆಯುವ ನಿರ್ಧಾರವು ಒತ್ತಡದ ವಿಷಯವಾಗಿದೆ.

ತಪ್ಪಿತಸ್ಥ ಭಾವನೆ ಅಗತ್ಯವೇ?
ಜಗತ್ತಿನೆಲ್ಲೆಡೆ  ಮಹಿಳೆಯರಲ್ಲಿ ತಪ್ಪಿತಸ್ಥ ಭಾವ  ಇದೆ. ಉದಾಹರಣೆಗೆ, ಐಟಿ ಕ್ಷೇತ್ರದಲ್ಲಿ ತಂತ್ರಜ್ಞಾನ ಶೀಘ್ರವಾಗಿ ಬದಲಾಗುತ್ತದೆ. ಇದರಿಂದ ತಮ್ಮ ಔದ್ಯೋಗಿಕ ಉನ್ನತಿಗಾಗಿ ಕಷ್ಟಪಟ್ಟು ದುಡಿದ ಮಹಿಳೆಯರು ಮಗುವಿಗಾಗಿ 2 ವರ್ಷ ಬಿಡುವು ತೆಗೆದುಕೊಂಡರೆ ಅವರು ತಾಂತ್ರಿಕವಾಗಿ ಹಿಂದುಳಿಯುತ್ತಾರೆ. ಒಂದು ವೇಳೆ ಅವರು ಇದಕ್ಕೆ ಸಿದ್ಧವಿಲ್ಲದಿದ್ದರೆ ಮಗುವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಬೇಕಾಗುತ್ತದೆ.

ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವೆಂಬ ಪಶ್ಚಾತ್ತಾಪ ಕೂಡ ಕಾಡುತ್ತದೆ. ಅಧ್ಯಯನದ ಪ್ರಕಾರ ಉದ್ಯೋಗಸ್ಥ ಮಹಿಳೆಯರ ಮಕ್ಕಳು ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ. ತನ್ನ ಬಗ್ಗೆ ಉತ್ತಮ ಭಾವನೆ ಹೊಂದಿರುವ ಮಹಿಳೆಯು ತನ್ನ ಮಗುವಿನ ಅವಶ್ಯಕತೆಗಳನ್ನು ಚೆನ್ನಾಗಿ ಪೂರೈಸಲು ಸಾಧ್ಯವಾಗುತ್ತದೆ. ತಾಯಂದಿರು ಭಾವನಾತ್ಮಕವಾಗಿ ಆರೋಗ್ಯದಿಂದಿರುವುದು ಅತ್ಯಂತ ಅವಶ್ಯಕ. ಆದ್ದರಿಂದ ತಪ್ಪಿತಸ್ಥ ಭಾವನೆಯನ್ನು ದೂರತಳ್ಳಿ.

ತಮ್ಮ ಪರಿಸ್ಥಿತಿಗೆ ಯಾವುದು ಸೂಕ್ತವಾದದ್ದೋ ಅದೇ ಸರಿಯಾದ ನಿರ್ಧಾರ ಎಂದು ಮಹಿಳೆಯು ಅರ್ಥಮಾಡಿಕೊಳ್ಳಬೇಕು. ಒಬ್ಬ ಮಹಿಳೆಯು ಪರಿಪೂರ್ಣತೆಯ ಭಾವಕ್ಕಾಗಿ ಕೆಲಸ ಮಾಡಲು ಬಯಸಿದರೆ ಆಕೆಯು ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಮಗುವನ್ನು ಆರೈಕೆ ಮಾಡಲು ಮತ್ತು ಬೆಳೆಸಲು ಇಷ್ಟಪಡುವ ತಾಯಂದಿರು ಅದರಂತೆ ನಡೆದುಕೊಳ್ಳಬಹುದು. ನಮ್ಮ ಆಯ್ಕೆಗಳಿಗೆ ವಿರುದ್ಧವಾದ ಒತ್ತಡಗಳು ಇರುವುದು ಸಹಜ. ನೀವು ಯಾಕೆ ನಿಮ್ಮ ಪದವಿಯನ್ನು ಹಾಳು ಮಾಡುತ್ತಿದ್ದೀರಾ? ಕೆಲವೊಮ್ಮೆ ಮಹಿಳೆಯರು ತಾವು ಎಲ್ಲಾ ಕಡೆಯೂ ಯಶಸ್ವಿಯಾಗಬೇಕೆಂದು, ಎಲ್ಲವನ್ನೂ ನಿಭಾಯಿಸಬೇಕೆಂದು ಬಯಸುತ್ತಾರೆ. ಆದರೆ ನನ್ನ ಮಟ್ಟಿಗೆ ಅದು ಬಹುತೇಕ ಅಸಾಧ್ಯ ಎಂದೇ ತೋರುತ್ತದೆ. ನೀವು ಏನನನ್ನು ಮಾಡುತ್ತಿದ್ದೀರೋ ಅದನ್ನು ಆನಂದಿಸಿ. ಈ ಸಮಯದಲ್ಲಿ ಕೆಲಮಟ್ಟಿಗೆ ಒತ್ತಡ ಸಹಜ ಮತ್ತು ನಿಮ್ಮಲ್ಲಿ ಸ್ವಲ್ಪ ಗೊಂದಲ ಮತ್ತು ಸಂಘರ್ಷವೂ ಉಂಟಾದರೆ, ಅದು ತಪ್ಪಲ್ಲ.

