ಸಂದರ್ಶನ: ತಾರತಮ್ಯವು ಮಾನಸಿಕ ಅಸ್ವಸ್ಥತೆಯನ್ನು ದುರ್ಬಲಗೊಳಿಸುತ್ತದೆ

ಮಾನಸಿಕ ಅಸ್ವಸ್ಥತೆ ಇರುವವರನ್ನು ಸಮಾಜ ನೋಡುವ ದೃಷ್ಟಿಯನ್ನು ಬದಲಿಸಲು ಸಮಯ ಹಿಡಿಯುತ್ತದೆ. ಆದರೆ ನಾವು ಈ ನಿಟ್ಟಿನಲ್ಲಿ ಬಹಳಷ್ಟು ಸಾಧಿಸಿದ್ದೇವೆ, ಮತ್ತು ಇನ್ನಷ್ಟು ಬದಲಾವಣೆಯ ಭರವಸೆಯನ್ನು ಹೊಂದಿದ್ದೇವೆ

ನಮ್ಮ ಸಮಾಜದಲ್ಲಿ ಮಾನಸಿಕ ಖಾಯಿಲೆಯನ್ನು ಹೊಂದಿರುವವರ ಬಗ್ಗೆ ಬಹಳಷ್ಟು ತಪ್ಪು ಗ್ರಹಿಕೆ ಇದೆ. ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಕಳಂಕಿತಭಾವದಿಂದ ನೋಡುತ್ತ ದೂರವಿಡಲಾಗುತ್ತಿದೆ. ಈ ಕುರಿತು ವೈಟ್ ಸ್ವಾನ್ ಫೌಂಡೇಶನ್ನಿನ ಪೆಟ್ರೇಶಿಯಾ ಪ್ರೀತಮ್ ಅವರು ಮೆಲ್ಬೋರ್ನ್ ಯುನಿವರ್ಸಿಟಿಯ ವಿಶ್ರಾಂತ ಕುಲಪತಿ ಮತ್ತು ಮೆಲ್ಬೋರ್ನಿನ ಸೇಂಟ್ ವಿನ್ಸೆಂಟ್ ಆಸ್ಪತ್ರೆಯ ಗೌರವಾನ್ವಿತ ಹಿರಿಯ ಮನಃಶಾಸ್ತ್ರಜ್ಞ ಸಿಡ್ನಿ ಬ್ಲಾಕ್ ಅವರ ಜೊತೆ ಮಾನಸಿಕ ಶಿಕ್ಷಣದ ಅಗತ್ಯದ ಕುರಿತು ಚರ್ಚಿಸಿದ್ದಾರೆ. ಮಾನಸಿಕ ಅಸ್ವಸ್ಥರನ್ನು ಕುರಿತ ತಾರತಮ್ಯ ಮತ್ತು ತಪ್ಪುಗ್ರಹಿಕೆಯು ಮಾನಸಿಕ ರೋಗಿಗಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು. ಈ ಕುರಿತು ತಿಳುವಳಿಕೆ ನೀಡುವ ಮೂಲಕ ನಾವು ಸಮಾಜದ ದೃಷ್ಟಿಕೋನವನ್ನು ಬದಲಾಯಿಸಬಹುದು ಎಂದು ಡಾ. ಬ್ಲಾಕ್ ಅವರು ಅಭಿಪ್ರಾಯ ಪಡುತ್ತಾರೆ. ಸಂದರ್ಶನದ ವಿವರಗಳು;

ನೀವು ಮನಃಶಾಸ್ತ್ರಜ್ಞರಾಗಿ 40 ವರ್ಷಗಳ ಅನುಭವವನ್ನು ಹೊಂದಿದ್ದೀರಿ. ಕಳೆದ ಕೆಲ ವರ್ಷಗಳಲ್ಲಿ ಮಾನಸಿಕ ಆರೋಗ್ಯ ಕಾಳಜಿಯಲ್ಲಿ ಯಾವ ರೀತಿಯ ಬದಲಾವಣೆಯನ್ನು ಕಾಣುತ್ತಿದ್ದೀರಿ?

