ವಾಹನದಟ್ಟಣೆಯು ನಮ್ಮ ಮಾನಸಿಕಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆಯೇ ?

ವಾಹನದಟ್ಟಣೆಯು ನಮ್ಮ ಮಾನಸಿಕಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆಯೇ ?

ವಾಹನದಟ್ಟಣೆ, ವಿಶೇಷವಾಗಿ “ಟ್ರಾಫಿಕ್ ಜಾಮ್”ನಿಂದಾಗಿ ವಾಹನಗಳು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವುದು ವಿವಿಧ ರೀತಿಯಲ್ಲಿ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ. ವಾಹನಗಳ ಕರ್ಕಶ ಸದ್ದು, ರಸ್ತೆಗಳ ದುಸ್ಥಿತಿ ಮತ್ತು ವಾಹನಗಳ ಮಿತಿಮೀರಿದ ವೇಗ ಇವೆಲ್ಲವೂ ವಾಹನ ಚಲಾಯಿಸುವ ವ್ಯಕ್ತಿ ಅಥವಾ ಪ್ರಯಾಣಿಕರ ಮೇಲೆ ಪರಿಣಾಮ ಬೀರಿ, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

“ಮಾನಸಿಕ ಒತ್ತಡ”ವನ್ನು ಹಲವು ಬಗೆಯಲ್ಲಿ, ವಿವಿಧ ಆಯಾಮಗಳಲ್ಲಿ ವಿವರಿಸಬಹುದು.

ಮಾನಸಿಕವಾಗಿ ಇದು ಉದ್ವೇಗ, ಖಿನ್ನತೆ, ಕೆಲಸಕಾರ್ಯಗಳಲ್ಲಿ ನಿರಾಸಕ್ತಿ ಅಥವಾ ನಮ್ಮ ಪ್ರತಿಕ್ರಿಯೆಗಳಲ್ಲಿನ ಬದಲಾವಣೆಗಳು (ಉದ್ವೇಗಕ್ಕೊಳಗಾಗಿ ಕಿರುಚಾಡುವುದು) ಮೊದಲಾದ ರೀತಿಯಲ್ಲಿ ಪರಿಣಮಿಸುತ್ತದೆ.

ಕೆಲವು ಸಂದರ್ಭಗಳಲ್ಲಿ, ವ್ಯಕ್ತಿಯು ಅಸಹಾಯಕರಾಗಿ ಅದನ್ನು ನಿಭಾಯಿಸುವ ಸಾಮರ್ಥ್ಯವನ್ನೆ ಕಳೆದುಕೊಳ್ಳಬಹುದು.  ಮತ್ತು ವಿವೇಚನೆಯಿಲ್ಲದೆ ಆ ಸಂದರ್ಭದಲ್ಲಿ ಅವರಿಗೆ ಏನು ತೋಚುತ್ತದೆಯೋ ಆ ರೀತಿಯಾಗಿ ನಡೆದುಕೊಳ್ಳಬಹುದು.

ದೈಹಿಕ /ಶಾರೀರಿಕ ಒತ್ತಡದಿಂದ ಕೆಲವರಲ್ಲಿ ರಕ್ತದೊತ್ತಡ ಹೆಚ್ಚಾಗಬಹುದು. ತಾವು ಸಾವಿನಂಚಿನಲ್ಲಿದ್ದೇವೆಂಬ ಭಾವನೆ ಮೂಡಬಹುದು, “ಆಟೋನೋಮಿಕ್ ನರ್ವಸ್ ಸಿಸ್ಟಮ್” (ಎ ಎನ್ ಎಸ್: ಉಸಿರಾಟ, ಹೃದಯಬಡಿತ ಮತ್ತು ಜೀರ್ಣಕ್ರಿಯೆ ಮುಂತಾದ ದೈಹಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುವ/ನಿರ್ವಹಿಸುವ ಮೆದುಳಿನ ಒಂದು ಭಾಗ) ಮೇಲೆ ಪರಿಣಾಮ ಬೀರಬಹುದು ಮತ್ತು ದೇಹದ ಉಷ್ಣಾಂಶವನ್ನು ಹೆಚ್ಚಿಸಬಹುದು. ಎ ಎನ್ ಎಸ್ ಮೇಲಿನ ಹೆಚ್ಚಿನ ಒತ್ತಡದಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು.

