ಗೇಟ್ ಕೀಪರ್ಸ್: ಆತ್ಮಹತ್ಯೆಯ ನಂತರದ ಕ್ಷಣಗಳಲ್ಲಿ ಬೆಂಬಲ ಪಡೆಯುವುದು

ಗೇಟ್ ಕೀಪರ್ಸ್: ಆತ್ಮಹತ್ಯೆಯ ನಂತರದ ಕ್ಷಣಗಳಲ್ಲಿ ಬೆಂಬಲ ಪಡೆಯುವುದು

ಪರಿಚಿತರ ಆತ್ಮಹತ್ಯೆಯು ನಿಮ್ಮನ್ನು ತೀವ್ರವಾಗಿ ಬಾಧಿಸಬಹುದು

ಪರಿಚಿತರ ಆತ್ಮಹತ್ಯೆಯು ನಿಮ್ಮನ್ನು ತೀವ್ರವಾಗಿ ಬಾಧಿಸಬಹುದು; ಆ ಸಂದರ್ಭದಲ್ಲಿ ನೀವು ಈ ರೀತಿಯಲ್ಲಿ ಸಹಾಯ ಪಡೆಯಬಹುದು.

ನೀವು ಕುಟುಂಬದ ಸದಸ್ಯರು ಅಥವಾ ಹತ್ತಿರದ ಸ್ನೇಹಿತರಲ್ಲದಿದ್ದರೂ ಒಬ್ಬ ಪರಿಚಿತ ವ್ಯಕ್ತಿಯು ಆತ್ಮಹತ್ಯೆಗೆ ಶರಣಾದಾಗ ನೀವು ಭಾವೋದ್ವೇಗದಿಂದ ತುಂಬಿರಬಹುದು:

  • ಆಘಾತ: ಈ ಸುದ್ದಿಯನ್ನು ಕೇಳಿದಾಗ ಆಘಾತವೆನಿಸಬಹುದು; ಆ ವ್ಯಕ್ತಿಯು ಇನ್ನಿಲ್ಲವೆಂದು ನಂಬಲು ಸಾಧ್ಯವಾಗದಿರಬಹುದು.

  • ಆತ್ಮಹತ್ಯೆಯ ನಿರ್ಧಾರ ಕೈಗೊಂಡ ವ್ಯಕ್ತಿಯ ಬಗ್ಗೆ ಸಿಟ್ಟು ಬರಬಹುದು: ಅವರು ಹೇಗೆ ಈ ರೀತಿ ಮಾಡಬಹುದು? ಅವರು ತಾವು ಹತಾಶರಾದಾಗ ಸಹಾಯವನ್ನು ಪಡೆಯುತ್ತೇವೆ ಅಥವಾ ಅಂತಹ ದುಡುಕಿನ ನಿರ್ಧಾರಗಳನ್ನು ಕೆಲವು ಕಾಲದವರೆಗೆ ತೆಗೆದುಕೊಳ್ಳುವುದಿಲ್ಲವೆಂದು ಕಾವಲುಗಾರರಾದ (gatekeeper) ನಿಮಗೆ ನೀಡಿದ ಭರವಸೆಯನ್ನು ನೀವು ನೆನಪಿಸಿಕೊಳ್ಳಬಹುದು.

  • ನಿರಾಶೆ: ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ನಿಮ್ಮ ಬಗ್ಗೆಯೇ ಬೇಸರವೆನಿಸಬಹುದು.

  • ಪಶ್ಚಾತ್ತಾಪ: ಅವರು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳಲು ನೀವು ಯಾವ ರೀತಿಯಲ್ಲಾದರೂ ಕಾರಣವಾಗಿರಬಹುದೇ ಎಂದು ಯೋಚಿಸಿದಾಗ ಪಶ್ಚಾತ್ತಾಪದ ಭಾವನೆಯುಂಟಾಗಬಹುದು. ನಾನು ಏನಾದರೂ ಮಾಡಿದ್ದೆನೇ? ಅಥವಾ ಹೇಳಿದ್ದೆನೇ? ನೀವು ಅವರ ಜೊತೆ ನಡೆಸಿದ ಮಾತುಕತೆಗಳನ್ನು ನೆನಪಿಸಿಕೊಂಡು ಅಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ಅವಲೋಕಿಸಬಹುದು.

