ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯ ಬಗ್ಗೆ ಸಮಾಜದ ದ್ವಂದ್ವನಿಲುವುಗಳ 'ಪುಷ್ಪಕವಿಮಾನ'

ಮಾನಸಿಕ ಸಮಸ್ಯೆಯಿರುವ  ವ್ಯಕ್ತಿಯ ಬಗ್ಗೆ ಸಮಾಜದ ದ್ವಂದ್ವ ನಿಲುವುಗಳ  ‘ಪುಷ್ಪಕ ವಿಮಾನ’.  

ವಿಮರ್ಶೆ: ರೇಣುಕಾಂಬಿಕೆ. ಆರ್

ವೈಟ್ ಸ್ವಾನ್ ಫೌಂಡೇಶನ್

ಯಾವುದೇ  ರೀತಿಯ ಸಂದೇಶ ರವಾನಿಸಲು, ಸಿನಿಮಾ ಒಂದು  ಅತ್ಯಂತ ಪ್ರಭಾವಶಾಲಿ ಮಾಧ್ಯಮ.  ಕನ್ನಡ ಚಿತ್ರರಂಗದಲ್ಲಿ , ಮಾನಸಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಹಲವಾರು ಸಿನಿಮಾಗಳು ಬಂದಿವೆ. ಎಪ್ಪತ್ತರ ದಶಕದ ಮಾನಸ ಸರೋವರ, ಶರಪಂಜರ,ಕಾಡಿನ ಬೆಂಕಿ ಸಿನಿಮಾಗಳಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಪುಷ್ಪಕ ವಿಮಾನ ಚಿತ್ರದವರೆಗೂ ಮಾನಸಿಕ ಸಮಸ್ಯೆ ಮತ್ತು ಅದರ ಸುತ್ತಲಿನ ಸಾಮಾಜಿಕ ಕಳಂಕ, ಮೂಢನಂಬಿಕೆ ಇತ್ಯಾದಿ ವಿಷಯಗಳ  ಬಗ್ಗೆ ಜಾಗೃತಿ ಮೂಡಿಸಲು ಹಲವಾರು  ನಿರ್ದೇಶಕರು ಪ್ರಯತ್ನಿಸುತ್ತಲೇ ಇದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ಪುಷ್ಪಕ ವಿಮಾನ ಸಿನಿಮಾದಲ್ಲಿ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನ ಜೀವನದಲ್ಲಿ ಜರುಗುವ ಘಟನೆಗಳನ್ನು ಆಧರಿಸಿದ ಚಿತ್ರಕಥೆ ಇದೆ. ಈ ಚಿತ್ರದಲ್ಲಿ ಪ್ರಮುಖವಾಗಿ ಕೆಲವು ಅಂಶಗಳು ಗಮನ ಸೆಳೆಯುತ್ತವೆ

  •  ಮಾನಸಿಕ ಅಸ್ವಸ್ಥ ವ್ಯಕ್ತಿಯೂ ಎಲ್ಲರಂತೆ ಸಹಜವಾಗಿ ಜೀವನ ಮಾಡಬಲ್ಲ.
  • ಆತನಿಗೂ ಎಲ್ಲರಂತೆಯೇ ಸಹಜ ಭಾವನೆಗಳು ಮತ್ತು ಬದುಕುವ ಹಕ್ಕು ಇರುತ್ತದೆ.
  • ಮಾನಸಿಕ ಸಮಸ್ಯೆಯ ಬಗ್ಗೆ ಇರುವ ಸಾಮಾಜಿಕ ಕಳಂಕ.
  • ಮಾನಸಿಕ ಸಮಸ್ಯೆಯ ಬಗ್ಗೆ ನಮಗಿರಬೇಕಾದ ಕಾಳಜಿ ಮತ್ತು ಸಮಸ್ಯೆಯಲ್ಲಿರುವವರಿಗೆ ನಾವು ನೀಡಬೇಕಾದ ಬೆಂಬಲ.

