ಸಂದರ್ಶನ: ಮಾನಸಿಕ ಖಾಯಿಲೆಯ ಬಗ್ಗೆ ಇರುವ ಕಳಂಕವನ್ನು ಹೋಗಲಾಡಿಸಲು ಸಾಮಾಜಿಕ ಸಂಪರ್ಕದ ಅಗತ್ಯವಿದೆ

ಮಾನಸಿಕ ಸಮಸ್ಯೆಯು ನಮ್ಮನ್ನೂ ಸೇರಿಸಿ ಎಲ್ಲಾ ರೀತಿಯ ಜನರಿಗೂ ಉಂಟಾಗಬಹುದು

ವರ್ಲ್ಡ್ ಸೈಕಿಯಾಟ್ರಿಕ್ ಅಸೋಸಿಯೇಶನ್ನಿನ ಮಾಜಿ ಅಧ್ಯಕ್ಷರಾಗಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶಕರಾಗಿ 16 ವರ್ಷದ ಸೇವೆ ಸಲ್ಲಿಸಿರುವ ಡಾ. ನಾರ್ಮನ್ ಸಾರ್ಟೋರಿಯಸ್ ರವರ ಪ್ರಕಾರ ಮಾನಸಿಕ ಅನಾರೋಗ್ಯ ಕುರಿತು ಜನರಿಗಿರುವ ತಪ್ಪು ಗ್ರಹಿಕೆಯೇ ಅದರ ಚಿಕಿತ್ಸೆಗಿರುವ ಪ್ರಮುಖ ಅಡೆತಡೆಯಾಗಿದೆ.

ವೈಟ್ ಸ್ಟಾನ್ ಫೌಂಡೇಶನ್ನಿನ ಪವಿತ್ರಾ ಜಯರಾಮನ್ ಅವರ ಜೊತೆಗಿನ ಈ ಸಂದರ್ಶನದಲ್ಲಿ ನಾರ್ಮನ್ ರವರು ಇಂತಹ ತಪ್ಪು ಗ್ರಹಿಕೆಯನ್ನು ನಿವಾರಿಸುವ ಮಾರ್ಗಗಳು ಮತ್ತು ಸಾರ್ವಜನಿಕರು ಹಾಗೂ ಮಾನಸಿಕ ಆರೋಗ್ಯ ತಜ್ಞರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವ ಅಗತ್ಯದ ಕುರಿತು ಮಾತನಾಡಿದ್ದಾರೆ.

ನಿಮ್ಮ ಪ್ರಕಾರ ಮಾನಸಿಕ ಆರೋಗ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಇರುವ ಪ್ರಮುಖ ತೊಡಕು ಯಾವುದು?

ನನ್ನ ಪ್ರಕಾರ ಮಾನಸಿಕ ಸಮಸ್ಯೆಯಿರುವವರಿಗೆ ಸರಿಯಾದ ಆರೈಕೆ ದೊರೆಯದಿರಲು ಇರುವ ಪ್ರಮುಖ ಕಾರಣವು ಅವರ ಪರಿಸ್ಥಿತಿಯ ಬಗ್ಗೆ ಇರುವ ತಪ್ಪು ಗ್ರಹಿಕೆಗಳು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಜನರು ದೂರ ಓಡುತ್ತಾರೆ, ಅವರ ಬಗ್ಗೆ ಭಯ ಪಡುತ್ತಾರೆ, ಅವರನ್ನು ಅಪಾಯಕಾರಿಯೆಂದು ತಿಳಿಯುತ್ತಾರೆ ಹಾಗೂ ಅವರನ್ನು ಮನುಷ್ಯರೆಂದೇ ಪರಿಗಣಿಸುವುದಿಲ್ಲ. ಈ ಮನೋಭಾವದಿಂದಾಗಿ ನಾವು ಅವರಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತದೆ. ಆದ್ದರಿಂದ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಕುರಿತು ಇರುವ ತಪ್ಪು ಗ್ರಹಿಕೆಯನ್ನು ನಿವಾರಿಸದೇ ನಾವು ಬದಲಾವಣೆಯನ್ನು ತರುವುದು ಅಸಾಧ್ಯ. ಆದ್ದರಿಂದ ಮಾನಸಿಕ ಆರೋಗ್ಯದ ಪ್ರಮುಖ ತೊಡಕು ತಪ್ಪು ಗ್ರಹಿಕೆಯಾಗಿದೆ.