  • ಹತಾಶೆ: ನಿಮ್ಮ ಪ್ರಯತ್ನಗಳು ವ್ಯರ್ಥವಾಗಿರುವುದರಿಂದ ನಾನು ಕಾವಲುಗಾರನಾಗಿ ಮುಂದುವರೆಯಲು ಅರ್ಹನೇ? ಎಂಬ ಸಂದಿಗ್ಧ.

ವ್ಯಕ್ತಿಯ ಆರೈಕೆಯಲ್ಲಿ ತೊಡಗಿರುವ ಎಲ್ಲರಿಗೂ ಆತ್ಮಹತ್ಯೆಯು ತೀವ್ರವಾಗಿ ಆಘಾತವನ್ನುಂಟು ಮಾಡುತ್ತದೆ. ಆತ್ಮಹತ್ಯೆಯಿಂದ ಕುಟುಂಬ ಅಥವಾ ಸ್ನೇಹಿತರ ವಲಯದಲ್ಲಿ ಒಬ್ಬರಾದರೂ ವಿಚಲಿತರಾಗುತ್ತಾರೆ.

ನಾವು ಆತ್ಮಹತ್ಯೆಗೆ ಕಾರಣವಾಗಿರುವ ಅಂಶವನ್ನು ಹುಡುಕುತ್ತೇವೆ; ಮತ್ತು ಆ ಸಮಸ್ಯೆಗೆ ಪರಿಹಾರ ದೊರಕಿದ್ದರೆ ವ್ಯಕ್ತಿಯು ಜೀವದಿಂದಿರುತ್ತಿದ್ದರು ಎಂದು ಯೋಚಿಸುತ್ತೇವೆ.

ಒಬ್ಬ ಕಾವಲುಗಾರರಾಗಿ ನೀವು ನೆನಪಿಡಬೇಕಾದ ಪ್ರಮುಖ ಅಂಶವೆಂದರೆ ಆತ್ಮಹತ್ಯೆಯು ಕೇವಲ ಒಂದೇ ಕಾರಣದಿಂದ ಸಂಭವಿಸುವುದಿಲ್ಲ. ಇದಕ್ಕೆ ಶೀಘ್ರ ಅಥವಾ ಸರಳ ಪರಿಹಾರವಿಲ್ಲ; ಇದಕ್ಕೆ ಹಲವಾರು ಸಂಕೀರ್ಣ ಕಾರಣಗಳಿರಬಹುದು, ಯಾವುದೇ ಒಂದು ವಿಷಯ ಅಥವಾ ಘಟನೆಯನ್ನು ಕಾರಣವೆನ್ನಲು ಸಾಧ್ಯವಿಲ್ಲ.

ನೀವು  ಆರೈಕೆ ಮಾಡುತ್ತಿರುವ ವ್ಯಕ್ತಿಯ ಎಲ್ಲಾ ನಿರ್ಧಾರಗಳಿಗೆ ಸಂಪೂರ್ಣವಾಗಿ ಕಾರಣವಲ್ಲ ಎಂದು ತಿಳಿಯಬೇಕು. ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿರುವ ವ್ಯಕ್ತಿಗೆ ಸೂಕ್ತವಾದ ಮಾನಸಿಕ ಆರೋಗ್ಯ ತಜ್ಞರ ಬಗ್ಗೆ ತಿಳಿಸುವುದೇ ಕಾವಲುಗಾರರ ಜವಾಬ್ದಾರಿಯಾಗಿರುತ್ತದೆ. ಕಾವಲುಗಾರ ಸಮಸ್ಯೆಯಿರುವ ವ್ಯಕ್ತಿ  ಹಾಗೂ ತಜ್ಞರ ನಡುವೆ ಒಂದು ಕೊಂಡಿಯಂತೆ  ಕೆಲಸ ಮಾಡುತ್ತಾನೆ. ತಜ್ಞರು ವ್ಯಕ್ತಿಯು ತನ್ನ ದೃಢತೆಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತಾರೆ.

ಗೇಟ್ಕೀಪರ್ ಯಾರು?

