ನಾನು ಬರೆದಂತೆಲ್ಲ, ನನ್ನ ಜೊತೆ ಹಲವರು ದನಿಗೂಡಿಸಿದ್ದನ್ನು ಕಂಡುಕೊಂಡೆ

ಮಾನಸಿಕ ಖಾಯಿಲೆಯಿರುವ ವ್ಯಕ್ತಿಗೆ ಔಷಧ ಮತ್ತು ಸೈಕೊಥೆರಪಿಯ ಜೊತೆಗೆ ಇನ್ನೂ ಕೆಲವು ಚಟುವಟಿಕೆಗಳು ಚೇತರಿಸಿಕೊಳ್ಳಲು ನೆರವಾಗುತ್ತವೆ. ಬರವಣಿಗೆಯು ಬ್ಲಾಗರ್ ಶೈಲಜಾ ವಿಶ್ವನಾಥ್ ಅವರಿಗೆ ಚೇತರಿಸಿಕೊಳ್ಳಲು ಹೇಗೆ ನೆರವಾಯಿತು ಎಂಬ ಬಗ್ಗೆ ವೈಟ್ ಸ್ವಾನ್ ಫೌಂಡೇಶನ್ನಿನ ಸಂಜಯ್ ಪಟ್ನಾಯಕ್ ಅವರೊಂದಿಗೆ ಮಾತನಾಡಿದ್ದಾರೆ. 
ನಿಮ್ಮ ಖಾಯಿಲೆಯು ದೃಢಪಟ್ಟ ಅವಧಿಯ ಬಗ್ಗೆ ತಿಳಿಸಿ. ನಿಮ್ಮ ಕುಟುಂಬದವರು ಮತ್ತು ಸಂಗಾತಿ ಇದನ್ನು ಹೇಗೆ ನಿಭಾಯಿಸಿದರು? 
ನನಗೆ ಅರಿವಿಲ್ಲದಂತೆ ನಾನು ಖಿನ್ನತೆ ಮತ್ತು ಮ್ಯಾನಿಕ್ ಡಿಪ್ರೆಸಿವ್ ಖಾಯಿಲೆಗೆ ಒಳಗಾಗಿದ್ದೆ. ನನಗೆ ತೀವ್ರವಾದ ಮಾನಸಿಕ ಕಾಯಿಲೆಯಿದೆ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ ನಾನು ಹಲವು ಬಾರಿ ತೀವ್ರವಾದ ಭ್ರಾಂತಿಗೆ ಒಳಗಾಗಿದ್ದೆ. ಹಿಂಸಾತ್ಮಕವೆನಿಸುವ ಸಿಟ್ಟಿಗೆ ಒಳಗಾಗುತ್ತಿದ್ದೆ ಮತ್ತು ನಿರಂತರವಾಗಿ 2 ಗಂಟೆಗಳಿಗೂ ಹೆಚ್ಚಿನ ಅವಧಿಗೆ ಅಳುತ್ತಿದ್ದೆ. ಇದು ನನ್ನನ್ನು ಬಲಹೀನಳನ್ನಾಗಿಸುತ್ತಿತ್ತು ಮತ್ತು ಅತಿಯಾಗಿ ಹೆದರಿಕೆಯನ್ನುಂಟು ಮಾಡುತ್ತಿತ್ತು. 
ಆದರೆ ನಾನು ಚಿಕಿತ್ಸಕರನ್ನು ಭೇಟಿ ಮಾಡಲು ಕೆಲವು ಸಮಯ ತೆಗೆದುಕೊಂಡೆ. ಮೊದಲಿಗೆ ಒಬ್ಬ ವ್ಯಕ್ತಿಯು ಮನೆಗೆ ಬಂದು ನನ್ನ ಪಾಲಕರ ಜೊತೆ ಸಮಾಲೋಚಿಸಿ ನಂತರ ನಿಧಾನವಾಗಿ ನನ್ನ ಜೊತೆ ಸಮಾಲೋಚಿಸಲು ತೊಡಗಿದರು. ನಾನು ಆ ಸಮಯದಲ್ಲಿ ದಂಗೆಯೇಳುತ್ತಿದ್ದೆ, ಕೋಪಗೊಳ್ಳುತ್ತಿದ್ದೆ ಮತ್ತು ದುಃಖಿತಳಾಗುತ್ತಿದ್ದೆ. ನನ್ನ ನೋವನ್ನು ನಿಭಾಯಿಸಲಾಗದೇ ಆತ್ಮಹತ್ಯೆಗೆ ಕೂಡ ಪ್ರಯತ್ನಿಸಿದ್ದೆ.