ಮಾನಸಿಕ ತಜ್ಞರು ಈ ವಿಷಯದಲ್ಲಿ ಏನು ಮಾಡಬಹುದು?

ಇಂತಹ ತಪ್ಪು ಗ್ರಹಿಕೆಯು ಎಲ್ಲಾ ಕಡೆಯೂ ಇದೆ. ಇದು ವೈದ್ಯರಲ್ಲಿ, ಪೋಲಿಸರಲ್ಲಿ ಮತ್ತು ಸಾಮಾನ್ಯ ಜನರನ್ನೂ ಸೇರಿಸಿ ಎಲ್ಲರಲ್ಲಿಯೂ ಇದೆ. ಅವರು ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ಯಾವ ಬೆಲೆಯೂ ಇಲ್ಲವೆಂದೂ, ಅವರು ಸುಧಾರಿಸುವುದಿಲ್ಲವೆಂದೂ ಅಪಾಯಕಾರಿಯಾದ ಅವರನ್ನು ಮುಟ್ಟಬಾರದು ಅಥವಾ ನೋಡಬಾರದು ಎಂದು ಭಾವಿಸುತ್ತಾರೆ. ಈ ನಡವಳಿಕೆ ಅವರಲ್ಲಿ ಗೊಂದಲ ಮೂಡಿಸುತ್ತದೆ. ಮಾನಸಿಕವಾಗಿ ಅಸ್ವಸ್ಥರಾದ ಅಥವಾ ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳು ಸಾಮಾನ್ಯ ಮನುಷ್ಯರಿಗೆ ಹೋಲಿಸಿದರೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗುವ ಪ್ರಮಾಣವು 10% ಪಟ್ಟು ಕಡಿಮೆ ಎಂದು ತಿಳಿದು ಬಂದಿದೆ. ಆದರೆ ಜನರ ತಪ್ಪು ಗ್ರಹಿಕೆಯಿಂದಾಗಿ ಅವರನ್ನು ಬೇರೆ ರೀತಿಯಲ್ಲೇ ನೋಡುತ್ತಾರೆ. ಹಾಗಾಗಿ ಈ ವಿಷಯದಲ್ಲಿ ಬದಲಾವಣೆ ತರದೇ ಉಳಿದ ಯಾವ ಸುಧಾರಣೆಯೂ ಸಾಧ್ಯವಾಗುವುದಿಲ್ಲ.

ಈ ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವುದು ಹೇಗೆ?