ಅತೀ ಕಡಿಮೆ ಮತ್ತು ಬಹಳ – ವಿರೋಧಾಭಾಸವೆನಿಸಿದರೂ ಕೂಡ ಇದು ನನ್ನ ಉತ್ತರವಾಗಿದೆ. ನಾನು ಮನಃಶಾಸ್ತ್ರಜ್ಞನಾಗಿ ವರ್ಷಗಳ ಹಿಂದೆ ಕಾರ್ಯ ಆರಂಭಿಸಿದಾಗಿನ ಸಮಯದಲ್ಲಿ ಔಷಧಗಳು ಬಹಳ ಕಡಿಮೆ ಇದ್ದವು. ಆ ಔಷಧಗಳ ಅಡ್ಡ ಪರಿಣಾಮಗಳು ವಿಪರೀತವಾಗಿದ್ದವು – ಕಂಪನ, ನಡುಕ, ಬಾಯಿ ಒಣಗುವುದು ಮುಂತಾದವು. ಹಾಗಾಗಿ ಆ ದಿನಗಳಿಗೆ ಹೋಲಿಸಿದರೆ ಈಗಿನ ಮಾನಸಿಕ ರೋಗಿಗಳ ಸ್ಥಿತಿ ಉತ್ತಮವಾಗಿದೆ. ನಾವು ಈಗ ಹಲವು ರೀತಿಯ ಚಿಕಿತ್ಸಾ ವಿಧಾನಗಳನ್ನು ಅರಿತಿದ್ದೇವೆ. ಕೇವಲ ಔಷಧಗಳು ಮಾತ್ರವಲ್ಲದೇ, ಮನಃಶಾಸ್ತ್ರಿಕ ಚಿಕಿತ್ಸೆ ಮತ್ತು ಸಾಮಾಜಿಕ ಆರೈಕೆಯಲ್ಲೂ ಹಿಂದಿಗಿಂತ ಹೆಚ್ಚು ಸುಧಾರಣೆಯಾಗಿದೆ. ಮಾನಸಿಕ ಅನಾರೋಗ್ಯದ ಸ್ವರೂಪದ ಬಗ್ಗೆ, ಅವು ಏನು, ಮೆದುಳಿನಲ್ಲಿ ಯಾವ ಲೋಪವಿದೆ ಎಂಬ ಕುರಿತು ಬಹಳಷ್ಟು ತಿಳಿದಿದ್ದೇವೆ. ಆದರೂ ನಾವು ಈ ನಿಟ್ಟಿನಲ್ಲಿ ಸಾಧಿಸಬೇಕಾಗಿರುವುದು ತುಂಬಾ ಇದೆ.

ಸಾಮಾನ್ಯ ಅನಾರೋಗ್ಯಗಳ ವಿಚಾರದಲ್ಲೂ ಇದೇ ಸಮಸ್ಯೆಯಿದೆ, ಉದಾಹರಣೆಗೆ ಚಿಕ್ಕಮಕ್ಕಳಲ್ಲಿನ ಆಟಿಸಮ್. ಮಕ್ಕಳು ಬೆಳೆದಂತೆ ಈ ಸಮಸ್ಯೆ ಗಂಭೀರವಾಗುತ್ತದೆ ಮತ್ತು ನಮಗೆ ಇದು ಏನೆಂದು ತಿಳಿಯುವುದಿಲ್ಲ. ಇದು ವಂಶಪಾರಂಪರ್ಯವಾಗಿ ಬರುವಂತದ್ದು ಎಂದು ನಾವು ಆಲೋಚಿಸುತ್ತೇವೆ. ಆದ್ದರಿಂದ ಸದ್ಯ ನಾವು ಆಟಿಸಮ್ ಬಗ್ಗೆ ಬಹಳ ಕಡಿಮೆ ತಿಳಿದಿದ್ದೇವೆ. ಆದರೆ ತಿಳಿಯಬೇಕಾದ್ದು ಬಹಳ ಇದೆ. ಅದೃಷ್ಟವಶಾತ್ ಇಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಯಲು ಅನೇಕ ದಾರಿಗಳಿವೆ. ನ್ಯೂರೋ ಇಮೇಜಿಂಗ್ ಸಹಾಯದಿಂದ, ಆಧುನಿಕ ಎಕ್ಸರೇ ಮೂಲಕ ಮೆದುಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಾವು ನೋಡಬಹುದು. ಕಂಪ್ಯೂಟರಿನ ಪರದೆಯ ಮೇಲೆ ಮೆದುಳಿನ ಭಾಗಗಳನ್ನು ನೋಡಲು ಅದ್ಭುತವೆನಿಸುತ್ತದೆ. ನಾವು ಜೆನೆಟಿಕ್ಸ್ ನ ಬಗೆಗೂ ಈಗ ಬಹಳ ತಿಳಿದಿದ್ದೇವೆ. ಕೆಲವು ಬಗೆಯ ಜೀನ್ ಗಳು ಆಟಿಸಮ್ ಗೆ ಕಾರಣವಾಗಿರುವುದರಿಂದ ಇದು ಬಹಳ ಪ್ರಮುಖ ವಿಷಯವಾಗಿದೆ. ಇದರಿಂದ ಮಗುವು ಆಟಿಸಮ್ ನಿಂದ ಬಳಲುವುದಕ್ಕೆ ಆ ಜೀನ್ಸ್ ಗಳು ಹೇಗೆ ಕಾರಣವಾಗಿದೆ ಎಂದು ತಿಳಿಯಬಹುದು. 2000ರಲ್ಲಿ ಮಾನವನ ಜೀನ್ಸ್ ರಚನೆಯನ್ನು ಕಂಡುಹಿಡಿದಂದಿನಿಂದ ತಳಿಶಾಸ್ತ್ರವು ಬಹಳ ಅಭಿವೃದ್ಧಿಯಾಗಿದೆ.

