ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ಪ್ರತಿಯೊಬ್ಬರು ಹೇಗೆ ಭಾಗಿಯಾಗಬಹುದು?

ಯಾರು ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ಭಾವಿಸಿ, ಅದಕ್ಕಾಗಿ ಸ್ವಲ್ಪ ಸಮಯ ಮತ್ತು ಶಕ್ತಿ ನೀಡಲು ಸಿದ್ಧರಿರುವರೋ ಅವರನ್ನು ‘ಕಾವಲುಗಾರ’ (gatekeepers) ಎನ್ನಬಹುದು

ಆವತ್ತು ಬೆಳಿಗ್ಗೆ ಸರೋಜ ಕೆಲಸಕ್ಕೆ ತಡವಾಗಿ ಬಂದಿದ್ದಳು. ಆಕೆ ಬೇಸರಗೊಂಡಂತಿತ್ತು ಮತ್ತು ಆಕೆಯ ಕಣ್ಣುಗಳು ಊದಿಕೊಂಡಿದ್ದವು. ಏನಾಯಿತೆಂದು ಆಕೆಯನ್ನು ನಿಧಾನವಾಗಿ ಕೇಳಲು, ತನ್ನ ಗಂಡ ಕುಡಿದು ಬಂದು ಮಕ್ಕಳೆದುರು ಸೃಷ್ಟಿಸಿದ ದೃಶ್ಯವನ್ನು ವಿವರಿಸಿದಳು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಸ್ಪಷ್ಟವಾಗಿತ್ತು. ಕಳೆದ ತಿಂಗಳೇ ಆಕೆ ಸಾಕಷ್ಟು ಸಲ ತಾನು ಸಾಯಲು ಆಲೋಚಿಸಿದ್ದಾಗಿ ಹೇಳಿಕೊಂಡಳು.
ಇದರಿಂದಾಗಿ ಸರೋಜ ಅಸಹಾಯಕಳಾಗಿದ್ದಾಳೆ ಮತ್ತು ಸ್ಥೈರ್ಯ ಕಳೆದುಕೊಂಡಿದ್ದಾಳೆ ಎಂಬುದು ನನಗೆ ಮನದಟ್ಟಾಯಿತು. ಮುಂದಿನ 10 ನಿಮಿಷ, ನನ್ನೆಲ್ಲ ಕೆಲಸವನ್ನು ಬದಿಗಿಟ್ಟು ಆಕೆಯು ತನ್ನ ಸಮಸ್ಯೆಯ ಬಗ್ಗೆ ವಿವರಿಸಿದಾಗ ನಾನು ಎಲ್ಲವನ್ನೂ ಸಮಾಧಾನವಾಗಿ ಲಕ್ಷ್ಯವಿಟ್ಟು ಕೇಳಿಸಿಕೊಂಡೆ. ನನ್ನ ಈ ಸಹಾನುಭೂತಿ ಆಕೆಗೆ ತನ್ನೆಲ್ಲ ಭಾವನೆಗಳನ್ನು ನನ್ನಲ್ಲಿ ಹಂಚಿಕೊಳ್ಳಲು ಸಹಾಯ ಮಾಡಿತು. 

ಆಕೆಯ ಸಾಮಥ್ರ್ಯವನ್ನು ಮನಗಂಡೆ. ಆಕೆ ಓರ್ವ ಉತ್ತಮ ಕೆಲಸಗಾರ್ತಿ, ಸ್ನೇಹಮಯ ಸ್ವಭಾವದವಳು, ತುಂಬಾ ನಂಬಿಗಸ್ಥೆ, ಮತ್ತು ಆಕೆಗೆ ಕೆಲಸ ನೀಡಿದ ಸಾಕಷ್ಟು ಮಂದಿ ಆಕೆಯನ್ನು ಗೌರವಿಸುತ್ತಾರೆ ಎಂದು ಅವಳ ಒಳ್ಳೆಯ ಗುಣಗಳ ಮತ್ತು ಸಾಮರ್ಥ್ಯದ ಬಗ್ಗೆ ಅವಳಿಗೆ ತಿಳಿಸಿದೆ. ಆಕೆಯ ಪತಿಯ ವಿಚಾರದಲ್ಲಿ ಸಲಹೆ ತೆಗೆದುಕೊಳ್ಳಲು ನಾನು ಸ್ವಯಂಪ್ರೇರಿತಳಾಗಿ ಆಕೆಗೆ ಓರ್ವ ವೈದ್ಯರ ಸಂಪರ್ಕ ನೀಡಿದೆ.