ಸಾಮಾಜಿಕ ಸಂಪರ್ಕವು ಇದನ್ನು ಹೋಗಲಾಡಿಸುವ ಮಾರ್ಗವಾಗಿದೆ. ನೀವು ಒಮ್ಮೆ ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯ ಜೊತೆ ಕುಳಿತು ಮಾತನಾಡಿದರೆ ಅವರೂ ಸಹ ನಮ್ಮ ನಿಮ್ಮೆಲ್ಲರಂತೆ ಸಹಜ ಜೀವಿಗಳು ಎಂಬುದು ತಿಳಿಯುತ್ತದೆ. ಆದರೆ ಒಬ್ಬ ವ್ಯಕ್ತಿಯು ಗಂಭೀರ ಮಾನಸಿಕ ಸಮಸ್ಯೆಗೆ ತುತ್ತಾಗಿರುವ ಸಂದರ್ಭದಲ್ಲಿ ಆತ/ಆಕೆ ಸಹಜವಾಗಿರುವುದಿಲ್ಲ. ಅದು ದೈಹಿಕ ಖಾಯಿಲೆಯ ವಿಷಯದಲ್ಲಿಯೂ ಸಂಭವಿಸುತ್ತದೆ. ಹೃದಯದ ಅಥವಾ ಪಲ್ಮನರಿ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಆರೋಗ್ಯವಂತ ದಿನಗಳಲ್ಲಿ ಇರುವಂತೆ ಇರಲಾರ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಿಮಗೆ ವ್ಯತ್ಯಾಸವು ಅರಿವಿಗೆ ಬರುವುದಿಲ್ಲ. ತಿಳುವಳಿಕೆ ನೀಡುವುದರಿಂದ ಇಂತಹ ಗ್ರಹಿಕೆಯನ್ನು ತಕ್ಕಮಟ್ಟಿಗೆ ಮಾತ್ರ ಬದಲಾಯಿಸಬಹುದು. ಜನರಿಗೆ ನೀವು ಈ ಬಗ್ಗೆ ತಿಳುವಳಿಕೆ ನೀಡಿದರೂ ಸಹ ಅವರು ಅದನ್ನು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಸ್ವೀಕರಿಸುತ್ತಾರೆ. ಆದ್ದರಿಂದ ಇಂತಹ ದೃಷ್ಟಿಕೋನ ಮತ್ತು ಅಭಿಪ್ರಾಯವನ್ನು ಬದಲಿಸುವುದು ಪ್ರಮುಖವಾದ ಕೆಲಸವಾಗಿದೆ.

ವೈಟ್ ಸ್ಟಾನ್ ಫೌಂಡೇಶನ್ನಿ ನಂತಹ ಸಂಸ್ಥೆಯು ಇಂತಹ ತಪ್ಪು ಗ್ರಹಿಕೆಯನ್ನು ನಿವಾರಿಸಲು ಏನು ಮಾಡಬಹುದು?

ಮಾನಸಿಕ ಸಮಸ್ಯೆ ಹೊಂದಿರುವವರನ್ನೇ ನೀವು ಮಾತುಗಾರರನ್ನಾಗಿ ಆಯ್ದುಕೊಳ್ಳಬಹುದು. ಇದನ್ನು ನಾನು ನೋಡಿದ್ದೇನೆ. ಶಾಲೆ, ಕಂಪನಿಗಳಲ್ಲಿ ಅಂತಹ ವ್ಯಕ್ತಿಗಳು ತಮ್ಮ ಸಮಸ್ಯೆಯ ಬಗ್ಗೆ ಮಾತನಾಡಿದಾಗ, “ಜನರು ಎಷ್ಟು ಚೆನ್ನಾಗಿ ಮಾತನಾಡುತ್ತಾನೆ. ಅವನಿಗೆ ಮಾನಸಿಕ ಸಮಸ್ಯೆಯಿದೆ ಎಂದು ನಂಬಲೇ ಸಾಧ್ಯವಿಲ್ಲ" ಎಂದು ಪ್ರತಿಕ್ರಿಯಿಸುತ್ತಾರೆ. ಇದು ಮೊದಲ ಪರಿಣಾಮಕಾರಿ ಹಂತವಾಗಿದೆ.