ಚಿತ್ರದ ನಾಯಕ ರಮೇಶ್ ಅರವಿಂದ್ ಗೆ ಬುದ್ಧಿಮಾಂದ್ಯತೆ ಇರುತ್ತದೆ. ಆತನಿಗೆ ತನ್ನ ಮಗಳೆಂದರೆ ಅತಿಯಾದ ಪ್ರೀತಿ . ಎಲ್ಲರಂತೆ ತನ್ನ ಮಗುವಿನ ಆರೈಕೆ ಮಾಡುತ್ತಾನೆ ಮತ್ತು  ಭವಿಷ್ಯದ ಕನಸು ಕಾಣುತ್ತಾನೆ. ಚಿತ್ರದ ಹಲವಾರು ಸನ್ನಿವೇಶಗಳಲ್ಲಿ ಆತನಿಗಿರುವ ಮಾನವೀಯ ಸಹಜ ಗುಣ  ಮತ್ತು ಸಮಾಜದಿಂದ ಆತ ಪ್ರತ್ಯೇಕ ವ್ಯಕ್ತಿಯಲ್ಲ ಎಂಬ ಅಂಶವನ್ನು ಎತ್ತಿ ಹಿಡಿದಿದ್ದಾರೆ.  ಆತನಿಗೂ ಇತರರನ್ನು ಕಂಡರೆ ಸಹಾಯ ಮಾಡುವ ಮನಸ್ಥಿತಿ, ಕರುಣೆ, ಪ್ರೀತಿಸುವ ಗುಣ  ಇದೆ. ಮತ್ತು ಇತರರಂತೆ ಬದುಕುವ ಹಕ್ಕು ಇದೆ ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಚಿತ್ರದ ಮತ್ತೊಂದು ಮಜಲು, ಸಮಾಜದ ನಡವಳಿಕೆಯನ್ನು ತೋರಿಸುತ್ತದೆ.  ಮಾನಸಿಕ ಸಮಸ್ಯೆಯ ಸುತ್ತಲಿರುವ ಕಳಂಕದ ಜೊತೆಗೆ ಜನರ ಸಹಾನುಭೂತಿಯನ್ನು ತೋರಿಸಿರುವುದು ವಿಶೇಷ.

ಚಿತ್ರದಲ್ಲಿ ನಾಯಕ, ತನ್ನ ಮಗಳಿಗೆ ಆಟದ ಸಾಮಾನು ಕೊಡಿಸಲು ಅಂಗಡಿಗೆ ಹೋಗುತ್ತಾನೆ. ಮುಗ್ಧನಾದ ಆತ, ತನ್ನ ಅಮಾಯಕತೆಯಿಂದ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಇಲ್ಲಿ ವಿದ್ಯಾವಂತ ಅಧಿಕಾರಿಯೊಬ್ಬ ‘ಮೆಂಟಲ್ ಕೇಸ್’ ಎಂದು ಅಪಹಾಸ್ಯ ಮಾಡುವ ಸನ್ನಿವೇಶ, ಸಮಾಜದಲ್ಲಿ ಮಾನಸಿಕ ಸಮಸ್ಯೆ ಇರುವ  ವ್ಯಕ್ತಿಯನ್ನು ಕಂಡಾಗ ಜನರು ಹೇಗೆ ವರ್ತಿಸುತ್ತಾರೆ ಎಂಬುದರ ಉದಾಹರಣೆಯಾಗಿದೆ. ಮತ್ತೊಂದು ಸನ್ನಿವೇಶದಲ್ಲಿ ತಾನು ಮಾಡದೇ ಇರುವ ಅಪರಾಧಕ್ಕೆ  ಬಲಿಯಾಗುವ ನಾಯಕ, ಸನ್ನಿವೇಶವನ್ನು ವಿವರಿಸಲು ಸೋಲುತ್ತಾನೆ. ಕಾನೂನಿನ ಕಣ್ಣಿನಲ್ಲಿ ಅಪರಾಧಿಯಾಗುತ್ತಾನೆ. ಆತನಿಗಿರುವ ಮಾನಸಿಕ  ಸಮಸ್ಯೆಯಿಂದ,  ಮಾತನಾಡಲು ಅವಕಾಶ ಮಾಡಿಕೊಡದ ಜನರು ಕ್ರೂರವಾಗಿ ವರ್ತಿಸುತ್ತಾರೆ. ಇದರಿಂದ ಆತ  ಶಿಕ್ಷೆ ಅನುಭವಿಸುತ್ತಾನೆ. ಈ  ಮೂಲಕ ವಾಸ್ತವದಲ್ಲಿ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಯೊಂದಿಗೆ ಜನರ ವರ್ತನೆ ಹೇಗಿರುತ್ತದೆ ಎಂಬುದನ್ನು ವಿವರಿದ್ದಾರೆ.

