ನನಗೆ ಕ್ಯಾನ್ಸರ್ ಅಂತ ಗೊತ್ತಾದಾಗಿನಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದೇನೆ. ಇದನ್ನು ನಿಭಾಯಿಸುವುದು ಹೇಗೆ?
ವೈದ್ಯಕೀಯ ಪರೀಕ್ಷೆಯಲ್ಲಿ ತನಗೆ “ಕ್ಯಾನ್ಸರ್” ಇದೆ ಎಂದು ತಿಳಿದು ಬಂದಾಗ ಯಾವುದೇ ವ್ಯಕ್ತಿ ಅತ್ಯಂತ ತೀವ್ರವಾದ ಆಘಾತ, ಅಪನಂಬಿಕೆ, ಕೋಪ, ಉದ್ವೇಗ ಹಾಗೂ ದುಃಖವೇ ಮೊದಲಾದ ಭಾವನಾತ್ಮಕ ಅಸಮತೋಲನಕ್ಕೆ ಒಳಗಾಗುತ್ತಾರೆ.
ಕ್ಯಾನ್ಸರ್ ನಿಂದ ಬಳಲುವ ಮಂದಿ ವಿಭಿನ್ನ ಹಂತಗಳಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳ ಮೂಲಕ ಹಾದು ಹೋಗಬೇಕಾಗುತ್ತದೆ.
ಒಂದು ವೇಳೆ ನಿಮಗೆ ಕ್ಯಾನ್ಸರ್ ಇದೆಯೆಂದು ತಿಳಿದು ಬಂದರೆ, ನಿಮಗೆ ಆಘಾತವಾಗುತ್ತದೆ, ದುಃಖ, ಕೋಪ, ಉದ್ವೇಗ ಅಪನಂಬಿಕೆ ಮೊದಲಾದ ಲಕ್ಷಣಗಳು ಕಂಡುಬರುತ್ತದೆ ಮತ್ತು ನೀವು ಅದಕ್ಕಿರುವ ಕಾರಣಗಳನ್ನು ಕಂಡುಕೊಳ್ಳುವ ತವಕದಲ್ಲಿರುತ್ತೀರಿ. “ಬಹಳಷ್ಟು ರೋಗಿಗಳು ಸೂಕ್ತ ಉತ್ತರದ ಹುಡುಕಾಟದಲ್ಲಿರುತ್ತಾರೆ. ಈ ರೋಗ ನನಗೆ ಹೇಗೆ ಬಂತು? ಇದುವರೆಗೂ ನಾನು ಆರೋಗ್ಯವಂತನಾಗಿದ್ದೆ, ಇದು ಹೇಗಾಯಿತು? ಇದು ನಾ ಮಾಡಿದ ಕರ್ಮದ ಫಲವೇ? ಇದು ಎಷ್ಟು ಅಪಾಯಕಾರಿ? ನಾನು ಗುಣಮುಖವಾಗಬಲ್ಲೆನೇ? ನನ್ನ ಪ್ರಾಣ ಹೋಗುತ್ತದೆಯೇ? ಎಂದೆಲ್ಲ ಯೋಚಿಸುತ್ತಾರೆ” ಎನ್ನುತ್ತಾರೆ ಸೈಕಾಲಜಿಸ್ಟ್ ಹಿಬಾ ಸಿದ್ದಿಕಿ.
ಕ್ಯಾನ್ಸರ್ ನಮ್ಮ ಜೀವನವನ್ನೇ ಬದಲಿಸುತ್ತದೆ. ರೋಗದ ದೈಹಿಕ ಲಕ್ಷಣಗಳು ದುಃಖ, ಖಿನ್ನತೆ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಚಿಕಿತ್ಸೆಗಳ ಕುರಿತಾಗಿ ನೀವು ಚಿಂತಿತರಾಗುತ್ತೀರಿ.
ಈ ಅಂಶಗಳು ನಿಮ್ಮ ಆರೋಗ್ಯದ ಮೇಲೆ, ನಿಮ್ಮ ಕುಟುಂಬದ ಮೇಲೆ ಮತ್ತು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ವೈದ್ಯಕೀಯ ಪರೀಕ್ಷೆಯ ಫಲಿತಾಂಶದ ಅಧಾರದ ಮೇಲೆ ನೀವು ನಿಮ್ಮ ಜೀವನಶೈಲಿಯಲ್ಲಿ - ನಿಮ್ಮ ಕೆಲಸ ಕಾರ್ಯ ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನೊಳಗೊಂಡಂತೆ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು.
ಕ್ಯಾನ್ಸರ್ ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು ಮತ್ತು ಇದರಿಂದಾಗಿ ನಿಮ್ಮ ದೈಹಿಕ ಸ್ಥಿತಿಗತಿಗೆ ತಕ್ಕಂತೆ ಹಾಗೂ ಚಿಕಿತ್ಸಾ ಸಮಯವನ್ನು ಗಮನದಲ್ಲಿರಿಸಿಕೊಂಡು ಕೆಲವು ಜವಾಬ್ದಾರಿಗಳನ್ನು, ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗುತ್ತದೆ. ನಿಮ್ಮ ದೇಹದಲ್ಲಾಗುವ ಕೆಲವು ಬದಲಾವಣೆಗಳಿಂದಾಗಿ ಆತ್ಮವಿಶ್ವಾಸದ ಕೊರತೆಯ ಭಾವ ನಿಮ್ಮಲ್ಲಿ ಮೂಡಬಹುದು.