ಆದ್ದರಿಂದ ಪ್ರಯೋಗ ಶಾಲೆಗೆ ತೆರಳಿ ಮಾನವನ ಮಿದುಳಿನಲ್ಲಿರುವ ರಾಸಾಯನಿಕಗಳು, ನ್ಯೂರೋಟ್ರಾನ್ಸಮೀಟರ್ ಮತ್ತು ಉಳಿದ ಜೀನ ರಾಸಾಯನಿಕ ಕ್ರಿಯೆಗಳನ್ನು ಅಧ್ಯಯನ ಮಾಡಿ ಉಳಿದ ಗಂಭೀರ ಮಾನಸಿಕ ಖಾಯಿಲೆಗಳ ಬಗ್ಗೆ ತಿಳಿಯುವುದು ಸಾಧ್ಯವಿದೆ. ಇದರಿಂದ ಆ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಬಹುದು. ನಾವು ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದೇವೆ ಮತ್ತು ಇದಕ್ಕೆ ಸಮಯ ತಗಲುತ್ತದೆ. ಅದಕ್ಕಾಗಿ ಸಂಯಮದಿಂದ ಕಾಯಬೇಕು. ಆದರೆ ನಾವು ಈ ವಿಷಯದಲ್ಲಿ ಭರವಸೆಯನ್ನು ಹೊಂದಿದ್ದೇವೆ. ಇದೇ ನಾವು ಸದ್ಯ ನೀಡಬಹುದಾದ ಪ್ರಮುಖ ಸಂದೇಶವಾಗಿದೆ.

ಜಗತ್ತಿನಾದ್ಯಂತ ಸಮಾಜದಲ್ಲಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರು ಧೂಷಣೆ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ನಾವು ಈ ವಿಷಯವನ್ನು ಹೇಗೆ ನಿಭಾಯಿಸಬಹುದು ಮತ್ತು ಸಮಾಜದ ತಪ್ಪ ಗ್ರಹಿಕೆಯನ್ನು ಹೋಗಲಾಡಿಸಬಹುದು?