ಆತ್ಮಹತ್ಯೆಯನ್ನು ತಪ್ಪಿಸಬಹುದು ಎಂದು ನಂಬಿ ಅದಕ್ಕಾಗಿ ತಮ್ಮ ಸಮಯ ಮತ್ತು ಸಾಮರ್ಥ್ಯವನ್ನು ಮೀಸಲಿಡಲು ಸಿದ್ಧರಿರುವ ವ್ಯಕ್ತಿಯನ್ನು ಗೇಟ್ಕೀಪರ್ (gatekeeper) ಅಥವಾ ಕಾವಲುಗಾರ ಎನ್ನುತ್ತೇವೆ. ಅವರು ಶಿಕ್ಷಕರು, ಪಾಲಕರು, ವಾರ್ಡನ್, ಸ್ನೇಹಿತರು, ಮೇಲಧಿಕಾರಿ, ಸಹದ್ಯೋಗಿ ಅಥವಾ ಸಮುದಾಯದ ನಾಯಕರು ಸೇರಿದಂತೆ ಯಾರಾದರೂ ಆಗಿರಬಹುದು. ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿರುವ ವ್ಯಕ್ತಿಯನ್ನು ಗುರುತಿಸಿ ಅವರಿಗೆ ಮನೋಸಾಮಾಜಿಕ ಬೆಂಬಲವನ್ನು ನೀಡಿ, ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಲು ಅವರಿಗೆ ತರಬೇತಿ ನೀಡಿರಲಾಗುತ್ತದೆ.

ಕಾವಲುಗಾರರು ಬೆಂಬಲ ಪಡೆಯುವುದು:

ಹತ್ತಿರದ ವ್ಯಕ್ತಿಗಳು ಆತ್ಮಹತ್ಯೆಯಿಂದ ಸಾವಿಗೀಡಾದಾಗ,  ಜನರು ಅದರಿಂದ ತೀವ್ರ ಆಘಾತಕ್ಕೊಳಗಾಗಬಹುದು ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಕೆಲವರು ಖಿನ್ನತೆ ಅಥವಾ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ನಂತಹ ಸಮಸ್ಯೆಗೆ ಒಳಗಾಗಬಹುದು. ನಿಮಗೂ ಕೂಡ ಈ ನೋವು ಅಸಾಧ್ಯವೆನಿಸಿದರೆ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ತಜ್ಞರನ್ನು ಸಂಪರ್ಕಿಸಿ.  ನಿಮ್ಮ ಯೋಚನೆಗಳನ್ನು ಮತ್ತು ಭಾವನೆಗಳನ್ನು ಗುರುತಿಸಿ ಅರ್ಥ ಮಾಡಿಕೊಂಡು ಅವುಗಳನ್ನು ವ್ಯಕ್ತಪಡಿಸುವ ಮೂಲಕ ಈ ಸಂದರ್ಭವನ್ನು ನೀವು ನಿಭಾಯಿಸಬೇಕು.

ತಮ್ಮ ಪೇಷಂಟ್ ಆತ್ಮಹತ್ಯೆಗೆ ಶರಣಾದಾಗ ಮಾನಸಿಕ ಆರೋಗ್ಯ ತಜ್ಞರೂ ಕೂಡ ತಮ್ಮ ವೃತ್ತಿಪರ ಸಮುದಾಯದ ಸಫೋರ್ಟ್ ಗ್ರೂಪಿನಿಂದ ಬೆಂಬಲವನ್ನು ಪಡೆಯುತ್ತಾರೆ. ಇದು ಅವರಿಗೆ ಆ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಾಗೂ ಬೇರೆ ಯಾವ ರೀತಿಯಲ್ಲಿ ಈ ಸಂದರ್ಭವನ್ನು ನಿಭಾಯಿಸಬಹುದು ಎಂದು ಅರಿಯುವ ಅವಕಾಶವನ್ನು ನೀಡುತ್ತದೆ.

ಇಂತಹ ಸಂದರ್ಭಗಳಲ್ಲಿ ಕಾವಲುಗಾರರು ತಮ್ಮನ್ನು ತಾವು ನಿಂದಿಸಿಕೊಳ್ಳದೆ ಆ ಘಟನೆಯಿಂದ ಪಾಠವನ್ನು ಕಲಿಯಬೇಕು ಎಂದು ಹಿರಿಯ ಮನೋವೈದ್ಯರು ತಿಳಿಸುತ್ತಾರೆ. "ನೀವು ಎಲ್ಲಾ ಸಂದರ್ಭಗಳಲ್ಲಿಯೂ ವ್ಯಕ್ತಿಯ ಜೊತೆಯಿರಲು ಸಾಧ್ಯವಿಲ್ಲ. ನಿಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳಿ. ಅಪಯಶಸ್ಸಿನ ಬಗ್ಗೆ ಅಷ್ಟೊಂದು ಒತ್ತು ಬೇಡ. ಅಪಾಯದ ಸನ್ನಿವೇಶವನ್ನು ಗುರುತಿಸಿ ಅದನ್ನು ತಜ್ಞರ ವಿವೇಚನೆಗೆ ಬಿಡಿ." ಎಂದು ಸಲಹೆ ನೀಡುತ್ತಾರೆ.