ಬಾಹ್ಯ ಮತ್ತು ಸಾಮಾಜಿಕ ಒತ್ತಡಗಳು ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆಯೇ?
ಹೌದು. ಆತಂಕ ಅಥವಾ ಖಿನ್ನತೆಗೆ ಒಳಗಾಗುವುದು ಬಹಳ ಸುಲಭ. ಪ್ರಸವಾನಂತರದ ಮಾನಸಿಕ ಸಮಸ್ಯೆಯು ಸಾಮಾನ್ಯವಾಗಿದ್ದು, ಬಾಹ್ಯ ಒತ್ತಡಗಳು ಇವನ್ನು ಜಾಸ್ತಿ ಮಾಡಬಹುದು. ಅವಳ ಸುತ್ತಲಿರುವವರು, “ಮನೆಯಲ್ಲಿ ಸುಮ್ಮನೆ ಕುಳಿತಿರಲು ನೀನು ಯಾಕೆ ಅಷ್ಟೊಂದು ಓದಬೇಕಿತ್ತು?” ಎಂದು ಕೇಳಬಹುದು. ಆದ್ದರಿಂದ ಹೆರಿಗೆಯ ನಂತರ ತಾಯಿಯು ಆದಷ್ಟು ಬೇಗ ಕೆಲಸಕ್ಕೆ  ಮರಳಬೇಕೆಂಬ ಒತ್ತಡಕ್ಕೆ ಒಳಗಾಗುತ್ತಾಳೆ. 

ಹೆಚ್ಚಿನ ಬಾರಿ ಇದು ಸವಾಲಿನ ಸಮಯವಾಗಿರುತ್ತದೆ. ಮಹಿಳೆಯರು ಹೆರಿಗೆಯ ನಂತರ ಕನಿಷ್ಟ 6 ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ಒಂದು ವೇಳೆ ನಿಮ್ಮ ಸಂಸ್ಥೆಯು ನೀಡುವ ಹೆರಿಗೆ ರಜೆಯು ಚಿಕ್ಕದಾಗಿದ್ದರೆ ನಿಮ್ಮ ಮೇಲಾಧಿಕಾರಿಯ ಬಳಿ ಹೆಚ್ಚುವರಿ ಸಮಯ ನೀಡಲು ಸಾಧ್ಯವೇ ಎಂದು ಕೇಳಿರಿ. ಕೇಳುವುದರಿಂದ ಯಾರಿಗೂ ತೊಂದರೆಯಿಲ್ಲ.