ಇದು ಅತ್ಯಂತ ಕಠಿಣವಾದ ಸವಾಲು. ಪ್ರಾರಂಭದಿಂದಲೂ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವವರನ್ನು ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ. ಅವರು ಉಳಿದವರಂತೆ ಸಾಮಾನ್ಯ ಜೀವನ ನಡೆಸಲಾರರು ಎಂದೇ ಭಾವಿಸಲಾಗುತ್ತಿದೆ. ಇದು ಭಾಗಶಃ ಸತ್ಯ, ಏಕೆಂದರೆ 18 ವರ್ಷದ ವಿದ್ಯಾರ್ಥಿಯೊಬ್ಬ ಗಂಭೀರ ಮಾನಸಿಕ ಖಾಯಿಲೆಗೆ ತುತ್ತಾದರೆ ಆತನ ವೃತ್ತಿಯನ್ನು ರೂಪಿಸಿಕೊಳ್ಳುವ, ಮದುವೆಯಾಗುವ ಮುಂತಾದ ಅವಕಾಶಗಳಲ್ಲಿ ಸ್ವಲ್ಪ ಅಡಚಣೆಯುಂಟಾಗಬಹುದು. ಇದರಿಂದಾಗಿ ಉಳಿದ ಜನರು ಇವರಲ್ಲಿ ಏನೋ ಒಂದು ಅಸಹಜತೆಯನ್ನು ಕಾಣುತ್ತಾರೆ. ಮತ್ತು ಅದೇನೆಂದು ಅವರಿಗೆ ಅರ್ಥವಾಗುವುದಿಲ್ಲ.

ಅಂತವರು ನಮ್ಮಂತೆ ಉತ್ಪಾದನಾಶೀಲ ಜೀವನವನ್ನು ನಡೆಸಲಾರರು ಎಂದು ಸಹ ನಾವು ಭಾವಿಸುತ್ತೇವೆ. ಬೇರೆ ಮಾತಿನಲ್ಲಿ ಹೇಳುವುದಾದರೆ ನಾವು ಅವರಿಗೆ ನ್ಯೂನ್ಯತೆಯ ಹಣೆಪಟ್ಟಿ ಹಚ್ಚುತ್ತೇವೆ ಮತ್ತು ಅವರ ವಿಷಯದಲ್ಲಿ ಪಕ್ಷಪಾತ ಮಾಡುತ್ತೇವೆ. ಅವರು ಕೆಲಸ ಮಾಡಲು ಅಸಮರ್ಥರೆಂದು ಅವರಿಗೆ ಉದ್ಯೋಗವನ್ನು ನೀಡುವುದಿಲ್ಲ. ಅವರು ಜವಾಬ್ದಾರಿಯನ್ನು ನಿಭಾಯಿಸಲು ಅಶಕ್ತರೆಂದು ಅವರಿಗೆ ಜವಾಬ್ದಾರಿಯನ್ನು ನೀಡುವುದಿಲ್ಲ. ಈ ರೀತಿ ಮಾನಸಿಕ ಅಸ್ವಸ್ಥರನ್ನು ದುರ್ಬಲಗೊಳಿಸಲಾಗುತ್ತದೆ.

ಇದನ್ನು ನಿಭಾಯಿಸಬೇಕೆಂದರೆ ಈ ಕುರಿತು ಶಿಕ್ಷಣ ನೀಡುವುದು ಅಗತ್ಯವಾಗಿದೆ. ಮಾನಸಿಕ ಅಸ್ವಸ್ಥರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ನಾವು ಜನರಿಗೆ ತಿಳಿಸಬೇಕು. ಒಬ್ಬ ಮನಃಶಾಸ್ತ್ರಜ್ಞನಾಗಿ, ರೋಗಿಗಳು ಮತ್ತು ಕುಟುಂಬದವರಲ್ಲಿ ಈ ರೀತಿಯ ತಾರತಮ್ಯ ಮತ್ತು ತಪ್ಪುಗ್ರಹಿಕೆಯನ್ನು ದೂರ ಮಾಡಲು ಸಹಾಯ ಮಾಡುವಂತೆ ಕೇಳುವ ವಿಧಾನವನ್ನು ನಾನು ಬಳಸಿದ್ದೇನೆ. ನಾನು ರೋಗಿಗಳಿಗೆ ಯಾವಾಗಲೂ ಅವರು ತಮ್ಮ ಕುಟುಂಬದವರ ಬಳಿ ತಾವೂ ಕೂಡ ಎಲ್ಲರಂತೆಯೇ ಮನುಷ್ಯರು, ತಮಗೂ ತಮ್ಮದೇ ಆದ ಅವಶ್ಯಕತೆಗಳು, ಭಾವನೆಗಳಿದ್ದು; ಒಂದು ಅನಾರೋಗ್ಯವಿದೆಯೆಂದು ತಿಳಿಸಲು ಮತ್ತು ಎಲ್ಲಕ್ಕಿಂತ ಮೊದಲು ಅವರು ಉಳಿದವರಂತೆ ಮನುಷ್ಯರು ಎಂದು ತಿಳಿಸಲು ಹೇಳುತ್ತೇನೆ.