ಮೊದಮೊದಲು ವ್ಯಕ್ತಿಯನ್ನು ಅಪಹಾಸ್ಯ ಮಾಡುತ್ತಿದ್ದ ಸ್ನೇಹಿತರು, ಕಾಲಕ್ರಮೇಣ ಆತನನ್ನು ಪ್ರೀತಿಯಿಂದ ನೋಡಲು ಆರಂಭಿಸುತ್ತಾರೆ  ಮತ್ತು ತಾನು ಮಾಡದಿರುವ  ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ  ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ .ಇಲ್ಲಿ ಸಮುದಾಯ ಬೆಂಬಲದ ಪ್ರಾಮುಖ್ಯತೆ ಅರಿಯಬಹುದು.  ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಸೈಕಾಲಜಿ ಶಿಕ್ಷಣದ ಹಿನ್ನಲೆಯಿದ್ದು, ವ್ಯಕ್ತಿಯ ನಡವಳಿಕೆ ಮತ್ತು ಭಾವನೆಗಳನ್ನು ಗಮನಿಸಿ, ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಹಿರಿಯ ಅಧಿಕಾರಿಗೆ ವಿವರಿಸಲು ಪ್ರಯತ್ನಿಸುತ್ತಾರೆ. ಆತನಿಗೆ  ಮಾನಸಿಕ ಬೆಂಬಲ ನೀಡುತ್ತಾ ಆತನನ್ನು ಕಾನೂನಾತ್ಮಕವಾಗಿ ರಕ್ಷಿಸಲು ಪ್ರಯತ್ನಿಸುವ  ಸನ್ನಿವೇಶಗಳು ,ಸಮಸ್ಯೆಯಿರುವ  ವ್ಯಕ್ತಿಗೆ ಸರಿಯಾದ ಮಾರ್ಗದರ್ಶನ ಮತ್ತು ಮಧ್ಯಸ್ಥಿಕೆಯ ಅಗತ್ಯವಿದೆ ಎಂಬ ಸಂದೇಶ ನೀಡುತ್ತವೆ. ಹಾಗಾದರೆ ಈ ವಿಷಯದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಎಷ್ಟು ಮುಖ್ಯವಾಗುತ್ತದೆ ಎಂಬುದು ಇಲ್ಲಿ ತಿಳಿಯಬೇಕಾದ ವಿಷಯ.

