ಮಾಧ್ಯಮಗಳಿಗೆ ಸಲಹೆ: ಆತ್ಮಹತ್ಯೆಗಳ ಬಗ್ಗೆ ವರದಿ ಮಾಡುವುದು

ಮಾಧ್ಯಮಗಳಿಗೆ ಸಲಹೆ: ಆತ್ಮಹತ್ಯೆಗಳ ಬಗ್ಗೆ ವರದಿ ಮಾಡುವುದು

ಆತ್ಮಹತ್ಯೆ ತಡೆಗಟ್ಟಲು ಮಾಧ್ಯಮಗಳು ಜವಾಬ್ದಾರಿಯುತ ವರದಿ ಮಾಡುವುದು ಬಹುಮುಖ್ಯ.

ಸಾವಿನ ಚಿತ್ರಣವನ್ನು ಭಾವೋದ್ರೇಕಗೊಳಿಸದಿರಿ: ಇರುವ ವಿಷಯವನ್ನು ಭಾವೋದ್ರೇಕಗೊಳಿಸದಂತೆ ತಿಳಿಸಿ ಮತ್ತು ಮುಖ್ಯಾಂಶಗಳೊಂದಿಗೆ ಜೋಡಿಸದಿರಿ. ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಫೋಟೋಗಳನ್ನು ತೋರಿಸದಿರಿ. ಸಾಧ್ಯವಾದರೆ ಯಾವುದಾದರೂ ಹಳೆಯ ಸುದ್ದಿಯಲ್ಲಿದ್ದ ವ್ಯಕ್ತಿಯ ಚಿತ್ರಗಳನ್ನು ತೋರಿಸಿ. ಬಲಿಯಾದ ವ್ಯಕ್ತಿಯ ವೈಯಕ್ತಿಕ ವಿಷಯವನ್ನು ಗುಪ್ತವಾಗಿಡಿ.

ಸಾವಿಗೆ ಇದೇ ನಿರ್ದಿಷ್ಟ ಕಾರಣವೆಂದು ತೋರಿಸದಿರಿ: ಆತ್ಮಹತ್ಯೆ ಎನ್ನುವುದು ಒಂದು ಸಂಕೀರ್ಣವಾದ ವಿಷಯ. ಅದಕ್ಕೆ ಹಲವಾರು ಕಾರಣಗಳಿರಬಹುದು. ಸರಿಯಾದ ಸಾಕ್ಷಿಗಳಿಲ್ಲದೇ ಸಾವಿನ ಕಾರಣವನ್ನು ನಿರ್ಧರಿಸದಿರಿ. ಸಂಪೂರ್ಣ ತನಿಖೆಯ ನಂತರ ಸಾವಿನ ಕಾರಣವನ್ನು ತಿಳಿಸಲಾಗುವುದು ಎಂದು ವರದಿ ಮಾಡಿ. ಸಂಬಂಧಗಳಲ್ಲಿನ ಒಡಕುಗಳು ಅಥವ ಹಣಕಾಸಿನ ಸಮಸ್ಯೆಗಳೇ ಸಾವಿಗೆ ಕಾರಣವೆಂಬಂತೆ ಬಿಂಬಿಸದಿರಿ.

ಸಾವಿನ ಸುದ್ದಿಯನ್ನು ಮುಖಪುಟದಲ್ಲಿ ಅಥವ ಅಪರಾಧ ಪುಟದಲ್ಲಿ ಪ್ರಕಟಿಸದಿರಿ: ಪತ್ರಿಕೆಯ ಮುಖಪುಟದಲ್ಲಿ ಸುದ್ದಿಯನ್ನು ಪ್ರಕಟಿಸುವುದರಿಂದ ಓದುಗರು ಭಾವೋದ್ರೇಕಕ್ಕೊಳಗಾಗಬಹುದು. ಅಥವಾ ಸುದ್ದಿಯನ್ನು ಅಪರಾಧ ಪುಟದಲ್ಲಿ ಪ್ರಕಟಿಸುವುದರಿಂದ ಆತ್ಮಹತ್ಯೆಯು ಅಪರಾಧವೆಂದು ಚಿತ್ರಿತವಾಗುವುದು. ಸಾವಿನ ಅಥವಾ ಮರಣ ಪ್ರಕಟಣೆಯ ಅಂಕಣದಲ್ಲಿ ವರದಿ ಮಾಡಿ. ಆತ್ಮಹತ್ಯೆಯ ಕಾರಣವನ್ನು ಮುಖಪುಟದಲ್ಲಿ ಪ್ರಕಟಿಸದಿರಿ.

ಘಟನೆಗೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಗೊಳಿಸಬೇಡಿ: ಆತ್ಮಹತ್ಯಾ ಪತ್ರ, ಬಳಸಿಕೊಂಡ ವಿಧಾನ, ಮಾಡಿಕೊಂಡ ತಯಾರಿ, ಪರಿಸ್ಥಿತಿ ಅಥವ ಘಟನೆ ನಡೆದ ಸ್ಥಳ , ಈ ರೀತಿಯಾದ ವಿವರಗಳನ್ನು ನೀಡುವುದರಿಂದ ಆತ್ಮಹತ್ಯೆ ಅನುಕರಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
 
 ಆತ್ಮಹತ್ಯೆಯು ಪ್ರತಿಭಟನೆಯ ಸಂಕೇತ ಅಥವ ಅಸಮಾಧಾನಕ್ಕೆ ಪರಿಹಾರ ಎಂದು ಹೇಳಬೇಡಿ: ಈ ರೀತಿ ಮಾಡುವುದರಿಂದ, ವ್ಯಕ್ತಿಯು ಅಥವಾ ಘಟನೆಯು ಸಾರ್ವಜನಿಕವಾಗಿ ಮಾದರಿಯಂತೆ ಚಿತ್ರಿಸಲ್ಪಡುತ್ತದೆ. ಮುಂದೆ ಇದೇ ರೀತಿಯ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಥಿತಿಯಿರುವ ವ್ಯಕ್ತಿಗೆ ಇದೊಂದು ಪರಿಹಾರವೆಂಬಂತೆ ತೋರುತ್ತದೆ. ಆದ್ದರಿಂದ ವ್ಯಕ್ತಿಯು ಏಕೆ ಸಾವಿಗೆ ಶರಣಾದ ಎಂಬ ಕಾರಣ, ವಿಧಾನಗಳನ್ನು ನಿರೂಪಿಸದಿರಿ, ಬದಲಾಗಿ ವ್ಯಕ್ತಿಯ ಸಾವಿಗೆ ಶೋಕವನ್ನು ಮಾತ್ರ ಸೂಚಿಸಿ.

 ಸೂಕ್ಷ್ಮವಾಗಿ ಯೋಚಿಸಿ: ಪ್ರಸಿದ್ಧ ವ್ಯಕ್ತಿಗಳ ಆತ್ಮಹತ್ಯೆ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿರೂಪಿಸಿ. ಜನರು ತಮ್ಮನ್ನು ತಾವು ಖ್ಯಾತ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ದುರ್ಬಲ ಮನಸ್ಥಿತಿಯನ್ನು ಹೊಂದಿರುವವರು, ಆ ವ್ಯಕ್ತಿಯ ಅನುಯಾಯಿಗಳಾಗಿದ್ದರೆ ತಾವೂ ಸಹ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಬೇರೆಯವರಿಗೆ ಸಮಸ್ಯೆಗಳಿಂದ ಹೊರಬರಲು ಆತ್ಮಹತ್ಯೆ ಪರಿಹಾರ ಎಂದಾದರೆ, ನಮಗೂ ಅದು ಸಾಧ್ಯ ಎಂದು ಊಹಿಸಿ, ತಾವು ಇಂತಹ ಕೃತ್ಯಕ್ಕೆ ಮುಂದಾಗಬಹುದು. ಸಾವಿನ ವಿವರವನ್ನು ಸಂಕ್ಷಿಪ್ತವಾಗಿ ಹೇಳಿ ಮತ್ತು ಆತ್ಮಹತ್ಯೆಯಿರಬಹುದು ಎಂದು ಉಲ್ಲೇಖಿಸಿ.

ಸಂದರ್ಭವನ್ನು ಸಾರ್ವಜನಿಕರಿಗೆ ಆತ್ಮಹತ್ಯೆಯ ಬಗ್ಗೆ ತಿಳುವಳಿಕೆ ನೀಡಲು ಉಪಯೋಗಿಸಿ: ಸಹಾಯವಾಣಿ ಮುಖಾಂತರ ಆತ್ಮಹತ್ಯೆಯಿಂದ ಪಾರಾಗಿ ಬದುಕುಳಿದವರ ಬಗ್ಗೆ ಮಾಹಿತಿ ನೀಡಿ. ಈ ಹಿಂದೆ ಇಂತಹ ಪ್ರಯತ್ನಗಳಿಗೆ ಬಲಿಪಶುಗಳಾದವರ ಕಥೆಗಳನ್ನು ಪ್ರಕಟಿಸಿ . ಸಮಸ್ಯೆಯಿಂದ ಹೊರಗೆ ಬರಲು ಸಹಾಯವಾಣಿ ಹೇಗೆ ಅನುಕೂಲವಾಯಿತು ಎಂಬ ವಿವರಗಳಿಗೆ ಪ್ರಾಮುಖ್ಯತೆ ನೀಡಿ . ಜನರು ತಾವು ಹೇಗೆ ಸಹಾಯ ಪಡೆದುಕೊಳ್ಳಬಹುದು ಮತ್ತು ಬೇರೆಯವರಿಗೂ ಹೇಗೆ ಸಹಾಯ ಮಾಡಬಹುದು ಎಂಬ ಮಾಹಿತಿಗಳನ್ನು ಹಂಚಿಕೊಳ್ಳಿ.

 ವಾಸ್ತವತೆಯನ್ನು ವರದಿ ಮಾಡುವ ಮುನ್ನ ಏನಾದರೂ ಅನುಮಾನಗಳಿದ್ದರೆ , ಯಾರಾದರೂ ಮಾನಸಿಕ ಆರೋಗ್ಯ ತಜ್ಞರನ್ನು ಅಥವ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org