ಆಸ್ಟ್ರೇಲಿಯಾವು ಅತ್ಯಂತ ಪ್ರಬುದ್ಧ ಮಾನಸಿಕ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿದೆ ಮತ್ತು ಉತ್ತಮ ಸಾಮಾಜಿಕ ಅಂಗೀಕರಣೆಯಿದ್ದು ಭಾರತಕ್ಕೆ ಹೋಲಿಸಿದರೆ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಿದೆ. ಮಾನಸಿಕ ಆರೋಗ್ಯ ಕ್ಷೇತ್ರವು ಇನ್ನೂ ಸಾಮಾಜಿಕ ಸಮಸ್ಯೆ ಮುಂತಾದ ಹಲವು ತೊಂದರೆಗಳಿಂದ ಬಳಲುತ್ತಿರು ಭಾರತದಂತಹ ದೇಶಕ್ಕೆ ನಿಮ್ಮ ಸಲಹೆ ಏನು?

ಹೌದು. ಇದೊಂದು ಬಹುದೊಡ್ಡ ಪ್ರಶ್ನೆ. ಆದರೆ ನೀವು ಹೇಳುವುದು ಪೂರ್ತಿ ಸರಿಯೆಂದು ನಾನು ಹೇಳಲಾರೆ. ನಾವು ಸ್ವಲ್ಪ ಮುಂದುವರೆದ ಸಮಾಜವನ್ನು ಹೊಂದಿದ್ದೇವೆ ಮತ್ತು ಮನಃಶಾಸ್ತ್ರ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದೇವೆ. ಆದರೆ ಮಾನಸಿಕ ಆರೋಗ್ಯವೆಂಬುದು ಸಿಂಡ್ರೆಲ್ಲಾಳಂತೆಯೇ ಬಡ ಸಂಬಂಧಿಕರನ್ನು ಹೊಂದಿದೆ. ಮೆಲ್ಬೋರ್ನಿನನಲ್ಲಿ ಒಂದು ಹೃದಯದ ಕಸಿಗೆ ಅರ್ಧ ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ. ಸಮಾಜವು ಅದನ್ನು ಭರಿಸಲು ಸಿದ್ಧವಿದೆ. ಇದಕ್ಕೆ ಹೋಲಿಸಿದರೆ ಮಾನಸಿಕ ರೋಗಿಗೆ ಚಿಕಿತ್ಸೆ ನೀಡಲು ಅಲ್ಪ ಮೊತ್ತ ಸಾಕು. ಆದರೆ ಸಮಾಜವು ಅತ್ಯಂತ ಕ್ಲಿಷ್ಟ ಮತ್ತು ಪರಿಣಾಮಕಾರಿ ಹೃದಯದ ಕಸಿಗೆ ಹಣ ನೀಡಲು ಸಿದ್ಧವಾಗುತ್ತದೆ ಆದರೆ ಮಾನಸಿಕ ಆರೋಗ್ಯಕ್ಕೆ ಹಣ ನೀಡಲು ಆಲೋಚಿಸುತ್ತದೆ.

ನಾವು ಈ ಕ್ಷೇತ್ರದಲ್ಲಿ ಮನೋವೈದ್ಯಶಾಸ್ತ್ರಜ್ಞರು ಮತ್ತು ಮನೋವಿಜ್ಞಾನತಜ್ಞರು, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಮಾನಸಿಕ ಆರೋಗ್ಯ ಪೋಷಕರು ಹಾಗೂ ವೃತ್ತಿಪರ ಚಿಕಿತ್ಸಾತಜ್ಞರನ್ನು ಹೊಂದಿದ್ದೇವೆ. ನಾವೆಲ್ಲ ಸೇರಿಕೊಂಡು ಚಿಕಿತ್ಸೆಯ ಗುಣಮಟ್ಟವನ್ನು ಮತ್ತು ಆರೈಕೆಯ ವಿಧಾನವನ್ನು ಉತ್ತಮ ದರ್ಜೆಗೇರಿಸಬೇಕಿದೆ. ಇದು ದೀರ್ಘಕಾಲೀನ ಕೆಲಸವಾಗಿದ್ದು, ಒಂದು ರಾತ್ರಿಯಲ್ಲಿ ಆಗುವಂತ ಕೆಲಸವಲ್ಲ.