ಚಿತ್ರದ ಮತ್ತೊಂದು ಅಂಶವನ್ನು ವಿಮರ್ಶಾತ್ಮಕವಾಗಿ ಹೇಳುವುದಾದರೆ,  ಪ್ರೇಕ್ಷಕರನ್ನು ಭಾವನಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯಲು  ಪ್ರಯತ್ನಿಸಿರುವ ನಿರ್ದೇಶಕರು ವೈಜ್ಞಾನಿಕವಾಗಿ ಕೆಲವೊಂದು ಕಡೆ ಎಡವಿದ್ದಾರೆ ಅನ್ನಿಸುತ್ತದೆ. ಮಾನಸಿಕ ಸಮಸ್ಯೆಯಂತಹ ಸೂಕ್ಷ್ಮ ವಿಷಯದ  ಬಗ್ಗೆ ಸಿನಿಮಾ ಮಾಡುವಾಗ, ಕೆಲವು ವಿಷಯಗಳ ಕಡೆ ಗಮನ ನೀಡಬೇಕಿತ್ತು.ಏಕೆಂದರೆ ಇದು ಜನರಿಗೆ ಸರಿಯಾದ ಸಂದೇಶ  ನೀಡುವ ಮಾಧ್ಯಮವಾಗಿದೆ.  ವ್ಯಕ್ತಿಯನ್ನು ಬುದ್ದಿಮಾಂದ್ಯ ಎಂದು ಚಿತ್ರಿಸುವಾಗ, ಸೂಕ್ಷ್ಮ ವಿಚಾರಗಳ ಬಗ್ಗೆ  ಸ್ಪಷ್ಟತೆ ಬೇಕಾಗುತ್ತದೆ . ಉದಾಹರಣೆಗೆ ವ್ಯಕ್ತಿ ಸಹಜವಾಗಿದ್ದು, ಮದುವೆಯಾಗಿ ಎಲ್ಲರಂತೆಯೇ ಜೀವನ ನೆಡೆಸುವಾಗ, ಆತನಿಗಿರುವ  ಸಮಸ್ಯೆ ಯಾವುದು ? ಅದರ ಲಕ್ಷಣಗಳೇನು ?  ಪರಿಣಾಮವೇನು? ಅದು ಹುಟ್ಟಿದಾಗಿನಿಂದ ಬಂದಿದ್ದಾ? ಅಥವಾ ಬೆಳವಣಿಗೆ ಹಂತದಲ್ಲಿ ಕಾಣಿಸಿಕೊಂಡಿತೇ ?  ಎಂಬುದನ್ನು  ವೈದ್ಯಕೀಯವಾಗಿ  ವಿವರಿಸಿಲ್ಲ.  

ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಸುನೀಲ್ ಹೆಬ್ಬಿ ಹೇಳುವ ಪ್ರಕಾರ ಸಾಮಾನ್ಯವಾಗಿ ಮಿತ ಲಕ್ಷಣವನ್ನು ಹೊಂದಿರುವ ಬುದ್ಧಿಮಾಂದ್ಯ ವ್ಯಕ್ತಿಗಳಲ್ಲಿ ನೂರಕ್ಕೆ ಶೇಕಡ 70 ರಷ್ಟು ಜನ  ಮದುವೆಯಾಗಲು ಸಾಧ್ಯವಿದೆ.  ಸಾಮಾಜಿಕ ಕಳಂಕದ ಕಾರಣದಿಂದ ಅವರ ಮನುಷ್ಯ ಸಹಜ ಗುಣ ಮತ್ತು ವರ್ತನೆಗಳನ್ನು ಅಪಹಾಸ್ಯ ಮಾಡಲಾಗುತ್ತದೆ. ಆದರೆ ಅವರೂ ಸಹ ಎಲ್ಲರಂತೆ ಮದುವೆಯಾಗಿ, ಮಕ್ಕಳನ್ನು ಪಡೆಯಲು ಮತ್ತು  ಅಗತ್ಯ ಕೌಶಲ್ಯ ಕಲಿತು ಉದ್ಯೋಗ ಮಾಡಲು ಅರ್ಹತೆ ಪಡೆದಿರುತ್ತಾರೆ.ಈ ವಿಷಯವನ್ನು ಜನರಿಗೆ ತಲುಪಿಸಲು ನಿರ್ದೇಶಕರು ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