ಈ ವೇಳೆ ತಜ್ಞರನ್ನು ಭೇಟಿಮಾಡಿದಾಗ ಅದೃಷ್ಟವಶಾತ್ ಹಲವು ವಿಷಯಗಳು ತಿಳಿದು ಬಂದವು. ನಿಜವಾಗಿ ಇದೊಂದು ಖಾಯಿಲೆಯಾಗಿದ್ದು ಅದರಿಂದ ಮೆದುಳಿನಲ್ಲಿರುವ ಹಾರ್ಮೋನುಗಳ ರಾಸಾಯನಿಕ ಸಮತೋಲನವು ಹಾಳಾಗಿ ದೈಹಿಕ ಚಟುವಟಿಕೆಗಳಲ್ಲಿ ಏರುಪೇರಾಗುತ್ತಿತ್ತು. ಎರಡನೆಯದಾಗಿ, ನನಗೆ ಇದೆಲ್ಲಾ ಸರಿಯಾಗಿ ಅರ್ಥವಾಗದಿದ್ದರೂ ಆ ಸಮಯದಲ್ಲಿ ಬೇರೆಲ್ಲಾ ವಿಷಯಗಳಿಗಿಂತ ನನ್ನ ಪಾಲಕರ ಜೊತೆಯಿರುವುದು ನನಗೆ ಹಿತವೆನಿಸುತ್ತಿತ್ತು ಎಂದು ನನಗೆ ನೆನಪಿದೆ. ಮೂರನೆಯದಾಗಿ,  ನನ್ನ ವಿಪರೀತವಾದ ಉಪದ್ರವಿ ನಡವಳಿಕೆಯನ್ನು ನಿಯಂತ್ರಿಸಲು ಔಷಧಗಳು ನೆರವಾಗುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೆ ಮತ್ತು ಇನ್ನೊಬ್ಬರ ಮೇಲ್ವಿಚಾರಣೆಯಲ್ಲಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಇದು ನನ್ನ ಚೇತರಿಕೆಗೆ ಬಹುವಾಗಿ ನೆರವಾಯಿತು.
ಇಂದು ನಾನು ಈ ವಿಷಯದ ಬಗ್ಗೆ ಮಾತನಾಡಲು ಸಾಧ್ಯವಾಗಿರುವುದು ಅಥವಾ ನಾನು ಬದುಕಿರುವುದಕ್ಕೆ ನನ್ನ ಕುಟುಂಬವೇ ಕಾರಣ.
ಇಲ್ಲಿ ನನ್ನ ಸಂಗಾತಿಯನ್ನು ವಿಶೇಷವಾಗಿ ಪ್ರಸ್ತಾಪಿಸಬೇಕು. ಆಗತಾನೆ ಮದುವೆಯಾದ ಪುರುಷನಿಗೆ ತನ್ನ ಹೆಂಡತಿಯ ವಿಚಿತ್ರ ನಡವಳಿಕೆಯನ್ನು ನೋಡಿ ಆಕೆಯ ವಿಪರೀತವಾದ ಆತಂಕದ ಅವಧಿಗಳನ್ನು, ಅತಿಯಾದ ಅಳುವಿಕೆ  ಮತ್ತು ವಿಪರೀತವಾದ ಭಯದ ನಡವಳಿಕೆಯನ್ನು ನಿರ್ವಹಿಸಿ ತನ್ನ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವುದು ಸುಲಭದ ವಿಷಯವಲ್ಲ. ಬೇರೆ ವ್ಯಕ್ತಿಯಾಗಿದ್ದರೆ ಬಹುಶಃ ಯಾವಾಗಲೋ ಇದನ್ನೆಲ್ಲಾ ಬಿಟ್ಟುಬಿಡುತ್ತಿದ್ದರು. ನನ್ನನ್ನು ಬೆಂಬಲಿಸುವ, ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಪಡೆದಿದ್ದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ.