ಇನ್ನೊಂದು ವಿಧಾನವೆಂದರೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿರುವ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು. ಅವರಿಂದ ಹರಡಲ್ಪಡುತ್ತಿರುವ ತಪ್ಪು ಗ್ರಹಿಕೆಗಳು ಕಡಿಮೆಯಾಗುತ್ತವೆ. ಆರೋಗ್ಯ ತಜ್ಞರು ಉಳಿದ ಸಾಮಾನ್ಯ ವ್ಯಕ್ತಿಗಳಿಗಿಂತ ಬೇರೇಯೇನಿಲ್ಲ. ಇತ್ತೀಚೆಗೆ ನನ್ನ ಅರಿವಿಗೆ ಬಂದಿರುವುದೇನೆಂದರೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ತಪ್ಪುಗ್ರಹಿಕೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಸಂದೇಶವನ್ನು ಎಲ್ಲರಿಗೂ ಕಳುಹಿಸುವ ಬದಲು ಅವರವರಿಗೆ ಸಂಬಂಧಪಟ್ಟ ನಿರ್ದಿಷ್ಟ ಸಂದೇಶಗಳನ್ನು ಕಳುಹಿಸುವುದು ಪರಿಣಾಮಕಾರಿಯಾಗಿದೆ. ಉದಾಹರಣೆಗೆ ಮಾನಸಿಕ ಸಮಸ್ಯೆಯ ಬಗ್ಗೆ ನೀವು ಪೋಲಿಸರಿಗೆ ವಿವರಿಸುವ ವಿಧಾನವು ಒಬ್ಬ ಪತ್ರಕರ್ತನಿಗೆ ಅಥವಾ ವೈದ್ಯರಿಗೆ ತಿಳಿಸುವ ವಿಧಾನಕ್ಕಿಂತ ಭಿನ್ನವಾಗಿರುತ್ತದೆ. ಇದು ಎರಡನೆಯ ಹಂತವಾಗಿದೆ. ಮೊದಲಿಗೆ ಮಾನಸಿಕ ಅನಾರೋಗ್ಯದಿಂದ ಬಳಲಿದವರೇ ತಮ್ಮ ಅನುಭವವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಅದು ಹೆಚ್ಚು ವಿಶ್ವಾಸಾರ್ಹವೆನಿಸುತ್ತದೆ. ಎರಡನೆಯದಾಗಿ ನಿರ್ದಿಷ್ಟ ಗುಂಪುಗಳಲ್ಲಿರುವ ವ್ಯಕ್ತಿಗಳು ತಮ್ಮ ತಮ್ಮ ದೈನಂದಿನ ಜೀವನದಲ್ಲಿ ಮತ್ತು ತಮ್ಮ ವೃತ್ತಿಯಲ್ಲಿದ್ದುಕೊಂಡೇ ಹೇಗೆ ಮಾನಸಿಕ ಅನಾರೋಗ್ಯವುಳ್ಳ ವ್ಯಕ್ತಿಗಳಿಗೆ ಸಹಾಯ ಮಾಡಬಹುದು ಎಂಬ ಬಗ್ಗೆ ನಿರ್ದಿಷ್ಟ ಮಾರ್ಗದರ್ಶನ ನೀಡುವುದು.

ಇದಲ್ಲದೇ ನೀವು ಮಾನಸಿಕ ಅನಾರೋಗ್ಯವಿರುವವರನ್ನು ಆರೈಕೆ ಮಾಡುತ್ತಿರುವವರ ಹಾಗೂ ಮಾನಸಿಕ ಸಮಸ್ಯೆಯುಳ್ಳವರ ಕುಟುಂಬದವರ ಕುರಿತು ಕಾಳಜಿ ವಹಿಸುವುದು ಅಗತ್ಯ. ಅವರು ಕೂಡ ತಮ್ಮ ಮಧ್ಯೆ ಇದ್ದಕ್ಕಿದ್ದಂತೆ ತಮ್ಮ ಕುಟುಂಬದವರು ಮಾನಸಿಕ ಅನಾರೋಗ್ಯ ಹೊಂದುವುದರಿಂದ ಆಘಾತಕ್ಕೊಳಗಾಗುತ್ತಾರೆ. ತಾವೂ ಈ ಅನಾರೋಗ್ಯಕ್ಕೆ ಕಾರಣರಾಗಿದ್ದೇವೆಯೇ ಎಂಬ ಗೊಂದಲಕ್ಕೊಳಗಾಗುತ್ತಾರೆ, ಅಥವಾ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಭಯ, ಅವಮಾನದಿಂದಲೂ ನರಳುತ್ತಾರೆ. ಆದ್ದರಿಂದ ಆರೈಕೆ ಮಾಡುತ್ತಿರುವವರ ಕುರಿತು ಲಕ್ಷ್ಯ ವಹಿಸುವುದು ಇನ್ನೊಂದು ಕಾರ್ಯಕ್ಷೇತ್ರವಾಗಿದೆ.

