ವ್ಯಕ್ತಿ ಮಾನಸಿಕ ತೊಂದರೆಯಿಂದ ಚೇತರಿಸಿಕೊಳ್ಳಲು ಸಮಾಜದ ಬೆಂಬಲ ಅಗತ್ಯ

ಕರ್ನಾಟಕ ರಾಜ್ಯದ ಪಾವಗಡ ತಾಲೂಕಿನ ಮಂಗಲವಾಡ ಗ್ರಾಮದ ಒಂದು ಗುಡಿಸಲಿನಲ್ಲಿ 32 ವರ್ಷದ ಹನುಮಂತರಾಯ ತನ್ನ ಸುತ್ತಲಿರುವ ನೆರೆಹೊರೆಯವರನ್ನು ವಿಚಲಿತನಾಗಿ ನೋಡುತ್ತಾ ಕುಳಿತಿರುತ್ತಾನೆ. ಹನುಮಂತರಾಯನು ಮಗುವಾಗಿದ್ದಾಗಲೇ ಸೈಕೋಸಿಸ್ ಮತ್ತು ಬೌದ್ಧಿಕ ವೈಕಲ್ಯತೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. ಆತನ ತಾಯಿಯಾದ ಲಕ್ಷ್ಮಮ್ಮ ಆತನ ಸರ್ವಸ್ವ ಮತ್ತು ಏಕೈಕ ಆರೈಕೆದಾರಳಾಗಿದ್ದಾಳೆ. 80 ವರ್ಷದ ಲಕ್ಷ್ಮಮ್ಮ ತುಂಬಾ ಬಳಲಿದ್ದಾರೆ. “ಪ್ರತಿ ಕ್ಷಣವೂ ಆತನ ಮೇಲೆ ನಿಗಾ ಇರಿಸುವುದು ಬಹಳ ಕಷ್ಟದ ಕೆಲಸ. ಕೆಲವೊಮ್ಮೆ ಆತ ತನ್ನ ಸುತ್ತಲೂ ಇರುವವರ ಮೇಲೆ ಕೋಪಗೊಳ್ಳುತ್ತಾನೆ. ನನ್ನ ನಂತರ ಈತನನ್ನು ಯಾರು ನೋಡಿಕೊಳ್ಳುತ್ತಾರೆ?” ಎಂಬ ಚಿಂತೆ ಲಕ್ಷ್ಮಮ್ಮನಿಗೆ.

ಲಕ್ಷ್ಮಮ್ಮ ಪಾವಗಡದ ನರೇಂದ್ರ ಫೌಂಡೇಶನ್ ಮತ್ತು ಬೆಂಗಳೂರಿನಲ್ಲಿರುವ ಬೇಸಿಕ್ ನೀಡ್ಸ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆ ಸೇರಿ ರಚಿಸಿರುವ ವೈಕಲ್ಯತೆಯ ಸ್ವ-ಸಹಾಯ ಸಂಘದ ಸದಸ್ಯೆಯಾಗಿದ್ದಾರೆ. ಈ ಸಂಸ್ಥೆಯು ಮಂಗಲವಾಡದಂಥ ಗ್ರಾಮದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಮುದಾಯ ಪಾಲ್ಗೊಳ್ಳುವಂತೆ ಕೆಲಸ ಮಾಡುತ್ತಿದೆ.