ಸಾಮಾಜಿಕವಾಗಿ:  ವಾಹನ ದಟ್ಟಣೆಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಅದರಿಂದುಂಟಾಗುವ ಒತ್ತಡದಿಂದ ಹೊರಬರಲು ರಜೆ ಪಡೆಯಬೇಕಾಗಿಯೂ ಬರಬಹುದು. ಒತ್ತಡದಿಂದ, ವಾಹನದಟ್ಟಣೆಯ ಕಿರಿಕಿರಿಯಿಂದ ಹೊರಬರಲು ಕೆಲವರು ಕೆಲಸವನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಬಹುದು. ಇನ್ನು ಕೆಲವರಲ್ಲಿ ತಮ್ಮ ಮಿತ್ರರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಲಾಗುತ್ತಿಲ್ಲವೆಂಬ ನಿರಾಸೆಯ ಭಾವ ಮೂಡಬಹುದು.

ಇತರ ಕಾರಣಗಳು ಮತ್ತು ಪ್ರತಿಕ್ರಿಯೆಗಳು :

ವಾಹನದಟ್ಟಣೆ, ಮಾನಸಿಕ ಒತ್ತಡಕ್ಕೆ ಕಾರಣವಾಗಿರುವಂತೆಯೇ, ಉದ್ವೇಗ ಅಧಿಕಗೊಳ್ಳಲು ಇನ್ನೂ ಇತರೆ ಹಲವಾರು ಕಾರಣಗಳಿವೆ.

 • ಕೌಟುಂಬಿಕ ಕಲಹ/ಉದ್ಯೋಗ ಸ್ಥಳ ಹಾಗೂ ಇನ್ನಿತರ ಕಡೆಗಳಲ್ಲಿ ಜಗಳಗಂಟತನ ತೋರುವುದು.

 • ಹಾದಿ - ಬೀದಿಯ ಜಗಳ

 • ವಾಹನದಟ್ಟಣೆಯ ಕಾರಣದಿಂದ ಕಿರಿಕಿರಿಗೊಳಗಾಗಿ ನಿಯಂತ್ರಣ ತಪ್ಪಿ ದುರ್ನಡತೆ ತೋರುವ ಸಾಧ್ಯತೆ

ಮಣಿಪಾಲ್ ಹಾಸ್ಪಿಟಲ್ ನಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಸನ್ನಿ ಜೋಸೆಫ್ ಹೇಳುತ್ತಾರೆ, ”ಇಂತಹ ಮಾನಸಿಕ ಒತ್ತಡದಿಂದಾಗಿ ಜನರು ಸಾಮಾನ್ಯವಾಗಿ ತಮ್ಮ ಸಿಟ್ಟನ್ನು ಮನೆಯಲ್ಲಿ ಪ್ರದರ್ಶಿಸುತ್ತಾರೆ. ತಮ್ಮಮಡದಿ – ಮಕ್ಕಳ ಮೇಲೆ ತೀರಿಸಿಕೊಳ್ಳುತ್ತಾರೆ. ಇದು ಒಂದು ವಿಷವರ್ತುಲವನ್ನು ನಿರ್ಮಿಸುತ್ತದೆ ಮತ್ತು ಸದಾ ಕಿರಿಕಿರಿಯಲ್ಲಿರುವಂತೆ ಮಾಡುತ್ತದೆ. ಮತ್ತೆಂದಾದರೂ “ಟ್ರಾಫಿಕ್ ಜಾಮ್”ನಲ್ಲಿ ಸಿಲುಕಿಕೊಂಡಾಗ ಅವರು ಉದ್ವೇಗದಿಂದ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವಂತೆ ಅಥವಾ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಂತೆ ಪ್ರೇರೇಪಿಸುತ್ತದೆ”

ವಾಹನದಟ್ಟಣೆ, ವಿಭಿನ್ನ ದೃಷ್ಟಿಕೋನಗಳು :