ಸೈಕಿಯಾಟ್ರಿಯು ಬಹಳಷ್ಟು ಅಭಿವೃದ್ಧಿ ಸಾಧಿಸಿದೆಆದರೂ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆಆದರೆ ಈಗ ಈ ಕ್ಷೇತ್ರವು ಯಾವ ಹಂತದಲ್ಲಿ ನಿಂತಿದೆ?

ಮಾನಸಿಕ ಸಮಸ್ಯೆ ಮತ್ತು ಖಾಯಿಲೆಗಳ ಕುರಿತ ತಿಳುವಳಿಕೆಯು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ನನಗನಿಸುತ್ತಿದೆ. ಹಿಂದಿನಿಂದಲೂ ಮಾನಸಿಕ ಸಮಸ್ಯೆಯ ಕುರಿತು ತಪ್ಪು ಗ್ರಹಿಕೆ ಮತ್ತು ಅದರ ಪರಿಣಾಮಗಳು ಮುಂದುವರೆಯುತ್ತಲೇ ಬಂದಿದೆ. ಉದಾಹರಣೆಗೆ, ಸಂಪನ್ಮೂಲದ ಹಂಚಿಕೆ, ಹಲವಾರು ದೇಶಗಳಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಬಹಳ ಕಡಿಮೆಯಾಗಿದೆ. ಕೇವಲ ಒಂದು ಅಥವಾ ಎರಡು ಪ್ರತಿಶತದಷ್ಟು ಅನುದಾನ ನೀಡಲಾಗುತ್ತದೆ. ಇಂದು ಜಗತ್ತಿನಲ್ಲಿ ಐದರಲ್ಲಿ ಎರಡರಷ್ಟು ನ್ಯೂನ್ಯತೆಗಳು ಮಾನಸಿಕ ಸಮಸ್ಯೆಯಿಂದಲೇ ಉಂಟಾಗಿದೆ. ಆದರೆ ಇದಕ್ಕಾಗಿ ನೀಡಲಾಗಿರುವ ಅನುದಾನವು ಅತ್ಯಂತ ಕಡಿಮೆ, ಇದರಿಂದಾಗಿ ಸಮಸ್ಯೆಯನ್ನು ಸರಿಯಾಗಿ ವಾಸಿ ಮಾಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಯ ಗಾತ್ರ ಮತ್ತು ಅನುದಾನಗಳಲ್ಲಿ ಬಹಳ ವ್ಯತ್ಯಾಸವಿದೆ. ಇದರಿಂದಾಗಿ ನಮಗೆ ತಿಳಿದಿರುವ ಜ್ಞಾನವನ್ನು ಬಳಸಿಕೊಂಡು ಸಾಧಿಸಬಹುದಾಗಿದ್ದ ಪ್ರಗತಿಯನ್ನು ಪೂರ್ತಿಯಾಗಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಜ್ಞಾನವನ್ನು ಅಗತ್ಯವಿರುವ ಜನರಿಗೆ ಉಪಯೋಗವಾಗುವಂತೆ ಬಳಸಲು ಸಾಧ್ಯವಾಗುತ್ತಿಲ್ಲ. ರೋಗ ತಡೆವಿಚಾರದಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ. ಆದರೆ ರೋಗ ತಡೆಯಲ್ಲಿ ಮಾನಸಿಕ ತಜ್ಞರಿಗಿಂತ ಉಳಿದವರ ಪಾತ್ರ ಪ್ರಮುಖವಾಗುತ್ತದೆ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ಬಹಳಷ್ಟು