ನೀವು ಸೈಕಿಯಾಟ್ರಿಕ್ ಚಿಕಿತ್ಸೆಗೆ ಒಳಗಾಗಿದ್ದೀರಾ? ಅದು ಅಗತ್ಯವೆಂದು ನಿಮಗೆ ಅನಿಸುತ್ತದೆಯೇ? ನಿಮಗೆ ಈಗಲೂ ಔಷಧ ಅಥವಾ ಆಪ್ತಸಮಾಲೋಚನೆಯ ಅಗತ್ಯವಿದೆಯೇ?
ನನ್ನ ಸಮಸ್ಯೆಯು ಪತ್ತೆಯಾಗುವ 3 ತಿಂಗಳುಗಳ ಮೊದಲು ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ನೋವನ್ನು ಅನುಭವಿಸಿದ್ದೆ. ಭಾವನೆಗಳು ಛಿದ್ರಗೊಂಡು ಬಳಲುವ ಈ ರಿತಿಯ ಪರಿಸ್ಥಿತಿ ನಿಮ್ಮ ಶತ್ರುಗಳಿಗೂ ಬರಬಾರದು. ಒಂಟಿತನ, ನಿದ್ರಾಹೀನತೆ, ಉನ್ಮತ್ತ ನಡವಳಿಕೆಗಳು ಆ 3 ತಿಂಗಳಿನಲ್ಲಿ ನನ್ನ ದೈನಂದಿನ ಜೀವನದ ಭಾಗಗಳೇ ಆಗಿಹೋಗಿದ್ದವು. ಅಷ್ಟೊಂದು ದಿನಗಳವರೆಗೆ ನನ್ನ ಸಿಟ್ಟು ಸ್ಪೋಟಗೊಳ್ಳುತ್ತಿದ್ದುದು ಮತ್ತು ನನ್ನ ಪಾಡಿಗೆ ನಾನಿದ್ದು ಬಿಡುವ ನಡವಳಿಕೆಗಳನ್ನು ನನ್ನ ಪತಿಯು ಸಹಿಸಿಕೊಂಡು ಹೇಗೆ ಶಾಂತವಾಗಿ ನನ್ನೊಂದಿಗೆ ನಡೆದುಕೊಂಡರು ಎಂದು ಆಶ್ಚರ್ಯವಾಗುತ್ತದೆ.
ಒಂದುವೇಳೆ ನಾನು ಅವರ ಜಾಗದಲ್ಲಿ ಇದ್ದರೂ ಇದನ್ನೆಲ್ಲಾ ಎಂದೋ ಬಿಟ್ಟುಬಿಡುತ್ತಿದ್ದೆ. 
ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ನಮಗೆ ತಿಳಿದಿಲ್ಲದಿರುವುದು ಕೂಡ ಒಂದು ದುರದೃಷ್ಟಕರ ವಿಷಯ. ಜನರು ಆತಂಕಕ್ಕೆ ಒಳಗಾದಾಗ ಅಥವಾ ವಿವರಿಸಲಾಗದ ಭಯಕ್ಕೆ ಒಳಗಾದಾಗ ಅವರ ಮನಸ್ಸಿನಲ್ಲಿ ಏನಾಗುತ್ತದೆ ಎಂದು ತಿಳಿಯುವುದಿಲ್ಲ. ಅದೇ ರೀತಿ ನನ್ನ ಪಾಲಕರಿಗೂ ಕೂಡ ನನ್ನಲ್ಲಿ ಏನಾಗುತ್ತಿದೆ ಎಂಬುದು ಆರಂಭದಲ್ಲಿ ಅರ್ಥವಾಗಲಿಲ್ಲ. ಆದ್ದರಿಂದ ಅವರೂ ಕೂಡ ಮನೋವೈದ್ಯರನ್ನು ಕಾಣಲು ಕೆಲವು ಸಮಯ ತೆಗೆದುಕೊಂಡರು. ಆದರೆ ಮನೋವೈದ್ಯರನ್ನು ಕಂಡಿದ್ದು  ಅತ್ಯಂತ ಅದೃಷ್ಟಕರ ಸಂಗತಿ.
ಮನೋವೈದ್ಯರ ಸಹಾಯದಿಂದ ನನ್ನ ಚೇತರಿಕೆಯು ಸಾಧ್ಯವಾಯಿತು. ಅವರ ತಿಳಿವಳಿಕೆ ಮತ್ತು ಅನುಭವದಿಂದಾಗಿ ನನ್ನ ಪರಿಸ್ಥಿತಿಯನ್ನು ನಿಭಾಯಿಸುವುದು ಸಾಧ್ಯವಾಯಿತು. 