ಲಕ್ಷ್ಮಮ್ಮ ಮನೆಯಿಂದ ಹೊರಗೆ ಹೋಗಬೇಕಾದ ಸಂದರ್ಭದಲ್ಲಿ ತನ್ನ ಮಗನನ್ನು ನೋಡಿಕೊಳ್ಳಲು ಸಂಘದ ಸದಸ್ಯರು ಸಹಾಯ ಮಾಡುತ್ತಾರೆ. “ಒಬ್ಬ ಆರೈಕೆದಾರಳಾಗಿ ಆಕೆಯು ಒಬ್ಬಂಟಿತನ ಹಾಗೂ ಸುಸ್ತಿನಿಂದ ಬಳಲಬಹುದು. ನಾವು ಅವಳಂತಹ ಇತರ ಆರೈಕೆದಾರರು ಕೆಲ ಸಮಯದವರೆಗೆ ಆರೈಕೆಯ ಜವಾಬ್ದಾರಿಯಿಂದ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತೇವೆ. ನಾವು ಸರತಿಯಂತೆ ಒಂದು ಕುಟುಂಬದಲ್ಲಿರುವ ಮಾನಸಿಕ ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುತ್ತೇವೆ,” ಎನ್ನುತ್ತಾರೆ ವೈಕಲ್ಯತೆ ಸಂಘದ ಸದಸ್ಯರಾದ ಸತೀಶ್. ಹಾಗೆಯೇ ಸಣ್ಣಪುಟ್ಟ ಕೆಲಸಗಳಿಗೆ, ಉದಾಹರಣೆಗೆ ಹತ್ತಿರದ ಅಂಗಡಿಗೆ ಹೋಗುವುದಕ್ಕೆ ಆಕೆಯು ನೆರೆಹೊರೆಯವರ ಸಹಾಯ ಪಡೆಯುತ್ತಾಳೆ.

ಮಾನಸಿಕ ಆರೋಗ್ಯ ತಜ್ಞರು ಜಿಲ್ಲಾ ಹಂತದಲ್ಲಿ ನಡೆಸಿದ ಹಲವಾರು ವೈದ್ಯಕೀಯ ಶಿಬಿರಗಳು ಮತ್ತು ಅಭಿವೃದ್ಧಿ ಕಾರ್ಯಕರ್ತರು ಹಲವಾರು ವರ್ಷಗಳ ಕಾಲ ನಡೆಸಿದ ಜಾಗೃತಿ ಕಾರ್ಯಕ್ರಮಗಳಿಂದ ಅನಾರೋಗ್ಯಪೀಡಿತರು ಹಾಗೂ ಅವರ ಕುಟುಂಬದವರ ಅವಶ್ಯಕತೆಗಳನ್ನು ಅರಿತುಕೊಳ್ಳುವಂತೆ ಮಂಗಲವಾಡ ಹಾಗೂ ಮತ್ತಿತರ ಹಳ್ಳಿಗಳ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗಿದೆ. ಇದರಿಂದ ಲಕ್ಷ್ಮಮ್ಮಳಂತ ಆರೈಕೆದಾರರಿಗೆ ಸಹಾಯವಾಗಿದೆ.

ವ್ಯಕ್ತಿ ಮಾನಸಿಕ ಅನಾರೊಗ್ಯದಿಂದ ಚೇತರಿಸಿಕೊಳ್ಳುವಲ್ಲಿ ಸಮುದಾಯದ ಆರೈಕೆ ಯಾಕೆ ಪ್ರಮುಖವಾದ ಅಂಶವಾಗಿದೆ?

ಮಾನಸಿಕ ಅನಾರೋಗ್ಯ ಪೀಡಿತರ ಆರೈಕೆಯು ಔಷಧಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವರು ವಾಸಿಸುವ ಸಮುದಾಯದ ಮತ್ತು ಆರೈಕೆದಾರರ ಬೆಂಬಲ ಹಾಗೂ ಪುನಃಶ್ಚೇತನ ಬಹಳ ಮುಖ್ಯ. ವೈದ್ಯಕೀಯ ಚಿಕಿತ್ಸೆಯ ನಂತರ ವ್ಯಕ್ತಿ ತಮ್ಮ ದೈನಂದಿನ ಚಟುವಟಿಕೆ ನಿಭಾಯಿಸುವಂತಾಗಲು, ಕೆಲಸಕ್ಕೆ ತೆರಳಲು, ತಮ್ಮನ್ನು ಹಾಗೂ ಕುಟುಂಬದವರನ್ನು ಸಲಹಲು ಮತ್ತು ಸಮುದಾಯದಲ್ಲಿ ಭಾಗವಹಿಸಲು ಅವರಿಗೆ ಪುನಃಶ್ಚೇತನದ ಅಗತ್ಯವಿರುತ್ತದೆ.