ಸಂಸ್ಥೆಗಳು ಮತ್ತು ಸಮುದಾಯಗಳು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

  • ಕಾವಲುಗಾರರು ಪ್ರತ್ಯೇಕವಾಗಿ ಕೆಲಸ ನಿರ್ವಹಿಸಬಾರದು. ಸಂಸ್ಥೆ ಅಥವಾ ಸಮುದಾಯಗಳಲ್ಲಿ ಬಲಿಷ್ಠವಾದ ಬೆಂಬಲದ ವ್ಯವಸ್ಥೆಯು ಇರಬೇಕು. ಮಾನಸಿಕ ಆರೋಗ್ಯ ತಜ್ಞರು ಮತ್ತು ಕಾವಲುಗಾರರು ನಿಗದಿತವಾಗಿ ಭೇಟಿ ಮಾಡಿ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು, ಪರಸ್ಪರರ ಅನುಭವಗಳಿಂದ ಪಾಠ ಕಲಿಯಬೇಕು.

  • ಆತ್ಮಹತ್ಯೆಯ ನಂತರದ ಸಂದರ್ಭವನ್ನು ನಿಭಾಯಿಸುವ ಪರಿಣಾಮಕಾರಿ ವ್ಯವಸ್ಥೆಯು ಲಭ್ಯವಿರಬೇಕು. ಇದರಿಂದ ಹತ್ತಿರದವರನ್ನು ಕಳೆದುಕೊಂಡು ದುಃಖದಲ್ಲಿರುವ ಕಾವಲುಗಾರರನ್ನು ಗುರುತಿಸಲು ಸಾಧ್ಯವಾಗುತ್ತದೆ. ಆತ್ಮಹತ್ಯೆಯ ನಂತರದ ಸಂದರ್ಭವನ್ನು ನಿಭಾಯಿಸಲು ಶಕ್ತವಾದ ಸಪೋರ್ಟ್ ಗ್ರೂಪಿನ ಮೂಲಕ ಕಾವಲುಗಾರರ ಚೇತರಿಕೆಗೆ ನೆರವಾಗಬೇಕು, ಅವರಲ್ಲಿ ದೃಢತೆಯನ್ನು ಹೆಚ್ಚಿಸಲು ಮತ್ತು ದುಃಖದ ಬೇಗೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.

  • ಅನುಭವಿ ತಜ್ಞರ ಮೂಲಕ ಕಾವಲುಗಾರರಿಗೆ ಭಾವನಾತ್ಮಕ ಬೆಂಬಲವನ್ನು ಒದಗಿಸಬೇಕು. ಉದ್ಯೋಗದ ಸ್ಥಳದಲ್ಲಿ, ಅವರು ಮತ್ತೆ ಕೆಲಸವನ್ನು ಆರಂಭಿಸಲು ಸಿದ್ಧರಾಗುವವರೆಗೆ ಬೆಂಬಲವನ್ನು ಒದಗಿಸಬೇಕು.

ಒಬ್ಬ ಕಾವಲುಗಾರರಾಗಿ ನೀವೇನು ಮಾಡಬಹುದು?

  • ನಿಮಗೆ ಹೆಚ್ಚಿನ ಒತ್ತಡವುಂಟಾದರೆ ನಿಮ್ಮ ಗೇಟ್ ಕೀಪರ್ ಸಮೂಹದಿಂದ ಯಾರನ್ನಾದರೂ ಕರೆದು ಬೆಂಬಲವನ್ನು ಪಡೆದುಕೊಳ್ಳಿ ಅಥವಾ ಸ್ನೇಹಿತರ ಸಹಾಯವನ್ನು ಪಡೆಯಿರಿ. ಸೂಕ್ತವಾದ ಬೆಂಬಲದ ವ್ಯವಸ್ಥೆಯಿಲ್ಲದ ಕಾವಲುಗಾರರು ಆತ್ಮಹತ್ಯೆ ಸಹಾಯವಾಣಿಗೆ ಕರೆಮಾಡಿ. ಹೆಚ್ಚಿನ ಆತ್ಮಹತ್ಯೆ ಸಹಾಯವಾಣಿಗಳು ಗೇಟ್ಕೀಪರ್ಸ್ ಗೆ ಸಹ ಬೆಂಬಲವನ್ನು ಒದಗಿಸುತ್ತವೆ.