ಮಕ್ಕಳು ಸಮೀಪ ದೃಷ್ಟಿ ಸಮಸ್ಯೆಯನ್ನು ಹೊಂದಿರುತ್ತಾರೆ. ಇದನ್ನು ಆರಂಭದಲ್ಲಿಯೇ ಗುರುತಿಸಿ ಸರಿಪಡಿಸದಿದ್ದರೆ ಅವರನ್ನು ಮಂದಗತಿಯವರೆಂದು, ಕಲಿಕೆದೋಷವುಳ್ಳವರೆಂದು ಭಾವಿಸಲಾಗುತ್ತದೆ. ಇದರಿಂದ ಅವರು ಜೀವನಪೂರ್ತಿ ಸಮಸ್ಯೆಯನ್ನನುಭವಿಸಬೇಕಾಗುತ್ತದೆ. ಆದರೆ ಅವರಿಗೆ ಸರಿಯಾದ ಅವಕಾಶ ನೀಡಿದರೆ ಅವರು ಉತ್ತಮವಾಗಿ ಕಲಿಯಬಹುದು. ಹೀಗಿದ್ದರೂ, ಹಲವು ದೇಶಗಳಲ್ಲಿ ಪಾಲಕರು ಕನ್ನಡಕ ಧರಿಸುವುದನ್ನು ಇಷ್ಟಪಡುವುದಿಲ್ಲ. ಇದರಿಂದ ಹೆಣ್ಣುಮಕ್ಕಳು ಸುಂದರವಾಗಿ ಕಾಣಿಸುವುದಿಲ್ಲ ಅಥವಾ ಗಂಡುಮಕ್ಕಳು ಬಲಿಷ್ಠರಾಗಿ ಕಾಣಿಸುವುದಿಲ್ಲವೆಂದು ಭಾವಿಸುತ್ತಾರೆ. ಈ ಕಾರಣದಿಂದ, ಅವರು ಜಗತ್ತಿನ ಎಷ್ಟೋ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರ ಬೆಳವಣಿಗೆಯ ಪ್ರಗತಿ ಕುಂಠಿತಗೊಳ್ಳುತ್ತದೆ. ಮನಃಶಾಸ್ತ್ರವು ಇಂತಹ ಎಷ್ಟೋ ಸರಳ ಪರಿಹಾರಗಳನ್ನು ತೋರಿಸಿಕೊಟ್ಟಿದೆ. ಆದ್ದರಿಂದ ನನ್ನ ಪ್ರಕಾರ ಮನಃಶಾಸ್ತ್ರದಲ್ಲಿ ಇಂದು ನಮಗೆ ತಿಳಿದಿರುವ ಜ್ಞಾನ ಮತ್ತು ಅದರ ಬಳಕೆಯ ನಡುವೆ ಬಹಳ ಅಂತರವಿದೆ. ನಮಗೆ ತಿಳಿದಿರುವುದನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮಾನಸಿಕ ಖಾಯಿಲೆಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ನಾವು ಬಹಳ ಪ್ರಗತಿ ಸಾಧಿಸಿದ್ದೇವೆ. ಕೆಲವು ರೋಗಿಗಳು ಜೀವನ ಪೂರ್ತಿ ಔಷಧ ತೆಗೆದುಕೊಳ್ಳಬೇಕಾಗಿ ಬಂದರೂ ಹೆಚ್ಚಿನ ವೈದ್ಯರುಗಳು ಅವರ ಅನಾರೋಗ್ಯದ ಸುಳಿವೇ ಇರದಂತೆ ಖಾಯಿಲೆಯನ್ನು ವಾಸಿ ಮಾಡಿ ಸಹಜ ಜೀವನ ನಡೆಸಲು ಸಹಾಯ ಮಾಡುತ್ತಾರೆ. ಆದ್ದರಿಂದ ಮನಃಶಾಸ್ತ್ರದ ಈ ಹಂತವನ್ನು ನಾನು ತಪ್ಪಿಹೋದ ಅವಕಾಶಗಳ ಶತಮಾನ ಎಂದು ಕರೆಯುತ್ತೇನೆ.