ನಾನು ಆಕೆಯ ಯಾವುದೇ ಸಮಸ್ಯೆಯನ್ನು ಬಗೆಹರಿಸದೇ ಇರಬಹುದು, ಆದರೆ ನನ್ನ ಸಲಹೆಯಿಂದ ಅವಳು ನಗುಮೊಗದಿಂದ ಮನೆಗೆ ಹೋದಳು, ಮತ್ತು ಆಕೆ ಮತ್ತೆಂದೂ ಆತ್ಮಹತ್ಯೆ ಕುರಿತು ಚಿಂತಿಸುವುದಿಲ್ಲ ಎಂಬ ಭರವಸೆ ನೀಡಿದ್ದಳು. 
ಅವಳು ಸಹಾನುಭೂತಿ ಮತ್ತು ಸಹಾಯಕ್ಕೆ ಸ್ಪಂದಿಸಿದ್ದಳು.

ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿರುವವರು ಅಥವಾ ಪ್ರಯತ್ನಮಾಡುವವರು ಸಹಾಯಕ್ಕಾಗಿ ಯಾಚಿಸುತ್ತಿರುತ್ತಾರೆ

ಯಾಕೆ ಕೆಲವು ವ್ಯಕ್ತಿಗಳು ಆತ್ಮಹತ್ಯೆಯಂಥ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಅವರಂತೆ ಅದೇ ಸ್ಥಿತಿಯಲ್ಲಿರುವ ಅಥವಾ ಅದಕ್ಕಿಂತ ದಾರುಣ ಸ್ಥಿತಿಯಲ್ಲಿರುವ ಕೆಲವರು ಆತ್ಮಹತ್ಯೆ ಕುರಿತು ಯೋಚಿಸುವುದಿಲ್ಲ ಎಂಬುದನ್ನು ವಿವರಿಸುವುದು ಕಷ್ಟ. ಆತ್ಮಹತ್ಯೆ ಯತ್ನ ನಡೆಸಿದ ವ್ಯಕ್ತಿಗಳು ಆನಂತರ ಹಲವು ಬಾರಿ ತಮ್ಮ ಈ ನಿರ್ಧಾರದ ಬಗ್ಗೆ ಮಿಶ್ರ ಭಾವನೆ ಹೊಂದಿರುವುದಾಗಿ ಹೇಳುತ್ತಾರೆ. ನೋವಿನ ಬದುಕಿನಿಂದ ದೂರ ಹೋಗುವ ಹಂಬಲ ಅವರಲ್ಲಿರುತ್ತದೆ. ಜೊತೆಗೆ ಬದುಕುವ ಹಂಬಲ ಅವರಲ್ಲಿರುತ್ತದೆ. ಆತ್ಮಹತ್ಯೆಯ ಯೋಚನೆ ಮಾಡುವ ಹಲವು ವ್ಯಕ್ತಿಗಳು ನಿಜವಾಗಿ ಸಾಯಲು ಬಯಸುವುದಿಲ್ಲ. ಆದರೆ ಪರಿಸ್ಥಿತಿಯಿಂದ ಆತ್ಮಸ್ಥೈರ್ಯ ಕಳೆದುಕೊಂಡು, ಅವರಲ್ಲಿ ಅಸಹಾಯಕ ಭಾವನೆ ಮೂಡಿಸುತ್ತದೆ. 