ಮಾನಸಿಕ ಆರೋಗ್ಯವನ್ನು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಸೇರಿಸಿ ಸಮುದಾಯಗಳಿಗೆ ಸೂಕ್ತವಾದ   ಸೇವೆ ನೀಡಬೇಕು. ಬೇಸಿಕ್ ನೀಡ್ಸ್ ಇಂಡಿಯಾದಂತಹ ಸಂಸ್ಥೆಯು ಉಳಿದ ತನ್ನ ಸಹಬಾಗಿ ಸಂಸ್ಥೆಗಳ ಮತ್ತು ಮಾನಸಿಕ ಆರೋಗ್ಯ ತಜ್ಞರ ಜೊತೆಯಲ್ಲಿ ಸಮುದಾಯ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಸಮುದಾಯ ಕಾರ್ಯಕರ್ತರು ಜಾಗೃತಿಯನ್ನು ಉಂಟುಮಾಡಲು, ರೋಗಿಗಳನ್ನು ತಲುಪಲು ಮತ್ತು ಅವರಿಗೆ ವೈದ್ಯಕೀಯ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯಲು ಸಹಾಯ ಮಾಡುತ್ತಾರೆ. ಹಳ್ಳಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ ಮತ್ತು ಹಾಡುಗಳ ಮೂಲಕ ಜಾಗೃತಿ ಶಿಬಿರಗಳನ್ನು ಸಹ ಏರ್ಪಡಿಸುತ್ತಾರೆ.

ಸಮುದಾಯ ಆರೈಕೆಯೆಂದರೇನು?

ಈರೋಡ್ ಜಿಲ್ಲೆಯ ತಲ್ವಾಡಿ ಪ್ರದೇಶದಲ್ಲಿ ಶಾಂತಾರಾಮ್ ಎಂಬ ಮಾನಸಿಕ ಅನಾರೋಗ್ಯ ಪೀಡಿತ ವ್ಯಕ್ತಿಯು ರಸ್ತೆಯಲ್ಲಿ ಅಲೆದಾಡುತ್ತಲಿದ್ದ. ಅದನ್ನು ನೋಡಿದ ಸ್ವಯಂಸೇವಾ ಸಂಸ್ಥೆಯೊಂದರ ಪ್ರತಿನಿಧಿ ಆತನನ್ನು ಹತ್ತಿರದ ವೈದ್ಯಕೀಯ ಶಿಬಿರಕ್ಕೆ ಕರೆದುಕೊಂಡು ಹೋದರು. ಆತನ ಚಿಕಿತ್ಸೆಯ ಜವಾಬ್ದಾರಿಯನ್ನು ಹೊರಲು ಯಾವ ಆರೈಕೆದಾರರೂ ಲಭ್ಯವಿರದ ಕಾರಣ ಪೋಲಿಸರೇ ಆತನ ಹೊಣೆಯನ್ನು ವಹಿಸಿಕೊಂಡರು. ಸುಮಾರು ಮೂರು ತಿಂಗಳವರೆಗೆ ಪೋಲಿಸ್ ಸಿಬ್ಬಂದಿಗಳೇ ಆತನಿಗೆ ಔಷಧ ನೀಡಿದರು. ತನ್ನ ಅನಾರೋಗ್ಯದಿಂದ ಚೇತರಿಸಿಕೊಂಡ ಶಾಂತಾರಾಮ್ ಕೊನೆಗೆ ತಾನು ಎಲ್ಲಿಂದ ಬಂದಿರುವೆನೆಂಬ ವಿಷಯವನ್ನು ತಿಳಿಸಿದನು. ಪೋಲಿಸ್ ಸಿಬ್ಬಂದಿಗಳು ಆತನ ಸ್ವಂತ ಊರಿಗೆ ಕರೆದುಕೊಂಡು ಹೋಗಿ ಬಿಟ್ಟರು.