ಎಷ್ಟೋ ಮಾನಸಿಕ ಖಾಯಿಲೆಗಳಿಗೆ ಇನ್ನೂ ಕಾರಣಗಳನ್ನು ಹುಡುಕಬೇಕಿದೆ. ಉದಾಹರಣೆಗೆ, ಮಕ್ಕಳ ಮಾನಸಿಕ ಸಮಸ್ಯೆ. ಮಕ್ಕಳಲ್ಲಿ ಮಾನಸಿಕ ಖಾಯಿಲೆ ಉಂಟಾಗಲು ಹಲವಾರು ಅಂಶಗಳು ಕಾರಣವಾಗುತ್ತದೆ. ಉದಾಹರಣೆಗೆ ತಾಯಿಯಲ್ಲಿ ಮಾನಸಿಕ ಖಾಯಿಲೆ, ತಂದೆಯ ಅಪರಾಧ ಹಿನ್ನೆಲೆ, ಅತಿಯಾದ ದಟ್ಟಣೆ, ದೈಹಿಕ ಖಾಯಿಲೆಯಿಂದ ಮತ್ತೆ ಮತ್ತೆ ಆಸ್ಪತ್ರೆಗೆ ದಾಖಲಾತಿ, ಇವೇ ಮುಂತಾದ ಅಂಶಗಳು. ಇವುಗಳಲ್ಲಿ ಯಾವುದೇ ಒಂದು ಅಂಶದಿಂದ ಸಮಸ್ಯೆ ಉಂಟಾಗಿದ್ದಲ್ಲಿ ಅದು ಅಷ್ಟು ಗಂಭೀರವೆನಿಸುವುದಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಅಂಶಗಳು ಕಾರಣವಾಗಿದ್ದಲ್ಲಿ ಮಗುವು ಅನಾರೋಗ್ಯಕ್ಕೆ ಒಳಗಾಗುವ ಸಂಭವನೀಯತೆಯು ಹೆಚ್ಚಿರುತ್ತದೆ. ಸಂಶೋಧನೆಗೆ ಇದು ಅಡ್ಡಿಯಾದರೂ ಅಂತಹ ಮಕ್ಕಳಿಗೆ ನಾವು ಏನನ್ನು ಮಾಡಬಹುದು ಎಂಬ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ನಾವು ತಂದೆಯ ಅಪರಾಧ ಹಿನ್ನೆಲೆಯನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ಉಳಿದ ಸಂಗತಿಗಳನ್ನು ನಿಯಂತ್ರಿಸಬಹುದು. ಮಗುವು ಜೀವಿಸುತ್ತಿರುವ ಪರಿಸ್ಥಿತಿಯನ್ನು ನಾವು ಬದಲಾಯಿಸಬಹುದು. ಆ ಮಗುವನ್ನು ಚೆನ್ನಾಗಿ ಪೋಷಿಸುವ ವಿಚಾರದಲ್ಲಿ ತಾಯಿಗೆ ನೆರವಾಗಬಹುದು. ನಾವು ಸಮಸ್ಯೆಗೆ ಕಾರಣವಾದ ಯಾವ ಅಂಶವನ್ನು ನಿವಾರಣೆ ಮಾಡಿದರೂ ಸಹ ಅದು ಮಗುವಿನ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತದೆ. ಕೆಲವೊಂದು ಅಂಶಗಳನ್ನು ಬದಲಾಯಿಸಲು ಆಗದೇ ಇದ್ದರೂ ನಾವು ಉಳಿದವುಗಳನ್ನು ಪರಿಹರಿಸಬಹುದು.

Related Stories

No stories found.