ಮೇಲಿನ ಸರೋಜಳ ಕಥೆಯಂತೆಯೆ ನಾವು ಸಹ ನಮಗೆ ಪರಿಚಯವಾದ ಯಾರಾದರು ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರೆ ಅವರಿಗೆ ಸಹಾಯ ನೀಡಿ, ಅನುಭೂತಿ ತೋರಿಸಿದರೆ ಅವರಲ್ಲಿ ಬದುಕುವ ಬಯಕೆ ಹೆಚ್ಚುತ್ತದೆ ಮತ್ತು ಆತ್ಮಹತ್ಯೆ ಯೋಚನೆ ಮತ್ತು ಅಪಾಯ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಆತ್ಮಹತ್ಯೆ ಬಗ್ಗೆ ಚಿಂತಿಸುವ ವ್ಯಕ್ತಿ ಒಂದು ಹಂತದಲ್ಲಿ ಖಚಿತವಾಗಿ ತನ್ನ ಉದ್ದೇಶಗಳ ಬಗ್ಗೆ ಎಚ್ಚರಿಕೆ ನೀಡುತ್ತಾನೆ. ಆಗ ನಾವು ಪ್ರತಿಯೊಬ್ಬರು ಕಾವಲುಗಾರನಂತೆ ವರ್ತಿಸಬೇಕು.

ಯಾರು ಗೇಟ್‍ಕೀಪರ್ (ಕಾವಲುಗಾರ) ಆಗಬಹುದು?
ಯಾರು ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ಭಾವಿಸಿ, ಅದಕ್ಕಾಗಿ ಸ್ವಲ್ಪ ಸಮಯ ನೀಡಲು ಸಿದ್ಧರಿರುವರೋ ಅವರನ್ನು ‘ಕಾವಲುಗಾರ’ ಎನ್ನಬಹುದು. ಅವರು ಶಿಕ್ಷಕರು, ಸ್ನೇಹಿತರು, ಹಾಸ್ಟೆಲ್ ವಾರ್ಡನ್, ಪಾಲಕರು, ಸಹೋದರರು, ನೆರೆಹೊರೆಯವರು, ಉದ್ಯೋಗಿಗಳು, ವಾಚ್‍ಮನ್, ಬಸ್ ಕಂಡಕ್ಟರ್, ಶಾಪ್‍ಕೀಪರ್ ಅಥವಾ ಸಮುದಾಯದ ನಾಯಕ...ಹೀಗೆ ಯಾರು ಬೇಕಾದರೂ ಆಗಿರಬಹುದು. ಕಾವಲುಗಾರನಾಗಿ ನೀವು ಹದ್ದಿನ ಕಣ್ಣು ಹೊಂದಿರಬೇಕು ಮತ್ತು ತೊಂದರೆಯಲ್ಲಿರುವ ಕೆಲವರನ್ನು ಗುರುತಿಸಿ ಅವರಿಗೆ ಆರಂಭಿಕವಾಗಿ ಆತ್ಮಸ್ಥೈರ್ಯ ನೀಡಬೇಕು. ನಂತರ ಅವರಿಗೆ ಮಾನಸಿಕ ಆರೋಗ್ಯ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಬೇಕು.