  • ಇನ್ನೊಬ್ಬರ ಆತ್ಮಹತ್ಯೆ ನಿಮ್ಮ ಆತ್ಮವಿಶ್ವಾಸ ಮತ್ತು ಕೆಲಕಾಲ ನಿಮ್ಮ ಕಾವಲುಗಾರಿಕೆಯ ಕೆಲಸದ ಮೇಲೆಯೂ ಪರಿಣಾಮ ಬೀರಬಹುದು. ಇದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. ಅಗತ್ಯವಿದ್ದರೆ ಉಳಿದವರ ಸಹಾಯ ಪಡೆಯಿರಿ.

  • ಕಾವಲುಗಾರರಾಗಿ ನಿಮ್ಮ ಮಿತಿಗಳನ್ನು ಅರಿತುಕೊಳ್ಳಿ: ನೀವು ನಿಮ್ಮ ಜವಾಬ್ದಾರಿಯ ಅಂಗವಾಗಿ ಇಷ್ಟನ್ನೇ ಮಾಡಬಹುದು. ನೀವು ಎಲ್ಲಾ ಸಮಯ ಇನ್ನೊಬ್ಬ ವ್ಯಕ್ತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಿಮಗೆ ಯಾವುದಾದರೂ ಕಾನೂನಾತ್ಮಕ ತೊಡಕುಗಳಿದ್ದರೆ ಸಂಬಂಧಿಸಿದ ವೃತ್ತಿತಜ್ಞರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಿ.

  • ನೀವು ಕಾರ್ಯ ನಿರ್ವಹಿಸುತ್ತಿರುವ ಮಾನಸಿಕ ಆರೋಗ್ಯ ಸಂಸ್ಥೆ: ಸ್ಥಳೀಯ ವೈದ್ಯರು, ಮನೋವೈದ್ಯರು, ಆಪ್ತ ಸಮಾಲೋಚಕರು ಮತ್ತು ಮನಃಶಾಸ್ತ್ರಜ್ಞರು ಮತ್ತು ಉಳಿದ ಕಾವಲುಗಾರರ ಜೊತೆ ಸೇರಿಕೊಂಡು ನಿಮ್ಮದೇ ಆದ ಬೆಂಬಲದ ವ್ಯವಸ್ಥೆಯನ್ನು ರೂಪಿಸಿಕೊಳ್ಳಿ. ಎಲ್ಲಾ ಸಮಯದಲ್ಲಿಯೂ ಇವರ ಸಂಪರ್ಕದಲ್ಲಿರಿ.

  • ನಿಮಗೆ ಆಸಕ್ತಿಯಿರುವ ಚಟುವಟಿಕೆಯಲ್ಲಿ ನಿರತರಾಗುವ ಮೂಲಕ ನಿಮ್ಮ ದೃಢತೆಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಪೌಷ್ಟಿಕಾಂಶಭರಿತ ಆಹಾರ ಸೇವಿಸಿ.

ನಿಮ್ಮ ಕೆಲಸವು ನಿಮ್ಮ ಜೀವನಕ್ಕೆ ಒಂದು ಅರ್ಥವನ್ನು ಒದಗಿಸುತ್ತಿದೆಯೆಂಬ ಕಾರಣಕ್ಕೆ ನೀವು ಗೇಟ್ ಕೀಪಿಂಗ್ ಕೆಲಸದಲ್ಲಿ ನಿರತರಾಗಿದ್ದೀರಿ ಎಂದು ತಿಳಿದುಕೊಳ್ಳಿ. ನಿಮ್ಮ ಜೀವನದಲ್ಲಿ ಇದರ ಮಹತ್ವವೇನೆಂದು ಅವಲೋಕನ ಮಾಡಿಕೊಳ್ಳಿ. ಮುಂದುವರೆಯಲು ಅಗತ್ಯವಾದ ಸಂಪನ್ಮೂಲ ಮತ್ತು ಉತ್ತೇಜನವನ್ನು ಪಡೆದುಕೊಳ್ಳಿ. ಪ್ರತಿಯೊಬ್ಬ ಕಾವಲುಗಾರರ ಕೊಡುಗೆಯೂ ಅತ್ಯಂತ ಮಹತ್ವದ್ದಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org