ನಿಮ್ಮ ಪರಿಚಯದವರು ಆತ್ಮಹತ್ಯೆಯ ಅಪಾಯದಲ್ಲಿ ಸಿಲುಕಿರುವಾಗ

ನಿಮ್ಮ ಪರಿಚಯದವರು ಆತ್ಮಹತ್ಯೆಯ ಅಪಾಯದಲ್ಲಿ ಸಿಲುಕಿರುವಾಗ

ನಿಮಗೆ ಆತ್ಮೀಯರಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಎಂಬ ಅಪಾಯಕಾರಿ ವಿಷಯದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ನಿಮ್ಮ ಗಮನಕ್ಕೆ ಬಂದರೆ ಮನಸ್ಸಿಗೆ ತುಂಬಾ ಯಾತನೆಯಾಗುತ್ತದೆ. ಆದರೆ ಅವರನ್ನು ಇಂತಹ ದುರಾಲೋಚನೆಯಿಂದ ಮುಕ್ತಗೊಳಿಸಿ, ಸಹಜ ಬದುಕಿಗೆ ಹಿಂದಿ

ರುಗುವಂತೆ ಮಾಡಲು ಸಾಕಷ್ಟು ವಿಧಾನಗಳಿವೆ.

ವ್ಯಕ್ತಿಯೊಡನೆ ವೈಯಕ್ತಿಕವಾಗಿ ಮಾತನಾಡಿ ಮತ್ತು ಆತ್ಮಹತ್ಯೆಯ ವಿಚಾರವನ್ನು ನಿಧಾನವಾಗಿ ಪ್ರಸ್ತಾಪಿಸಿ. ಈ ರೀತಿ ಮಾತನಾಡುವುದರ ಮೂಲಕ ಅವರ ಭಾವನೆಗಳನ್ನು ಹಂಚಿಕೊಳ್ಳಲು ಪ್ರೇರಣೆ ನೀಡಿ "ಇತ್ತೀಚೆಗೆ ನೀನು ತುಂಬಾ ಬಳಲಿದಂತೆ ಕಾಣುತ್ತಿದ್ದಿಯಾ, ಏನಾದರೂ ತೊಂದರೆ ನಿನ್ನ ಕಾಡುತ್ತಿದೆಯೇ "? ಈ ರೀತಿ ನಿರಾತಂಕವಾಗಿ ಮಾತಿಗೆ ಇಳಿಯುವುದರ ಮೂಲಕ, ಅವರ ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಆ ವ್ಯಕ್ತಿ "ನಾನು ತುಂಬ ಬಳಲಿದ್ದೇನೆ ," ಅಥವಾ "ನಾನು ನನ್ನ ಕುಟುಂಬಕ್ಕೆ ಹೊರೆಯಾಗಿದ್ದೇನೆ ," ಅಥವಾ "ನನಗೆ ಸಾಯಬೇಕು ಎನ್ನಿಸುತ್ತಿದೆ , " ಅಥವಾ " ಯಾಕೋ ಬದುಕುವ ಇಚ್ಚೆಯಿಲ್ಲ," ಈ ರೀತಿ ಉತ್ತರಗಳು ಬಂದಲ್ಲಿ , ಆತನಲ್ಲಿ ಆತ್ಮಹತ್ಯಾ ಮನೋಭಾವದ ಲಕ್ಷಣಗಳಿವೆ ಎಂಬುದನ್ನು ಗಮನಿಸಬಹುದು.

ಅವರ ಯಾತನೆಯನ್ನು ಗುರುತಿಸಿ. ಅವರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಧೈರ್ಯ ತುಂಬಲು ಪ್ರಯತ್ನಿಸಿ.

"ಬದುಕಿನಲ್ಲಿ ಎಲ್ಲರಿಗೂ ಸಮಸ್ಯೆಗಳು ಇದ್ದದ್ದೇ " ಅಥವಾ " ಬದುಕಿನಿಂದ ಮುಕ್ತರಾಗಲು ಇದೆಲ್ಲಾ ಒಂದು ಸಮಸ್ಯೆಯೇ ಅಲ್ಲ ", ಈ ರೀತಿಯ ಮಾತುಗಳು ವ್ಯಕ್ತಿಯನ್ನು ಮತ್ತಷ್ಟು ನೋಯಿಸುತ್ತದೆ. ಬದಲಾಗಿ, “ ಈ ಸಮಸ್ಯೆಯನ್ನು ನಿಭಾಯಿಸಲು ನಿನಗೆ ತುಂಬ ಕಷ್ಟವಾಗುತ್ತಿದೆಯಲ್ಲವೇ. " ಎಂದು ಮಾತನಾಡುವ ಮೂಲಕ, ಆ ವ್ಯಕ್ತಿಯ ನೋವುಗಳಿಗೆ ಮೌಲ್ಯ ನೀಡಿ ಮತ್ತು ಆತನ ಮಾತನ್ನು ಸಮಾಧಾನದಿಂದ ಕೇಳಿ. ಈ ರೀತಿ ಸಹಾನುಭೂತಿ ತೋರುವುದರಿಂದ ಆತನ ನಿರಾಶೆಯನ್ನು ಸ್ವಲ್ಪ ಕಡಿಮೆಗೊಳಿಸಿ ಧೈರ್ಯ ತುಂಬಬಹುದು.