ಮಾನಸಿಕಸ್ವಾಸ್ಥ್ಯ ಆರೈಕೆಯ ಅಗತ್ಯವೇನು ?
ಕ್ಯಾನ್ಸರ್ ರೋಗದಿಂದ ಉದ್ಭವಿಸಬಹುದಾದ ಒತ್ತಡಗಳು ಮತ್ತು ಸಮಸ್ಯೆಗಳಿಂದಾಗಿ ಮಾನಸಿಕ ಸ್ವಾಸ್ಥ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ರೋಗ ಪತ್ತೆಯಾದಾಗಿನಿಂದ ಬಹಳ ದಿನಗಳವರೆಗೆ ಅಥವಾ ವಾರಗಳವರೆಗೆ ಆಘಾತ, ನಡುಕ, ಭಯ ಮತ್ತು ಸ್ವಾಸ್ಥ್ಯದ ಬಗೆಗಿನ ಆತಂಕ ಕಾಣಿಸಿಕೊಳ್ಳುತ್ತಿರುತ್ತದೆ. ಆದ್ದರಿಂದ ನಿಮ್ಮ ಭಾವನೆಗಳನ್ನು / ಆತಂಕವನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದರೆ ಸೂಕ್ತ ನೆರವನ್ನು ಪಡೆಯುವುದು ಮುಖ್ಯವಾಗುತ್ತದೆ.
ಕ್ಯಾನ್ಸರ್ ಗೆ ತುತ್ತಾಗುವ ವ್ಯಕ್ತಿಗಳು ಹೆಚ್ಚಾಗಿ ಖಿನ್ನತೆ ಅಥವಾ ಉದ್ವೇಗಕ್ಕೆ ಒಳಗಾಗುತ್ತಾರೆ. ಮತ್ತು ಮಾನಸಿಕ ಅನಾರೋಗ್ಯವು ಅವರ ದೈಹಿಕ ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ನಿಮಗೆ ಕ್ಯಾನ್ಸರ್ ಇದೆಯೆಂದು ತಿಳಿದುಬಂದರೆ ಆರೈಕೆಗಾಗಿ ಸಿದ್ಧಪಡಿಸಿರುವ ಯೋಜನೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು. ಇದು ನೀವು ಶೀಘ್ರ ಗುಣಮುಖರಾಗಲು ಸಹಕಾರಿಯಾಗಿರುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುವುದು ಹೇಗೆ ?
ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಬಗ್ಗೆಯೂ ಸರಿಸಮಾನವಾಗಿ ಕಾಳಜಿ ವಹಿಸಬೇಕು.
ಇವೆರಡನ್ನೂ ಯಾವ ರೀತಿಯಲ್ಲಿ ಸಮತೋಲಿತವಾಗಿ ನಿರ್ವಹಿಸಬೇಕೆಂಬುದರ ಬಗ್ಗೆ ಈ ಕೆಳಗೆ ಕೆಲವು ಮಾರ್ಗೋಪಾಯಗಳನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ಮಾರ್ಗದರ್ಶಿ ಸೂತ್ರದಲ್ಲಿ ನಿಮಗೆ ಅನುಕೂಲವಾಗುವಂತಹ, ನಿರ್ವಹಿಸಬಹುದಾದಂತಹ ಅಂಶಗಳನ್ನು ಆಯ್ಕೆ ಮಾಡಿಕೊಂಡು, ನಿಮ್ಮ ದೈಹಿಕ ಸ್ಥಿತಿಗತಿ ಹಾಗೂ ವೈದ್ಯರ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾನ್ಸರ್ ವಿರುದ್ಧ ಹೋರಾಡಲು ಪ್ರಯತ್ನಿಸಿ.
ನಿಮ್ಮ ಕಾಯಿಲೆಗೆ ಸಂಬಂಧಿಸಿದಂತೆ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ನಿಮಗಿರುವ ಎಲ್ಲಾ ರೀತಿಯ ಸಂಶಯಗಳನ್ನು, ಪ್ರಶ್ನೆಗಳನ್ನು ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಪರಿಹರಿಸಿಕೊಳ್ಳಿ. ಹೀಗೆ ಸ್ಪಷ್ಟಮಾಹಿತಿ ಪಡೆಯುವುದರಿಂದ ನಿಮ್ಮ ಉದ್ವೇಗವನ್ನು ನಿಯಂತ್ರಿಸಿಕೊಳ್ಳಬಹುದು.