ಸಂಗಾತಿಯ ಪಾತ್ರವೇನು?
ಮಗುವನ್ನು ಪಡೆಯುವ ವಿಷಯದಲ್ಲಿ ಸಂಗಾತಿಯ ಪಾತ್ರವು ಮುಖ್ಯವಾಗಿರುತ್ತದೆ. ಹಲವು ಬಾರಿ ತಾಯ್ತನವನ್ನು ಮಹಿಳೆಯ ಸಮಸ್ಯೆಯೆಂಬಂತೆ ನೋಡಲಾಗುತ್ತದೆ. ಸಾಮಾನ್ಯ ಭಾರತೀಯ ಪುರುಷನು ಗರ್ಭಧಾರಣೆ ಮತ್ತು ಹೆರಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಬಗ್ಗೆ ಅಷ್ಟಾಗಿ ಯೋಚಿಸುವುದಿಲ್ಲ. ಆದರೆ ಇಂದು ಪುರುಷರು ಆರ್ಥಿಕ ಬೆಂಬಲದ ಬದಲಾಗಿ ಭಾವನಾತ್ಮಕ ಬೆಂಬಲವನ್ನು ಒದಗಿಸುವ ಕಾಲವಾಗಿದೆ.

ನಿಮ್ಮ ಸಂಗಾತಿಯ ಜೊತೆ ಕುಳಿತುಕೊಂಡು ನಿಮ್ಮಿಬ್ಬರ ನಿರೀಕ್ಷೆ ಮತ್ತು ಭರವಸೆಗಳ ಬಗ್ಗೆ ಚರ್ಚಿಸಿ. ಈ ಮಾತುಕತೆ ಮಗುವನ್ನು ಪಡೆಯಲು ಬಯಸಿದಾಗ ಆರಂಭವಾಗಬೇಕು. ಮಹಿಳೆಯರು ಸಂಗಾತಿಯನ್ನು ಪ್ರಾರಂಭದಿಂದಲೇ-  ಮಗುವಿಗೆ ಆಹಾರ ನೀಡುವುದು, ಓದುವುದು, ನ್ಯಾಪಿ ಬದಲಾಯಿಸುವುದು, - ಎಲ್ಲದರಲ್ಲಿಯೂ ತೊಡಗಿಸಿಕೊಳ್ಳಬೇಕು. ಪುರುಷರಿಗೆ ನಾನು ಹೇಳುವುದೇನೆಂದರೆ, ಪಾಲಕತ್ವದಲ್ಲಿ ಜೊತೆಯಾಗಿ. ಇದೂ ಕೂಡ ಪುರುಷತ್ವದ ಸಂಗತಿಯೇ ಆಗಿದೆ.

ತಮ್ಮ ಗೊಂದಲದ ಕುರಿತು ಮಹಿಳೆಯರು ಯಾರ ಬಳಿ ಮಾತನಾಡಬೇಕು?
ಒಂದುವೇಳೆ ನಿಮ್ಮ ತಾಯಿ ಅಥವಾ ಅತ್ತೆಯು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅನಿಸಿದರೆ ಅಂತಹುದೇ ಅನುಭವವನ್ನು ಹೊಂದಿದ ಮಹಿಳೆಯ ಜೊತೆ ಮಾತನಾಡಿ. ನಿಮ್ಮ ಕಚೇರಿಯಲ್ಲಿ, ವಸತಿ ಸಮುಚ್ಛಯದಲ್ಲಿ ಅಥವಾ ನೆರೆಹೊರೆಯಲ್ಲಿ ಮನೆ ಮತ್ತು ಕೆಲಸ ಎರಡನ್ನೂ ನಿಭಾಯಿಸುತ್ತಿರುವ ಮಹಿಳೆಯ ಜೊತೆ ಮಾತನಾಡಿ.

ಆದರೆ ಯಾವುದೇ ಇಬ್ಬರು ವ್ಯಕ್ತಿಗಳ ಸಮಸ್ಯೆ ಅಥವಾ ಪರಿಣಾಮಗಳು ಒಂದೇ ರೀತಿಯಿರುವುದಿಲ್ಲ ಎಂಬುದನ್ನು ನೆನಪಿಡಿ. ಕೆಲವು ಕಂಪನಿಗಳಲ್ಲಿ ಕೌನ್ಸಲರ್ ಅಥವಾ ಹಿರಿಯ ಮಹಿಳೆಯರು ನೈತಿಕ ಮತ್ತು ಭಾವನಾತ್ಮಕ ಬೆಂಬಲವನ್ನು ಒದಗಿಸಬಹುದು. ನೀವು ಈ ಬಗ್ಗೆ ಆಪ್ತಸಮಾಲೋಚಕರ ಜೊತೆ ಮಾತಾಡಬಹುದು.