ಪೂರ್ವಾಗ್ರಹವಿಲ್ಲದ ಮತ್ತು ಮುಕ್ತವಾದ ಬೆಂಬಲವನ್ನು ನೀಡಿ

ವ್ಯಕ್ತಿಗೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಕಷ್ಟು ಸಮಯ ನೀಡಿ. ಅವರ ಎಲ್ಲ ಹೇಳಿಕೆಗಳನ್ನು ಗಮನವಿಟ್ಟು ಕೇಳಿ , ಆದರೆ ಯಾವುದೇ ಪರಿಹಾರವನ್ನು ಸೂಚಿಸಬೇಡಿ. “ ನಿನ್ನ ಬಗ್ಗೆ ನಿನ್ನ ಕುಟುಂಬದವರು ಏನಂದುಕೊಂಡಾರು ?” ಎಂದು ಹೇಳಬೇಡಿ. ಈ ರೀತಿ ಮಾಡುವುದರಿಂದ ಮೊದಲೇ ದುರ್ಬಲಗೊಂಡ ವ್ಯಕ್ತಿ ಮತ್ತಷ್ಟು ಕುಸಿಯಬಹುದು. ಆತ ಒಬ್ಬಂಟಿಯಲ್ಲಾ, ಎಲ್ಲರೂ ಅವನ ಜೊತೆಗಿದ್ದಾರೆ ಎಂಬ ಭರವಸೆ ಕೊಡಿ.

ತಮ್ಮ ಆತ್ಮಹತ್ಯೆಯ ಆಲೋಚನೆಯನ್ನು ಕಾರ್ಯಗತಗೊಳಿಸದಂತೆ ಪ್ರಮಾಣ ಮಾಡುಲು ಒಪ್ಪಂದ ಮಾಡಿಕೊಳ್ಳಿ.

ವ್ಯಕ್ತಿಯು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ನಿಮಗೆ ಖಚಿತವಾದಲ್ಲಿ ಅವರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಿ. “ನಾನು ನಿನಗೆ ಸಹಾಯ ಮಾಡಲು ಏನಾದರೂ ಮಾರ್ಗ ಹುಡುಕುವವರೆಗೂ ಯಾವುದೇ ತೊಂದರೆಯನ್ನು ಮಾಡಿಕೊಳ್ಳಲಾರೆ ಎಂದು ಪ್ರಮಾಣ ಮಾಡು" ಅಥವಾ, “ಒಂದು ವೇಳೆ ನಿನಗೆ ಆತ್ಮಹತ್ಯೆಯ ಆಲೋಚನೆಗಳು ಬಂದ ತಕ್ಷಣ , ನನಗೆ ಕರೆ ಮಾಡುವೆನೆಂದು ಭಾಷೆ ನೀಡುವೆಯಾ?” ಎಂದು ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಅವರ ಆತ್ಮಹತ್ಯೆಯ ಯೋಜನೆಗಳನ್ನು ಮುಂದೂಡಲು ಮತ್ತು ಮಾನಸಿಕ ಆರೋಗ್ಯ ತಜ್ಙರ ಸಲಹೆ ಪಡೆಯಲು ಕಾಲಾವಕಾಶ ದೊರಕುತ್ತದೆ.

ಅವರ ಬದುಕಿನ ಸಕಾರಾತ್ಮಕ ಅಂಶಗಳ ಬಗ್ಗೆ ಪಟ್ಟಿಮಾಡಲು ಸಹಾಯ ಮಾಡಿ.

ಅವರ ಬದುಕಿನ ಸಾಧನೆಗಳು ಮತ್ತು ಯಶಸ್ಸುಗಳನ್ನು ನೆನಪಿಸಿ. ಅವರ ಆಂತರಿಕ ಶಕ್ತಿ ಮತ್ತು ಬದುಕಿನ ಸಕಾರಾತ್ಮಕ ಅಂಶಗಳನ್ನು ಗಮನಕ್ಕೆ ತನ್ನಿ. ಇದರಿಂದ ಅವರ ಮನಸ್ಸಿನಲ್ಲಿರುವ ಆತ್ಮಹತ್ಯೆಯ ಯೋಚನೆಯು ಬದಲಾಗಬಹುದು.

ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಲು ಸಲಹೆ ನೀಡಿ.

ನುರಿತ ಮಾನಸಿಕ ಆರೋಗ್ಯ ವೃತ್ತಿಪರರ ಸಹಾಯವನ್ನು ಪಡೆಯಲು ಸಲಹೆ ನೀಡಿ. ಆಪ್ತ ಸಮಾಲೋಚಕರು ಮನಶ್ಯಾಸ್ತ್ರಜ್ಞರು ಅಥವ ಮನೋವೈದ್ಯರನ್ನು ಭೇಟಿ ಮಾಡಲು ಹೇಳಿ. ಸಾಧ್ಯವಾದರೆ ನೀವೂ ಅವರೊಡನೆ ಹೋಗಿ. ಆಕಸ್ಮಾತ್ ಈ ರೀತಿಯಾದ ಯೋಚನೆಗಳು ಬಂದಲ್ಲಿ ಆತ್ಮಹತ್ಯಾ ಸಹಾಯವಾಣಿಯನ್ನು ಸಂಪರ್ಕಿಸಲು ಸಲಹೆ ನೀಡಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org