ನಾನು ನನ್ನ ಹರೆಯದಲ್ಲಿ ಅತ್ಯಂತ ಹಿಂದುಳಿದ ಸೌಲಭ್ಯಹೀನ ಆಸ್ಪತ್ರೆಗಳಲ್ಲಿ ಕೆಲಸ ಮಾಡಿರುವುದು ನೆನಪಿದೆ. ಈಗ ಸೌಲಭ್ಯಗಳು ಗಣನೀಯವಾಗಿ ಸುಧಾರಿಸಿವೆ. ಈಗ ನಾವು ಹೊರರೋಗಿ ಆಸ್ಪತ್ರೆಗಳನ್ನು ಹೊಂದಿದ್ದೇವೆ. ಕಾಲಕಳೆದಂತೆ ಈ ವಿಭಾಗದಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ತರಲಾಗುತ್ತದೆ. ಈ ಕಾರ್ಯಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುವ ಸರ್ಕಾರದಿಂದ ಹೆಚ್ಚಿನ ಸಂಪನ್ಮೂಲವನ್ನು ಪಡೆದುಕೊಳ್ಳಲಾಗುತ್ತಿದೆ.

ಆದ್ದರಿಂದ ಭಾರತದಲ್ಲಿ ಕೂಡ ಇದು ನಾಳೆಯೋ ಅಥವಾ ನಾಡಿದ್ದೋ ಆಗುವ ಕೆಲಸವಲ್ಲ ಎಂದು ಗಮನದಲ್ಲಿಡಬೇಕು. ಲಭ್ಯವಿರುವ ಅವಕಾಶಗಳನ್ನು ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಮುದಾಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನಿಧಾನ ಪ್ರಗತಿಯನ್ನು ಸಾಧಿಸಬೇಕು. ನಾವು ಪ್ರಗತಿ ಪಥವನ್ನು ಹೊಂದಿದ್ದೇವೆ ಆದರೆ ಅನಗತ್ಯವಾಗಿ ಅತಿಯಾದ ಆದರ್ಶ ರಾಜ್ಯದ ಕನಸನ್ನು ಬೆನ್ನತ್ತಬಾರದು ಎಂದು ನಾನು ಯಾವಾಗಲೂ ನಂಬುತ್ತೇನೆ. ಏಕೆಂದರೆ ಅದು ಸಾಧ್ಯವಾಗುವುದಿಲ್ಲ ಮತ್ತು ನಾವು ಅದರಿಂದ ನಿರಾಶೆಗೊಳ್ಳುತ್ತೇವೆ. ಆದರೆ ನಾನು ನೋಡಿದಂತೆ ಕೆಲವು ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳಾಗುತ್ತಿವೆ ಮತ್ತು ಭವಿಷ್ಯವು ಆಶಾದಾಯಕವಾಗಿದೆ. ನಾವು ನಿಮ್ಮಿಂದ ಬಹಳ ಮುಂದಿದ್ದೇವೆ ಎಂದು ಹೇಳಲು ನಾನು ಬಯಸುವುದಿಲ್ಲ. ನಾನು ವಿಚಾರಗಳ ವಿನಿಮಯವನ್ನು ಬೆಂಬಲಿಸುತ್ತೇನೆ. ನೀವು ನಮ್ಮೊಂದಿಗೆ ಚರ್ಚಿಸಿ, ವಿಷಯವನ್ನು ಹೇಗೆ ಉತ್ತಮಗೊಳಿಸಬೇಕೆಂದು ಒಟ್ಟಾಗಿ ತೀರ್ಮಾನಿಸಿ ಅದನ್ನು ಕಾರ್ಯಗತಗೊಳಿಸೋಣ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org