ನಿಮ್ಮ ಪ್ರಶ್ನೆಗೆ ಉತ್ತರಿಸುವುದಾದರೆ, ಹೌದು, ನಾನು ಮನೋವೈದ್ಯರನ್ನು ಭೇಟಿಯಾಗಿದ್ದೆ ಮತ್ತು 9 ತಿಂಗಳವರೆಗೆ ತಪ್ಪದೆ ಔಷಧಗಳನ್ನು ತೆಗೆದುಕೊಂಡಿದ್ದೆ. ವೈದ್ಯರು ಔಷಧವನ್ನು ಸಲಹೆ ಮಾಡಿದರು ಮತ್ತು ಆ ಅವಧಿಯಲ್ಲಿ ಅದು ಪರಿಣಾಮ ಬೀರುತ್ತಿದೆಯೇ ಎಂದು ಗಮನಿಸುತ್ತಿದ್ದರು. ನಿಧಾನವಾಗಿ ಡೋಸುಗಳನ್ನು ಕಡಿಮೆ ಮಾಡಲಾಯಿತು ಮತ್ತು 9 ತಿಂಗಳ ನಂತರ ಸಂಪೂರ್ಣವಾಗಿ ನಿಲ್ಲಿಸಲಾಯಿತು. 
ನಾನು ಔಷಧಗಳನ್ನು ನಿಲ್ಲಿಸಿ ಇಂದಿಗೆ 13 ವರ್ಷಗಳಾಯಿತು ಮತ್ತು ನನಗೆ ಆಪ್ತಸಮಾಲೋಚನೆಯ ಅಗತ್ಯವೂ ಇಲ್ಲ. ಕೆಲವೊಮ್ಮೆ ನಾನು ನನ್ನಲ್ಲಿ ಎಚ್ಚರಿಕೆಯ ಲಕ್ಷಣಗಳನ್ನು ಗುರುತಿಸುತ್ತೇನೆ ಮತ್ತು ಅವು ನನ್ನನ್ನು ಆಕ್ರಮಿಸಿಕೊಳ್ಳುವ ಮೊದಲು ಜಾಗೃತಳಾಗುತ್ತೇನೆ. ನೀವು ಮಾಡುವ ಅಥವಾ ಹೇಳುವ ವಿಷಯಗಳನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವಾದರೆ ಸೈಕಿಯಾಟ್ರಿಕ್ ಚಿಕಿತ್ಸೆಯು ಅಗತ್ಯವಿರುತ್ತದೆ.
ಬರವಣಿಗೆಯು ಚಿಕಿತ್ಸಾತ್ಮಕವಾಗಬಲ್ಲದು ಎಂದು ನಿಮಗೆ ಯಾವಾಗ ಅರಿವಾಯಿತು?
ಬರವಣಿಗೆಯು ನನಗೆ ಯಾವಾಗಲೂ ಚಿಕಿತ್ಸಾತ್ಮಕವಾಗಿತ್ತು. ಖಿನ್ನತೆ ಮತ್ತು ಬೈಪೊಲಾರ್ ಡಿಸಾರ್ಡರಿನಿಂದ ಬಳಲುವ ಮೊದಲೂ ನನಗೆ ಬರವಣಿಗೆಯಿಂದ ಆರಾಮವೆನಿಸುತ್ತಿತ್ತು. ನನ್ನ ಚಿಕಿತ್ಸೆಯು ಆರಂಭವಾದ ಕೆಲವು ತಿಂಗಳುಗಳ ನಂತರ ನನಗೆ ನನ್ನ ಭಾವನೆಗಳನ್ನು ಬರೆಯಲು ತಿಳಿಸಲಾಯಿತು. ಆದರೆ ನಾನು ಬರೆಯಲು ಸಾಧ್ಯವಿಲ್ಲವೆಂಬಷ್ಟು ಮಟ್ಟಿಗೆ ದುಃಖಿತಳಾಗಿದ್ದೆ. ಅದು 2002ರ ಆರಂಭದ ಅವಧಿ. ಮತ್ತು ಆಗ ಕಂಪ್ಯೂಟರುಗಳು ಅಷ್ಟಾಗಿ ಬಳಕೆಯಲ್ಲಿರಲಿಲ್ಲ. ಅದಕ್ಕೂ ಮೊದಲು ನಾನು ಕೋಪಗೊಂಡಾಗ ನನ್ನ ಭಾವನೆಗಳನ್ನು ಸಹಜವಾಗಿಯೇ ಬರೆಯುತ್ತಿದ್ದೆನಾದರೂ ಖಾಯಿಲೆಯ ಅವಧಿಯಲ್ಲಿ ನನ್ನ ಋಣಾತ್ಮಕ ಭಾವನೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು ಸುಲಭವೆನಿಸಲಿಲ್ಲ. 