ಮಹಿಳೆಯರು ತಮಗೆ ತಾವು ಹೇಗೆ ಸಹಾಯ ಮಾಡಿಕೊಳ್ಳಬಹುದು?
ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರು ಬಳಲುವುದರಿಂದ ಮತ್ತು ನಿದ್ರೆಯ ಸಮಸ್ಯೆಯನ್ನು ಎದುರಿಸುವುದರಿಂದ ಮನೆಯವರು ಮತ್ತು ಸಂಗಾತಿಯು ಬೆಂಬಲವನ್ನು ಒದಗಿಸಬೇಕು. ಮನೆಯ ದೈನಂದಿನ ಕೆಲಸ ಮಾಡಲು ಕಷ್ಟವಾಗಬಹುದು. ಕೆಲವು ಮಹಿಳೆಯರು ಕೆಲವೇ ವಾರಗಳಲ್ಲಿ ಮೊದಲಿನ ವೇಳಾಪಟ್ಟಿಗೆ ಮರಳುತ್ತಾರೆ ಮತ್ತು ದೇಹದ ತೂಕವನ್ನು ಕಳೆದುಕೊಂಡು ಮೊದಲಿನಂತೆಯೇ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ನೀವು ಅಂತವರ ಬಗ್ಗೆ ಕೇಳಿದರೆ ನಿರಾಶೆಗೊಳ್ಳಬೇಡಿ ಏಕೆಂದರೆ ಪ್ರತಿ ಮಹಿಳೆಯ ಅನುಭವವೂ ಭಿನ್ನವಾಗಿರುತ್ತದೆ.

ನಿಮಗೆ ಸಹಾಯಕವಾಗುವ ಕೆಲವು ಅಂಶಗಳೆಂದರೆ- ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ. ಮಗುವಿನ ಅವಶ್ಯಕತೆಗೆ ಅನುಸಾರವಾಗಿ ನಿಮ್ಮ ದಿನದ ಕಾರ್ಯಗಳನ್ನು ಹೊಂದಿಸಿಕೊಳ್ಳಿ. ಒಂದು ವೇಳೆ ನಿಮ್ಮ ವೇಳಾಪಟ್ಟಿಯಲ್ಲಿರುವ ಅರ್ಧದಷ್ಟು ಕೆಲಸಗಳನ್ನು ಪೂರೈಸಲು ಸಾಧ್ಯವಾಗದಿದ್ದರೂ ಕೂಡ ಬೇಸರಪಡಬೇಡಿ. ಮನೆಯಲ್ಲಿ ನಿಮ್ಮ ಜೊತೆ ಮಾತನಾಡಲು ಯಾರೂ ಇಲ್ಲದಿದ್ದಲ್ಲಿ ನಿಮ್ಮ ವಿಚಾರಗಳನ್ನು ಪುಸ್ತಕದಲ್ಲಿ ಅಥವಾ ಡೈಯರೀ ಯಲ್ಲಿ ಬರೆದಿಡಿ. ನಿಮ್ಮಲ್ಲಿ ಖಿನ್ನತೆ, ಆತಂಕ ಅಥವಾ ಬೇಸರದ ಭಾವನೆ ಉಂಟಾದಲ್ಲಿ ಮನೋವೈದ್ಯರು ಅಥವಾ ಅಪ್ತಸಮಾಲೋಚಕರನ್ನು ಭೇಟಿ ಮಾಡಿ.

ಕೆಲಸಕ್ಕೆ ಮರಳಲು ಬಯಸುವ ತಾಯಂದಿರು ಎದೆಹಾಲು ತಜ್ಞರನ್ನು ಭೇಟಿ ಮಾಡಿ ಎದೆಹಾಲನ್ನು ತೆಗೆದು ಮಗುವಿಗಾಗಿ ಸಂಗ್ರಹಿಸಿಡುವ ವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. 

ತಾಯಂದಿರು ನೆನಪಿಡಬೇಕಾದ ಮುಖ್ಯ ಸಂಗತಿಯೆಂದರೆ- ನೀವು ತಾಯಿಯಾದ ಮೇಲೆ ಮುಂಚಿನಂತೆ ಇರುವುದಿಲ್ಲ. ಬದಲಿಗೆ ಇನ್ನಷ್ಟು ಉತ್ತಮವಾಗಿರುವಿರಿ! ಅದಕ್ಕಾಗಿ ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org