 ಅಪ್ಪ ಮಗಳ ಬಾಂಧವ್ಯದ ಬಗ್ಗೆ ಭಾವನಾತ್ಮಕವಾಗಿ ಚಿತ್ರಿಸಿರುವ ನಿರ್ದೇಶಕರು, ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಒಂದು ಮಗುವಿದ್ದಾಗ, ಆ ಮಗು ಸಮಾಜದಲ್ಲಿ ಎದುರಿಸಬೇಕಾದ ಕಷ್ಟ, ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಆದರೆ ಒಬ್ಬ  ಶಿಕ್ಷಕಿ ಮತ್ತು ಪೋಲಿಸ್ ಅಧಿಕಾರಿ , ಮಗುವನ್ನು ಪ್ರೀತಿಯಿಂದ  ಆರೈಕೆ ಮಾಡುವುದು ಮತ್ತು ಶಿಕ್ಷಣಕ್ಕೆ ಸಹಾಯ ಮಾಡುವುದು, ಚಿತ್ರದ ಉತ್ತಮ ಅಂಶವಾಗಿದೆ.

ಕೆಲವು ಸನ್ನಿವೇಶಗಳಲ್ಲಿ ವ್ಯಕ್ತಿಯ ದೈಹಿಕ / ಮಾನಸಿಕ ಲಕ್ಷಣಗಳನ್ನು ತೋರಿಸುವಾಗ ಗೊಂದಲ ಕಾಣಿಸುತ್ತದೆ. ನಾಯಕನಿಗೆ ನಿರ್ಧಿಷ್ಟವಾಗಿ ಯಾವ ಮಾನಸಿಕ ಸಮಸ್ಯೆ ಇದೆ ಎಂದು ಗೊತ್ತಾಗುವುದಿಲ್ಲ ಮೊದಲನೆಯದಾಗಿ ನಮ್ಮಲ್ಲಿ ಮಾನಸಿಕ ಆರೋಗ್ಯ/ ಸಮಸ್ಯೆ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಉದಾಹರಣೆಗೆ - ನಡವಳಿಕೆಯ ಸಮಸ್ಯೆ, ಇದು ಯಾವ ಕಾರಣಕ್ಕೆ ಉಂಟಾಗುತ್ತದೆ ಎಂಬ ಸ್ಪಷ್ಟತೆ ನೀಡಿಲ್ಲ. ಇನ್ನೊಮ್ಮೆ ನಾಯಕ ಪರಿಸ್ಥಿತಿಯ ಬಗ್ಗೆ ವಿವರಿಸಲು ಕಷ್ಟ ಪಡುವಾಗ  ಈ ರೀತಿ ಏಕೆ ಆಗುತ್ತದೆ ಎಂಬುದನ್ನು ವೈದ್ಯಕೀಯವಾಗಿ  ವಿವರಿಸಬೇಕಿತ್ತು. ಜೊತೆಗೆ, ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿ ಬಗ್ಗೆ  ಸಮಾಜದ ಕರುಣೆ ಅಥವಾ ಅನುಕಂಪಕ್ಕಿಂತ ಸಾಮಾಜಿಕ ಜವಾಬ್ದಾರಿ ಮತ್ತು ಸಹಾನುಭೂತಿಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿತ್ತು.

ಚಿತ್ರದ ಅಂತಿಮ ದೃಶ್ಯವೊಂದರಲ್ಲಿ ಕೋರ್ಟಿನಲ್ಲಿ ವ್ಯಕ್ತಿಯ ಮಾನಸಿಕ ಸಮಸ್ಯೆಯನ್ನು ಸಾಬೀತು ಮಾಡುವಾಗ, ಸರಿಯಾದ ವೈದ್ಯಕೀಯ ಅಂಶಗಳು ಮತ್ತು ಸರಿಯಾದ ಮಾಹಿತಿ ಒದಗಿಸಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದರೆ  ಸಮಾಜಕ್ಕೆ ಮಾನಸಿಕ ಅಸ್ವಸ್ಥತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಉತ್ತಮ  ಪ್ರಯತ್ನವಾಗುತ್ತಿತ್ತು.   

ಮಾನಸಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ :

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org