ನನ್ನ ಮಗಳು ಜನಿಸಿದ 1 ವರ್ಷದ ನಂತರ ನಾನು ಲೇಖನಗಳನ್ನು ಬರೆಯಲು ಆರಂಭಿಸಿದೆ ಮತ್ತು ನನ್ನ ಬ್ಲಾಗ್ ಆರಂಭಿಸಿದೆ. ಆರಂಭದಲ್ಲಿ ಇದು ಕೇವಲ ಒಬ್ಬ ನೂತನ ತಾಯಿಯಾಗಿ ಮಗುವಿನ ಪಾಲನೆಯ ಅನುಭವಗಳನ್ನು ಡೈರಿಯಲ್ಲಿ ಬರೆಯುವುದಕ್ಕೆ ಸೀಮಿತವಾಗಿತ್ತು.  ನಂತರ ನಾನು ನಿಧಾನವಾಗಿ ನನ್ನನ್ನು ನಾನು ಅವಲೋಕಿಸಿಕೊಂಡು ಚಿಂತನಾತ್ಮಕವಾಗಿ ಬರೆಯಲು ಆರಂಭಿಸಿದೆ.
2013ರ ಮಧ್ಯಭಾಗದ ವೇಳೆಗೆ ನಾನು ನನ್ನ ಬ್ಲಾಗಿನಲ್ಲಿ ಅತ್ಯಂತ ತೀವ್ರ ಮತ್ತು ವೈಯಕ್ತಿಕ ವಿಚಾರಗಳನ್ನು ಬರೆದೆ. ಆಶ್ಚರ್ಯಕರವೆಂದರೆ ಹೆಚ್ಚಿನ ಜನರು ಇದನ್ನು ಅನುಮೋದಿಸಿದರು. 
ಆದರೆ 2015ರ ಆರಂಭದಲ್ಲಿ ನಾನು ನನ್ನ ಖಿನ್ನತೆ ಮತ್ತು ಬೈಪೊಲಾರ್ ಡಿಸಾರ್ಡರಿನ ವಿರುದ್ಧದ ಹೋರಾಟದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ ಮೇಲೆ ವಿಷಯಗಳು ಬದಲಾದವು. ಹಠಾತ್ತಾಗಿ ನನ್ನ ದ್ವನಿಗೆ ಬಹಳ ಜನರು ದನಿಗೂಡಿಸಲಾರಂಭಿಸಿದರು. ಬಹಳ ಜನರು ಪರಾನುಭೂತಿಯನ್ನು ವ್ಯಕ್ತಪಡಿಸಿ ಮಾನಸಿಕ ಖಾಯಿಲೆಯ ಜೊತೆ ತಾವು ಅಥವಾ ಆರೈಕೆದಾರರಾಗಿ ಹೋರಾಡಿದ ಅನುಭವಗಳನ್ನು ಹಂಚಿಕೊಂಡರು. 