ಈ ಉದಾಹರಣೆಯು ನೈಜ ಘಟನೆಯನ್ನು ಆಧರಿಸಿದೆ. ಖಾಸಗಿತನವನ್ನು ರಕ್ಷಿಸಲು ಹೆಸರುಗಳನ್ನು ಬದಲಿಸಲಾಗಿದೆ.

ಸಮುದಾಯದ ಸದಸ್ಯರು ಮಾನಸಿಕ ಖಾಯಿಲೆಯಿರುವ ವ್ಯಕ್ತಿಗಳ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಂಡು ಬೆಂಬಲ ನೀಡುತ್ತಾರೆ. ಇಲ್ಲಿ ಪ್ರಮುಖವಾಗಿ ಔಷಧ ನೀಡುವುದು, ವ್ಯಕ್ತಿಯ ಸುರಕ್ಷತೆ ಮತ್ತು ಒಳಿತನ್ನು ಗಮನಿಸಲಾಗುತ್ತದೆ. ಸಮುದಾಯದ ಆರೈಕೆದಾರರು (ಕುಟುಂಬದ ಇತರ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರು) ಮೂಲ ಆರೈಕೆದಾರರಿಗೆ ತಾತ್ಕಾಲಿಕವಾಗಿ ವಿಶ್ರಾಂತಿ ದೊರೆಯಲು ಶಾಯ ಮಾಡುತ್ತಾರೆ.

ಆರೈಕೆದಾರರು ತಜ್ಞರು ಸೂಚಿಸಿದ ರೀತಿಯಲ್ಲಿ ವ್ಯಕ್ತಿಗೆ ಔಷಧಿ ನೀಡಲು ತಿಳಿದಿರಬೇಕು. ಒಬ್ಬ  ವ್ಯಕ್ತಿಯ ಚಿಕಿತ್ಸೆ ವಿಧಾನ ಇನ್ನೊಂದು ವ್ಯಕ್ತಿಯಿಂದ ವಿಭಿನ್ನವಾಗಿರುತ್ತದೆ ಎಂದು ತಿಳಿದಿರಬೇಕು.

ನಗರ ಪ್ರದೇಶದಲ್ಲಿ ಸಮುದಾಯ ಆರೈಕೆಯು ಸಾಧ್ಯವೇ?

ನಗರ ಪ್ರದೇಶದಲ್ಲಿ ಆರೈಕೆದಾರರು ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡು ಆಗಾಗ ಪರಸ್ಪರ ಭೇಟಿಯಾಗಿ ಸಮಸ್ಯೆಗಳನ್ನು ಚರ್ಚಿಸಿ ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಸಮುದಾಯ ಆರೈಕೆಯ ಕಲ್ಪನೆ ನಗರಗಳಲ್ಲಿ ಇನ್ನೂ ಸಾಮಾನ್ಯವಾಗಿ ಕಂಡುಬರುವ ಅವಶ್ಯಕತೆಯಿದೆ. “ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯದ ಬಾಂಧವ್ಯ ಗಟ್ಟಿಯಾಗಿರುತ್ತದೆ. ಅಲ್ಲಿ ಸ್ವಯಂ ಪ್ರೇರಿತರಾಗಿ ಜನ ಇನ್ನೊಬ್ಬರ ಆರೈಕೆ ಮತ್ತು ಸಹಾಯ ಮಾಡಲು ಮುಂದೇಬರುತ್ತಾರೆ.

ಆದರೆ ನಗರ ಪ್ರದೇಶಗಲ್ಲಿ ಜನರು ಜಾಗದಿಂದ ಜಾಗಕ್ಕೆ ವಲಸೆ ಹೋಗುವುದರಿಂದ ಮತ್ತು ತಮ್ಮದೇ ಕಾರ್ಯಗಳಲ್ಲಿ ವ್ಯಸ್ಥರಾಗಿರುವುದರಿಂದ ಸಮುದಾಯ ಭಾವನೆಯು ಸದೃಢವಾಗಿ ಇರುವುದಿಲ್ಲ. ಆದರೆ ಅಂತಹ ಒಂದು ವ್ಯವಸ್ಥೆ ಇದ್ದರೆ ಆರೈಕೆದಾರರಿಗೆ ಹೆಚ್ಚಿನ ನೆರವಾಗುತ್ತದೆ.” ಎನ್ನುತ್ತಾರೆ ನಿಮ್ಹಾನ್ಸ್ ನ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಎನ್ ಜನಾರ್ಧನ.