ಕಾವಲುಗಾರನಾಗುವುದು ಹೇಗೆ?
ಜನರ ಭಾವನೆಗಳ ಕುರಿತು ಸಂವೇದನಾಶೀಲರಾಗಿರಬೇಕು. ಕೆಲವರು ದುಖಃದಲ್ಲಿರುವಂತೆ ಕಂಡರೆ ಅಥವಾ ಏಕಾಂಗಿಯಾಗಿದ್ದರೆ ಅಥವಾ ಬದುಕಿನಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದರೆ, ಅವರಿಗಾಗಿ ಸಮಯ ನೀಡುವುದು ಹಾಗೂ ಅವರ ನೋವನ್ನು ಕೇಳಿಸಿಕೊಳ್ಳುವ ಕಿವಿಗಳು ನಿಮ್ಮದಾಗಬೇಕು. ವ್ಯಕಿಯೊಳಗಿನ ಭಾವನೆ  ಹೇಗಿದೆ ಎಂಬುದರತ್ತ ಗಮನ ಹರಿಸಿ ಮತ್ತು ಅವರಿಗೆ ವೃತ್ತಿಪರರ ಸಹಾಯ ಸಿಗುವುದರೊಳಗೆ ಅವರೊಳಗಿನ ತಳಮಳ ಕಡಿಮೆ ಮಾಡಲು ನೀವೇನು ಮಾಡಬಹುದು ಎಂದು ಯೋಚಿಸಿ. ಅವರ ನೋವಿನ ಅಥವಾ ದುಖಃದ ಕಾರಣಗಳತ್ತ ಹೆಚ್ಚು ದೃಷ್ಟಿ ಹಾಯಿಸಬೇಡಿ. (ಅದಕ್ಕೆ ಸಾಕಷ್ಟು ಕಾರಣಗಳಿದ್ದು, ಅವುಗಳಿಗೆ ಖಚಿತ ಪರಿಹಾರ ಇಲ್ಲದೇ ಇರಬಹುದು.)

ಓರ್ವ ವ್ಯಕ್ತಿ ಆತ್ಮಹತ್ಯೆಗೆ ಯೋಚಿಸುತ್ತಿರಬಹುದೆಂದು ನಿಮಗನ್ನಿಸಿದರೆ, ‘ನಿಮಗೆ ಕೆಲವು ಸಂದರ್ಭದಲ್ಲಿ ಈ ಜೀವ ಬದುಕಲು ಯೋಗ್ಯವಲ್ಲ ಅನ್ನಿಸಿದೆಯಾ?’ ಎನ್ನುವ ರೀತಿಯ ಪ್ರಶ್ನೆ ಕೇಳಿ. ಇದು ಆ ವ್ಯಕ್ತಿಗೆ ತನ್ನ ಆತ್ಮಹತ್ಯೆ ಯೋಚನೆಗಳ ಕುರಿತು ಚರ್ಚಿಸಲು ಸಹಕಾರಿಯಾಗಬಹುದು.

ಬಹಳಷ್ಟು ಜನ ಚಿಂತಿಸುವುದಕ್ಕೆ ತದ್ವಿರುದ್ಧವೆಂಬಂತೆ ಇಂಥ ಪ್ರಶ್ನೆಗಳು ಯಾವಾಗಲೂ ಆತ್ಮಹತ್ಯೆಗೆ ಪ್ರಚೋದನೆ ನೀಡುವುದಿಲ್ಲ. ವಾಸ್ತವವಾಗಿ ಇದು ವ್ಯಕ್ತಿಗೆ ತನ್ನ ಆತ್ಮಹತ್ಯೆ ಚಿಂತನೆಗಳನ್ನು ಹೇಳಿಕೊಳ್ಳುವುದಕ್ಕೆ ಸುಲಭವಾಗಿಸುತ್ತದೆ. ಆತ್ಮಹತ್ಯೆ ಕುರಿತು ಯೋಚಿಸಿದ ವ್ಯಕ್ತಿ ಕೊನೆಗೆ ತನ್ನ ಯೋಚನೆಗಳಿಗೆ ಮುಜುಗರಪಡುತ್ತಾನೆ. ಅದು ದುರ್ಬಲ ಎಂಬ ತೀರ್ಮಾನವಲ್ಲವೆಂದು ತಿಳಿದು ಅದರ ಬಗ್ಗೆ ಮಾತನಾಡಿದಾಗ ಆತ ನಿಟ್ಟುಸಿರುಬಿಡುತ್ತಾನೆ.