ನನ್ನ ಖಾಯಿಲೆಯ ಬಗ್ಗೆ ಬರೆಯುವುದು ನನಗೆ  ಪ್ರಮುಖವಾಗಿ 2 ವಿಧದಲ್ಲಿ ನೆರವಾಯಿತು: ಇದರಿಂದ ಚೇತರಿಸಿಕೊಂಡ ನಂತರದ ಆರೋಗ್ಯಕರ ದೃಷ್ಟಿಕೋನದಿಂದ ನನ್ನ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯವಾಯಿತು ಮತ್ತು ತಾವು ಅನುಭವಿಸಿದ ನೋವನ್ನು ಹೇಳಿಕೊಳ್ಳಲು ಸಾಧ್ಯವಾಗದವರ ಜೊತೆ ಸಂಪರ್ಕಕ್ಕೆ ಬರಲು ಸಾಧ್ಯವಾಯಿತು. ಬರವಣಿಗೆಗೆ 2 ಮುಖಗಳಿವೆ: ನಾವು ನಮಗಾಗಿ ಬರೆಯುತ್ತೇವೆ ಮತ್ತು ಬೇರೆಯವರು ಓದಲೆಂದೂ ಬರೆಯುತ್ತೇವೆ. ಈ ಎರಡೂ ಉದ್ದೇಶಗಳು ಈಡೇರಿದಾಗ ಅತೀವವಾದ ಸಂತೃಪ್ತಿ ದೊರಕುತ್ತದೆ.
ನಿಮ್ಮ ತರಹ ಖಾಯಿಲೆಗೆ ಒಳಗಾದ ವ್ಯಕ್ತಿಗಳಿಗೆ ನೀವು ನೀಡುವ ಸಂದೇಶವೇನು?
ನನಗೆ ಈ ಬಗ್ಗೆ ಹೇಳುವುದು ಬಹಳಷ್ಟಿದೆ. ಆದರೆ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.
ಮೊದಲನೆಯದಾಗಿ, ನೀವು ಈ ವಿಷಯದಲ್ಲಿ ಒಬ್ಬಂಟಿಯಲ್ಲ.ಅನಾರೋಗ್ಯದ ಸಂದರ್ಭದಲ್ಲಿ ನಿಮ್ಮನ್ನು ಬೆಂಬಲಿಸುವವರ ಸಹಾಯ ಪಡೆದುಕೊಳ್ಳಿ. ನಿಮ್ಮ ಪ್ರೀತಿಪಾತ್ರರು ಮತ್ತು ಕುಟುಂಬದವರ ಉಪಸ್ಥಿತಿಯು ಬಹಳ ಸಹಾಯ ಮಾಡುತ್ತದೆ. ಅದು ಸಾಧ್ಯವಿಲ್ಲದಿದ್ದರೆ ನಿಮ್ಮ ಸಹಾಯಕ್ಕೆ ಸಿದ್ಧರಿರುವ ಸ್ನೇಹಿತರ ಬೆಂಬಲವನ್ನು ಪಡೆದುಕೊಳ್ಳಿ. 
ಎರಡನೆಯದಾಗಿ, ನಿಮ್ಮನ್ನು ನಿಂದಿಸಿಕೊಳ್ಳಬೇಡಿ. ಹೇಗೆ ಜನರು ಸಕ್ಕರೆ ಖಾಯಿಲೆಯನ್ನು ಅಥವಾ ಕ್ಯಾನ್ಸರ್ ಬಯಸುವುದಿಲ್ಲವೋ ಹಾಗೇ ಮಾನಸಿಕ ಖಾಯಿಲೆಯನ್ನೂ ಬಯಸುವುದಿಲ್ಲ. ನೀವು ಕೇವಲ ಸಂಗತಿಗಳನ್ನು ಊಹಿಸಿಕೊಳ್ಳುತ್ತಿದ್ದೀರಿ ಅಥವಾ ಚಿಟಿಕೆ ಹೊಡೆಯುವಷ್ಟರಲ್ಲಿ ಇದರಿಂದ ಹೊರಬರಬಹುದು ಎನ್ನುವವರ ಮಾತಿಗೆ ಬೆಲೆ ಕೊಡಬೇಡಿ. ಈ ಖಾಯಿಲೆಗಳಿಂದ ಗುಣಮುಖರಾದವರನ್ನು ಗುರುತಿಸಿ ಅವರೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ಈ ಕಷ್ಟದ ಅವಧಿಯಲ್ಲಿ ಸಹಾಯ ಪಡೆಯಲು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಸಹಾಯ ಗ್ರೂಪುಗಳನ್ನು ರಚಿಸಿಕೊಳ್ಳಿ.