ಸಮುದಾಯ ಮಾನಸಿಕ ಅನಾರೋಗ್ಯವಿರುವ ವ್ಯಕ್ತಿಗಳ ಆರೈಕೆಯಲ್ಲಿ ತೊಡಗಬೇಕಾದರೆ ಅವರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚಿನ ತಿಳುವಳಿಕೆ ಹಾಗೂ ಈ ವ್ಯಕ್ತಿಗಳ ಬಗ್ಗೆ ಸಹಾನುಭೂತಿ ಇರಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಆರೈಕೆದಾರರು ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಾಗುವ ಲಾಭಗಳು

ಸ್ಕಿಜೋಫ್ರೀನಿಯಾ, ಬೈಪೋಲಾರ್ ಡಿಸಾರ್ಡರ್ ಮುಂತಾದ ಗಂಭೀರ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆಯು ದೀರ್ಘಕಾಲೀನವಾಗಿದೆ. ಇದು ಕೆಲ ಸಮಯಾನಂತರ ಆರೈಕೆದಾರಲ್ಲಿ ಬಳಲಿಕೆಯನ್ನುಂಟು ಮಾಡಬಹುದು. ಅವರಿಗೆ ತಮ್ಮ ಉದ್ಯೋಗದಲ್ಲಿ ತೊಡಗಲು ಸಾಮಾಜಿಕ ಸಮಾರಂಭಗಳಲ್ಲಿ ಬೆರೆಯಲು ಸಾಧ್ಯವಾಗದೇ ಇರಬಹುದು.

ಆದರೆ ಮನೆಯವರು ಮತ್ತು ನೆರೆಹೊರೆಯವರ ಸಹಾಯದಿಂದ ಅವರ ಹೊರೆಯು ಕಡಿಮೆಯಾಗಲು ಸಾಧ್ಯ. ಇದರಿಂದ ಲಕ್ಷ್ಮಮ್ಮನಂತಹ ಆರೈಕೆದಾರರು ತಮ್ಮ ಉದ್ಯೋಗವನ್ನು ನಿರ್ವಹಿಸಿ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಸಾಧ್ಯ. ಸಮುದಾಯದ ಬೆಂಬಲದಿಂದ ಆರೈಕೆದಾರರಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಪ್ರತ್ಯೇಕತೆಯ ಭಾವ ಕಾಡುವುದಿಲ್ಲ. ಸಮುದಾಯವು ಅನಾರೋಗ್ಯ ಪೀಡಿತ ವ್ಯಕ್ತಿಯ ನಡವಳಿಕೆಯನ್ನು ಅಂಗೀಕರಿಸುವುದರಿಂದ ವ್ಯಕ್ತಿಗೂ ಅಗತ್ಯ ಬೆಂಬಲ ದೊರೆಯುತ್ತದೆ. ಇದರಿಂದ ವ್ಯಕ್ತಿಯು ಚೇತರಿಸಿಕೊಂಡ ಮೇಲೆ ಸಮುದಾಯ ಅವರಿಗೆ ಕಾರ್ಯಶೀಲ ವ್ಯಕ್ತಿಯಾಗಲು ಸಹಕರಿಸುತ್ತದೆ.

ಸಮುದಾಯದ ಸದಸ್ಯರು ಹೇಗೆ ಸಹಾಯ ಮಾಡಬಹುದು?