ಕಾವಲುಗಾರ ಏನು ಮಾಡಬಹುದು?
ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮಾತುಗಳನ್ನು ಪ್ರೀತಿಯಿಂದ ಕೇಳಿಸಿಕೊಳ್ಳುವುದು, ಆತನನ್ನು ಗೌರವದಿಂದ ಕಾಣುವುದು, ಆತನ ಭಾವನೆಗೆ ಅನುಭೂತಿ ತೋರುವುದು ಮತ್ತು ಆತ್ಮವಿಶ್ವಾಸದಿಂದ ಆರೈಕೆ ಮಾಡುವುದು ಮುಖ್ಯ. ನಿಮ್ಮ ನಿಷ್ಟೂರದ
ಮಾತಿನಿಂದ ಅಥವಾ ವರ್ತನೆಯಿಂದ ಅವರು ಇನ್ನಷ್ಟು ದೂರ ಹೋಗುವ ತೀರ್ಮಾನ ತೆಗೆದುಕೊಳ್ಳುವಂತೆ ಮಾಡಬೇಡಿ. ಆತ್ಮಹತ್ಯೆ ದುಬರ್ಲತೆಯ ಸಂಕೇತ ಎಂದು ಹೇಳಬೇಡಿ. ಅಂಥ ವ್ಯಕ್ತಿಗಳ ಬಗ್ಗೆ ಕೋಪಗೊಳ್ಳಬೇಡಿ ಮತ್ತು ಅವರ ಸಮಸ್ಯೆಗಳಿಂದ ದೂರವಿರಬೇಡಿ. ವ್ಯಕ್ತಿಯ ಸಾಮಥ್ರ್ಯದತ್ತ ದೃಷ್ಟಿ ಹಾಯಿಸಿ ಮತ್ತು ಆತನಿಗೆ ಬದುಕಿನಲ್ಲಿ ಒಳ್ಳೆಯ ಅಂಶಗಳ ಕುರಿತು ಯೋಚಿಸಲು ಉತ್ತೇಜಿಸಿ. ಆತ್ಮಹತ್ಯೆಗೆ ಪೂರಕವಾದ ಅಂಶಗಳನ್ನು (ಹರಿತವಾದ ಆಯುಧಗಳು, ಔಷಧ, ಕೀಟನಾಶಕ) ತೆಗೆದು ಬಿಸಾಡಿ. ಅವರ ಸಮಸ್ಯೆಗಳು ಬಗೆಹರಿಯುವವರೆಗೆ ಅವರನ್ನು ಏಕಾಂಗಿಯಾಗಿ ಬಿಡಬೇಡಿ. ಸೂಕ್ತವಾದ ತರಬೇತಿಯಿಂದ ನೀವು ಕಾವಲುಗಾರರಾಗಬಹುದು. 

ಬೆಂಗಳೂರಿನ ಬಿಟಿಎಂ ಲೇಔಟ್‍ನ ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್‍ಬಿಯಿಂಗ್‍ನಲ್ಲಿ (Nimhans Centre for Wellbeing) ಕಾವಲುಗಾರ ತರಬೇತಿ ಕಾರ್ಯಕ್ರಮವನ್ನು ತಿಂಗಳು ಬಿಟ್ಟು ತಿಂಗಳು ನಡೆಸಲಾಗುತ್ತದೆ. 
ನೀವು ತರಬೇತಿ ಬಯಸಿದರೆ 080 26685948 / 9480829670 ಸಂಖ್ಯೆಗೆ ಕರೆ ಮಾಡಿ.

ಡಿ ಪದ್ಮಾವತಿ ಅವರು ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್‍ಬಿಯಿಂಗ್‍ನಲ್ಲಿ ಸೈಕ್ಯಾಟ್ರಿಕ್ ನರ್ಸ್
ಡಾ.ಪ್ರಭಾ ಚಂದ್ರ ನಿಮ್ಹಾನ್ಸ್‍ನಲ್ಲಿ ಸೈಕ್ಯಾಟ್ರಿ ಪ್ರಾಧ್ಯಾಪಕರು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org