ಆರೋಗ್ಯದಿಂದಿರಲು ಅನುಸರಿಸಬೇಕಾದ ಆಹಾರ ಪದ್ಧತಿಗಳು ಮತ್ತು ಜೀವನಶೈಲಿಯ ಬದಲಾವಣೆ ಬಗ್ಗೆ ವೈದ್ಯರೊಡನೆ ಸಮಾಲೋಚನೆ ನಡೆಸಿ. ಉದ್ವೇಗ ಮತ್ತು ಖಿನ್ನತೆಯನ್ನು ಹೆಚ್ಚಿಸಬಹುದಾದಂತಹ ಹಾಗು ದೇಹದ ಮೇಲೆ ದುಷ್ಪರಿಣಾಮ ಬೀರುವಂತಹ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
ದೈನಂದಿನ ಚಟುವಟಿಕೆಯಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳಿ. ಕಡೆಪಕ್ಷ ಸ್ವಲ್ಪ ನಡೆದಾಡುವುದಾದರೂ ಸರಿ.
ಸಾಧ್ಯವಾದಷ್ಟು ಸೂಕ್ತ ನಿದ್ರಾ ವಿಧಾನಗಳನ್ನು ಅನುಸರಿಸಿ. ರಾತ್ರಿಯ ವೇಳೆಯಲ್ಲಿ ಅತಿ ಹೆಚ್ಚು ನಿದ್ರಿಸುವುದರಿಂದ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬಹುದು ಮತ್ತು ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.
ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಯಾವುದಾದರೂ ಕೆಲಸಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಈ ಮೂಲಕ ಉದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.
ಸಾಮಾಜಿಕ ಬೆಂಬಲವನ್ನು ಕ್ರೋಢೀಕರಿಸಿ, ನೆರವು ಪಡೆಯಿರಿ. ನಿಮ್ಮ ಕುಟುಂಬ, ಮಿತ್ರರು, ನೆರೆಹೊರೆಯವರಿಂದ ಅಗತ್ಯ ಭಾವನಾತ್ಮಕ ಬೆಂಬಲ ಪಡೆದುಕೊಳ್ಳಿ.
ನಿಮಗೆ ಸೂಕ್ತವೆನಿಸುವ ರೀತಿಯಲ್ಲಿ ಭಾವನೆಗಳನ್ನು, ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಆಪ್ತರೊಂದಿಗೆ ಸಮಾಲೋಚಿಸಿ, ಅನಿಸಿಕೆ - ಅಭಿಪ್ರಾಯಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಅಥವಾ ಇತರ ಯಾವ ರೀತಿಯಲ್ಲಾದರೂ ವ್ಯಕ್ತಪಡಿಸಿ.
‘ಲೋಕಲ್ ಸಪೋರ್ಟ್ ಗ್ರೂಪ್’ಗೆ ಸೇರಿಕೊಳ್ಳಿ (ಅಂತಹ ಗ್ರೂಪ್ ಗಳ ಸೌಲಭ್ಯಗಳಿದ್ದಲ್ಲಿ)
ಜೊತೆಗೆ, ನಿಮ್ಮ ರೋಗಕ್ಕೆ ಸಂಬಂಧಿಸಿದಂತೆ ಸೂಕ್ತ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿ. ಮಾನಸಿಕ ಬೆಂಬಲದಿಂದ ಚಿಕಿತ್ಸೆಯ ಸಂದರ್ಭದಲ್ಲಿ, ವಿವಿಧ ಹಂತಗಳಲ್ಲಿ ನಿಮಗೆ ನೈತಿಕ ಬೆಂಬಲ ದೊರೆಯುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಚಿಕಿತ್ಸೆಗೆ ಸ್ಪಂದಿಸಲು ಅನುಕೂಲವಾಗುತ್ತದೆ. ಸೂಕ್ತ ತರಬೇತಿ ಹೊಂದಿದ ಮಾನಸಿಕ ತಜ್ಞರೊಂದಿಗೆ ಭಾವನೆಗಳನ್ನು, ಸಮಸ್ಯೆಗಳನ್ನು ಹಂಚಿಕೊಳ್ಳುವುದರಿಂದ ಸ್ಪಷ್ಟಚಿತ್ರಣ ದೊರೆಯುತ್ತದೆ. ಇದರಿಂದ ಒತ್ತಡವನ್ನು ಗುರುತಿಸಿ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಇದರಿಂದ ಉಂಟಾಗುವ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡುಕೊಂಡು ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲು ಅನುಕೂಲವಾಗುತ್ತದೆ.
(ಸೈಕೋ ಆಂಕಾಲಜಿಸ್ಟ್ ಮತ್ತು ಕೌನ್ಸೆಲಿಂಗ್ ಸೈಕಾಲಜಿಸ್ಟ್ ಆಗಿ ಕಾರ್ಯಪ್ರವೃತ್ತರಾಗಿರುವ ಹೀಬಾ ಸಿದ್ದಿಕಿ ಅವರು ನೀಡಿದ ಮಾಹಿತಿ ಆಧರಿಸಿ ಈ ಲೇಖನ ಸಿದ್ಧಪಡಿಸಲಾಗಿದೆ.)