  • ವ್ಯಕ್ತಿಯು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಲ್ಲಿ ನೀವು ಅವರ ಕೌಶಲ್ಯವನ್ನು ಆಧರಿಸಿ ಉದ್ಯೋಗ ಪಡೆಯಲು ಸಹಾಯ ಮಾಡಬಹುದು ಅಥವಾ ನೀವೇ ಉದ್ಯೋಗವನ್ನು ನೀಡಬಹುದು. ಒಂದು ವೇಳೆ ವ್ಯಕ್ತಿಯು ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಆರೈಕೆದಾರರಿಗೆ ಸಹಾಯ ಹಸ್ತ ಚಾಚಬಹುದು. ನಿಮ್ಮ ಸಹಾಯದಿಂದ ಅವರಿಗೆ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ.
  • ನೀವು ಅವರಿಗೆ ಕೆಲಸ ಹುಡುಕಲು ಬೇಕಾದ ವೃತ್ತಿ ಪತ್ರ ತಯಾರಿಸಲು ಸಹಾಯ ಮಾಡಬಹುದು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿಮಾಡಿ ವೈಕಲ್ಯತೆಯ ಪ್ರಮಾಣಪತ್ರ ಪಡೆಯಲು ನೆರವಾಗಬಹುದು.
  • ಆರೈಕೆದಾರರಿಗೆ ಹಲವು ಬಾರಿ ಒಬ್ಬಂಟಿತನ ಕಾಡುತ್ತದೆ. ಅವರನ್ನು ಆದಷ್ಟು ನಿಮ್ಮ ಮನೆಯ ಮತ್ತು ಸಮುದಾಯದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಮತ್ತು ನಿಮ್ಮ ಜೊತೆ ಬೆರೆಯಲು ಪ್ರೋತ್ಸಾಹಿಸಿ. ಸಾಧ್ಯವಾದರೆ ಅವರ ಭಾವನೆಗಳನ್ನು ಹೇಳಿಕೊಳ್ಳಲು ಪ್ರೋತ್ಸಾಹಿಸಿ. 

ಸಮುದಾಯದಲ್ಲಿ ಜಾಗೃತಿ ಮೂಡಿಸುವುದು

ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಸ್ಯೆಯ ಕುರಿತಾದ ಮಾಹಿತಿಯನ್ನು ಸಾರ್ವಜನಿಕರಿಗೆ ವಿತರಿಸಬೇಕು. ಅನಾರೋಗ್ಯದಿಂದ ಚೇತರಿಸಿಕೊಂಡ ವ್ಯಕ್ತಿಗೆ ಅಗತ್ಯ ಕೌಶಲ್ಯಗಳನ್ನು ಕಲಿಸಿ  ಅವರನ್ನು ಸಮುದಾಯದಲ್ಲಿ ಸೇರಿಸಿಕೊಳ್ಳಬೇಕು. ಬೀದಿ ನಾಟಕ, ಗೋಡೆ ಬರಹಗಳಿಂದಲೂ ಸಮುದಾಯದ ಸದಸ್ಯರಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಬಹುದು. “ ಈ ತರಹದ ಮಾಹಿತಿಗಳನ್ನು ಸತತವಾಗಿ ಹರಡುವುದರಿಂದ ಜನರಲ್ಲಿ ಜಾಗೃತಿ ಮೂಡಿಸಿ ತಪ್ಪ ನಂಬಿಕೆ ಹಾಗೂ ಕಳಂಕವನ್ನು ಕಡಿಮೆ ಮಾಡಲು ಸಾಧ್ಯ,” ಎನ್ನುತ್ತಾರೆ ಡಾ. ಜನಾರ್ಧನ. ಅವರೇ ಹೇಳುವಂತೆ, “ಚೇತರಿಸಿಕೊಂಡ ವ್ಯಕ್ತಿ ಕೂಡ ಸಮುದಾಯಕ್ಕೆ ಧನಾತ್ಮಕ ಕೊಡುಗೆ ನೀಡಲು ಇದರಿಂದ ಸಾಧ್ಯವಾಗುತ್ತದೆ.”

Related Stories

No stories found.