ಮೂರನೆಯದಾಗಿ, ನನಗೆ ತಿಳಿದಿರುವ ಹೆಚ್ಚಿನ ಜನರು ಖಾಯಿಲೆಯ ಕುರಿತು ಇರುವ ಸಾಮಾಜಿಕ ತಪ್ಪುಗ್ರಹಿಕೆಯ ಕಾರಣದಿಂದ ಚಿಕಿತ್ಸಕರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. ತಾವು ಆಪ್ತಸಮಾಲೋಚಕರು ಅಥವಾ ಮಾನಸಿಕ ತಜ್ಞರನ್ನು ಭೇಟಿಯಾಗಿರುವ ಬಗ್ಗೆ ಯಾರಿಗಾದರೂ ತಿಳಿದರೆ ತಮ್ಮನ್ನು ಹುಚ್ಚರೆಂದು ಭಾವಿಸುವ ಭಯಕ್ಕೆ ಒಳಗಾಗುತ್ತಾರೆ. ಚಿಕಿತ್ಸಕರ ಬಳಿ ತೆರಳಲು ಕುಟುಂಬದ ಸದಸ್ಯರು ಅಥವಾ ವಿಶ್ವಾಸಪಾತ್ರ ವ್ಯಕ್ತಿಯನ್ನು ಆಯ್ದುಕೊಳ್ಳಿ.
ಸಮಾಜವು ನೀವು ಏನೇ ಮಾಡಿದರೂ ಮಾತನಾಡುತ್ತದೆ. ಆದರೆ ಆತಂಕದ ಅವಧಿಗಳಲ್ಲಿ ನಡುಕ ಹುಟ್ಟಿಸುವ ಭಯ ಮತ್ತು ನಿಮ್ಮನ್ನು ಬಲಹೀನಗೊಳಿಸುತ್ತಿರುವ ಪರಿಸ್ಥಿತಿಯನ್ನು ನೀವೊಬ್ಬರೇ ಎದುರಿಸುತ್ತಿದ್ದೀರೇ ಹೊರತು ಸಮಾಜವಲ್ಲ ಎಂಬುದನ್ನು ನೆನಪಿಡಿ. ಆದ್ದರಿಂದ ನಿಮ್ಮೆಡೆಗೆ ಬೆರಳು ಮಾಡಿ ತೋರಿಸುವವರಿಂದ ವಿಮುಖರಾಗಿ ಉತ್ತಮ ಆರೋಗ್ಯದ ಕಡೆ ಹೆಜ್ಜೆ ಹಾಕಿ.
ಕೊನೆಯದಾಗಿ, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇರುವ ಆಯ್ಕೆಗಳ ಬಗ್ಗೆ ತಿಳಿದುಕೊಂಡಿರುವುದು ಅಗತ್ಯ. ಲಭ್ಯವಿರುವ ವೈದ್ಯರು ಮತ್ತು ನಿಮಗೆ ನೀಡಲಾಗಿರುವ ಔಷಧಗಳ ಬಗ್ಗೆ ತಿಳಿದುಕೊಳ್ಳಿ. ಮಾರಕ ದೈಹಿಕ ಖಾಯಿಲೆಯ ವಿಷಯದಲ್ಲಿ ಮಾಡುವಂತೆ ಎರಡನೆಯ ಅಭಿಪ್ರಾಯವನ್ನು ತಿಳಿದುಕೊಳ್ಳಿ.
ಎಚ್ಚರಿಕೆಯ ಲಕ್ಷಣಗಳು ಮತ್ತು ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ನೀವು ಬೇಗ ಚಿಕಿತ್ಸೆಗೆ ಒಳಪಟ್ಟಂತೆಲ್ಲ ಶೀಘ್ರವಾಗಿ ಚೇತರಿಸಿಕೊಳ್ಳುತ್ತೀರಿ.
ಶೈಲಜಾ ವಿಶ್ವನಾಥ್ ಅವರು ಫ್ರೀಲ್ಯಾನ್ಸ್ ಬರಹಗಾರರು, ಪೂರ್ಣಾವಧಿಯ ಸಂಪಾದಕರು ಮತ್ತು ಹವ್ಯಾಸಿ ಬ್ಲಾಗರ್ ಆಗಿದ್ದಾರೆ. ಪಾಲಕತ್ವ, ಓದುವುದು, ಬರೆಯುವುದು, ಈಜುವುದು ಮತ್ತು ಸೋಷಿಯಲ್ ನೆಟ್ ವರ್ಕಿಂಗ್ ಅವರ ಪ್ರಮುಖ ಹವ್ಯಾಸಗಳಾಗಿವೆ. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org