“ ಸಾಮಾನ್ಯವಾಗಿ ವಾಹನದಟ್ಟಣೆಯನ್ನು ವಿಭಿನ್ನ ವ್ಯಕ್ತಿಗಳು  ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಒಬ್ಬ ವ್ಯಕ್ತಿಯ ಮೇಲಿನ ಒತ್ತಡವು ಅವರ ವ್ಯಕ್ತಿತ್ವ, ಗುಣಗಳು ಮತ್ತು ಸಂದರ್ಭಕ್ಕೆ ತಕ್ಕಂತೆ ಬೇರೆಬೇರೆಯಾಗಿರುತ್ತದೆ. ಈ ಎಲ್ಲಾ ಅಂಶಗಳು ವ್ಯಕ್ತಿಯ ಮೇಲಿನ ಮಾನಸಿಕ ಒತ್ತಡಕ್ಕೆ ಪೂರಕವಾಗಿರುವ ಅಂಶಗಳಾಗಿವೆ. ವಿಶೇಷವಾಗಿ ಸಮಯ ನಿರ್ವಹಣೆಗೆ ಒತ್ತು ನೀಡುವ, ಕೆಲಸ ಕಾರ್ಯಗಳಲ್ಲಿ ಪರಿಪೂರ್ಣತೆಯನ್ನು ಬಯಸುವ  ಹಾಗೂ ಒಂದೇ ಬಾರಿ ಹಲವಾರು ಕಾರ್ಯಗಳನ್ನು ನಿರ್ವಹಿಸುವ ವ್ಯಕ್ತಿಗಳು ವಾಹನ ದಟ್ಟಣೆಯಿಂದ ಹೆಚ್ಚಿನ ಮಾನಸಿಕ ಒತ್ತಡಕ್ಕೆ  ಒಳಗಾಗುತ್ತಾರೆ” ಎನ್ನುತ್ತಾರೆ ಜೋಸೆಫ್.

ವಾಹನ ದಟ್ಟಣೆ ಮತ್ತು ಶಬ್ದ ಮಾಲಿನ್ಯ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?

ಜೋಸೆಫ್ ಹೇಳುತ್ತಾರೆ ”ನಮ್ಮಲ್ಲಿ ಬಹಳ ಮಂದಿ ದೈನಂದಿನ ಚಟುವಟಿಕೆಗಳ ವೇಳಾಪಟ್ಟಿಯನ್ನು ಹಾಕಿಕೊಳ್ಳುತ್ತೇವೆ ಮತ್ತು ಪಾಲಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ಸಂಚಾರ ದಟ್ಟಣೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ದಾರಿಯುದ್ದಕ್ಕೂ ನಮ್ಮ ಅಸಾಹಯಕತೆಯನ್ನು, ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ವಾಹನ ದಟ್ಟಣೆಯಿಂದ ಒತ್ತಡ ಮತ್ತು ತೀವ್ರ ಉದ್ವೇಗಕ್ಕೊಳಗಾಗಿ ಒಬ್ಬವ್ಯಕ್ತಿ ಚಿಂತೆಗೊಳಗಾಗುತ್ತಾನೆ. ಇದು ಅವನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ಸುದೀರ್ಘ ಪ್ರಯಾಣ ಮತ್ತು ವಾಹನ ಚಲಾಯಿಸುವಾಗ ನಿರಂತರವಾದ ಬ್ರೇಕ್ ಹಾಕುವಿಕೆ ಮತ್ತು ವೇಗ ಹೆಚ್ಚಿಸುವಿಕೆಯಿಂದಾಗಿ ಒತ್ತಡ ಮತ್ತಷ್ಟು ಹೆಚ್ಚುತ್ತದೆ.

ಮಾನಸಿಕ ಪರಿಣಾಮಗಳು:

 • ತಪ್ಪುಗಳನ್ನುಮಾಡುವುದು

 • ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಪಡುವುದು

 • ಏಕಾಗ್ರತೆಯ ಕೊರತೆ

 • ಸಂವಹನ ನಡೆಸುವಾಗ ತೊಂದರೆಯಾಗುವುದು

 • ಹೆಚ್ಚಿನ ಸಮಯದವರೆಗೆ ಏಕಾಗ್ರತೆಯನ್ನು ಸಾಧಿಸಲಾಗದಿರುವುದು

 • ಜ್ಞಾಪಕಶಕ್ತಿ ಕ್ಷೀಣಿಸುವುದು

 • ತಕ್ಷಣದಲ್ಲಿ ಪ್ರತಿಕ್ರಿಯಿಸಲಾಗದಿರುವುದು

ಭಾವನಾತ್ಮಕ ಪರಿಣಾಮಗಳು:

 • ಕಿರಿಕಿರಿಯಾಗುವುದು

 • ಪ್ರೇರಣೆ ನಿರಾಕರಿಸುವುದು

 • ನಿರುತ್ಸಾಹ

 • ಅಸಮರ್ಥತೆ

 • ಜಡತೆ

 • ಹಿಂಜರಿಕೆ

ದೇಹಕ್ಕೆ ಅಗತ್ಯ ವಿಶ್ರಾಂತಿ ನೀಡುವುದರ ಮೂಲಕ, ಸೂಕ್ತ ನಿದ್ರಾಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ಹಗಲಿನ ವೇಳೆಯಲ್ಲಿ ಅಲ್ಪಸಮಯದ ವಿಶ್ರಾಂತಿ, ಚೆನ್ನಾಗಿ ದ್ರವ ಪದಾರ್ಥಗಳನ್ನು ಸೇವಿಸುವುದು, ನಿರಂತರ ವ್ಯಾಯಾಮ ಹಾಗೂ ತಮ್ಮ ಕೆಲಸಗಳನ್ನು ಮತ್ತು ಕುಟುಂಬದ ಅಗತ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಒತ್ತಡದಿಂದ ಹೊರಗೆ ಬರಬಹುದು.

ಕೆಲವೊಮ್ಮೆ ಸಂಚಾರ ದಟ್ಟಣೆಯಿಂದಾಗುವ ಒತ್ತಡವು ಅಪಘಾತಗಳಿಗೆ ಕಾರಣವಾಗುತ್ತವೆ. ಇತ್ತೀಚಿಗೆ ವಾಹನ ದಟ್ಟಣೆಯ ಪರಿಣಾಮವಾಗಿ ಉಂಟಾಗುವ ಮಾನಸಿಕ ಉದ್ವೇಗದಿಂದ ಸಂಭವಿಸಿರುವ ವಾಹನ ಅಪಘಾತಗಳ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ-

ಹೆಚ್ಚಿನ ಸಂಕಷ್ಟ ಅನುಭವಿಸುತ್ತಿರುವವರು ಯಾರು ?

ವಾಹನದಟ್ಟಣೆಯ ಸಮಸ್ಯೆ ಮತ್ತು ದೀರ್ಘಪ್ರಯಾಣದಿಂದ  ಬಸ್ ಚಾಲಕರು, ಟ್ರಕ್, ಆಟೋರಿಕ್ಷಾ ಹಾಗು ಕ್ಯಾಬ್ ಚಾಲಕರು ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಚಾಲಕರಲ್ಲಿ ಒತ್ತಡದತೀವ್ರತೆ ನಿರಂತರವಾದದ್ದು ಮತ್ತು ಇಂತಹ ಸಮಯದಲ್ಲಿ ಅವರು ಅಸಾಹಯಕರಾಗಿರುತ್ತಾರೆ ಅಥವಾ ಅಂತಹ ಸಂದರ್ಭದಲ್ಲಿ ಅವರಿಗೆ ಯಾವ ನೆರವೂ ದೊರೆಯಲಾರದು.ನಿರಂತರವಾದ ಮಾನಸಿಕ ಒತ್ತಡದಿಂದ ಅವರಲ್ಲಿ ಸಿಟ್ಟು ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ಆ ಸಿಟ್ಟನ್ನು ಅವರು ಪಾದಚಾರಿಗಳಮೇಲೆ ಅಥವಾ ಇತರೆ ಪ್ರಯಾಣಿಕರ ಮೇಲೆ ತೀರಿಸಿಕೊಳ್ಳುತ್ತಾರೆ.

“ಮಾನಸಿಕ ಒತ್ತಡಕ್ಕೆ ಮತ್ತು ಖಿನ್ನತೆಗೊಳಗಾಗಿರುವ ವ್ಯಕ್ತಿಗಳು ಸದಾಕಾಲ ವಾಹನ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಬಗ್ಗೆ ಚಿಂತಿಸುತ್ತಿರುತ್ತಾರೆ. ಏಕೆಂದರೆ ಅಪಘಾತಗಳಾಗುವ ಸಂದರ್ಭದಲ್ಲಿ ಅಥವಾ ಇನ್ನಿತರ ಸಮಸ್ಯೆಗಳಾದಾಗ ತಾವು ಅಸಹಾಯಕರಾಗಿಬಿಡುತ್ತೇವೆಂಬ ಆಂತರಿಕಭಯ ಅವರನ್ನು ಕಾಡುತ್ತಿರುತ್ತದೆ” ಎನ್ನುತ್ತಾರೆ ಜೋಸೆಫ್.

ವಾಹನ ದಟ್ಟಣೆಯಿಂದುಂಟಾಗುವ ಮಾನಸಿಕ ಒತ್ತಡವನ್ನು ಯಾವ ರೀತಿಯಲ್ಲಿ ನಿಭಾಯಿಸಬಹುದು ?

 • ವಾಹನದಟ್ಟಣೆಯನ್ನು “ ಕಾರ್ ಪೂಲಿಂಗ್ “ ಮೂಲಕ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು ಮತ್ತು ಒತ್ತಡವನ್ನು ಕಡಿಮೆ ಮಾಡಬಹುದು. ಸಹಚರರೊಂದಿಗೆ, ಮಿತ್ರರೊಂದಿಗೆ ವಾಹನ ಚಲಾಯಿಸುವುದರಿಂದ ಸಂಚಾರ ದಟ್ಟಣೆಯಿಂದಾಗುವ ಒತ್ತಡದಿಂದ ಸ್ವಲ್ಪ ಸಮಯ ದೂರವಿರಬಹುದು. ಈ ಮೂಲಕ ಮಾನಸಿಕ ಒತ್ತಡವನ್ನು ಸುಲಭವಾಗಿ ನಿಭಾಯಿಸಬಹುದು.

 • ದೀರ್ಘ ಶ್ವಾಸತೆಗೆದುಕೊಳ್ಳುವುದರ ಮೂಲಕ ಮನಸ್ಸನ್ನು ಶಾಂತಗೊಳಿಸಿ, ಪರಿಸ್ಥಿತಿಯನ್ನು ನಿಭಾಯಿಸಬಹುದು.

 • ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮತ್ತು ಸಮಯ ನಿರ್ವಹಣೆ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹುದು. ಇದರಿಂದ ಗಣನೀಯ ಪ್ರಮಾಣದಲ್ಲಿ ಒತ್ತಡವನ್ನು ಕಡಿಮೆ ಮಾಡಬಹುದು.

ಕಾನೂನಾತ್ಮಕವಾಗಿ :

 • ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಪಾಲಿಸಬೇಕು. ಉದಾಹರಣೆಗೆ: ವಾಣಿಜ್ಯ ವಾಹನಗಳು (ಟ್ರಕ್, ಭಾರಿ ಸರಕು ಸಾಗಣೆ ವಾಹನಗಳು) ಮತ್ತು ಹೆಚ್ ಟಿ ವಿ (ಹೆವಿ ಟ್ರಾನ್ಸ್ಪೋರ್ಟ್ ವೆಹಿಕಲ್ಸ್)ಗಳನ್ನು ಶಾಲಾಕಾಲೇಜುಗಳು / ಕಛೇರಿಗಳು ಪ್ರಾರಂಭವಾಗುವ ಸಮಯಗಳಲ್ಲಿ ನಿರ್ಬಂಧಿಸಬೇಕು. (ಇದರಿಂದ ಸಂಚಾರದಟ್ಟಣೆಯನ್ನು ಕಡಿಮೆ ಮಾಡಬಹುದು).

 • ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಮತ್ತು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

 • ತೀವ್ರ ಒತ್ತಡಕ್ಕೊಳಗಾಗಿರುವವರಿಗೆ, ಚಾಲಕರಿಗೆ, ಸಂಚಾರಿ ಪೊಲಿಸ್ ಅಧಿಕಾರಿ/ಸಿಬ್ಬಂದಿಗಳಿಗೆ ಅಗತ್ಯವೆನಿಸಿದರೆ ಸೂಕ್ತ “ಕೌನ್ಸಲಿಂಗ್” ಸೇವೆಯನ್ನು ಒದಗಿಸಬೇಕು.

ಸನ್ನಿ ಜೋಸೆಫ್, ಕ್ಲಿನಿಕಲ್ ಸೈಕಾಲಜಿಸ್ಟ್, ಮಣಿಪಾಲ್ ಹಾಸ್ಪಿಟಲ್, ಬೆಂಗಳೂರು – ಇವರು ನೀಡಿದ ಒಳನೋಟಗಳೊಂದಿಗೆ ಈ ಲೇಖನ ಸಿದ್ಧಪಡಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org